ಅನುಕ್ರಮ

ಸರ್ವನಾಶವಾಯ್ತು ಭಾಗ್ಯಗಳ ತವರು “ನೌರು”

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

 

Advertisement
  • ಲಕ್ಷ್ಮಣ ದೇವಸ್ಯ

(ಲೇಖಕರು ನಿವೃತ್ತ ಇಂಜಿನಿಯರ್ ಮತ್ತು ಕೃಷಿಕ)

 

ಅದರ ಹೆಸರು ನೌರು. ವಿಸ್ತೀರ್ಣದಲ್ಲಿ, ಜನಸಂಖ್ಯೆಯಲ್ಲಿ ನಮ್ಮ ಒಂದು ಪುಟ್ಟ ಊರು. ಆದರೆ ಅದೊಂದು ಪೆಸಿಫಿಕ್ ಮಹಾಸಾಗರದ ಮಧ್ಯೆಯಿರುವ ಸಾರ್ವಭೌಮ ದ್ವೀಪರಾಷ್ಟ್ರ.ಹಕ್ಕಿಗಳ ಹಿಕ್ಕೆಯಿಂದಲೇ ಅದು ರೂಪುಗೊಂಡದ್ದು ಹೇಗೆ ವರವಾಯ್ತೋ ಹಾಗೇ ಶಾಪವಾಗಿಯೂ ಪರಿಣಮಿಸಿತು.  ನಮಗೆ ಅದರ ಉತ್ತುಂಗ ಅವನತಿಗಳ ದಾರುಣ ಇತಿಹಾಸ ತಿಳಿದಿರುವುದು ನಮ್ಮ ಅಳಿವು ಉಳಿವು ನಿರ್ಧರಿಸಲು ಅತ್ಯಂತ ಸಹಕಾರಿ. ಕೊನೆಯವರೆಗೂ  ತಪ್ಪದೇ ಓದಿ. ಯಾಕೆಂದರೆ ಇದು ನಿಮಗೂ ನಿಮ್ಮ ಮುಂದಿನ ತಲೆಮಾರಿಗೂ ನೇರವಾಗಿ  ಸಂಬಂಧಪಟ್ಟ ವಿಷಯ.

ಒಂದೊಮ್ಮೆ, ಹೊರಪ್ರಪಂಚಕ್ಕೆ ಅದರ ಸಂಪರ್ಕವಿರದಿದ್ದಾಗ ನೌರುವಿನ ಆದಿವಾಸಿಗಳಿಗೆ ಕೊರತೆಯೆಂದರೇನೆಂದೇ ಅರಿವಿರಲಿಲ್ಲ. ಯಥೇಚ್ಚವಾದ ಮತ್ಸ್ಯ ಸಂಪತ್ತು ಅಲ್ಲಿತ್ತು. ಹಸಿವು ನೀಗಿಸಿಕೊಳ್ಳಲು ಮೀನು ಹಿಡಿಯುವ ವಿದ್ಯೆಯೂ ,ಚಾಕಚಕ್ಯತೆಯೂ, ರಟ್ಟೆ ಬಲವೂ ಜನರಲ್ಲಿತ್ತು. ಸೊಂಪಾಗಿ ಬೆಳೆದ ತೆಂಗಿನ ಮರಗಳನ್ನು ಚಕಚಕನೆ ಏರಿ ಮನೊಸೋಯಿಚ್ಚೆ ಎಳನೀರು ಕುಡಿಯುತ್ತಿದ್ದರು. ದೇಹದಾರ್ಢ್ಯತೆಯೂ ಇತ್ತು. ಸೊಂಟಕ್ಕೆ ನಾಲ್ಕಾರು ಪೋಣಿಸಿದ ಎಲೆ ಸುತ್ತಿಕೊಂಡರೆ ಅದೇ ಅವರ ವಸ್ತ್ರಾಲಂಕಾರ. ಒಟ್ಟಿನಲ್ಲಿ ಸಂತೃಪ್ತ ಜೀವನ ಅವರದಾಗಿತ್ತು.

ಕಾರ್ಖಾನೆಯ ಉದ್ದೇಶಕ್ಕಾಗಿ ತಿಮಿಂಗಿಲ ಬೇಟೆ ಯೂರೋಪಿಯನ್ನರಿಗೆ ಒಂದು ಖಯಾಲಿಯೂ, ಉದ್ಯಮವೂ ಎರಡೂ ಆಗಿತ್ತು. 1798 ರಲ್ಲಿ ಜಾನ್ ಫರ್ನ್ ಎನ್ನುವ ಬ್ರಿಟಿಷ್ ತಿಮಿಂಗಿಲ ಬೇಟೆಗಾರ ಆ ದ್ವೀಪಕ್ಕೆ ಕಾಲಿಡುವವರೆಗೆ ಎಲ್ಲವೂ ಚೆನ್ನಾಗಿತ್ತು. ಅಲ್ಲಿಂದ ಅವರ ದುರಂತಮಯ ಅಧ್ಯಾಯ ಆರಂಭವಾಯ್ತು. ಪ್ರಪಂಚದ ಇತರೆಲ್ಲ ಕಡೆ ನಡೆದದ್ದೇ ಅಲ್ಲೂ ನಡೆಯಿತು. ಆ ಮುಗ್ದ ಕಾಡು ಮನುಷ್ಯರಿಗೆ ಮದ್ದುಗುಂಡು ಸರಬರಾಜಾಯಿತು. ಅವರ ಅಂತಃಕಲಹದ ಲಾಭಪಡೆದ ಯೂರೋಪಿಯನ್ನರು ಅವರನ್ನು ಮತಾಂತರಿಸಿ ತಮ್ಮ ಆಡಳಿತಕ್ಕೊಳಪಡಿಸಿಕೊಂಡರು.

ನೌರು ದ್ವೀಪದಲ್ಲಿ ಸಾವಿರಾರು ವರ್ಷಗಳಿಂದ ಸಮುದ್ರ ಹಕ್ಕಿಗಳ ಹಿಕ್ಕೆಗಳ ದಪ್ಪನೆಯ ಪದರ ನಿರ್ಮಾಣವಾಗಿತ್ತು. ಈ ಫಾಸ್ಫೇಟ್ ಬಳಸಿದರೆ ಗಿಡಗಳು ಹುಲುಸಾಗಿ ಬೆಳೆಯುತ್ತವೆಯೆಂದು ಕಂಡುಕೊಳ್ಳಲಾಯ್ತು. ಯೂರೋಪಿಯನ್ನರಿಂದ ಫಾಸ್ಫೇಟ್‍ ಗಣಿಗಾರಿಕೆ ಆರಂಭವಾಯ್ತು. ಮೂಲ ನಿವಾಸಿಗಳು ಕೂಲಿ ಕಾರ್ಮಿಕರಾದರು. ದ್ವೀಪದ ಒಡೆತನಕ್ಕಾಗಿ ವಸಾಹತುಶಾಹಿಗಳ ನಡುವೆ ಸಣ್ಣ ಯುದ್ದಗಳು ಹಾಗೂ ಮಹಾಯುದ್ದಗಳ ನಡೆದುವು. ದ್ವೀಪದ ಒಡೆತನ ಹಲವು ಬಾರಿ ಕೈಬದಲಾದವು.ಗಣಿಗಾರಿಕೆ ಮೂಲಕ ದ್ವೀಪದ ಫಾಸ್ಫೇಟ್‍ ಲೂಟಿ ಮಾಡಿದರು. ತಮ್ಮ ಅಧೀನದ ಬೇರೆ ರಾಷ್ಟ್ರಗಳಿಗೆ ಮಾರಿದರು. ಕೊನೆಗೆ 31 ಜನವರಿ 1968 ರಂದು ಸಂಪೂರ್ಣ ಸ್ವಾತಂತ್ರ ಪಡೆದು ವಿಶ್ವದ ಅತೀ ಸಣ್ಣ ಗಣತಂತ್ರ ದೇಶವಾಯ್ತು.

ಇದು ನೌರುವಿನ ಹಿನ್ನೆಲೆ. ನಾನು ಹೇಳಬೇಕೆಂದಿರುವ,ಭಾರತೀಯರ ಅಳಿವು ಉಳಿವಿಗೂ ನೀತಿಪಾಠವಾಗುವ ವಿಚಾರವನ್ನೊಳಗೊಂಡ ನಿಜವಾದ ದುರಂತಮಯ ಕಥೆ ಆರಂಭವಾಗುವುದು ಇಲ್ಲಿಂದ.

1968 ರಲ್ಲಿ ಸ್ವತಂತ್ರ ರಾಷ್ಟ್ರವಾಗಿ ರೂಪುಗೊಳ್ಳುವ ಹೊತ್ತಿಗಾಗಲೇ ಸಂಸ್ಕೃತಿ ನಾಶದ ಭರ್ಭರತೆಗೆ ಸಿಲುಕಿತ್ತು ನೌರು.  ಕೇವಲ ನೂರಿನ್ನೂರು ವರ್ಷಗಳಲ್ಲಿ ತಮ್ಮತನವನ್ನೆಲ್ಲಾ ಕಳೆದುಕೊಂಡ ಜನ ಎಡಬಿಡಂಗಿಗಳಾಗಿಬಿಟ್ಟಿದ್ದರು.ಆದರೂ ಹತಾಶೆಗೊಳಗಾಗದೆ ತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬಲ್ಲ ಸುವರ್ಣಾವಕಾಶವಿನ್ನೂ ಅದಕ್ಕಿತ್ತು. 1970 ರಲ್ಲಿ ಫಾಸ್ಫೇಟ್‍ ಗಣಿಗಾರಿಕೆಸಂಪೂರ್ಣ ನೌರುವಿನ ಒಡೆತನಕ್ಕೆ ಬಂತು.’ನೌರು ಫಾಸ್ಫೇಟ್ ಕಾರ್ಪೊರೇಶನ್’ ಮೂಲಕ ಗಣೆಗಾರಿಕೆಯಿಂದ ಬಂದ ಹಣ ’ನೌರು ಫಾಸ್ಫೇಟ್‍ ರಾಯಲ್ಟೀಸ್‍ ಟ್ರಸ್ಟ್’ ನಲ್ಲಿ ನೌರು ಪ್ರಜೆಗಳ ಸಂಪತ್ತಾಗಿ ಜಮೆಯಾಯ್ತು.

ಗಣಿಗಾರಿಕೆ ಎಷ್ಟು ಅವ್ಯಾಹತ ಮತ್ತು ವಿವೇಚನಾರಹಿತವಾಗಿ ನಡೆಯಿತೆಂದರೆ ಅತಿ ಶೀಘ್ರದಲ್ಲೇ ತಲಾ ಆದಾಯದ ಲೆಕ್ಕಾಚಾರದಲ್ಲಿ ಭೂಗ್ರಹದ ಮೇಲಿನ ಎರಡನೇ ಅತೀ ಶ್ರೀಮಂತ ರಾಷ್ಟ್ರವಾಯ್ತು.ಅಷ್ಟೇ ಅಲ್ಲ ಐಶಾರಾಮಿ ಜೀವನಮಟ್ಟದಲ್ಲೂ ವಿಶ್ವದ ಗಮನ ಸೆಳೆಯಿತು.

ರಾಷ್ಟ್ರಪ್ರೇಮವಿಲ್ಲದ, ದೂರದೃಷ್ಟಿಯಿಲ್ಲದ,ಸ್ವಾರ್ಥದ, ಭ್ರಷ್ಟ ಮತ್ತು ಓಟ್‍ಬ್ಯಾಂಕ್‍ ಗಾಗಿ ಓಲೈಕೆಯಲ್ಲಿ ತೊಡಗಿಕೊಂಡ ರಾಜಕಾರಣಿಗಳ ಕೈಗೆ ಆಡಳಿತ ಕೊಟ್ಟಾಗ ಏನೆಲ್ಲಾ ಅನಾಹುತಗಳು ಆಗಬಹುದು ಎಂಬುದಕ್ಕೆ ನೌರು ಒಂದು ಜ್ವಲಂತ ಉದಾಹರಣೆ. ನಮಗೆಲ್ಲಾ ತಿಳಿದಿರುವಂತೆ ಫಾಸ್ಫೇಟ್ ನವೀಕರಿಸಲಾಗದ ಒಂದು ನೈಸರ್ಗಿಕ ಸಂಪತ್ತು.ನೌರು ಫಾಸ್ಫೇಟ್ ಮುಗಿದುಹೋಗುವ ಮೊದಲೇದೇಶ ಏನಾದರೊಂದು ಪರ್ಯಾಯ ಆರ್ಥಿಕ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ  ಬಹಳ ಮುಂಚಿತವಾಗಿಯೇ ವಿಶ್ವದ ಕೆಲವು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದರು.

1993 ರಲ್ಲಿ ನೌರು ಜನರ ಸಂಪತ್ತಿನ ಒಂದು ಚಿತ್ರಣ ನೋಡಿ ಒಮ್ಮೆ. ನೌರುವಿನ ಒಟ್ಟು ಜನಸಂಖ್ಯೆ ಸುಮಾರು ಹತ್ತು ಸಾವಿರದ ಒಳಗೆ. ಅಂದರೆ ನೌರುವಿನ ಅಷ್ಟೂ ಸಂಪತ್ತಿಗೆ ಅವರೇ ಒಡೆಯರು.

  1. ಒಂದು ಬಿಲಿಯನ್‍ ಆಸ್ಟ್ರೆಲಿಯನ್ ಡಾಲರ್ ’ನೌರು ಫಾಸ್ಫೇಟ್‍ ರಾಯಲ್ಟೀಸ್‍ ಟ್ರಸ್ಟ್’ ನ ಅಂದಿನ ಸಂಪತ್ತು.
  2. ನೌರುವಿನಲ್ಲಿ ಹಿಂದೆ ಗಣಿಗಾರಿಕೆಯಿಂದ ಪರಿಸರ ನಾಶ ಮಾಡಿದುದಕ್ಕಾಗಿ ಆಸ್ಟ್ರೇಲಿಯಾ 1993 ರಿಂದ 20 ವರ್ಷಗಳವರೆಗೆ ನೌರುವಿಗೆ ವರ್ಷಕ್ಕೆ 2.5 ಮಿಲಿಯನ್‍ ಡಾಲರುಗಳಂತೆ ಕೊಡಲು ಒಪ್ಪಿಕೊಂಡಿತು.
  3. ಅದೇ ಕಾರಣಕ್ಕಾಗಿ ಇಂಗ್ಲೆಂಡ್‍ 12 ಮಿಲಿಯನ್‍ ಡಾಲರ್ ಒಮ್ಮೆಗೇ ಕೊಡಲು ಒಪ್ಪಿಕೊಂಡಿತು.
  4. ನ್ಯೂಝೀಲ್ಯಾಂಡ್‍ನಿಂದ 12 ಮಿಲಿಯನ್‍ ಡಾಲರ್ ಸಿಕ್ಕಿತು.
  5. “ಏರ್ ನೌರು” ಸಾರಿಗೆ ವಿಮಾನ ಸಂಸ್ಥೆಯಿಂದ ನಿರಂತರ ಆದಾಯ.

 

ಬಿಲಿಯನ್‍ ಎಂದರೆ ಒಂದರ ಮುಂದೆ ಒಂಬತ್ತು ಸೊನ್ನೆ ಸುತ್ತಬೇಕು. ಮತ್ತೆ ಮಿಲಿಯನ್‍ಗೆ ಒಂದರ ಮುಂದೆ ಆರು ಸೊನ್ನೆ ಸುತ್ತಬೇಕು ಎಂದಷ್ಟೇ ನಾನು ಹೇಳಬಲ್ಲೆ. ಉಳಿದಂತೆ ನೀವೇ ಲೆಕ್ಕ ಹಾಕಿ ನೌರುವಿನ ಹತ್ತುಸಾವಿರ ಜನರ ಒಟ್ಟು ಸಂಪತ್ತೆಷ್ಟೆಂದು. ನಿಮ್ಮಲ್ಲಿ ಕಿಂಚಿತ್ತಾದರೂ ಅಸೂಯೆ ಮೂಡಿಲ್ಲವೆಂದಾದರೆ ನೀವು ಸನ್ಯಾಸಿಯಾಗಲು ಎಲ್ಲ ಅರ್ಹತೆ ಪಡೆದಿದ್ದೀರೆಂದು ಭಾವಿಸುತ್ತೇನೆ.

ಅಧಿಕಾರಕ್ಕಾಗಿ ನೌರುವಿನಲ್ಲಿ ರಾಜಕೀಯ ಪಕ್ಷಗಳ ಮೇಲಾಟ ಆರಂಭವಾಯ್ತು. ಪೈಪೋಟಿಯಲ್ಲಿ ಭಾಗ್ಯಗಳ ಸುರಿಮಳೆಯಾಯ್ತು.

ನಮ್ಮಲ್ಲಿನ ’ಭಾಗ್ಯದಾತರ” ತುಲನೆಗಾಗಿ ನೌರುವನ್ನು ಕೇವಲ ಹದಿನೈದಿಪ್ಪತ್ತು ವರ್ಷಗಳಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರದಿಂದ ಭಿಕಾರಿ ದೇಶವನ್ನಾಗಿ ಪರಿವರ್ತಿಸಿದ ಭಾಗ್ಯಗಳನ್ನು ನೆನಪಿಗೆ ಬಂದಷ್ಟು ಪಟ್ಟಿಮಾಡುತ್ತಾ ಹೋಗುತ್ತೇನೆ. ಯಾಕೆಂದರೆ  ಇಲ್ಲಿ ಪಟ್ಟಿಮಾಡಲಾಗದಷ್ಟು ಭಾಗ್ಯಗಳ ಸುರಿಮಳೆಯಾಗಿದೆ ಅಲ್ಲಿ.

ಕೂತುಣ್ಣುವ ಭಾಗ್ಯ: ನೌರುವಿನಲ್ಲಿ ಎಷ್ಟು ಹಣವಿತ್ತೆಂದರೆ ಆ ದ್ವೀಪದಲ್ಲಿ ಯಾರಿಗೂ ದುಡಿಯುವ ಅವಶ್ಯಕತೆಯಿರಲಿಲ್ಲ. ಹಾಗಾಗಿ  ’ಕೂತುಣ್ಣುವ ಭಾಗ್ಯ’ ವನ್ನು ರಾಜಕಾರಣಿಗಳು ಕರುಣಿಸಿದರು. ಜನ ಖುಷ್‍‍ ಆದರು.ಭಾಗ್ಯ ಕರುಣಿಸಿದ ಪುಡಾರಿಗೆ ಜೈ ಎಂದರು.

ಜಂಕ್‍ ಫುಡ್ ಭಾಗ್ಯ: ಅಮೇರಿಕಾ ಮುಂತಾದ ಕಡೆಗಳಿಂದ ಡಬ್ಬಗಳಲ್ಲಿ ಪ್ಯಾಕ್‍ ಮಾಡಲಾದ ಬಗೆ ಬಗೆ ರುಚಿಕರ ಆಹಾರಗಳನ್ನು ಆಮದು ಮಾಡಿಕೊಳ್ಳಲಾಯ್ತು. ಎಲ್ಲವೂ ಉಚಿತ! ಉಚಿತ!. ಜಂಕ್‍ ಫುಡ್‍ ತಿನ್ನುತ್ತಾ ಮಾಡಲೇನೂ ಕೆಲಸವಿಲ್ಲದೇ ಜನ ಧಢೂತಿಗಳಾಗುತ್ತಾ ಹೋದರು.

ಪಾರ್ಟಿ ಭಾಗ್ಯ: ಪ್ರಜೆಗಳನ್ನು ಓಲೈಸಲು ಪ್ರತಿ ರಾತ್ರಿ ಮೋಜು ಮಸ್ತಿ ಪಾರ್ಟಿಗಳ ಏರ್ಪಾಟಾಯಿತು. ಏಲ್ಲವೂ ಫ್ರೀ.

ಕಾರು ಭಾಗ್ಯ: ಕೇವಲ ಕಾಲ್ನಡಿಗೆಯಲ್ಲಿ ಇಡೀ ದ್ವೀಪವನ್ನು ಗಂಟೆಯೊಳಗೆ ಸುತ್ತಿಬರಬಲ್ಲ ದೇಶದಲ್ಲಿ ಐಶಾರಾಮಿ ಕಾರುಗಳಲ್ಲೇ ಓಡಾಡಿದರು. ಆಮದುಮಾಡಿಕೊಂಡ ಕಾರುಗಳಲ್ಲಿ ಲ್ಯಾಂಬೊರ್ಗಿನಿ ಕೂಡಾ ಇತ್ತು.

ವಿಮಾನ ಭಾಗ್ಯ: ದೂರದೃಷ್ಟಿಯುಳ್ಳ ಕೆಲವರು ನೌರುವನ್ನು ಫಾಸ್ಫೇಟ್‍ ಎಲ್ಲಾ ಮುಗಿದುಹೋದ ಮೇಲೆ ದೇಶಕ್ಕೆ ಏನಾದರು ಪರ್ಯಾಯ ಆರ್ಥಿಕ ವ್ಯವಸ್ಥೆ ಮಾಡಿಕೊಳ್ಳಿ ಎಂದು ಎಚ್ಚರಿಸಿದ್ದರು. ಅದಕ್ಕಾಗಿ ನೌರು ವಿಮಾನಯಾನ ಸಂಸ್ಥೆ ’ಏರ್ ನೌರು’ ಆರಂಭಗೊಂಡಿತು. ಅದರಲ್ಲಿ ಬೋಯಿಂಗ್‍-737, ಫ಼ಾಲ್ಕನ್‍, ಫ಼ಾಕ್ಕರ್-ಎಫ್28 ನಂತಹ ಉನ್ನತ ದರ್ಜೆಯ ವಿಮಾನಗಳೂ ಇದ್ದವು.  ಪ್ರಯಾಣಿಕರೂ ಇದ್ದರು. ಎಲ್ಲವೂ ಸರಿಯಾಗಿತ್ತು. ಅಂದುಕೊಂಡಂತೆ ನಡೆದಿದ್ದರೆ ಅದೊಂದೇ ಆರ್ಥಿಕ ಮೂಲ ದೇಶಕ್ಕೆ ಸಾಕಾಗಬಹುದಿತ್ತು. ಆದರೆ ಈ ಭಾಗ್ಯದಾತ ರಾಜಕಾರಣಿಗಳು ಬಿಡಬೇಕಲ್ಲ. ಪ್ರಜೆಗಳಿಗೆ ವಿಮಾನಯಾನ ಭಾಗ್ಯ ಕರುಣಿಸಿದರು. ಪ್ರತಿಯೊಬ್ಬರಿಗೂ ಉಚಿತ ವಿಮಾನಯಾನ ಭಾಗ್ಯ ಕೊಟ್ಟರು. ಮೊದಲೇ ಮಾಡಲೇನೂ ಕೆಲಸವಿಲ್ಲದ ಜನ ಏನು ಮಾಡಿಯಾರು ಹೇಳಿ? ಇತ್ತಿಂದತ್ತ ಅತ್ತಿಂದಿತ್ತ ನೌರು ಜನಗಳೇ ಅವರ ವಿಮಾನಗಳಲ್ಲಿ ತುಂಬಿದ್ದರು. ಮಾತ್ರವಲ್ಲ, ದುಡ್ಡು ಕೊಟ್ಟು ಪ್ರಯಾಣಿಸುವ ಯಾತ್ರಿಕರ ಸಮಯಕ್ಕೆ ಸರಿಯಾಗಿ ವಿಮಾನಗಳು ಓಡಾಡುವ ಬದಲು ನೌರುವಿನವರ ವೈಯಕ್ತಿಕ ಅನುಕೂಲಕ್ಕೆ ವಿಮಾನಗಳು ಹಾರುತ್ತಿದ್ದುವು. ಇದರಿಂದ ಸಂಸ್ಥೆಯ ಗತಿಯೇನಾಯ್ತೆಂದು ನಾನು  ಬೇರೆಯೇ ವಿವರಿಸಬೇಕಾಗಿಲ್ಲ.

ಐಷಾರಾಮಿ ಭಾಗ್ಯ: ತನ್ನಲ್ಲಿರುವ ಹಣದಲ್ಲಿ  ವಿಶ್ವದ ಬೇರೆ ಬೇರೆ ಕಡೆ ಕೆಲವೊಂದು ಉದ್ಯಮಗಳಲ್ಲಿ ಬಂಡವಾಳ ಹೂಡಿತು. ಅದರಲ್ಲಿ ಹೋಟೆಲ್ ಉದ್ಯಮವೂ ಒಂದು. ’ಏರ್ ನೌರು’ ರೀತಿಯಲ್ಲಿ ಆ ಉದ್ಯಮವೂ ಮಣ್ಣು ಮುಕ್ಕಿತು.

ಹೀಗೆ ಭಾಗ್ಯಗಳ ಮಳೆಯೇ ಸುರಿಸಿದ ಭಾಗ್ಯಧಾತ ರಾಜಕಾರಣಿಗಳು ಶ್ರೀಮಂತ ದೇಶ ನೌರುವಿನ ಕೈಯಲ್ಲಿ ಇವತ್ತು ಭಿಕ್ಷಾಪಾತ್ರೆ ಹಿಡಿಸಿದ್ದಾರೆ.

ಪರಿಣಾಮಗಳು-

ಬಯಸಿದ್ದೆಲ್ಲವೂ ಪುಕ್ಕಟೆಯಾಗಿ ದೊರೆಯಲು ಆರಂಭಿಸಿ ಜನಗಳಿಗೆ ಶಾಲೆಗೆ ಹೋಗಿ ಕಲಿತು ಏನಾದರೂ ಸಾಧನೆ ಮಾಡಬೇಕೆಂಬ ಛಲ ಕುಂಠಿತವಾಯ್ತು. ತತ್ಪರಿಣಾಮವಾಗಿ ಶೈಕ್ಷಣಿಕವಾಗಿ ಬೌದ್ದಿಕವಾಗಿ ಜನ ನಿರ್ವೀರ್ಯರಾದರು.ಆಡುಭಾಷೆಯಲ್ಲಿ ಹೇಳುವುದಾದರೆ  ’ಪ್ಯಾದೆ’ಗಳಾದರು.

ಕೆಲಸ ಮಾಡುವ ಯಾವುದೇ  ಪ್ರಮೇಯವಾಗಲೀ, ಅವಶ್ಯಕತೆಯಾಗಲೀ ಅಥವಾ ಅನಿವಾರ್ಯತೆಯಾಗಲೀ ಇಲ್ಲವಾಯ್ತು. ಜೊತೆಗೆ  ಡಬ್ಬಗಳಲ್ಲಿ ಆಮದು ಮಾಡಿಕೊಂಡ ಅಮೇರಿಕನ್‍ ಜಂಕ್‍ ಫ಼ುಡ್ ಅತಿಯಾಗಿ ಸೇವಿಸಿದರಪರಿಣಾಮವಾಗಿ ವಿಶ್ವದ ಅತೀ ಬೊಜ್ಜಿನ ರಾಷ್ಟ್ರವಾಗಿ ಅಪಖ್ಯಾತಿಯ ಬಿರುದು ಸಿಕ್ಕಿಬಿಟ್ಟಿತು. ಎಷ್ಟೆಂದರೆ ಎಂಬತ್ತು ಕೆಜಿ ಗಿಂತ ಕಡಿಮೆ ಇರುವ ಇಪ್ಪತ್ತು ವರ್ಷ ಮೇಲ್ಪಟ್ಟ ವ್ಯಕ್ತಿಗಳೇ ಕಾಣಸಿಗಲಾರರು. ಬೊಜ್ಜು ಸಂಬಂಧಿತ ಖಾಯಿಲೆಗಳಿಂದ ಜರ್ಝರಿತರಾದರು.

ದೀವಾಳಿತನದ ಒಂದು ಹಂತದಲ್ಲಿ ಆಸ್ಟ್ರೇಲಿಯಾಕ್ಕೆ ಬರುವ ಅಕ್ರಮ ವಲಸಿಗರನ್ನು ಇಟ್ಟುಕೊಳ್ಳುವ ಜೈಲಾಗಲು ನೌರು ಒಪ್ಪಿಕೊಂಡಿತು ಆಸ್ಟ್ರೇಲಿಯಾ ನೀಡುವ ಪರಿಹಾರ ಹಣದ ಆಸೆಗಾಗಿ ಒಂದೊಮ್ಮೆ ತಮ್ಮ ಊಟವನ್ನು ತಾವೇ ದುಡಿದು ತಿನ್ನುತ್ತಿದ್ದ ಮುಗ್ದ ಜನ ದುಡಿಮೆಯನ್ನೇ ಮರೆತು ನೀರಿಗೆ ಬಿದ್ದ ಫ಼ಾರ್ಮಿನ ಕೋಳಿಗಳಂತಾದರು.ತಮ್ಮ ಪಾರಂಪಾರಿಕ ಜೀವನ ಶೈಲಿಯಿಂದ ವಿಮುಖರಾಗಿ ದುಡಿಮೆರಹಿತ ಐಶಾರಾಮಿ ಜೀವನದ ಬೆನ್ನು ಹತ್ತಿದರು.

ಒಂದು ಸುಂದರ ಶ್ರೀಮಂತ ರಾಷ್ಟ್ರದ ದುರಂತಮಯ ಅವನತಿಗೆ ಕಾರಣ ನಾನು ಬಿಡಿಸಿ ಹೇಳಬೇಕಿಲ್ಲ. ಭಾಗ್ಯಗಳನ್ನು ಕರುಣಿಸಿದವರು ಮತ್ತೆ ಮತ್ತೆ ಚುನಾಯಿತರಾದರು. ಮತ್ತಷ್ಟು ಭಾಗ್ಯಗಳನ್ನು ಕರುಣಿಸಿದರು. ದೇಶವನ್ನು ಉತ್ತುಂಗದಿಂದ ಅವನತಿಯತ್ತ ನೂಕಿದರು.

ಪುಕ್ಕಟೆ ಭಾಗ್ಯಗಳನ್ನು ಕೊಟ್ಟು ಪ್ರಜೆಗಳನ್ನು ನಿರ್ವೀರ್ಯರನ್ನಾಗಿ ಪರಿವರ್ತಿಸಿ ರಾಷ್ಟ್ರದ ಅವನತಿಗೆ ಕಾರಣರಾಗುವ ವಿವೇಚನಾರಹಿತ ರಾಜಕೀಯ ನಾಯಕರು ನಮ್ಮಲ್ಲೂ ವಿಜ್ರಂಭಿಸುತ್ತಿದ್ದಾರೆ. ಜನರಿಗೆ ಉಚಿತ ಭಾಗ್ಯಗಳು ಆಕರ್ಷಕವಾಗಿ ಕಾಣುವುದು ಸಹಜ. ಯಾಕೆಂದರೆ ಇಳಿಜಾರಿನ ಹಾದಿ ಸುಗಮವಾಗಿರುತ್ತದೆ. ಜಾರುತ್ತಾ ಜಾರುತ್ತಾ ಮತ್ತೆ ಎದ್ದು ಬರಲಾಗದ ಪ್ರಪಾತಕ್ಕೆ ಬಿದ್ದಮೇಲೆಯೇ ಬುದ್ದಿ ಬರುವುದು. ಆದರೆ ಬುದ್ದಿಬರುವ ಸಮಯಕ್ಕೆ ಕಾಲ ಮಿಂಚಿರುತ್ತದೆ.

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ

ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…

2 hours ago

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |

ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…

5 hours ago

ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

9 hours ago

ಕದನ ವಿರಾಮ ಬಳಿಕ ಪರಿಸ್ಧಿತಿ ಸಾಮಾನ್ಯ ಸ್ಧಿತಿಗೆ | ಶಾಂತಿ ಸ್ಧಾಪನೆಯ ಉದ್ದೇಶಕ್ಕೆ ಪೂರಕ ವಾತಾವರಣ

ಕದನ ವಿರಾಮ ಘೋಷಣೆ ಬಳಿಕ ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳ ಪರಿಸ್ಧಿತಿ ಸಾಮಾನ್ಯ…

18 hours ago

ಮುಳಿಯ ಕೃಷಿಗೋಷ್ಟಿ | ಕೃಷಿಕರೇ ಕೃಷಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಹೇಗೆ..?

ಕೃಷಿಯಷ್ಟೇ ಅಲ್ಲ ಕೃಷಿ ವಸ್ತುಗಳ ಮಾರುಕಟ್ಟೆ ಹಾಗೂ ಕೃಷಿ ಬೆಳವಣಿಗೆಯ  ಬಗ್ಗೆ ಪುತ್ತೂರಿನ…

18 hours ago

ಈ ರಾಶಿಯವರಿಗೆ ಒಂಟಿಯಾಗಿರುವುದೇ ಇಷ್ಟ, ಫ್ರೆಂಡ್ಸೂ ಬೇಡ, ಫ್ಯಾಮಿಲಿಯವ್ರೂ ಬೇಡ…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

1 day ago