ಕಣ್ಮರೆಯಾಗುತ್ತಿರುವ ಕೃಷಿ ಬೆಳೆಗಳ ದೇಸಿ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ರಾಜ್ಯ ಸರಕಾರ ಕೈಗೆತ್ತಿಕೊಂಡಿರುವ ʻʻದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮ” ದಕ್ಷಿಣ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಂಡಿದೆ.
ಈಗಾಗಲೇ ದೇಸಿ ತಳಿಗಳ ನೋಂದಣಿಗೆ ಕೆ-ಕಿಸಾನ್ ಆ್ಯಪ್ ಬಿಡುಗಡೆಗೊಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆಗೆ ಸಂಬಂಧಿಸಿದಂತೆ ಒಟ್ಟು 6 ರೈತರ (ಮಂಗಳೂರು-2, ಬಂಟ್ವಾಳ-1, ಮುಲ್ಕಿ-1, ಬೆಳ್ತಂಗಡಿ-2) 268 ತಳಿಗಳು ನೋಂದಣಿಯಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಾಂಪ್ರದಾಯಿಕ ತಳಿಗಳನ್ನು ನೋಂದಣಿ ಮಾಡಿಕೊಳ್ಳಬೇಕು.
ದೇಸಿ ತಳಿಗಳ ಸಂರಕ್ಷಣೆ ಮತ್ತು ಕೃಷಿಯಲ್ಲಿ ತೊಡಗಿರುವ ರೈತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಇರಬೇಕು. ಬಿತ್ತನೆ ಬೀಜ ಬ್ಯಾಂಕ್‍ನಲ್ಲಿ ಇರಿಸಲು ರೈತರು ಕಡ್ಡಾಯವಾಗಿ ಅಗತ್ಯ ಪ್ರಮಾಣದ ದೇಸಿ ತಳಿಗಳ ಬೀಜಗಳನ್ನು ನೀಡಲು ಸಿದ್ದರಿರಬೇಕು. ಜಾನುವಾರು ನಿರ್ವಹಣೆ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಹಾಗೂ ಸುಸ್ಥಿರ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರಬೇಕು. ಈ ಎಲ್ಲಾ ಅಂಶಗಳನ್ನು ಅನುಸರಿಸಿ ದೇಸಿ ತಳಿಗಳನ್ನು ಸಂರಕ್ಷಿಸುತ್ತಿರುವ ರೈತರು ತಮ್ಮ ವಿವರಗಳನ್ನು ನೋಂದಾಯಿಸಬೇಕು.
ತಳಿ ಸಂರಕ್ಷಣೆ ಉದ್ದೇಶ : ಕಣ್ಮರೆಯಾಗುತ್ತಿರುವ ತಳಿಗಳನ್ನು ಒಳಗೊಂಡಂತೆ ಆಯಾ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ದೇಸಿ ತಳಿಗಳ ಗುರುತಿಸುವಿಕೆ ಹಾಗೂ ಸಂರಕ್ಷಣೆ, ಗುರುತಿಸಿದ ದೇಸಿ ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡುವುದು, ದೇಸಿ ತಳಿಗಳನ್ನು ಹಿಂದಿನಿಂದಲೂ ಸಂರಕ್ಷಿಸಿ ಕೃಷಿ ಮಾಡುತ್ತಿರುವ ರೈತರಿಗೆ ಬೆಂಬಲ ನೀಡುವುದು.
ಸಾಂಪ್ರದಾಯಿಕ, ಪರಂಪರೆಯ ಜಾನಪದ ಪ್ರಭೇದಗಳು ವಿಶಿಷ್ಟ ಗುಣಲಕ್ಷಣ ಮತ್ತು ಆರೋಗ್ಯವರ್ಧಿತ ತಳಿಗಳಾಗಿರುತ್ತದೆ. ವಿಶಿಷ್ಟ ಗುಣಲಕ್ಷಣ ಮತ್ತು ಭೌಗೋಳಿಕ ಮೂಲಗಳ ಕಾರಣದಿಂದ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ಅಧಿಸೂಚಿತ ಪ್ರಭೇದಗಳಿಂದ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಆದರೆ ಕೆಲವೇ ರೈತರು ಈ ದೇಸಿ ತಳಿ ಕೃಷಿ ಮಾಡುವುದನ್ನು ಮುಂದುವರಿಸಿದ್ದಾರೆ. ಈ ಹಿನ್ನಲೆಯಲ್ಲಿ ಕೃಷಿ ಇಲಾಖೆ, ಈ ಉತ್ತೇಜನ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಿದೆ.
ಆಯ್ಕೆಯಾದ ಬೆಳೆಗಳು: ಭತ್ತ, ರಾಗಿ, ಜೋಳ, ತೊಗರಿ, ಹುರುಳಿ, ಅವರೆ, ಅಲಸಂಡೆ, ಮಡಕಿಕಾಳು, ಹುಚ್ಚೆಳ್ಳು, ಕುಸುಬೆ, ಎಳ್ಳು, ನವಣೆ, ಸಾಮೆ, ಊದಲು, ಕೊರಲೆ, ಹಾರಕ, ಬರಗು ಮತ್ತು ಸಲಹಾ ಸಮಿತಿ ಶಿಫಾರಸ್ಸು ಮಾಡುವ ಇತರೆ ಬೆಳೆಗಳನ್ನು ನೋಂದಣಿ ಮಾಡಬಹುದು.
ದೇಸಿ ತಳಿಗಳನ್ನು ಗುರುತಿಸುವ ಗುಣಲಕ್ಷಣಗಳು: ರೈತರು ತಲೆಮಾರುಗಳಿಂದ ಬೆಳೆದ ಸಾಂಪ್ರದಾಯಿಕ ಪ್ರಭೇದಗಳು, ಸ್ಥಳೀಯ ಕೃಷಿ ಪದ್ದತಿ ಮತ್ತು ಪ್ರದೇಶಕ್ಕೆ ಹೊಂದಿಕೊಂಡಿರುವ ತಳಿಗಳಾಗಿವೆ. ಇವು ಅಧಿಸೂಚಿತಗೊಂಡ ತಳಿಗಳಾಗಿರಬಹುದು. ವಿಶಿಷ್ಟ ಗುಣ ಲಕ್ಷಣಗಳನ್ನು ಹೊಂದಿರುತ್ತವೆ. ಪ್ರೊಟೆಕ್ಷನ್ ಆಫ್ ಪ್ಲಾಂಟ್ ವೆರೈಟೀಸ್ ಮತ್ತು ಫಾರ್ಮರ್‍ಸ್ ರೈಟ್ ಆಥಾರಿಟಿಯಲ್ಲಿ ನೋಂದಾಯಿಸಿಕೊಂಡಿರಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


