ಅಂತರರಾಷ್ಟ್ರೀಯ ಮಟ್ಟದಲ್ಲಿ ಅಡಿಕೆ (Arecanut) ಕುರಿತು ನಡೆಯುತ್ತಿರುವ ಚರ್ಚೆಗಳು, ವರದಿಗಳು ಮತ್ತು ನಿಯಂತ್ರಣ ಕ್ರಮಗಳ ಶಿಫಾರಸುಗಳು ನಿಧಾನವಾಗಿ ಆದರೆ ನಿರಂತರವಾಗಿ ಮುಂದುವರಿಯುತ್ತಿವೆ. WHO ಹಾಗೂ ಸಂಬಂಧಿತ ಅಂತರರಾಷ್ಟ್ರೀಯ ಸಂಸ್ಥೆಗಳು ಆರೋಗ್ಯದ ಆಧಾರದ ಮೇಲೆ ವಿವಿಧ ಶಿಷ್ಟಾಚಾರಗಳನ್ನು ಪಾಲಿಸುತ್ತಾ ಕ್ರಮಬದ್ಧವಾಗಿ ನೀತಿಗಳನ್ನು ರೂಪಿಸುವತ್ತ ಹೆಜ್ಜೆ ಇಡುತ್ತಿವೆ.
ಆದರೆ, ಈ ಬೆಳವಣಿಗೆಗಳ ಮಧ್ಯೆ ಅಡಿಕೆ ಬೆಳೆಗಾರರ ಸಮುದಾಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ಆಶ್ಚರ್ಯಕರ ಮೌನ. ಸಾಮೂಹಿಕ ನಿರ್ಣಾಯಕ ಧ್ವನಿ ಕೇಳಿಬರುವುದಿಲ್ಲ. ಸಂಘಟಿತ ಪ್ರತಿಭಟನೆ ಕಾಣಿಸುವುದಿಲ್ಲ. ವಿಚಾರಾಧಾರಿತ ಪ್ರಚಾರ, ಅಂಕಿ-ಅಂಶಾಧಾರಿತ ಪ್ರತಿಕ್ರಿಯೆ – ಬಹುತೇಕ ಕಾಣುತ್ತಿಲ್ಲ.
ಅಡಿಕೆ ಬೆಳೆಗಾರರಲ್ಲಿ “ನಮಗೆ ಏನೂ ಆಗುವುದಿಲ್ಲ” ಎಂಬ ಭ್ರಮೆ ಮತ್ತು “ಇದು ಅಂತಾರಾಷ್ಟ್ರೀಯ ವಿಚಾರ; ನಮ್ಮ ಮಟ್ಟಕ್ಕೆ ಬರುವುದಿಲ್ಲ.” ಎಂಬ ಮಾನಸಿಕತೆ ಇದ್ದಂತಿದೆ. ಅಡಿಕೆ ಬೆಳೆಗಾರರ ಬಹುತೇಕರು WHO ಮಟ್ಟದ ಚರ್ಚೆಗಳನ್ನು ತಕ್ಷಣದ ಅಪಾಯವೆಂದು ಪರಿಗಣಿಸುತ್ತಿಲ್ಲ.ಆದರೆ ಜಾಗತಿಕ ನೀತಿಗಳು ನಿಧಾನವಾಗಿ ರಾಷ್ಟ್ರೀಯ ನೀತಿಗಳಾಗಿ, ನಂತರ ರಾಜ್ಯ ಮಟ್ಟದ ನಿಯಂತ್ರಣ ಕ್ರಮಗಳಾಗಿ ರೂಪಾಂತರಗೊಳ್ಳುತ್ತವೆ.ತಕ್ಷಣದ ಪರಿಣಾಮ ಕಾಣಿಸದಿರುವುದು, ಅಪಾಯವೇ ಇಲ್ಲವೆಂಬ ಭ್ರಮೆಗೆ ಕಾರಣವಾಗಿದೆ.
ಸಂಘಟಿತ ನಾಯಕತ್ವದ ಕೊರತೆ : ಅಡಿಕೆ ಬೆಳೆಗಾರರು ಭೌಗೋಳಿಕವಾಗಿ ಚದುರಿರುವ ಸಮುದಾಯ.ಅವರ ಹಿತಾಸಕ್ತಿಯನ್ನು ರಕ್ಷಿಸುವ ಏಕಮುಖ ರಾಷ್ಟ್ರೀಯ ವೇದಿಕೆ ಇಲ್ಲ. ಸಹಕಾರಿ ಸಂಘಗಳು ವ್ಯವಹಾರಕ್ಕೆ ಸೀಮಿತವಾಗಿದೆ. CAMPCO ಮಾರುಕಟ್ಟೆಯಲ್ಲಿ ಇನ್ನೊಬ್ಬ ದೊಡ್ಡ ಮಟ್ಟದ ವ್ಯಾಪಾರಿ ಎಂಬಂತಾಗಿದೆ.ರೈತ ಸಂಘಟನೆಗಳು ಬಹುಪಾಲು ಸ್ಥಳೀಯ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗಿದೆ. ಆರೋಗ್ಯನೀತಿ ಮಟ್ಟದ ಜಾಗತಿಕ ಚರ್ಚೆಗೆ ತಾಕತ್ತಾದ ಪ್ರತಿಕ್ರಿಯೆ ನೀಡುವ ತಜ್ಞ ಸಮಿತಿ ಅಥವಾ ಥಿಂಕ್ ಟ್ಯಾಂಕ್ ಇಲ್ಲ.
ಇಲ್ಲಿಯವರೆಗೆ ಕಾಣುತ್ತಿರುವ ಪ್ರತಿಕ್ರಿಯೆಗಳು “ಅಡಿಕೆ ನಮ್ಮ ಸಂಸ್ಕೃತಿ” ,“ಲಕ್ಷಾಂತರ ರೈತರ ಜೀವನೋಪಾಯ” “ಇದು ರಾಜಕೀಯ”ಇತ್ಯಾದಿ ಭಾವನಾತ್ಮಕ ಮಾತುಗಳು. ಆದರೆ WHO ಅಥವಾ IARC ಮಟ್ಟದಲ್ಲಿ ಪರಿಗಣಿಸುವುದು ವೈಜ್ಞಾನಿಕ ಅಧ್ಯಯನಗಳು , ದೀರ್ಘಕಾಲೀನ ಆರೋಗ್ಯ ಅಂಕಿ-ಅಂಶಗಳು , ಸಾರ್ವಜನಿಕ ಆರೋಗ್ಯ ನೀತಿ ಪರಿಣಾಮ. ಭಾವನೆಗಳಿಂದ ಜಾಗತಿಕ ನೀತಿಗಳನ್ನು ತಡೆಯಲು ಸಾಧ್ಯವಿಲ್ಲ.ದೃಢವಾದ ವೈಜ್ಞಾನಿಕ ಪ್ರತಿವಾದ, ಸಮಗ್ರ ಡೇಟಾ, ಸಂಶೋಧನಾ ಆಧಾರ ಅಗತ್ಯ.
ಇಂದಿನ ಹೆಚ್ಚಿನ ಚರ್ಚೆಗಳು ಫೇಸ್‌ಬುಕ್ ಪೋಸ್ಟ್‌ಗಳು , ವಾಟ್ಸ್‌ಆಪ್ ಫಾರ್ವರ್ಡ್‌ಗಳು , ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹರಟೆ ಇತ್ಯಾದಿಗಳಿಗೆ ಸೀಮಿತವಾದಂತಿದೆ. ಇವು “ಮನದಾಳದ ಕಳವಳ” ವ್ಯಕ್ತಪಡಿಸುತ್ತವೆ. ಆದರೆ ನೀತಿಯ ಮಟ್ಟದಲ್ಲಿ ಇದು ಪರಿಣಾಮಕಾರಿಯಾಗುವುದಿಲ್ಲ. ಸಂಘಟಿತ ಪ್ರತಿನಿಧಿ ಮಂಡಳಿ, ಸಂಸತ್ತಿನ ಚರ್ಚೆ, ಕೇಂದ್ರ ಆರೋಗ್ಯ ಮಂತ್ರಾಲಯದ ಬಳಿ ವೈಜ್ಞಾನಿಕ ಮೆಮೊರಾಂಡಂ ಸಲ್ಲಿಕೆ ಇಂತಹ ಗಂಭೀರ ಹೆಜ್ಜೆಗಳು ಕಾಣುತ್ತಿಲ್ಲ.
ರಾಜಕೀಯ ನಾಯಕರು ಹೆಚ್ಚಿನದಾಗಿ ಕಣ್ಣೊರೆಸುವ ಹೇಳಿಕೆಗಳು ,ಸಮಾಧಾನಕಾರಿ ಬೀಸು ಮಾತುಗಳು ,ಅಂಕಿ-ಅಂಶವಿಲ್ಲದ ಭರವಸೆಗಳು ಇತ್ಯಾದಿಗಳ ಮೂಲಕ ಕೇವಲ ತಾತ್ಕಾಲಿಕ ರಾಜಕೀಯ ಲಾಭ ಪಡೆದೊಕೊಳ್ಳುವ ಪ್ರತವೇ ಹೊರತು ದೀರ್ಘಕಾಲೀನ ನೀತಿ ಪ್ರಭಾವವನ್ನು ಅರಿಯುವ ಗಂಭೀರ ಪ್ರಯತ್ನ ಕಾಣುತ್ತಿಲ್ಲ.ಅಡಿಕೆ ಆರ್ಥಿಕತೆಯು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರಮುಖ ಆದಾಯ ಮೂಲ.ಬೆಲೆ ಕುಸಿತ, ರಫ್ತು ನಿರ್ಬಂಧ, ಬಳಕೆ ನಿಯಂತ್ರಣ ಇವುಗಳೆಲ್ಲ ಗ್ರಾಮೀಣ ಆರ್ಥಿಕತೆಯಲ್ಲಿ ಭೂಕಂಪದಂತೆ ಪರಿಣಾಮ ಬೀರುತ್ತವೆ.
ಆರ್ಥಿಕ ಪರಿಣಾಮದ ಅಲಕ್ಷ್ಯ : ಅಡಿಕೆ ಲಕ್ಷಾಂತರ ಕುಟುಂಬಗಳ ಜೀವನೋಪಾಯ , ಸಾವಿರಾರು ಕೋಟಿ ರೂ. ಮಾರುಕಟ್ಟೆ ವಹಿವಾಟು,ಗ್ರಾಮೀಣ ಸಾಲ ವ್ಯವಸ್ಥೆಯ ಪ್ರಮುಖ ಆಧಾರ. ಒಮ್ಮೆ ಬೇಡಿಕೆ ಕುಸಿದರೆ ಬೆಲೆ ಪತನ ,ಸಾಲ ತೀರಿಸಲಾಗದ ರೈತರು ,ಬ್ಯಾಂಕಿಂಗ್ ಮತ್ತು ಸಹಕಾರಿ ವ್ಯವಸ್ಥೆಯ ಮೇಲೆ ಒತ್ತಡ ,ಗ್ರಾಮೀಣ ಉದ್ಯೋಗ ಕುಸಿತ ಇತ್ಯಾದಿ ತೊಂದರೆಗಳಾಗಬಹುದು. ಈ ಆರ್ಥಿಕ ಸರಪಳಿ ಪರಿಣಾಮವನ್ನು ಗಂಭೀರವಾಗಿ ಅಧ್ಯಯನ ಮಾಡಿರುವ ವರದಿ ಸಾರ್ವಜನಿಕವಾಗಿ ಕಾಣಿಸುತ್ತಿಲ್ಲ.
ಏನು ಮಾಡಬೇಕು? : ಈಗಲಾದರೂ ಎಚ್ಚೆತ್ತು ಕೆಳಗಿನ ಕೆಲಸಗಳನ್ನು ಆದ್ಯತೆಯ ಮೇಲೆ ಮಾಡಬೇಕಾಗಿದೆ.
- ರೈತ ಸಂಘಗಳು, CAMPCO, ಅಂತಾರಾಷ್ಟ್ರೀಯ ಅಂಗೀಕೃತ ಸಂಸ್ಥೆಗಳು ಸೇರಿ ಸ್ವತಂತ್ರ ಸಂಶೋಧನಾ ವರದಿ ತಯಾರು ಮಾಡಬೇಕು.ಇದಕ್ಕಾಗಿ ವೈಜ್ಞಾನಿಕ ಅಧ್ಯಯನ ಸಮಿತಿ ರಚನೆ ಮಾಡಬೇಕು.
- ರಾಷ್ಟ್ರೀಯ ಮಟ್ಟದ ಸಮನ್ವಯ ವೇದಿಕೆ ಯನ್ನು ರಾಜ್ಯಗಳ ಅಡಿಕೆ ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ರೂಪಿಸಿ ಏಕಧ್ವನಿಯ ಹೋರಾಟ ಆಯೋಜಿಸಬೇಕು.
- ಡೇಟಾ ಆಧಾರಿತ ಮೆಮೊರಾಂಡಂ WHO ಮತ್ತು ಕೇಂದ್ರ ಸರ್ಕಾರಕ್ಕೆ ಸುವ್ಯವಸ್ಥಿತ ದಾಖಲೆ ರೂಪದಲ್ಲಿ ಸಲ್ಲಿಸಬೇಕು.
- ಆರ್ಥಿಕ ಪರಿಣಾಮ ತಜ್ಞರಿಂದ ಅಧ್ಯಯನ ಮಾಡಿಸಿ ವರದಿ ಸಲ್ಲಿಸಬೇಕು.
- ರಾಜಕೀಯ ಒತ್ತಡ ನಿರ್ಮಾಣ ಮಾಡಿ “ಅಡಿಕೆ ನಿಯಂತ್ರಣದ ಗ್ರಾಮೀಣ ಆರ್ಥಿಕ ಪರಿಣಾಮ” ಎಂಬ ಶ್ವೇತಪತ್ರ. ಹೊರಡಿಸುವಂತೆ ಮಾಡಬೇಕು.
- ಸಂಸದರು, ಶಾಸಕರು ಸಂಸತ್ ಮಟ್ಟದ ಪ್ರಶ್ನೆ, ಚರ್ಚೆ ಯಾ ಮುಖಾಂತರ ಇದನ್ನು ಒಂದು ರಾಷ್ಟ್ರೀಯ ಪ್ರಶ್ನೆಯಾಗಿ ಮಾಡಿ ಪರಿಹಾರ ಕಂಡುಕೊಳ್ಳಬೇಕು.
ಈಗಲೂ ಎಚ್ಚರಗೊಳ್ಳದಿದ್ದರೆ .,ನೀತಿಗಳು ನಿಧಾನವಾಗಿ ಬರುತ್ತವೆ; ಆದರೆ ಪರಿಣಾಮ ವೇಗವಾಗಿ ಬೀರುತ್ತವೆ ಎಂದು ಇತಿಹಾಸವು ಹೇಳುತ್ತದೆ . ಇಂದು “ಅಲಕ್ಷ್ಯ” ಎಂದು ಕಾಣುವುದು ನಾಳೆ “ಅಪರಾಧದ ನಿರ್ಲಕ್ಷ್ಯ”ವಾಗಿ ರೂಪಾಂತರಗೊಳ್ಳಬಹುದು.
ಆದ್ದರಿಂದ ಅಡಿಕೆ ಬೆಳೆಗಾರರ ಭವಿಷ್ಯ ಕೇವಲ ಮಾರುಕಟ್ಟೆ ಬೆಲೆಯ ಮೇಲೆ ಅವಲಂಬಿತವಲ್ಲ; ಅದು ಜಾಗತಿಕ ಆರೋಗ್ಯ-ನೀತಿ ಚರ್ಚೆಗಳ ಮೇಲೂ ಅವಲಂಬಿತವಾಗಿದೆ. ಸಾಮೂಹಿಕ, ವೈಜ್ಞಾನಿಕ, ಸಂಘಟಿತ ಮತ್ತು ದೃಢವಾದ ಧ್ವನಿ ಇದು ಈಗಿನ ಅವಶ್ಯಕತೆ.ಇಲ್ಲದಿದ್ದರೆ ಅಡಿಕೆ ಬೆಳೆಗಾರರ ಭವಿಷ್ಯ ನಿಜವಾಗಿಯೂ ಅನಿಶ್ಚಿತತೆಯ ನೆರಳಲ್ಲಿ ಉಳಿಯುವ ಅಪಾಯವಿದೆ.
Despite increasing global discussions and policy considerations on areca nut by WHO and international agencies, areca farmers remain largely silent and unorganized. Without scientific research, coordinated leadership, and policy engagement, future regulations could severely impact rural livelihoods. Immediate collective, data-driven, and strategic action is essential to protect the economic future of areca farmers.




