Advertisement
ಅನುಕ್ರಮ

ಬದುಕು ಪುರಾಣ | ಬದುಕಿಗಾಸರೆ, ಕಾಮಧೇನು

Share
ದೇವಾಸುರರೊಳಗೆ ನಡೆದ ಸಮುದ್ರಮಥನದಲ್ಲಿ ಆವಿರ್ಭವಿಸಿದ ಸುವಸ್ತು ‘ಕಾಮಧೇನು’. ಕಾಮಿಸಿದ್ದನ್ನು  ಕೊಡುವ ಧೇನುವಿಗೆ ದೇವಸಾನ್ನಿಧ್ಯ. ಸಮೂಹ ವ್ಯವಸ್ಥೆಯೊಂದು ಸಮುದಾಯಕ್ಕೆ ನೆರವಾದಾಗ, ಆಸರೆಯಾದಾಗ, ಕೊಡುಗೆ ನೀಡಿದಾಗ ಅಂತಹ ಸಂಸ್ಥೆಯನ್ನು ಶ್ಲಾಘಿಸುತ್ತಾ ‘ಕಾಮಧೇನು’ ವಿಶೇಷಣವನ್ನು ಹೊಸೆಯುತ್ತೇವೆ. ನೆರವಾಗಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಗೌರವ ಸೂಚಕವಾಗಿ ಬಳಕೆ ಮಾಡುವುದು ಉತ್ಪ್ರೇಕ್ಷೆಯಾಗದು.
ನಾವು ‘ಗೋಮಾತೆ’ಯಲ್ಲಿ ‘ಕಾಮಧೇನು’ವನ್ನು ಕಾಣುತ್ತೇವೆ. ಅದು ಹಿಂದೂ ಧರ್ಮದ ಆಚಾರ. ಗೋವಿನಲ್ಲಿ ದೇವತೆಗಳ ಆವಾಸವಿದೆ. ಅವಳು ಪವಿತ್ರಳು, ಪೂಜನೀಯಳು. ಪರಿಶುದ್ಧವಾದ ಘೃತ, ಕ್ಷೀರ, ಮೊಸರು, ಗೋಮಯ, ಗೋಮೂತ್ರ ಹಾಗೂ ಗೋರೋಚನಗಳು ಮಂಗಲಪ್ರದ. ಗೋವಿಲ್ಲದೆ ಧಾರ್ಮಿಕ ಕಾರ್ಯ ನಡೆಯದು. ಗೋವಿನ ಹಾಲು, ಗೋಮೂತ್ರಗಳಿಂದ ತಯಾರಾದ ‘ಗೋ ಉತ್ಪನ್ನ’ಗಳು ಹಲವಾರು ರೋಗಗಳ ಶಮನಕ್ಕೆ ದಿವ್ಯ ಔಷಧಿ ಎಂದು ಅನುಭವಿಗಳು ತಮ್ಮ ಅನುಭವಗಳಿಂದ ಕಂಡುಕೊಂಡಿದ್ದಾರೆ. ‘ಗಾವೋ ರಕ್ಷತಿ ರಕ್ಷಿತಃ’. ಗೋವನ್ನು ರಕ್ಷಿಸಿದರೆ ಗೋವು ನಮ್ಮನ್ನು ರಕ್ಷಿಸುತ್ತದೆ.
‘ಆಸರೆ’ಗೆ ‘ಕಾಮಧೇನು’ ವಿಶೇಷಣ ಹೊಂದುತ್ತದೆ. ಪ್ರತಿಯೊಬ್ಬನ ಬದುಕಿನಲ್ಲಿ ಒಬ್ಬ ವ್ಯಕ್ತಿ, ಒಂದು ಸಂಸ್ಥೆ, ಒಂದು ವ್ಯವಸ್ಥೆಗಳು ‘ಕಾಮಧೇನು’ ಆಗಬಹುದು. ಒಂದು ಸಂಸ್ಥೆಯನ್ನು ನಂಬಿ ಪ್ರಾಮಾಣಿಕವಾಗಿ ದುಡಿಯುವವನಿಗೆ ಆ ಸಂಸ್ಥೆಯು ಕಾಮಧೇನು. ಹಾಗೆಂದು ಜೀವನಪೂರ್ತಿ ಆಸರೆಯನ್ನು ನಿರೀಕ್ಷಿಸಲಾಗದು. ಅಲ್ಲಿ ದುಡಿಯುವಷ್ಟು ದಿನ ತನ್ನ ಬದುಕಿಗೆ, ಕುಟುಂಬಕ್ಕೆ ಸಂಸ್ಥೆಯು ಬೆನ್ನಾಗಿ ನಿಂತಿದೆ. ಒಂದು ದುರಂತ ಗಮನಿಸಿ. ಎಲ್ಲರೂ ಅಲ್ಲ. ಒಂದು ಸಂಸ್ಥೆಯಲ್ಲಿ ದುಡಿಯುತ್ತಿರುವಾಗ ಆ ಸಂಸ್ಥೆಯನ್ನು ಪ್ರೀತಿಯಿಂದ, ಗೌರವದಿಂದ ನೋಡುವ ಮನಃಸ್ಥಿತಿ ಹೊಂದದವರೂ ಇದ್ದಾರೆ. ಒಂದಲ್ಲ ಒಂದು ಸಮಸ್ಯೆಗಳನ್ನು ಸೃಷ್ಟಿಸುತ್ತಾ ಗೊಣಗಾಡುತ್ತಿರುವ ಮಂದಿಯನ್ನು ಸಂಸ್ಥೆಯು ‘ಕಾಮಧೇನು’ ಆಗಿ ನೋಡುವುದಿಲ್ಲ. ಅವರಿಗದು ಸಮಯ ಕಳೆಯಲು ಕುಳಿತುಕೊಳ್ಳುವ ಜಾಗವಾಗಬಹುದಷ್ಟೇ.
“ನಿಜವಾದ ಬಡವನೆಂದರೆ ವಿದ್ಯೆ ಕಲಿತು, ಸನ್ಮಾರ್ಗದಲ್ಲಿ ನಡೆಯದವರು. ಹಣವಿಲ್ಲದವರೆಲ್ಲರೂ ನಿರ್ಗತಿಕರಲ್ಲ. ಅವರಿಗೆ ಆ ಹಣೆಪಟ್ಟಿ ಕಟ್ಟಬಾರದು. ಬಡತನ-ಸಿರಿತನವು ಶಾಶ್ವತವಲ್ಲ. ಅವು – ಒಂದಕ್ಕೊಂದು ವೈರಿಗಳು. ವಿದ್ಯೆ, ವಿದ್ವತ್ ಎರಡೂ ದೇವಲೋಕದ ಕಾಮಧೇನುವಿನಂತೆ. ಆಪತ್ಕಾಲದಲ್ಲಿ ನಮ್ಮನ್ನು ರಕ್ಷಿಸುತ್ತದೆ.” ಇದು ಚಾಣಕ್ಯ ನೀತಿ. ‘ಮನುಷ್ಯನಿಗೆ ವಿದ್ಯೆ ಮತ್ತು ಪಾಂಡಿತ್ಯವು ಬದುಕಿನ ಕಾಮಧೇನು’ ಎನ್ನುತ್ತಾನೆ ಚಾಣಕ್ಯ.
ತುಮಕೂರು ಸಿದ್ಧಗಂಗಾ ಮಠದ ಶಿವೈಕ್ಯ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಬಡವರ ಪಾಲಿನ ‘ಕಾಮಧೇನು’ ಎಂದು ಸಂಬೋಧಿಸುತ್ತಾರೆ. ಬಡ ಮಕ್ಕಳಿಗೆ ಅನ್ನ, ವಿದ್ಯೆಯನ್ನು ನೀಡಿ ಆಸರೆಯಾಗಿದ್ದರು. ಶ್ರೀಮಠದ ಅನ್ನ ದಾಸೋಹವು ದೇಶಕ್ಕೆ ಅಲ್ಲ ವಿಶ್ವಕ್ಕೇ ಮಾದರಿ. ಪ್ರಾಥಮಿಕ ಶಿಕ್ಷಣದಿಂದ ಇಂಜಿನಿಯರಿಂಗ್ ಕಾಲೇಜು ವರೆಗೆ ಶಾಲೆ, ಕಾಲೇಜುಗಳನ್ನು ಸ್ಥಾಪಿಸಿದ್ದರು. ಜಿಲ್ಲೆಯು ಶೈಕ್ಷಣಿಕವಾಗಿ ಬೆಳವಣಿಗೆ ಕಂಡಿರುವಲ್ಲಿ ಸ್ವಾಮೀಜಿಯವರ ಕೊಡುಗೆ ಹಿರಿದು.
ಕೇಂದ್ರ ಸರಕಾರವು ಗೋವುಗಳು, ಅವುಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ ‘ರಾಷ್ಟ್ರೀಯ ಕಾಮಧೇನು ಆಯೋಗ’ ಸ್ಥಾಪಿಸಿದೆ. ಇದು ಕೇಂದ್ರ, ರಾಜ್ಯ ಸರಕಾರಗಳ ಪಶುವೈದ್ಯಕೀಯ, ಪ್ರಾಣಿ ವಿಜ್ಞಾನ ಅಥವಾ ಕೃಷಿ ವಿಶ್ವವಿದಾಲಯಗಳು ಮತ್ತು ಇಲಾಖೆಗಳ ಸಹಭಾಗಿತ್ವದಲ್ಲಿ ಕಾರ್ಯವೆಸಗುತ್ತಿದೆ. ಪಶುಗಳ ಪಾಲನೆ, ಅಭಿವೃದ್ಧಿ ಮುಖ್ಯ ಧ್ಯೇಯ. ದೇಶದ ಕೃಷಿಗೆ ಪಶು ಸಂಪತ್ತಿನಿಂದಾಗುವ ಸದ್ಬಳಕೆ, ಹೈನುಗಾರಿಕೆಯ ಪ್ರಯೋಜನ, ವಿವಿಧ ತಳಿಗಳ ಪರಿಚಯ.. ಹೀಗೆ ಅನ್ಯಾನ್ಯ ಉದ್ದೇಶಗಳು.
ಗೋವಿನ ರಕ್ಷಣೆಗಾಗಿ ‘ಗೋಶಾಲೆಗಳ ನಿರ್ಮಾಣ’ ಹಾಗೂ ಅದರ ನಿರ್ವಹಣೆಯು ಪುಣ್ಯದ ಕೆಲಸ. ವೈಯಕ್ತಿಕವಾಗಿ, ಸರಕಾರಿ ಪ್ರಣೀತ, ಕೆಲವು ಸಂಸ್ಥೆಗಳು ಗೋಶಾಲೆಯನ್ನು ಶಿಸ್ತುಬದ್ಧವಾಗಿ ನಡೆಸುತ್ತಿದ್ದಾರೆ. ಕಟುಕರ ಕೈಯಿಂದ ಗೋವಿನ ರಕ್ಷಣೆ, ಪೋಷಣೆ ಹಾಗೂ ದೇಸಿ ತಳಿಗಳ ಸಂವರ್ಧನೆಗಳು ಬದ್ಧತೆಯಿಂದ ನಡೆಯುತ್ತಿವೆ. ಕರ್ನಾಟಕ ಉಚ್ಚನ್ಯಾಯಾಲಯವು ಗೋ ಸಂಬಂಧಿ ವಿಚಾರಗಳಿಗೆ ಸಲಹೆಯನ್ನು ನೀಡಿರುವುದು  ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. “ಪ್ರತೀ ಗ್ರಾಮದಲ್ಲೂ ಗೋಶಾಲೆ ತೆರೆಯಬೇಕು. ಜಿಲ್ಲೆ ಹಾಗೂ ತಾಲೂಕು ಮಟ್ಟವಲ್ಲದೆ ಗ್ರಾಮ ಮಟ್ಟದಲ್ಲೂ ಗೋಶಾಲೆ ತೆರೆಯಬೇಕು.”
ಅಮೇರಿಕಾ ಮೂಲದ ‘ಪೇಟಾ’ ಸಂಸ್ಥೆಯು ಹಿಂದೊಮ್ಮೆ “ಪಶುಗಳಿಂದ ಹಾಲು ಕರೆಯುವುದು ಒಂದು ಕ್ರೂರ ವ್ಯವಸ್ಥೆ. ಅದೊಂದು ಹಿಂಸೆ. ಅದನ್ನು ತಡೆಯಲು ಸಸ್ಯಾಧಾರಿತವಾದ ಹಾಲು ಉತ್ಪಾದಿಸಬೇಕು” ಎಂದು ಅಮುಲ್ ಸಂಸ್ಥೆಗೆ ಪತ್ರ ಬರೆಯುತ್ತದೆ. ಈ ವಿದ್ಯಮಾನವು ಹೈನುಗಾರಿಕೆಯನ್ನು ನಂಬಿದ ಕೃಷಿಕರ ಹುಬ್ಬೇರುವಂತೆ ಮಾಡಿತ್ತು. ಯಾವುದು ಸಸ್ಯಜನ್ಯ ಹಾಲು? ಸೋಯಾಬೀನ್, ಬಾದಾಮಿ, ಓಟ್ಸ್, ಗೇರುಬೀಜ, ಅಕ್ಕಿ, ತೆಂಗಿನಕಾಯಿಗಳಿಂದ ತಯಾರಿಸಿದ ಹಾಲು ಎನ್ನಲಾಗಿದೆ. ಈ ಪತ್ರದ ಹಿಂದೆ ವ್ಯವಸ್ಥಿತವಾದ ಹುನ್ನಾರವಡಗಿದೆ. ಭಾರತವು ಪಶು ಆಧಾರಿತವಾದ ಕೃಷಿ ವ್ಯವಸ್ಥೆಯನ್ನು ಪಾರಂಪರಿಕವಾಗಿ ಹೊಂದಿದೆ. ಹಾಲು, ಬೆಣ್ಣೆ, ಮೊಸರು, ತುಪ್ಪ; ಸ್ಲರಿ, ಗೊಬ್ಬರ, ಬಯೋಗ್ಯಾಸ್.. ಹೀಗೆ ಹತ್ತಾರು ಉಪಯೋಗಗಳು. ಹೈನುಗಾರಿಕೆಯು ಲಕ್ಷಾಂತರ ಮಂದಿಯ ಜೀವನೋಪಾಯ. ಚಿಕ್ಕ ಪುಟ್ಟ ಸಮಸ್ಯೆಗಳ ಹೊರತಾಗಿ, ಅಲ್ಲೋ ಇಲ್ಲೋ ಕೆಲವು ಅಪವಾದಗಳನ್ನು ಬಿಟ್ಟರೆ ಹೈನುಗಾರಿಕೆಯಲ್ಲಿ ಗೊಣಗಾಡಿಕೊಂಡು ತೊಡಗಿಸಿಕೊಂಡವರಿಲ್ಲ. ಪಶುಪಾಲನೆಯ ಮೇಲಿನ ಪ್ರೀತಿಯೂ ಕಾರಣ. ಹೈನುಗಾರಿಕೆಯು ಕೃಷಿ, ಕೃಷಿಕರ ಪಾಲಿನ ಕಾಮಧೇನು. ಪೇಟಾ ಸಂಸ್ಥೆ ಹೇಳಿದಂತೆ ‘ವೀಗನ್ ಮಿಲ್ಕ್’ ಕಾಮಧೇನುವಾಗಲಾರದು. ಎಲ್ಲಕ್ಕಿಂತ ಮುಖ್ಯವಾಗಿ ಹೈನುಗಾರಿಕೆಯಲ್ಲಿ ಭಾವನೆ, ನಂಬುಗೆ, ಶ್ರದ್ಧೆಗಳು ಮಿಳಿತಗೊಂಡಿರುವುದು ಭಾರತೀಯ ಸಂಸ್ಕಾರ. ಅದು ಬೇರೆಡೆ ಸಿಗಲಾರದು.
ಕೋವಿಡ್ ಸಂದರ್ಭದಲ್ಲಿ ದೇಶಾದ್ಯಂತ ಒದಗಿ ಬಂದ ‘ಕಾಮಧೇನು’ಗಳು ಅಸಂಖ್ಯಾತ. ಸಮುದಾಯ ಮಟ್ಟದ ಸೇವೆಯು ಶ್ಲಾಘನೀಯವಾದುದು. ಅದನ್ನು ಹೇಗೆ ಪ್ರಾಮಾಣಿಕವಾಗಿ ಸ್ವೀಕರಿಸಿದ್ದೇವೆ ಮತ್ತು ಅರ್ಥಮಾಡಿಕೊಂಡಿದ್ದೇವೆ ಎಂಬ ಮಾನದಂಡದಲ್ಲಿ ‘ಕಾಮಧೇನು’ವಿಗೆ ಅರ್ಥ. ಫೇಸ್‍ಬುಕ್, ವಾಟ್ಸಾಪ್ಪಿನಲ್ಲಿ ಚಿತ್ರಗಳನ್ನು ಅಪ್‍ಲೋಡ್ ಮಾಡುವುದರಿಂದ ದೀಢೀರ್ ಕಾಮಧೇನು ಆದವರಿದ್ದಾರೆ! ಅಲ್ಲಿ ಲೈಕ್‍ಗಳು, ಕಮೆಂಟ್‍ಗಳು ಸಿಗಬಹುದಷ್ಟೇ. ಆತ್ಮತೃಪ್ತಿ ಸಿಗಲಾರದು. ಪುಣ್ಯವೂ ಸಿಗದು.
ನನ್ನ ವೈಯಕ್ತಿಕ ಅನುಭವವೊಂದನ್ನು ಹಂಚಿಕೊಂಡರೆ ಬೆನ್ನು ತಟ್ಟಿದಂತಾಗದು. ಒಂದೂವರೆ ವರುಷದ ಹಿಂದೆ ಮಗಳ ಮದುವೆ ನಡೆಯಿತು. ಆ ಹೊತ್ತಿನಲ್ಲಿ ಸಮ್ಮನಸ್ಸಿನ ಸ್ನೇಹಿತರು, ಆಪ್ತರು, ‘ನಾನು ವಿನಂತಿಸದೆ’ ಆರ್ಥಿಕ ಸಹಕಾರವನ್ನು ಕೈತುಂಬಾ ನೀಡಿದ್ದರು. ಒಂದಿಬ್ಬರಂತೂ ದೊಡ್ಡ ಮೊತ್ತವನ್ನು ನೀಡಿ ‘ನೀವಿದನ್ನು ಕೊಡಬೇಕಾಗಿಲ್ಲ’ ಎಂದು ಕಿವಿಯಲ್ಲಿ ಹೇಳಿದರು. ಈ ಸಮ್ಮನಸ್ಸಿಗೆ ಬೆಲೆ ಕಟ್ಟಲಾದೀತೆ? ಆ ಕಾಲಘಟ್ಟದಲ್ಲಿ ಇವರೆಲ್ಲಾ ನನ್ನ ಪಾಲಿನ ‘ಕಾಮಧೇನು’. ವಿವಾಹ ಬಳಿಕವೂ ಕಾಳಜಿಯಿಂದ ‘ಹೇಗಾಯಿತು, ಖರ್ಚು ಎಷ್ಟಾಯಿತು. ಏನಾದರೂ ಸಹಕಾರ ಬೇಕೇ’ ಎಂದು ವಿಚಾರಿಸಿದವರೂ ಇದ್ದರು, ಏನೂ ಸಂಬಂಧವಿಲ್ಲದವರಂತೆ ಮೌನಕ್ಕೆ ಜಾರಿದವರೂ ಇದ್ದರು!
ಯಕ್ಷಗಾನ ರಂಗಕ್ಕೆ ಬಂದಾಗ ಉಡುಪಿಯ ಕಲಾರಂಗ, ಮಂಗಳೂರಿನ ಯಕ್ಷಧ್ರುವ ಪಟ್ಲ ಪೌಂಡೇಶನ್‍ನವರು ಸೂರಿಲ್ಲದ ಅಶಕ್ತರಿಗೆ ‘ಕಾಮಧೇನು’ವಾಗಿ ಒದಗಿ ಬರುತ್ತಿದ್ದಾರೆ. ಸೂರು ನಿರ್ಮಿಸಿಕೊಟ್ಟು ಬದುಕಿಗೆ ಆಸರೆಯಾಗಿದ್ದಾರೆ. ಇದು ದೇವರು ಮೆಚ್ಚುವ ಕೆಲಸ. ಇದರಿಂದಾಗಿ ಹಲವು ಮಂದಿ ಇಳಿ ವಯಸ್ಸಿನಲ್ಲಿ ನೆಮ್ಮದಿ ಪಡುವಂತಾಗಿದೆ.
ಸಾಧಕರನ್ನು ಸಂಮಾನಿಸುವದು ಸುಶಿಕ್ಷಿತ ಸಮಾಜದ ಬದ್ಧತೆ. ಅನೇಕ ಸಾಧಕರಿಗೆ ಪ್ರಶಸ್ತಿ, ಸಂಮಾನ ಪ್ರಾಪ್ತವಾಗುವುದು ಖುಷಿ. ಈ ಸಂದರ್ಭದಲ್ಲಿ ಸಂಮಾನಿತರ ಗುಣಕಥನ ಫಲಕವನ್ನು ಪ್ರದಾನಿಸುವುದು ವಾಡಿಕೆ. ಜತೆಗೆ ಅಭಿನಂದನಾ ಭಾಷಣಗಳು ಸಾಧಕರ ಸಾಧನೆಗಳಿಗೆ ಕನ್ನಡಿ ಹಿಡಿಯುತ್ತದೆ. ಇವರ ಸಾಧನೆ, ಕೊಡುಗೆ, ಅಶಕ್ತರಿಗೆ ಸಹಾಯ, ಸಾಮಾಜಿಕೆ ಕೆಲಸಗಳಿಗೆ ಗೌರವಿಸಿ, ‘ಕಾಮಧೇನು’ ಎನ್ನುವ ವಿಶೇಷಣ ಯಾ ಬಿರುದನ್ನು ನೀಡಲಾಗುತ್ತದೆ. ಇಲ್ಲೊಂದು ಮಾತನ್ನು ನೆನಪಿಸಲೇ ಬೇಕು. ಇದು ಯಾರನ್ನೂ ‘ಟಾರ್ಗೆಟ್’ ಮಾಡಿದ್ದಲ್ಲ. ಸಂಘಟಕರನ್ನು ಪೀಡಿಸಿ, ಒತ್ತಾಯಿಸಿ, ಇತರರಿಂದ ಹೇಳಿಸಿ, ತಾನೇ ಸ್ವತಃ ‘ಸಂಮಾನ ಪತ್ರ’ವನ್ನು ತಯಾರಿಸಿ, ಅದಕ್ಕೆ ಚೌಕಟ್ಟು ಹಾಕಿಸಿ, ಕಾರ್ಯಕ್ರಮದ ಸ್ಥಳಕ್ಕೆ ಸಕಾಲಕ್ಕೆ ತಲಪಿಸುವ ಹೊಣೆಹೊತ್ತ ‘ಸಂಮಾನ ಶೂರ’ರು ಇದ್ದಾರೆ! ಅವರ ಸಂಮಾನ ಪತ್ರದಲ್ಲೊಮ್ಮೆ ಕಣ್ಣುಹಾಯಿಸಿದರೆ, ‘ಕಾಮಧೇನು’ವಿನ ಕಣ್ಣಲ್ಲಿ ಕಣ್ಣೀರು ಜಿನುಗದೆ  ಇರದು!
‘ದೇವಾಲಯಗಳು ಸರಕಾರಕ್ಕೆ ಕಾಮಧೇನುಗಳಾಗುತ್ತಿವೆ’ ಪತ್ರಿಕೆಯ ವಾಚಕರ ವಾಣಿಯಲ್ಲಿ ಪ್ರಕಟವಾದ ಕಿರು ಬರಹದ ಶೀರ್ಷಿಕೆಯಲ್ಲಿ ‘ಕಾಮಧೇನು’ ಇದ್ದಾಳೆ! ಸರಕಾರಿ ಸುಪರ್ದಿಯಲ್ಲಿರುವ ದೊಡ್ಡ ದೇವಾಲಯದ ಹುಂಡಿಗೆ ಹಾಕಿದ ಕಾಣಿಕೆಗಳನ್ನು ಸರಕಾರ ಬಳಸಿಕೊಳ್ಳುತ್ತವೆ, ಹಾಗಾಗಬಾರದು ಎನ್ನುವ ಆಶಯದ ಬರಹ. ಇಲ್ಲಿ ಹುಂಡಿಗಳ ಹಣಗಳು ಸರಕಾರಕ್ಕೆ ಕಾಮಧೇನು! ಬೇಕಾದಾಗ ಕರೆಯಬಹುದಾದ ಕ್ಷೀರ!
ಅರ್ಥಿಕ ಸಂಕಷ್ಟದ ಕಾಲದಲ್ಲಿ ನೆರವಾಗುವುದು ಮಾನವ ಧರ್ಮ. ಈ ನೆರವಿನ ಹಿಂದೆ ಆತ್ಮಾರ್ಥದ ಮನಸ್ಸಿರಬೇಕು. ನಿರೀಕ್ಷೆಯಿರಕೂಡದು.
ಶ್ರೀಗುರು ರಾಘವೇಂದ್ರ ಸ್ವಾಮಿಯವರನ್ನು ಕಲಿಯುಗದ ಕಲ್ಪತರು, ಕಾಮಧೇನು, ಕಲ್ಪವೃಕ್ಷ ಎಂದು ಕರೆಯುತ್ತಾರೆ. “ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||”
ಗೋವಿನ ಕುರಿತಾಗಿ ಅನೇಕ ನಲ್ನುಡಿಗಳು ಜೀವನದೊಳಗೆ ಹಾಸು ಹೊಕ್ಕಾಗಿವೆ. ಕೆಲವು ಇಲ್ಲಿವೆ. “ಗೋವಿನಿಂದ ಪರಿಸರಕ್ಕೆ ವಿಷವಿಲ್ಲ. ಭೂಮಿತಾಯಿಗೆ ಭಯವಿಲ್ಲ. ಗೋವಿನ ದರ್ಶನ ಪುಣ್ಯಪ್ರದ, ಗೋವಿನ ಸ್ಪರ್ಶವು ಮಂಗಳಕರ. ದೇಶದ ಬೆನ್ನೆಲುಬು ಕೃಷಿ, ಕೃಷಿಯ ಬೆನ್ನೆಲುಬು ರೈತ, ರೈತರ ಬೆನ್ನೆಲುಬು ಗೋವು. ಗೋವು ಇಲ್ಲದಿದ್ದರೆ ಸಾವು. ಗೋವುಗಳು ಮರಳುವ ಹೊತ್ತು ಗೋಧೂಳಿ ಸಮಯ, ನಮಗೆ ಈ ಧೂಳು ಅತಿ ಪವಿತ್ರ. ಮುದಿ ಗೋವುಗಳನ್ನು ಮಾರುವುದು, ವೃದ್ಧಾಪ್ಯ ತಂದೆ-ತಾಯಿಗಳನ್ನು ಮನೆಯಿಂದಾಚೆ ಕಳುಹಿಸುವುದು – ಎರಡೂ ಒಂದೇ. ಗೋಸಂಪತ್ತು, ಭೂ ಸಂಪತ್ತು, ಜಲ ಸಂಪತ್ತು ಇಲ್ಲದೆ ಲೋಕ ಉಳಿಯದು.” ನಮ್ಮ ಬದುಕಿನ ಜಂಜಾಟದಲ್ಲಿ ‘ಕೃತಜ್ಞತೆಯಿಂದ, ಕೆಲವೊಮ್ಮೆ ಕೃತಘ್ನತೆಯಿಂದ’ ಟಂಕಿಸುತ್ತೇವಲ್ಲಾ.. ಆ ‘ಕಾಮಧೇನು’ ಯಾರು?
ಕಾಮಿಸಿದ್ದನ್ನು ನೀಡುವ ಕಾಮಧೇನು: ದೇವಾಸುರರಲ್ಲಿ ನಡೆದ ‘ಸಮುದ್ರ ಮಥನ’ದಲ್ಲಿ ಹುಟ್ಟಿದ ಸುವಸ್ತುಗಳಲ್ಲಿ ಕಾಮಧೇನು ಒಂದು. ಇದಕ್ಕೆ ಕಾಮಿಸಿದ್ದನ್ನು ನೀಡುವ ಗುಣ. ದೇವೇಂದ್ರನು ಕಾಮಧೇನುವಿನ ಪಾಲಕ. ಅದಕ್ಕೊಂದು ಪವಿತ್ರ ಸ್ಥಾನ,  ಗೌರವವಿದೆ. ಪೂಜ್ಯ ಭಾವವಿದೆ.
ಕಾಮಧೇನುವಿನಲ್ಲಿ ಮುಕ್ಕೋಟಿ ದೇವತೆಗಳ ಸನ್ನಿಧಾನವಿದೆ. ಒಂದೊಂದು ಅವಯವಗಳಲ್ಲಿ ದೇವತಾ ಸಾನ್ನಿಧ್ಯ. ‘ಇದರ ಬಣ್ಣ ಬಿಳುಪು. ನಾಲ್ಕು ವೇದಗಳೇ ಅದರ ಪಾದಗಳು. ನಾಲ್ಕು ಪುರುಷಾರ್ಥಗಳು ಇದರ ಕೆಚ್ಚಲು.
ವಸಿಷ್ಠ ಮಹರ್ಷಿಗಳು ಕಾಮಧೇನುವಿನಿಂದ ತನ್ನ ಕರ್ಮಕ್ಕೆ ಬೇಕಾದ ಸುವಸ್ತುಗಳು, ಅತಿಥಿ ಸತ್ಕಾರಕ್ಕಿರುವ ವ್ಯವಸ್ಥೆಗಳನ್ನು ಮಾಡಿದ ಉಲ್ಲೇಖವು ಪುರಾಣದಲ್ಲಿದೆ. ಕೌಶಿಕ ರಾಜನು ತನ್ನ ಪರಿವಾರದೊಂದಿಗೆ ಬೇಟೆಗೆ ಬಂದು ವಸಿಷ್ಠರ ಆಶ್ರಮದಲ್ಲಿ ವಿಶ್ರಮಿಸಿ, ಹೊಟ್ಟೆ ತಂಪು ಮಾಡಿಕೊಳ್ಳುತ್ತಾನೆ. ಇದಕ್ಕೆ ಕಾರಣವಾದ ಹೋಮಧೇನು ಯಾ ಕಾಮಧೇನುವನ್ನು ಬಯಸುತ್ತಾನೆ. ವಸಿಷ್ಠರಿಂದ ನಿರಾಕರಣೆ. ರಾಜ ಕೌಶಿಕ ಮತ್ತು ವಸಿಷ್ಠರೊಳಗೆ ಯುದ್ಧ ನಡೆಯುತ್ತದೆ. ವಸಿಷ್ಠರ ಬಳಿಯಿದ್ದ ಬ್ರಹ್ಮದಂಡದಿಂದಾಗಿ ತನಗೆ ಸೋಲಾಯಿತೆಂದು ನಿಶ್ಚಯಿಸಿ, ತಪಸ್ಸಿಗೆ ತೆರಳುತ್ತಾನೆ. ಈತನೇ ಮುಂದೆ ಬ್ರಹ್ಮರ್ಷಿಯಾಗುತ್ತಾನೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…

3 hours ago

ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…

4 hours ago

ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ

ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…

4 hours ago

2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು

ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…

4 hours ago

ಕುಕ್ಕುಟ ಸಂಜೀವಿನಿ ಯೋಜನೆ : ಉಚಿತ ಕೋಳಿ ಮರಿ ಶೇಡ್ ನಿರ್ಮಾಣಕ್ಕೆ ಆರ್ಥಿಕ ನೆರವು

ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…

4 hours ago

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

21 hours ago