ಗ್ರಾಮೀಣ ಪರಿಸರದಲ್ಲಿ ಕೃಷಿ ಜ್ಞಾನಾನುಭವದ ಜೀವಂತ ಸಾಕ್ಷಿ ಬದನಾಜೆ ಶಂಕರ ಭಟ್

September 18, 2024
9:11 PM
ಎಂಭತ್ತು ವರ್ಷ ಕಳೆದು ಮುಂದಡಿ ಇಟ್ಟಿರುವ ಬದನಾಜೆ ಶಂಕರ ಭಟ್ಟರು ಕಳೆದ ನಲುವತ್ತು ವರ್ಷಗಳಿಂದ ಅಡಿಕೆಯ 'ಬಹುಪಯೋಗ ಯಜ್ಞ' ಮಾಡುತ್ತಿದ್ದಾರೆ. ಈಗ ವಯೋಸಹಜವಾಗಿ ಯಾಗಕ್ಕೆ ಆಹುತಿಗಳನ್ನು ಕೊಡುವುದು ನಿಧಾನವಾಗಿರಬಹುದು, ಆದರೆ ಯಾಗವಂತೂ ಮುಂದುವರಿದಿದೆ. ಅವರ ಸಂಶೋಧನೆಯ "Hypothesis" ಗಳು ರೂಪುಗೊಳ್ಳುತ್ತಲೇ ಇವೆ.
ತನ್ನ ನೆಲವನ್ನೇ ಪ್ರಯೋಗಾಲಯವನ್ನಾಗಿ  ಪರಿಭಾವಿಸಿ ಅದರ ಗರ್ಭದಲ್ಲಿ ಜನ್ಮ ತಾಳುವ ಪ್ರತಿಯೊಂದು  ಸಸ್ಯದ ಮಹತ್ವವನ್ನು  ಶೋಧಿಸಿ ಅದೆಲ್ಲವೂ ಜೀವನಕ್ಕೆ ಹೇಗೆ ಉಪಯುಕ್ತ ಎಂಬುದನ್ನು ತೋರಿಸಿ ಕೊಟ್ಟ ನೆಲವಿಜ್ಞಾನಿ ಶ್ರೀ ಬದನಾಜೆ ಶಂಕರ ಭಟ್ಟರದು ಒಂದು ಋಷಿ ಸದೃಶವಾದ ವ್ಯಕ್ತಿತ್ವ. ಹಣ ಸಂಪಾದಿಸುವ ಜೀವನೋಪಾಯದ ದಾರಿಗಳತ್ತ ದಿಕ್ಕು ತೋರಿಸುತ್ತಿದ್ದ ಕೈಮರಗಳೆಷ್ಟಿದ್ದರೂ ಅವರು ಆಯ್ದುಕೊಂಡದ್ದು ಪರಂಪರಾಗತವಾಗಿ ಬದುಕನ್ನು ರೂಪಿಸಿಕೊಟ್ಟ ಕೃಷಿಯನ್ನು. ಅದರಲ್ಲೂ ಒಂದೇ ಕೃಷಿಯನ್ನಲ್ಲ, ಅರ್ಥಾತ್ ಅಡಿಕೆಯನ್ನಷ್ಟೇ  ಅಲ್ಲ, ಅದರ ಜೊತೆಗೆ ಇತರ ನೈಸರ್ಗಿಕವಾಗಿ ಬೆಳೆಯಬಲ್ಲ ಗಿಡಗಳನ್ನು ಬೆಳೆಸಿದರು. ಇಂತಹ ಪ್ರಯತ್ನಕ್ಕೆ ಅವರ ತಂದೆಯವರಿಂದ ಬಂದ ಪ್ರೇರಣೆಯೂ ಪೋಷಣೆಯೂ ಕಾರಣವೆಂಬುದು ಅವರ ಮಾತುಗಳಿಂದ ಧ್ವನಿತವಾಗುತ್ತದೆ. ಅಂತೂ ಮನೆಯ ಹಿರಿಯ ಮಗನಾಗಿ ತನ್ನ ಹೊಣೆಯರಿತು ಜೀವನದ ಏರಿಳಿತಗಳ ಹಾದಿಯಲ್ಲಿ ಸ್ವಪ್ರಯತ್ನದ ಯಶಸ್ಸನ್ನು ಕಂಡ ಅವರನ್ನು “ಕೃಷಿ ಋಷಿ” ಎಂದರೆ ನಿಜಕ್ಕೂ ಗೌರವ ಕೊಟ್ಟಂತಾಗುತ್ತದೆ. ನಗರಗಳ ವಿಜ್ಞಾನ ಕೇಂದ್ರಗಳಲ್ಲಿ ಅನುದಾನ ಪಡೆದು ಮಾಡುವ ಸಂಶೋಧನೆಗಳಿಗೂ ಸರಿಮಿಗಿಲೆನಿಸುವ ಸಂಶೋಧಕ-ಕೃಷಿಕ ಶ್ರೀ ಬದನಾಜೆಯವರ ಜೀವನ ಚಿತ್ರಣವನ್ನು ತಮ್ಮ ‘ಕರ್ನಾಟಕ ಕೃಷಿ ಕಥನ ಮಾಲಿಕೆ’ಯ ಆರನೇ ಪುಷ್ಪವಾಗಿ ಲೇಖಕ  ನರೇಂದ್ರ ರೈ ದೇರ್ಲರವರು ನೀಡಿದ್ದಾರೆ. ಇದೊಂದು ಸಂಗ್ರಹಯೋಗ್ಯ ಆಕರಗ್ರಂಥವಾಗಿ ಕೃಷಿಕರ ಮನೆಗಳಲ್ಲಿಯೂ ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೂ ಶೋಭೆ  ನೀಡುವ ಕೃತಿ. ಬದನಾಜೆಯವರು ನೆಲದ ಸತ್ವವನ್ನು ಬಗೆದು ತೋರಿದರು. ದೇರ್ಲರು ಬದನಾಜೆಯವರ ಸಾಧನೆಯ ಬದುಕಿಗೇ  ಕನ್ನಡಿ ಹಿಡಿದರು. ಇಬ್ಬರದ್ದೂ ಸ್ತುತ್ಯರ್ಹವಾದ ಕಾರ್ಯವೇ.
ಬದನಾಜೆ ಶಂಕರ ಭಟ್
 ಪ್ರಸ್ತುತ ಎಂಭತ್ತು ವರ್ಷ ಕಳೆದು ಮುಂದಡಿ ಇಟ್ಟಿರುವ ಬದನಾಜೆ ಶಂಕರ ಭಟ್ಟರು ಕಳೆದ ನಲುವತ್ತು ವರ್ಷಗಳಿಂದ ಅಡಿಕೆಯ ‘ಬಹುಪಯೋಗ ಯಜ್ಞ’ ಮಾಡುತ್ತಿದ್ದಾರೆ. ಈಗ ವಯೋಸಹಜವಾಗಿ ಯಾಗಕ್ಕೆ ಆಹುತಿಗಳನ್ನು ಕೊಡುವುದು ನಿಧಾನವಾಗಿರಬಹುದು, ಆದರೆ ಯಾಗವಂತೂ ಮುಂದುವರಿದಿದೆ. ಅವರ ಸಂಶೋಧನೆಯ “Hypothesis” ಗಳು ರೂಪುಗೊಳ್ಳುತ್ತಲೇ ಇವೆ. ಇವನ್ನೆಲ್ಲ ಯಾಕೆ ಮಾಡಬೇಕು? ದೊಡ್ಡ ದೊಡ್ಡ ಅಡಿಕೆ ತೋಟಗಳನ್ನು ಮಾಡಿ ಗುಡ್ಡಗಳ ಮೇಲೂ ಅಡಿಕೆ ಗಿಡ ನೆಟ್ಟು ನೀರು ಸಿಂಪಡಿಸಿ ಬೆಳೆದ ಅಡಿಕೆಯನ್ನು  ಲಾಭದಾಯಕವಾಗಿ ಮಾರುವಲ್ಲಿಗೆ ತಮ್ಮ ಕೃಷ್ಯುದ್ಯಮ  ಸಾರ್ಥಕವಾಯಿತೆಂದು ತಿಳಿಯುವ ಅನೇಕ ಕೃಷಿಕರಿದ್ದಾರೆ. ಅಡಿಕೆಗೆ ಬೆಲೆ ಕಡಿಮೆಯಾದಾಗ ಅವರಿಗೆ ಆತಂಕವಾಗುವುದು ಬಿಟ್ಟರೆ ಅದಕ್ಕೆ ಏನು ಪರ್ಯಾಯ ಮಾರ್ಗವೆಂದು ಹುಡುಕುವವರಿಲ್ಲ. ಆದರೆ ಬದನಾಜೆಯವರು ಕೃಷಿಯನ್ನು ಕೇವಲ ಲಾಭದ ದೃಷ್ಟಿಯಿಂದಷ್ಟೇ  ನೋಡದೆ ಅಡಿಕೆಯನ್ನು ಜಗಿದು ನುಂಗುವ ಅಥವಾ ಉಗುಳುವುದರಿಂದಾಚೆಗೆ ಏನು ಮಾಡಬಹುದೆಂಬುದರತ್ತ ಚಿತ್ತ ಹರಿಸಿದರು. ಅಲ್ಲದೆ ತಮ್ಮ ತಂದೆ ತಾಯಿಯಿಂದ ಬಂದ ಆಯುರ್ವೇದ ಮತ್ತು ನಾಟಿ ವೈದ್ಯದ ಜ್ಞಾನದಿಂದಾಗಿ ಗಿಡಗಳ ಮೂಲಿಕಾ ಸತ್ವದ ಪರಿಚಯವಿತ್ತು. ಎಂತೆಂಥದೋ ಸಸ್ಯಗಳು ಮನುಷ್ಯನ ಆರೋಗ್ಯಕ್ಕೆ ಔಷಧಗಳಾಗಬಹುದಾದರೆ ಅಡಿಕೆಯಲ್ಲಿಯೂ ಅಂತಹ ಸತ್ವ ಇರಬಹುದಲ್ವಾ? ಅದನ್ನೇ ಶೋಧಿಸಿ ಅಡಿಕೆಯು ಜಗಿದು ಉಗುಳುವುದಕ್ಕಿಂತ ಹೆಚ್ಚಿನ ಉಪಯುಕ್ತತೆ ಹೊಂದಿರುವುದನ್ನು ಏಕೆ ಪ್ರಚುರ ಪಡಿಸಬಾರದು?  ಇಂತಹ ಅವರ ಯೋಚನೆಯನ್ನು ಕಾರ್ಯಗತ ಗೊಳಿಸಲು ಬೇಕಾದ ಆರ್ಥಿಕ ತ್ರಾಣ ಅವರಲ್ಲೇ ಇತ್ತು. ಪರಂಪರಾಗತವಾದ ಜ್ಞಾನದ ಕಣಜವೂ ಇತ್ತು. ಇದಲ್ಲದೆ ಅಂದಿನ ಆಯುರ್ವೇದ ತಜ್ಞರ ಹಾಗೂ ವೈದ್ಯಕೀಯ ಕ್ಷೇತ್ರದ ದಿಗ್ಗಜರ ಸಂಪರ್ಕ ಜಾಲವೂ ಅವರಿಗೆ ಲಭಿಸಿತ್ತು. ಹೀಗಾಗಿ ಬದನಾಜೆಯವರು ತಮ್ಮ ಕುಟುಂಬ ಪೋಷಣೆಯಲ್ಲಿ ನ್ಯೂನತೆಯನ್ನು ಕಾಣಿಸದೆ ತಮ್ಮಂದಿರ ಶಿಕ್ಷಣ ಮತ್ತು ತಂಗಿಯಂದಿರ ವಿವಾಹ  ಮುಂತಾದ  ಹೊಣೆಗಳನ್ನು ನಿರ್ವಹಿಸುತ್ತಲೇ ಸಂಶೋಧನೆಯನ್ನು ಮಾಡಿದರು. ಅಡಿಕೆಗೆ ಬರುವ ರೋಗಗಳ ನಿವಾರಣೆಗೆ ತಮ್ಮದೇ ಪರಿಹಾರಗಳನ್ನು ನೀಡಿದ ಅವರು ಅಡಿಕೆಯೂ ಹೇಗೆ  ಬಹುಪಯೋಗಿ ಕೃಷಿ ಉತ್ಪನ್ನ ಎಂಬುದನ್ನು ಜಗತ್ತಿಗೇ ತೋರಿದರು.  ಅವರ ಈ ಸಾಧನೆಯ ಹಿಂದೆ ಅವರ ಪತ್ನಿ ಸುಮತಿ ಅಕ್ಕನವರ ನಿರಂತರ ಸಹಕಾರದ ಲಾಭವು ಶಂಕರ ಭಟ್ಟರಿಗೆ ಸಿಕ್ಕಿದೆ.
ಬದನಾಜೆಯವರ ದೃಷ್ಟಿಯಲ್ಲಿ ಆರ್ಥಿಕ ಲಾಭವಷ್ಟೇ ಮುಖ್ಯವಲ್ಲ, ಪರಿಸರದ ಸ್ಥಿರತೆಯೂ ಮುಖ್ಯ. ನಮ್ಮ ಜಾಗದಲ್ಲಿ ಬೇಸಗೆಯಲ್ಲಿ ಕಾಣದಾಗಿ ಮಳೆಗಾಲದಲ್ಲಿ ಚಿಗುರೊಡೆಯುವ ಹುಲ್ಲುಗಳೂ ಪರಿಸರ ಸಮತೋಲನಕ್ಕೆ ಮುಖ್ಯವಾಗುತ್ತವೆ. ಪ್ರತಿಯೊಂದು ತೋಟದಲ್ಲಿ ಅಜ್ಞಾತವಾಗಿರುವ ಗಿಡಮೂಲಿಕೆಗಳತ್ತಲೂ ರೈತರ ಚಿತ್ತವಿರಬೇಕು.  ‌
  ಆಯುರ್ವೇದ ಔಷಧಿ ತಯಾರಿಸುವಾಗ ಒಳಸುರಿಯಾಗಿ ಅಡಿಕೆಯನ್ನು  ಯಥೇಚ್ಛವಾಗಿ ಬಳಸಿರುವ ಬದನಾಜೆಯವರು  ವಿವಿಧ ಲ್ಯಾಬೋರೇಟರಿ ಮತ್ತು  ಫಾರ್ಮ್‍ಸಿಗಳ ನಿರ್ಮಾಣಗಳಾದ  ‘ಡಯಾರೆಕಾ  ಡಯಾಶಮನ್’,  ‘ಪೂಗ ಸಿರಪ್’, ‘ಪೂಗ ಟ್ರೀಮ್’, ‘ಡಯಾ ಕೆಟೆಚು’ ಮುಂತಾದುವುಗಳ  ನಿರ್ಮಾಣದಲ್ಲಿ  ಮಾರ್ಗದರ್ಶನ ನೀಡಿದ್ದಾರೆ. ಅವರ “ಫಲಿನಿ” ಎಂಬ ನೈಸರ್ಗಿಕ ಔಷಧಿಯು ಬೋರ್ಡ್ ವಿಷ ಅಲ್ಲದ, ಪರಾಗ ಸ್ಪರ್ಶಕ್ಕೆ ನೆರವಾಗುವ  ಕೀಟಗಳು  ಸಾಯದಂತೆ ಕಾಪಾಡುವ ಔಷಧಿಯಾಗಿ ಬಹುಮಾನ್ಯವಾಗಿದೆ. “ಫಲಿನೀ ಫಲದಾಯಕಿ” ಎಂಬ ದುರ್ಗಾರಾಧನೆಯ ಸ್ತೋತ್ರದಿಂದ  ಆರಿಸಿಕೊಂಡ ಹೆಸರೇ “ಫಲಿನಿ”.
      ಪಿಂಗಾರದ ಕದಿರನ್ನು ರಕ್ಷಣೆ ಮಾಡುವ ಮೂಲಕ ಹೀಚುನಳ್ಳಿ  ಉದುರಿ ಅಡಿಕೆಯ ಉತ್ಪಾದನೆಯೂ ಕಡಿಮೆಯಾಗುವುದನ್ನು ತಡೆಗಟ್ಟಬಹುದು ಎಂಬ ಶಂಕರ ಭಟ್ಟರ ಸಂಶೋಧನೆ ಮಹತ್ವಪೂರ್ಣವಾದುದು. ಪಿಂಗಾರವನ್ನು ಉಳಿಸಿಕೊಳ್ಳಲು ಬಿಳಿನಳ್ಳಿಗೆ  ಸ್ಪ್ರೇ ಮಾಡುವ ಔಷಧದಲ್ಲಿ ನೀರಿನೊಂದಿಗೆ ಗೇರು ಎಣ್ಣೆ, ತೆಂಗಿನ ಎಣ್ಣೆ, ಅರಸಿನ, ಇಂಗು ಮತ್ತು ತೆಂಗಿನಕಾಯಿ ಹಾಲಿನ ಮಿಶ್ರಣ ತಯಾರಿಸುತ್ತಾರೆ. ಯಾವುದೇ ಕೆಮಿಕಲ್ ಇಲ್ಲದ ಇದರಲ್ಲಿ ಸುಣ್ಣದ  ತಿಳಿನೀರನ್ನು ಸೇರಿಸುತ್ತಾರೆ.  ಅನೇಕ ಕೀಟಗಳಿಂದಾಗುವ ಹಾನಿಯನ್ನು ತಡೆಯಲು ಎಂಡೋ ಸಲ್ಫಾನ್ ಮತ್ತು ಕರಾಟೆಯಂತಹ  ಕೀಟನಾಶಕಗಳ ಬದಲು ಫಲಿನಿ ಉಪಯುಕ್ತವಾಗಿದೆ. ಆದರೆ ಈ ದಿಸೆಯಲ್ಲಿ ಬದನಾಜೆಯವರಿಗೆ  ಸರಕಾರದಿಂದಾಗಲೀ ಖಾಸಗಿ  ರೈತರಿಂದಾಗಲೀ ಸಿಕ್ಕಿದ ಬೆಂಬಲ ನಿರಾಶಾದಾಯಕವೆಂದೇ ಹೇಳಬಹುದು.  ಆದರೆ ಭಟ್ಟರ ‘ಪೂಗ ಸಿಂಗಾರ’ ಎಂಬ ಅಡಿಕೆಯ ಸಾಬೂನು ಮತ್ತು ಪೂಗ ಸ್ವಾದ ಎಂಬ ಸೀರಪ್ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ  ಸೆಳೆದಿದೆ.
ಅಡಿಕೆ ಬೆಳೆಯುವವರಿಗೆ ಸಂಯಮ ಬೇಕೆನ್ನುತ್ತಾರೆ ಬದನಾಜೆಯವರು
  ಅವರ ಪ್ರಕಾರ ಮೂವತ್ತು ವರ್ಷಗಳಿಗೊಮ್ಮೆಯಾದರೂ ಅಡಿಕೆಯ ಹಳೆಯ ಮರಗಳನ್ನು ಕಡಿದುರುಳಿಸಿ ಹೊಸ ತೋಟವನ್ನೇ ಮಾಡಬೇಕು. ಹಾಗೆಂದು ಪೂರ್ತಿ ತೋಟವನ್ನು ಕಡಿಯುವುದು ದುಬಾರಿಯಾದುದರಿಂದ 25% ಪ್ರಮಾಣದಲ್ಲಿ ಕಡಿದು ಹೊಸತಾಗಿ ತೋಟ ಮಾಡಿ ಫಲ ಬಿಡುವ ಹೊತ್ತಿಗೆ ಸರಣಿಯಂತೆ 25% ಕಡಿದು ಹೊಸತಾಗಿ ತೋಟವನ್ನು ಬೆಳೆಸುತ್ತ ನವೀಕರಣ ಮಾಡಿದರೆ ಕೃಷಿಯಲ್ಲಿ ಸ್ಥಿರತೆ ಸಿಗುತ್ತದೆ. (ಪುಟ 25). ಪ್ರಾಯಶಃ ಈ ನೀತಿಯನ್ನು ಅನುಸರಿಸಿದ್ದರೆ ಅಡಿಕೆಗೆ ಹಳದಿ ರೋಗ ಕಾಡುತ್ತಿರಲಿಲ್ಲವೇನೋ!? ಇತ್ತೀಚೆಗೆ ನಮ್ಮಲ್ಲಿಗೆ ಬಂದಿದ್ದ ದೆಹಲಿಯ ಪರಿಸರ ತಜ್ಞ ಅರುಣ್ ಕಶ್ಯಪ್ ಕೂಡ ವ್ಯಾಪಕವಾಗಿ ಬೆಳೆಯುವ ಏಕ ಬೆಳೆಯ ದುಷ್ಪರಿಣಾಮವನ್ನು ತಪ್ಪಿಸಲು ಎಡೆಯಲ್ಲಿ ಬೇರೆ ಗಿಡಗಳನ್ನು ಹಾಕಿದ್ದರೆ ಹಳದಿ ರೋಗವನ್ನು ತಪ್ಪಿಸಬಹುದಿತ್ತೆನ್ನುತ್ತಾರೆ.
      ಬದನಾಜೆಯವರು ಸಂಶೋಧನೆಗೆ ಒಬ್ಬ ಮಾರ್ಗದರ್ಶಕ. ಅವರ ಮಾರ್ಗದರ್ಶನದಲ್ಲಿ  ಸಿದ್ಧವಾಗಿ ವಿಜ್ಞಾನ ಮೇಳಗಳಲ್ಲಿ ಮಂಡಿಸಲ್ಪಟ್ಟ ಪ್ರಬಂಧಗಳು ಅಂತಾರಾಷ್ಟ್ರೀಯ  ಪ್ರಶಂಸೆ  ಪಡೆದಿವೆ. ಭಟ್ಟರು ಆಯುರ್ವೇದ ಸಂಬಂಧಿ ವಿಷಯಗಳಲ್ಲಿ ತಜ್ಞ ಉಪನ್ಯಾಸಕರಾಗಿ ಸಂಶೋಧನಾ ಕೇಂದ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಅವರು ಪುಸ್ತಕಗಳನ್ನು ಬರೆದಿದ್ದಾರೆ. “ಸುಗಂಧ ಫಲ ಅಡಿಕೆ” ಮತ್ತು “Arecanut: Medicinal and alternative uses”  ಎಂಬ ಅವರ ಕೃತಿಗಳು ಸಂಶೋಧಕರಿಗೆ ಆಕರ  ಗ್ರಂಥಗಳಂತಿವೆ. ಅವರ ಬಗ್ಗೆಯೂ  ಅನೇಕ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಡಿಕೆಯಲ್ಲಿ  ಕ್ಯಾನ್ಸರ್‍ಕಾರಕ ಅಂಶವಿದೆ ಎಂಬುದನ್ನು ಅವರು ಒಪ್ಪುವುದಿಲ್ಲ. ವೀಳ್ಯದೆಲೆಯ ಹೊರತಾಗಿ ಅಡಿಕೆಯನ್ನು ತಿನ್ನಬಾರದು  ಎಂಬುವುದೇ ನಿಯಮ. ಹಾಗೆ ತಿನ್ನುವ ಗುಟ್ಕಾದಲ್ಲಿ  ಹೊಗೆಸೊಪ್ಪು ಸೇರಿಸಿ ಅದರ ಕ್ಯಾನ್ಸರ್ ಭೀತಿಯ ಅಪವಾದವನ್ನು ಅಡಿಕೆಯ ಮೇಲೆ ಹಾಕಿದ್ದು ಸರಿಯಲ್ಲವೆಂಬ ವಾದ ಬದನಾಜೆಯವರದ್ದು. ಗುಟ್ಕಾ ಹಾನಿಕಾರ ಎಂಬುದನ್ನು ದಿಲ್ಲಿಯಲ್ಲಿ ಗುಟ್ಕಾ ಉತ್ಪಾದಕರಲ್ಲೇ  ಹೇಳಲು ಅವರು ಅಂಜಿದವರಲ್ಲ.
 ವೈದ್ಯಕೀಯ ಕ್ಷೇತ್ರಕ್ಕೆ  ತಮ್ಮ ತಮ್ಮಂದಿರನ್ನು ಹಾಗೂ ಮಗಳು ಡಾ. ಸ್ಮಿತಾ ಮಹೇಶ್‍ರನ್ನು  ತಜ್ಞ ವೈದ್ಯರಾಗಿ  ನೀಡಿರುವ ಶಂಕರ ಭಟ್ಟರು ಜೀವನಯಾನದಲ್ಲಿ ಮಾಡಿರುವ ಸಾಧನೆಗಳಿಗೆ ಸಾಕಷ್ಟು ಪರಿಪೂರ್ಣವಾಗಿ ಬೆಳಕು ಚೆಲ್ಲಲು ಲೇಖಕರು ಪ್ರಯತ್ನಿಸಿದ್ದು ಕಂಡು ಬರುತ್ತದೆ.  ಹಾಗಿದ್ದರೂ ಅದು ಸಾಲದೆಂಬಂತೆ ಬದನಾಜೆಯವರ ಸಹವರ್ತಿಗಳಾಗಿದ್ದ ಶ್ರೀ ಎಸ್. ಆರ್ ರಂಗಮೂರ್ತಿ, ಶ್ರೀಪಡ್ರೆ, ಲೇಖಕ ನಾ. ಕಾರಂತ  ಪೆರಾಜೆ,  ಕನಿಲ ಅಶೋಕ್, ಡಾ. ರವೀಂದ್ರನಾಥ ಐತಾಳ, ಡಾ. ಕೆ. ಪದ್ಮರಾಜ, ಶ್ರೀ ಎಂ. ದಿನೇಶ್ ನಾಯಕ್, ಕಕ್ವೆ ಗೋಪಾಲಕೃಷ್ಣ ನಾಯಕ್, ಶ್ರೀ ಚಂದ್ರಶೇಖರ ದೈತೋಟ ಮುಂತಾದವರಿಂದ ಬೆಳಕು ಹರಿಸಿದ್ದಾರೆ.
     ಕೃತಿ ಪರಿಚಯದ ಈ ಕಿರುಲೇಖನದಲ್ಲಿ ಕೃತಿಯಲ್ಲಿದ್ದುದೆಲ್ಲವನ್ನೂ ಹೇಳಲು ಸಾಧ್ಯವಿಲ್ಲ. ನಾನೂ ನನ್ನ ಪತ್ನಿ ಜಯಲಕ್ಷ್ಮಿಯೂ ಒಂದು ದಿನ ಬದನಾಜೆ ದಂಪತಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬಂದಿದ್ದೇವೆ. ಅಂದು ನಾವು ಭಟ್ಟರ ಜಗಲಿಯಲ್ಲಿದ್ದ ದೊಡ್ಡ ಮೇಜಿನ ಮೇಲಿದ್ದ ಪುಸ್ತಕಗಳು ಮತ್ತು ಔಷಧಿ ಬಾಟಲಿಗಳನ್ನು ಕಂಡಿದ್ದೇವೆ. ಜ್ಞಾನ ಪಿಪಾಸುಗಳಿಗೆ ಶಕ್ತಿ ನೀಡುವ ಮನೆ ಅವರದ್ದು. ಪೂರ್ಣ ಓದಿಗಾಗಿಯೂ ಒಬ್ಬ ನೆಲವಿಜ್ಞಾನಿಯನ್ನು ಗೌರವಿಸುವುದಕ್ಕಾಗಿಯೂ ಈ ಕೃತಿಯನ್ನು ಖರೀದಿಸಿಯೇ ಓದಬೇಕು. ನಾನು ಕೂಡಾ ಖರೀದಿಸಿ ಓದಿದ ಈ ಕೃತಿಯ ಬಗ್ಗೆ ಹಿತವೆನ್ನಿಸಿದ್ದರಿಂದ ಬರೆದಿದ್ದೇನೆ.
ಪ್ರಕಟಣೆ : ಕನಸು ಪ್ರಕಾಶನ, ಅಂಚೆ: ಮಾಡಾವು. ದಕ್ಷಿಣ ಕನ್ನಡ. ಬೆಲೆ ರೂ. 140/
ಸಂಪರ್ಕ: 9164561789; 9448951939. Email:[email protected]
ಬರಹ :
ಚಂದ್ರಶೇಖರ ದಾಮ್ಲೆ
Badanaje Shankara Bhat viewed agriculture as more than just a way to make money. He believed in exploring the possibilities beyond simply consuming or discarding the Arecanut. Drawing from his expertise in Ayurveda and traditional medicine passed down from his parents, he also understood the healing properties of various plants. His holistic approach to agriculture is truly inspirational.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಮುಂಜಾನೆ ಏಳಬೇಕು, ಬೇಗನೇ ಏಳಬೇಕು
January 16, 2025
7:29 AM
by: ಡಾ.ಚಂದ್ರಶೇಖರ ದಾಮ್ಲೆ
ಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿ
January 9, 2025
10:49 AM
by: ಡಾ.ಚಂದ್ರಶೇಖರ ದಾಮ್ಲೆ
ಮಕ್ಕಳ ಯಶಸ್ಸಿಗೆ ಕಲಿಯುವುದು ಹೇಗೆಂದು ತಿಳಿಯಬೇಕು
January 2, 2025
10:34 PM
by: ಡಾ.ಚಂದ್ರಶೇಖರ ದಾಮ್ಲೆ
ಪತ್ರಿಕೆಯ ಮೂಲೆಯ ಸುದ್ದಿ ಮುಖಪುಟಕ್ಕೆ ಬಂದೀತು
December 26, 2024
11:10 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror