Advertisement
ಅನುಕ್ರಮ

ಮಹಾತ್ಮ ಗಾಂಧಿ + ಬಾಬಾ ಸಾಹೇಬ್ ಅಂಬೇಡ್ಕರ್ = ವಿಶ್ವ ಗುರು ಭಾರತ | ಮನಸ್ಸಿನ ಕನ್ನಡಿಯಲ್ಲಿ ಬರೆಯುತ್ತಾರೆ ವಿವೇಕಾನಂದ ಎಚ್‌ ಕೆ |

Share

ಭಾರತದ ಸ್ವಾತಂತ್ರ್ಯ ನಂತರ ಅತಿಹೆಚ್ಚು ಚರ್ಚಿತವಾಗುತ್ತಿರುವ ಎರಡು ವ್ಯಕ್ತಿಗಳು ಮತ್ತು ಶಕ್ತಿಗಳೆಂದರೆ ಮಹಾತ್ಮ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್.

ಗಾಂಧಿ ವಾದ ಮತ್ತು ಅಂಬೇಡ್ಕರ್ ವಾದ ವಿವಿಧ ಆಯಾಮಗಳನ್ನು ಪಡೆಯುತ್ತಾ, ಬೆಳೆಯುತ್ತಾ, ಘರ್ಷಣೆಗೆ ಒಳಪಡುತ್ತಾ, ವಿವಾದವಾಗುತ್ತಾ ಸಾಗುತ್ತಿದೆ.

ಗಾಂಧಿ ಮತ್ತು ಅಂಬೇಡ್ಕರ್ …. ವಿರೋಧಿಗಳೇ ? ಸ್ನೇಹಿತರೇ ? ಭಿನ್ನ ಅಭಿಪ್ರಾಯದವರೇ ? ಸ್ವಾರ್ಥಿಗಳೇ ? ಆದರ್ಶಗಳೇ ?
ಪ್ರಸ್ತುತರೇ – ಅಪ್ರಸ್ತುತರೇ ? ದೇಶದ ಹಿತಾಸಕ್ತಿಗೆ ಮಾರಕವೇ ಪೂರಕವೇ ? ಎಂಬ ಪ್ರಶ್ನೆಗಳ ಜೊತೆಗೆ….

ಅವರನ್ನು ಹೇಗೆ ಅರ್ಥೈಸಿಕೊಳ್ಳುವುದು ? ಎಷ್ಟು ಅಧ್ಯಯನ ಮಾಡಬೇಕು ? ಎಷ್ಟು ಚಿಂತನೆಗೆ ಒಳಪಡಬೇಕು ? ಎಷ್ಟು ಚರ್ಚಿಸಬೇಕು ? ಯಾವುದನ್ನು ಗ್ರಹಿಸಬೇಕು ? ಎಷ್ಟು ಅನುಭವ ಇರಬೇಕು ? ಯಾವ ಹಿನ್ನೆಲೆಯಲ್ಲಿ ಇದನ್ನು ಯೋಚಿಸಬೇಕು ? ಎಂಬುದು ಮುಖ್ಯವಾಗುತ್ತದೆ..

ಅದಕ್ಕಾಗಿ ಒಂದು ಸರಳ ಕ್ರಮ ಮತ್ತು ಮಾನಸಿಕ ಕಸರತ್ತು…….

ಅದಕ್ಕಾಗಿ ಕೆಲಹೊತ್ತು ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ಮರೆತು ಗಾಂಧಿಯವರ ಹುಟ್ಟೂರು ಪೋರ್ ಬಂದರ್ ಗೆ ಮಾನಸ್ಸಿನಲ್ಲೇ ಪ್ರಯಾಣಿಸಿ. ಗಾಂಧಿ ಹುಟ್ಟಿದ 1869, ಆ ಕಾಲದ ಸಾಮಾಜಿಕ ಸ್ಥಿತಿಗತಿಗಳು ಅದರ ಸುತ್ತಮುತ್ತಲಿನ ವಾತಾವರಣ ಗಮನಿಸಿ. ಅವರ ಓದು ಬ್ಯಾರಿಸ್ಟರ್ ಪದವಿ, ದಕ್ಷಿಣ ಆಫ್ರಿಕಾದ ಹೋರಾಟ, ಭಾರತಕ್ಕೆ ಆಗಮನ, ಸ್ವಾತಂತ್ರ್ಯ ಚಳುವಳಿ, ಕೊನೆಗೆ ಗುಂಡಿಗೆ ಬಲಿಯಾದ ಘಟನೆ ನೆನಪಿಸಿಕೊಳ್ಳಿ. ಸಾಧ್ಯವಾದರೆ ಅವರ ಆತ್ಮಕಥೆ ” ಸತ್ಯದೊಂದಿಗೆ ನನ್ನ ಪ್ರಯೋಗ ” ಓದಿ. ಉದ್ದೇಶಪೂರ್ವಕವಾಗಿ ಅವರನ್ನು ಪ್ರೀತಿಸಿ. ಅವರ ಆತ್ಮವನ್ನು ಸಹಜವಾಗಿ ಪ್ರವೇಶಿಸಿ. ಅವರ ನೆಲೆಯಲ್ಲಿ ನಿಂತು ಯೋಚಿಸಿ. ಆ ಪ್ರಬುದ್ಧತೆ ನಿಮಗಿದೆ. ಅವರು ಆಗಿನ ಮೀಸಲಾತಿಯನ್ನು ವಿರೋಧಿಸಲು ಇರುವ ಕಾರಣ, ವರ್ಣಾಶ್ರಮ ಧರ್ಮ ಸಮರ್ಥಿಸಿದ ರೀತಿ, ನಂತರ ಅದನ್ನು ವಿರೋಧಿಸಿ ಬದಲಾಗಲು ಕಾರಣ, ಅವರ ಸರಳತೆ, ಸತ್ಯ, ಅಹಿಂಸೆ, ಸಂಘಟನೆ, ಪಾರದರ್ಶಕತೆ ಬಗ್ಗೆ ಗೌರವದಿಂದ ಅವಲೋಕಿಸಿ.

ಸ್ವಾತಂತ್ರ್ಯ ಹೋರಾಟಕ್ಕೆ ಸಿಕ್ಕ ಜಯಕ್ಕೆ ಅವರೆಷ್ಟು ಕಾರಣ ಎಂದು ವಿಶಾಲ ಮನೋಭಾವದಿಂದ ವಿಮರ್ಶಿಸಿ. ಮಹಾತ್ಮನಾಗಿ ಅಲ್ಲದಿದ್ದರೂ ಸಾಮಾನ್ಯನಾಗಿ ಅವರ ಹೋರಾಟ ಎಷ್ಟು ಕಷ್ಟದ್ದಿರಬಹುದೆಂದು ನಿಮಗೆ ನಿಲುಕಿದಷ್ಟು ಗ್ರಹಿಸಿ ..

ಹಾಗೆಯೇ ಇತ್ತ ಕಡೆ ಗಾಂಧಿಯನ್ನು ಇಷ್ಟ ಪಡುವವರೆ ಕೆಲಹೊತ್ತು ಗಾಂಧಿಯನ್ನು ಮರೆತುಬಿಡಿ. ನೇರ ಅಂಬೇಡ್ಕರ್ ಹುಟ್ಟಿದ ಅಂಬೇವಾಡಿಗೆ ಮನಸ್ಸಿನಲ್ಲೇ ಪ್ರಯಾಣಿಸಿ. ಆಗಿನ ಜಾತಿ ವ್ಯವಸ್ಥೆಯಲ್ಲಿ ಮಹರ್ ಜನಾಂಗದ ಹೀನಾಯದ ಸ್ಥಿತಿ ಗಮನಿಸಿ. ಪ್ರಾಣಿಗಳಿಗಿಂತ ಹೀನಾಯವಾಗಿ ಕಾಣುತ್ತಿದ್ದ ಆಗಿನ ಕಾಲದ ಅಸ್ಪೃಶ್ಯರ ಬದುಕು ಗಮನಿಸಿ. ಆ ಸ್ಥಿತಿಯಿಂದಾಗಿ ಜಗತ್ತಿನ ಎಲ್ಲಾ ಧರ್ಮಗಳನ್ನು, ಗ್ರಂಥಗಳನ್ನು, ಸಂವಿಧಾನಗಳನ್ನು ಅರೆದು ಕುಡಿದು ಜೀರ್ಣಿಸಿಕೊಂಡ ಸಾಮಾನ್ಯನ ಜೀವನ ಕಲ್ಪಿಸಿಕೊಳ್ಳಿ.

ಆಗ ಅವರ ಅನುಭವಿಸಿದ ನೋವು ನಿಮಗಾಗಲಿ. ಅವರ ಕಾಲದ ಸಂದರ್ಭದಲ್ಲಿ ತನ್ನ ಜನಗಳಿಗಾಗಿ ಅವರ ಮಾಡಬಹುದಾದ ತ್ಯಾಗ, ಹೋರಾಟದ ಬಗ್ಗೆ ಅವರ ಆತ್ಮ ಪ್ರವೇಶಿಸಿ ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ. ಅವರನ್ನು ನಿಮ್ಮವರೆಂದೇ ಪ್ರೀತಿಸಿ.

ಈಗ ಇಬ್ಬರಿಂದಲೂ ಹೊರಬಂದು ನಿಮ್ಮ ಇಂದಿನ ನೆಲೆಯಲ್ಲಿ, ಸಂಕೀರ್ಣವಾದ ಸಾಮಾಜಿಕ ಮತ್ತು ವೈಯಕ್ತಿಕ ಬದುಕಿನ ಹಿನ್ನೆಲೆಯಲ್ಲಿ ವಿಮರ್ಶಿಸಿ. ಯಾರಿಗೆ ಯಾವ ವಿಷಯ ಪ್ರಮುಖವಾಗಿತ್ತು ಮತ್ತು ಅದನ್ನು ಸಾಧಿಸಲು ಅವರಿಬ್ಬರೂ ಏನು ಮಾಡಿದರೆಂದು.

ಗಾಂಧಿಗೆ ದೇಶದ ಸ್ವಾತಂತ್ರ್ಯವೇ ಮುಖ್ಯವಾಗಿತ್ತು. ಬ್ರಿಟಿಷ್ ರನ್ನು ತೊಲಗಿಸಿ ನಂತರ ನಮ್ಮೊಳಗಿನ ಸಮಸ್ಯೆ ಮುಖ್ಯವಾಗಿ ಅಸ್ಪೃಶ್ಯತೆ ಮತ್ತು ಮೀಸಲಾತಿಯನ್ನು ಪರಿಹರಿಸಿಕೊಳ್ಳೋಣ. ಈ ಜನ ಹರಿಜನ ನನ್ನವರೇ, ಅವರನ್ನು ಬೇರೆ ಮಾಡುವುದು ಬೇಡ ಎಂಬ ಅತ್ಯಂತ ಆದರ್ಶ ಆಶಯ ಹೊಂದಿದ್ದರು. ಅದಕ್ಕಾಗಿ ತಮ್ಮೆಲ್ಲಾ ಶಕ್ತಿ, ಹೋರಾಟ, ಸಂಘಟನೆ, ಶ್ರಮವನ್ನು ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟರು ಮತ್ತು ಅದೇ ಅವರ ಮುಖ್ಯ ಗುರಿಯಾಗಿತ್ತು.

ಆದರೆ ವಾಸ್ತವವಾದಿ, ಆದರ್ಶಕ್ಕಿಂತ ನ್ಯೆಜ ಭಾರತೀಯ ಸಂಸ್ಕೃತಿಯ ಅರಿವಿದ್ದ ಅಂಬೇಡ್ಕರ್ ಅವರಿಗೆ ಗಾಂಧಿಯ ಆದರ್ಶ ಅವರಿಗೆ ಮಾತ್ರ ಸೀಮಿತ. ಸಾಮಾನ್ಯ ಜನ ಅವರ ಆದರ್ಶದ ಹತ್ತಿರಕ್ಕೂ ಸುಳಿಯದ ಶತಶತಮಾನಗಳ ಕ್ರೂರ ಜಾತಿ ವ್ಯವಸ್ಥೆಯಲ್ಲಿ ಮಲಿನಗೊಂಡ ಮನಸ್ಥಿತಿಗಳು ಎಂದು ಸ್ಪಷ್ಟವಾಗಿ ತಿಳಿದಿತ್ತು. ಅದಕ್ಕಾಗಿ ಅಂಬೇಡ್ಕರ್ ಪ್ರಾಮುಖ್ಯತೆ ಶೋಷಿತರ ಸ್ವಾತಂತ್ರ್ಯವಾಗಿತ್ತು. ಅದಿಲ್ಲದೆ ದೇಶದ ಸ್ವಾತಂತ್ರ್ಯ ನಿಷ್ಪ್ರಯೋಜಕ ಮತ್ತು ಅಪಾಯಕಾರಿ ಎಂಬ ಅರಿವಿತ್ತು. ಬ್ರಿಟಿಷರಿಗಿಂತ ಇಲ್ಲಿನ ಮೂಲಭೂತವಾದಿಗಳೇ ಅತ್ಯಂತ ಕ್ರೂರಿಗಳು ಎಂದು ಮನವರಿಕೆಯಾಗಿತ್ತು.

ಆ ಕಾರಣಕ್ಕಾಗಿ ಅವರು ಗಾಂಧಿಯನ್ನು ಗೌರವಿಸಿದರೂ ಕೆಲ ವಿಷಯಗಳಲ್ಲಿ ಉಗ್ರವಾಗಿ ವಿರೋಧಿಸಿದರು. ಅದು ಸರಿಯೂ ಆಗಿತ್ತು. ಒಂದು ವೇಳೆ ಗಾಂಧಿ ಅಂಬೇಡ್ಕರ್ ಅವರನ್ನು ವೈಯಕ್ತಿಕವಾಗಿ ವಿರೋಧಿಸಿದ್ದರೆ ಆಗ ಅವರಿಗಿದ್ದ ಪ್ರಭಾವ ಉಪಯೋಗಿಸಿ ಅಂಬೇಡ್ಕರ್ ಅವರಿಗೆ ಸಿಕ್ಕ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷತೆ ಅಥವಾ ಇತರ ಪ್ರಮುಖ ಸ್ಥಾನ ತಪ್ಪಿಸಬಹುದಿತ್ತು. ನೆಹರು ಅವರ ಬೆಂಬಲ ಅವರಿಗೆ ಇದ್ದೇ ಇತ್ತು. ಬಹುಶಃ ಗಾಂಧಿಯವರ ಉದ್ದೇಶ ಅದಿರಲಾರದು.
.
ನಾವು ಈಗ ಈ ಕ್ಷಣದಲ್ಲಿ ನಿಂತು ಅವರ ಸರಿ ತಪ್ಪುಗಳನ್ನು ಫಲಿತಾಂಶಗಳ ಆಧಾರದ ಮೇಲೆ ವಿಮರ್ಶಿಸಿ ತೀರ್ಪು ನೀಡುವುದು ಸತ್ದದ ಒಂದು ಮುಖವಷ್ಟೇ ಆಗುತ್ತದೆ. ಇಬ್ಬರನ್ನೂ ಅವರು ಇದ್ದ ಹಾಗೆಯೇ ಸ್ವೀಕರಿಸಬೇಕು.

ಯಾರೂ ಪರಿಪೂರ್ಣರಲ್ಲ. ಇತಿಹಾಸದ ಅನೇಕ ನಿರ್ಧಾರಗಳು ಆ ಕಾಲಘಟ್ಟದಲ್ಲಿ ಸರಿ ಎನಿಸಿ ಕಾಲಾನಂತರದಲ್ಲಿ ತಪ್ಪು ಫಲಿತಾಂಶ ನೀಡಿರುವ ಅನೇಕ ಘಟನೆಗಳಿವೆ.

ಇಂದು ಅತ್ಯವಶ್ಯವಾಗಿರುವ, ಸಮಾನತೆಯ ಸಾಧನವಾಗಿರುವ ಕೆಲವು ಅಂಶಗಳು ಶತಮಾನಗಳ ನಂತರ ತಪ್ಪು ಎಂದು ಆಗಬಹುದು, ಭಾರತದ ವಿಭಜನೆಯ ಫಲಿತಾಂಶ ಕಾಲಕಾಲಕ್ಕೆ ಬದಲಾಗುತ್ತಿರಬಹುದು. ಇಂದಿನ ಹೀರೋ ನಾಳೆಯ ಖಳನಾಯಕನಾಗಬಹುದು. ಹೇಗೆ ಮನುವಾದ ಕೆಲಕಾಲ ಸಮಾಜವನ್ನು ಮುನ್ನಡೆಸಿ ಈಗ ಹೇಸಿಗೆ ಹುಟ್ಟಿಸುತ್ತಿದೆಯೋ, ದೇವರಿಗೆ ಸಮಾನರಂತಿದ್ದ ಪೂಜಾರಿಗಳು ಮುಲ್ಲಾಗಳು ಪಾದ್ರಿಗಳು ಈಗ ದಲ್ಲಾಳಿಗಳಂತೆಯೂ, ಜ್ಯೋತಿಷಿಗಳು ಬಪೂನ್ ಗಳಂತೆಯೂ, ಶೋಷಿತರು ಸ್ವಾಭಿಮಾನಿಗಳಂತೆಯೂ ಬಿಂಬಿತವಾಗುತ್ತಿಲ್ಲವೇ ಹಾಗೆ.

ಅದ್ದರಿಂದ ಇದು ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಶ್ರಮಿಸಿ, ವಿಶ್ವಕ್ಕೆ ಸರಳತೆ, ಅಹಿಂಸೆ, ಸತ್ಯ, ಪಾರದರ್ಶಕತೆ ನೀಡಿದ ಗಾಂಧಿ,
ಅದೇ ರೀತಿ ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದು ಸಮಾನತೆ, ಮಾನವೀಯತೆಯನ್ನು ವಿಶ್ವಕ್ಕೆ ಪರಿಚಯಿಸಿದ, ಒಂದು ಇಡೀ ಜನಾಂಗವನ್ನು ತಲೆಎತ್ತಿ ಬದುಕುವಂತೆ ಮಾಡಿದ ಅಂಬೇಡ್ಕರ್ ಅವರನ್ನು ಎದುರು ಬದುರು ನಿಲ್ಲಿಸದೆ ಸಮಾನಾಂತರವಾಗಿ ನಿಲ್ಲಿಸೋಣ. ಕೆಲವರು, ಅದರಲ್ಲೂ ಕೆಲವು ಆಕ್ರೋಶಗೊಂಡ ದಲಿತ ಮನಸುಗಳು ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸುವುದು ಮೂಲಭೂತವಾದದ ಇನ್ನೊಂದು ಮುಖವಾಗುತ್ತದೆ. ಗಾಂಧಿಯವರ ವಿಶಾಲ ಮನೋಭಾವ ಪ್ರಾಯೋಗಿಕ ಅಲ್ಲದಿರಬಹುದು (ಮೀಸಲಾತಿಗೆ ಸಂಬಂಧಿಸಿದಂತೆ) ಅದಕ್ಕಾಗಿ ಅವರ ಒಳ್ಳೆಯ ಗುಣಗಳನ್ನು ದ್ವೇಷಿಸುವುದು ಸರಿಯಲ್ಲ. ನನ್ನ ಪ್ರಕಾರ ಇಬ್ಬರೂ ಮಹಾನ್ ವ್ಯಕ್ತಿಗಳು ಮತ್ತು ತಮ್ಮ ಗುರಿ ಸಾಧನೆಗಾಗಿ ಹೋರಾಡಿದ ಹಠವಾದಿಗಳು.

ಇದು ಚರ್ಚೆಯ ಒಂದು ಸರಳ ನಿರೂಪಣೆ ಅಷ್ಟೇ. ಹೇಳಲು ಇನ್ನೂ ಬಹಳಷ್ಟಿದೆ. ಚರ್ಚೆಗಳಿಗೆ ಮಿತಿಯಿಲ್ಲ.
ಆದರೆ ಅನಿವಾರ್ಯವಾಗಿ ಇಂದಿನ ಪರಿಸ್ಥಿತಿಯನ್ನು ಗಮನಿಸಿ ಒಂದು ನಿರ್ಧಾರಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಘರ್ಷಣೆ ನಿರಂತರ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬದ ಶುಭಾಶಯಗಳೊಂದಿಗೆ……

# ವಿವೇಕಾನಂದ ಎಚ್‌ ಕೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

7 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

12 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

1 day ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

2 days ago