ಅಂಕಣ

2024 ರ ಕ್ರೋಧಿ ಸಂವತ್ಸರದ ಮಳೆಗಾಲ….!

Share
ವರ್ಷದ ಮಳೆಗಾಲವು ನಮಗಿನ್ನು ಅನೇಕ ವರ್ಷಗಳ ಕಾಲ ನೆನಪಿಟ್ಟು ಕೊಳ್ಳುವಂತಹ ಹಾನಿಗಳನ್ನು ಕಾಣಿಸುತ್ತಿದೆ. ಮಾನವನೆಸಗಿದ ಪ್ರಕೃತಿ ನಾಶದ ವಿರುದ್ಧ ಜರಗಿದ ಪ್ರಕೃತಿ ವಿಕೋಪಕ್ಕೆ ಇದು ಸಾಕ್ಷಿಯೋ ಎಂಬಂತೆ ವಿನಾಶದ ಘಟನೆಗಳು ನಡೆಯುತ್ತಿವೆ. ಕಳೆದ 2023ರ ನವೆಂಬರ್ ಬಳಿಕ 2024ರ ಮೇ ತಿಂಗಳ ತನಕ ನಿರಂತರ ಆರು ತಿಂಗಳುಗಳ ಕಾಲ ಒಂದೇ ಒಂದು ಮಳೆ ಬಾರದ ಅನುಭವವು ಈ ಕ್ರೋಧಿ ಸಂವತ್ಸರದಲ್ಲಿ ಸಿಕ್ಕಿದೆ. ಸಾಮಾನ್ಯವಾಗಿ ಜನವರಿ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿಯ ಆರಂಭದಲ್ಲಿ ಒಂದೆರಡು ಮಳೆಗಳು ಬಂದು ತಂಪೆರಚಿ ಸೆಕೆಯ ಏರುವಿಕೆಗೆ ಬ್ರೇಕ್ ಹಾಕಿ ವಾತಾವರಣದ ಉಷ್ಣತೆಯ ಸಮತೋಲನದ ವಿದ್ಯಮಾನ ಜರಗುತ್ತಿತ್ತು. ಆದರೆ ಈ ವರ್ಷ ಹಾಗೇನೂ ಆಗಲಿಲ್ಲ. ಮೇ ತಿಂಗಳಿಗಾಗುವಾಗ ಉರಿ ಸೆಕೆಯ ಬಾಧೆ ಗಂಭೀರ ಮಟ್ಟಕ್ಕೆ ಏರಿತ್ತು. ಇದು ಪ್ರಕೃತಿ ನಾಶದ ಪ್ರತಿಫಲ ಎಂಬ ಪಾಪಪ್ರಜ್ಞೆಯ ಮಾತುಗಳು ಕೇಳಿ ಬರತೊಡಗಿದುವು. “ನಿನಗಿಂತ ಹೆಚ್ಚು ಹಾನಿ ಮಾಡಲು ನನಗೂ ತಿಳಿದಿದೆ” ಎಂಬಂತೆ ಮೇ ತಿಂಗಳಲ್ಲೇ ಬಂದ ಮಳೆ ತೋರಿಸಿತು. ನಂತರ ಜೂನ್ ತಿಂಗಳ ಅರ್ಧ ಭಾಗ ಮಳೆಯೇ ಬಾರದೆ ಖಾರ ಬಿಸಿಲಿನ ಬೇಗೆ ಹೆಚ್ಚಾದದ್ದು ಸಹನೆಗೆ ಕಷ್ಟವಾಗಿತ್ತು. ಕೃಷಿಕರಲ್ಲಿ ಬರಗಾಲದ ಕಳವಳ ಹೆಚ್ಚುತ್ತಿದ್ದುದು ಜೂನ್ ಮಧ್ಯಭಾಗದಲ್ಲಿ ಬಂದ ಮಳೆಯೊಂದಿಗೆ ನಿರಾಳವಾಗತೊಡಗಿತು. ಆದರೆ ಈ ನಿರಾಳತೆ ತಾತ್ಕಾಲಿಕವೆಂದು ತಿಳಿಯಲು ಬಹು ದಿನಗಳು ಬೇಕಾಗಲಿಲ್ಲ. ಮಳೆಯ ಪ್ರಮಾಣವು ಒಮ್ಮಿಂದೊಮ್ಮೆಲೇ ಹೆಚ್ಚಿ ಪ್ರವಾಹ ಮತ್ತು ಮರಗಿಡಗಳ ಮುರಿಯುವಿಕೆಯೊಂದಿಗೆ ವಿದ್ಯುದಾಘಾತಗಳು ಸಂಭವಿಸಿದುವು. ಜೀವಂತ ವಿದ್ಯುತ್ ತಂತಿಗಳು ನೀರಿಗೆ ಬಿದ್ದು ಶಾಕ್ ತಗಲಿದವರನ್ನು ನಿರ್ಜೀವಗೊಳಿಸಿದುವು. ನಗರಗಳಲ್ಲಷ್ಟೇ ಅಲ್ಲ, ಹಳ್ಳಿಗಳಲ್ಲೂ ಇಂತಹ ಆಘಾತಕ್ಕೆ ಜನರ ಬಲಿಗಳು ದಾಖಲಾದುವು. ಅದರಲ್ಲೂ ಯುವ ಪ್ರಾಯದವರು ಜೀವ ಕಳಕೊಂಡ ದಾರುಣ ಘಟನೆಗಳು ವರದಿಯಾದುವು.
ಈ ವರ್ಷ ಹವಾಮಾನ ಇಲಾಖೆಯ ವರದಿಗಳು ರೆಡ್ ಅಲರ್ಟ್ ಘೋಷಿಸುವಲ್ಲಿ ಸಕ್ರಿಯವಾಗಿದ್ದುವು. ಜಿಲ್ಲಾಧಿಕಾರಿಗಳು ಜಿಲ್ಲಾಮಟ್ಟದಲ್ಲಿ ಮಳೆಯ ನಿಮಿತ್ತ ರಜೆ ಘೋಷಿಸಿದಾಗ ಜಿಲ್ಲೆಯ ಕೆಲವು ಭಾಗಗಳಲ್ಲಿ ರಜೆ ಅನವಶ್ಯಕವೆನಿಸಿದರೂ ಅಂದಿನ ಮಳೆಯ ವಿದ್ಯಮಾನಗಳ ವರದಿಯು ಮರುದಿನ ದೊರಕಿದಾಗ ಅನೇಕ ವಿದ್ಯಾರ್ಥಿಗಳ ಜೀವರಕ್ಷಣೆಗೆ ರಜೆಯು ಬೇಕಾಗಿತ್ತೆಂದು ವೇದ್ಯವಾಗುತ್ತಿತ್ತು. ಸರಿಯಾದ ಸೇತುವೆಗಳಿಲ್ಲದಲ್ಲಿ ಜೀವವನ್ನು ಪಣಕ್ಕಿಟ್ಟಂತೆ ಶಾಲೆಗಳಿಗೆ ಬರುವ ಹಳ್ಳಿಯ ಮಕ್ಕಳ ಪರಿಸ್ಥಿತಿಯು ನಿಜಕ್ಕೂ ಆತಂಕಕಾರಿಯಾಗಿತ್ತು. ಸಾಮಾನ್ಯವಾಗಿ ತಗ್ಗು ಪ್ರದೇಶಗಳಲ್ಲಿ ಅಪಾಯದ ಪ್ರಮಾಣ ಹೆಚ್ಚೆಂದು ಹೇಳಬಹುದಾಗಿದ್ದರೂ ಎತ್ತರ ಪ್ರದೇಶಗಳಲ್ಲಿ ವಿಪರೀತ ಶಬ್ದ ಸಹಿತ ಗಾಳಿಯ ಬೀಸುವಿಕೆಯು ಭಯ ಹುಟ್ಟಿಸುತ್ತಿತ್ತು. ಮರಗಳು ಮುರಿದು ಬೀಳುವುದು ಹಾಗೂ ಇತರ ಮರಗಳ ಮೇಲೆರಗಿ ಹೆಚ್ಚಿನ ಹಾನಿಯಾಗಿ ಕೆಲವರ ಬದುಕಿನಲ್ಲಿ ಹಿನ್ನಡೆ ದಾಖಲಾಯಿತು. ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಭೀಕರ ಮಳೆಯಿಂದಾಗಿ ಉಕ್ಕಿ ಹರಿದ ನದಿಗಳು ತೀರದಲ್ಲಿದ್ದವರ ಬದುಕನ್ನು ತನ್ನೊಂದಿಗೆ ಸಮುದ್ರಕ್ಕೆ ಎಳೆದೊಯ್ದಿತು. ಅನೇಕರ ಮನೆಗಳಲ್ಲಿ ಗೋಡೆಗಳು ಜರಿದು ಬಿದ್ದು ಜೀವಹಾನಿ ಉಂಟಾಯಿತು. ಮಲಗಿದ್ದಲ್ಲೇ ಕುಟುಂಬಗಳ ಸದಸ್ಯರು ಒಟ್ಟಾಗಿ ಜೀವ ಬಿಟ್ಟ ಪ್ರಕರಣಗಳು ವರದಿಯಾದುವು. ಎರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿನಾಶದ ಚಿತ್ರಗಳು ಈ ವರ್ಷ ಬೇರೆ ಕಡೆಗಳಲ್ಲಿ ಕಾಣಿಸತೊಡಗಿದವು. ಮಳೆ ಹಾನಿಯ ಪ್ರಕರಣಗಳು ಪಶ್ಚಿಮ ಘಟ್ಟಗಳಿಂದ ಪೂರ್ವಕ್ಕೆ ವಿಸ್ತರಿಸಿ ಪೀಠಭೂಮಿಯ ವಿವಿಧ ಭಾಗಗಳಲ್ಲಿ ಮರುಕಳಿಸಿದುವು. ಆದರೆ ಮತ್ತೆ ಮರಳಿ ಪಶ್ಚಿಮಘಟ್ಟಗಳಲ್ಲಿ ಮಳೆಯು ಅಪ್ಪಳಿಸುತ್ತ ಉತ್ತರಕನ್ನಡ ಜಿಲ್ಲೆಯ ಶೀರೂರು ಶಿಖರವನ್ನು ಜರ್ಝರಿತಗೊಳಿಸಿತು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ 2024 ಜುಲೈ 16 ರಂದು ಭಾರೀ ಭೂಕುಸಿತ ಸಂಭವಿಸಿದ್ದು ನಾಪತ್ತೆಯಾದವರ ಪತ್ತೆ ಕಾರ್ಯವನ್ನು ಹೆಚ್ಚಿನ ಮಳೆಯಿಂದಾಗಿ ಗಂಗಾವಳಿ ನದಿಯಲ್ಲಿ ಉಂಟಾಗಿರುವ ಪ್ರವಾಹದ ಏರಿಕೆಯಿಂದಾಗಿ ಸ್ಥಗಿತಗೊಳಿಸಬೇಕಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಶೋಧಕಾರ್ಯಕ್ಕೆ ಮಳೆಯೇ ಅಡ್ಡಿಯಾಯ್ತು. ಬಲವಾದ ಪ್ರವಾಹದಿಂದಾಗಿ ಶೋಧ ಕಾರ್ಯ ಕಷ್ಟವಾಗಿದೆ ಎಂದು ಭಾರತೀಯ ನೌಕಾ ಪಡೆ ಕೂಡಾ ತನ್ನ ಪ್ರಯತ್ನವನ್ನು ಸ್ಥಗಿತಗೊಳಿಸಬೇಕಾಗಿ ಬಂತು.  ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಟ್ರಕ್ ಕಣ್ಮರೆಯಾಗಿದ್ದು ಅದರ ಶೋಧ ಕಾರ್ಯವು ದೊಡ್ಡ ಸವಾಲಾಗಿ ಸಾಧ್ಯವಿರುವ ವೈಜ್ಞಾನಿಕ ಪ್ರಯೋಗಗಳನ್ನೆಲ್ಲ ಮಾಡಿದರೂ ಮಳೆಯು ಶರಣಾಗಲಿಲ್ಲ. ಜುಲೈ 16 ರಂದು ನದಿಗೆ ಬಿದ್ದಿದ್ದ ಟ್ಯಾಂಕರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ತುಂಬಾ ಪರಿಶ್ರಮ ಪಟ್ಟು ದಡಕ್ಕೆ ಎಳೆದು ಅದರಲ್ಲಿದ್ದ ಅನಿಲವನ್ನು HPCL ನ ತಜ್ಞರು ಹೊರಗೆ ಹರಿಸಿದ್ದರಿಂದ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದು ಒಂದು ಸಾರ್ಥಕ ಕೆಲಸವೆನ್ನಬಹುದು. ಈ ಮಧ್ಯೆ ಕುಸಿದ ಗುಡ್ಡದ ಕಲ್ಲು ಮಣ್ಣಿನ ರಾಶಿಯಲ್ಲಿ ಕಾಣೆಯಾಗಿರುವ ಕೇರಳದ ಟ್ರಕ್ ಹಾಗೂ ಅದರ ಚಾಲಕ ಅರ್ಜುನ್‍ನನ್ನು ಪತ್ತೆ ಹಚ್ಚುವ ಸವಾಲೇ ದೊಡ್ಡದಾಯಿತು.
ಈ ಮಧ್ಯೆ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‍ಎಚ್‍ಎಐ) ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಅಧ್ಯಯನ ವರದಿಯೊಂದು ತಿಳಿಸಿತು. ಸಹಜವಾಗಿಯೇ ತನ್ನ ಮೇಲಿನ ಆಪಾದನೆಯನ್ನು ಒಪ್ಪದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದೊಂದು ತಡೆಯಲಾಗದ ನೈಸರ್ಗಿಕ ವಿಕೋಪ ಎಂದು ಪ್ರತಿಪಾದಿಸಿತು.
ಶಿರೂರಿನ ಘಟನೆಯೇ ಕರಾವಳಿಯವರಿಗೆ ದೊಡ್ಡದಾಗಿತ್ತು. ಹೆಚ್ಚು ಪರಿಚಿತವಿರದ ಗಂಗಾವಳಿ ನದಿಯು ದೊಡ್ಡ ಸುದ್ದಿಗೆ ಬಂದಿತ್ತು. ಅದೇ ಹೊತ್ತಿಗೆ ಉತ್ತರ ಕರ್ನಾಟಕದ ಪ್ರಸಿದ್ಧ ನದಿಗಳು ತುಂಬಿ ಹರಿದುವು. ಅಣೆಕಟ್ಟುಗಳಿಗೆ ಒಳ ಹರಿವು ಹೆಚ್ಚಿ ಅನಿವಾರ್ಯವಾಗಿ ದ್ವಾರಗಳನ್ನು ತೆರೆಯಬೇಕಾಯಿತು. ಹಾಗೆ ಹರಿದ ನೀರಿನಿಂದಾಗಿ ಮುಳುಗಿದ ಹಳ್ಳಿಗಳ ಚಿತ್ರಣವು ವಿನಾಶಕ್ಕೆ ಮಿತಿಯಿಲ್ಲವೆಂಬುದನ್ನು ತೋರಿಸಿಕೊಟ್ಟಿತು. ಅತ್ತ ಉತ್ತರ ಭಾರತದಲ್ಲಿಯೂ ಹಿಮಾಲಯದಲ್ಲಿಯೂ ಚೀನಾದಲ್ಲಿಯೂ ಮಳೆಯಿಂದಾಗಿ ಪರ್ವತ ಶಿಖರಗಳ ಕುಸಿತ ಹಾಗೂ ಅಪಾರವಾದ ನೆರೆ, ಮುಳುಗಡೆ ಮತ್ತು ಜೀವ ನಾಶ ಸಂಭವಿಸಿದೆ.  ಈ ಮಧ್ಯೆ ಇದೇ ಜುಲೈ ಕೊನೆಗೆ ಕೇರಳದ ವಯನಾಡ್ ನಲ್ಲಿ ಈವರೆಗೆ ಕಂಡು ಕೇಳರಿಯದ ಮಳೆಯಿಂದಾಗಿ ಪ್ರವಾಹ ಮತ್ತು ಗುಡ್ಡ ಕುಸಿತದಿಂದಾಗಿ ಅಪಾರ ಪ್ರಮಾಣದಲ್ಲಿ ಮನುಷ್ಯ ಮತ್ತು ಪ್ರಾಣಿಸಂಕುಲದ ಜೀವನಾಶ ಸಂಭವಿಸಿದೆ.
ಭೂಕುಸಿತದ ಬಗ್ಗೆ ಅಧ್ಯಯನ ನಡೆಸಿದ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‍ಐ) ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ರಸ್ತೆ ಕಾಮಗಾರಿಗಳ ವಿಧಾನದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಹೆಚ್ಚಿನ ಹಾನಿಯನ್ನು ತಡೆಯಲು ತಕ್ಷಣದ ಮತ್ತು ದೀರ್ಘಕಾಲೀನ ಕ್ರಮಗಳನ್ನು ಸೂಚಿಸಿದೆ. ಮುಖ್ಯವಾಗಿ ಇಳಿಜಾರು ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪ ಎದ್ದು ಕಾಣಿಸಿದ್ದು ಕಾಮಗಾರಿಯಿಂದ ನೈಸರ್ಗಿಕ ಒಳಚರಂಡಿ ಹರಿವಿಗೆ ತೊಂದರೆಯಾಗಿದೆ.
ಏನಿದ್ದರೂ ಕಡಿಮೆ ಅವಧಿಯಲ್ಲಿ 503 ಮಿಮೀ ಮಳೆಯಾಗಿರುವುದು ಸದ್ಯದ ಪ್ರಕೃತಿ ವಿಕೋಪಕ್ಕೆ ಪ್ರಧಾನ ಕಾರಣ ಎಂಬುದನ್ನು ಭೂವೈಜ್ಞಾನಿಕ ಸಮೀಕ್ಷೆ ವರದಿ ಒಪ್ಪಿದೆ. ಹಾಗಿದ್ದರೂ ಈ ಸಮೀಕ್ಷೆಯಲ್ಲಿ  ಮಳೆ ನೀರಿನ ಹರಿವಿನ ನೈಸರ್ಗಿಕ ತಡೆಗಳು ಮಾಯವಾಗಿರುವುದು ಮತ್ತು ಕಡಿದಾದ ಇಳಿಜಾರಿನ ಪ್ರದೇಶ ಸೃಷ್ಟಿಯಾಗಿರುವುದು ಭೂಕುಸಿತಕ್ಕೆ ಪ್ರಮುಖ ಕಾರಣವೆಂದು  ಹೇಳಲಾಗಿದೆ.
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

5 hours ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

5 hours ago

ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |

ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…

5 hours ago

ಬೆಳ್ಳಿ ಧರಿಸುವುದು ಎಲ್ಲಾ ರಾಶಿಯವರಿಗೆ ಉತ್ತಮವೇ…? | ಯಾವೆಲ್ಲಾ ರಾಶಿಗಳಿಗಳಿಗೆ ಹಾನಿ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

5 hours ago

ಸಂಬಾರ ಮಂಡಳಿಯ ದರ ಪಟ್ಟಿಯಲ್ಲಿ ಶಿರಸಿಯ ಕಾಳುಮೆಣಸು ನಮೂದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ಶಿರಸಿಯ ಕಾಳುಮೆಣಸಿನ ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಸಚಿವ…

13 hours ago

ಹೆತ್ತವರವನ್ನು ನೋಡಿಕೊಳ್ಳದ ಮಕ್ಕಳ ದಾನಪತ್ರ ರದ್ದುಗೊಳಿಸುವ ಅವಕಾಶ ಕಾನೂನಿನಲ್ಲಿದೆ | ಸಚಿವ ಕೃಷ್ಣಭೈರೇಗೌಡ

ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ದಾನಪತ್ರವನ್ನು…

13 hours ago