ಬದುಕು ಪುರಾಣ | ರಾಮಬಾಣದ ಇರಿತ

July 20, 2025
7:39 AM
ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ ಬಳಕೆಗೆ ಲಭ್ಯ. ಒಂದು ಕಾಯಿಲೆಗೆ ಕೊಡುವ ಗರಿಷ್ಠತಮ ಫಲಿತಾಂಶದ ವಿವರಗಳನ್ನು  ಒಂದು ಪದದಲ್ಲಿ ಕಟ್ಟಿಕೊಡುವುದು ಹಿರಿಯರ ಜಾಣ್ಮೆ. ಆದರದು ಸಿಕ್ಕಸಿಕ್ಕವರ ಆಸ್ತಿಯಾಗಿರುವುದು ವಿಷಾದನೀಯ. 
ಬದುಕಿನ ವ್ಯವಹಾರದಲ್ಲಿ ‘ರಾಮಬಾಣ’ ಪದದ ಬಳಕೆ ಹೆಜ್ಜೆಗೊಂದರಂತೆ ಕಾಣಸಿಗುತ್ತದೆ! ಮುಖ್ಯವಾಗಿ ಔಷಧ ಸಂಬಂಧಿ ಪ್ರಚಾರದಲ್ಲಿ ಹಾಸುಹೊಕ್ಕಾಗಿದೆ. ಅದರಲ್ಲೂ ಮನೆಮದ್ದು ವಿಭಾಗದಲ್ಲಂತೂ ಯಥೇಷ್ಟವಾಗಿ ‘ರಾಮ ಬಾಣ’ವನ್ನು ಹೊಸೆಯಲಾಗುತ್ತದೆ.  ಅನುಭವಿಸಿದವರಿಗೆ ಫಲಾಫಲಗಳು ಗೊತ್ತಷ್ಟೇ! ತಂತಮ್ಮ ಔಷಧಿಗಳ ಫಲಿತಾಂಶಗಳು ರಾಮಬಾಣದಷ್ಟು ನಿಚ್ಚಳ. ಯಾವುದೇ ಸಂಶಯ ಪಡಬೇಕಾಗಿಲ್ಲ.
ಏನಿದು ರಾಮಬಾಣ? ಮರ್ಯಾದಾ ಪುರುಷೋತ್ತಮ ಶ್ರೀರಾಮನು ಮೂಡಿಗೆಯಿಂದ ಸಂಕಲ್ಪಿಸಿ ಶರ ತೆಗೆದು ಹೂಡಿದ ಎಂದಾದರೆ ಅದು ಸಂಕಲ್ಪವನ್ನು ಈಡೇರಿಸಿಯೇ ಪುನಃ ಮೂಡಿಗೆಯನ್ನು ಸೇರುತ್ತಿತ್ತು. ಅಂದರೆ ‘ತಕ್ಷಣದ ಫಲಿತಾಂಶ, ಶೀಘ್ರ ಶಮನ’ ಎಂದು ಅರ್ಥ ಮಾಡಿಕೊಳ್ಳೋಣ. ಯಾವ ವಿಷಯಕ್ಕೆ ನಾವು ‘ರಾಮಬಾಣ’ವನ್ನು ಟಂಕಿಸುತ್ತೇವೆಯೋ ಆ ವಿಷಯದ ಆತ್ಯಂತಿಕವಾದ ಸ್ಥಿತಿ, ಫಲಿತಾಂಶವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಹೇಳಲು ಈ ಪದವನ್ನು ಬಳಸಲಾಗುತ್ತದೆ.
ಜಾಲತಾಣವನ್ನು ಜಾಲಾಡಿದಾಗ ಸಿಕ್ಕ ಕೆಲವು ಉದಾಹರಣೆಗಳು ಹೀಗಿವೆ. “ಸಕ್ಕರೆ ಕಾಯಿಲೆಗೆ ರಾಮಬಾಣ ‘ಬೆಟ್ಟದ ನೆಲ್ಲಿಕಾಯಿ’, ಹೊಟ್ಟೆ ಹುಳುವಿನ ಸಮಸ್ಯೆಗೆ ರಾಮಬಾಣ ‘ಕರಡಿ ಸೊಪ್ಪು’, ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ ‘ಏಲಕ್ಕಿ’, ಮೊಡವೆಗೆ ರಾಮಬಾಣ ‘ಅಕ್ಕಿ ನೀರಿನ ಐಸ್‍ಕ್ಯೂಬ್’, ಕಿವಿ ನೋವಿಗೆ ರಾಮಬಾಣ ‘ಸಾಮ್ರಾಣಿ ಸೊಪ್ಪು’, ರಕ್ತದೊತ್ತಡ, ರಕ್ತಹೀನತೆ ಹೃದಯ ಕಾಯಿಲೆಗೆ ‘ಹಲಸಿನ ಹಣ್ಣು’ ರಾಮಬಾಣ, ಅಸ್ತಮಾ ಕಾಯಿಲೆಗೆ ‘ಆಡುಸೋಗೆ’ ರಾಮಬಾಣ, ಬಾಣಂತಿಯರಿಗೆ ಹಾಗೂ ಚಿಕ್ಕ ಮಕ್ಕಳ ಶೀತ ಕೆಮ್ಮಿಗೆ ರಾಮ ಬಾಣ ‘ಗಣಿಕೆ ಸೊಪ್ಪಿನ ಸಾರು’, ಉರಿಮೂತ್ರ ತೊಂದರೆಗೆ ‘ಕಲ್ಲಂಗಡಿ’ ರಾಮಬಾಣ, ಕಫಕ್ಕೆ ‘ಕಸ್ತೂರಿ ಮಾತ್ರೆ’ ರಾಮಬಾಣ, ಕ್ಯಾನ್ಸರಿಗೆ ‘ಲಕ್ಷ್ಮಣ ಫಲ ತಿನ್ನಿ’, ಕಡೆ ಬೇರ್ (ಕಡೀರು) ಕಷಾಯವು ಬೆನ್ನು ನೋವಿನ ರಾಮಬಾಣ, ಮಲಬದ್ಧತೆಗೆ ‘ವೀಳ್ಯದೆಲೆ’ ರಾಮ ಬಾಣ.. ಹೀಗೆ.
ಹಿರಿಯ ವೈದ್ಯರು ಔಷಧೀಯ ಗುಣಗಳನ್ನು ತಮ್ಮ ಪಾರಂಪರಿಕ ಅನುಭವಗಳಿಂದ ದಾಖಲಿಸಿದರು. ಇಂತಿಂತಹ ರೋಗಕ್ಕೆ ಇಂತಿಂತಹ ಸೊಪ್ಪುಗಳು, ಚಿಗುರುಗಳು, ಗಡ್ಡೆಗಳು ಎಂದು ಗುರುತಿಸಿದರು. ಈ ಒಳಸುರಿಗಳನ್ನು ಬಳಸಿ ಮಾಡಿದ ಔಷಧವನ್ನು ರೋಗಿಗಳಿಗೆ ನೀಡಿದರು. ಸೇವಿಸಿದ ರೋಗಿಗಳು ಗುಣಮುಖರಾದರು. ಅವರು ನೀಡುವ ಔಷಧ ತಯಾರಿಯ ‘ಫಾರ್ಮುಲಾ’ ರೋಗಿಗೆ ಗೊತ್ತಿರುವುದಿಲ್ಲ.
ಉದಾ : ‘ಅಮೃತಬಳ್ಳಿ ಎಲೆಯ ಕಷಾಯ ಮಾಡಿ. ಜ್ವರ, ಮೈಕೈನೋವಿಗೆ ರಾಮಬಾಣ’ ಎಂಬ ಪ್ರಚಾರಕ್ಕೆ ಕಿವಿಯಾಗಿದ್ದೇವೆ. ಸತ್ಯ ಕೂಡ.  ಪ್ರಚಾರ ಮಾಡುವವರು ‘ರಾಮ ಬಾಣ’ದ ಗುಂಗಿನಲ್ಲಿ ಮುಖ್ಯ ವಿಷಯವನ್ನು ಅರ್ಥೈಸಿಕೊಂಡಿರುವುದಿಲ್ಲ. ‘ಎಷ್ಟು ಪ್ರಮಾಣದ ಎಲೆಯನ್ನು, ಎಷ್ಟು ಪ್ರಮಾಣದ ನೀರಿನಲ್ಲಿ, ಎಷ್ಟು ಹೊತ್ತು ಕುದಿಸಬೇಕು’ ಇದು ಫಾರ್ಮುಲಾ. ಇದನ್ನು ಹೇಳುತ್ತಿದ್ದರೆ ‘ರಾಮ ಬಾಣ’ ಸಕ್ಸಸ್! ಆದರೆ ಮೇಲ್ನೋಟದ ಹೇಳಿಕೆಗಳಿಂದ ‘ರಾಮ ಬಾಣ’ಕ್ಕೆ ಪ್ರಚಾರ ಸಿಕ್ಕರೂ, ಆ ಫಾರ್ಮುಲಾ ಗೊತ್ತಿಲ್ಲದೆ ಬಳಸಿದವರ ಸ್ಥಿತಿ ಅಯೋಮಯ.
ಈ ಪದವು ಸದ್ಬಳಕೆಯಷ್ಟೇ ದುರ್ಬಳಕೆಯಾಗುತ್ತಿದೆ.  ಬೀದಿ ಬದಿಯಲ್ಲಿ ಮಾರಾಟವಾಗುವ ಔಷಧಿಗಳಿಗೂ ‘ರಾಮಬಾಣ’ವನ್ನು ತಗಲಿಸಲಾಗುತ್ತದೆ. ‘ಇಂತಿಂಥಾ ರೋಗಕ್ಕೆ ಇದು ರಾಮಬಾಣ’! ಕೆಲವೊಂದು ಕಡೆ ‘ಸರ್ವರೋಗಕ್ಕೂ ರಾಮಬಾಣ’! ಈಚೆಗೆ ಅಂಗಡಿಯ ಮುಂದೆ ತೂಗು ಹಾಕಿದ ಫಲಕ ನೋಡಿದೆ – ‘ತಲೆಯ ಹೇನು ನಾಶಕ್ಕೆ ಈ ಪುಡಿ ರಾಮಬಾಣ’! ಇವೆಲ್ಲಾ ಬದುಕಿಗೆ ಬಾಣವಾಗದಿದ್ದರೆ ಸಾಕು’!
ಕೊರೊನಾ ಕಾಲಘಟ್ಟ ನೆನಪಿದೆಯೇ? ಆ ಸಂಕಷ್ಟ ಸಮಯವು ಮರೆವಿಗೆ ಜಾರಿವೆ. ಕೊರೊನಾ ಸಮಯದಲ್ಲೇ ರಾಮ ಬಾಣಗಳು ಸುತ್ತಾಡಿದ್ದಕ್ಕೆ ಲೆಕ್ಕವಿಲ್ಲ.  ಜ್ವರದ ಲಕ್ಷಣಗಳ ಉದ್ದುದ್ದ ಪಟ್ಟಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದುವು. ವಾಹಿನಿಗಳು ಎಪಿಸೋಡ್ ಮಾಡಿ ಬಿತ್ತರಿಸುತ್ತಿದ್ದುವು. ಜ್ವರ. ತಲೆನೋವು.. ಯಾವುದೇ ಬರಲಿ ಜನರು ಆಸ್ಪತ್ರೆಗೆ ಹೋಗಲು ಹೆದರುತ್ತಿದ್ದರು. ಹಳ್ಳಿಮದ್ದನ್ನು ವಿಶ್ವಾಸದಿಂದ ಸೇವಿಸುತ್ತಿದ್ದರು. ಇಷ್ಟೆಲ್ಲಾ ಗೊಂದಲಗಳು ಆಗುತ್ತಿರುವಾಗ ‘ಕೊರೊನಾಗೆ ಲಸಿಕೆಯೇ ರಾಮಬಾಣ’ ಎಂದು ಪ್ರಧಾನಿಯವರು ಘೋಷಿಸಿದರು!
ರಾಜಕೀಯ ಕ್ಷೇತ್ರದಲ್ಲಿ ತುಂಬಾ ವಿರಳವಾಗಿ ಬಳಕೆಯಾಗುತ್ತಿದೆ. ಯಾವುದೋ ಒಂದು ವಿಷಯವನ್ನು ವೈಭವೀಕರಿಸಿ, ಅದನ್ನು ರಾಜಕೀಯ ವ್ಯವಸ್ಥೆಗೆ ಟಂಕಿಸುತ್ತಾರೆ. ಉದಾ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಯಿತು. ಅದು ದೇಶಕ್ಕೆ ಅಲ್ಲ, ವಿಶ್ವಕ್ಕೇ ಹೆಮ್ಮೆಯ ವಿಚಾರ. ಆ ಸಂದರ್ಭವು ರಾಜಕೀಯದ ಪುಟಗಳಲ್ಲಿ ದಾಖಲಾಯಿತು, ‘ಅಯೋಧ್ಯೆ ವಿಷಯ ಬಿಜೆಪಿಗೆ ರಾಮಬಾಣ’! ಅಂದರೆ ಅಯೋಧ್ಯೆಯ ದೇಗುಲ ರಚನೆಯ ಹಿಂದು ಮುಂದಿನ ವಿಚಾರಗಳನ್ನು ಚುನಾವಣೆ ಸಂದರ್ಭದಲ್ಲಿ ಚಲಾವಣೆಗೆ ತರಲು ಅವಕಾಶವಾಯಿತು.
ಕನ್ನಾಡಿನಲ್ಲಿ ಈಗ ಕಾಂಗ್ರೆಸ್ ಪಕ್ಷದ ಸರಕಾರ. ಇದರ ‘ಗ್ಯಾರಂಟಿ ಯೋಜನೆ’ಗಳನ್ನು ಜನರು ಪ್ರಾಂಜಲವಾಗಿ ಸ್ವೀಕರಿಸಿದರು. ಸರಕಾರವೂ ‘ತಮ್ಮ ಸಾಧನೆ’ ಎಂದು ಬಿಂಬಿಸುತ್ತಿದೆ. ಮುಂದಿನ ಚುನಾವಣೆಗೆ ಗ್ಯಾರಂಟಿ ಯೋಜನೆಯು ರಾಮಬಾಣ! ಅಂದರೆ ಈ ವಿಚಾರವನ್ನು ಬೇರೆ ಬೇರೆ ಮಾದ್ಯಮಗಳ ಮೂಲಕ ಜನಮನಕ್ಕೆ ತಲಪಿಸುತ್ತಾರೆ. ಮತ್ತೆ ಪುನಃ ತಮಗೆ ಮತ ಹಾಕುವಂತೆ ಮನವಿ ಮಾಡುತ್ತಾರೆ. ಇಲ್ಲೂ ರಾಮಬಾಣ ಬಾರದೆ ಇರದು.
ವರುಷದ ಹಿಂದೆ ‘ಉರಿಮೂತ್ರ’ ಸಮಸ್ಯೆಗೆ ಒಳಗಾಗಿದ್ದೆ. ಆಗ ರಾಚಿ ಬಂದ ‘ರಾಮಬಾಣ’ಗಳ ಸಂಖ್ಯೆ ಹತ್ತಲ್ಲ, ನೂರಾರು! ಮನೆಯ ಮಂದಿಗೆ ಒಬ್ಬೊಬ್ಬರು ಔಷಧಿ ಸೂಚಿಸುವಾಗ ‘ಬೇಗ ಗುಣವಾಗಲಿ’ ಎನ್ನುವ ಉದ್ದೇಶದಿಂದ ಕಷಾಯ ಮಾಡಿದ್ದೇ ಮಾಡಿದ್ದು. ಕುಡಿದದ್ದೇ ಕುಡಿದದ್ದು. ಎಲ್ಲರದ್ದೂ ರಾಮ ಬಾಣವೇ. “ನನ್ನ ಚಿಕ್ಕಮ್ಮನ ಮಗನಿಗೆ ಹೀಗೇ ಆಗಿತ್ತು. ಈ ಕಷಾಯದಿಂದ ಗುಣವಾಗಿತ್ತು. ಉರಿಮೂತ್ರಕ್ಕಿದು ರಾಮಬಾಣ’ ಎಂದು ಕಿವಿ ಕಚ್ಚಿದ್ದೇ ಕಚ್ಚಿದ್ದು. ಕೊನೆಗೆ ಹೋಮಿಯೋಪತಿ ಚಿಕಿತ್ಸೆಗೆ ಶರಣಾಗಿ ಗುಣಮುಖನಾದೆ.
ನಾವು ಅಸೌಖ್ಯದಲ್ಲಿ ಬಿದ್ದಾಗ ‘ರಾಮಬಾಣ’ಗಳು ರಾಚುತ್ತವೆ. ನಮ್ಮ ಕಾಯಿಲೆ ಗುಣವಾಗಬಾರದೆನ್ನುವ ಉದ್ದೇಶ ಪ್ರಯೋಗಿಸುವವರಿಗೆ ಇರುವುದಿಲ್ಲ. ಅವರ ತಲೆಯಲ್ಲಿದ್ದ ಅರೆಬೆಂದ ಬೌದ್ಧಿಕ ಕಾಳುಗಳಿಂದ ರಾಮ ಬಾಣ ಠುಸ್ಸಾಗುತ್ತದೆ. ಕೊರೊನಾ ಸಂದರ್ಭದಲ್ಲಿ ವೈದ್ಯರೊಬ್ಬರು ಹೇಳಿದ ಮಾತು ನೆನಪಾಗುತ್ತದೆ, “ಸರಿಯಾದ ಫಾರ್ಮುಲಾ ಇಲ್ಲದೆ ಸೇವಿಸಿದ ಕಷಾಯಗಳಿಂದ ಸಮಸ್ಯೆ ದುಪ್ಪಟ್ಟಾಗಿದೆ. ಒಂದೆಡೆ ಕೊರೊನಾ ಗಲಾಟೆ, ಮತ್ತೊಂದೆಡೆ ಈ ರಾಮಬಾಣಗಳ ಕರಾಮತ್ತು. ಒಟ್ಟೂ ಗೊಂದಲ.”
ನೀವು ಯಾರಲ್ಲಾದರೂ ‘ನನಗೆ ಮಧುಮೇಹ (ಶುಗರ್) ಇದೆ ಅಂದುಬಿಡಿ.’ ಆಗ ಶುರುವಾಗುತ್ತದೆ, ರಾಮ ಬಾಣಗಳ ಪ್ರಯೋಗ! ಒಂದೇ ಎರಡೇ.. ಪುಂಖಾನುಪುಂಖವಾಗಿ..! ಒಂದು ಉದಾಃ – ಒಬ್ಬರು ಆಪ್ತರು ‘ಹಾಗಲಕಾಯಿಯ ಸ್ಟ್ರಾಂಗ್ ಕಷಾಯವನ್ನು ಬೆಳ್ಳಂಬೆಳಿಗ್ಗೆ ತೆಕ್ಕೊಂಡರೆ ಶುಗರ್ ಮಾಯ. ಮಧುಮೇಹಕ್ಕೆ ಅದುವೇ ರಾಮಬಾಣ’ ಎನ್ನುವ ಸಲಹೆ ಕೊಟ್ಟರು. ನನಗೆ ಬಿಡಿ, ಮನೆಯವರ ಕಿವಿಯೂದಿದರು. ತರಕಾರಿ ಅಂಗಡಿಯಿಂದ ಕಿಲೋಗಟ್ಟಲೆ ಹಾಗಲಕಾಯಿ ಮನೆಗೆ ಬಂತು. ಅವರು ಹೇಳುವಂತೆ ಸ್ಟ್ರಾಂಗ್ ಕುಡಿತಿದ್ರೆ ಆಸ್ಪತ್ರೆಗೆ ದಾಖಲಾಗಬೇಕಿತ್ತು. ಮತ್ತೆ ಮನೆಯವರಿಗೂ ರಾಮ ಬಾಣದ ಚರಿತ್ರೆ ಗೊತ್ತಾಗಿ ಬಚಾವಾದೆ.
ಎರಡೂವರೆ ದಶಕದ ಹಿಂದೆ ನನ್ನ ತಂದೆಯವರಿಗೆ ಕರುಳು ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಆಗ ಯಾರೋ ಒಬ್ಬ ಕಾಣದ ಧನ್ವಂತರಿ ‘ಕರುಳು ಸಮಸ್ಯೆಗೆ ಪಪ್ಪಾಯಿ ಸೇವನೆ ರಾಮಬಾಣ’ ಎಂದುಬಿಟ್ಟ. ತಂದೆಯವರು ದೇವಳದ ಅರ್ಚಕರಾದ್ದರಿಂದ ಜನಾನುರಾಗ ಪಡೆದಿದ್ದರು. ಪ್ರತಿಯೊಬ್ಬರೂ ಅವರನ್ನು ನೋಡಲು ಬರುವಾಗ ಒಂದೋ, ಎರಡೋ ಪಪ್ಪಾಯಿ ತಂದಿದ್ದರು. ಎರಡು ದಿವಸದಲ್ಲಿ ಪಪ್ಪಾಯಿ ಮೇಳ ಮಾಡುವಷ್ಟು ಹಣ್ಣು ಜಗಲಿಯಲ್ಲಿ ರಾಶಿ ಬಿದ್ದಿತ್ತು! ಬೇಡ ಅನ್ನುವಂತಿಲ್ಲ. ಅದು ಅವರವರ ಭಾವನೆ. ಆ ಪಪ್ಪಾಯಿಯನ್ನು ಏನು ಮಾಡಿದಿರಿ ಎಂದು ಕೇಳಬೇಡಿ! ಇದು ರಾಮ ಬಾಣದ ಮಹಿಮೆ.
ದೈನಿಕವೊಂದರಲ್ಲಿ ಪ್ರಕಟವಾದ ಅಪರೂಪದ ಸುದ್ದಿ. (ಉದಯವಾಣಿ, 18-7-2025) :  ‘ಹಾವಿನ ವಿಷಕ್ಕೆ ಒಂಟೆಯ ಕಣ್ಣೀರು ರಾಮಬಾಣ! ಈ ಕುರಿತು ದುಬೈಯಲ್ಲಿ ಮಹತ್ವದ ಸಂಶೋಧನೆಯಾಗಿದೆಯಂತೆ.  “ಸಮುದ್ರದ ಉಪ್ಪು ನೀರು ಕುಡಿದರೂ ಅರಗಿಸುವ ಸಾಮರ್ಥ್ಯವುಳ್ಳ ಒಂಟೆಯ ಕಣ್ಣೀರಿಗೀಗ ವಿಶೇಷ ಮಹತ್ವ ಬಂದಿದೆ. ಇದಕ್ಕೆ ಕಾರಣ ಅದರಲ್ಲಿರುವ ಸೂಕ್ಷ್ಮ ಜೀವಿಗಳಿಂದ ರಕ್ಷಿಸಬಲ್ಲ ಪ್ರೊಟೀನ್ ಅಂಶ. ಇದರಿಂದಾಗಿಯೇ ಹಾವಿನ ವಿಷವನ್ನು ಶಮನ ಮಾಡವ ಗುಣ ಒಂಟೆಯ ಕಣ್ಣೀರಿಗೆ ಪ್ರಾಪ್ತವಾಗಿದೆ. ಇದು ಪ್ರಮಾಣೀಕರಣವಾದಲ್ಲಿ ವೈದ್ಯಕೀಯ ಲೋಕದ ಮಹಾನ್ ಸಂಶೋಧನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದು ಮಾನವ ಜಗತ್ತಿಗೆ ಬಲು ದೊಡ್ಡ ವರದಾನವಾಗಲಿದೆ.” ಪ್ರಯೋಗ ಹಂತದಲ್ಲಿರುವ ಔಷಧಿಗೆ ಈಗಲೇ ‘ರಾಮಬಾಣ’ ತಗಲಿದೆ!
ಹೀಗೆ ಆರೋಗ್ಯ ಸಮಸ್ಯೆಯೊಂದಕ್ಕೆ ‘ಕ್ಷಿಪ್ರವಾಗಿ ಟಂಕಿಸುವ ರಾಮಬಾಣ’ ಪ್ರಯೋಗವು ನಿಜಾರ್ಥದ ರಾಮಬಾಣಕ್ಕಿಂತಲೂ ತೀಕ್ಷ್ಣ!
ಏನಿದು? ರಾಮ ಬಾಣ : ಅಯೋಧ್ಯೆಯ ದಶರಥ ಚಕ್ರವರ್ತಿ ಮನುವಂಶೀಯ. ಸಂತಾನಪ್ರಾಪ್ತಿಗಾಗಿ ಕುಲಗುರು ವಶಿಷ್ಠರ ಸಂಕಲ್ಪದಂತೆ,  ಋಷ್ಯಶೃಂಗ ಮುನಿಗಳ ನೇತೃತ್ವದಲ್ಲಿ  ‘ಪುತ್ರಕಾಮೇಷ್ಟಿ’ ಯಾಗಕ್ಕಾಗಿ ದೀಕ್ಷಾಬದ್ಧರಾಗಿದ್ದಾರೆ. ರಾಜರಾಣಿಯರ ಪುತ್ರ ಕಾಮಕ್ಕೆ ಯಜ್ಞನಾರಾಯಣನು ಪ್ರತ್ಯಕ್ಷನಾಗಿ ‘ಪಾಯಸ’ವನ್ನು ನೀಡಿ ಅಂತರ್ಧಾನನಾಗುತ್ತಾನೆ. ಇದರ ಸೇವನೆಯಿಂದ ಕೌಸಲ್ಯೆ, ಸುಮಿತ್ರೆ, ಕೈಕೇಯಿ ರಾಣಿಯರು ಗರ್ಭವತಿಯರಾಗುತ್ತಾರೆ. ಕೌಸಲ್ಯೆಗೆ ಶ್ರೀರಾಮ, ಕೈಕೆಯಿಯಲ್ಲಿ ಭರತ,  ಸುಮಿತ್ರೆಯಲ್ಲಿ ಲಕ್ಷ್ಮಣ ಮತ್ತು ಶತ್ರುಘ್ನರು ಜನಿಸಿದರು. ಅಯೋಧ್ಯೆಯ ಪ್ರ್ರಜಾವಾಸಿಗಳಲ್ಲಿ ಸಂತಸ, ಸಂಭ್ರಮ.
ವಿಶ್ವಾಮಿತ್ರ ಋಷಿಯು ಯಜ್ಞಸಂರಕ್ಷಣೆಗಾಗಿ ಶ್ರೀರಾಮ, ಲಕ್ಷ್ಮಣರನ್ನು ಕರೆದೊಯ್ಯುತ್ತಾರೆ. ವಿಧವಿಧದ ಮಂತ್ರಾಸ್ತ್ರಗಳನ್ನು ಬೋಧಿಸುತ್ತಾರೆ. ಯಜ್ಞಕಂಟಕರಾದ ದುಷ್ಟ ಶಕ್ತಿಗಳನ್ನು ನಿಗ್ರಹಿಸುತ್ತಾರೆ. ವಿಶ್ವಾಮಿತ್ರ ಋಷಿಯ ಜ್ಞಾನನಿಧಿಯ ಉತ್ತರಾಧಿಕಾರಿಯಾಗಿ ಬೆಳೆದ ಶ್ರೀರಾಮನು ಧರ್ಮ ಸಂರಕ್ಷಣಾ ಕಾರ್ಯದಲ್ಲಿ ತೊಡಗಿದ ಗಾಥೆ ಸರ್ವವಿದಿತ.
‘ರಾಮ ಬಾಣ’ – ಇದು ಶ್ರೀರಾಮನ ವಿಶೇಷತೆ. ಮನಸ್ಸಿನಲ್ಲಿ ಸಂಕಲ್ಪಸಿ ಹೂಡಿದ ಬಾಣವು  ತನ್ನ ಕಾರ್ಯವನ್ನು ಮುಗಿಸಿ, ಸಮುದ್ರದಲ್ಲಿ ಮಿಂದು, ಪುನಃ ಮೂಡಿಗೆಯನ್ನು ಸೇರುತ್ತದೆ. ರಾಮ ಬಾಣವು ಎಂದೂ ಹುಸಿಯಾದುದಿಲ್ಲ. ರಾಮಾಯಣ ಯುದ್ಧದ ಸಂದರ್ಭದಲ್ಲಿ ಶ್ರೀರಾಮನ ಯುದ್ಧ ವಿಶೇಷಗಳು ಅವಿಸ್ಮರಣೀಯ. ಯುದ್ಧಕಾಂಡವನ್ನು ಓದುತ್ತಾ ಅದರಲ್ಲೇ ತನ್ಮಯರಾದರೆ ಕಣ್ಣೆದುರೇ ಯುದ್ಧ ಸಮನಿಸಿದಂತೆ ಭಾಸವಾಗುತ್ತದೆ.
ಕಿಷ್ಕಿಂದಾ ಕಾಂಡದ ಒಂದು ಘಟನೆ. ಸುಗ್ರೀವನೊಡನೆ ಶ್ರೀರಾಮನು ಅಗ್ನಿಸಾಕ್ಷಿಯಾಗಿ ಮಿತ್ರತ್ವವನ್ನು ಸಂಪಾದಿಸುತ್ತಾನೆ. ವಾಲಿಯನ್ನು ಕೊಂದು ಕೊಡುತ್ತೇನೆಂದು ಆಶ್ವಾಸನೆಯನ್ನು ನೀಡುತ್ತಾನೆ. ರಾಮನ ಶಕ್ತಿಯ ಪರೀಕ್ಷೆಗೆ ಸಂಕೋಚದಿಂದಲೇ ಸುಗ್ರೀವನು ಮುಂದಾಗುತ್ತಾನೆ. “ತನ್ನಿಂದ ಹತನಾದ ದುಂದುಭಿಯ ಅಸ್ಥಿಪಂಜರವನ್ನು ವಾಲಿಗೆ ಮದಬಂದಾಗ ಮೊಣಕಾಲಿನ ಪರ್ಯಂತ ಎತ್ತುತ್ತಾನೆ. ಅಲ್ಲದೆ ಸಪ್ತ ತಾಲವೃಕ್ಷಗಳನ್ನು ಹಿಡಿದಾಡಿಸಿದಾಗ ಅದರೆ ಕೊಂಬೆಗಳು ಉದುರಿಬೀಳುತ್ತವೆ, ಮತ್ತೆ ಚಿಗುರುತ್ತವೆ. ಇವರೆಡು ವಾಲಿಯ ಪ್ರತಾಪಕ್ಕೆ ಸಾಕ್ಷಿಗಳು” ಎನ್ನುತ್ತಾನೆ.
ಶ್ರೀರಾಮನು ತನ್ನ ಎಡಗಾಲಿನ ತುದಿಯಿಂದ ದುಂದುಭಿಯ ಅಟ್ಟೆಯನ್ನು ಯೋಜನಾಂತರಕ್ಕೆ ಹಾರಿಸುತ್ತಾನೆ. ಒಂದೇ ಬಾಣದಿಂದ ತಾಲವೃಕ್ಷಗಳನ್ನು ಮತ್ತೆ ಚಿಗುರದಂತೆ ತುಂಡರಿಸುತ್ತಾನೆ. ಹೀಗೆ ಬಿಟ್ಟ ಬಾಣವು ಮತ್ತೆ ಶ್ರೀರಾಮನ ಬತ್ತಳಿಕೆಯನ್ನು ಸೇರಿತು. ಈ ಎಲ್ಲಾ ವಿಸ್ಮಯಗಳನ್ನು ನೋಡಿದ ಸುಗ್ರೀವನಿಗೆ ಶ್ರೀರಾಮನ ಸಾಮರ್ಥ್ಯದ ಕುರಿತು ವಿಶ್ವಾಸ ಬಂತು. ಉದ್ದೇಶ ಸಿದ್ಧಿಯಾದ ತಕ್ಷಣ ಪುನರಪಿ ಬಂದು ಬತ್ತಳಿಕೆ ಸೇರುವುದು ಶ್ರೀರಾಮನ ಬಾಣಗಳ ವಿಶೇಷ. ರಾಮ ಒಂದು ಗುರಿ ಹಿಡಿದರೆ ಅದು ಮಿಥ್ಯವಾಗದು.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ಅಡಿಕೆ ತೋಟಗಳಿಗೆ ಸವಾಲಾಗಿರುವ ಎಲೆಚುಕ್ಕಿ ರೋಗ – ವಿಜ್ಞಾನ ಏನು ಹೇಳುತ್ತದೆ?
January 9, 2026
7:43 AM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆ ಧಾರಣೆ ಏರಿಕೆ | ಒಮ್ಮೆಲೇ ಬೇಡಿಕೆ ಹೆಚ್ಚಳದಿಂದ ಮಾರುಕಟ್ಟೆಯಲ್ಲಿ ಅಸ್ಥಿರತೆ – ಭವಿಷ್ಯದಲ್ಲಿ ಗುಣಮಟ್ಟದ ಅಡಿಕೆಗೆ ಬೇಡಿಕೆ ನಿರೀಕ್ಷೆ
January 8, 2026
7:16 AM
by: ದ ರೂರಲ್ ಮಿರರ್.ಕಾಂ
ಕನ್ನಡದಲ್ಲಿ ಕಲಿತರೆ ಹಿನ್ನಡೆ ಇಲ್ಲ
January 7, 2026
7:42 PM
by: ಡಾ.ಚಂದ್ರಶೇಖರ ದಾಮ್ಲೆ
ಅಡಿಕೆಯ ವೈಜ್ಞಾನಿಕ ವರ್ಗೀಕರಣ, ಸಂಶೋಧನಾ ಮಿತಿಗಳು ಮತ್ತು ಪುನರ್‌ಪರಿಶೀಲನೆಯ ಅಗತ್ಯ
January 7, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror