ಅನುಕ್ರಮ

ಹೀಗೊಂದು ವ್ಯಾಪಾರದ ನಿಜ ಕತೆ……

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ವಾಟ್ಸಪ್ ಕೃಷಿ ತಾಣಗಳಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದೆ. ಒಬ್ಬ ಬಡ ಕೃಷಿಕನೊಡನೆ/ಕೃಷಿ ಸಂಬಂದಿ ವ್ಯಾಪಾರಿಯೊಡನೆ ತರಕಾರಿ ಬೆಲೆಯ ಬಗ್ಗೆ ಕೆಲವು ರೂಪಾಯಿಗಳ ಚರ್ಚೆ.ಅದೇ ದೊಡ್ಡ ಹೋಟೆಲ್ ಗೆ/ವ್ಯಾಪಾರೀ ಮಳಿಗೆಗೆ ಹೋಗಿ ಅವರಿತ್ತ ಬಿಲ್ ತೆತ್ತು ಕೊನೆಗೆ “ಪ್ರೆಸ್ಟೀಜ್” ಗಾಗಿ ಐವತ್ತೋ ನೂರೋ ಟಿಪ್ಸ್ ಕೊಡುವುದರಲ್ಲಿ ಮುಂದೆ ನಿಲ್ಲುವ ಮನಸ್ಥಿತಿ. ಎಸ್ ಇಲ್ಲೇ ಈ ಪ್ರೆಸ್ಟೀಜ್ ,ಸ್ಟೇಟಸ್ ಗಳೆಂದರೇನು ಎಂದು ಅರ್ಥೈಸಿಕೊಳ್ಳುವಲ್ಲೇ ನನ್ನನ್ನೂ ಸೇರಿ ಸಮಾಜ ಎಡವಿರುವುದು.ಕಾರಣ ಹಲವಿರಬಹುದು.ವಿಷಯಕ್ಕೆ ಬರೋಣವಂತೆ.

Advertisement

ಹಾಂ,ನಿನ್ನೆ ಮನೆಯೊಡತಿಯ ಹಲವು ವರ್ಷಗಳ ಬೇಡಿಕೆಯಂತೆ(ಕಲ್ಲು ತೂರಾಟ,ಬಡಿದಾಟ ಇರಲಿಲ್ಲ) ಒಂದು ಪ್ರಿಡ್ಜ್ ಖರೀದಿ ಮಾಡಲು ಪ್ರಸಿದ್ಧ ವ್ಯಾಪಾರೀ ಮಳಿಗೆಗೆ ಹೋದೆವು. ಆಹಾ…ಪರಮ ವೈಭವ… ಮೂರು ನಾಲ್ಕು ಮಾಳಿಗೆಯ ಶೋರೂಮ್…ಒಂದೊಂದು ಮಾಳಿಗೆಗೂ ನೀರಾವರಿಗಾಗಿ ಕೃಷಿಕನ ನೂರಾರು ಹೆಚ್ ಪಿ ಪಂಪ್ ಗಳು ಓಡಲು ಸಾಕಾಗುವಷ್ಟು ವಿದ್ಯುತ್ ಹೀರುವ ವಿದ್ಯುತ್ ದೀಪಗಳು, ವಾತಾನುಕೂಲರ್ ಗಳು, ಸತತವಾಗಿ ಏರು ಸ್ವರದಲ್ಲಿ ಸ್ವರ ದೃಷ್ಯಗಳ ಹೊರ ಹೊಮ್ಮಿಸುವ ಡಿಸ್‌ಪ್ಲೇ ಟೀವಿಗಳು…ಕಂಪ್ಯೂಟರ್ಗಳು…ಮೊಬೈಲ್ ಗಳೂ….ಇನ್ನೇನೋ ಗ್ರಾಹಕನ ಸುಖಕ್ಕಾಗಿಯೇ ಎನ್ನುವಂತಹ ಹಲವಾರು ಉತ್ಪನ್ನಗಳು ಇತ್ತು.ಎಲ್ಲಾ ಬರೆಯಬೇಕಾದರೆ ಪುನಃ ಅಲ್ಲಿ ಹೋಗಿ ಪಟ್ಟಿ ಮಾಡಬೇಕಾಗಬಹುದು.

ಸರಿ ,ನಮಗೆ ಬೇಕಾದ ಪ್ರಿಡ್ಜ್ ಮುಂದೆ ನಾವು ನಿಂತಾಗ ನಮ್ಮ ಮನೋ ನೊಟದ ಜಾಡನ್ನು ಅರಿತ ಸೇಲ್ಸ್ ಮೆನ್/ಗರ್ಲ್ ಗಳು ನಮ್ಮನ್ನು ಸುತ್ತುವರಿದು ಆ ಪ್ರಿಡ್ಜ್ ನ ಗುಣಗಾನ ಮಾಡಲು ಪ್ರಾರಂಭಿಸಿದರು. (ಮೆನೇಜರ್,ಸೇಲ್ಸ್ ಮೆನ್/ಗರ್ಲ್, ವಾಚ್ ಮೆನ್,ಅವರಿವರೆಂದು ನೂರು ಮಂದಿ ಇರಬಹುದು) ಅದು ಅವರ ಕರ್ತವ್ಯ… ನೋ ಪ್ರಾಬ್ಲೆಮ್…ಯಾವುದನ್ನು ಆರಿಸಿಕೊಳ್ಳ ಬೇಕೆಂದೇ ಅರಿಯದಷ್ಟು ಪ್ಯೂಚರ್ ಗಳು…ಒಂದೊಂದರಲ್ಲೂ ಇತ್ತು… ಸರಿ..ಅಂತೂ ಇಂತೂ ಒಂದು ಪ್ರಿಡ್ಜ್ ಗ್ರಾಂಡ್ ಫಿನಾಲೆಗೆ ಆಯ್ಕೆಗೊಂಡಿತು.(ಫೈನಲ್ ಅನ್ನುವುದು ಅತಿ ಬುದ್ದಿವಂತಿಕೆಯ ಅನುಸರಣೆಯೊಂದಿಗೆ ಫಿನಾಲೆಯಾಗಿದೆ)

ವಿಷಯ ಇರುವುದೇ ಇನ್ನು…ಆಯ್ಕೆಗೊಂಡ ಪ್ರಿಡ್ಜ್ 85000 ರೂಪಾಯಿಗಳ ಬೆಲೆ ಪಟ್ಟಿ ಅಂಟಿಸಿಕೊಂಡು ನಮ್ಮನ್ನೇ ನೋಡಿ ಕಿಸಕ್ಕನೆ ನಕ್ಕಂತೆ ಬಾಸವಾಯಿತು, ಒಹ್….ಅದರೆ ನಮ್ಮ ಸುಪುತ್ರ… ಈಗಿನ ಜನರೇಷನ್ ಅಲ್ಲವೇ,ಅವನಲ್ಲೂ ವ್ಯಾಪಾರೀ ಪ್ರವೃತ್ತಿ ಜಾಗೃತವಾಯಿತಿರಬೇಕು……ಚೌಕಾಸಿಗಾಗಿ ಪೀಲ್ಡಿಗಿಳಿದ,ಬೌಲಿಂಗ್, ಬ್ಯಾಟಿಂಗ್ ಭರ್ಜರಿ ಮುಂದುವರಿಯುತ್ತಾ ಇತ್ತು….. ನಾವು ಬದಿಯ ಸುಖಾಸನದಲ್ಲಿ ಕುಳಿತು ವೀಕ್ಷಕರಾಗಿದ್ದೆವು,ಆಗಾಗ ಸಣ್ಣ ಬೌಲಿಂಗೂ ಮಾಡುತ್ತಿದ್ದೆ,ನನ್ನ ಅರ್ದಾಂಗಿಯೂ ಆಗಾಗ ತಾನೇನೂ ಕಡಿಮೆಯಿಲ್ಲವೆಂದು ಸಿಂಗಲ್ ರನ್ ತೆಗೆಯುತ್ತಾ ಇದ್ದಳು…..ಅಂತೂ.. ಒಫರ್ ಗಳ ಮೇಲೆ ಒಫರ್… ಬಹುಮಾನಗಳು, ಕೂಪನ್ ಗಳು…. ಅದರೊಂದಿಗೆ ಚರ್ಚೆಯ ವೇಳೆ ಬಾಯಾರದಂತೆ ತಂಪು ಪಾನೀಯ…ಹೀಗೇ ಮುಂದುವರಿದ ಚೌಕಾಸಿ 85000 ದಿಂದ 72000 ಕ್ಕೆ ಬಂದು ನಿಂತುದಲ್ಲದೇ ಒಂದು ಮೂರುವರೆ ಸಾವಿರದ ಗ್ಯಾಸ್ ಸ್ಟವ್ ಕೊಡುಗೆಯೊಂದಿಗೆ ಮುಂದುವರಿಯುತ್ತಾ…ಕೊನೆಗೆ ಉಚಿತ ಸಾಗಾಟವೂ ಸೇರಿ ಕೊಡುಗೆಯಾದ ಗ್ಯಾಸ್ ಸ್ಟವ್ ಬಿಟ್ಟು 67000 ಕ್ಕೆ ಅಂತಿಮ ಹಂತಕ್ಕೆ ಬಂದು ನಿಂತುದಲ್ಲದೇ…ಒಂದು ಬ್ಯಾಂಕ್ ನ ಕಾರ್ಡ್ ಉಪಯೋಗಿಸಿ ಆರು ತಿಂಗಳ ಬಡ್ಡಿ ರಹಿತವಾಗಿ ಕಂತುಗಳ ಮೂಲಕ ಪಾವತಿಸಿದರೆ…ಮೂರನೇ ತಿಂಗಳ ಕೊನೆಗೆ ರೂಪಾಯಿ ಅರು ಸಾವಿರ ಕ್ಯಾಶ್ ಬ್ಯಾಕ್ ನಮ್ಮ ಖಾತೆಗೆ ಬರುವುದೆಂಬ ಶರತ್ತುಗಳೊಂದಿಗೆ ಅಂತಿಮವಾಯಿತು… ಆಗ ನಮಗೆ ಈ ಪ್ರಿಡ್ಜ್ 61000 ರೂಪಾಯಿಗಳಿಗೆ ಮನೆಗೆ ಬಂದಂತಾಯಿತು.

ಹಾಗಾದರೆ…ಈ ಪ್ರಿಡ್ಜ್ ನ ಮೂಲ ಬೆಲೆ ಎಷ್ಟಿರಬಹುದೂ….ಮೂಲ ಬೆಲೆಯ ಮೇಲೆ ನೂರು ಶೇಕಡಾ ಲಾಭದಂಶ ಬೇಕೇ ಬೇಕು…ಇಲ್ಲದಿದ್ದರೆ ಈ ಶೋರೂಮ್ ಗಳ ದಿನವಹಿ ಖರ್ಚುಗಳು ನಡೆಯಬೇಡವೇ…ಎಷ್ಟೇ ಇರಲಿ ಅವರ ಉತ್ಪನ್ನ, ಅವರ ವ್ಯಾಪಾರ,ಮನಸಿದ್ದರೆ ಖರೀದಿ.

Advertisement

ಇಲ್ಲೇ ನಮ್ಮ ಮನಸ್ಥಿತಿಯ ಏರು ಪೇರುಗಳು,ದ್ವಿಮುಖ ಮಾನಸಿಕತೆಯ ಅನಾವರಣ ಅಲ್ಲವೇ…… ಕೃಷಿಕ ತಾನು ಬೆಳೆದ ಬತ್ತ, ತರಕಾರಿ,ಹಾಲು ,ಹಣ್ಣು ಹಂಪಲುಗಳನ್ನು ನೂರು ಶೇಕಡಾ ಲಾಭವಿರಿಸಿ ಮಾರಬಹುದೇ….? ಅಸಾದ್ಯ…! ತನ್ನ ಉತ್ಪನ್ನದ ಮೇಲಿನ ನಿಜ ಖರ್ಚು ಕಳೆದು…ಕೆಲವೊಂದು ರೂಪಾಯಿಗಳ ಲಾಭಕ್ಕೂ ನಾವು ಚರ್ಚೆಗಿಳಿಯುದಿಲ್ಲವೇ….. . ಆಲೋಚಿಸೋಣ… ನಮ್ಮ ಹೊಟ್ಟೆ ತುಂಬಿದ ಮೇಲೆ ಅಲ್ಲವೇ ನಮಗೆ ಪ್ರಿಡ್ಜ್, ಟೀವಿ,ಬೈಕ್ ಕಾರುಗಳು ಬೇಕೆಂದು ತೋರುವುದು…..ಹಾಗಿದ್ದರೆ ಯಾವುದು ಮೊದಲು …..ಯಾವುದಕ್ಕೆ ನಿಜ ಬೆಲೆ……ಕೃತ್ರಿಮ ಬಣ್ಣದ ಲೋಕಕ್ಕೋ….ಶ್ರಮದ,ಬೆವರ ಬೆಲೆಗಾಗಿ ಚಡಪಡಿಸುವ ಬೆಳೆಗಾರನಿಗೋ……?

ಇಷ್ಟೆಲ್ಲಾ ಬರೆಯುತ್ತಿದ್ದಾಗ ನನ್ನ ಬಳಿಯೇ ಕುಳಿತಿದ್ದ ನನ್ನ ಅರ್ಧಾಂಗಿಯ ಮೊಬೈಲ್ ನಲ್ಲಿ ಪುರಂದರದಾಸರ ಕೀರ್ತನೆ ನನ್ನ ಕಿವಿಗೆ ಬಡಿಯುತ್ತಾ…ಅದರಷ್ಟಕ್ಕೇ ಉಲಿಯತೊಡಗಿತು….

ಧರ್ಮಕ್ಕೆ ಕೈ ಬಾರದೀ ಕಾಲ
ಪಾಪ ಕರ್ಮಕ್ಕೆ ಮನಸೋಲೋ ಈ ಕಾಲ
ದಂಡ ದ್ರೋಹಕೆ ಉಂಟು
ಪುಂಡು ಪೋಕರಿಗುಂಟು
ಹೆಂಡತಿ ಮಕ್ಕಳಿಗಿಲ್ಲೀ ಕಾಲ
ಜಗ ಭಂಡರಿಗುಂಟು
ಮತ್ತೆ ಸುಳ್ಳರಿಗುಂಟು
ನಿತ್ಯ ಹಾದರಕುಂಟು
ಉತ್ತಮರಿಗಲ್ಲವೀ ಕಾಲ…..

ಬರಹ: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ,  ಕಲ್ಮಡ್ಕ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಹವಾಮಾನ ವರದಿ | 12-07-2025 | ಸಾಮಾನ್ಯ ಮಳೆ ಮುಂದುವರಿಕೆ | ಜು.16 ರಿಂದ ಮಳೆ ಹೆಚ್ಚಳ |

ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.

15 hours ago

ತಾಳೆ ಬೆಳೆ ಕೃಷಿ | ಅಡಿಕೆಯ ಪರ್ಯಾಯ ಬೆಳೆಯ ಬಗ್ಗೆ ಮಾಹಿತಿ

ಅಡಿಕೆ ಬೆಳೆಗೆ ಪರ್ಯಾಯವಾಗಿ ಅಥವಾ ಉಪಬೆಳೆಯಾಗಿ ತಾಳೆ ಬೆಳೆಯನ್ನು ಬೆಳೆಯುವ ಬಗ್ಗೆ ಈಗಾಗಲೇ…

17 hours ago

ಹವಾಮಾನ ಬದಲಾವಣೆಯಿಂದ ನಿದ್ರೆಯ ಮೇಲೆ ಪರಿಣಾಮ – ಅಧ್ಯಯನ ವರದಿ

ಹವಾಮಾನ ಬದಲಾವಣೆಯಿಂದ  ಹಾಗೂ ತಾಪಮಾನದ ದಿಢೀರ್‌ ಬದಲಾವಣೆಗಳು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಪ್ರಕರಣ ಹೆಚ್ಚಾಗುತ್ತಿದೆ…

21 hours ago

ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ

ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಶೇಕಡ 0.48ರಷ್ಟು ಮಾರುಕಟ್ಟೆ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಸಂಸ್ಥೆಯ…

21 hours ago

ಹೊಸರುಚಿ | ಹಲಸಿನ ಬೀಜದ ಪರೋಟ

ಹಲಸಿನ ಬೀಜದ ಪರೋಟ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :  ಹಲಸಿನ…

22 hours ago

ಮಂಗಳದ ದೃಷ್ಟಿ | ಈ ರಾಶಿಗಳಿಗೆ ಆಕ್ರಮಣಕಾರಿ ತೀರ್ಮಾನಗಳಿಂದ ಲಾಭ..!

ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವು ಶಕ್ತಿ, ಧೈರ್ಯ, ಮತ್ತು ಆಕ್ರಮಣಕಾರಿ ನಿರ್ಧಾರಗಳ ಸಂಕೇತವಾಗಿದೆ.…

22 hours ago