ನಂಬಿಕೆ ಎಂಬುದು ಕೇವಲ ಮೂರಕ್ಷರದ ಪದ.ಆದರೆ ಅದಿಲ್ಲದೆ ಜೀವನವಿಲ್ಲ.ಅದನ್ನೆಂದೂ ತುಲನೆ ಮಾಡಲಾಗದು. ಪ್ರಪಂಚದ ಎಲ್ಲಾ ಸಂಬಂಧಗಳು ,ವ್ಯವಹಾರಗಳು ನಿಂತಿರುವುದು ಈ ನಂಬಿಕೆ ಎಂಬ ಅಡಿಪಾಯದ ಮೇಲೆ. ನಂಬಿ ಕೆಟ್ಟವರಿಲ್ಲವೋ ರಂಗಯ್ಯನ…. ಎಂಬ ದಾಸರವಾಣಿಯೇ ಇದೆ.
ಪ್ರಸ್ತುತ ದಿನಗಳಲ್ಲಿ ಈ ನಂಬಿಕೆ ಎಂಬ ಪದ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ.ನಾವು ಮೋಸಕ್ಕೊಳಗಾಗುವುದು ಯಾರಿಂದ ಎಂದರೆ ನಾವು ಯಾರ ಮೇಲೆ ಅತಿಯಾದ ನಂಬಿಕೆ ಇಡುತ್ತೇವೆಯೋ ಅವರಿಂದಲೇ.ನಮ್ಮ ಊರಿನ ಪ್ರಗತಿಯಾಗಬಹುದೆಂಬ ಅತಿಯಾದ ನಂಬಿಕೆಯಿಂದ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಿ ಕಳುಹಿಸುತ್ತೇವೆ. ಆ ನಂಬಿಕೆ ಅವನ ಅವಧಿ ಮುಗಿಯುವವರೆಗೂ ನಂಬಿಕೆಯಾಗಿಯೇ ಉಳಿದು ಬಿಡುತ್ತದೆ. ಇದು ಕೇವಲ ಒಂದು ಉದಾಹರಣೆ ಅಷ್ಟೇ. ನಂಬಿಕೆಯ ಅಡಿಪಾಯ ಗಟ್ಟಿಯಾಗಿಲ್ಲದಿದ್ದರೆ ಯಾವ ಸಂಬಂಧವೂ ಉಳಿಯಾರವು. ಪ್ರೀತಿಸುವ ಮನಸುಗಳ ನಡುವೆ ಸುಳಿಯುವ ಸಣ್ಣ ಅನುಮಾನ ಸಂಬಂಧವನ್ನೇ ಮುರಿದುಬಿಡಬಹುದು. ಎಲ್ಲರ ಮೇಲೂ,ಎಲ್ಲಾ ವಿಷಯಗಳ ಮೇಲೂ ನಂಬಿಕೆ ಇಡುವುದು ಸಾಧ್ಯವಿಲ್ಲ.
ಏಕೆಂದರೆ ಮೋಸ ಎನ್ನುವ ಪದ ಹುಟ್ಟಿಕೊಂಡದ್ದೇ ನಂಬಿಕೆಯ ಕೊಂಡಿಯನ್ನು ಕಳಚಲು. ಜೀವನದಲ್ಲಿ ಎಷ್ಟು ಹುಡುಕಿದರೂ ಉತ್ತರ ಸಿಗದ ಪ್ರಶ್ನೆ ಎಂದರೆ ಯಾರನ್ನು ನಂಬಬೇಕು? ಎಂಬುದಾಗಿದೆ. ಯಾರನ್ನು ,ಯಾವ ಸಂದರ್ಭದಲ್ಲಿ ಎಷ್ಟು ನಂಬಬೇಕು ಎಂಬ ನಿರ್ಧಾರವನ್ನು ಕೈಗೊಳ್ಳುವುದು ತುಸು ಕಷ್ಟದ ಕೆಲಸವೇ ಆಗಿದೆ.
ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಕಡಿಮೆಯಾದಾಗ ಬಾಗಿಲು ಹುಟ್ಟಿಕೊಂಡಿತು.ಆ ನಂಬಿಕೆಗೆ ಕೊಡಲಿಯೇಟು ಬಿದ್ದಾಗ ಬೀಗ ಹುಟ್ಟಿಕೊಂಡಿತು.ನಂಬಿಕೆ ಎಂಬ ಪದವೇ ಕಳಚಿಕೊಂಡಾಗ ಸಿಸಿಟಿವಿ ಹುಟ್ಟಿಕೊಂಡಿತು. ಇದು ಅಕ್ಷರಶಃ ಸತ್ಯ. ಸಿಸಿಟಿವಿಯ ಆಚೆಗೂ ದ್ರೋಹಗಳಾಗುತ್ತಿರುವುದು ದುಸ್ತರ.
ಇಷ್ಟಾದರೂ ಈ ಜಗತ್ತು ನಿಂತಿರುವುದು ನಂಬಿಕೆಯ ಮೇಲೆಯೇ.ನಂಬಿಕೆ ಎಂದರೆ ಒಬ್ಬರಿಗೆ ಮತ್ತೊಬ್ಬರ ಮೇಲೆ ಇರೋ ವಿಶ್ವಾಸ. ಜೊತೆಗೆ ನಮಗೆ ನಮ್ಮ ಮೇಲಿರುವ ವಿಶ್ವಾಸ.ನಂಬಿಕೆಯನ್ನು ಗಳಿಸಿಕೊಳ್ಳುವುದು ಎಷ್ಟು ಕಷ್ಟವೋ ಅದನ್ನು ಉಳಿಸಿಕೊಳ್ಳುವುದು ಅಷ್ಟೇ ಕಷ್ಟ. ನಂಬಿಕೆ ಇಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ ಅದಕ್ಕೆಂದೇ ” ನಂಬದೆ ಬದುಕಿಲ್ಲ, ನಂಬಿ ಕೆಟ್ಟವರಿಲ್ಲ ನಂಬದೇ ವಿಧಿಯಿಲ್ಲ ಜಗದೊಳಗೆ “ಎಂದು ಹೇಳುವುದು.ನಂಬಿಕೆಯಿಲ್ಲದೆ ಬದುಕಿನ ಒಂದು ಕ್ಷಣವನ್ನೂ ಕಳೆಯಲು ಸಾಧ್ಯವಿಲ್ಲ. ನಂಬಿಕೆಲ್ಲದಿದ್ದರೆ ಬದುಕೇ ಶೂನ್ಯ. ನಂಬಿಕೆಯಿಂದ ಎಲ್ಲವನ್ನೂ ಬದಲಾಯಿಸಲು ಸಾಧ್ಯವಿಲ್ಲದಿದ್ದರೂ ಅಸಾಧ್ಯವಾದುದನ್ನೂ ಸಾಧ್ಯವಾಗಿಸಬಹುದು.
ನಾವು ಸದಾ ಇತರರ ನಂಬಿಕೆ ಗಳಿಸಲು ಪ್ರಯತ್ನಿಸುತ್ತೇವೆ.ಇತರರ ಮೇಲೆಯೇ ಅತಿಯಾದ ನಂಬಿಕೆಯನ್ನು ಇಡುತ್ತೇವೆ. ಮೊದಲು ನಾವು ನಂಬಿಕೆಯ ಮೇಲೆ ನಂಬಿಕೆಯಿಡಬೇಕು.ನಮ್ಮ ಮೇಲೆ ನಂಬಿಕೆಯಿಡಬೇಕು. ನಾವು ಮಾಡುವ ಕಾರ್ಯದ ಮೇಲೆ ನಂಬಿಕೆಯಿಡಬೇಕು. ನಾವು ಇತರರನ್ನು ನಂಬಿಸುವ ಅಗತ್ಯವಿಲ್ಲ. ಸಮಯ ಬಂದಾಗ ಅವರಲ್ಲಿ ನಂಬಿಕೆ ತಾನಾಗಿಯೇ ಹುಟ್ಟಿಕೊಳ್ಳುತ್ತದೆ.ನಮ್ಮ ಮನಸ್ಸನ್ನು ನಕರಾತ್ಮಕ ಚಿಂತನೆಗಳಿಗೆ ,ಭಾವನೆಗಳಿಗೆ ಅಡಿಯಾಳಾಗಿಸದೆ ಸಕರಾತ್ಮಕ ಧೋರಣೆಯೊಂದಿಗೆ ಬದುಕಿನ ಹೆಜ್ಜೆಗಳನ್ನಿಡಬೇಕು.
ನಂಬಿಕೆಗಳು ನಮ್ಮನ್ನು ಕಾಯುತ್ತದೆ.ಮತ್ತು ಬೆಳೆಸುತ್ತದೆ.ಮಹಾಭಾರತ ಯುದ್ದದಲ್ಲಿ ಅರ್ಜುನ ಕೌರವರನ್ನು ಗೆದ್ದಿದ್ದು ಕೃಷ್ಣ ತನ್ನೊಂದಿಗೆ ಇದ್ದಾನೆ ಎಂಬ ನಂಬಿಕೆಯಿಂದಲೇ. ಅಭಿಮನ್ಯು ಚಕ್ರವ್ಯೂಹ ಬೇಧಿಸಿದ್ದು ತನ್ನ ಸಾಮರ್ಥ್ಯದ ಮೇಲಿನ ನಂಬಿಕೆಯಿಂದ. ಇತರರ ಕೈಯಲ್ಲಿ ಅಳುವ ಮಗುವು ತಾಯಿಯ ಕೈಯಲ್ಲಿ ಅಳುನಿಲ್ಲಿಸಿ ನಗುವುದು ಅಮ್ಮನ ಮೇಲಿನ ನಂಬಿಕೆಯಿಂದಲೇ. ನಂಬಿಕೆಯಿಂದ ಉತ್ಸಾಹ ಹುಟ್ಟುತ್ತದೆ.
ಬದುಕು ಬದಲಾಗಬೇಕಾದರೆ ನಮ್ಮ ನಂಬಿಕೆಗಳು ಬದಲಾಗಬೇಕು. ಇಂದು ಅಕ್ಕಿ ನೆನೆ ಹಾಕಿ ಮಲಗುವುದು ನಾಳೆ ನಾವು ಏಳುತ್ತೇವೆ ಎಂಬ ನಂಬಿಕೆಯಿಂದ.ಇಂದು ಮುಳುಗಿದ ಸೂರ್ಯ ನಾಳೆ ಉದಯಿಸುತ್ತಾನೆ ಎಂಬ ನಂಬಿಕೆಯಿಂದಲೇ ನಾವು ಬದುಕುತ್ತಿದ್ದೇವೆ. ಸುಂದರವಾದ ನಾಳೆಗಳು ನಮಗಾಗಿ ಕಾಯುತ್ತಿವೆ. ಆ ಸುಂದರ ನಾಳೆಗಳನ್ನು ಕಾಣಲು ಇಂದಿನ ಕತ್ತಲನ್ನು ಎದುರಿಸುವ ಮನೋಭಾವ ನಮ್ಮಲ್ಲಿರಬೇಕಷ್ಟೆ!
# ಅಪೂರ್ವ ಚೇತನ್ ಪೆರಂದೋಡಿ
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…