Advertisement
ಅನುಕ್ರಮ

ಆರೋಪದ ಆಚೆ ನಿಂತು ಒಮ್ಮೆ ಯೋಚಿಸಿದ್ದೀರಾ..?

Share

ಯಾರನ್ನಾದರೂ ಆರೋಪಿಸುವುದು ತುಂಬಾ ಸುಲಭ. ಸಂಬಂಧಗಳಲ್ಲೂ ಹೀಗೆಯೇ. ಅಪವಾದ ಹೊರಿಸುವುದು, ತಪ್ಪು ಹುಡುಕುವುದು, ತೀರ್ಪು ನೀಡುವುದು , ಇವೆಲ್ಲವೂ ಕೆಲವೇ ಕ್ಷಣಗಳ ಕೆಲಸ.

“ಅವನು ಹೀಗೆ ಮಾಡಬೇಕಿತ್ತು…”

“ಅವಳು ಹಾಗೆ ಹೇಳಬಾರದಿತ್ತು…”

“ಅವರು ಜವಾಬ್ದಾರಿ ತೆಗೆದುಕೊಳ್ಳಲಿಲ್ಲ…”

“ಹೇಳಿದ ಸಮಯಕ್ಕೆ ಬರಲಿಲ್ಲ…”

“ಇವನನ್ನು ನಂಬಿದರೆ ಆಗದು…”

“ಹೇಳಿದ ಕೆಲಸ ಮುಗಿಸಲಿಲ್ಲ…”

ಇಂತಹ ಮಾತುಗಳು ನಮ್ಮ ಸುತ್ತಮುತ್ತ ಪ್ರತಿದಿನ ಕೇಳಿಸುತ್ತಲೇ ಇರುತ್ತವೆ.  ಆದರೆ ಒಂದು ಪ್ರಶ್ನೆಯನ್ನು ನಾವು ನಮ್ಮೊಳಗೆ ಕೇಳಿಕೊಳ್ಳುತ್ತೇವೆಯೇ?

“ಅವರ ಸ್ಥಾನದಲ್ಲಿ ನಾನು ಇದ್ದಿದ್ದರೆ ಏನು ಮಾಡುತ್ತಿದ್ದೆ?” ಈ ಒಂದು ಪ್ರಶ್ನೆಯೇ ನಮ್ಮ ದೃಷ್ಟಿಕೋನವನ್ನು ಬದಲಾಯಿಸಬಲ್ಲದು.

ಜೀವನದಲ್ಲಿ ಬಹುತೇಕ ತೀರ್ಪುಗಳು ದೂರದಿಂದಲೇ ಕೊಡಲ್ಪಡುತ್ತವೆ. ದೂರದಿಂದ ನೋಡಿದರೆ ಎಲ್ಲವೂ ಸುಲಭವಾಗಿ ಕಾಣುತ್ತದೆ. ಎಲ್ಲಕ್ಕೂ ಉತ್ತರ ಸಿಕ್ಕಂತೆ ಭಾಸವಾಗುತ್ತದೆ. ಆದರೆ ಹತ್ತಿರ ಹೋಗಿ ನೋಡಿದಾಗ ಮಾತ್ರ ಪರಿಸ್ಥಿತಿಯ ಸಂಕೀರ್ಣತೆ ಅರ್ಥವಾಗುತ್ತದೆ. ಒಂದು ನಿರ್ಧಾರದ ಹಿಂದೆ ಎಷ್ಟು ಒತ್ತಡ, ಎಷ್ಟು ಜವಾಬ್ದಾರಿ, ಎಷ್ಟು ನೋವು, ಎಷ್ಟು ಅನಿವಾರ್ಯತೆ ಅಡಗಿರುತ್ತದೆ ಎಂಬುದು ಆಗ ತಿಳಿಯುತ್ತದೆ.

ಜೀವನದಲ್ಲಿ ಎಷ್ಟೋ ವಾಕ್ಯಗಳು “ಅವನು” ಅಥವಾ “ಅವಳು” ಎಂದು ಆರಂಭವಾಗಿ ಆರೋಪದಲ್ಲಿ ಕೊನೆಗೊಳ್ಳುತ್ತವೆ. ಆದರೆ ವಿಚಿತ್ರವೆಂದರೆ, ನಮ್ಮ ಬದುಕಿನಲ್ಲಿ ನಾವು ತಪ್ಪು ಮಾಡಿದಾಗ ಮಾತ್ರ ಆ ವಾಕ್ಯ ಬದಲಾಗುತ್ತದೆ.

 ಆಗ “ಪರಿಸ್ಥಿತಿ ಹಾಗಿತ್ತು…”, ಅಂದು “ನನಗೂ ಅನಿವಾರ್ಯವಾಗಿತ್ತು…” ,ಅದು “ನನ್ನಿಂದ ಉದ್ದೇಶಪೂರ್ವಕವಾಗಿ ಆಗಿಲ್ಲ…” ಎಂಬ ಉತ್ತರಗಳು ತಕ್ಷಣ ಸಿದ್ಧವಾಗಿರುತ್ತವೆ.

ಅಂದರೆ, ಇತರರ ತಪ್ಪನ್ನು ನಾವು ಅವರ ಒಂದು ನಡೆಯಿಂದ ಅಳೆಯುತ್ತೇವೆ. ಆದರೆ ನಮ್ಮ ತಪ್ಪನ್ನು ಪರಿಸ್ಥಿತಿಯಿಂದ ಸಮರ್ಥಿಸಿಕೊಳ್ಳುತ್ತೇವೆ. ಇದೇ ಮನುಷ್ಯನ ಸಹಜ ಸ್ವಭಾವ.

ದೂರದಿಂದ ನಿಂತು ಇನ್ನೊಬ್ಬರ ಜೀವನವನ್ನು ನೋಡುವುದು ಬಹಳ ಸುಲಭ. ಆದರೆ ಬದುಕಿನ ಮಧ್ಯೆ ನಿಂತು ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ.  ಬೆಟ್ಟದ ತುದಿಯಲ್ಲಿ ನಿಂತು ಕೆಳಗೆ ಹರಿಯುವ ನದಿಯ ದಿಕ್ಕು ಹೇಳುವುದು ಸುಲಭ. ಆದರೆ ಅದೇ ನದಿಯ ಪ್ರವಾಹದಲ್ಲಿ ನಿಂತವನಿಗೆ ಪ್ರತಿಯೊಂದು ಹೆಜ್ಜೆಯೂ ಬದುಕಿನ ಹೋರಾಟ. ಕಡಲ ತೀರದಲ್ಲಿ ನಿಂತು ಅಲೆಗಳನ್ನು ನೋಡಿ ಅಭಿಪ್ರಾಯ ಹೇಳಬಹುದು. ಆದರೆ ಸಮುದ್ರದ ಮಧ್ಯೆ ಬಿರುಗಾಳಿಯಲ್ಲಿ ಸಿಲುಕಿದ ಮೀನುಗಾರನ ನಿರ್ಧಾರವನ್ನು ತೀರದಲ್ಲಿ ನಿಂತು ಅಳೆಯಲು ಸಾಧ್ಯವಿಲ್ಲ.

ಜೀವನವೂ ಹಾಗೆಯೇ…

ಒಬ್ಬ ವ್ಯಕ್ತಿ ಯಾವಾಗಲೂ ತಡವಾಗಿ ಬರುತ್ತಿದ್ದ. ಎಲ್ಲರೂ, “ಇವನನ್ನು ನಂಬಿದರೆ ಆಗದು” ಎಂದು ಹೇಳುತ್ತಿದ್ದರು. ಆದರೆ ವಾಸ್ತವದಲ್ಲಿ ಆತ ತನ್ನ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಏಕಾಂಗಿಯಾಗಿ ಮುಗಿಸಿಯೇ ಹೊರಡುತ್ತಿದ್ದ. ಮನೆಯಲ್ಲಿದ್ದ ಅನಿವಾರ್ಯತೆಗಳನ್ನು ಯಾರೂ ನೋಡಲಿಲ್ಲ. ಜನರಿಗೆ ಕಂಡದ್ದು ಅವನ ತಡ ಮಾತ್ರ,  ಅವನ ಬದುಕಿನ ಹೋರಾಟವೂ ಅಲ್ಲ, ಹೋರಾಟದ ನಡುವಿನ ಸಹಾಯವೂ ಅಲ್ಲ..!

ಒಬ್ಬ ರೈತ ಮಳೆ ಬಾರದ ಕಾರಣ ಬೆಳೆ ಕಳೆದುಕೊಂಡಾಗ, ನಗರದಲ್ಲಿರುವವರಿಗೆ “ಬೇರೆ ಬೆಳೆ ಹಾಕಬೇಕಿತ್ತು”, “ಪರ್ಯಾಯ ಬೆಳೆ ಬೆಳೆಯಿರಿ” ಎಂದು ಸಲಹೆ ಕೊಡುವುದು ಸುಲಭ. ಆದರೆ, ತಿಂಗಳುಗಟ್ಟಲೆ ಮಣ್ಣಿನ ಜೊತೆ ಬದುಕಿ, ಸಾಲದ ಭಾರ ಹೊತ್ತು, ಪ್ರಕೃತಿಯ ಕೃಪೆಗೆ ಕಾಯುವ ರೈತನ ಮನಸ್ಥಿತಿ ಅನುಭವಿಸಿದರೆ ಆ ಮಾತು ಅಷ್ಟು ಸುಲಭವಾಗಿ ಬರುವುದಿಲ್ಲ.

ಒಬ್ಬ ರೈತ ಸಮಯಕ್ಕೆ ಔಷಧಿ ಸಿಂಪಡಿಸಲಿಲ್ಲ ಎಂದು ಹೇಳುವುದು ಸುಲಭ. ಆದರೆ ನಿರಂತರ ಮಳೆ, ಕಾರ್ಮಿಕರ ಕೊರತೆ, ಸಾಲದ ಒತ್ತಡ, ಬೆಳೆ ಉಳಿಸಬೇಕೆಂಬ ಆತಂಕ , ಇವೆಲ್ಲವೂ ಅವನ ಹೆಗಲ ಮೇಲಿದ್ದಾಗ, ಅವನು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಹೋರಾಟವಾಗಿರುತ್ತದೆ.

ಇಂದೂ ಹಾಗೇ, ಅಡಿಕೆ ಹಳದಿ ಎಲೆರೋಗ ಇರುವ ಕಡೆ “ಪರ್ಯಾಯ ಬೆಳೆ ಬೆಳೆಯಿರಿ” ಎನ್ನುವುದು ಸುಲಭ. ಪಕ್ಕದ ಗ್ರಾಮದಲ್ಲೇ ಅಡಿಕೆಯಿಂದ ಸಾವಿರಾರು ರೂಪಾಯಿ ಆದಾಯ ಬರುವ ಅಡಿಕೆ ಬೆಳೆ ಸಮೃದ್ಧವಾಗಿರುವಾಗ ಬೆಲೆಯೇ ಸಿಗದ ಬೆಳೆಯನ್ನು ಬೆಳೆಯಿರಿ ಎನ್ನುವ ಸಲಹೆ ಹೇಗೆ ಅರ್ಥಪೂರ್ಣವಾಗುತ್ತದೆ..?

ಒಬ್ಬ ಸರ್ಕಾರಿ ಅಧಿಕಾರಿ ಕಡತ ವಿಳಂಬ ಮಾಡಿದನೆಂದು ನಾವು ಹೇಳಬಹುದು. ಆದರೆ ಒಂದೇ ದಿನದಲ್ಲಿ ನೂರಾರು ಕಡತಗಳು, ಸಭೆಗಳು, ನಿಯಮಗಳು, ಮೇಲಾಧಿಕಾರಿಗಳ ಒತ್ತಡ , ಇವೆಲ್ಲದರ ನಡುವೆ ಆತ ಕೆಲಸ ನಿರ್ವಹಿಸುತ್ತಿರಬಹುದು.

ಒಬ್ಬ ತಂದೆ ಮಕ್ಕಳೊಂದಿಗೆ ಸಮಯ ಕಳೆಯಲಿಲ್ಲ ಎಂದು ಆರೋಪಿಸಬಹುದು. ಆದರೆ ಕುಟುಂಬವನ್ನು ನಡೆಸಲು ದಿನವಿಡೀ ದುಡಿಯುವ ಅವನ ಬದುಕಿನ ಒತ್ತಡವನ್ನು ಅರಿತರೆ, ಅವನ ಮೌನದ ಹಿಂದಿನ ಪ್ರೀತಿಯೂ ಗೋಚರಿಸುತ್ತದೆ.

ಒಬ್ಬ ಶಿಕ್ಷಕನನ್ನು ಟೀಕಿಸುವುದು ಸುಲಭ. ಆದರೆ ಒಂದೇ ತರಗತಿಯಲ್ಲಿ ವಿಭಿನ್ನ ಸ್ವಭಾವದ ಹತ್ತಾರು ಮಕ್ಕಳನ್ನು ಮುನ್ನಡೆಸುವುದು ಎಷ್ಟು ಕಷ್ಟ ಎನ್ನುವುದು ಶಿಕ್ಷಕರ ಸ್ಥಾನದಲ್ಲಿ ನಿಂತಾಗ ಮಾತ್ರ ಅರ್ಥವಾಗುತ್ತದೆ.

ನಮ್ಮ ಕಣ್ಣಿಗೆ ಕಾಣುವುದು ಫಲಿತಾಂಶ ಮಾತ್ರ.  ಪ್ರಯತ್ನ ಕಾಣುವುದಿಲ್ಲ.

ಮಾತು ಕೇಳಿಸುತ್ತದೆ. ಆದರೆ ಅಲ್ಲೇ ಮೌನದೊಳಗಿನ ಹೋರಾಟ ಕೇಳಿಸುವುದಿಲ್ಲ. ಹೇಳಿಕೊಳ್ಳಲಾಗದ ನೋವು ಅರ್ಥವಾಗುವುದಿಲ್ಲ.

ನಾವು ತೀರ್ಪು ನೀಡುವುದು ಒಂದು ಕ್ಷಣದ ವರ್ತನೆಗೆ. ಆದರೆ ಆ ವರ್ತನೆಯ ಹಿಂದೆ ವರ್ಷಗಳ ಅನುಭವ, ನೋವು, ಒತ್ತಡ ಮತ್ತು ಅನಿವಾರ್ಯತೆಗಳು ಅಡಗಿರುತ್ತವೆ. ಅದಕ್ಕಾಗಿಯೇ ನಮ್ಮ ತೀರ್ಪುಗಳು ಅನೇಕ ಬಾರಿ ಅಪೂರ್ಣವಾಗಿರುತ್ತವೆ.

ಕೆಲಸ ಮಾಡುವ ಪ್ರತಿಯೊಬ್ಬರಿಗೂ ಹೊರಗಿನಿಂದ ಕಾಣದ ಹೋರಾಟಗಳಿರುತ್ತವೆ. ಮನೆಯೊಳಗಿನ ಸಮಸ್ಯೆ, ಆರೋಗ್ಯದ ತೊಂದರೆ, ಆರ್ಥಿಕ ಒತ್ತಡ, ಮಾನಸಿಕ ಆಯಾಸ, ಸಂಬಂಧಗಳ ಬಿಕ್ಕಟ್ಟು .. ಇವೆಲ್ಲವನ್ನೂ ಹೊತ್ತುಕೊಂಡೇ ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿರಬಹುದು. ಅನೇಕರು ತಮ್ಮ ನೋವನ್ನು ಹೇಳಿಕೊಳ್ಳುವುದೇ ಇಲ್ಲ.

ಖಂಡಿತವಾಗಿಯೂ ಕೆಲವೊಮ್ಮೆ ತಪ್ಪುಗಳಾಗುತ್ತವೆ. ನಿರ್ಲಕ್ಷ್ಯವೂ ಇರುತ್ತದೆ. ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವವರೂ ಇರುತ್ತಾರೆ. ಆದರೆ ಪ್ರತಿಯೊಂದು ಘಟನೆಯನ್ನೂ ಒಂದೇ ಅಳತೆಯ ಮಾಪಕದಿಂದ ಅಳೆಯಲು ಸಾಧ್ಯವಿಲ್ಲ. ಮೊದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ನಂತರವೇ ಅಭಿಪ್ರಾಯ ರೂಪಿಸಬೇಕು. ಸಂಬಂಧಗಳಲ್ಲಿಯೂ ಇದೇ ಅನ್ವಯಿಸುತ್ತದೆ.

ಗಂಡ-ಹೆಂಡತಿ, ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬದ ಸದಸ್ಯರು  ಎಲ್ಲರಲ್ಲೂ ಭಿನ್ನಾಭಿಪ್ರಾಯಗಳು ಸಹಜ. ಆದರೆ ಸಮಸ್ಯೆ ಹೆಚ್ಚಾಗುವುದಕ್ಕೆ ಮುಖ್ಯ ಕಾರಣ, ನಾವು ನಮ್ಮ ದೃಷ್ಟಿಕೋನವನ್ನೇ ಸತ್ಯವೆಂದು ಭಾವಿಸುವುದು. ಆ ಕಡೆಯ ದೃಷ್ಟಿಕೋನದಿಂದ ನೋಡುವ ಪ್ರಯತ್ನ ಕಡಿಮೆ.

ಗಂಡ ತನ್ನ ನೋವನ್ನು ಮಾತ್ರ ನೋಡುತ್ತಾನೆ. ಹೆಂಡತಿ ತನ್ನ ನೋವನ್ನು ಮಾತ್ರ ಹೇಳುತ್ತಾಳೆ. ಸ್ನೇಹಿತ ತನ್ನ ನಿರೀಕ್ಷೆಯನ್ನು ಮಾತ್ರ ನೆನಪಿಸಿಕೊಳ್ಳುತ್ತಾನೆ.

ಸಹೋದ್ಯೋಗಿ ತನ್ನ ಕೆಲಸವನ್ನೇ ದೊಡ್ಡದು ಎಂದು ಭಾವಿಸುತ್ತಾನೆ…. ಹೀಗೇ, ಪ್ರತಿಯೊಬ್ಬರೂ ತಮ್ಮ ಕಿಟಕಿಯಿಂದಲೇ ಜಗತ್ತನ್ನು ನೋಡುತ್ತಾರೆ. ಒಮ್ಮೆ ಎದುರಿನ ಕಿಟಕಿಯಿಂದಲೂ ನೋಡಲು ಕಲಿತರೆ, ಅನೇಕ ಜಗಳಗಳಿಗೆ ಕಾರಣವೇ ಇರುವುದಿಲ್ಲ.

ಅನೇಕ ಬಾರಿ ಇಡೀ ದಿನ ಜೊತೆಯಲ್ಲೇ ಕೆಲಸ ಮಾಡಿದವರೂ, ಕೊನೆಯಲ್ಲಿ ಫಲಿತಾಂಶ ಬಂದಾಗ ತಪ್ಪು ಒಬ್ಬರ ಮೇಲೇ ಹೊರಿಸುತ್ತಾರೆ. ಪರಿಸ್ಥಿತಿಯ ಸಂಪೂರ್ಣ ಚಿತ್ರವನ್ನು ನೋಡದೆ ವ್ಯಕ್ತಿಯನ್ನೇ ಹೊಣೆಗಾರನನ್ನಾಗಿ ಮಾಡುತ್ತಾರೆ. ಹೀಗೆ ನಿರಂತರವಾಗಿ ಆರೋಪಗಳನ್ನೇ ಎದುರಿಸುವವರು ಒಂದು ಹಂತದಲ್ಲಿ ವ್ಯವಸ್ಥೆಯಿಂದಲೇ ದೂರ ಸರಿಯುತ್ತಾರೆ. ಅವರ “ಮೌನ”ದ ಕಾರಣವನ್ನು ಎಲ್ಲರೂ ಅರ್ಥಮಾಡಿಕೊಳ್ಳುವುದಿಲ್ಲ.

ಯಾರನ್ನಾದರೂ ಅರ್ಥಮಾಡಿಕೊಳ್ಳುವುದು ಎಂದರೆ ಅವರ ತಪ್ಪನ್ನು ಸಮರ್ಥಿಸುವುದಲ್ಲ; ಅವರ ಪರಿಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡುವುದು.

ಈ ಒಂದು ಬದಲಾವಣೆ ಅನೇಕ ಸಂಬಂಧಗಳನ್ನು ಉಳಿಸಬಲ್ಲದು. ಮಾತು ಬದಲಾದರೆ ಸಂಬಂಧಗಳು ಬದಲಾಗುತ್ತವೆ. ಸಂಬಂಧಗಳು ಬದಲಾಗಿದರೆ ಬದುಕಿನ ಗುಣಮಟ್ಟವೂ ಬದಲಾಗುತ್ತದೆ.

ಜೀವನದಲ್ಲಿ ಅನುಭವ ಹೆಚ್ಚಾದಂತೆ ಒಂದೊಂದು ಪಾಠ ಕಲಿಯುತ್ತೇವೆ ಸಾಗುತ್ತೇವೆ. ಹಿಂದೆ ನಾವು ಸುಲಭವಾಗಿ ಟೀಕಿಸಿದ್ದ ವಿಷಯಗಳನ್ನೇ, ನಂತರ ಅದೇ ಪರಿಸ್ಥಿತಿ ನಮ್ಮ ಮುಂದೆ ಬಂದಾಗ ಎಷ್ಟು ಕಷ್ಟವೆಂದು ಅರಿಯುತ್ತೇವೆ. ಆಗ ಮಾತು ಕಡಿಮೆಯಾಗುತ್ತದೆ. ಸಹಾನುಭೂತಿ ಹೆಚ್ಚಾಗುತ್ತದೆ. ತೀರ್ಪು ಕೊಡುವ ಆತುರವೂ ಕಡಿಮೆಯಾಗುತ್ತದೆ.

ಆದ್ದರಿಂದ ಪ್ರತಿಯೊಂದು ಆರೋಪ ಮಾಡುವ ಮುನ್ನ, ಅಪವಾದ ಹೊರಿಸುವ ಮುನ್ನ ಒಂದು ಕ್ಷಣ ನಿಲ್ಲೋಣ.

“ನಾನು ಅವನ ಸ್ಥಾನದಲ್ಲಿ ಇದ್ದರೆ?”

“ನಾನು ಅವಳ ಪರಿಸ್ಥಿತಿಯಲ್ಲಿ ಇದ್ದರೆ?”

“ಈ ಜವಾಬ್ದಾರಿ ನನ್ನ ಹೆಗಲ ಮೇಲೆ ಇದ್ದರೆ?” ಎಂಬ ಪ್ರಶ್ನೆಗಳನ್ನು ನಮ್ಮೊಳಗೆ ಕೇಳಿಕೊಳ್ಳೋಣ. ಬಹುಶಃ ಆಗ ನಮ್ಮ ಮಾತು ಬದಲಾಗಬಹುದು. ನಮ್ಮ ವರ್ತನೆ ಬದಲಾಗಬಹುದು. ನಮ್ಮ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಬಹುದು.

ಜೀವನದ ದೊಡ್ಡ ಸತ್ಯವೆಂದರೆ, ಪ್ರತಿಯೊಬ್ಬರೂ ತಮ್ಮದೇ ಆದ ಕಾಣದ ಭಾರವನ್ನು ಹೊತ್ತು ನಡೆಯುತ್ತಿದ್ದಾರೆ. ಆ ಭಾರ ನಮಗೆ ಕಾಣುವುದಿಲ್ಲ. ಆದ್ದರಿಂದ ಯಾರನ್ನಾದರೂ ತೀರ್ಪು ಮಾಡುವ ಮೊದಲು, ಅವರ ಬಗ್ಗೆ ತೀರ್ಮಾನಕ್ಕೆ ಬರುವ ಮೊದಲು, ಅವರ ಚಪ್ಪಲಿಯಲ್ಲಿ ಒಂದು ಹೆಜ್ಜೆಯಾದರೂ ನಡೆಯಲು ಪ್ರಯತ್ನಿಸೋಣ. ಏಕೆಂದರೆ ಆರೋಪಗಳು ಮನುಷ್ಯರನ್ನು ದೂರ ಮಾಡುತ್ತವೆ. ಅರ್ಥಮಾಡಿಕೊಳ್ಳುವ ಮನಸ್ಸು ಮಾತ್ರ ಮನುಷ್ಯರನ್ನು ಹತ್ತಿರ ತರುತ್ತದೆ. ಸಂಬಂಧಗಳನ್ನು ಉಳಿಸುತ್ತದೆ. ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಅದೇ ಬದುಕಿನ ನಿಜವಾದ ತಿರುವು.

People often judge others without understanding the unseen struggles behind their decisions. True maturity begins when we stop blaming and start asking, “What would I have done if I were in their place?” Empathy, not accusation, is the foundation of lasting relationships.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆಗಾಲವೂ ಬೇಸಿಗೆಯಷ್ಟೇ ಅಪಾಯಕಾರಿ..? ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿದೆ ‘ಹೀಟ್‌ ಸ್ಟ್ರೆಸ್‌’ ಆತಂಕ

ಹವಾಮಾನ ಬದಲಾವಣೆಯಿಂದ ಮಳೆಗಾಲದಲ್ಲೂ ಅಪಾಯಕಾರಿ ಹೀಟ್‌ ಸ್ಟ್ರೆಸ್‌ ಹೆಚ್ಚುವ ಸಾಧ್ಯತೆ ಇದೆ ಎಂದು…

5 hours ago

FSSAI ‘Unsafe’ ಟ್ಯಾಗ್ ಇದ್ದರೂ ಅಡಿಕೆ ಬಿಡುಗಡೆಗೆ ಅವಕಾಶ – ಕಲ್ಕತ್ತಾ ಹೈಕೋರ್ಟ್ ಮಹತ್ವದ ಆದೇಶ

FSSAI "Unsafe" ವರದಿ ಇದ್ದರೂ, ಕೈಗಾರಿಕಾ ಬಳಕೆಗೆ ಮಾತ್ರ ಅಡಿಕೆ ಬಿಡುಗಡೆಗೆ ಕಲ್ಕತ್ತಾ…

5 hours ago

ಚೀನಾದತ್ತ ಸಾಗುವ ಬಾವಿ ಚಂಡಮಾರುತ ದುರ್ಬಲ – 18 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ, ಭಾರೀ ಮಳೆ-ಪ್ರವಾಹದ ಎಚ್ಚರಿಕೆ

ಸೂಪರ್ ಟೈಫೂನ್ ಬಾವಿ ದುರ್ಬಲವಾಗಿದ್ದರೂ ಪೂರ್ವ ಚೀನಾದಲ್ಲಿ ಭಾರೀ ಮಳೆ, ಪ್ರವಾಹ ಹಾಗೂ…

15 hours ago

ಹವಾಮಾನ ವರದಿ | 11-06-2026 | ಕರಾವಳಿ, ಮಲೆನಾಡಿನಲ್ಲಿ ಅಲ್ಲಲ್ಲಿ ಸಾಧಾರಣ ಮಳೆ, ಉಳಿದ ಭಾಗಗಳಲ್ಲಿ ಬಿಸಿಲು-ಮೋಡದ ವಾತಾವರಣ

ರಾಜ್ಯದಲ್ಲಿ ಮುಂಗಾರು ಇನ್ನೂ ದುರ್ಬಲವಾಗಿದ್ದು, ಸುಳ್ಯ, ಕಡಬ ಹಾಗೂ ಸೋಮವಾರಪೇಟೆ ಭಾಗಗಳಲ್ಲಿ ಮಾತ್ರ…

22 hours ago

ಸ್ಪೇನ್‌ನಲ್ಲಿ ಭೀಕರ ಕಾಡ್ಗಿಚ್ಚು | ಕಿತ್ತಳೆ ಬಣ್ಣಕ್ಕೆ ತಿರುಗಿದ ಆಕಾಶ, ಭೀಕರ ಕಾಡ್ಗಿಚ್ಚಿಗೆ 12 ಬಲಿ- ಸ್ಪೇನ್‌ನಲ್ಲಿ ಭಯಾನಕ ದುರಂತ

ದಕ್ಷಿಣ ಸ್ಪೇನ್‌ನಲ್ಲಿ ಭೀಕರ ಕಾಡ್ಗಿಚ್ಚಿನಿಂದ 12 ಮಂದಿ ಸಾವನ್ನಪ್ಪಿದ್ದು, 23 ಮಂದಿ ನಾಪತ್ತೆಯಾಗಿದ್ದಾರೆ.…

1 day ago

ತೀವ್ರ ಬಿಸಿಗೆ ತುತ್ತಾಗುವ ನಗರಗಳಲ್ಲಿ ಭಾರತ ಅಗ್ರಸ್ಥಾನ: ವಿಶ್ವದ ಟಾಪ್-50 ಪಟ್ಟಿಯಲ್ಲಿ 14 ಭಾರತೀಯ ನಗರಗಳು

ತೀವ್ರ ಬಿಸಿಯ ಅಪಾಯದಲ್ಲಿರುವ ವಿಶ್ವದ ಟಾಪ್-50 ನಗರಗಳಲ್ಲಿ 14 ಭಾರತೀಯ ನಗರಗಳು ಸೇರಿವೆ.…

1 day ago