Advertisement
ಪ್ರಮುಖ

ತೂಗುಸೇತುವೆಗಳ ಸರದಾರ ಡಾ. ಗಿರೀಶ್‌ ಭಾರದ್ವಾಜ್‌ ಅವರಿಗೆ ಗ್ರಾಮೀಣ ಭಾರತದ ಭಾವಪೂರ್ಣ ನಮನ

Share

ಒಬ್ಬ ವ್ಯಕ್ತಿ ಸತ್ತರೆ ಒಂದು ಕುಟುಂಬ ದುಃಖಿಸುತ್ತದೆ. ಒಬ್ಬ ನಾಯಕ ಸತ್ತರೆ ಒಂದು ಸಮಾಜ ದುಃಖಿಸುತ್ತದೆ. ಆದರೆ, ಒಬ್ಬ ಕನಸುಗಾರ ಸತ್ತರೆ ಇಡೀ ತಲೆಮಾರೇ ಒಂದು ದಾರಿದೀಪವನ್ನು ಕಳೆದುಕೊಳ್ಳುತ್ತದೆ.

ಪದ್ಮಶ್ರೀ ಡಾ. ಗಿರೀಶ್‌ ಭಾರದ್ವಾಜ್‌ ಅವರ ಅಗಲಿಕೆ ಅಂಥದ್ದೇ ಒಂದು ನಷ್ಟ. ಆದರೆ ಅದೇ ವೇಳೆ ಮತ್ತಷ್ಟು ಸಮಾಧಾನ ಕೊಡುವ ಸಂಗತಿಯೂ ಇದೆ. ಅವರು ಕೇವಲ ಸೇತುವೆಗಳನ್ನು ನಿರ್ಮಿಸಲಿಲ್ಲ; ತಮ್ಮ ಕೆಲಸವನ್ನು ಮುಂದುವರಿಸುವ ಶಕ್ತಿಗಳನ್ನು, ಮುಂದಿನ ಪೀಳಿಗೆಯನ್ನು ಸಮಾಜಕ್ಕೆ ಕೊಟ್ಟು ಹೋಗಿದ್ದಾರೆ.

ಇಂದು ಅವರ ನಿಧನದ ಸುದ್ದಿ ಕೇಳಿದಾಗ ದೇಶದ ಮೂಲೆಮೂಲೆಗಳ ನೂರಾರು ಹಳ್ಳಿಗಳಲ್ಲಿ ತೂಗುತ್ತಿರುವ ಸೇತುವೆಗಳು ಕಣ್ಣಮುಂದೆ ಬಂದವು. ಆ ಸೇತುವೆಗಳ ಮೇಲೆ ಶಾಲೆಗೆ ಓಡಿದ ಮಕ್ಕಳ ಹೆಜ್ಜೆಗಳು, ತಲೆಯ ಮೇಲೆ ಹುಲ್ಲಿನ ಹೊರೆ ಹೊತ್ತು ನಡೆದ ಮಹಿಳೆಯರು, ಬೆನ್ನ ಮೇಲೆ ಗೊಬ್ಬರದ ಚೀಲ ಹೊತ್ತು ನಡೆದ ರೈತರು, ರಾತ್ರಿ ಹೊತ್ತಿನಲ್ಲಿ ಆಸ್ಪತ್ರೆಯತ್ತ ಸಾಗಿದ ರೋಗಿಗಳು, ತುರ್ತಾಗಿ ಪೇಟೆಗೆ ತೆರಳಿದ ದ್ವಿಚಕ್ರ ವಾಹನ ಸವಾರರು… ಇವರೆಲ್ಲರೂ ಇಂದು ಒಬ್ಬ ವ್ಯಕ್ತಿಯನ್ನು ಮೌನವಾಗಿ ನೆನಪಿಸಿಕೊಳ್ಳುತ್ತಿದ್ದಾರೆ.

ಏಕೆಂದರೆ ಅವರು ಕಟ್ಟಿದ್ದು ಕೇವಲ ಕಬ್ಬಿಣದ ಕೇಬಲ್‌ಗಳ ಸೇತುವೆಗಳಲ್ಲ. ಅವರು ಕಟ್ಟಿದ್ದು ಬದುಕಿನ ಸೇತುವೆಗಳು.

ಭಾರತದ ಸಾವಿರಾರು ಹಳ್ಳಿಗಳಲ್ಲಿ ಅಭಿವೃದ್ಧಿ ಎಂದರೆ ಮೊದಲು ರಸ್ತೆ, ನಂತರ ಸೇತುವೆ. ಆದರೆ ಅನೇಕ ಕಡೆ ರಸ್ತೆ ಬಂತು, ಸೇತುವೆ ಬರಲಿಲ್ಲ. ಮಳೆ ಬಂದರೆ ಇಡೀ ಹಳ್ಳಿ ಹೊರಜಗತ್ತಿನಿಂದ ಸಂಪರ್ಕ ಕಳೆದುಕೊಳ್ಳುತ್ತಿತ್ತು. ಮಕ್ಕಳು ಶಾಲೆಗೆ ಹೋಗಲಾಗದು. ರೈತ ತನ್ನ ಬೆಳೆ ಮಾರುಕಟ್ಟೆಗೆ ಕೊಂಡೊಯ್ಯಲಾಗದು. ರೋಗಿಗಳು, ಗರ್ಭಿಣಿಯರನ್ನು ಆಸ್ಪತ್ರೆಗೆ ಸಾಗಿಸಲು ನದಿಯೇ ಅಡ್ಡ. ಅನೇಕ ಗ್ರಾಮಗಳಿಗೆ ಮಳೆಗಾಲವೇ ವನವಾಸ.

ಈ ಸಮಸ್ಯೆಯನ್ನು ಕಡತಗಳಲ್ಲಿ ಓದಿದ ಅಧಿಕಾರಿಗಳಿಗಿಂತ, ಕಾಲಿಗೆ ಚಪ್ಪಲಿ ಹಾಕಿಕೊಂಡು ಹಳ್ಳಿಗಳನ್ನು ನಡೆದ ಗಿರೀಶ್‌ ಭಾರದ್ವಾಜ್‌ ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ತಮ್ಮ ಊರಿನಲ್ಲೇ ಮೊದಲ ತೂಗುಸೇತುವೆ ನಿರ್ಮಿಸಿದ ಬಳಿಕ ಅವರು ಕೇಳಿದ್ದು ಒಂದೇ ಪ್ರಶ್ನೆ, “ಒಂದು ಚಿಕ್ಕ ನದಿಗೆ ಸೇತುವೆ ಕಟ್ಟಲು ಜನರು ಇನ್ನೂ ಎಷ್ಟು ವರ್ಷ ಕಾಯಬೇಕು?” ಆ ಪ್ರಶ್ನೆಗೆ ಉತ್ತರವಾಗಿಯೇ ದೇಶಾದ್ಯಂತ ಸದ್ದಿಲ್ಲದೆ ಹರಡಿತು ತೂಗುಸೇತುವೆಗಳ ಚಳವಳಿ.

ಇಂಜಿನಿಯರ್‌ಗಳು ಕಟ್ಟಡಗಳನ್ನು ಕಟ್ಟುತ್ತಾರೆ. ಗಿರೀಶ್‌ ಭಾರದ್ವಾಜ್‌ ಅವರೂ ಕೂಡಾ ಇಂಜಿನಿಯರ್‌. ಆದರೆ ಅವರು ಕಟ್ಟಿದ್ದು ಕಟ್ಟಡಗಳಿಗಿಂತ ದೊಡ್ಡದನ್ನು. ಅವರು ಊರುಗಳ ನಡುವೆ ಸಂಬಂಧಗಳನ್ನು ಕಟ್ಟಿದರು. ಒಂದು ಸೇತುವೆ ನಿರ್ಮಾಣವಾದರೆ ಎರಡು ದಡಗಳು ಸೇರುತ್ತವೆ. ಅದರೊಂದಿಗೆ ಮಕ್ಕಳ ಭವಿಷ್ಯ, ರೈತನ ಆದಾಯ, ಮಹಿಳೆಯರ ಸುರಕ್ಷತೆ ಮತ್ತು ಗ್ರಾಮಗಳ ಅಭಿವೃದ್ಧಿಯೂ ಸೇರುತ್ತದೆ ಎಂಬುದನ್ನು ಅವರು ಬದುಕಿನ ಮೂಲಕ ತೋರಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಅವರ ಪ್ರತಿಯೊಂದು ಸೇತುವೆಯ ಹಿಂದೆ ಒಂದು ಹಳ್ಳಿಯ ಕಥೆ ಇತ್ತು. ಅಂತಹ ಹತ್ತಾರು ಕಥೆಗಳನ್ನು ಅವರು ಹೇಳಿಕೊಂಡಿದ್ದಾರೆ ಕೂಡಾ. ಮೇಲ್ನೋಟದಲ್ಲಿ ಒಂದು ಮಗುವಿನ ಕನಸು ಇತ್ತು. ಒಬ್ಬ ರೈತನ ನಿಟ್ಟುಸಿರು ಇತ್ತು. ಒಬ್ಬ ತಾಯಿಯ ಪ್ರಾರ್ಥನೆ ಇತ್ತು. ಅದಕ್ಕಾಗಿಯೇ ಇಂದಿಗೂ ಗ್ರಾಮೀಣ ಜನರ ಮನಸ್ಸಿನಲ್ಲಿ ಗಿರೀಶ್‌ ಭಾರದ್ವಾಜ್‌ ಎಂದರೆ ನಂಬಿಕೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಲದಲ್ಲಿ ಬೆಳೆದ ಈ ಸಾಧಕ ದೇಶದ ಅನೇಕ ರಾಜ್ಯಗಳಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದರು. ಅವರು ನಿರ್ಮಿಸಿದ ಸೇತುವೆಗಳು ಕೇವಲ ಕರ್ನಾಟಕದಲ್ಲಲ್ಲ; ಬೆಟ್ಟ-ಕಾಡುಗಳ ನಡುವೆ, ಅಭಿವೃದ್ಧಿಯ ಸ್ಪರ್ಶವೇ ಕಾಣದ ದುರ್ಗಮ ಹಳ್ಳಿಗಳಲ್ಲಿಯೂ ಜೀವನಾಡಿಯಾಗಿ ನಿಂತಿವೆ. ಆದ್ದರಿಂದಲೇ ಅವರನ್ನು ಜನರು “ತೂಗುಸೇತುವೆಗಳ ಸರದಾರ” ಎಂದು ಕರೆದರು. ಈ ಬಿರುದು ಯಾವುದೇ ಸರ್ಕಾರ ಕೊಟ್ಟದ್ದಲ್ಲ. ಅದು ಗ್ರಾಮೀಣ ಜನರ ಪ್ರೀತಿ ಮತ್ತು ಕೃತಜ್ಞತೆಯ ಗೌರವ.

ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಿತು. ಆದರೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಯಾವುದು ಎಂದು ಕೇಳಿದಾಗ, ಪ್ರತಿದಿನ ಶಾಲೆಗೆ ಸುರಕ್ಷಿತವಾಗಿ ಹೋಗುವ ಮಗುವಿನ ನಗು, ಹೊಲದಿಂದ ಮನೆಗೆ ನೆಮ್ಮದಿಯಿಂದ ಹಿಂದಿರುಗುವ ರೈತನ ಬದುಕು, ಸಮಯಕ್ಕೆ ಆಸ್ಪತ್ರೆಗೆ ತಲುಪಿದ ರೋಗಿಯ ಜೀವವೇ ನಿಜವಾದ ಪ್ರಶಸ್ತಿ ಎಂದು ಅವರು ಅನೌಪಚಾರಿಕ ಮಾತುಕತೆಯಲ್ಲಿ ಹೇಳುತ್ತಿದ್ದರು.

ಗಿರೀಶ್‌ ಭಾರದ್ವಾಜ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾದ ದಿನವೂ ಅವರ ಬದುಕಿನ ಸರಳತೆಯನ್ನು ಹೇಳುವ ಒಂದು ಅಪರೂಪದ ಘಟನೆ ನಡೆಯಿತು. ಅದೇ ದಿನ ಬೆಳಗ್ಗೆ ಅವರ ಮನೆಯ ಹಟ್ಟಿಯಲ್ಲಿ ಒಂದು ಹಸು ಕರು ಹಾಕಿತ್ತು. ಪ್ರಶಸ್ತಿ ಸಂಭ್ರಮದಲ್ಲಿ ಆ ಪುಟ್ಟ ಕರುವಿಗೆ “ಪದ್ಮಶ್ರೀ” ಎಂಬ ಹೆಸರನ್ನೇ ಇಡಲಾಯಿತು.

ಹಸುಗಳೆಂದರೆ ಅವರಿಗೆ ವಿಶೇಷ ಪ್ರೀತಿ. ಅವರ ದೃಷ್ಟಿಯಲ್ಲಿ ಹಸು ಸಾಕಣೆ ಕೇವಲ ಹಾಲು ಅಥವಾ ಆದಾಯಕ್ಕಾಗಿ ಅಲ್ಲ; ಅದು ಆತ್ಮತೃಪ್ತಿ ನೀಡುವ ಜೀವನ ವಿಧಾನ. ಪ್ರಕೃತಿಯೊಂದಿಗಿನ ನಂಟು, ಗ್ರಾಮೀಣ ಬದುಕಿನ ಮೌಲ್ಯಗಳು ಮತ್ತು ಜೀವಜಾಲದ ಮೇಲಿನ ಮಮತೆಯ ಪ್ರತೀಕವಾಗಿತ್ತು ಗೋಸಾಕಣೆ. ಸಾಧನೆಯ ಶಿಖರದಲ್ಲಿದ್ದರೂ ಗ್ರಾಮೀಣ ಬದುಕಿನ ಸರಳತೆಯನ್ನು ಕೈಬಿಡದ ವ್ಯಕ್ತಿತ್ವ ಅವರದು.

ಇಂದು ನಾವು ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಗಿರೀಶ್‌ ಭಾರದ್ವಾಜ್‌ ನಮಗೆ ಕಲಿಸಿದ್ದು ಬೇರೆ ಪಾಠ. ಅಭಿವೃದ್ಧಿ ದೊಡ್ಡ ಬಜೆಟ್‌ನಿಂದ ಆರಂಭವಾಗುವುದಿಲ್ಲ; ದೊಡ್ಡ ಮನಸ್ಸಿನಿಂದ ಆರಂಭವಾಗುತ್ತದೆ.

ಗ್ರಾಮದ ಸಮಸ್ಯೆಯನ್ನು ಗ್ರಾಮದಲ್ಲೇ ನಿಂತು ಅರ್ಥ ಮಾಡಿಕೊಂಡರೆ ಪರಿಹಾರವೂ ಅಲ್ಲಿಯೇ ಸಿಗುತ್ತದೆ. ಅದಕ್ಕೆ ಬೇಕಾಗಿರುವುದು ಕಾಳಜಿ, ಬದ್ಧತೆ ಮತ್ತು ಸಮಾಜದ ಮೇಲಿನ ಪ್ರೀತಿ.

ಒಮ್ಮೆ ನಮ್ಮ ಊರಿಗೂ ಒಂದು ತೂಗುಸೇತುವೆ ಬೇಕಾಗಿತ್ತು. ಹಣದ ಕೊರತೆ, ದಾನಿಗಳ ಸಹಕಾರ , ಇವೆಲ್ಲದರ ಕುರಿತು ಮಾತನಾಡುತ್ತಿದ್ದಾಗ ಅವರು ಅತ್ಯಂತ ಕಡಿಮೆ ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಯೋಜನೆಯನ್ನು ವಿವರಿಸುತ್ತಾ ನಗುತ್ತಾ ಹೇಳಿದ್ದರು,

“ನೀವೆಲ್ಲಾ ಹೊಸ ಜನರೇಶನ್‌. ನಿಮಗೆ ನನ್ನ ಮಗನೇ ಸೇತುವೆ ನಿರ್ಮಾಣ ಮಾಡಿಕೊಡುತ್ತಾನೆ.”

ಇಂದು ಆ ಮಾತಿನ ಅರ್ಥ ಇನ್ನಷ್ಟು ಸ್ಪಷ್ಟವಾಗಿದೆ. ಗಿರೀಶ್‌ ಭಾರದ್ವಾಜ್‌ ಅವರು ಸಮಾಜಕ್ಕೆ ಕೇವಲ ಸೇತುವೆಗಳನ್ನಲ್ಲ, ತಮ್ಮ ಸೇವೆಯನ್ನು ಮುಂದುವರಿಸುವ ಮುಂದಿನ ತಲೆಮಾರನ್ನೂ ಕೊಟ್ಟಿದ್ದಾರೆ. ಗ್ರಾಮೀಣ ಜನರ ಸೇವೆಗೆ ಇಂದು ಅವರ ಪುತ್ರ ಪತಂಜಲಿಯೂ ಸಿದ್ಧರಾಗಿದ್ದಾರೆ ಎಂಬುದು ಸಮಾಧಾನದ ಸಂಗತಿ. ಹೆಮ್ಮೆಯ ಸಂಗತಿ.

ಯಾರಿಗಾದರೂ ಸ್ಮಾರಕ ಕಟ್ಟಲು ಕೋಟ್ಯಂತರ ರೂಪಾಯಿ ಬೇಕಾಗಬಹುದು. ಆದರೆ ಗಿರೀಶ್‌ ಭಾರದ್ವಾಜ್‌ ಅವರಿಗೆ ಪ್ರತ್ಯೇಕ ಸ್ಮಾರಕದ ಅಗತ್ಯವಿಲ್ಲ. ಅವರು ಕಟ್ಟಿದ ಪ್ರತಿಯೊಂದು ತೂಗುಸೇತುವೆಯೇ ಅವರ ಸ್ಮಾರಕ. ಪ್ರತಿದಿನ ಆ ಸೇತುವೆಯ ಮೇಲೆ ನಡೆಯುವ ಪ್ರತಿಯೊಂದು ಹೆಜ್ಜೆಯೂ ಅವರಿಗೆ ಸಲ್ಲುವ ಗೌರವ. ಆ ಸೇತುವೆಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವುದೇ ಅವರಿಗೆ ಸಲ್ಲುವ ನಿಜವಾದ ನಮನ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಇಂದು ಗ್ರಾಮೀಣ ಭಾರತ ಒಬ್ಬ ಅಪರೂಪದ ಕನಸುಗಾರನನ್ನು ಕಳೆದುಕೊಂಡಿದೆ. ಸೇತುವೆ ಕಟ್ಟುವುದು ಅವರ ವೃತ್ತಿಯಾಗಿರಲಿಲ್ಲ. ಜನರನ್ನು ಜೋಡಿಸುವುದು ಅವರ ಧ್ಯೇಯವಾಗಿತ್ತು. ನದಿಯ ಎರಡು ದಡಗಳನ್ನು ಜೋಡಿಸಿದಂತೆ, ಅವರು ಮನುಷ್ಯರನ್ನು ಅಭಿವೃದ್ಧಿಯೊಂದಿಗೆ ಜೋಡಿಸಿದರು. ಅವರ ಅಗಲಿಕೆ ಒಂದು ವ್ಯಕ್ತಿಯ ಅಂತ್ಯವಲ್ಲ. ಒಂದು ಸೇವೆಯ ಸಂದೇಶ. ಒಂದು ಸಮಾಜಮುಖಿ ಬದುಕಿನ ಪ್ರೇರಣೆ. ಡಾ. ಗಿರೀಶ್‌ ಭಾರದ್ವಾಜ್‌ ಅವರು ಇನ್ನು ನಮ್ಮ ನಡುವೆ ಇಲ್ಲ. ಆದರೆ ಅವರು ಕಟ್ಟಿದ ಸೇತುವೆಗಳ ಮೇಲೆ ಗ್ರಾಮೀಣ ಭಾರತದ ಬದುಕು ಮುಂದುವರಿಯುತ್ತದೆ.

ಭಾವಪೂರ್ಣ ನಮನಗಳು, ಡಾ. ಗಿರೀಶ್‌ ಭಾರದ್ವಾಜ್‌ ಅವರೇ, ನೀವು ಕಟ್ಟಿದ ಸೇತುವೆಗಳು ಕಾಲವನ್ನು ಮೀರಿ ಸಾಗುತ್ತಲೇ ಇರುತ್ತವೆ. ನಿಮ್ಮ ಬದುಕು ಮುಂದಿನ ತಲೆಮಾರುಗಳಿಗೆ ಇನ್ನೂ ಅನೇಕ ಸೇತುವೆಗಳನ್ನು ಕಟ್ಟುವ ಪ್ರೇರಣೆಯಾಗಿಯೇ ಉಳಿಯುತ್ತದೆ…..

(ಕೆಲವು ಚಿತ್ರಗಳು ಸಿವಿಲ್‌ ಸೊಸೈಟಿಯಿಂದ ಬಳಸಿಕೊಂಡಿದೆ )

Padma Shri Dr. Girish Bharadwaj, fondly known as the “Bridge Man” and “Master of Suspension Bridges”, transformed rural India by building low-cost suspension bridges that connected isolated villages with education, healthcare and livelihoods. This editorial pays tribute to a visionary whose legacy will continue through every bridge he built and the people he inspired.

ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 07-07-2026 | ಕರ್ನಾಟಕದಲ್ಲಿ ಇನ್ನೂ ಮೂರು ದಿನ ಮಳೆ – ಜುಲೈ 11 ರಿಂದ ಮಳೆ ತೀವ್ರ ಇಳಿಕೆ ಸಾಧ್ಯತೆ

ಕರ್ನಾಟಕದಲ್ಲಿ ಇನ್ನೂ ಕೆಲ ದಿನ ಮಳೆ ಮುಂದುವರಿಯಲಿದ್ದು, ಜುಲೈ 11ರಿಂದ ರಾಜ್ಯಾದ್ಯಂತ ಮಳೆಯ…

21 minutes ago

ಪದ್ಮಶ್ರೀ ಡಾ. ಗಿರೀಶ್‌ ಭಾರದ್ವಾಜ್‌ ನಿಧನ – ‘ತೂಗುಸೇತುವೆಗಳ ಸರದಾರ’ ಇನ್ನಿಲ್ಲ

ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್‌ ಭಾರದ್ವಾಜ್‌ ಅವರು ನಿಧನರಾಗಿದ್ದಾರೆ. ಕಡಿಮೆ ವೆಚ್ಚದ ತೂಗುಸೇತುವೆಗಳ…

5 hours ago

ಸಂಕಷ್ಟದಿಂದ ರೈತರನ್ನು ರಕ್ಷಿಸುವ ಶಕ್ತಿ ಗೋ ಆಧಾರಿತ ಆರ್ಥಿಕತೆಗಿದೆ – ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್

ಗೋ ಆಧಾರಿತ ಆರ್ಥಿಕ ವ್ಯವಸ್ಥೆ ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ನೀಡಬಲ್ಲದು ಎಂದು…

5 hours ago

ಜೂನ್‌ನಲ್ಲಿ 40% ಮಳೆ ಕೊರತೆ – ಜುಲೈನಲ್ಲಿ ಮುಂಗಾರು ಭರ್ಜರಿ..! ದೇಶಾದ್ಯಂತ ಮಳೆ ಚುರುಕು

ಜೂನ್‌ನಲ್ಲಿ ದಾಖಲಾಗಿದ್ದ ಮಳೆ ಕೊರತೆ ಜುಲೈ ಆರಂಭದ ಭಾರೀ ಮಳೆಯಿಂದ ವೇಗವಾಗಿ ಕಡಿಮೆಯಾಗುತ್ತಿದೆ.…

16 hours ago

ರಾಜ್ಯದ 9 ಜಿಲ್ಲೆಗಳಲ್ಲಿ ಜುಲೈ 9 ರಿಂದ 11ರವರೆಗೆ ಭಾರೀ ಮಳೆ ಸಾಧ್ಯತೆ – IMD ಯೆಲ್ಲೋ ಅಲರ್ಟ್

ಜುಲೈ 9ರಿಂದ 11ರವರೆಗೆ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ…

16 hours ago

E20 ಪೆಟ್ರೋಲ್‌ನಿಂದ ಮೈಲೇಜ್ ಕಡಿಮೆಯಾಗುತ್ತದೆಯೇ? ಹಳೆಯ ವಾಹನಗಳಿಗೆ ಅಪಾಯ ಇದೆಯೇ?

E20 ಪೆಟ್ರೋಲ್ ಬಳಕೆಯಿಂದ ಸುಮಾರು 3–5% ಮೈಲೇಜ್ ಕುಸಿಯುವ ಸಾಧ್ಯತೆ ಇದೆ. ಆದರೆ…

21 hours ago