ಭಾರತದ 11,000 ಕಿಲೋಮೀಟರ್ ಉದ್ದದ ಕರಾವಳಿ ಪ್ರದೇಶಗಳು ಮುಂದಿನ ಕೆಲವೇ ವರ್ಷಗಳಲ್ಲಿ ಗಂಭೀರ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಹೊಸ ವರದಿ ಎಚ್ಚರಿಸಿದೆ. “Indian Coastal Region: Climate Projections 2021-2040” ಎಂಬ ಅಧ್ಯಯನ ವರದಿ, 2040ರೊಳಗಿನ ಹವಾಮಾನ ಬದಲಾವಣೆಗಳ ಪರಿಣಾಮಗಳನ್ನು ಜಿಲ್ಲಾಮಟ್ಟದಲ್ಲಿ ವಿಶ್ಲೇಷಿಸಿದ್ದು, ತಕ್ಷಣದ ಹೊಂದಾಣಿಕೆ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದೆ.
ವರದಿಯ ಪ್ರಕಾರ, ಭಾರತದ ಹಲವು ಕರಾವಳಿ ಜಿಲ್ಲೆಗಳು 1.5°C ತಾಪಮಾನ ಏರಿಕೆಯ ಮಿತಿಯನ್ನು ಶೀಘ್ರದಲ್ಲೇ ತಲುಪುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಒಡಿಶಾದ ಅನೇಕ ಭಾಗಗಳಲ್ಲಿ ಗರಿಷ್ಠ ತಾಪಮಾನವು 1°C ರಿಂದ 1.3°C ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.
ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಮುಂದಿನ 15 ವರ್ಷಗಳಲ್ಲಿ ಸುಮಾರು 1.1°C ತಾಪಮಾನ ಏರಿಕೆಯಾಗುವ ಮುನ್ಸೂಚನೆ ನೀಡಲಾಗಿದೆ. ಇದರಿಂದ ಉಷ್ಣಾಂಶದ ಒತ್ತಡ ಅಂದರೆ Heat Stress ಹೆಚ್ಚುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ.
ವರದಿಯ ಮತ್ತೊಂದು ಆತಂಕಕಾರಿ ಅಂಶವೆಂದರೆ ಸಮುದ್ರ ಮಟ್ಟದ ಏರಿಕೆ. 2050ರ ವೇಳೆಗೆ ಜಾಗತಿಕ ಸಮುದ್ರ ಮಟ್ಟವು ಸುಮಾರು 15 ಸೆಂ.ಮೀ. ಏರಿಕೆಯಾಗುವ ಸಾಧ್ಯತೆ ಇದ್ದು, ಇದರಿಂದ ಕರಾವಳಿ ಕುಸಿತ, ಉಪ್ಪುನೀರು ಒಳನುಗ್ಗುವಿಕೆ ಹಾಗೂ ಪ್ರವಾಹದ ಅಪಾಯ ಹೆಚ್ಚಾಗಬಹುದು. ಮೀನುಗಾರಿಕೆ, ಕೃಷಿ ಹಾಗೂ ಕರಾವಳಿ ಗ್ರಾಮಗಳ ಜೀವನೋಪಾಯಗಳ ಮೇಲೆ ಇದು ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿ ಭಾಗಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದ್ದು, ಮುಂಬೈನಲ್ಲಿ ಭಾರೀ ಮಳೆಯ ದಿನಗಳು ಹೆಚ್ಚಾಗಬಹುದು ಎಂದು ವರದಿ ಹೇಳಿದೆ. ಸೂರತ್ ಪ್ರದೇಶದಲ್ಲಿ ದಕ್ಷಿಣ-ಪಶ್ಚಿಮ ಮುಂಗಾರು ಮಳೆ ಸುಮಾರು 23% ಹೆಚ್ಚಾಗುವ ಸಾಧ್ಯತೆ ವ್ಯಕ್ತಪಡಿಸಲಾಗಿದೆ.
ಸಮುದ್ರದ ಮೇಲ್ಮೈ ತಾಪಮಾನವು ಪ್ರತಿ ದಶಕಕ್ಕೆ ಸುಮಾರು 0.27°C ಏರಿಕೆಯಾಗುತ್ತಿರುವುದರಿಂದ ಭವಿಷ್ಯದಲ್ಲಿ ಹೆಚ್ಚು ತೀವ್ರ ಚಂಡಮಾರುತಗಳು ರೂಪುಗೊಳ್ಳುವ ಸಾಧ್ಯತೆಯೂ ಇದೆ ಎಂದು ಅಧ್ಯಯನ ಎಚ್ಚರಿಸಿದೆ.
ಕೇರಳದಲ್ಲಿ ಹೆಚ್ಚುತ್ತಿರುವ ವೆಟ್-ಬಲ್ಬ್ ತಾಪಮಾನ (Wet Bulb Temperature), ಸುಂದರ್‌ಬನ್ಸ್ ಪ್ರದೇಶದಲ್ಲಿ ಉಪ್ಪು ನೀರಿನ ಪ್ರಭಾವ, ಗೋವಾದ ಉಪ್ಪು ಉತ್ಪಾದನೆ ಮೇಲಿನ ಪರಿಣಾಮ ಹಾಗೂ ಸಮುದ್ರದ ತಾಪಮಾನ ಏರಿಕೆಯಿಂದ ಮೀನುಗಳ ಚಲನವಲನ ಬದಲಾಗುತ್ತಿರುವುದು ಈಗಾಗಲೇ ಕಂಡುಬರುತ್ತಿರುವ ಬದಲಾವಣೆಗಳೆಂದು ವರದಿ ಉಲ್ಲೇಖಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಸಿಇಒ ಅನುರಾಗ್ ಬಹಾರ್ ಅವರ ಪ್ರಕಾರ, “ಹವಾಮಾನ ಬದಲಾವಣೆ ಭವಿಷ್ಯದ ಸಮಸ್ಯೆಯಲ್ಲ, ಅದು ಈಗಾಗಲೇ ಆರಂಭವಾಗಿರುವ ವಾಸ್ತವ.” ಸ್ಥಳೀಯ ಆಡಳಿತಗಳು, ಸರ್ಕಾರಗಳು ಹಾಗೂ ಸಮುದಾಯಗಳು ಜಿಲ್ಲಾಮಟ್ಟದ ಹವಾಮಾನ ಹೊಂದಾಣಿಕೆ ಯೋಜನೆಗಳನ್ನು ತಕ್ಷಣ ರೂಪಿಸಬೇಕಾದ ಅಗತ್ಯವಿದೆ ಎಂದು ವರದಿ ಸೂಚಿಸಿದೆ.
A new report by Azim Premji University warns that India’s 11,000-km coastline faces immediate climate risks between 2021 and 2040. Rising temperatures, sea-level rise, extreme rainfall, coastal erosion, and stronger cyclones could significantly affect livelihoods, agriculture, fisheries, and coastal communities across India.

