ಸುಳ್ಯ ತಾಲೂಕು ಬಹುಪಾಲು ಗ್ರಾಮೀಣ ಭಾಗಗಳಿಂದ ಕೂಡಿದೆ. ಹಾಗಿದ್ದರೂ ಸುಳ್ಯ ತಾಲೂಕಿನ ಶಿಕ್ಷಣ ವ್ಯವಸ್ಥೆಯಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೊರೋನಾ ಸಂದರ್ಭದಲ್ಲಿ ಪಾಠ, ಓದಿನಲ್ಲಿ ಯಾವುದೇ ಕೊರತೆಯಾಗದಂತೆ ಸರಕಾರಿ ಶಾಲೆಯ ಶಿಕ್ಷಕರ ತಂಡ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಾಠ, ಓದಿನ ವ್ಯವಸ್ಥೆ ಮಾಡಿದೆ. ಜೂನ್ ತಿಂಗಳಿನಿಂದಲೇ ಆರಂಭವಾದ ಈ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ ಪ್ರಯತ್ನ ದ ಕ ಜಿಲ್ಲೆಯಲ್ಲೇ ಮೊದಲಾಗಿದ್ದು ಬಹುಶ: ರಾಜ್ಯದಲ್ಲೇ ಇದು ಮಾದರಿ ಪ್ರಯೋಗ. ನೆಟ್ವರ್ಕ್ ಇಲ್ಲದ, ಸ್ಮಾರ್ಟ್ ಫೋನ್ ಇಲ್ಲದ ಗ್ರಾಮೀಣ ಭಾಗದ ಮಕ್ಕಳ ಮನೆಗೆ ತೆರಳಿ ಪಾಠ ಕಲಿಸಿದ ಗುರುಗಳಿಗೆ ವಂದನೆ ಹೇಳಬೇಕಿದೆ.
ಕೊರೋನಾವು ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆತಂಕವೇ ಹೆಚ್ಚಾಗಿತ್ತು. ಮಕ್ಕಳಿಗೆ ಶಾಲೆಯ ಮೆಟ್ಟಿಲು ನಿಗದಿತ ಸಮಯದಲ್ಲಿ ಹತ್ತದಂತೆ ಮಾಡಿತು. ಹಾಗಿದ್ದರೂ ಮಕ್ಕಳಿಗೆ ಶಿಕ್ಷಣ ಸಿಗಬೇಕು, ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬ ಪ್ರಯತ್ನ ಸರಕಾರದಿಂದ ನಡೆಯಿತು. ಶಿಕ್ಷಣ ಸಚಿವರು ಇನ್ನಿಲ್ಲದ ಪ್ರಯತ್ನ ಮಾಡಿದರು. ಆದರೆ ಶಿಕ್ಷಣ ಕ್ಷೇತ್ರಕ್ಕೆ ಕೊರೋನಾವು ಸವಾಲು ಕೊಟ್ಟಿತು. ಬೇರೆಲ್ಲಾ ಕ್ಷೇತ್ರಗಳಲ್ಲಿನ ಸವಾಲಿಗಿಂತಲೂ ಶಿಕ್ಷಣ ಕ್ಷೇತ್ರದ ಸವಾಲು ಎದುರಿಸುವುದು ಅತ್ಯಂತ ಸೂಕ್ಷ್ಮದ ಕೆಲಸ. ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬಷ್ಟರ ಮಟ್ಟಿಗೆ ಪೋಷಕರು ನಿರ್ಧರಿಸಿದ್ದರು. ಆದರೆ ಶಿಕ್ಷಣ ಇಲಾಖೆ ಇದನ್ನೂ ಅಲ್ಲಗಳೆಯುವ ಹಾಗಿಲ್ಲ. ಮಕ್ಕಳನ್ನೂ ಶಾಲೆಗಳಲ್ಲಿ ನಿಯಂತ್ರಣ ಮಾಡುವುದೂ ಕಷ್ಟವೇ. ಆಟ-ಪಾಠ-ಓಟ ಇದ್ದದ್ದೇ. ಇಲ್ಲಿ ಸಾಮಾಜಿಕ ಅಂತರ, ಮಾಸ್ಕ್ , ಸ್ಯಾನಿಟೈಸರ್ ಎಲ್ಲವೂ ಸಾಧ್ಯವಾಗದ ಮಾತು. ಅದರಲ್ಲೂ 7 ನೇ ತರಗತಿವರೆಗೆ ತೀರಾ ಕಷ್ಟ. ಈ ನಡುವೆ ಸರಕಾರ ಇನ್ನಿಲ್ಲದ ಪ್ರಯತ್ನ ಮಾಡಿತು. ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಯಾಗಬೇಕು ಎಂದು ಜುಲೈ ಹೊತ್ತಿಗೆ ಹೇಳಿತು.
ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಈ ಪ್ರಯತ್ನ ಜೂನ್ ತಿಂಗಳಿನಿಂದಲೇ ಪಾಠ ಆರಂಭವಾಗಿತ್ತು. ಇಲ್ಲಿನ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಬಿಆರ್‌ಸಿಯ ಬಿ ಆರ್ ಪಿ ಗಳು ಹಾಗೂ ಧನಾತ್ಮಕ ಯೋಚನೆಯ ಶಿಕ್ಷಕರ ತಂಡ ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇತ್ತು.
https://www.youtube.com/watch?v=Y57VWBknaG0&feature=youtu.be
ಖಾಸಗಿ ಶಾಲೆಗಳಲ್ಲಿ ದೊಡ್ಡ ಫೀಸು ಪಡೆದು ಆನ್ ಲೈನ್ ಮೂಲಕ ಸಣ್ಣ ಸಣ್ಣ ಮಕ್ಕಳಿಗೂ ಕ್ಲಾಸ್ ನಡೆಯುತ್ತಿದೆ. ಕಿರಿಯ, ಹಿರಿಯ ಮಕ್ಕಳಿಗೂ ಆನ್ ಲೈನ್ ಕ್ಲಾಸ್ ನಡೆಯುತ್ತದೆ. ವಾಟ್ಸಪ್ ಇರುವ ಕಡೆ, ನೆಟ್ವರ್ಕ್ ಇರುವ ಕಡೆ ಮಕ್ಕಳ ಪೋಷಕರ ಗುಂಪು ಮಾಡಿ ಪ್ರತೀ ದಿನ ಟಾಸ್ಕ್ ನೀಡಿ ಬರೆಸುತ್ತಿದ್ದರು. ಆದರೆ ಸರಕಾರಿ ಶಾಲೆಯ ಮಕ್ಕಳಿಗೆ, ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳಿಗೆ ಏನು ಕತೆ ? ಅವರ ಎಜುಕೇಶನ್ ಹೇಗೆ ? ಎಂಬ ಆತಂಕ ಗ್ರಾಮೀಣ ಭಾಗದ ಪೋಷಕರಿಗೆ ಸಹಜವಾಗಿಯೇ ಇತ್ತು. ಸುಳ್ಯದಲ್ಲಿ ಈ ಆತಂಕ ದೂರವಾಗುವ ಹಾಗೆ ಇಲ್ಲಿನ ಶಿಕ್ಷಣ ಇಲಾಖೆ ಮಾಡಿದೆ.
ಮಾರ್ಚ್ ಬಳಿಕ ಕೊರೋನಾ ಲಾಕ್ಡೌನ್ ಬಂತು. ಮಕ್ಕಳಿಗೆ ಪರೀಕ್ಷೆಯೂ ನಡೆಯಲಿಲ್ಲ. ಈ ಸಂದರ್ಭ ಸುಳ್ಯದ ಕ್ರಿಯೇಟಿವ್ ಆಗಿರುವ ಸರಕಾರಿ ಶಾಲಾ ಶಿಕ್ಷಕರ ತಂಡ ಯೋಚನೆ ಮಾಡಿದ್ದು ಮಕ್ಕಳಿಗೆ ಹೇಗೆ ಪಾಠ ಮಾಡಬಹುದು ಎಂಬುದರ ಬಗ್ಗೆ. ಇದಕ್ಕಾಗಿಯೇ ಯೋಜನೆ ರೂಪಿಸಿತು. ಎಪ್ರಿಲ್-ಮೇ ಆದರೂ ಕೊರೋನಾ ಕಡಿಮೆಯಾಗುವ ಲಕ್ಷಣ ಕಾಣಿಸಲಿಲ್ಲ. ಈ ಸಂದರ್ಭ ಮೇ ಅಂತ್ಯದ ವೇಳೆಗೆ ಸರಕಾರಿ ಶಾಲೆಗೆ ಬರುವ ಮಕ್ಕಳ ಪೋಷಕರ ಜೊತೆ ಮಾತುಕತೆ ನಡೆಸಿದರು. ವಾಟ್ಸಪ್ ಇರುವ ಪೋಷಕರದ್ದೇ ಒಂದು ಗ್ರೂಪು ಮಾಡಿದರು. ಆ ಮಕ್ಕಳಿಗೆ ಟಾಸ್ಕ್ ಕೊಟ್ಟು ಬರೆಸಲು ಹೇಳಿದರು. ನಂತರ ನೆಟ್ವರ್ಕ್ ಇಲ್ಲದ ಹಾಗೂ ವಾಟ್ಸಪ್ ಇಲ್ಲದ ಪೋಷಕರ ಮನೆಗೆ ತೆರಳಿ ಮಕ್ಕಳಿಗೆ ಪಾಠಕ್ಕೆ ಸಿದ್ಧರಾಗುವಂತೆ ಹೇಳಿದರು. ಜೂನ್ ಮೊದಲ ವಾರದಿಂದಲೇ ಶಿಕ್ಷಕರ ಮಕ್ಕಳ ಮನೆಗೆ ತೆರಳಿ ಪಾಠ ಮಾಡಿದರು, ಬರೆಯಿಸಿದರು, ಓದಿಸಿದರು. ಈ ಪ್ರಯತ್ನ ಇಂದಿಗೂ ನಡೆಯುತ್ತಿದೆ. ಅದೇ ಹೊತ್ತಿಗೆ ಸರಕಾರದಿಂದಲೂ ಈ ಬಗ್ಗೆ ಪ್ರಯತ್ನ ನಡೆಸಲು ಹೇಳಿದಾಗ ಸುಳ್ಯದ ಬಹುಪಾಲು ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಯು ಮಕ್ಕಳು ಪಾಠ ಕೇಳಲು, ಕಲಿಯಲು ಆರಂಭ ಮಾಡಿದ್ದರು. ಸದ್ದಿಲ್ಲದೆ ಈ ಕೆಲಸ ನಡೆಯುತ್ತಿದೆ. ಬರೀ ಪಾಠವಲ್ಲ, ಇದರ ಜೊತೆಗೆ ಪರಿಸರ ಅಧ್ಯಯನ, ಇವಿಎಸ್ , ಇಂಗ್ಲಿಷ್ ಪಾಠದ ಮಕ್ಕಳಿಗೆ ಪಾಠ ಮೊದಲಾದ ಶಿಕ್ಷಣದ ಬಗ್ಗೆ ವಿಡಿಯೋ ಮಾಡಿ ಮಕ್ಕಳಿಗೆ ನೀಡಿದರು.
