ಕನ್ನಡ ಭಾಷೆ ಸುಂದರವಾಗಿದೆ. ಕನ್ನಡ ಸಾಹಿತ್ಯ ಸಮೃದ್ಧವಾಗಿದೆ. ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ, ಕಲಿಕೆ ಜೊತೆ ಕಲೆಯಲ್ಲೂ ಅಸಾಧಾರಣ ಸಾಧನೆಯಾಗಿದ್ದು, ಭರತನಾಟ್ಯದಿಂದ ಹಿಡಿದು ಯಕ್ಷಗಾನ ಎಲ್ಲೆಡೆ ಜನಪ್ರಿಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಅವರು ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರ ಅನುಭವ ಮಂಟಪ ಭಾರತಕ್ಕೆ ದಾರಿದೀಪವಾಗಿದೆ ಹಾಗೂ ಅವರ ವಿಚಾರ ಪರಂಪರೆ ಅಮರವಾಗಿದೆ. ಬಸವಣ್ಣನವರ ವಚನಗಳ ಪುಸ್ತಕ ಬಿಡುಗಡೆ ಮಾಡಿದ್ದು ನನ್ನ ಭಾಗ್ಯ ಎಂದರು. ಒಂದು ಕಾಲದಲ್ಲಿ ಕರ್ನಾಟಕದ ಬಂಡವಾಳ ವಿದೇಶಕ್ಕೆ ಹೋಗುತ್ತಿತ್ತು. ಆದ್ರೀಗ ಕರ್ನಾಟಕ ಈಗ ತುಂಬಾ ಅಭಿವೃದ್ಧಿ ಹೊಂದಿದೆ. ಇದರಿಂದ ಅಧಿಕವಾಗಿ ಬಂಡವಾಳ ಹರಿದು ಬರುತ್ತಿದೆ. ಕರ್ನಾಟಕ ಸಂಸ್ಕೃತಿ, ತಂತ್ರಜ್ಞಾನದಲ್ಲಿ ಮುಂದಿದೆ. ವಿಕಾಸದ ಜೊತೆಗೆ ಪರಂಪರೆಯನ್ನು ಒಟ್ಟಿಗೆ ಕರೆದೊಯ್ಯುತ್ತಿದೆ ಎಂದು ಕರ್ನಾಟಕದ ಬಗ್ಗೆ ಹಾಡಿ ಹೊಗಳಿದರು.
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್, ಇಂಧನ ಇಲಾಖೆಯ ಸಚಿವ ಸುನೀಲ್ ಕುಮಾರ್, ಧರ್ಮಸ್ಥಳದ ಧರ್ಮಾಧಿಕಾರಿ, ಸಂಸದ ಡಾ.ವೀರೇಂದ್ರ ಹೆಗಡೆ, ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ, ನಂಜಾವಧೂತ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ, ಮೈಸೂರು ಅರಮನೆಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಭಾಗಿಯಾಗಿದ್ದು, ಕಾರ್ಯಕ್ರಮದಲ್ಲಿ 3 ಸಾವಿರಕ್ಕೂ ಹೆಚ್ಚು ಹೊರನಾಡು ಕನ್ನಡಿಗರು ಭಾಗಿಯಾಗಿದ್ದಾರೆ.
ದೆಹಲಿಯಲ್ಲೂ ಕನ್ನಡ ಕಂಪು ನನಗೆ ಕಾಣಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಹುಟ್ಟುವುದೇ ಒಂದು ಸೌಭಾಗ್ಯ. ಇತ್ತೀಚೆಗೆ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ದಾವಣಗೆರೆಯಲ್ಲಿ ನಡೆಯುವ ವಿಶ್ವಕನ್ನಡ ಸಮ್ಮೇಳನಕ್ಕೆ 7 ಕೋಟಿ ಕನ್ನಡಿಗರ ಪರವಾಗಿ ಮೋದಿಗೆ ಆಹ್ವಾನ ನೀಡುತ್ತೇನೆ ಎಂದರು.
ಇದೊಂದು ಅಭೂತಪೂರ್ವಾಗಿರುವ ಕಾರ್ಯಕ್ರಮ. ನಾಡಪ್ರಭು ಕೆಂಪೇಗೌಡರ ಅತಿ ಎತ್ತರದ ಪ್ರತಿಮೆ ಉದ್ಘಾಟನೆಯನ್ನು ಪ್ರಧಾನಿಯವರು ಮಾಡಿದ್ದರು. ಈ ನೆನಪು ಹಸಿರಾಗಿರುವಾಗಲೇ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಉದ್ಘಾಟಿಸುತ್ತಿರುವುದು ಸಂತೋಷವಾಗಿದೆ. ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಕೇಂದ್ರದ ಐದು ಟ್ರಿಲಿಯನ್ ಎಕಾನಮಿಗೆ ಒಂದು ಟ್ರಿಲಿಯನ್ ಎಕಾನಮಿ ನೀಡುವ ಜವಾಬ್ದಾರಿ ಕನ್ನಡಿಗರದ್ದಾಗಿದೆ ಎಂದರು.