ಕಳೆದ ವಿಧಾನಸಭಾ ಚುನಾವಣೆಯ ಕಾವು ಕಳೆದ ನಂತರ ಈಗ ಲೋಕಸಭಾ ಚುನಾವಣೆಯ ಕಾವು ಪಡೆಯುತ್ತಿದ್ದಂತೆಯೇ ರಸ್ತೆ ಹೋರಾಟಗಳೂ ಸುಳ್ಯದಲ್ಲಿ ಚುರುಕಾಗಿದೆ.
ಕಳೆದ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರವು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಕ್ಷೇತ್ರದಾದ್ಯಂತ ರಸ್ತೆ, ಸೇತುವೆ ಸೇರಿದಂತೆ ಮೂಲಭೂತ ಸಮಸ್ಯೆಗಳ ಬಗ್ಗೆ ಜನರು ಬೇಡಿಕೆಯ ಮೇಲೆ ಬೇಡಿಕೆ ಸಲ್ಲಿಸುತ್ತಿದ್ದರೂ ಯಾವುದೇ ಪ್ರಗತಿ ಕಂಡಿರಲಿಲ್ಲ. ಚುನಾವಣೆಯ ಸಮಯದಲ್ಲಿ ಭರವಸೆಗಳ ಮೇಲೆ ಭರವಸೆಗಳು ನೀಡಿದ ಬಳಿಕ ಎಲ್ಲೆಡೆಯೂ ಹೋರಾಟಗಳು, ಪ್ರತಿಭಟನೆಗಳು ತಣ್ಣಗಾದವು.
ಇದೀಗ ಮತ್ತೆ ಹೋರಾಟ, ಪ್ರತಿಭಟನೆಯ ಧ್ವನಿಗಳು ಕೇಳಿಬಂದಿದೆ. ಸುಳ್ಯದ ಜಟ್ಟಿಪಳ್ಳದಲ್ಲಿ ಪತ್ರಕರ್ತ ಶರೀಫ್ ಧರಣಿ ಕುಳಿತರು. ಅನೇಕ ಬಾರಿ ಈ ರಸ್ತೆಯ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು, ಜನಪ್ರತಿನಿಧಿಗಳು ಭರವಸೆ ನೀಡಿದ್ದರೂ ರಸ್ತೆ ದುರಸ್ತಿ ಆಗಿರಲಿಲ್ಲ. ಈ ರಸ್ತೆಯು ಸುಳ್ಯದಿಂದ ದುಗಲಡ್ಕದವರೆಗೆ ಹೋಗುವ ರಸ್ತೆಯಾಗಿದೆ. ಕಳೆದ ವರ್ಷ ಈ ರಸ್ತೆಗಾಗಿ ಹೋರಾಟವೂ ನಡೆದಿತ್ತು. ಈಗ ಜಟ್ಟಿಪಳ್ಳಕ್ರಾಸ್ ನಿಂದ ಕೊಡಿಯಾಲಬೈಲ್ ಕಡೆಗೆ ಹೋಗುವ ರಸ್ತೆಯಲ್ಲಿ ಹೊಂಡಗುಂಡಿ ಏರ್ಪಟ್ಟು ಸಂಚಾರ ದುಸ್ತರವಾಗಿದೆ. ಈ ರಸ್ತೆಯ ಪ್ಯಾಚ್ ವರ್ಕ್ ಕೆಲಸ ಮಾಡುವುದಕ್ಕಾಗಿ ಭಿಕ್ಷೆ ಬೇಡುವ ಕಾರ್ಯಕ್ರಮ ನಡೆಯಿತು. ಬಳಿಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಜ.9 ರೊಳಗೆ ತೇಪೆ ಕಾರ್ಯ ಮಾಡುವುದಾಗಿ ಭರವಸೆ ನೀಡಿದ ಬಳಿಕ ಧರಣಿ ಹಿಂತೆಗೆದುಕೊಂಡರು. ಆದರೆ ಇಡೀ ರಸ್ತೆಗೆ ಡಾಮರೀಕಣ ಇನ್ನೂ ಕನಸಾಗಿದೆ…!.
ಈ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಬಹಿಷ್ಕಾರ ಮೂಲಕ ಸಂಚಲನ ಮೂಡಿಸಿದ ಅರಂತೋಡು ರಸ್ತೆ ಹೋರಾಟ ಸಮಿತಿ ಮತ್ತೆ ಮನವಿ ನೀಡಿ ಎಚ್ಚರಿಸಿದೆ. ವಿಧಾನ ಸಭಾ ಚುನಾವಣೆಯ ಸಂದರ್ಭ, ಅರಂತೋಡಿನಿಂದ ಕನಿಷ್ಠ ಅಡ್ತಲೆ ತನಕ ರಸ್ತೆ ಅಭಿವೃದ್ಧಿ ಮಾಡದೇ ಇದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಹೇಳಿತ್ತು. ಆ ಸಂದರ್ಭ ರಸ್ತೆ ದುರಸ್ತಿ ನಡೆದು ಬಳಿಕ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಹೋರಾಟ ಸಮಿತಿ ಸಕ್ರಿಯವಾಗಿದೆ. ಲೋಕಸಭಾ ಚುನಾವಣೆಗೆ ಮೊದಲು ರಸ್ತೆ ಅಗಲೀಕರಣ ಕಾರ್ಯ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. ನಾಗರಿಕರ ಪರವಾಗಿ, ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಹಾಗೂ ಕಾರ್ಯದರ್ಶಿ ರಂಜಿತ್ ಅಡ್ತಲೆ ಮನವಿ ಮಾಡಿದ್ದಾರೆ.
ಮನವಿಗೆ ಸ್ಪಂದಿಸಿದ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಅವರು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರನ್ನು ಸ್ಥಳಕ್ಕೆ ಕರೆಯಿಸಿ, ಜ. 15 ರೊಳಗೆ ಎರಡನೇ ಕೋಟ್ ಡಾಮಾರಿಕರಣ ಪ್ರಾರಂಭ ಮಾಡಲು ಹಾಗೂ ರಸ್ತೆ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತೆರವು ಮಾಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ಈ ಸಂದರ್ಭ ಬಿಜೆಪಿ ಪ್ರಮುಖರಾದ ಸಂತೋಷ್ ಕುತ್ತಮೊಟ್ಟೆ ಅವರು ಉಪಸ್ಥಿತರಿದ್ದರು.
ಇದರ ಜೊತೆಗೆ ಸುಳ್ಯ ಕೆಲವು ಕಡೆ ಸೇತುವೆ ಕಾಮಗಾರಿಗಳು ಅರ್ಧಕ್ಕೆ ನಿಂತಿದೆ. ವಿಧಾನಸಭಾ ಚುನಾವಣೆಯ ವೇಳೆ ಭರವಸೆ ನೀಡಿದ್ದ ಸೇತುವೆಗಳು ಕಾಮಗಾರಿ ಆರಂಭವಾಗಿ ಬಳಿಕ ಸ್ಥಗಿತಗೊಂಡಿದೆ. ಕೆಲವು ಕಡೆ ರಸ್ತೆಗಳೂ ಪರಿಸ್ಥಿತಿಯೂ ಹಾಗೆಯೇ ಇದೆ. ದುಗಲಡ್ಕ-ಜಟ್ಟಿಪಳ್ಳ ರಸ್ತೆ ಇನ್ನೂದುರಸ್ತಿ ಆಗಿಲ್ಲ. ಈ ಬಾರಿಯೂ ಲೋಕಸಭಾ ಚುನಾವಣೆಯ ವೇಳೆ ಮತ್ತೆ ಭರವಸೆಯನ್ನು ಹೊತ್ತು ತರಲಿದ್ದಾರೆ ಹೊಸ ನಾಯಕರು…!.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…