ಮಕ್ಕಳಿಗಾಗಿ ಸರಕಾರಿ ಶಾಲಾ ಶಿಕ್ಷಕರು ತಯಾರಿಸಿದ ವಿಡಿಯೋ ಇಲ್ಲಿದೆ…
ಸುಳ್ಯ ತಾಲೂಕಿನ ಗ್ರಾಮೀಣ ಭಾಗಗಳಾದ ಅದರಲ್ಲೂ ನೆಟ್ವಕ್ ಸಮಸ್ಯೆ ಇರುವ ಪ್ರದೇಶಗಳೇ ಎಂದು ಹೇಳಲಾಗುವ ಹಾಲೆಮಜಲು, ದೇವರಕಾನ , ಕೋಲ್ಚಾರು, ಅಚ್ರಪ್ಪಾಡಿ, ಮೆಟ್ಟಿನಡ್ಕ, ಮಡಪ್ಪಾಡಿ, ಬೆಳ್ಳಾರೆ, ವಳಲಂಬೆ, ಗುತ್ತಿಗಾರು, ಹಾಡಿಕಲ್ಲು, ವಾಲ್ತಾಜೆ, ಕರಂಗಲ್ಲು, ಐನೆಕಿದು, ಪೆರುವಾಜೆ, ಪಡ್ಪಿನಂಗಡಿ, ಪಾಂಡಿಗದ್ದೆ, ಕೇನ್ಯ, ಪೈಕ, ತಂಟೆಪ್ಪಾಡಿ ಮೊದಲಾದ ಶಾಲೆಗಳ ಶಿಕ್ಷಕರು ನಿರಂತರ ಪ್ರಯತ್ನ ಮಾಡಿದರು, ಉತ್ತಮ ಕೆಲಸ ಮಾಡಿದ್ದಾರೆ. ಕೊರೋನಾದ ಅಬ್ಬರದ ನಡುವೆ ಈ ಪಾಸಿಟಿವ್ ಸಂಗತಿ ಬೆಳಕಿಗೆ ಬಂದಿರಲಿಲ್ಲ. ಸರಕಾರಿ ಶಾಲೆಗಳ ಶಿಕ್ಷಕರೂ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಸರಕಾರಿ ಶಾಲೆಗಳು ಯಾವುದೇ ಖಾಸಗೀ ಶಾಲೆಗಳಿಗೆ ಕಡಿಮೆಯೇನಿಲ್ಲ ಎಂದು ತೋರಿಸಿವೆ.
ಸುಳ್ಯದ ಸರಕಾರಿ ಶಾಲೆಯ ಎಲ್ಲಾ ಮಕ್ಕಳಿಗೂ ಶಿಕ್ಷಣದಲ್ಲಿ ಕೊರತೆಯಾಗಬಾರದು ಎಂದು ಜೂನ್ ತಿಂಗಳಿನಿಂದಲೇ ಶಿಕ್ಷಕರೆಲ್ಲ ಒಂದು ತಂಡವಾಗಿ ಕೆಲಸ ಮಾಡಿದ್ದಾರೆ.ಮುಂದೆಯೂ ಇದೇ ರೀತಿಯ ಪ್ರಯತ್ನ ಮುಂದುವರಿಸಲಾಗುತ್ತದೆ. ದಕ ಜಿಲ್ಲೆಯಲ್ಲಿ ಮೊದಲ ಪ್ರಯತ್ನ ಇದಾಯಿತು. ಹೀಗಾಗಿ ಉತ್ತಮ ಕೆಲಸವಾಗಲು ಸಾಧ್ಯವಾಗಿದೆ. – ಮಹದೇವ ಎಸ್ ಪಿ , ಕ್ಷೇತ್ರ ಶಿಕ್ಷಣಾಧಿಕಾರಿ, ಸುಳ್ಯ
Advertisement
ಇಷ್ಟೇ ಅಲ್ಲ ಪುತ್ತೂರು ತಾಲೂಕಿನ ಕೆಲವು ಸರಕಾರಿ ಶಾಲೆಯ ಶಿಕ್ಷಕರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಾಠ ಮಾಡಿದ್ದಾರೆ. ಮಕ್ಕಳ ಮನೆಗೆ ತೆರಳಿ ಪಾಠದ ಜೊತೆಗೆ ಪರಿಸರ ಅಧ್ಯಯನ ಸೇರಿದಂತೆ ಓದು-ಬರಹಕ್ಕೆ ಉತ್ತೇಜನ ನೀಡಿದ್ದಾರೆ. ತೀರಾ ಹಿಂದುಳಿದ ಪ್ರದೇಶಗಳು, ಕಾಲನಿಗಳಿಗೆ ಆದ್ಯತೆ ಸ್ವಯಂಪ್ರೇರಿತರಾಗಿ ಈ ಶಿಕ್ಷಕರು ಮನೆ ಮನೆಗೆ ತೆರಳಿದ್ದಾರೆ.