ದೇಶದ ಅತ್ಯಂತ ದೊಡ್ಡ ನೆಟ್ವರ್ಕ್ ಬಿ ಎಸ್ ಎನ್ ಎಲ್. ಸರ್ಕಾರಿ ಸ್ವಾಮ್ಯದ ಈ ನೆಟ್ವರ್ಕ್ ನೆಚ್ಚಿಕೊಂಡವರು ಅನೇಕರು. ಕೊಂಚ ಸೇವೆಯ ವ್ಯತ್ಯಯವಾದರೂ ಸರ್ಕಾರಿ ವ್ಯವಸ್ಥೆ ಎಂದು ಸಹಿಸಿಕೊಂಡರು. ಈಚೆಗೆ ಕೇಬಲ್ ಮೂಲಕ ಮನೆ ಮನೆಗೂ ವೇಗದ ಇಂಟರ್ನೆಟ್ ವ್ಯವಸ್ಥೆಯೂ ಆಯಿತು. ಅನೇಕರು ಸಂತಸ ಪಟ್ಟರು. ಈಗ ಮತ್ತೆ ಕೇಳುತ್ತಾರೆ, ಈ ಬಿ ಎಸ್ ಎನ್ ಎಲ್ ಯಾವಾಗ ಸರಿ ಆಗ್ತದೆ ಮಾರಾಯ್ರೆ…! ಹಳ್ಳಿಗಳು ಉದ್ಧಾರವಾಗುವುದು ಯಾವಾಗ ಮಾರಾಯ್ರೆ.. ? ಹೀಗೆ ಪ್ರಶ್ನೆ ಕೇಳಲೂ ಕಾರಣ ಇದೆ…
ಸರ್ಕಾರಿ ಸ್ವಾಮ್ಯದ ಬಿ ಎಸ್ ಎನ್ ಎಲ್ ಈಗ ಬೆಳೆಯುತ್ತದೆ ಎಂದು ಅನೇಕರು ಭಾವಿಸಿಕೊಂಡರು. ಹಳ್ಳಿ ಹಳ್ಳಿಗೂ ನೆಟ್ವರ್ಕ್ ಹೊಂದಿದೆ. ಕೊರೋನಾ ನಂತರ ವೇಗದ ಇಂಟರ್ನೆಟ್ ಪ್ರತೀ ಹಳ್ಳಿಗೂ ಅಗತ್ಯ ಇತ್ತು. ಇದಕ್ಕಾಗಿ ಫೈಬರ್ ಮೂಲಕ ಅಂದರೆ ಮನೆ ಮನೆಗೂ ಕೇಬಲ್ ಮೂಲಕ ವೇಗದ ಇಂಟರ್ನೆಟ್ ತಲುಪಿತು. ಕೆಲವು ಕಡೆಗಳಿಗೆ ಏರ್ ಫೈಬರ್ ಮೂಲಕ ವೇಗದ ಇಂಟರ್ನೆಟ್ ತಲುಪಿತು. ಹಳ್ಳಿಗಳಲ್ಲೂ ನೆಟ್ವರ್ಕ್ ಹೊಂದಿರುವ ಬಿ ಎಸ್ ಎನ್ ಎಲ್ ಗೆ ಬೆಳೆಯುವುದಕ್ಕೆ ಇದೊಂದು ಅವಕಾಶವೂ ಆಗಿತ್ತು. ಈ ನೆಟ್ವರ್ಕ್ ತಲಪಿಸಲು ಸಾಕಷ್ಟು ಪ್ರಾಂಚೈಸಿಯವರಿಗೆ ಅವಕಾಶ ನೀಡಿದರು. ಹೀಗಾಗಿ ಬಿ ಎಸ್ ಎನ್ ಎಲ್ ಗೆ ಕಡಿಮೆ ಸಿಬಂದಿಗಳ ಮೂಲಕ ಪ್ರಾಂಚೈಸಿ ವತಿಯಿಂದ ಗ್ರಾಮೀಣ ಭಾಗಕ್ಕೂ ಸೇವೆ ನೀಡಲು ಸಾಧ್ಯವಾಯಿತು. ಎಲ್ಲಾ ಫ್ರಾಂಚೈಸಿಗಳೂ ಉತ್ತಮ ಸೇವೆ ನೀಡಲು ಬದ್ಧರಾದರು ಹಾಗೂ ಹಳ್ಳಿಯಲ್ಲೂ ಉತ್ತಮ ಸೇವೆ ನೀಡಿದರು. ಆದರೆ ಬಿ ಎಸ್ ಎನ್ ಎಲ್ ಮಾತ್ರಾ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ., ಸರ್ಕಾರವೂ ಇದನ್ನೆಲ್ಲಾ ಗಮನಿಸಿದಂತೆ ಕಾಣುತ್ತಿಲ್ಲ. ಅಲ್ಲಿನ ಸಿಬಂದಿಗಳ ಲೋಪವೋ ಅಥವಾ ಅಧಿಕಾರಿಗಳ ಲೋಪವೂ, ನಿರ್ಲಕ್ಷ್ಯದ ಕಾರಣದಿಂದಲೋ ಅಥವಾ ಸೂಕ್ತ ವ್ಯವಸ್ಥೆ ಇನ್ನೂ ಲಭ್ಯವಾಗದ ಕಾರಣದಿಂದಲೋ ಬಿ ಎಸ್ ಎನ್ ಎಲ್ ಬೆಳೆಯುತ್ತಿಲ್ಲ…!. ಎಷ್ಟೆಂದರೆ ಕೇಬಲ್ ತುಂಡಾದರೆ ತಕ್ಷಣವೇ ಸೇರಿಸುವ ವ್ಯವಸ್ಥೆಯೂ ಬಿ ಎಸ್ ಎನ್ ಎಲ್ ಬಳಿ ಇಲ್ಲವಾಗಿದೆ.
ಸೋಮವಾರ ಮುಖ್ಯ ಕೇಬಲ್ ತುಂಡಾದ ಕಾರಣದಿಂದ ಅನೇಕ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇಂಟರ್ನೆಟ್ ಸೇವೆ ವ್ಯತ್ಯಯ ಆಗಿದೆ. ಬಿ ಎಸ್ ಎನ್ ಎಲ್ ನಂಬಿ ವರ್ಕ್ ಫ್ರಂ ಹೋಂ ಮಾಡುವ ಅನೇಕ ಯುವಕರಿಗೆ ಸಮಸ್ಯೆಯಾಯಿತು. ಹಳ್ಳಿ ಅಥವಾ ನಗರದಲ್ಲಿ ಕುಳಿತು ಬಿ ಎಸ್ ಎನ್ ಎಲ್ ನಂಬಿದರೆ ಕತೆ ಗೋವಿಂದ ಎಂಬ ಸ್ಥಿತಿಗೆ ಬಂದಿದೆ ಎಂದರೆ ಬಿ ಎಸ್ ಎನ್ ಎಲ್ ಬೆಳೆಯುವುದು ಯಾವಾಗ ? ಸರ್ಕಾರ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಬಿ ಎಸ್ ಎನ್ ಎಲ್ ಬೆಳೆಯಲೂ ಅವಕಾಶ ನೀಡದಿದ್ದರೆ ಹಳ್ಳಿಗಳು ಉದ್ದಾರವಾಗುವುದು ಯಾವಾಗ ? ಮುಖ್ಯ ಕೇಬಲ್ ಗಳು ತುಂಡಾದರೆ ಅದಕ್ಕೆ ಸೂಕ್ತವಾದ ದಂಡ ವಿಧಿಸುವ, ತಕ್ಷಣವೇ ದುರಸ್ತಿ ಮಾಡುವ ಅವಕಾಶ ಇಲ್ಲವೇ ? ಖಾಸಗಿ ಕಂಪನಿಗಳು ತಕ್ಷಣವೇ ಹೇಗೆ ವ್ಯವಸ್ಥೆ ಮಾಡುತ್ತವೆ ಎಂಬುದು ಪ್ರಶ್ನೆಯಾಗಿದೆ.
ಈಗ ಮನೆ ಮನೆಗೂ ಫೈಬರ್ ಸಂಪರ್ಕ ಪಡೆದ ಎಲ್ಲರೂ ಪ್ರಾಂಚೈಸಿಯ ಸಿಬಂದಿಗಳನ್ನು ಪ್ರಶ್ನೆ ಮಾಡುತ್ತಾರೆ ಸಹಜವಾಗಿಯೇ ಬಿ ಎಸ್ ಎನ್ ಎಲ್ ಕಡೆಗೆ ಆ ಸಿಬಂದಿಗಳು ಕೈ ತೋರಿಸುತ್ತಾರೆ, ಬಿ ಎಸ್ ಎನ್ ಎಲ್ ಸಿಬಂದಿಗಳು ಪ್ರಾಂಚೈಸಿ ಕಡೆಗೆ ಕೈ ತೋರಿಸುತ್ತಾರೆ. ತಕ್ಷಣವೇ ನೆಟ್ವರ್ಕ್ ಸಮಸ್ಯೆ ದುರಸ್ತಿಯಾಗದೇ ಇರುವುದರಿಂದ ಅನೇಕರಿಗೆ ಸಮಸ್ಯೆಯಾಗುತ್ತಿದೆ. ವರ್ಕ್ ಫ್ರಂ ಹೋಂ ಮಾಡುತ್ತಿರುವ ಯುವಕರಿಗಂತೂ ಪರದಾಟವಾಗಿದೆ. ಸೋಮವಾರವೂ ಅದೇ ಸಮಸ್ಯೆಯಾಗಿದೆ. ಇದು ನಿರುತ್ಸಾಹವೋ ಅಥವಾ ವ್ಯವಸ್ಥೆಯ ಕೊರತೆಯೋ ಎಂಬುದೂ ಅರ್ಥವಾಗದ ಸ್ಥಿತಿ. ಈಗೀಗ ಗ್ರಾಮೀಣ ಭಾಗಕ್ಕೆ ಸೇವೆ ನೀಡಲು ಪ್ರಾಂಚೈಸಿ ಪಡೆದವರೂ ಪರದಾಟ ನಡೆಸಬೇಕಾದ ಸ್ಥಿತಿ ಬಂದಿದೆ. ಗ್ರಾಹಕರಿಗೆ ಉತ್ತರ ನೀಡಿ ಸುಸ್ತಾಗಬೇಕಾದ ಪ್ರಮೇಯ ಬಂದಿದೆ.
ಮುಖ್ಯಕೇಬಲ್ ತುಂಡಾದರೆ ತಕ್ಷಣವೇ ಬಿ ಎಸ್ ಎನ್ ಎಲ್ ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕು, ಹಳ್ಳಿಗಳಲ್ಲೂ ತಕ್ಷಣವೇ ನೆಟ್ವರ್ಕ್ ಸರಿಯಾಗದೇ ಇದ್ದರೆ ವರ್ಕ್ ಫ್ರಂ ಹೋಂ ಯುವಕರಿಗೆ ಸಮಸ್ಯೆಯಾಗುತ್ತಿದೆ. ಇಂದು ಹಳ್ಳಿಯಲ್ಲೂ ಇಂಟರ್ನೆಟ್ ತೀರಾ ಅಗತ್ಯವಾಗಿದೆ. ಮುಖ್ಯ ಕೇಬಲ್ ತುಂಡಾದರೆ ಬಿ ಎಸ್ ಎನ್ ಎಲ್ ನಂಬಿಕೊಂಡಿರುವ ಗ್ರಾಮೀಣ ಭಾಗದ ಬ್ಯಾಂಕಿಂಗ್ ವ್ಯವಸ್ಥೆ , ಅಂಚೆ ಕಚೇರಿ ಸೇರಿದಂತೆ ಹಲವಾರು ವ್ಯವಸ್ಥೆಗಳಿಗೂ ಸಮಸ್ಯೆಯಾಗುತ್ತದೆ. ಹಳ್ಳಿಯಿಂದಲೇ ಕೆಲಸ ಮಾಡುವ ಯುವಕರಿಗೂ ಸಮಸ್ಯೆಯಾಗುತ್ತದೆ. ಯಾವುದೇ ಅಭಿವೃದ್ಧಿ ಕಾರ್ಯದ ಸಂದರ್ಭ ಇಂದಿನ ಅತೀ ಅಗತ್ಯದ ಇಂಟರ್ನೆಟ್ ವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲು ಬಿ ಎಸ್ ಎನ್ ಎಲ್ ಮುಂದಾಗಬೇಕು, ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು ಹಾಗೂ ಯಾವುದೇ ಸೂಚನೆ ನೀಡದೆ ಮುಖ್ಯ ಕೇಬಲ್ ಗಳನ್ನು ತುಂಡಿಸಿದರೆ ದಂಡ ವಿಧಿಸುವ ಕ್ರಮವೂ ಆಗಬೇಕು ಎಂಬ ಒತ್ತಾಯ ಗ್ರಾಹಕರಿಂದ ಬಂದಿದೆ. ಈಚೆಗೆ ಕೆಲವು ಸಮಯಗಳಿಂದ ಆಗಾಗ ಬಿ ಎಸ್ ಎನ್ ಎಲ್ ನೆಟ್ವರ್ಕ್ ಕೈಕೊಡುತ್ತಿದೆ ಎಂದೂ ಗ್ರಾಹಕರು ದೂರಿದ್ದಾರೆ.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…