Advertisement
The Rural Mirror ಫಾಲೋಅಪ್

ಅಡಿಕೆ ಒಡೆದು ಉದುರುತ್ತಿದೆಯೇ..? ಕಾರಣ ಕೇವಲ ಬೋರಾನ್ ಕೊರತೆ ಅಷ್ಟೇ ಅಲ್ಲ- ಕೀಟವೂ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು

Share

ಕರಾವಳಿ ಮತ್ತು ಮಲೆನಾಡು ಭಾಗದ ಅಡಿಕೆ ತೋಟಗಳಲ್ಲಿ ಇತ್ತೀಚೆಗೆ ಎಳೆಕಾಯಿ ಮಾತ್ರವಲ್ಲದೆ, ಬಲಿಯುವ ಹಂತದಲ್ಲಿರುವ ದೊಡ್ಡ ಗಾತ್ರದ ಅಡಿಕೆಗಳೂ ಉದ್ದವಾಗಿ ಒಡೆದು ನೆಲಕ್ಕೆ ಬೀಳುತ್ತಿರುವ ಬಗ್ಗೆ ರೈತರಿಂದ ವ್ಯಾಪಕ ಮಾಹಿತಿಗಳು ಬಂದಿದ್ದವು. ಈ ಕುರಿತು ದಿ ರೂರಲ್ ಮಿರರ್.ಕಾಂ  ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ  ಸಿಪಿಸಿಆರ್‌ಐ ವಿಜ್ಞಾನಿ ಡಾ. ಭವಿಷ್ಯ ಹಾಗೂ ವಿಜ್ಞಾನಿಗಳ ತಂಡ ಈ ಸಮಸ್ಯೆಯ ಇನ್ನೊಂದು ಪ್ರಮುಖ ಕಾರಣದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ವಿಜ್ಞಾನಿ ಡಾ. ಭವಿಷ್ಯ ಅವರು ವ್ಯಾಟ್ಸಪ್‌ ಚಾನೆಲ್‌ ಮೂಲಕ ಕೃಷಿಕರಿಗೆ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಆಗಸ್ಟ್ ತಿಂಗಳ ವೇಳೆಗೆ ಬಲಿಯುವ ಹಂತದಲ್ಲಿರುವ ಅಡಿಕೆಗಳು ಬಿದ್ದು ಒಡೆಯುವುದಕ್ಕೆ ಬೋರಾನ್ ಹಾಗೂ ಪೊಟ್ಯಾಸಿಯಂ ಕೊರತೆ ಪ್ರಮುಖ ಕಾರಣವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಗೊನೆಗಳಿಗೆ ಬೋರಾನ್ ಸಿಂಪಡಣೆ ಹಾಗೂ ಪೊಟ್ಯಾಸಿಯಂ ಗೊಬ್ಬರದ ಸಮರ್ಪಕ ನಿರ್ವಹಣೆಯನ್ನು ಶಿಫಾರಸು ಮಾಡಲಾಗುತ್ತದೆ. ಆದರೆ ಮಳೆಗಾಲದ ಆರಂಭದಲ್ಲೇ ದೊಡ್ಡ ಗಾತ್ರದ ಅಡಿಕೆಗಳು ಒಡೆದು ಬೀಳುತ್ತಿರುವುದು ಸ್ವಲ್ಪ ವಿಭಿನ್ನ ಲಕ್ಷಣವಾಗಿದೆ.

ಮೈಟ್ ಕೀಟದ ಪಾತ್ರವೇನು? : ಡಾ. ಭವಿಷ್ಯ ಅವರ ಪ್ರಕಾರ, ಬೇಸಿಗೆಯಲ್ಲಿ ಅಡಿಕೆ ಎಲೆಗಳಿಗೆ ಬಾಧಿಸುವ ಮೈಟ್ ಕೀಟಗಳಲ್ಲೊಂದು “ಪೆರಿಯಾಂತ್ ಮೈಟ್” (Perianth Mite) ಅಡಿಕೆ ಗೊನೆಗಳಿಗೂ ಹಾನಿ ಉಂಟುಮಾಡುತ್ತದೆ.

ಈ ಕೀಟವು ಸಣ್ಣ ಅಡಿಕೆಯ ತೊಟ್ಟಿನ ಒಳಭಾಗಕ್ಕೆ ಸೇರಿಕೊಂಡು ಅಡಿಕೆಯ ಸಿಪ್ಪೆಯಿಂದ ರಸ ಹೀರುತ್ತದೆ. ಅಡಿಕೆಯ ಬೆಳವಣಿಗೆಯಲ್ಲಿ ತೊಟ್ಟಿನ ಭಾಗವು ಅತ್ಯಂತ ಸಕ್ರಿಯವಾಗಿರುವುದರಿಂದ ಅಲ್ಲಿ ಉಂಟಾಗುವ ಹಾನಿ ಬೆಳವಣಿಗೆಯ ಅಸಮತೋಲನಕ್ಕೆ ಕಾರಣವಾಗುತ್ತದೆ.

ಇದರ ಪರಿಣಾಮವಾಗಿ ಅಡಿಕೆಯ ಕೆಳಭಾಗ ಮತ್ತು ಮಧ್ಯಭಾಗ ಮಾತ್ರ ಬೆಳೆಯುತ್ತವೆ. ಮೇಲ್ಭಾಗದ ಬೆಳವಣಿಗೆ ಕುಂಠಿತಗೊಂಡು, ಅಡಿಕೆಯ ಕೆಳಭಾಗ ಉದ್ದವಾಗಿ ಒಡೆದು ನಂತರ ನೆಲಕ್ಕೆ ಬೀಳುತ್ತದೆ. ಕೆಲವೊಮ್ಮೆ ತೊಟ್ಟಿನ ಭಾಗದಿಂದ ಕೆಳವರೆಗೂ ಬಿರುಕು ಕಾಣಿಸಿಕೊಳ್ಳಬಹುದು.

ಮೈಟ್ ಬಾಧೆ ಗುರುತಿಸುವುದು ಹೇಗೆ? : ಒಡೆದು ಬಿದ್ದ ಅಡಿಕೆಯ ತೊಟ್ಟನ್ನು ತೆಗೆದು ಪರಿಶೀಲಿಸಿದರೆ ಮೈಟ್ ಬಾಧೆಯನ್ನು ಗುರುತಿಸಬಹುದು.

  • ಸಾಮಾನ್ಯ ಅಡಿಕೆಗೆ ಹೋಲಿಸಿದರೆ ತೊಟ್ಟು ಹೆಚ್ಚು ಗಟ್ಟಿಯಾಗಿರುತ್ತದೆ.
  • ತೊಟ್ಟನ್ನು ತೆಗೆಯಲು ಕಷ್ಟವಾಗುತ್ತದೆ.
  • ತೊಟ್ಟು ಇದ್ದ ಭಾಗದಲ್ಲಿ ಕಪ್ಪು ಬಣ್ಣದ ಗೆರೆಗಳು ಕಂಡುಬರುತ್ತವೆ.
  • ಅಡಿಕೆಯ ಆಕಾರದಲ್ಲಿ ಸ್ವಲ್ಪ ವಿರೂಪತೆ ಕಂಡುಬರಬಹುದು.
  • ತೊಟ್ಟಿನ ಒಳಭಾಗದಲ್ಲಿ ಅರಿಶಿನ ಬಣ್ಣದ ಅತಿ ಸೂಕ್ಷ್ಮ ಮೈಟ್ ಕೀಟಗಳು ಕಾಣಿಸಿಕೊಳ್ಳಬಹುದು.

ಮಳೆ ಹೆಚ್ಚಾದಂತೆ ಮತ್ತು ತೇವಾಂಶ ಅನುಕೂಲಕರವಾದಂತೆ ಈ ಕೀಟಗಳ ಸಂಖ್ಯೆಯು ಸಹಜವಾಗಿಯೇ ಕಡಿಮೆಯಾಗುತ್ತದೆ.

ಈಗ ಔಷಧಿ ಸಿಂಪಡಣೆ ಬೇಕೇ? :ಜೂನ್ ತಿಂಗಳಲ್ಲಿ ಒಡೆದು ಬೀಳುತ್ತಿರುವ ಅಡಿಕೆಗಳನ್ನು ನೋಡಿ ಈಗ ಔಷಧಿ ಸಿಂಪಡಣೆ ಮಾಡಿದರೆ ಹೆಚ್ಚಿನ ಪ್ರಯೋಜನ ಇರುವುದಿಲ್ಲ ಎಂದು ಡಾ. ಭವಿಷ್ಯ ಸ್ಪಷ್ಟಪಡಿಸಿದ್ದಾರೆ. ಏಕೆಂದರೆ ಮೈಟ್ ಹಾವಳಿ ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಲ್ಲಿ ಹೆಚ್ಚಾಗಿರುತ್ತದೆ. ಆದರೆ ಆ ಸಮಯದಲ್ಲಿ ಬಾಧೆ ಎಷ್ಟಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಜೂನ್ ವೇಳೆಗೆ ಅದರ ಪರಿಣಾಮ ಮಾತ್ರ ಕಾಣಿಸಿಕೊಳ್ಳುತ್ತದೆ.

ಹೀಗಾಗಿ ಮುನ್ನೆಚ್ಚರಿಕೆಯಾಗಿ ಕೀಟನಾಶಕ ಸಿಂಪಡಣೆ ಮಾಡುವ ಅಗತ್ಯ ಸಾಮಾನ್ಯವಾಗಿ ಇರುವುದಿಲ್ಲ. ಅಲ್ಲದೆ ಈ ಕೀಟದಿಂದಾಗುವ ನಷ್ಟ ಹೆಚ್ಚಾಗಿ ಶೇಕಡಾ 1 ಕ್ಕಿಂತ ಕಡಿಮೆ ಪ್ರಮಾಣದಲ್ಲೇ ಇರುತ್ತದೆ ಎಂದು ಅವರು ಹೇಳಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ರೈತರು ಏನು ಮಾಡಬೇಕು? : ವಿಜ್ಞಾನಿಗಳ ಸಲಹೆ ಪ್ರಕಾರ,

  • ಬೇಸಿಗೆಯಲ್ಲಿ ಸಮರ್ಪಕ ನೀರಾವರಿ ನಿರ್ವಹಣೆ ಮಾಡಬೇಕು.
  • ಸಾವಯವ ಗೊಬ್ಬರ ಬಳಕೆಗೆ ಆದ್ಯತೆ ನೀಡಬೇಕು.
  • ಪೊಟ್ಯಾಸಿಯಂ, ಕ್ಯಾಲ್ಸಿಯಂ ಮತ್ತು ಬೋರಾನ್ ಪೋಷಕಾಂಶಗಳ ನಿರ್ವಹಣೆಗೆ ಗಮನ ಹರಿಸಬೇಕು.
  • ಅನಿವಾರ್ಯ ಪರಿಸ್ಥಿತಿಯನ್ನು ಹೊರತುಪಡಿಸಿ ಕೀಟನಾಶಕಗಳ ಬಳಕೆ ತಪ್ಪಿಸಬೇಕು.

ಕೀಟನಾಶಕಗಳು ತ್ವರಿತ ಪರಿಣಾಮ ನೀಡಿದರೂ, ಕೃಷಿ ಕಾರ್ಮಿಕರ ಆರೋಗ್ಯ ಹಾಗೂ ಅಡಿಕೆ ತೋಟದ ಪರಿಸರದಲ್ಲಿರುವ ಪರೋಪಕಾರಿ ಕೀಟಗಳಿಗೆ ಹಾನಿಕಾರಕವಾಗಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಅಡಿಕೆ ಒಡೆದು ಬೀಳುವ ಪ್ರಕರಣಗಳನ್ನು ಕಂಡು ರೈತರು ಚುಕ್ಕೆ ರೋಗ, ಕೊಳೆರೋಗ ಅಥವಾ ಬೋರಾನ್ ಕೊರತೆಯತ್ತ ಮಾತ್ರ ಗಮನ ಹರಿಸುತ್ತಿದ್ದರು. ಆದರೆ ಸಿಪಿಸಿಆರ್‌ಐ ವಿಜ್ಞಾನಿಯ ಈ ಮಾಹಿತಿ ಸಮಸ್ಯೆಯ ಹಿಂದೆ ಮೈಟ್ ಕೀಟದ ಪಾತ್ರವೂ ಇರಬಹುದೆಂಬ ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ಯಾವುದೇ ಔಷಧಿ ಸಿಂಪಡಣೆಗೆ ಮುಂದಾಗುವ ಮುನ್ನ ಬಿದ್ದ ಅಡಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಿಜವಾದ ಕಾರಣವನ್ನು ಗುರುತಿಸುವುದು ಅತ್ಯಗತ್ಯವಾಗಿದೆ.

CPCRI scientist Dr. Bhavishya has clarified that the recent splitting and premature fall of mature arecanuts may not always be due to boron deficiency or diseases. Perianth mite infestation on developing nuts can also cause abnormal growth, cracking and fruit drop. Experts advise farmers to focus on irrigation, boron, calcium and potassium management rather than unnecessary pesticide sprays.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

3 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

3 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

1 day ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago