ಬದುಕು ಪುರಾಣ  | ಕಣ್ಣೀರನ್ನು ಒರೆಸುವ ಬೆರಳು

September 7, 2025
7:46 AM
ಶ್ರೀಮಂತಿಕೆಯು ಬದುಕಿನ ಯೋಗ. ಅದನ್ನು ಅನುಭವಿಸುವುದು ಯೋಗ್ಯತೆ. ಯೋಗ ಮತ್ತು ಯೋಗ್ಯತೆಯ ಅರ್ಥವನ್ನರಿಯದ ಮಂದಿಗೆ ಶ್ರೀಮಂತಿಕೆಯು ‘ಅಮಲು’. 
ಶ್ರೀಮಂತರು ಕುಬೇರರಲ್ಲ, ಅತಿ ಶ್ರೀಮಂತರು ಕುಬೇರರು. ಶ್ರೀಮಂತರು ಎಲ್ಲೆಡೆಯಿರುತ್ತಾರೆ. ಕುಬೇರರು ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವೇ ಮಂದಿ. ಸಾಮಾನ್ಯವಾಗಿ ಉಳ್ಳವರನ್ನು ‘ಕುಬೇರ’ರೆಂದು ಕರೆಯುವುದು ವಾಡಿಕೆ. ಈ ಪದವು ವಾಸ್ತವ ದೃಷ್ಟಿಕೋನ ಹಾಗೂ ವ್ಯಂಗ್ಯಾತ್ಮಕವಾಗಿ ಬಳಸಲ್ಪಡುವುದು ಹೆಚ್ಚು. ಇಲ್ಲಿ ಕುಬೇರರನ್ನು ‘ಉಳ್ಳವರೆಂದು’ ಅರ್ಥಮಾಡಿಕೊಳ್ಳೋಣ.
ಶ್ರೀಮಂತಿಕೆಯು ಹಿರಿಯರ ಬಳುವಳಿಯಾಗಿ, ಸ್ವಯಾರ್ಜಿತವಾಗಿ, ಶ್ರಮದ ಸಂಪತ್ತಾಗಿ, ದಾನವಾಗಿ.. ಹೀಗೆ ವಿವಿಧ ಸ್ವರೂಪಗಳಲ್ಲಿ ಪ್ರಕಟವಾಗುತ್ತವೆ. ಅದು ‘ನಮ್ಮದಾದಾಗ’ ಆ ಸಂಪತ್ತು ಪ್ರದರ್ಶನದ ಉಪಾಧಿಯಾಗಕೂಡದು. ತಾನು, ತನ್ನ ಕುಟುಂಬವು ಅನುಭೋಗಿಸಲು ದೇವರು ನೀಡಿದ ವರ. ಅದು ಬದುಕಿಗೆ ಶಾಪವಾಗದಂತೆ ಎಚ್ಚರ ಬೇಕು. ಸಹೃದಯಿಗಳಲ್ಲಿ ದಾನ ರೂಪದಲ್ಲೂ ಶ್ರೀಮಂತಿಕೆ ವ್ಯಕ್ತವಾಗುತ್ತದೆ. ಹೀಗೆ ದಾನ ಮಾಡುವಾಗ ‘ಶ್ರೀಮಂತಿಕೆ’ಯು ಸಂಭ್ರಮಿಸಿದರೆ ದಾನವು ಅರ್ಥಶೂನ್ಯವಾಗುತ್ತದೆ.
ಕುಬೇರ ಯಾ ಶ್ರೀಮಂತಿಕೆಯು ‘ತೋರಿಕೆಯ ವಸ್ತು’ವಾಗಿ ಕಣ್ಣು ಕುಕ್ಕುವುದು ಹೆಚ್ಚು. ಕೈಗೆ ಬಳೆ, ಕೊರಳಲ್ಲಿ ಸರಪಳಿಯಂತಹ ಚಿನ್ನದ ಮಾಲೆ; ಹತ್ತು ಬೆರಳಿಗೆ ಉಂಗುರ ಧರಿಸಿ ಸಾಮಾಜದಲ್ಲಿ ಫೋಸ್ ಕೊಟ್ಟರೆ ಅದು ಶ್ರೀಮಂತಿಕೆಯ ಅಣಕ, ಅವಮಾನ. ಇಂತಹ ಸಂದರ್ಭಗಳಲ್ಲಿ ಹೊಗಳಿಕೆ ರಾಚಿ ಬರಬಹುದು. ಆದರೆ ಜನರ ಮನದಲ್ಲಿ ಗೌರವದ ಸ್ಥಾನ ಪಡೆಯಲಾರ. ಸಮಾರಂಭಗಳಲ್ಲಿ ಕ್ಲಿಕ್ಕಿಸುವ ಚಿತ್ರಗಳಲ್ಲಿ ಮುಖಕ್ಕಿಂತ ಹೆಚ್ಚು ಧರಿಸಿದ ಚಿನ್ನವು ಹೊಳೆಯುತ್ತದೆ. ಹತ್ತು ಜನರ ಮಧ್ಯೆ ಎದ್ದು ಕಾಣಬೇಕೆಂಬ ಹಪಾಹಪಿ. ತಪ್ಪಲ್ಲ ಬಿಡಿ. ತಾನು ಗಳಿಸಿದ್ದೋ, ಪಡೆದುದೋ ಇರಬಹುದು. ಆಗ ಆರ್ಥಿಕವಾಗಿ ತನಗಿಂತ ಕೆಳಗಿನವರನ್ನು ಕೀಳಾಗಿ ಕಾಣುವ ಮನಸ್ಥಿತಿಯು ಅರಿವಿಲ್ಲದೇ ಬಂದುಬಿಡುತ್ತದೆ. ಕಾಂಚಾಣದ ಮಹಿಮೆ.
ನನ್ನ ವೃತ್ತಿ, ಕಲಾ ಹವ್ಯಾಸಿ ಬದುಕಿನಲ್ಲಿ ಅನೇಕ ಶ್ರೀಮಂತರ ಸ್ನೇಹವನ್ನು ಸಂಪಾದಿಸಿದ್ದೇನೆ. ಅದು ನನ್ನ ಬದುಕಿನ ಸ್ನೇಹ ಶ್ರೀಮಂತಿಕೆ. ಹಾಗೆಂದು ಅವರೆದುರು ಎಂದೂ ಹಲ್ಲುಗಿಂಜಲಿಲ್ಲ. ಸಮಯ ಸಾಧಿಸಿ ಕಿಸೆ ತುಂಬಿಸಿಕೊಳ್ಳಲಿಲ್ಲ. ಅಪ್ಪಟ ಸ್ನೇಹ, ವಿಶ್ವಾಸವನ್ನು ವಿನಿಮಯ ಮಾಡಿಕೊಂಡಿದ್ದೆ. ಈ ಸ್ನೇಹಕ್ಕೆ ನನ್ನ ಸರಳತನ ಅಡ್ಡಿಯಾಗಲಿಲ್ಲ. ಸರಳತನ ಅಂದರೆ ‘ದರಿದ್ರ ಸ್ಥಿತಿ’ ಎನ್ನುವ ಅರ್ಥವಲ್ಲ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..
ಕಳೆದ ದಶಂಬರದಲ್ಲಿ ಪುತ್ತೂರಿನ ಗಿಡಗೆಳೆತನ ಸಂಘ ‘ಸಮೃದ್ಧಿ’ಯು ದೀರ್ಘ ಒಡನಾಟದ ಕಾರಣದಿಂದ ನನ್ನನ್ನು ಸಂಮಾನಿಸಿತ್ತು. ಪುತ್ತೂರಿನ ಸಾವಯವ ಕೃಷಿಕ ಎ.ಪಿ.ಸದಾಶಿವರ ಮನೆಯಂಗಳದಲ್ಲಿ ನಡೆದ ಕಾರ್ಯಕ್ರಮವು ತುಂಬಾ ಅರ್ಥವತ್ತಾಗಿತ್ತು. “ನನ್ನ ಬದುಕಿನಲ್ಲಿ ಅನೇಕ ಮಂದಿ ಕೃಷಿಕರ ಸ್ನೇಹ, ವಿಶ್ವಾಸವನ್ನು ಸಂಪಾದಿಸಿದೆ. ಬದುಕಿನಲ್ಲಿ ಸೋತಾಗ ಒಬ್ಬೊಬ್ಬ ಕೃಷಿಕರ ಮುಂದೆ ನಿಂತರೆ ಸಾಕು, ಮನೆಯಿಂದಾಚೆ ತಳ್ಳದೆ ಮನೆಯೊಳಗೆ ಸೇರಿಸಿಕೊಳ್ಳುವಷ್ಟು ವಿಶ್ವಾಸ ಪಡೆದಿದ್ದೇನೆ. ಬದುಕಿನ ಇಳಿವಯೋಮಾನದಲ್ಲಿರುವ ನನಗೆ ಇದಕ್ಕಿಂತ ದೊಡ್ಡ ಭಾಗ್ಯ ಇನ್ನೇನಿದೆ?” ಎಂದು ಸಂಮಾನಕ್ಕೆ ಕೃತಜ್ಞತೆ ಹೇಳಿದಾಗ ಪ್ರಶಂಸಿಸಿದ ಮನಸ್ಸುಗಳು ಹತ್ತಾರು.
ಈಚೆಗೆ ಒಬ್ಬರು ‘ನೀವ್ಯಾಕೆ ಕಾರು ಖರೀದಿಸಲಿಲ್ಲ. ವಾಹನ ಇಲ್ಲದಿದ್ದರೆ ಬೆಲೆಯಿಲ್ಲ, ಮರ್ಯಾದೆಯಿಲ್ಲ’ ಎಂದುಬಿಟ್ಟರು. “ಹೌದಲ್ಲಾ.. ಖರೀದಿಸಿದರೆ ಎಲ್ಲಿ ಪಾರ್ಕಿಂಗ್ ಮಾಡುವುದು” ಎಂದು ತಮಾಶೆಯಾಗಿಯೇ ಹೇಳಿದೆ. ಈ ಮಾತು ಮನದೊಳಗೆ ರಿಂಗಣಿಸುತ್ತಿತ್ತು. ಮತ್ತಿನ ದಿವಸಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಬಾಡಿಗೆ ಕಾರಿನಲ್ಲಿ, ಸ್ನೇಹಿತರ ಕಾರಿನಲ್ಲಿ ಕುಟುಂಬ ಸಹಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ. “ನೀವು ಕಾರಿನಲ್ಲಿ ಬಂದ್ರಾ” ಎಂದು ಯಾರೊಬ್ಬರೂ ಕೇಳಲಿಲ್ಲ. ‘ಇನ್ನೊಬ್ಬರು ನಮ್ಮನ್ನು ನೋಟ್ ಮಾಡ್ತಾರೆ’ ಎನ್ನುವುದು ಭ್ರಮೆಯಷ್ಟೇ.
ಇನ್ನೊಂದು ವರ್ಗದ ಜನರಿದ್ದಾರೆ. ಅವರ ಆರ್ಥಿಕ ಗಳಿಕೆ ಅಷ್ಟಕ್ಕಷ್ಟೇ ಇರುತ್ತದೆ. ಆದರೆ ಸಾಮಾಜಿಕವಾಗಿ ಅವರು ಶ್ರೀಮಂತರು. ಬೈಕು, ಕಾರು, ವೇಷಭೂಷಣ, ಎರಡೆರಡು ಮೊಬೈಲು ಇಟ್ಟುಕೊಂಡು ಜಿಗ್ಗನೆ ಸುತ್ತಾಡುತ್ತಿರುತ್ತಾರೆ. ಅವರ ಬ್ಯಾಂಕ್ ಬ್ಯಾಲೆನ್ಸ್ ನೋಡಿದರೆ ದಿಗಿಲಾಗುತ್ತೀರಿ! ನಾಲ್ಕಂಕೆಯೂ ಮೀರಿರುವುದಿಲ್ಲ. ಎಲ್ಲವೂ ಬ್ಯಾಂಕ್ ಸಾಲದಿಂದಾಗಿ ದಿಢೀರ್ ಶ್ರೀಮಂತರಾದುದು! ಸ್ವಲ್ಪ ಸಮಯದ ಬಳಿಕ ಬ್ಯಾಂಕಿಗೆ ಕಂತು ಕಟ್ಟದೆ ಹರಾಜಾಗುವಾಗ ವ್ಯಕ್ತಿಯೇ ನಾಪತ್ತೆ!
ಒಂದು ಕಾಲಘಟ್ಟವಿತ್ತು. ಹೊಸ ವಾಚ್ ಧರಿಸಿದಾಗ ನೋಡುವವರು, ನೋಡಲು ಬರುವವರ ಸಂಖ್ಯೆ ದೊಡ್ಡದು. ಹೊಸ ವಾಚ್ ಧರಿಸುವುದು ಪ್ರತಿಷ್ಠೆಯ ಸಂಕೇತ. ಖುಷಿಯ ಸಂಗತಿ. ಟಿವಿ, ಡಿಶ್‍ಗಳನ್ನು ಬೆರಗುಕಣ್ಣುಗಳಿಂದ ನೋಡಿದ ದಿನಮಾನಗಳಿದ್ದುವು. ಮನೆಗೆ ಟೆಲಿಫೋನ್ ಸಂಪರ್ಕಗೊಂಡಾಗ ಸಂತೋಷಕ್ಕೆ ಪಾರವೇ ಇಲ್ಲ. ಟ್ರಂಕ್ ಕಾಲ್ ಮೂಲಕ ನೂರಾರು ಮೈಲು ದೂರದ ಪರಿಚಿತರೊಂದಿಗೆ ಮಾತನಾಡುವ ವ್ಯವಸ್ಥೆಗಳು ವಿಸ್ಮಯವಾಗಿದ್ದುವು. ಹಳ್ಳಿಗಳಲ್ಲಿ ಇದನ್ನೆಲ್ಲಾ ಹೊಂದಿರುವವರು ಶ್ರೀಮಂತರು ಮಾತ್ರ. ಬರುಬರುತ್ತಾ ಆರ್ಥಿಕ ಹೊಂದಾಣಿಕೆಗಳು ವಿಸ್ತಾರವಾಗುತ್ತಿದ್ದಂತೆ ಮನೆಮನೆಗಳಲ್ಲಿ ಟಿವಿ. ಫೋನ್, ರೇಡಿಯೋ ಬಂದುವು. ಎಲ್ಲರೂ ಸಂಪನ್ಮೂಲದಲ್ಲಿ ಶ್ರೀಮಂತರಾದರು!
ಈಗ ‘ಕುಬೇರ’ ಪದದ ಆರ್ಥವ್ಯಾಪ್ತಿ ಎನ್ನುವುದಕ್ಕಿಂತಲೂ ಗ್ರಹಿಕೆಯು ಹಿರಿದಾಗಿದೆ. ಹತ್ತಾರು ಸ್ಥಳಗಳಲ್ಲಿ ಎಕ್ರೆಗಟ್ಟಲೆ ಜಾಗ, ತೋಟ, ಅಪಾರ್ಟ್‍ಮೆಂಟ್‍ಗಳು, ಪ್ಲ್ಯಾಟ್ಸ್‍ಗಳು, ಸಂಸ್ಥೆಗಳು, ಮಾಲ್‍ಗಳಿದ್ದರೆ ‘ಕುಬೇರ’ರು. ದೂರ ಯಾಕೆ ನೋಡಬೇಕು. ನಮ್ಮ ಮಧ್ಯೆಯೇ ಇರುತ್ತಾರೆ. ಇಷ್ಟೆಲ್ಲಾ ಸಂಪತ್ತಿದ್ದು, ಶ್ರೀಮಂತಿಕೆಯ ಅಮಲನ್ನು ಏರಿಸಿಕೊಳ್ಳದೆ ದಾನ-ಧರ್ಮಗಳಲ್ಲಿ ತೊಡಗಿಸಿಕೊಂಡವರಿದ್ದಾರೆ. ಕುಬೇರನಿಗೆ ಸಂಪತ್ತು ಹೇಗೆ ಬಂತೆಂಬ ಚಿಂತೆ ದಾನ ಪಡೆಯುವವನಿಗೆ ಯಾಕೆ? ಹಾಲು ಒಯ್ಯಲು ಬಂದವನಿಗೆ ದನದ ಕ್ರಯ ಯಾಕೆ? ಈಗಂತೂ ರಾಜಕೀಯ ಸೇರಿಬಿಟ್ಟರೆ ಕುಬೇರರಾಗಬಹುದಂತೆ. ಹೌದಾ, ಗೊತ್ತಿಲ್ಲ? ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ
ಹತ್ತಿರದಿಂದ ಕೆಲವರನ್ನು ನೋಡುತ್ತಿದ್ದೇನೆ. ಬಡತನದಲ್ಲಿ ಬಾಲ್ಯವನ್ನು ಕಳೆದಿರುತ್ತಾರೆ. ಕಷ್ಟದಲ್ಲಿ ವಿದ್ಯಾಭ್ಯಾಸವನ್ನು ಮಾಡಿರುತ್ತಾರೆ. ಉನ್ನತ ಶಿಕ್ಷಣ ಪಡೆದು ಉದ್ಯೋಗ ಪಡೆಯುತ್ತಾರೆ. ಕೆಲವರು ರಾಜಕೀಯ ಪ್ರವೇಶಿಸುತ್ತಾರೆ. ಭೂವ್ಯವಹಾರದಲ್ಲಿ ತೊಡಗಿಕೊಳ್ಳುತ್ತಾರೆ. ಹೀಗೆ ಬದುಕನ್ನು ಕಟ್ಟಿಕೊಂಡು ಮೇಲೆದ್ದು ಬಂದು ಶ್ರೀಮಂತರಾಗುವ ಹೊತ್ತಿಗೆ ಏರಿದ ಏಣಿಯನ್ನು ತಳ್ಳಿಬಿಡುತ್ತಾರೆ. ಆಗ ಜತೆಗಿದ್ದವರ ಹೆಸರು ಮರೆತು ಹೋಗುತ್ತದೆ, ಮೊಬೈಲ್ ಸಂಖ್ಯೆಗಳು ಡಿಲೀಟ್ ಆಗಿರುತ್ತವೆ. ಆಗಿನ ಅಂತಸ್ತಿನ ‘ಲೆವೆಲ್ಲಿನಂತೆ’ ಹೊಸ ಸ್ನೇಹಿತರು ಸೇರಿಕೊಳ್ಳುತ್ತಾರೆ. ‘ಬಡವನಿಗೆ ದಿಢೀರ್ ಶ್ರೀಮಂತಿಕೆ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದಂತೆ. – ಹಿರಿಯರ ಮಾತಿತು. ಎಷ್ಟೊಂದು ಅರ್ಥಪೂರ್ಣ.
ವಿದ್ವಾಂಸ ಉಪನ್ಯಾಸಕರೊಬ್ಬರು ಹೊಸ ಮನೆ ನಿರ್ಮಿಸಿ ಎರಡೋ ಮೂರೋ ವರುಷವಾಗಿತ್ತು. ಅವರ ಮನೆಯಲ್ಲೊಂದು ಪೂಜೆ. ಸಹಜವಾಗಿ ಆ ಪೂಜೆಗೆ ಒಬ್ಬರು ಪುರೋಹಿತರು ಸಾಕು. ಅಂದು ಐದು ಮಂದಿ ಪುರೋಹಿತರನ್ನು ಆಹ್ವಾನಿಸಿದ್ದರು. ಅದ್ದೂರಿ ಪೂಜೆ. ಮೃಷ್ಟಾನ್ನ ಭೋಜನ. ಪಂಕ್ತಿಯಲ್ಲಿ ಕುಳಿತವರಿಗೆ ಐನೂರು ರೂಪಾಯಿ ದಕ್ಷಿಣೆ! (ಹೊಸ ನೋಟನ್ನು ತೋರಿಸುವುದೇನು!) “ನೋಡಿ.. ನಿಮ್ಮಲ್ಲಿಗೆ ಪೌರೋಹಿತ್ಯಕ್ಕೆ ಬರುವುದು ನಮ್ಮ ಭಾಗ್ಯ ಎಂದು ಪುರೋಹಿತರು ಹರಸಿದ್ದಾರೆ”, ಮಾತು ಸೇರಿಸಿದರು. ಅವರು ಆರ್ಥಿಕ ಉದ್ದಿಮೆಯೊಂದನ್ನು ನಡೆಸುತ್ತಿದ್ದು ಶ್ರೀಮಂತರಾಗಿದ್ದರು. ಇಲ್ಲಿ ಪೂಜೆ ಮಹತ್ವವಲ್ಲ. ಅವರ ಶ್ರೀಮಂತಿಕೆಯನ್ನು ಹತ್ತು ಜನರಲ್ಲಿ ಪ್ರದರ್ಶಿಸುವುದು ಮುಖ್ಯವಾಗಿತ್ತು. ಶ್ರೀಮಂತಿಕೆ ಸದ್ದು ಮಾಡಬಾರದು.
ಈಚೆಗೆ ಜಾಲತಾಣವನ್ನು ಜಾಲಾಡುತ್ತಿದ್ದಾಗ ಭಾರತದ ಅಗ್ರಪಂಕ್ತಿಯ ಕುಬೇರರು ಮಾಡಿದ ದಾನಗಳ ಅಂಕಿಅಂಶ ಗಮನಿಸಿದೆ : “2020ರಲ್ಲಿ ವಿಪ್ರೋ ಸಂಸ್ಥಾಪಕ ಅಜಿಂ ಪ್ರೇಮ್‍ಜೀ ಫೌಂಡೇಶನ್, ವಿಪ್ರೋ, ವಿಪ್ರೋ ಎಂಟರ್‍ಪ್ರೈಸಸ್.. ಸಂಸ್ಥೆಗಳು ಕೊರೊನಾ ಸಂದರ್ಭದಲ್ಲಿ ಒಂದೂಕಾಲು ಕೋಟಿ ರೂಪಾಯಿ ದಾನ ಮಾಡಿವೆ.  ಇದು ವಿಪ್ರೋ ವಾರ್ಷಿಕವಾಗಿ ನೀಡುವ ದೇಣಿಗೆಗಳು ಮತ್ತು ಇತರ ನೆರವುಗಳ ಹೊರತಾದ ಮೊತ್ತ!”
‘ಲಕ್ಸುರಿ ಸ್ಪೇಸ್ : ಬಾಹ್ಯಾಕಾಶದಲ್ಲಿ ಕುಬೇರರ ದರ್ಬಾರು’ – ಕಲ್ಪನೆಗೂ ನಿಲುಕದ ಸುದ್ದಿ! ಶ್ರೀಮಂತರು ಹಣ ಪಾವತಿಸಿ ಬಾಹ್ಯಾಕಾಶ ಪ್ರಯಾಣ ಮಾಡುವ ಅವಕಾಶ. ಬಾಹ್ಯಾಕಾಶದಲ್ಲಿ ಒಂದು ಸುತ್ತು ಹಾಕಿ ಬರಲು ಉದ್ಯಮಿಗಳಾದ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಮತ್ತು ವರ್ಜಿನ್ ಗ್ರೂಪ್ ಕಂಪೆನಿಗಳ ಮಾಲಿಕ ರಿಚರ್ಡ್ ಬ್ರಾನ್ಸನ್ ಮುಂದಾಗಿದ್ದಾರೆ. ಒಮ್ಮೆ ಪ್ರಯಾಣ ಮಾಡಲು ಬರೋಬ್ಬರಿ 208.8 ಕೋಟಿ ಶುಲ್ಕ.  ಇವರಿಬ್ಬರು ದೇಶಾಮಟ್ಟದಲ್ಲಿ ದಾಖಲೆ ನಿರ್ಮಿಸಿದ್ದರು. ಬಾಹ್ಯಾಕಾಶ ಪ್ರವಾಸ ವಲಯವು ಬಹಳ ಸೀಮಿತ ಹಾಗೂ ತೀವ್ರ ತರಬೇತಿ ಪಡೆದ ಪ್ರಯಾಣಿಕರಿಗೆ ಮಾತ್ರ ಲಭ್ಯ. ಏನೇ ಇರಲಿ, ಇಷ್ಟೊಂದು ಹಣ ತೆತ್ತು ಪ್ರಯಾಣ ಮಾಡುವುದು ಕುಬೇರರಿಗೆ ಮಾತ್ರ ಸಾಧ್ಯ.
ಜಾಲತಾಣದಲ್ಲಿ ‘ಮೂವತ್ತು ವರುಷಗಳ ಬಳಿಕ ಈ ರಾಶಿಯವರಿಗೆ ಕುಬೇರ ಯೋಗ..’ ಇಂತಹ ಹತ್ತಾರು ವಿಚಾರಗಳು ದಿನನಿತ್ಯ ಪೋಸ್ಟ್ ಆಗುತ್ತಿರುತ್ತದೆ. ಜ್ಯೋತಿಷ್ಯ, ಜ್ಯೋತಿಷ್ಯರನ್ನು ನಂಬುವ, ಅವರ ಮಾತನ್ನೇ ವೇದವಾಕ್ಯವೆಂದು ಅನುಷ್ಠಾನಿಸುವವರಿದ್ದಾರೆ. ಯಾವುದೇ ಸಮಸ್ಯೆಯಿರಲಿ ಪರಿಹಾರವಿರುತ್ತದೆ. ಎಲ್ಲರಿಗೂ ಕುಬೇರ ಯೋಗ. ಎಷ್ಟೋ ಸಲ ಅವರ ಮಾತನ್ನು ಆಲಿಸಿದಾಗ ನಗು ಬರುತ್ತದೆ, ಇತರರು ಕುಬೇರರಾಗುವುದು ಬಿಡಿ, ಅವರಂತೂ ಕುಬೇರರಾಗಿದ್ದಾರೆ! ಅವರ ‘ಡ್ರೆಸ್ ಕೋಡ್’ ಕುಬೇರತ್ವದ ಸಮವಸ್ತ್ರ. ನಮ್ಮ ಮಧ್ಯೆ ಜ್ಯೋತಿಷ್ಯ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಕಲಿತು ಅದನ್ನು ಮಾನಿಸುವ, ಗೌರವಿಸುವ ಜ್ಯೋತಿಷಿಗಳ ವ್ಯಕ್ತಿತ್ವ, ಸಾಧನೆಗಳು ಸದ್ದಾಗುವುದಿಲ್ಲ. ಇವರು ಸಮಾಜದಲ್ಲಿ ಕುಬೇರರಂತೆ ಫೋಸ್ ಕೊಡುವುದಿಲ್ಲ.
ಹೃದಯ ಶ್ರೀಮಂತಿಕೆಯಿಲ್ಲದ ಶ್ರೀಮಂತಿಕೆ ತೃಣಕ್ಕೆ ಸಮಾನ. ನಂನಮ್ಮ ಶ್ರೀಮಂತಿಕೆಯು ಪಾಸ್‍ಬುಕ್ಕಿನಲ್ಲಿರಲಿ. ಚಿನ್ನದ ರೂಪದಲ್ಲಿ ತಿಜೋರಿಯಲ್ಲಿರಲಿ. ಮನೆಮುಂದೆ ಐಷರಾಮಿ ಕಾರಿನ ರೂಪದಲ್ಲಿರಲಿ. ಭವ್ಯ ಅರಮನೆಯಂತಹ ಮನೆಯಲ್ಲಿರಲಿ. ಅದು ಇನ್ನೊಬ್ಬರ ಮೇಲೆ ಹೇರುವ ಸಂಪತ್ತಾಗದಿರಲಿ. ಕಣ್ಣೀರನ್ನು ಒರೆಸುವ ಬೆರಳಾಗಲಿ.
ಕುಬೇರ : ಈತನದು ಪುಲಸ್ತ್ಯ ಗೋತ್ರ. ಬ್ರಹ್ಮನಿಂದ ಅಮರತ್ವ. ಸಕಲೈಶ್ವರ್ಯಗಳ ಈಶತ್ವ. ಯಕ್ಷರ ನಾಯಕತ್ವ. ಲೋಕಪಾಲ ಸ್ಥಾನ. ಲಂಕಾರಾಜ್ಯದ ಆಧಿಪತಿಯಾದ. ಇಚ್ಚೆ ಬಂದಲ್ಲಿ ಪ್ರಯಾಣಿಸಲು ಪುಷ್ಪಕ ವಿಮಾನ.
ಅಲಕಾವತಿಯ ಕುಬೇರನ ಭವನ ಹೇಗಿದೆ? ನೂರು ಯೋಜನ ಉದ್ದ, ಎಪ್ಪತ್ತು ಯೋಜನ ಅಗಲ. ಸ್ವರ್ಣಮಯ ಪ್ರಾಸಾದಗಳು. ಸದಾ ದಿವ್ಯಗಂಧವನ್ನು ಹೊರಸೂಸುವ ಲೋಕ. ಸೂರ್ಯನಿಗೆ ಸಮಾನವಾದ ಪ್ರಭೆ. ನೃತ್ಯಗಾನ ವಿಶಾರದೆಯರಾದ ರಂಭೆ, ಮಿಶ್ರಕೇಶಿ, ಚಿತ್ರಸೇನಾ, ಶುಚಿಸ್ಟತಾ, ಚಾರುನೇತ್ರ, ಘೃತಾಚಿ, ಮೇನಕಾ, ಪುಂಜಿಕಸ್ಥಲಾ, ವಿಶ್ವಾಚೀ, ಊರ್ವಶೀ, ಇರಾ.. ಸಾವಿರಾರು ಅಪ್ಸರೆಯರಿಂದ ನಿರಂತರ ಸೇವೆ.
ನವನಿಧಿಗಳಿಗೂ ರತ್ನಪ್ರಾಯವಾದ ‘ಶಂಖ, ಪದ್ಮ’ ಮಹಾನಿಧಿಗಳ ಅಧಿದೇವತೆಗಳು ಕುಬೇರನನ್ನು ಸೇವಿಸುತ್ತಾರೆ. ಅಲಕಾಧಿಪ, ಧನಾಧಿಪ, ಧನಪತಿ, ಗದಾಧರ.. ಮೊದಲಾದ ಹೆಸರುಗಳಿವೆ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ಅಡಿಕೆ ತೋಟಗಳಿಗೆ ಸವಾಲಾಗಿರುವ ಎಲೆಚುಕ್ಕಿ ರೋಗ – ವಿಜ್ಞಾನ ಏನು ಹೇಳುತ್ತದೆ?
January 9, 2026
7:43 AM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆ ಧಾರಣೆ ಏರಿಕೆ | ಒಮ್ಮೆಲೇ ಬೇಡಿಕೆ ಹೆಚ್ಚಳದಿಂದ ಮಾರುಕಟ್ಟೆಯಲ್ಲಿ ಅಸ್ಥಿರತೆ – ಭವಿಷ್ಯದಲ್ಲಿ ಗುಣಮಟ್ಟದ ಅಡಿಕೆಗೆ ಬೇಡಿಕೆ ನಿರೀಕ್ಷೆ
January 8, 2026
7:16 AM
by: ದ ರೂರಲ್ ಮಿರರ್.ಕಾಂ
ಕನ್ನಡದಲ್ಲಿ ಕಲಿತರೆ ಹಿನ್ನಡೆ ಇಲ್ಲ
January 7, 2026
7:42 PM
by: ಡಾ.ಚಂದ್ರಶೇಖರ ದಾಮ್ಲೆ
ಅಡಿಕೆಯ ವೈಜ್ಞಾನಿಕ ವರ್ಗೀಕರಣ, ಸಂಶೋಧನಾ ಮಿತಿಗಳು ಮತ್ತು ಪುನರ್‌ಪರಿಶೀಲನೆಯ ಅಗತ್ಯ
January 7, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror