ಭಾರತ ಯುವ ದೇಶ. ಆದರೆ ಭಾರತದ ಕೃಷಿಕರ ವಯಸ್ಸು ಹೆಚ್ಚುತ್ತಿದೆ. ಕೃಷಿಯನ್ನು ಮುಂದಿನ ಪೀಳಿಗೆ ಮುಂದುವರಿಸದಿದ್ದರೆ, ನಾಳೆಯ ಆಹಾರವನ್ನು ಬೆಳೆಯೋರು ಯಾರು? ಇದೊಂದು ದೊಡ್ಡ ಪ್ರಶ್ನೆ.
ಭಾರತದ ಆಹಾರ ಭದ್ರತೆ ಎಂದರೆ ಸಾಮಾನ್ಯವಾಗಿ ಎಷ್ಟು ಆಹಾರ ಉತ್ಪಾದನೆಯಾಗುತ್ತಿದೆ, ಆಹಾರ ಧಾನ್ಯಗಳ ದಾಸ್ತಾನು ಎಷ್ಟಿದೆ, ಮಳೆ ಹೇಗಿದೆ ಎಂಬ ಪ್ರಶ್ನೆಗಳ ಸುತ್ತಲೇ ಚರ್ಚೆಯಾಗುತ್ತದೆ. ಆದರೆ ಈಗ ಅದರೊಂದಿಗೆ ಮತ್ತೊಂದು ಮಹತ್ವದ ಪ್ರಶ್ನೆಯನ್ನು ಕೇಳಬೇಕಾದ ಸಮಯ ಬಂದಿದೆ — “ಮುಂದಿನ ದಿನಗಳಲ್ಲಿ ಭಾರತದ ಆಹಾರ ಬೆಳೆಯೋರು ಯಾರು?” ಎಂದು ಡೌನ್ ಟು ಅರ್ಥ್ ವಿಶ್ಲೇಷಣೆ ಮಾಡಿದೆ.
ದೇಶ ಯುವ, ರೈತ ವಯಸ್ಸಾಗುತ್ತಿದ್ದಾನೆ : ಭಾರತದ ಸರಾಸರಿ ಜನಸಂಖ್ಯೆಯ ವಯಸ್ಸು ಸುಮಾರು 29 ವರ್ಷ. ಆದರೆ ಕೃಷಿಯಲ್ಲಿ ತೊಡಗಿರುವ ರೈತರ ಸರಾಸರಿ ವಯಸ್ಸು ಸುಮಾರು 50ರಿಂದ 55 ವರ್ಷ ಎಂದು ವಿವಿಧ ಅಧ್ಯಯನಗಳನ್ನು ಉಲ್ಲೇಖಿಸಿ ವರದಿ ಹೇಳುತ್ತದೆ.
ಅಂದರೆ, ಯುವ ಜನಸಂಖ್ಯೆ ಹೆಚ್ಚಿರುವ ದೇಶವೊಂದು ವಯಸ್ಸಾಗುತ್ತಿರುವ ಕೃಷಿಕ ಸಮುದಾಯದ ಮೇಲೆ ಆಹಾರಕ್ಕಾಗಿ ಅವಲಂಬಿತವಾಗಿದೆ. ಇದು ತಕ್ಷಣದ ಆಹಾರ ಕೊರತೆಯ ಸಮಸ್ಯೆಯಲ್ಲ. ಆದರೆ ಮುಂದಿನ ಪೀಳಿಗೆಯಲ್ಲಿ ಕೃಷಿಯ ಮುಂದುವರಿಕೆಗೆ ಸಂಬಂಧಿಸಿದ ದೊಡ್ಡ ಪ್ರಶ್ನೆ.
ಯುವಕರಿಗೆ ಕೃಷಿ ಯಾಕೆ ಆಕರ್ಷಕವಾಗುತ್ತಿಲ್ಲ? : ಕೃಷಿ ಎಂದರೆ ಈಗ ಕೇವಲ ಹೊಲದಲ್ಲಿ ದುಡಿಯುವುದು ಮಾತ್ರವಲ್ಲ. ಹವಾಮಾನ ಅನಿಶ್ಚಿತತೆ, ಮಾರುಕಟ್ಟೆ ಬೆಲೆ ಏರಿಳಿತ, ಹೆಚ್ಚುತ್ತಿರುವ ಒಳಸುರಿ ವೆಚ್ಚ, ಸಣ್ಣ ಮತ್ತು ಚೂರುಚೂರಾದ ಜಮೀನುಗಳು ಹಾಗೂ ಖಚಿತವಲ್ಲದ ಆದಾಯ ಇವೆಲ್ಲವೂ ಯುವಕರ ಮುಂದೆ ಇರುವ ಸವಾಲುಗಳು.
ಒಂದು ಅಧ್ಯಯನ ವರದಿ ಪ್ರಕಾರ, ಸಮೀಕ್ಷೆಗೊಳಗಾದ ಗ್ರಾಮೀಣ ಯುವಕರಲ್ಲಿ ಕೇವಲ 1.2% ಮಂದಿ ಮಾತ್ರ ರೈತರಾಗುವುದನ್ನು ತಮ್ಮ ಭವಿಷ್ಯದ ಆಶಯವಾಗಿ ಹೊಂದಿದ್ದರು. ಇದು ಯುವಕರಿಗೆ ಕೃಷಿಯ ಬಗ್ಗೆ ಗೌರವವಿಲ್ಲ ಎಂಬುದಲ್ಲ. ಕೃಷಿಯಲ್ಲಿ ಭದ್ರವಾದ ಹಾಗೂ ಬೆಳೆಯಬಹುದಾದ ಭವಿಷ್ಯ ಕಾಣುತ್ತಿಲ್ಲ ಎನ್ನುವುದು ಇದರ ಹಿಂದಿನ ಪ್ರಮುಖ ಕಾರಣ.
₹10 ಸಾವಿರ ಸಂಬಳವೂ ಕೃಷಿಗಿಂತ ಖಚಿತವೆನಿಸುತ್ತದೆ : ನಗರದಲ್ಲಿ ತಿಂಗಳಿಗೆ ಒಂದು ನಿರ್ದಿಷ್ಟ ಸಂಬಳ ಸಿಗುತ್ತದೆ. ಕೃಷಿಯಲ್ಲಿ ವರ್ಷಪೂರ್ತಿ ದುಡಿದರೂ ಆದಾಯ ಯಾವಾಗ, ಎಷ್ಟು ಬರುತ್ತದೆ ಎಂಬುದು ಖಚಿತವಲ್ಲ. ಹೀಗಾಗಿ ಯುವಕರು ನಗರಕ್ಕೆ ಹೋಗುವುದು ಕೇವಲ ಹಳ್ಳಿಯನ್ನು ತೊರೆಯುವ ನಿರ್ಧಾರವಲ್ಲ; ಬಹುತೇಕ ಸಂದರ್ಭಗಳಲ್ಲಿ ಅದು ಆರ್ಥಿಕವಾಗಿ ತಾರ್ಕಿಕ ನಿರ್ಧಾರವೂ ಆಗಿದೆ.
ಕೃಷಿಯಲ್ಲಿ ಲಾಭದಾಯಕ ಬೆಲೆ ಸಿಗದಿರುವುದು, ಉತ್ಪಾದಕತೆ ಸ್ಥಗಿತವಾಗಿರುವುದು ಮತ್ತು ಸಮರ್ಪಕ ಆದಾಯದ ಕೊರತೆ ಯುವಕರ ವಲಸೆಗೆ ಪ್ರಮುಖ ಕಾರಣಗಳಾಗಿವೆ ಎಂದು ವರದಿ ಉಲ್ಲೇಖಿಸುತ್ತದೆ. ಒಂದು ಅಧ್ಯಯನದಲ್ಲಿ 67.43% ಯುವಕರು ಅಸಂಘಟಿತ ಮಾರುಕಟ್ಟೆಯಿಂದ ಲಾಭದಾಯಕ ಬೆಲೆ ಸಿಗದಿರುವುದನ್ನು ವಲಸೆಯ ಪ್ರಮುಖ ಕಾರಣವೆಂದು ಗುರುತಿಸಿದ್ದರು.
ಸಣ್ಣ ಜಮೀನು: ದೊಡ್ಡ ಸವಾಲು : ಭಾರತದ ಕೃಷಿಯ ಮತ್ತೊಂದು ವಾಸ್ತವ ಸಣ್ಣ ಭೂ ಹಿಡುವಳಿ. ಸರ್ವೆ ಪ್ರಕಾರ 70.4% ಕೃಷಿ ಕುಟುಂಬಗಳು ಒಂದು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿವೆ ಎಂದು ವರದಿ ಹೇಳುತ್ತದೆ. ಸಣ್ಣ ಜಮೀನಿನಲ್ಲಿ ದೊಡ್ಡ ಪ್ರಮಾಣದ ಯಂತ್ರೋಪಕರಣ ಹೂಡಿಕೆ, ಆರ್ಥಿಕ ಪ್ರಮಾಣದ ಪ್ರಯೋಜನ, ಉತ್ಪಾದನಾ ಮತ್ತು ಬೆಲೆ ಆಘಾತಗಳನ್ನು ತಡೆದುಕೊಳ್ಳುವುದು ಕಷ್ಟವಾಗಬಹುದು. ಹೀಗಾಗಿ ಯುವಕನಿಗೆ ಸಣ್ಣ ಜಮೀನು ಆಸ್ತಿಗಿಂತಲೂ ಕೆಲವೊಮ್ಮೆ ಹೊಣೆಗಾರಿಕೆಯಂತೆ ಕಾಣಬಹುದು. ಆದರೆ ಸಣ್ಣ ಜಮೀನಿನಲ್ಲೂ ಅವಕಾಶವಿದೆ, ಇಲ್ಲಿ ಕೃಷಿಯ ಭವಿಷ್ಯದ ಚರ್ಚೆ ಹೊಸ ದಿಕ್ಕಿಗೆ ಹೋಗಬೇಕು.
ಹೀಗಾಗಿ ಮುಂದಿನ ರೈತ ಎಂದರೆ ಕೇವಲ ಸಾಂಪ್ರದಾಯಿಕ ರೀತಿಯಲ್ಲಿ ಬೆಳೆ ಬೆಳೆಯುವ ವ್ಯಕ್ತಿ ಮಾತ್ರವಾಗಬೇಕಿಲ್ಲ. ಅವನು ಕೃಷಿ ಯಂತ್ರೋಪಕರಣ ಸೇವೆ ನೀಡಬಹುದು, ಹೈನುಗಾರಿಕೆ ಮಾಡಬಹುದು, ಆಹಾರ ಸಂಸ್ಕರಣೆ ಮಾಡಬಹುದು, ಸಂಗ್ರಹಣೆ ಮತ್ತು ಶೀತಗೃಹ ಸೇವೆ ಮಾಡಬಹುದು, ಕೃಷಿ ಉತ್ಪನ್ನಗಳ ಸಾಗಣೆ-ಮಾರಾಟದಲ್ಲಿ ತೊಡಗಬಹುದು, ಡಿಜಿಟಲ್ ಕೃಷಿ ಸೇವೆ ಆರಂಭಿಸಬಹುದು. ಅಂದರೆ ಕೃಷಿಯನ್ನು ಒಂದು ಬೆಳೆ ಅಥವಾ ಒಂದು ಜಮೀನಿಗೆ ಸೀಮಿತಗೊಳಿಸದೆ, ಹಲವು ಉದ್ಯೋಗ ಮತ್ತು ಉದ್ಯಮಗಳ ವ್ಯವಸ್ಥೆಯಾಗಿ ನೋಡುವ ಅಗತ್ಯವಿದೆ.
ರೈತನ ಮಗ ಕೃಷಿಯಲ್ಲೇ ಉಳಿಯಬೇಕೆಂದರೆ… “ಊರಿಗೆ ಬನ್ನಿ, ಕೃಷಿ ಮಾಡಿ” ಎಂದು ಯುವಕರಿಗೆ ಹೇಳುವುದಷ್ಟೇ ಸಾಲದು. ಕೃಷಿಯಲ್ಲಿ ಹಣ ಇರಬೇಕು,
ತಂತ್ರಜ್ಞಾನ ಇರಬೇಕು, ಮಾರುಕಟ್ಟೆ ಇರಬೇಕು, ಗೌರವ ಇರಬೇಕು, ಮುಂದೆ ಬೆಳೆಯುವ ಅವಕಾಶ ಇರಬೇಕು. ಯುವಕನಿಗೆ ಕೃಷಿ ಎಂದರೆ ಕೇವಲ ತಂದೆಯಿಂದ ಬಂದ ಜಮೀನು ನೋಡಿಕೊಳ್ಳುವ ಕೆಲಸವಾಗಬಾರದು. ಅದರಲ್ಲಿ ಹೊಸ ಉದ್ಯಮ ಕಟ್ಟಬಹುದು ಎಂಬ ವಿಶ್ವಾಸ ಬರಬೇಕು. ಯುವ ಕೃಷಿ ಉದ್ಯಮಿಗಳಿಗೆ ಹಣಕಾಸು, ಮಾರುಕಟ್ಟೆ, ತಂತ್ರಜ್ಞಾನ, ಮೂಲಸೌಕರ್ಯ, ಕೌಶಲ್ಯ ಮತ್ತು ಉತ್ತಮ ಮೌಲ್ಯ ಸರಪಳಿಯ ಅಗತ್ಯವಿದೆ.
ಆಹಾರ ಭದ್ರತೆ ಎಂದರೆ ರೈತ ಭದ್ರತೆಯೂ ಹೌದು : ನಾವು ಆಹಾರ ಭದ್ರತೆ ಬಗ್ಗೆ ಮಾತನಾಡುವಾಗ ಅಕ್ಕಿ, ಗೋಧಿ, ತರಕಾರಿ, ಹಾಲು ಎಷ್ಟು ಉತ್ಪಾದನೆಯಾಗುತ್ತದೆ ಎಂಬುದನ್ನು ಲೆಕ್ಕ ಹಾಕುತ್ತೇವೆ. ಆದರೆ ಅದರ ಹಿಂದೆ ಒಬ್ಬ ರೈತ ಇದ್ದಾನೆ. ಪ್ರತಿ ಕಿಲೋ ತರಕಾರಿಯ ಹಿಂದೆ ರೈತನ ಶ್ರಮವಿದೆ.
ಪ್ರತಿ ಲೀಟರ್ ಹಾಲಿನ ಹಿಂದೆ ಪಶುಪಾಲಕನ ಶ್ರಮವಿದೆ. ಪ್ರತಿ ಕ್ವಿಂಟಾಲ್ ಧಾನ್ಯದ ಹಿಂದೆ ಕೃಷಿಕನ ಬದುಕಿದೆ. ನೀರಾವರಿ, ಬೀಜ, ರಸಗೊಬ್ಬರ, ತಂತ್ರಜ್ಞಾನ ಎಲ್ಲವೂ ಬೇಕು. ಆದರೆ ಇವೆಲ್ಲವನ್ನೂ ಬಳಸಿಕೊಂಡು ಆಹಾರ ಉತ್ಪಾದಿಸುವ ಮನುಷ್ಯನೇ ಇಲ್ಲದಿದ್ದರೆ? .
ಕೃಷಿಯ ಭವಿಷ್ಯವನ್ನು ಯುವಕರಿಗೆ ಆಕರ್ಷಕ ಮಾಡಬೇಕು : ಯುವಕರು ಹಳ್ಳಿಯಿಂದ ನಗರಕ್ಕೆ ಹೋಗುವುದನ್ನು ತಡೆಯುವುದೇ ಪರಿಹಾರವಲ್ಲ. ನಗರಕ್ಕೆ ಹೋಗಿ ಉತ್ತಮ ಅವಕಾಶ ಪಡೆಯುವುದು ತಪ್ಪಲ್ಲ. ಆದರೆ ಕೃಷಿಯಲ್ಲೂ ಉತ್ತಮ ಅವಕಾಶ ಇರಬೇಕು. ಒಬ್ಬ ಯುವಕನಿಗೆ “ಕೃಷಿ ಮಾಡಿದರೆ ಜೀವನದಲ್ಲಿ ಮುಂದೆ ಹೋಗಬಹುದು” ಎಂಬ ನಂಬಿಕೆ ಮೂಡಿದಾಗ ಮಾತ್ರ ಕೃಷಿಯ ಪೀಳಿಗೆಯ ವರ್ಗಾವಣೆ ಮುಂದುವರಿಯುತ್ತದೆ. ಭಾರತದ ಕೃಷಿ ನೀತಿ ಇಷ್ಟು ವರ್ಷ ಉತ್ಪಾದನೆ ಹೆಚ್ಚಿಸುವುದು, ಬೆಲೆ ಅಪಾಯದಿಂದ ರೈತರನ್ನು ರಕ್ಷಿಸುವುದು ಮತ್ತು ಆಹಾರದ ಲಭ್ಯತೆಯನ್ನು ಖಚಿತಪಡಿಸುವುದರ ಮೇಲೆ ಗಮನಹರಿಸಿದೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
India faces a less-discussed food-security challenge: an ageing farming workforce and declining interest among rural youth. With average farmers estimated at 50–55 years and only 1.2% of surveyed rural youth aspiring to become farmers, the country needs to make agriculture economically viable, technology-driven and attractive to the next generation.


