ನಾವೆಲ್ಲಾ ಪುರಾಣಗಳನ್ನು ಓದಿದವರು. ಯುದ್ಧದಲ್ಲಿ ಕೆಲವೊಂದು ಕ್ಲಿಷ್ಟ ಸನ್ನಿವೇಶದಲ್ಲಿ ‘ಬ್ರಹ್ಮಾಸ್ತ್ರ’ ಪ್ರಯೋಗಗಳ ಉಲ್ಲೇಖ ಸಿಗುತ್ತದೆ. ಉದಾ: ರಾವಣ, ಇಂದ್ರಜಿತು.. ಇವರನ್ನೆಲ್ಲಾ ಹನನ ಮಾಡಲು ಬ್ರಹ್ಮಾಸ್ತ್ರ ಪ್ರಯೋಗವಾದ ಉಲ್ಲೇಖ ಸಿಗುತ್ತದೆ. ಅಂದರೆ ಇದಕ್ಕಿಂತ ಹೊರತಾದ ಬಲಿಷ್ಠ ಅಸ್ತ್ರ ಇನ್ನೊಂದಿಲ್ಲ. ಹಾಗೆಂದು ಮನ ಬಂದಾಗಲೆಲ್ಲಾ ಪ್ರಯೋಗಿಸುವಂತಿಲ್ಲ. ಅದಕ್ಕೊಂದು ವಿಧಿಯಿದೆ. ಚೌಕಟ್ಟಿದೆ.
ಬ್ರಹ್ಮಾಸ್ತ್ರ ಪದ ಪ್ರಯೋಗವು ಬದುಕಿನ ಯಾನದಲ್ಲಿ ಇಣುಕುವುದನ್ನು ಗಮನಿಸಬೇಕು. ವರ್ತಮಾನದಲ್ಲಿ ನಾವು ಬಿಡುವ ಬ್ರಹ್ಮಾಸ್ತ್ರವು ನಮ್ಮನ್ನೇ ಆಹುತಿ ತೆಗೆದುಕೊಳ್ಳುವಷ್ಟು ವ್ಯವಸ್ಥೆಗಳು ಬಲಿಷ್ಠವಾಗಿವೆ! ನಿರ್ದಿಷ್ಟವಾಗಿ ಯಾರನ್ನು ಉದ್ದೇಶಿಸಿ ಬ್ರಹ್ಮಾಸ್ತ್ರ ಹೂಡುತ್ತೇವೋ ಅಂತಹವರನ್ನದು ಸ್ಪರ್ಶಿಸುವುದೇ ಇಲ್ಲ! ನಮ್ಮ ಸಾಮಾಜಿಕ, ರಾಜಕೀಯ ವ್ಯವಸ್ಥೆಯ ಸೀಳು ನೋಟವಿದು, ಬೀಳುನೋಟವಿದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….
ಸರಕಾರಿ ವ್ಯವಸ್ಥೆಗಳಲ್ಲಿ ತೇಲು ವಾಹಿನಿಯಂತೆ ಹರಿಯುತ್ತಿರುವ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದ್ದೇವೆ! ನಾವು ಅದರ ಭಾಗವಾಗಿದ್ದೇವೆ. ಕೋಟಿಗಟ್ಟಲೆ ಹಣವನ್ನು ಕಿಸೆಗಿಳಿಸಿಕೊಂಡ ಆತ್ಮಗಳು ಸಾಮಾಜಿಕ ಬದುಕಿನಲ್ಲಿ ಪ್ರತಿಷ್ಠೆಯ ಮುಖಹೊತ್ತು ನಗುನಗುತ್ತಾ ಇರುತ್ತಾರೆ. ಕೆಲವೊಮ್ಮೆ ನೂರೋ ಐನೂರೋ ರೂಪಾಯಿ ಕಿಸೆಗಿಳಿಸಿದ ಜವಾನನೋ, ಗುಮಾಸ್ತನೋ ಸಿಕ್ಕಿಬೀಳುವುದಿದೆ. ಅವರಿಗೆ ಅಮಾನತು ಅಥವಾ ಹುದ್ದೆಯಿಂದ ರದ್ದತಿಯ ಶಿಕ್ಷೆ. ಇಂತಹ ಸಂದರ್ಭದಲ್ಲಿ ‘ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ’ ಅಗತ್ಯವಿತ್ತೇ ಎನ್ನುವ ವಾಕ್ಯವನ್ನು ಸಾಮಾಜಿಕರು ಬಳಸುತ್ತಾರೆ.
ಇಲ್ಲಿ ಗುಬ್ಬಿ ಯಾರು? ಬ್ರಹ್ಮಾಸ್ತ್ರ ಯಾವುದು? ಚಿಕ್ಕ ಕಾಸನ್ನು ನುಂಗಿದ ಜವಾನ ಯಾ ಗುಮಾಸ್ತ ಗುಬ್ಬಿಯಾದರೆ, ಆತನಿಗೆ ನೀಡಿದ ಶಿಕ್ಷೆಯು ‘ಬ್ರಹ್ಮಾಸ್ತ್ರ’ ಪ್ರಯೋಗಕ್ಕೆ ಸಮಾನ. ಭ್ರಷ್ಟಾಚಾರ ಅಪರಾಧವೇ. ಅಪರಾಧಿಗೆ ಶಿಕ್ಷೆಯಾಗಲೇ ಬೇಕು. ಆದರೆ ಕೋಟಿಯ ಎದುರು ಎಷ್ಟಾದರೂ ಐನೂರು ಚಿಕ್ಕದು ತಾನೆ. ಕಣ್ಣ ಮುಂದೆ ಕೋಟಿವೀರರು ಇರುವಾಗ, ಅವರಿಗೆ ಶಿಕ್ಷೆಯಾಗದೆ ಗುಮಾಸ್ತನಿಗೆ ಶಿಕ್ಷೆಯಾದಾಗ ಅದು ‘ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ’ವಾಗುತ್ತದೆ.
ಚಿಕ್ಕ ತಪ್ಪಿಗೆ ದೊಡ್ಡ ಶಿಕ್ಷೆಯಾದಾಗ ಮಾತಿನ ಮಧ್ಯೆ ‘ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ’ ಹಾದುಹೋಗುತ್ತದೆ. ದೇಶ, ರಾಜ್ಯ ಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಕೋಟಿಗಳು ತಪ್ಪಿಸಿಕೊಳ್ಳುತ್ತವೆ. ಕೈಗೆ ಸಿಗುವುದು ಗುಬ್ಬಿಗಳು ಮಾತ್ರ! ಇಂತಹ ಶಿಕ್ಷೆಗಳು ಕೆಲವೊಮ್ಮೆ ತಪ್ಪು ನಿರ್ಧಾರಗಳಿಂದ ಆಗುವುದೂ ಇದೆ.
ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಹೊಸದಿಗಂತದಲ್ಲಿ ಬರೆದಿದ್ದರು : “ಪ್ರಧಾನ ಮಂತ್ರಿ ಪದವಿಯ ಮೋಹ ಮತ್ತು ಆಧಿಕಾರ ಉಳಿಸಿಕೊಳ್ಳಲು ಅಂದು ‘ತುರ್ತುಪರಿಸ್ಥಿತಿ’ಯ ಬ್ರಹ್ಮಾಸ್ತ್ರವನ್ನು ಜನರ ಮೇಲೆ ಹೇರಲಾಗಿತ್ತು. ಜನತೆಯ ಬಾಯಿ ಹೊಲಿದು, ಕೈಕಾಲುಗಳನ್ನು ಕಟ್ಟಿ, ಕೆಳಗುರುಳಿಸಿ, ಅವರೆದೆಯ ಮೇಲೆ ಹತ್ತಿ ನಿಂತು ನಿರಂಕುಶ ರಾಜ್ಯಭಾರ ಮಾಡಬೇಕೇಂಬ ಕ್ಷುದ್ರ ಹಠವಿತ್ತು. ಈ ಹಠದ ಫಲಶ್ರುತಿಯೇ 1975 ಜೂನ್ 25 ಮಧ್ಯರಾತ್ರಿ ದೇಶದ ಮೇಲೆ ತುರ್ತು ಪರಿಸ್ಥಿತಿಯ ಅನಿರೀಕ್ಷಿತ ಘೋಷಣೆ. ಜನರ ಎಲ್ಲಾ ಬಗೆಯ ಮೂಲಭೂತ ಹಕ್ಕುಗಳ ರದ್ದು. ಪತ್ರಿಕೆಗಳ ಬಾಯಿಗೆ ಸೆನ್ಸಾರ್ ಬೀಗ. ನ್ಯಾಯಾಂಗದ ಕೈಕಾಲುಗಳಿಗೆ ಬೇಡಿ. ಭಾರತದ ಅರುವತ್ತು ಕೋಟಿ ಜನರು ಗಾಢ ನಿದ್ರೆಯಲ್ಲಿದ್ದಾಗ ಅವರ ಮೇಲೆ ನಡೆದ ಆಕಸ್ಮಿಕ ಗುಪ್ತ ದಾಳಿ ಇದು..” ಯುದ್ಧ ಕಾಲದಲ್ಲಿ ಬ್ರಹ್ಮಾಸ್ತ್ರವು ವೈರಿಯನ್ನು ನಾಶ ಮಾಡಿದ ಬಳಿಕ ವಿಶ್ರಮಿಸುತ್ತದೆ. ಇಲ್ಲಿ ಇಡೀ ದೇಶವನ್ನು ತುರ್ತುಪರಿಸ್ಥಿತಿಯಂತಹ ಬ್ರಹ್ಮಾಸ್ತ್ರದೊಳಗೆ ಬಂಧಿಸಿದ್ದರು.
ಕಣ್ಣಾರೆ ಕಂಡ ಒಂದು ಘಟನೆ ಹೇಳಬೇಕು. ಸಕಲೇಶಪುರದ ಹಳ್ಳಿ. ಅಲ್ಲೊಂದು ಪಂಚಾಯತ್ ಕಚೇರಿ. ಅದಕ್ಕೊಬ್ಬ ಅಧಿಕಾರಿ. ಅಪರೂಪಕ್ಕೆ ಭರ್ರನೆ ಬಂದು ಹೋಗುವ ಸರಕಾರಿ ಬಸ್. ಮಿಕ್ಕಂತೆ ಸೈಕಲ್, ಎತ್ತಿನ ಗಾಡಿ. ಪಂಚಾಯತ್ ಮುಂದೆ ಬಸ್‍ಗಾಗಿ ಕಾಯುತ್ತಿದ್ದೆ. ಆಗಲೇ ಬರೋಬ್ಬರಿ ಎರಡು ಗಂಟೆ ವ್ಯಯವಾಗಿತ್ತು. ಐವತ್ತರ ವೃದ್ಧೆಯೋರ್ವರು ಪಿಂಚಣಿ ಸಂಬಂಧಿ ಕೆಲಸಕ್ಕೆ ಪಂಚಾಯತ್ ಕಚೇರಿಗೆ ಬಂದಿದ್ದರು. ಅಧಿಕಾರಿಗೂ ಇವರಿಗೂ ಮಾತಿನ ಚಕಮಕಿ ತಾರಕಕ್ಕೇರುತ್ತಿತ್ತು.
‘ಒಂದು ಸಹಿಗೆ ನೂರು ಕೊಟ್ರೂ ಸಾಲ್ದಾ. ಇನ್ನೆಷ್ಟು ಕೊಡ್ಬೇಕು ನಿನ್ಗೆ’ ದಬಾಯಿಸುತ್ತಿದ್ದರು. ‘ಇನ್ನೈವತ್ತು ಕೊಡು’ ಅಧಿಕಾರಿಯ ಕಂಠತ್ರಾಣದ ಉತ್ತರ. ಸೆರಗಿನ ತುದಿಯಲ್ಲಿ ಭದ್ರವಾಗಿ ಹಣದ ಗಂಟು ಹಾಕಿದ್ದನ್ನು ಬಿಡಿಸುತ್ತಿದ್ದಂತೆ, ‘ಬೇಗ ಕೊಡು.. ಅಯ್ಯೋ.. ನಿನ್ನಾ..’ ಆತ ಬಡಬಡಿಸುತ್ತಿದ್ದ. ಐವತ್ತನ್ನು ಆತನ ಟೇಬಲ್ ಮೇಲೆ ಬಿಸಾಕಿ, ‘ಇನ್ನು ಸಹಿ ಹಾಕು’ ಅಂದಾಗ, ‘ನಾಳೆ ಬಾ. ಆಫೀಸ್ ಟೈಂ ಮುಗಿಯಿತು’ ಎಂದು ಬಾಗಿಲು ಹಾಕಿದ! ಪಾಪ.. ನೂರು ರೂಪಾಯಿ ಕೈಜಾರಿತು.
‘ಸರ್ಟಿಫಿಕೇಟೊಂದಕ್ಕೆ ಸೈನ್ ಬೇಕಾಗಿತ್ತು. ಇದಕ್ಕೋಸ್ಕರ ಬರುವುದು ಇದು ಒಂಭತ್ತನೇ ಸಲ.’ ಎನ್ನುವಾಗ ಆ ತಾಯಿಯ ಕಣ್ಣಂಚಿನಲ್ಲಿ ಕಣ್ಣೀರು! ಎಷ್ಟೊಂದು ಅಸಹಾಯಕ ಸ್ಥಿತಿ. ಅಕ್ಷರದ ಪರಿಚಯವಿಲ್ಲದಿದ್ದ ಅಮಾಯಕರನ್ನು ಸುಲಿವ ಒಂದು ಮಾದರಿಯಷ್ಟೇ. ಮತ್ತೆ ತಿಳಿಯಿತು – ಒಂದೊಂದು ಸಹಿಗೂ ನೂರರ ನೋಟು ಎಣಿಸಬೇಕಂತೆ!
ಆತನಲ್ಲೇನೋ ದ್ವಿಚಕ್ರ ವಾಹನವಿದೆ. ಭರ್ರನೆ ಬಂದು ಹೋಗಬಹುದು. ಪಾಪ, ಕಿಲೋಮೀಟರ್ ಗಟ್ಟಲೆ ಸಹಿಗಾಗಿ ಕಾಲ್ನಡಿಗೆಯಲ್ಲಿ ಬರುವ ಹಳ್ಳಿ ಜೀವಗಳ ಶ್ರಮ ಇಂತಹವರಿಗೆಲ್ಲಿ ಅರ್ಥವಾಗಬೇಕು. ತಿಂಗಳಿಗೆ ನಿರಾಯಾಸವಾಗಿ ಬರುವ ವೇತನ, ಜೊತೆಗೆ ಕಿಮ್ಮತ್! ‘ಇಲ್ಲ.. ಇವ ಹೀಂಗೆ ನಮ್ನ ದುಡಿಸ್ಕೊಂಡ್ರೆ ಇವ ಉದ್ಧಾರವಾಗೊಲ್ಲ’ – ಆ ಅಧಿಕಾರಿಗೆ ಹಿಡಿಶಾಪವೊಂದು ಬೋನಸ್! ಭವಿಷ್ಯ ಜೀವನಕ್ಕೆ ಕಟ್ಟಿಡುವ ಎಫ್.ಡಿ! ಇಂತಹ ಸರಕಾರಿ ವ್ಯವಸ್ಥೆಯಲ್ಲಿ ಬ್ರಹ್ಮಾಸ್ತ್ರ ಬಿಡುವವರು ಯಾರು? ಒಂದು ವೇಳೆ ಅಜ್ಜಿಯ ಪರವಾಗಿ ಮಾನವೀಯ ಕಳಕಳಿಯ ಮಂದಿ ಮಾತನಾಡಿದರು ಎಂದಿಟ್ಟುಕೊಳ್ಳೋಣ. ಆಗ ಸಾಮಾಜಿಕರ ವರ್ತನೆಗಳು ವಿಚಿತ್ರವಾಗಿರುತ್ತವೆ. ಅಜ್ಜಿಯ ಸಹಾಯಕ ಬಂದವನನ್ನೇ ಸಂಶಯಿಸಲಾಗುತ್ತದೆ.
ಇನ್ನೊಂದು ಘಟನೆ. ಹಿಂದೊಮ್ಮೆ ರಾಮನಗರದ ಜಾನಪದ ಲೋಕದಲ್ಲಿ ಯಕ್ಷಗಾನ ಪ್ರದರ್ಶನ ನೀಡಲೆಂದು ಕಲಾವಿದ, ಸಂಘಟಕ ಅಡೂರು ಶ್ರೀಧರ ರಾವ್ ಅವರ ತಂಡದೊಂದಿಗೆ ಹೋಗಿದ್ದೆ. ಉತ್ತಮ ಆತಿಥ್ಯವಿತ್ತು. ಯಕ್ಷಗಾನ ಪ್ರದರ್ಶನವೂ ಓಕೆ. ಕೊನೆಗೆ ಹೊರಡುವಷ್ಟರಲ್ಲಿ ಸಂಬಂಧಿತ ಅಧಿಕಾರಿ ನಾಪತ್ತೆ! ಮೊದಲೇ ನಿಗದಿಯಾಗಿದ್ದ ಮೊತ್ತ ಸಿಗದೆ ಬರುವುದಾದರೂ ಹೇಗೆ? ವ್ಯಾನ್ ಬಾಡಿಗೆ, ಯಕ್ಷಗಾನ ಡ್ರೆಸ್ ಬಾಡಿಗೆ, ಕಲಾವಿದರ ಸಂಭಾವನೆ.. ಇತ್ಯಾದಿಗಳನ್ನು ಹೊಂದಿಸುವುದಾದರೂ ಹೇಗೆ? ಮೊದಲು ಬಾಯ್ಮಾತಿನಲ್ಲಿ ಇಪ್ಪತ್ತೈದು ಸಾವಿರ ರೂಪಾಯಿಗೆ ಸಂಬಂಧಪಟ್ಟ ಅಧಿಕಾರಿಗಳು ತಂಡವನ್ನು ಆಹ್ವಾನಿಸಿದ್ದರು.
ರಾತ್ರಿ ಹನ್ನೊಂದು ಆಗಿರಬಹುದು. ಬಹುಶಃ ನಾವೆಲ್ಲಾ ತೆರಳಿರಬಹುದೆಂಬ ನಂಬುಗೆಯಿಂದ ‘ಜಯದ್ರತ ’ ತಲೆಯೆತ್ತಿದಂತೆ ಪ್ರತ್ಯಕ್ಷ! ನಮ್ಮನ್ನು ಕಂಡು ದಿಗಿಲು. ಅತ್ತಿತ್ತ ಶತಪಥ ತಿರುಗಿದ, ಮುಖ ಒರೆಸಿಕೊಂಡ, ತನ್ನ ಕಚೇರಿಗೆ ನಾಲ್ಕೈದು ಬಾರಿ ಸಂಚಲನ ಮಾಡಿದ. ಕೊನೆಗೆ ಕೈಯಲ್ಲೊಂದು ಓಚರ್ ಇತ್ತು. ‘ಸಾರ್ ಇದಕ್ಕೆ ಸಹಿ ಮಾಡಿ. ಹತ್ತು ಸಾವಿರ ಕೊಡಲು ಸಾಹೇಬ್ರು ಹೇಳಿದ್ದಾರೆ. ತೆಕ್ಕೊಳ್ಳಿ’ ಎಂದ. ವೋಚರ್‍ನಲ್ಲಿ ಹದಿನಾರು ಸಾವಿರ ನಮೂದಾಗಿತ್ತು. ‘ಇದ್ಯಾಕೆ ಹೀಗೆ’ ಅಂತ ಕೇಳಿದ್ದಕ್ಕೆ ಅವನ ಉತ್ತರ – ‘ಸಾರ್. ನಮ್ಗೆ ಕೆಲವು ಖರ್ಚಾಗುತ್ತೆ. ಅದಕ್ಕೆ ಬಿಲ್ ಸಿಗುತ್ತಿಲ್ಲ. ಹಾಗಾಗಿ ಅಡ್ಜಸ್ಟ್ ಮಾಡಲು ಈ ಮೊತ್ತ’!
ಇಂತಹ ‘ಅಡ್ಜಸ್ಟ್’ಗಳು ಸರಕಾರಿ ಕೃಪಾಪೋಶಿತ ಕಾರ್ಯಕ್ರಮದಲ್ಲಿ ಸಹಜ. ಅದನ್ನು ನಾವೆಲ್ಲಾ ಒಪ್ಪಿಕೊಂಡಿದ್ದೇವೆ. ಯಾಕೆಂದರೆ ನಮಗೆ ಕಾರ್ಯಕ್ರಮ ಬೇಕಲ್ವಾ! ಇಂತಹ ಘಟನೆಗಳು ಹುಡುಕಿದರೆ ಹೆಜ್ಜೆಗೊಂದು ತಗಲುತ್ತವೆ. ಇಲ್ಲಿ ಎಲ್ಲರ ಕೈಯಲ್ಲೂ ಬ್ರಹ್ಮಾಸ್ತ್ರವಿದೆ! ಪ್ರಯೋಗಿಸಲು ಗುಬ್ಬಿಗಳೇ ಇಲ್ಲ! ಹಾಗೆಂತ ಪ್ರಾಮಾಣಿಕÀ ಆಧಿಕಾರಿಗಳಿಲ್ವಾ. ಇದ್ದಾರೆ. ಅವರ ಸೇವೆ ದಾಖಲಾಗುವುದಿಲ್ಲ.
ಕೊರೊನಾ ಕಾಲಘಟ್ಟ ನೆನಪಿದೆಯೇ? ಇಲ್ಲ, ಮರೆತಿದಿದ್ದೇವೆ. ಆಗಿನ ಸಂಕಷ್ಟಗಳೆಲ್ಲಾ ಮರೆವಿನ ಲೋಕಕ್ಕೆ ಜಾರಿವೆ. ದೇಶವಲ್ಲ, ವಿಶ್ವವೇ ತಲ್ಲಣಗೊಂಡ ಮಹಾ ಮಾರಿ. ಆ ಸಂದರ್ಭದಲ್ಲಿ ಪ್ರಧಾನಿಯವರು ಟಿವಿ ಮುಂದೆ ಬಂದು ಘೋಷಿಸಿದರು, ‘ಕೊರೊನಾ ತೊಲಗಿಸಲು ಸಂಪೂರ್ಣ ಲಾಕ್‍ಡೌನ್ ಒಂದೇ ಬ್ರಹ್ಮಾಸ್ತ್ರ’. ಬಹುಶಃ ಬ್ರಹ್ಮಾಸ್ತ್ರ ಪದ ಪ್ರಯೋಗ ಈ ಸಂದರ್ಭಕ್ಕೆ ತುಂಬಾ ಹೊಂದುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


