ಬದುಕು ಪುರಾಣ | ಜಂಭವು ಬದುಕಿಗಂಟಿದ ಕಳೆ!

September 21, 2025
7:58 AM
ಸಾಧಕನು ಮಾತನಾಡುವುದಿಲ್ಲ. ಆತನ ಸಾಧನೆ ಮಾತನಾಡುತ್ತದೆ, ಮಾತನಾಡುತ್ತಿತ್ತು. ನಮ್ಮ ಹಿರಿಯರನೇಕರು ಈ ಹಾದಿಯಲ್ಲಿ ಕ್ರಮಿಸಿದವರು. ವರ್ತಮಾನದ ವೈಚಾರಿಕ ಪಲ್ಲಟವನ್ನು ಗಮನಿಸಿ. ಇಲ್ಲಿ ಸಾಧಕನೆಂದು ಕರೆಯಲ್ಪಡುವವನು ತನ್ನ ‘ಬಯೋಡಾಟ’ವನ್ನು ಬೆನ್ನಿಗೆ ಅಂಟಿಸಿಕೊಂಡು ‘ನೋಡಿ’ ಎಂದು ದುಂಬಾಲು ಬೀಳುತ್ತಾನೆ!  ತಾನು ಸಾಧಕನೆಂದು ದೊಡ್ಡ ದನಿಯಲ್ಲಿ ಬೊಬ್ಬಿಡುತ್ತಾನೆ. ಆದರೆ ‘ಯಾರು ಸಾಧಕ’ನೆಂದು ಜನಮಾನಸಕ್ಕೆ ಗೊತ್ತಿದೆ.
ಮಹಾಭಾರತದಲ್ಲಿ ಬರುವ ಒಂದು ಪಾತ್ರ – ಉತ್ತರ. ಜಂಭಕ್ಕೆ ಬದಲಿ ಪದ. ಈತ ಬಾಯಿಬಡುಕ, ವಾಚಾಳಿ. ತನ್ನನ್ನು ಹೊಗಳಿಕೊಳ್ಳುವ ಖಯಾಲಿ. ತನ್ನ ಸಖಿ ಪರಿವಾರದ ಮಧ್ಯದಲ್ಲಿ ಮೀಸೆ ತಿರುಹುವ ಪರಾಕ್ರಮಿ. ಲೋಕದ ವಿದ್ಯಮಾನಗಳ ಅರಿವಿಲ್ಲದ ಹೊಂತಕಾರಿ. ಈತನಿಗೆ ಥಿಯರಿ ಗೊತ್ತಿದೆ, ಪ್ರಾಕ್ಟಿಕಲ್ ಜ್ಞಾನವಿಲ್ಲ!
ಇದು ಮಹಾಭಾರತದ ‘ಉತ್ತರ’ನ ವ್ಯಕ್ತಿತ್ವ. ವಿಚತ್ರ ಸ್ವ-ಭಾವ. ಆದರೆ ವರ್ತಮಾನದ ಭಾರತದಲ್ಲಿ ‘ಉತ್ತರ’ನಂತಹ ವ್ಯಕ್ತಿತ್ವವನ್ನು ರೂಢಿಸಿಕೊಂಡವರ ಸಂಖ್ಯೆ ಅಗಣಿತ. ಇವರಿಗೆ ತನ್ನನ್ನು ಉದ್ಘಾಟಿಸಿಕೊಳ್ಳಲು ಸಮಯ, ಸಂದರ್ಭ, ಬೇಕಾಗಿಲ್ಲ. ಸಿಕ್ಕಸಿಕ್ಕಲ್ಲಿ ಸ್ವ-ಗತ.
ಅಭಿನವ ಉತ್ತರಕುಮಾರರು ಅರ್ಹತೆಯಿಲ್ಲದೆ ಪ್ರಸಿದ್ಧಿಗಾಗಿ ಒದ್ದಾಡುವ, ಗುದ್ದಾಡುವುದನ್ನು ಕಂಡಾಗ ಅಯ್ಯೋ ಅನ್ನದೆ ವಿಧಿಯಿಲ್ಲ. ವಾಸ್ತವಕ್ಕಿಂತ ದೂರವಾದ, ನಿರರ್ಗಳ ಮಾತುಗಳು ಇವರ ಬಂಡವಾಳ. ಭ್ರಮೆಗಳ  ಲೋಕದಲ್ಲಿ ಸುತ್ತಾಟ. ಸುಳ್ಳುಗಳ ಮಾಲೆಗಳನ್ನು ಪೋಣಿಸುತ್ತಾ ಸತ್ಯದ ನೆತ್ತಿಯ ಮೇಲೆ ಕುಣಿಯುತ್ತಿರುತ್ತಾರೆ. ಪ್ರತಿಷ್ಠಿತರ ಹೆಸರನ್ನು ಥಳಕು ಹಾಕುತ್ತಾ, ತಾನೂ ಅವರಂತೆ ಬಿಂಬಿಸಲು ಯತ್ನಿಸುತ್ತಾರೆ. ಇಂತಹ ವರ್ತನೆಗಳನ್ನು ಹತ್ತಿರದಿಂದ ನೋಡಿದವರು ‘ಇದೆಲ್ಲ ಉತ್ತರನ ಪೌರುಷ ಮಾರಾಯ್ರೆ, ಆಗುವಂತಾದ್ದು, ಹೋಗುವಂತಾದ್ದು ಏನಿಲ್ಲ’ ಎಂದು ಮುಖ ತಿರುಗಿಸಿ ಬಿಡುತ್ತಾರೆ.
ಬಹುತೇಕ ಸಮಾರಂಭಗಳಲ್ಲಿ ಉತ್ತರಕುಮಾರರು ಸಿಗುತ್ತಾರೆ. ವಿಶ್ವಮಟ್ಟದಲ್ಲಿ ನಡೆಯುತ್ತಿರುವ ಆಗುಹೋಗುಗಳಲ್ಲಿ ತನಗೆ ಅತಿ ಪರಿಣತಿ ಇದೆಯೆಂದು ಪ್ರಕಟಿಸುತ್ತಿರುತ್ತಾರೆ. ಅದರಲ್ಲಿ ತನ್ನ ಸಾಧನೆ, ಸಾಹಸವನ್ನು ಥಳಕು ಹಾಕುತ್ತಾರೆ. ಹತ್ತಾರು ಮಂದಿಯ ಮುಂದೆ ಕಾಣಿಸಿಕೊಳ್ಳುವ ಈ ಉತ್ತರಕುಮಾರರ ಪರಿಚಯ ಒಮ್ಮೆ ಆದರೆ, ಮುಗಿಯಿತು! ಆ ಪಾಶದಿಂದ ಮುಕ್ತಿಯಿಲ್ಲ. ಅವರ ಮುಂದೆ ಸುಳಿಯಲೂ ಅಂಜುತ್ತಾ ಹಾದಿ ತಪ್ಪಿಸಿ ಕ್ರಮಿಸದೆ ನಿರ್ವಾಹವಿಲ್ಲ. ಅದು ಹೆದರಿ ಅಲ್ಲ, ಅವರ ಜಂಭದ ಮಾತುಗಳಿಂದ ತಪ್ಪಿಸಲು!
ವ್ಯಕ್ತಿಯೊಬ್ಬನ ಸಾಧನೆ, ಸಾಹಸವು ಮಾಧ್ಯಮಗಳಲ್ಲಿ ಪ್ರಕಟವಾದಾಗ ಅಭಿನಂದನೆಗಳ ಮಹಾಪೂರ ಹರಿಯುತ್ತದೆ. ಹೊಗಳಿ ಹೊನ್ನಶೂಲಕ್ಕೇರಿಸುತ್ತಾರೆ. ಸಂದ ಹೊಗಳಿಕೆಗಳು ಅಧಿಕವಾಗಿ, ಅದೇ ‘ಅಮಲು’ ಆಗಿ ಬಿಡುವುದುಂಟು. ತಾನೇ ಸ್ವಯಂ ಹೊಗಳಿಸಿಕೊಳ್ಳುತ್ತಾ ತಿರುಗಾಡುತ್ತಿರುತ್ತಾರೆ. ಯಾರು ಸಿಕ್ಕರೂ ‘ಮೊನ್ನೆ ನೀವು ಪೇಪರ್ ನೋಡಿಲ್ವಾ’ ಅಂತ ಮಾತಿಗೆ ಎಳೆಯುತ್ತಾರೆ. “ಮೊದಲು ಸರಿಯಿದ್ದ, ಸಂಮಾನ ಆದದ್ದೇ ಆದುದು.. ಈಗ ನೋಡಿ.. ಥೇಟ್ ಉತ್ತರಕುಮಾರ.” ಎಂದು ಆಪ್ತರೇ ನಗೆಯಾಡುತ್ತಾರೆ.
ಕೋವಿಡ್ ಒಂದನೇ ಅಲೆಯನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಧುತ್ತೆಂದು ಎರಗಿದ ಮಹಾಮಾರಿಯಿಂದಾಗಿ ಬದುಕು ಅಲುಗಾಡಿತ್ತು. ಲಾಕ್‍ಡೌನ್ ಘೋಷಣೆಯಾಯಿತು. ದೂರದೂರಿನ ಶ್ರಮಿಕರು ಬೆಂಗಳೂರಲ್ಲಿ ಉಳಿದರು. ಅವರಲ್ಲಿ ಕೆಲವರಿಗೆ ತುತ್ತು ಉಣ್ಣಲೂ ಕಷ್ಟವಾಗಿತ್ತು. ಸರಕಾರ, ಸೇವಾಸಂಸ್ಥೆಗಳು ಸ್ಪಂದನ ತೋರಿದ್ದುವು. ಆಂತಹ ಹೊತ್ತಲ್ಲಿ ಕನ್ನಾಡಿನ ಪಕ್ಷವೊಂದರ ಮುಖ್ಯಸ್ಥನ ಜಂಭದ ಮಾತುಗಳು ವಾಹಿನಿಗಳಲ್ಲಿ ಬಿತ್ತರಗೊಂಡಿದ್ದುವು.
ಏನಿದು ಮಾತುಗಳು? “ರಾಜ್ಯದಲ್ಲಿ ಉಳಿದ ಶ್ರಮಿಕರನ್ನು ಅವರವರ ಊರಿಗೆ ಕಳುಹಿಸಿ. ಅದಕ್ಕಾಗುವ ಸಾರಿಗೆ ವೆಚ್ಚವನ್ನು ನಾವು ಭರಿಸುತ್ತೇವೆ” ಎಂದು ಒಂದು ಕೋಟಿ ರೂಪಾಯಿಯ ಚೆಕ್ಕನ್ನು ವಾಹಿನಿಗಳ ಮುಂದೆ ಪ್ರದರ್ಶಿಸಿ ಸುಸ್ತಾಗಿದ್ದರು. ಈ ಸುದ್ದಿ ವಾಹಿನಿಗಳಿಗೆ ಸುಗ್ಗಿ. ಕೊರೋನಾವನ್ನು ಕಟ್ಟಿಹಾಕುವ ಸಾಮಥ್ರ್ಯ ಒಂದು ಕೋಟಿಗಿತ್ತು ಎನ್ನುವ ಮಾತುಗಳು ರೇಜಿ ಹುಟ್ಟಿಸುತ್ತಿದ್ದುವು. ಕೊನೆಗೂ ಆ ಚೆಕ್ ನಗದಾಗಲಿಲ್ಲ ಎನ್ನುವಾಗ ‘ಜಂಭದ ಕೋಳಿ’ ಮಾಯವಾಗಿತ್ತು. ಜಂಭವು ವ್ಯಕ್ತಿತ್ವವನ್ನು ನಾಶ ಮಾಡಿದ್ದಲ್ಲದೆ, ಪಕ್ಷಕ್ಕೂ ಮುಜುಗರ ಹುಟ್ಟಿಸಿತ್ತು. ಉತ್ತರಕುಮಾರನ ಕೋಟಿಗಳ ನಾಟಕ ಹಳ್ಳಹಿಡಿಯಿತೆಂದು ಮಾಧ್ಯಮಗಳೂ ನಕ್ಕವು! ಎರಡನೇ ಅಲೆಗೂ ಆ ವಕ್ತಾರನಿಂದ ಕೋಟಿಗಳ ತಾಂಡವವಿತ್ತು! (ಮತ್ತೆ ಆ ಚೆಕ್ ನಗದಾಗಿದೆಯೋ ಗೊತ್ತಿಲ್ಲ. ಆದರೆ ಸಂತೋಷ)
ರಾಜಕೀಯ ಪಕ್ಷಗಳು ಏರ್ಪಡಿಸುವ ಪತ್ರಿಕಾಗೋಷ್ಠಿಗಳನ್ನು ನೆನಪು ಮಾಡಿಕೊಳ್ಳಿ. ಒಂದೊಂದು ಪಕ್ಷಗಳ ವಕ್ತಾರರು ತಮ್ಮನ್ನು ಹೊಗಳಿಕೊಳ್ಳುತ್ತಾ, ಪರದೂಷಣೆ ಮಾಡುತ್ತಾ, ಕಾಲೆಳೆಯುತ್ತಾ ಇರುತ್ತಾರೆ. ಹಗುರ ಮಾತುಗಳು ಸಂಭ್ರಮಿಸುತ್ತವೆ. ಮತ್ತೊಬ್ಬರನ್ನು ಕೆಣಕುತ್ತಾ ತಾವು ಹಗುರವಾಗುತ್ತಿರುತ್ತಾರೆ. ಇಲ್ಲಿನ ಮಾತುಗಳೆಲ್ಲಾ ಒಣ ಜಂಭಗಳು. ಅವೆಂದೂ ಅನುಷ್ಠಾನಗೊಳ್ಳುವುದೇ ಇಲ್ಲ. ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತವೆ. ಸಂಬಂಧಪಟ್ಟವರು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಗುದ್ದಾಡುತ್ತಾ ಇರುತ್ತಾರೆ! ಇದನ್ನು ನೋಡುತ್ತಾ ಮತ್ತಷ್ಟು ಮಂದಿ ‘ಉತ್ತರ ಕುಮಾರ’ರು ಸೃಷ್ಟಿಯಾಗುತ್ತಲೇ ಇರುತ್ತಾರೆ.
ಕೆಲವರಿದ್ದಾರೆ, ನೀವು ಏನನ್ನೇ ಕೇಳಿ. ಅವರಲ್ಲಿ ಉತ್ತರವಿದೆ. ರಾಜಕೀಯ, ಪುರಾಣ, ಇತಿಹಾಸ, ವಿದೇಶ ಸುದ್ದಿಗಳು, ಬಾಹ್ಯಾಕಾಶ, ವಿಜ್ಞಾನ.. ಹೀಗೆ ಪಟಪಟನೆ ಉತ್ತರಿಸುತ್ತಾರೆ. ಇವರ ಮಾತನ್ನು ನಂಬಿದಿರೋ.. ಗೋವಿಂದ! ಇಂತಹವರ ಮಾತುಗಳಲ್ಲಿ ‘ಅನುಕಂಪ’ವು ನಲಿದಾಡುತ್ತದೆ. ಕಣ್ಣೀರು ಕೋಡಿಯಾಗಿ ಹರಿಯುತ್ತದೆ. ಮಾತು ಮಾತಿಗೆ ‘ಬಡತನ, ಬಡವರು’ ಎನ್ನುತ್ತಾ ಮಾತಿನ ಮನೆ ಕಟ್ಟುತ್ತಿರುತ್ತಾರೆ.
ನನ್ನ ತಂದೆಯವರು ಮರಣಿಸಿದ ಕಾಲಘಟ್ಟ. ಅವರು ದೀರ್ಘಕಾಲ ದೇವಳದಲ್ಲಿ ಅರ್ಚಕರಾಗಿದ್ದುದರಿಂದ ಯಾರೋ ಹೇಳಿದ್ರು – ‘ಮುಜರಾಯಿ ಇಲಾಖೆಗೆ ಅರ್ಜಿ ಸಲ್ಲಿಸಿದರೆ ನೆರವು ಸಿಗಬಹುದು.’ ವಾರದಲ್ಲಿ ಒಬ್ಬ ಉತ್ತರ ಕುಮಾರ ಪ್ರತ್ಯಕ್ಷ. ಏನು ಅನುಕಂಪ, ಏನು ಕಣ್ಣೀರು. ಏನು ವಿಷಾದಗಳ ಮಾತುಗಳು. ಏನು ಗತ ಸ್ಮರಣೆಯ ನುಡಿಮುತ್ತುಗಳ ನಲಿದಾಟ. “ನನಗೆ ವಿಧಾನಸೌಧದ ವರೆಗೂ ಸಂಪರ್ಕವಿದೆ. ಎಲ್ಲಾ ಅಧಿಕಾರಿಗಳ ಪರಿಚಯವಿದೆ. ನಿಮ್ಮ ಕೆಲಸ ಆದಂತೆ’ ಎಂದು ನಂಬಿಸಿದ. ಆತನೇ ಅರ್ಜಿಯನ್ನು ಬರೆದು, ಸಹಿ ಪಡೆದ. ಖರ್ಚಿಗೆಂದು ಒಂದಷ್ಟು ಮೊತ್ತವನ್ನು ಪಡೆದ. ಈ ವಿಚಾರದಲ್ಲಿ ಹತ್ತಾರು ಮಂದಿಯಲ್ಲಿ ಹೇಳುತ್ತಿದ್ದ ಕೂಡಾ. ನಿಧಾನಕ್ಕೆ ವಿಷಯ ಮರೆಯಿತು. ಅರ್ಜಿ ಏನಾಯಿತೋ ಗೊತ್ತಿಲ್ಲ. ಆ ವ್ಯಕ್ತಿಯೂ ನಾಪತ್ತೆ.
ಸಭಾ ಕಾರ್ಯಕ್ರಮಗಳಲ್ಲಿ ಉತ್ತರಕುಮಾರರ ಹಾವಳಿ ಭೀಕರ! ಕಾರ್ಯಕ್ರಮ ನಿರ್ವಹಣೆಯಲ್ಲಿಂದ ತೊಡಗಿ ಮುಖ್ಯ ಭಾಷಣದ ತನಕ. ಎಲ್ಲರಿಗೂ ಮಾತನಾಡುವ ಚಾಳಿ. ಚೀಟಿ ಕೊಟ್ಟಿರೋ, ‘ಇನ್ನೂ ಅರ್ಧ ಗಂಟೆ ಮಾತನಾಡಲು ಇದೆ’ ಎಂದು ಮಾತನಾಡುತ್ತಾರೆ. ಇನ್ನು ಸಂಮಾನ ಪಡೆದ ಬಳಿಕ ಸಂಮಾನಿತರು ಕೃತಜ್ಞತಾ ನುಡಿಗಳನ್ನು ಹೇಳುವ ಪದ್ಧತಿಯಿದೆ. ಇದನ್ನು ಉದ್ಘೋಷಕರು ತಪ್ಪಾಗಿ ‘ಈಗ ಸಂಮಾನಿತರಿಂದ ಉತ್ತರ’ ಎಂದು ಬಿಡುತ್ತಾರೆ. ಸಂದರ್ಭದ ಪ್ರಜ್ಞೆಯುಳ್ಳವರು ಚುಟುಕಾಗಿ ಒಂದೆರಡು ನಿಮಿಷದಲ್ಲಿ ಮಾತು ನಿಲ್ಲಿಸುತ್ತಾರೆ. ಆದರೆ ಒಂದಷ್ಟು ಮಂದಿಗೆ ಇದು ಸ್ವ-ಘೋಷಿತ ಭಾಷಣಕ್ಕೆ ಅವಕಾಶ.  ತಾನು ಜನಿಸಿದಲ್ಲಿಂದ ತೊಡಗಿ, ಬೆಳೆದು ಬಂದ ರೀತಿಗಳಿಗೆ ಮಸಾಲೆ ಸೇರಿಸಿ ಮಾತನಾಡುವಾಗ ಸಭಾಮಂದಿರ ಖಾಲಿಯಾಗಿರುತ್ತದೆ. ‘ಇವರಿಗೆ ಯಾಕೆ ಸಂಮಾನ ಮಾಡಿದೆವೋ’ ಎಂದು ಸಂಘಟಕರು ಗೊಣಗಾಡಿಕೊಳ್ಳುತ್ತಿರುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತೆ ಕೆಲವು ವಿಚಿತ್ರ ಜನರಿದ್ದಾರೆ. ಅವರು ನಿಂತರೂ ಸುದ್ದಿ. ಕುಳಿತರೂ ಸುದ್ದಿ. ಅವರು ಮಾಡಿದೆಲ್ಲವೂ ಅದ್ಭುತ! ಉದಾ: ಒಬ್ಬರು ವಿದೇಶಕ್ಕೋ, ದೆಹಲಿಗೋ ಅಥವಾ ಇನ್ನೆಲ್ಲಿಗೋ ಹೋದರೆನ್ನಿ. ಮರಳಿ ಬಂದ ಮೇಲೆ ಕಿವಿ ಕಚ್ಚುವುದಕ್ಕೆ ಜನರನ್ನು ಹುಡುಕುತ್ತಾ ಇರುತ್ತಾರೆ. ವಿಮಾನದ ವ್ಯವಸ್ಥೆ, ವಿಮಾನ ನಿಲ್ದಾಣದಲ್ಲಿ ಅವರಿಗಾಗಿ ಕಾದು ಕುಳಿತ ವಾಹನ, ಅದರ ಡ್ರೈವರ್, ಇವರಿಗಾಗಿಯೇ ಖರೀದಿಸಿದ ವಾಹನ ಎಂಬಂತೆ ವರ್ಣನೆ, ತಾನು ಉಳಿದುಕೊಳ್ಳುವ ಹೋಟೆಲಿನ ಚಿತ್ರಣ, ಅಲ್ಲಿನ ಆಹಾರ, ಪ್ರತಿಷ್ಠಿತರು ಬಂದು ಮಾತನಾಡಿಸಿದ ರೀತಿ, ಅವರನ್ನು ಅಧಿಕಾರಿಗಳು ಸುತ್ತಾಡಿಸಿದ ರೀತಿಗಳು, ಸಚಿವರು ಕೈ ಕುಲುಕಿದ್ದು, ಸಮಾರಂಭದಲ್ಲಿ ತಾನು ಮಾತನಾಡಿದ ವರಸೆ.. ಹೀಗೆ ಅದ್ಭುತಗಳ ಮಾಲೆಗಳನ್ನು ಹೆಣೆಯುತ್ತಿರುತ್ತಾರೆ. ಕೇಳುಗರಾದ ನಾವು ದಿಗ್ಭ್ರಮೆ ವ್ಯಕ್ತಪಡಿಸಬೇಕು. ಅನ್ಯ ದಾರಿಯಿಲ್ಲ. ಎಲ್ಲಾದರೂ ನೀವು ಆಕಳಿಸಿದರೆ, ಅವರ ಮಾತಿನಲ್ಲಿ ನಿಮಗೆ ಆಸಕ್ತಿ ಇಲ್ಲವೆಂದು ಕಂಡರೆ ಅವರಲ್ಲಿ ವಿವಿಧ ಬಗೆಯ ಮಾತಿನ ಸೂಜಿಗಳು ಚುಚ್ಚಲು ಶುರುವಾಗುತ್ತದೆ. ಒಟ್ಟಿನಲ್ಲಿ ‘ತಾನು ಕೇಂದ್ರ ಬಿಂದು. ಇಂತಹ ವ್ಯವಸ್ಥೆಗಳು ಬೇರ್ಯಾರಿಗೂ ದುರ್ಲಭ’ ಎನ್ನುವ ಮನಃಸ್ಥಿತಿ. ಅವರ ಆಪ್ತರಿಗೆ ಅವರನ್ನು ಸಹಿಸಿಕೊಳ್ಳುವುದು ಅನಿವಾರ್ಯ. ಕೆಲವೊಮ್ಮೆ ಹಿರಿತನಕ್ಕೆ ಬೆಲೆಕೊಟ್ಟು ಸಹಿಸಿಕೊಳ್ಳಬೇಕಾಗುತ್ತದೆ.
ಮಹಾಭಾರತದ ಉತ್ತರಕುಮಾರನು ಬೌದ್ಧಿಕವಾಗಿ ಅನುಭವ ಸಂಪನ್ನ. ಯುದ್ಧವೇ ಮೊದಲಾದ ವಿಚಾರಗಳಲ್ಲಿ ‘ಥಿಯರಿ’ ಗೊತ್ತಿತ್ತು. ‘ಪ್ರಾಕ್ಟಿಕಲ್’ ಗೊತ್ತಿರಲಿಲ್ಲ. ಅಂದರೆ ಅವಕಾಶ ಸಿಗಲಿಲ್ಲ ಎನ್ನೋಣ. ಆದರೆ ಆಧುನಿಕ ಉತ್ತರಕುಮಾರರಲ್ಲಿ ಬೌದ್ಧಿಕತೆ ಶೂನ್ಯ. ಥಿಯರಿ, ಪ್ರಾಕ್ಟಿಕಲ್ ಎರಡೂ ಝೀರೋ!
ಯಕ್ಷಗಾನದ ಆಟ, ತಾಳಮದ್ದಳೆಗಳಲ್ಲಿ ಮಾಜಿ ಶಾಸಕ, ಕಲಾವಿದ ದಿ.ಕುಂಬಳೆ ಸುಂದರ ರಾವ್ ಅವರ ‘ಉತ್ತರಕುಮಾರ’ನ ಪಾತ್ರ ಚಿತ್ರಣವು ಒಂದು ಕಾಲಘಟ್ಟದ ವಿಸ್ಮಯ. ನಿಜ ‘ಉತ್ತರಕುಮಾರ’ನೂ ನಿಬ್ಬೆರಾಗುವಂತಹ ಪ್ರಸ್ತುತಿ. ದಿ.ಮಲ್ಪೆ ವಾಸುದೇವ ಸಾಮಗರ ಮಾತಿನಲ್ಲೂ ಉತ್ತರಕುಮಾರ ಮರುಹುಟ್ಟು ಪಡೆದಿದ್ದ.
‘ಉತ್ತರನ ಪೌರುಷ’ ಪದದ ಮೂಲ : ಮತ್ಸ್ಯದೇಶದ ಅರಸು ವಿರಾಟರಾಯ – ಸುದೇಷ್ಣೆ ದಂಪತಿಯ ಪುತ್ರ ಉತ್ತರಕುಮಾರ, ಪುತ್ರಿ ಉತ್ತರೆ. ಬಾಲ್ಯದಿಂದಲೇ ಚುರುಕು ಬುದ್ಧಿ. ಈತ ವಿದ್ಯಾಪರಂಗತ. ಯುದ್ಧ ವಿದ್ಯೆಗಳನ್ನು ಆರ್ಜಿಸಿಕೊಂಡಿದ್ದ. ಸ್ವಲ್ಪ ಹೆಚ್ಚೇ ಅನ್ನಿಸುವಂತಹ ಜಂಭಕೋರ. ಐಷರಾಮಿ ಜೀವನ. ಅನ್ಯ ಚಿಂತೆಗಳಿಲ್ಲ. ವಿಲಾಸಿ ಜೀವನ. ಹತ್ತಾರು ತರುಣಿಯರ ಮಧ್ಯೆ ಚಲಾವಣೆಯಿಲ್ಲದ ಏಕಪ್ರಭುತ್ವ! ಬಾಯ್ಮಿತಿನಿಂದ ಅನಾವರಣಗೊಳ್ಳುತ್ತಿದ್ದ ಶೌರ್ಯದ ಮಾತುಗಳಿಗೆ ತರುಣಿಯರು ಕಿವಿಯಾಗುತ್ತಿದ್ದರು. ಪಾಂಡವರು ಹನ್ನೆರಡು ವರುಷಗಳ ವನವಾಸವನ್ನು ಮುಗಿಸಿ, ಒಂದು ವರುಷ ಅಜ್ಞಾತವಾಸಕ್ಕಾಗಿ ರೂಪಾಂತರಗಳಿಂದ ವಿರಾಟ ನಗರದಲ್ಲಿದ್ದರು.
ವಿರಾಟ ನಗರದಲ್ಲಿ ಕೀಚಕನ ವಧೆಯಾದ ಸಂದರ್ಭ. ಈ ವರ್ತಮಾನವು ನಾಲ್ದೆಸೆ ಹರಡುತ್ತದೆ. ಸಂಶಯಗೊಂಡ ಕೌರವನು ವಿರಾಟ ನಗರದ ಮೇಲೆ ದಾಳಿ ಮಾಡುತ್ತಾನೆ. ಸೇನಾನಿಗಳು ಗೋಪಾಲಕರನ್ನು ಹಿಡಿದು ಹಿಂಸಿಸುತ್ತಾರೆ, ಗೋವುಗಳನ್ನು ಅಪಹರಿಸುತ್ತಾರೆ. ಇದನ್ನರಿತ ವಿರಾಟ ರಾಯನು ಸೈನ್ಯದೊಂದಿಗೆ ಯುದ್ಧಕ್ಕೆ ತೆರಳಿರುತ್ತಾನೆ. ಆ ಸಂದರ್ಭದಲ್ಲಿ ಗೋಪಾಲಕನೊಬ್ಬ ಗೋಗ್ರಹಣದ ಸುದ್ದಿಯನ್ನು ಉತ್ತರಕುಮಾರಿಗೆ ಬಿತ್ತರಿಸುತ್ತಾನೆ. ಆತನ ಸ್ವಾಭಿಮಾನ ಕೆರಳಿತು. “ಕೌರವನ ಸೇನೆಯೋ.. ದೊಡ್ಡ ವಿಚಾರವಲ್ಲ. ಅಲ್ಲಿರುವ ಭೀಷ್ಮ, ದ್ರೋಣ, ಕೃಪ, ಕರ್ಣಾದಿಗಳು ಲೆಕ್ಕವೇ ಅಲ್ಲ.” ಎನ್ನುತ್ತಾ ತರುಣಿಯರನ್ನು ನೋಡಿ ಮೀಸೆ ತಿರುವುತ್ತಾನೆ. “ಛೇ.. ಸಾರಥಿ ಇಲ್ಲವಲ್ಲಾ. ಇದ್ದಿದ್ದರೆ ಒಂದು ಕೈ ನೋಡುತ್ತಿದ್ದೆ” ಎಂದು ಅಸಹಾಯಕನಾಗಿ ಕುಸಿಯುತ್ತಾನೆ.
ಆಗ ಉತ್ತರೆಯು ಬಳಿಗೆ ಬಂದು, “ನಮ್ಮ ನಾಟ್ಯ ಗುರುಗಳಾದ ಬೃಹನ್ನಳೆಯು ಮೊದಲು ಅರ್ಜುನನಿಗೆ ಸಾರಥಿಯಾಗಿದ್ದರಂತೆ. ನಿನ್ನ ಸಾರಥಿಯಾಗಲು ಸಮ್ಮತಿಸಿದ್ದಾರೆ.” ಎಂದಾಗ ಉತ್ತರಕುಮಾರ ಇನ್ನಷ್ಟು ಉಬ್ಬಿ ‘ಕೂಡಲೇ ಬರಹೇಳು’ ಎಂದು ತರುಣಿಯರತ್ತ ಕಣ್ಣುಮಿಟುಕಿಸುತ್ತಾನೆ. ಉತ್ತರ ಮತ್ತು ಬೃಹನ್ನಳೆಯು ಯುದ್ಧಪೋಷಾಕುಗಳನ್ನು ಧರಿಸಿಕೊಂಡರು. ಸುಸಜ್ಜಿತ ಯುದ್ಧ ತಯಾರಿಯೊಂದಿಗೆ ರಥವು ರಣಕ್ಷೇತ್ರದತ್ತ ಹಾರಿತು. ಕೌರವ ಸೇನೆಯನ್ನು ನೋಡಿ ಉತ್ತರಕುಮಾರನು ದಂಗಾದನು. ಕಣ್ಣು ಮಂಜಾಯಿತು. ದೇಹ ಕಂಪಿಸಿತು. ಪ್ರಾಯೋಗಿಕವಾದ ಯುದ್ಧಕ್ರಮದಲ್ಲಿ ಅನನುಭವಿಯಾದ ಉತ್ತರನು ‘ಜೀವಭಯ’ದಿಂದ ರಥದಿಂದ ಜಿಗಿದನು. ‘ನನಗೆ ಯುದ್ಧ ಮಾಡಿ ಅನುಭವವಿಲ್ಲ’ ಎಂದು ಗೋಗರೆದನು. ರಥದಿಂದ ಹಾರಿದ ಉತ್ತರನನ್ನು ಬೃಹನ್ನಳೆಯು ಹಿಡಿದೆಳೆದು ತಂದು, “ನೀನು ಸಾರಥಿಯಾಗು, ನಾನು ರಥಿಕನಾಗುತ್ತೇನೆ.” ಎಂದು ರಥವನ್ನು ಸ್ಮಶಾನದತ್ತ ಓಡಿಸಲು ಹೇಳಿದ.
ಅಲ್ಲೊಂದು ಶಮೀ ವೃಕ್ಷದ ಮೇಲೆ ಶವಾಕೃತಿಯ ಗಂಟೊಂದು ತೂಗುತ್ತಿತ್ತು. “ನೀನು ಮರವೇರಿ ಆ ಗಂಟನ್ನು ಕೆಳಗೆ ತಾ.” ಎಂದು ಆಜ್ಞಾಪಿಸಿದ. ಉತ್ತರಕುಮಾರನು ಮರವೇರಿ ಇನ್ನೇನು ಶವಾಕಾರದ ಗಂಟಿಗೆ ಕೈಯಿಕ್ಕಿದಾಗ ಬೆಂಕಿ ಕಾಣಿಸಿಕೊಂಡಿತು. ಬೃಹನ್ನಳೆಯ ಸೂಚನೆಯಂತೆ ‘ಅರ್ಜುನನ ನಾಮಸ್ಮರಣೆ’ಯನ್ನು ಮಾಡುತ್ತಾ ಗಂಟನ್ನು ಕೆಳಗಿಳಿಸಿದ. ಬೃಹನ್ನಳೆಯು ಗಂಟನ್ನು ಬಿಚ್ಚುತ್ತಾ, “ಕುಮಾರಾ.. ಇದು ಪಾಂಡವರ ಆಯುಧಗಳು. ಅಜ್ಞಾತವಾಸದಲ್ಲಿದ್ದಾಗ ಆಯುಧಗಳ ಅಗತ್ಯವಿಲ್ಲದಿರುವುದರಿಂದ ಅವರು ಇಲ್ಲಿ ಜೋಪಾನವಾಗಿಟ್ಟಿದ್ದರು.” ಎಂದಾಗ ಉತ್ತರಕುಮಾರನ ಕೈಕಾಲು ನಡುಗಿತು!
“ನಿಮ್ಮ ಆಸ್ಥಾನದಲ್ಲಿ ‘ಕಂಕ’ನಾಗಿರುವ ಸುಜ್ಞಾನಿಯು ಧರ್ಮರಾಯ, ‘ಸೈರಂಧ್ರಿʼ ಯಾಗಿರುವವಳು ಪಾಂಡವರ ಮಡದಿ ದ್ರೌಪದಿ, ಸೂಪಜ್ಞನಾಗಿರುವ ‘ವಲಲ’ನೇ ಭೀಮಸೇನ, ‘ಗ್ರಂಥಿಕ’ನಾಗಿ ಹಯಪಾಲಕನಾಗಿರುವವನು ನಕುಲ, ಗೋವುಗಳನ್ನು ಸಂರಕ್ಷಿಸುವ ‘ತಂತ್ರೀಪಾಲ’ನು ಸಹದೇವ, ನಿನ್ನ ತಂಗಿಗೆ ನಾಟ್ಯಾಚಾರ್ಯನಾಗಿರುವ ನಾನೇ ‘ಅರ್ಜುನ’ನು. ನಮ್ಮ ಅಜ್ಞಾತವಾಸದ ಅವಧಿ ಇಂದಿಗೆ ಮುಗಿಯಿತು.”
ತನ್ನ ಅರಮನೆಯಲ್ಲೇ ವರುಷದಿಂದ ವಾಸವಿರುವ ಪಾಂಡವರನ್ನು ಹಗುರಭಾವದಿಂದ ಕಂಡ ಉತ್ತರಕುಮಾರನು ನಾಚಿ ತಲೆತಗ್ಗಿಸಿದನು. ಅರ್ಜುನನಿಗೆ ಶರಣಾದನು. “ಯುದ್ಧ ವಿದ್ಯೆಗಳ ಅರಿವಿತ್ತು ವಿನಾ ಪ್ರತ್ಯಕ್ಷ ಅನುಭವವಿಲ್ಲದೆ ಅಪಕ್ವತೆಯಿಂದ ಬದುಕುತ್ತಿದ್ದೆ. ನನ್ನ ಕಣ್ಣು ತೆರೆಯಿತು. ಜಂಭವು ಬದುಕಿಗೆ ನೆರವಾಗುವುದಿಲ್ಲ ಎನ್ನುವ ಸತ್ಯದ ಅರಿವಾಯಿತು.” ಎಂದನು. ಉತ್ತರ ಕುಮಾರನ ಸಾರಥ್ಯದಲ್ಲಿ ಕೌರವ ಸೇನೆಯನ್ನು ಅರ್ಜುನನೊಬ್ಬನೇ ಸದೆಬಡಿದ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.
Advertisement
Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ
January 29, 2026
9:31 PM
by: ಮಹೇಶ್ ಪುಚ್ಚಪ್ಪಾಡಿ
ಶುದ್ಧ ಹಿಮಾಲಯವೂ ಸುರಕ್ಷಿತವಲ್ಲ..! ಮರುಭೂಮಿ ಧೂಳಿನೊಂದಿಗೆ ಹರಡುವ ರೋಗಕಾರಕಗಳು
January 29, 2026
6:58 AM
by: ದ ರೂರಲ್ ಮಿರರ್.ಕಾಂ
ಮಕ್ಕಳಲ್ಲಿ ಗುಣ ಬೆಳೆಸುವ ಹೊಣೆ ಶಾಲೆಗಳಿಗಿಲ್ಲವೆ?
January 28, 2026
8:18 PM
by: ಡಾ.ಚಂದ್ರಶೇಖರ ದಾಮ್ಲೆ
ಸೆಗಣಿಯಿಂದ ಘನ ಜೀವಾಮೃತ : ಕೃಷಿಗೆ ನೈಸರ್ಗಿಕ ಗೊಬ್ಬರದ ಹೊಸ ಭರವಸೆ
January 28, 2026
7:20 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror