ಅಡಿಕೆ ಮಾರುಕಟ್ಟೆ ಹಾಗೂ ಅಡಿಕೆ ಬೆಳೆ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ನಡುವೆಯೇ ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೋ ಅಡಿಕೆಯ ಜೊತೆ ಉಪಬೆಳೆಯೂ ಅಗತ್ಯ ಎಂಬ ಸಂದೇಶವನ್ನು ನೀಡಿದೆ. ಈ ಬಾರಿಯ ಮಹಾಸಭೆಯಲ್ಲಿ ತಾಳೆ ಬೆಳೆ ಹಾಗೂ ಔಷಧಿ ಗಿಡಗಳ ಕಡೆಗೂ ಕ್ಯಾಂಪ್ಕೋ ವಿಸ್ತರಿಸುವ ಯೋಚನೆ ಮಾಡಿದೆ. ಈ ಬಗ್ಗೆ ಬೈಲಾ ತಿದ್ದುಪಡಿ ತರಲಿದೆ.
ಅಡಿಕೆ ಬೆಳೆವಿಸ್ತರಣೆ ವಿಪರೀತವಾಗಿ ನಡೆಯುತ್ತಿದೆ. ಅಡಿಕೆಯ ಭವಿಷ್ಯದ ಧಾರಣೆ ಹೇಗಿದ್ದೀತು, ಎನ್ನುವ ಆತಂಕ, ಚರ್ಚೆ ಎಲ್ಲಾ ಕಡೆ ನಡೆಯುತ್ತಿದೆ. ಅಂದು ಅಡಿಕೆ ಧಾರಣೆ ಸಂಕಷ್ಟದ ಸಮಯದಲ್ಲಿ ಅಡಿಕೆ ಬೆಳೆಗಾರರದ್ದೇ ಆದ ಸಂಸ್ಥೆ ಆರಂಭ ಮಾಡಲಾಗಿತ್ತು. ಅಂದು ಕೊಕೋ ಹಾಗೂ ಅಡಿಕೆಯನ್ನು ಮಾತ್ರವೇ ಕೇಂದ್ರೀಕರಿಸಿ ಸ್ಥಾಪನೆಯಾಗಿತ್ತು. ಆ ಕಾಲದಲ್ಲಿ ಕೊಕೋ ಹಾಗೂ ಅಡಿಕೆ ಎರಡೂ ಕೃಷಿಯೂ ಸಂಕಷ್ಟದಲ್ಲಿತ್ತು. ಈ ಮೂಲಕ ಕ್ಯಾಂಪ್ಕೋ ಸ್ಥಾಪನೆಯಾಗಿ ಅಡಿಕೆ ಧಾರಣೆ ಸ್ಥಿರತೆಗೆ ಕಾರಣವಾಯಿತು. ಅದೇ ಮಾದರಿಯಲ್ಲಿ ಹಲವು ಸಹಕಾರಿ ಸಂಘಗಳು ಅಡಿಕೆ ಬೆಳೆಗಾರರಿಗೆ ಪೂರಕವಾಗಿ ಕೆಲಸ ಮಾಡಿದ್ದವು.
ಅಡಿಕೆ ಬೆಳೆ, ಧಾರಣೆ ಉತ್ತಮವಾಗಿರುವ ಈ ಸಂದರ್ಭದಲ್ಲಿಯೇ ಕ್ಯಾಂಪ್ಕೋ ಕೃಷಿಕರ ಪರವಾಗಿಯೇ ಕೆಲಸ ಮಾಡುತ್ತಲೇ ಇತ್ತು. ಕೃಷಿಕರ ಬೆಳೆ ಹಾಗೂ ಕೃಷಿ ಚಟುವಟಿಕೆ ಗಮನಿಸಿ ಕ್ಯಾಂಪ್ಕೋ ನಿಧಾನವಾಗಿ ಕಾರ್ಯಕ್ಷೇತ್ರವನ್ನು ಕಾಳುಮೆಣಸು, ರಬ್ಬರ್ ಕಡೆಗೂ ವಿಸ್ತರಣೆ ಮಾಡಿತ್ತು. ಅದಾದ ನಂತರ ಗೇರು, ತೆಂಗಿನ ಕಡೆಗೂ ವಿಸ್ತರಣೆ ಮಾಡಿತ್ತು. ಇದೀಗ ವಿಶೇಷವಾಗಿ ಔಷಧಿ ಸಸ್ಯಗಳು ಹಾಗೂ ತಾಳೆ ಕೃಷಿಯ ಕಡೆಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಣೆ ಮಾಡುವ ಸಿದ್ಧತೆ ನಡೆಸಿದೆ. ಈ ಬಾರಿಯ ಮಹಾಸಭೆಯಲ್ಲಿ ಬೈಲಾ ತಿದ್ದುಪಡಿ ಮಾಡುವ ಹೆಜ್ಜೆ ಇರಿಸಿದೆ.

ದಕ್ಷಿಣ ಕನ್ನಡದಲ್ಲಿ ಅಡಿಕೆಯ ಜೊತೆಗೆ ತಾಳೆ ಬೆಳೆಯೂ ಈಗ ಪರ್ಯಾಯ ಬೆಳೆಯಾಗುತ್ತಿದೆ. ಅಡಿಕೆ ಹಳದಿ ಎಲೆರೋಗ ಪೀಡಿತವಾಗಿ ಬೆಳೆನಾಶವಾಗುವ ಸಂದರ್ಭ ಬಂದಾಗ ಕೆಲವು ಕೃಷಿಕರು ತಾಳೆ ಕೃಷಿಯತ್ತ ಮನಸ್ಸು ಮಾಡಿದ್ದರು. ಈ ಬಗ್ಗೆ ಸುಳ್ಯದ ತೊಡಿಕಾನದ ದಿವಂಗತ ವಸಂತ ಭಟ್ ಅವರು ಅಡಿಕೆಗೆ ತಾಳೆ ಬೆಳೆಯೇ ಪರ್ಯಾಯ ಕೃಷಿ ಎಂದು ಅಭಿಯಾನ ಮಾಡಿದ್ದರು. ಇದೆಲ್ಲದರ ಪರಿಣಾಮ ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶದ ಕೆಲವು ಕಡೆ ತಾಳೆ ಕೃಷಿ ವಿಸ್ತರಣೆಯಾಯಿತು. ಇದೀಗ ತಾಳೆ ಎಣ್ಣೆ ತಯಾರಿಕೆಗೆ ದಕ್ಷಿಣ ಕನ್ನಡ ಜಿಲ್ಲೆಯೇ ಸೂಕ್ತವಾದ ವ್ಯವಸ್ಥೆಯೂ ಆಗಬೇಕಾಗಿದೆ. ಈ ಎಲ್ಲದರ ನಡುವೆಯೇ ಕ್ಯಾಂಪ್ಕೋ ಕೂಡಾ ಈಗ ತಾಳೆ ಕೃಷಿಯತ್ತ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಣೆ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಅಡಿಕೆ ಬೆಳೆಗಾರರು ಅದರಲ್ಲೂ ಮಲೆನಾಡು, ಕರಾವಳಿ ಭಾಗದಲ್ಲಿ ಅಡಿಕೆಯ ಜೊತೆಗೆ ಪರ್ಯಾಯ ಕೃಷಿಯ ಅಗತ್ಯ ಇದೆ ಎನ್ನುವುದನ್ನು ಕ್ಯಾಂಪ್ಕೋ ಪರೋಕ್ಷವಾಗಿ ಕೆಲವು ಸಮಯಗಳಿಂದ ಹೇಳುತ್ತಾ ಬಂದಿರುವುದು ಸತ್ಯ.