ಕೀಳ್ತನದತ್ತ ಸಾಗುತ್ತಿರುವ ಚುನಾವಣೆಯ ಭಾಷೆ |

May 28, 2024
7:55 PM
ದೇಶದ ರಕ್ಷಣೆಯಷ್ಟೇ ಶಿಕ್ಷಣವೂ ಮುಖ್ಯ ಎಂಬ ತತ್ವವನ್ನು ಅನ್ವಯಿಸಿದರಷ್ಟೇ ದೇಶದ ಸುಧಾರಣೆಯಾದೀತು.

ತತ್ವವಿಲ್ಲದ ರಾಜಕೀಯ, ದುಡಿಮೆ ಇಲ್ಲದ ಸಂಪತ್ತು, ನೀತಿ ಇಲ್ಲದ ವ್ಯಾಪಾರ, ಶೀಲವಿಲ್ಲದ ಶಿಕ್ಷಣ, ಆತ್ಮಸಾಕ್ಷಿ ಇಲ್ಲದ ಭೋಗ, ಮಾನವತೆ ಇಲ್ಲದ ವಿಜ್ಞಾನ, ತ್ಯಾಗವಿಲ್ಲದ ಪೂಜೆ ಇವು ಗಾಂಧೀಜಿಯವರು ಹೇಳಿರುವ ಏಳು ಸಾಮಾಜಿಕ ಪಾತಕಗಳು ಇವೆಲ್ಲವೂ ಈಗ ವ್ಯಾಪಕವಾಗಿ ಸಂಭವಿಸುತ್ತಿವೆ. ಅದೂ ಕೂಡ ದಿನ ಕಳೆದಂತೆ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿವೆ. ಯಾವುದು ಸರಿಯಲ್ಲವೆಂದು ಗಾಂಧೀಜಿಯವರು ಹೇಳಿದ್ದರೋ ಅದೇ ಈಗ ಹೆಚ್ಚಾಗಲು ಕಾರಣವೇನು? …….ಮುಂದೆ ಓದಿ…..

Advertisement
Advertisement

ನಿಜಕ್ಕೂ ಇದೊಂದು ಅಚ್ಚರಿಯ ಸಂಗತಿ. ಗಾಂಧೀಜಿಯವರು ಸತ್ಯದ ಪ್ರತಿಪಾದಕರು. ಸತ್ಯಾಗ್ರಹ ಅವರ ರಾಜಕೀಯ ಸಾಧನೆಯ ಮಾರ್ಗವಾಗಿತ್ತು. ಆದರೆ ಅದು ಅವರ ಕಾಲಕ್ಕೇ ಮುಗಿದು ಹೋಯಿತು ಎಂಬುದೇ ವಿಪರ್ಯಾಸ. ಸರ್ವೋದಯ, ಸಹಕಾರ, ಸತ್ಸಂಗ, ಸರಳತೆ, ಗ್ರಾಮಸ್ವರಾಜ್ಯ, ಸ್ವೋದ್ಯೋಗ ಹೀಗೆ ದೇಶದ ವಿಕಾಸದ ಅನೇಕ ಉಪಾಯಗಳನ್ನು ಅವರು ತಮ್ಮ ಅನುಯಾಯಿಗಳ ಮುಂದಿಟ್ಟಿದ್ದರು. ಅಲ್ಲದೆ ಇವನ್ನೆಲ್ಲ ಆಚರಿಸುವ ಬದ್ಧತೆಯನ್ನೂ ಅವರು ಹೊಂದಿದ್ದರು. ಅವರ ಚಿಂತನೆಗಳ
ಪ್ರತಿಪಾದಕರಾಗಿ ಅನೇಕ ಬೆಂಬಲಿಗರಿದ್ದರು. ಪ್ರೇರಕ ಶಕ್ತಿಯಾಗಿ ಗಾಂಧೀಜಿಯವರ ಆಶ್ರಮವೂ ಇತ್ತು. ಆದರೆ ಸತ್ಯ, ಸಮಾನತೆ, ಸರಳತೆ, ಸ್ವಾವಲಂಬನೆ ಇವೆಲ್ಲ ಈಗ ಏಕೆ ಮರೀಚಿಕೆಯಾದುವು. ಅವರು ಹೇಳಿದ ಏಳು ಪಾತಕಗಳೇ ನಿಯಂತ್ರಣವಿಲ್ಲದೆ ವಿಜೃಂಭಿಸತೊಡಗಿದವು. ಈ ವಿದ್ಯಮಾನವು ಪ್ರತಿಕ್ರಿಯಾತ್ಮಕ ಪ್ರಕ್ರಿಯೆಯಲ್ಲಿ ಒಬ್ಬರನೊಬ್ಬರು ದೂಷಿಸುವ ಭರದಲ್ಲಿ ಎಲ್ಲೆಮೀರಿ ಹರಿಯುತ್ತಿರುವುದು ವಿಪತ್ಕಾರಿಯಾಗಿ ಗೋಚರಿಸುತ್ತಿದೆ.

Advertisement

2024ರ ಲೋಕಸಭಾ ಚುನಾವಣೆಯ ಪ್ರಕ್ರಿಯೆಯು ಸುಮಾರು ಒಂದೂವರೆ ತಿಂಗಳಷ್ಟು ದೀರ್ಘವಾಗಿ ನಡೆದಿದ್ದು ಈ ಅವಧಿಯಲ್ಲಿ ಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಕಂಡು ಬಂದಿರುವ ರಾಜಕೀಯ ಕೆಸರೆರಚಾಟವು ತೀರ ಅಸಹ್ಯಕರವಾಗಿದೆ. ಒಮ್ಮೆ ಇದು ಮುಗಿದರೆ ಸಾಕೆಂಬಷ್ಟು ಅನ್ನಿಸತೊಡಗಿದೆ. ಪ್ರತಿಪಕ್ಷದವರು ಹೇಳಿದ್ದು ಸುಳ್ಳು ಎಂಬುದಾಗಿ ಎನ್.ಡಿ.ಎ. ಯವರೂ ಹೇಳುತ್ತಿದ್ದಾರೆ,INDIA ಘಟಬಂಧನ್ ಒಕ್ಕೂಟದವರೂ ಹೇಳುತ್ತಾರೆ. ಆದರೆ ತಾವು ಸುಳ್ಳೆಂದು
ಮಾಡಿದ ಆಪಾದನೆಯ ಸತ್ಯವೇನು ಎಂಬುದನ್ನು ಪ್ರತಿಪಾದನೆ ಮಾದುವ ಅಂಕಿಅಂಶಗಳನ್ನು ಕೊಡುವುದಿಲ್ಲ. ಹೀಗಾಗಿ ಬೊಬ್ಬೆ ಹೊಡೆದು ಹೇಳುವ ಸುಳ್ಳುಗಳು, ಊಹಿಸಿ ದೂಷಿಸುವುದು, ಅಸಾಧ್ಯವೆನ್ನಿಸುವ ಭರವಸೆಗಳನ್ನು ಘೋಷಿಸುವುದು, ಲೇವಡಿಯ ಮಾತುಗಳನ್ನಾಡುವುದು ಮುಂತಾದುವುಗಳು ತತ್ವವಿಲ್ಲದ ರಾಜಕೀಯ ಎಂಬ ಗಾಂಧೀಜಿಯವರ ಮಾತಿಗೆ ಉದಾಹರಣೆಗಳಾಗಿವೆ.
ಈ ಪ್ರಚಾರ ವೈಭವಗಳು ಹಾಗೂ ಅವುಗಳ ಅದ್ದೂರಿ ವೆಚ್ಚಗಳನ್ನು ನೋಡಿದರೆ ಅದೆಷ್ಟು ಜನ ತಮ್ಮ “ದುಡಿಮೆಯಿಂದಲ್ಲದ” ಸಂಪತ್ತನ್ನು ಮುಗಿಸುತ್ತಿದ್ದಾರೆಂದು ಅಚ್ಚರಿಯಾಗುತ್ತಿದೆ.

ಒಂದು ಸುಂದರ ಪ್ರಜಾಪ್ರಭುತ್ವವನ್ನು ಕಟ್ಟಬಹುದಾಗಿದ್ದ ಭಾರತದಲ್ಲಿ ಸ್ವಾತಂತ್ರ್ಯ ದೊರಕಿದ ಆರಂಭದಲ್ಲಿ ಧ್ವನಿಯೆತ್ತುವ ವಿರೋಧ ಪಕ್ಷಗಳು ಇರಲಿಲ್ಲ. ಕಮ್ಯೂನಿಸ್ಟ್ ಮುಂದಾಳುಗಳು ಹಾಗೂ ಹಿಂದುಮಹಾಸಭಾದ ನಾಯಕರು ಎತ್ತುತ್ತಿದ್ದ ಪ್ರಶ್ನೆಗಳನ್ನು ನಿವಾರಿಸುವುದು ಪ್ರಧಾನಿ ನೆಹರೂರವರಿಗೆ ಕಷ್ಟವಾಗಿರಲಿಲ್ಲ. ಹಾಗಾಗಿ ಅಂದಿನ ಕೆಲವು ಏಕಪಕ್ಷೀಯ ನಿರ್ಧಾರಗಳು ಮತ್ತು ಯೋಜನೆಗಳು ರಾಷ್ಟ್ರದ ಹಿತಾಸಕ್ತಿಗೆ ಹೇಗೆ ಮಾರಕವಾದುವು ಎಂಬುದನ್ನು ಚರ್ಚೆಗೆ ಎತ್ತಿಕೊಳ್ಳುವ ಸಾಧ್ಯತೆ ಇರಲಿಲ್ಲ. ಈಗ ಆ ಕುರಿತಾದ ಪ್ರಶ್ನೆಗಳನ್ನೆತ್ತಿ ಪ್ರತಿಪಕ್ಷಗಳ ಹೋರಾಟ ಆರಂಭವಾಗಿದೆ. ಕಾಂಗ್ರೆಸ್ಸೇತರ ಸರಕಾರಗಳ
ಆಡಳಿತವು ಮೊರಾರ್ಜಿ ದೇಸಾಯಿಯವರ ಕಾಲದಿಂದ ಆರಂಭವಾಗಿ ಚೌಧುರಿ ಚರಣ್ ಸಿಂಗ್, ವಿ.ಪಿ.ಸಿಂಗ್, ಚಂದ್ರಶೇಖರ್, ಎಚ್.ಡಿ. ದೇವೇಗೌಡ, ವಾಜಪೇಯಿ ಮತ್ತು ಈಗ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಆಡಳಿತ ನಡೆಸಿದ್ದಾರೆ. ಸಹಜವಾಗಿಯೇ ಇವರೆಲ್ಲರ ಆಡಳಿತ ಕಾಲದಲ್ಲಿ ಹಳೆಯ ತಪ್ಪುಗಳನ್ನು ಸರಿ ಮಾಡುವ ಸವಾಲು ಎದುರಾಗಿದೆ. ಇಂತಹ ಪ್ರಯತ್ನದಲ್ಲಿ ಇಂದು ಪ್ರಧಾನ ವಿರೋಧ ಪಕ್ಷವಾಗಿರುವ ಅಂದಿನ ಕಾಂಗ್ರೆಸ್ ಪಕ್ಷವು ವಸ್ತುನಿಷ್ಟತೆಗೆ ವಿರುದ್ಧವಾಗಿ
ಮಾತಾಡಿ ಪ್ರಯೋಜನವಿಲ್ಲ. ಹೀಗೆ ಮಾಡುವುದರ ಮೂಲಕ ನಾವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದಂತಾಗುತ್ತದೆ. ಈಗ ಸಮಸ್ಯೆ ಏನೆಂದರೆ “ಕಾಂಗ್ರೆಸ್‍ನಲ್ಲಿದೆ” ಎಂದು ಬಿಜೆಪಿಯು ಟೀಕಿಸುತ್ತಿರುವ ‘ಪರಿವಾರವಾದವು’ ಅದರಲ್ಲೂ ನುಸುಳಿದೆ. ಅಧಿಕಾರ ಲಾಲಸೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಸ್ವಾರ್ಥ ರಾಜಕಾರಣ ಇಲ್ಲದ ಪಕ್ಷವೇ ಇಲ್ಲದಂತಾಗಿದೆ. ಇವರೆಲ್ಲರೂ ಪರಸ್ಪರ
ದೂಷಿಸಿಕೊಳ್ಳಲು ನೀಡಿದ ಒಂದೂವರೆ ತಿಂಗಳ ಪ್ರಚಾರದ ಅವಕಾಶದಲ್ಲಿ ನಿರಂತರವಾಗಿ ದೃಶ್ಯಮಾಧ್ಯಮಗಳಲ್ಲಿ ನಡೆಸುತ್ತಿರುವ ಚರ್ಚೆಗಳು ಜನರನ್ನು ಹಾದಿ ತಪ್ಪಿಸುತ್ತಿವೆ. ಇದೆಲ್ಲಕ್ಕೂ ‘ಏನಕೇನ ಪ್ರಕಾರೇಣ’ ಅಧಿಕಾರ ಮತ್ತು ಸಾರ್ವಜನಿಕ ಬೊಕ್ಕಸದ ಮೇಲೆ ಹತೋಟಿ ಸಾಧಿಸುವ ಉದ್ದೇಶವೇ ಮುಖ್ಯ ಕಾರಣವಾಗಿದೆ.

Advertisement

ಈ ಚುಣಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಘೋಷಿಸಿದ ಸಂಪತ್ತಿನ ಮೊತ್ತವು ಎಷ್ಟಿದೆಯೆಂದರೆ ಸಾಮಾನ್ಯ ಜನರು ಪ್ರಜಾಪ್ರತಿನಿಧಿ ಸ್ಥಾನಗಳಿಗೆ ಸ್ಪರ್ಧಿಸಲು ಇನ್ನು ಮುಂದೆ ಕನಸನ್ನೂ ಕಾಣುವಂತಿಲ್ಲ. ಚುನಾವಣೆಯಿಂದ ಚುನಾವಣೆಗಿರುವ 5 ವರ್ಷಗಳ ಅವಧಿಯಲ್ಲಿ ಬೆಳೆದ ಅವರ ಸಂಪತ್ತಿನ ಪ್ರಮಾಣವು ನೀತಿಯುತ ವ್ಯಾಪಾರದಿಂದ ಪಡೆದಿರಲು ಸಾಧ್ಯವಿಲ್ಲ. ಆದರೆ ಅದರ ಬಗ್ಗೆ ಪಕ್ಷೀಯರಾಗಲೀ ವಿಪಕ್ಷೀಯರಾಗಲೀ ಪ್ರಶ್ನೆಗಳನ್ನೆತ್ತದೆ ಸುಮ್ಮಗಿರುವುದು ಕೂಡಾ ಮೌಲ್ಯಹೀನತೆಗೆ
ಸಾಕ್ಷಿಯಾಗಿದೆ.

‘ಶೀಲವಿಲ್ಲದ ಶಿಕ್ಷಣ’ ಎಂಬುದು ಗಾಂಧೀಜಿಯವರು ಹೇಳಿದ ನಾಲ್ಕನೇ ಸಾಮಾಜಿಕ ಪಾತಕ. ಇಂದು ಶಿಕ್ಷಣವು ಸಾಮಾಜಿಕ ಸಮಾನತೆಯ ಒಂದು ಕಾರಕವಾಗಿ ಭಾರತದಲ್ಲಿ ಬಳಕೆಯಾಗುತ್ತಿಲ್ಲ. ಬದಲಾಗಿ ಅದು ಅಸಮಾನತೆಯ ಕಂದಕವನ್ನು ವಿಸ್ತರಿಸುತ್ತಿದೆ. ಉಳ್ಳವರಿಂದ ಉಳ್ಳವರಿಗಾಗಿ ಶಿಕ್ಷಣವೆಂಬ ವಾಸ್ತವವನ್ನು ತಿದ್ದಲು ಯಾವುದೇ ರಾಜಕೀಯ ಪಕ್ಷಕ್ಕೆ ಆಸಕ್ತಿ ಇಲ್ಲ. ಸರಕಾರಿ ಶಾಲೆಗಳ ಸಬಲೀಕರಣವು ಶಿಕ್ಷಣದ ಬಜೆಟ್‍ಗಳಲ್ಲಿ ಆದ್ಯತೆ ಹೊಂದಿಲ್ಲ. ದೇಶದ ರಕ್ಷಣೆಯಷ್ಟೇ ಶಿಕ್ಷಣವೂ
ಮುಖ್ಯ ಎಂಬ ತತ್ವವನ್ನು ಅನ್ವಯಿಸಿದರಷ್ಟೇ ಈ ಪಾತಕದಿಂದ ನಮ್ಮ ದೇಶ ಮುಕ್ತವಾಗಬಹುದು. ‘ಆತ್ಮಸಾಕ್ಷಿ ಇಲ್ಲದ ಭೋಗ’ಕ್ಕೆ ನಮ್ಮ ಇಂದಿನ ಸಮಾಜದಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಉಚಿತಗಳು ಹಾಗೂ ಗ್ಯಾರಂಟಿಗಳು ಜನರಲ್ಲಿ ಸುಲಭಶೀಲತೆಗೆ ಹಾಗೂ ಋಣಭಾರವಿಲ್ಲದ ಮಾನಸಿಕತೆಗೆ ಹೆಚ್ಚು ಹೆಚ್ಚು ಇಂಬು ಸಿಗುತ್ತದೆ. ನಮ್ಮ ಪರಂಪರೆಯಲ್ಲಿ ದೇವಋಣ, ಪಿತೃಋಣ ನಹಾಗೂ ಗುರುಋಣಗಳನ್ನಷ್ಟೇ ಅಲ್ಲದೆ ಸಮಾಜಋಣವನ್ನೂ ಹೇಳಲಾಗಿದೆ. ಅಂದರೆ ಸಮಾಜದಿಂದ
ನಾವು ಅನೇಕ ಬಗೆಯ ಸಹಾಯಗಳನ್ನು ಹಾಗೂ ಸೌಲಭ್ಯಗಳನ್ನು ಪಡೆಯುತ್ತೇವೆ. ಅವುಗಳನ್ನು ನಾವು ಅಗತ್ಯವಿರುವವರಿಗೆ ನೀಡಿದಾಗ ಋಣಮುಕ್ತರಾಗುತ್ತೇವೆ. ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡುವುದೂ ಒಂದು ಇಂಥ ಒಂದು ಋಣ ಸಂದಾಯ. ಆದರೆ ಇಂದು ಅದರ ಬಗ್ಗೆ ವಿದ್ಯಾವಂತರೂ, ಗಣ್ಯರೆನ್ನಿಸಿರುವವರೂ ಅಲಕ್ಷ್ಯ ಹೊಂದಿರುವುದಕ್ಕೆ ಅವರ ಅನುಭೋಗದಲ್ಲಿ ಆತ್ಮಸಾಕ್ಷಿ ಇಲ್ಲದಿರುವುದೇ ಕಾರಣವಾಗಿದೆ.

Advertisement

ಇದೇ ರೀತಿ ‘ಮಾನವತೆ ಇಲ್ಲದ ವಿಜ್ಞಾನ’ ಹಾಗೂ ‘ತ್ಯಾಗವಿಲ್ಲದ ಪೂಜೆ’ ಎಂಬ ಪಾತಕಗಳೂ ಸಂಭವಿಸುತ್ತಲೇ ಇವೆ. ಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ ಹಾಗೂ ಸರಳತೆಗಳನ್ನು  ಬದಿಗಿಟ್ಟು ಇಂದು ಪಾಶ್ಚಾತ್ಯ ಜಗತ್ತಿನ ಅನುಭೋಗ ಸಂಸ್ಕೃತಿಯನ್ನು ನಮ್ಮದಾಗಿಸಿಕೊಂಡ ಬಳಿಕ ನಮ್ಮ ಭಾಷೆ ಎಂಥ ವಿಕೃತಿಯನ್ನು ತಾಳುತ್ತಿವೆ ಎಂಬುದಕ್ಕೆ ಪ್ರಸ್ತುತ ಚುನಾವಣ ಭಾಷಣಗಳು ಹಾಗೂ ಪ್ರತಿಭಾಷಣಗಳು ಸಾಕ್ಷ್ಯಚಿತ್ರದಂತೆ ಕಾಣುತ್ತವೆ. ಇನ್ನು ಚುನಾವಣಾ ಫಲಿತಾಂಶ ಬಂದ ಬಳಿಕವೂ ಈ
ಭಾಷೆ ಸ್ತಬ್ಧವಾಗುವ ಲಕ್ಷಣಗಳಿಲ್ಲ. ಇಷ್ಟೆಲ್ಲ ದ್ವೇಷ ಮತ್ತು ಅಸಹಕಾರದ ರಾಜಕಾರಣವು ದೇಶವನ್ನು ಹಳಿಗೆ ತರುವ ಪ್ರಯತ್ನಗಳಿಗೆ ತೊಡಕಾಗಲಿದೆ.

ಮೂಲ ಪ್ರಶ್ನೆಯ ಉತ್ತರವೆಂದರೆ ಭಾರತೀಯರು ಮರುಳುಗೊಂಡಿರುವ ಪಾಶ್ಚಾತ್ಯ ಅನುಭೋಗ ಸಂಸ್ಕೃತಿ ಮತ್ತು ಸರಕಾರದ ಸಂಪತ್ತಿನ ಮೇಲೆ ಹಕ್ಕು ಪಡೆಯುವುದಕ್ಕಾಗಿ ಅಧಿಕಾರದ ಅತಿ ವ್ಯಾಮೋಹವೇ ಗಾಂಧಿಮಾರ್ಗ ತೊರೆಯಲು ಕಾರಣ.

Advertisement
ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಧರ್ಮಕ್ಕೆ ಸಿಗುವುದಾದರೆ ಇರಲಿ ಎಂಬ ಮನೋಭಾವ
September 11, 2024
11:27 PM
by: ಡಾ.ಚಂದ್ರಶೇಖರ ದಾಮ್ಲೆ
ಅಡಿಕೆ ಬೆಳೆಗಾರರಿಗೆ ಮುಂದೊಂದು ದಿನ ಹೀಗಾಗಬಹುದೇ…!?
September 8, 2024
9:24 PM
by: ಪ್ರಬಂಧ ಅಂಬುತೀರ್ಥ
ವಿಶ್ವಗುರುವಾಗುವತ್ತ ಭಾರತ | ಶಿಕ್ಷಣ ಮತ್ತು ಕೃಷಿಕ್ಷೇತ್ರಗಳು ಅಸ್ಥಿರವಾಗುತ್ತಿರುವುದು ಗಮನದಲ್ಲಿದೆಯೆ?
September 4, 2024
9:29 PM
by: ಡಾ.ಚಂದ್ರಶೇಖರ ದಾಮ್ಲೆ
ಅಡಿಕೆಗೆ ಹಳದಿ ರೋಗ ಬಂದಿದೆ….! | ಕೃಷಿಕರು ಭೂಮಿಯನ್ನು ಯಾಕೆ ಮಾರುತ್ತಿದ್ದಾರೆ..?
August 28, 2024
9:52 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror