ಆನ್ಲೈನ್ ಗೇಮ್ ಎಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎಂದರೆ ಚಿಕ್ಕವರಿಂದ ದೊಡ್ಡವರವೆರಗೂ ಎಲ್ಲರೂ ಮೊಬೈಲ್ ಗೇಮ್‌ಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ಹೊಸ ಹೊಸ ಆನ್‌ಲೈನ್ ಗೇಮ್‌ಗಳು ದಿನೇ ದಿನೇ ಉದಯವಾಗುತ್ತಿವೆ ಎನ್ನಬಹುದು. ಈ ಆನ್‌ಲೈನ್ ಗೇಮ್‌ಗೆ ವ್ಯಸನಿಗಳಾಗುತ್ತಿರುವುದರ ಜೊತೆಗೆ ಬೆಟ್ಟಿಂಗ್ ಅಂತೆಲ್ಲಾ ಹಣ ಕೂಡ ಕಳೆದುಕೊಳ್ಳುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಕೆಲವರಂತೂ ಈ ಹುಚ್ಚು ಆಟಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿ ಇವುಗಳಿಗೆಲ್ಲಾ ಬ್ರೇಕ್ ಹಾಕಲು ಆನ್‌ಲೈನ್ ಗೇಮಿಂಗ್‌ಗಾಗಿ ಸರ್ಕಾರವು ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ತಂದಿದ್ದು ಹೊಸದಾಗಿ ಕೆಲ ನೀತಿಗಳನ್ನು ರೂಪಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಅಡಿಯಲ್ಲಿ ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ನಿಯಮಗಳನ್ನು ಹೊಸದಾಗಿ ಬಿಡುಗಡೆ ಮಾಡಿದ್ದು, ಉದಯೋನ್ಮುಖ ಗೇಮಿಂಗ್ ಉದ್ಯಮವನ್ನು ಪರಿಶೀಲಿಸಲು ಮತ್ತು ಆನ್‌ಲೈನ್ ಗೇಮಿಂಗ್‌ಗಾಗಿ ಅಪ್ಲಿಕೇಶನ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸುವ ಗುರಿಯೊಂದಿಗೆ ಬಂದಿದೆ ಎಂದು ಸಚಿವಾಲಯವು ತಿಳಿಸಿದೆ.
ಆನ್‌ಲೈನ್ ಗೇಮಿಂಗ್ ಹೊಸ ನಿಯಮಗಳೇನು? : ಹೊಸ ನಿಯಮದ ಪ್ರಕಾರ ನೈಜ ಹಣದ ಆಟದ ಸಂದರ್ಭದಲ್ಲಿ ಆಟ ಮತ್ತು ಗ್ರಾಹಕರ ದೃಢೀಕರಣ, ಸುಳ್ಳು ಮಾಹಿತಿಗಳನ್ನು ತೆಗೆದುಹಾಕುವುದು ಮತ್ತು ಸ್ವಯಂ ನಿಯಂತ್ರಣ ಸಂಸ್ಥೆಗಳು ನಿಗದಿಪಡಿಸಿದ ನಿಯಮಗಳ ಅನುಸರಿಸುವಿಕೆ ಸೇರಿದಂತೆ ಹಲವು ನಿಯಮಗಳನ್ನು ಆನ್‌ಲೈನ್ ಗೇಮಿಂಗ್ ಕಂಪನಿಗಳು ಪಾಲಿಸುವುದು ಕಡ್ಡಾಯವಾಗಿದೆ. ಆನ್‌ಲೈನ್ ಗೇಮಿಂಗ್ ಕಂಪನಿಗಳು ಡಿಜಿಟಲ್ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಸರಕಾರ ತಿಳಿಸಿದೆ.
ಆನ್‌ಲೈನ್ ಗೇಮಿಂಗ್ ಮೇಲೆ ಕಣ್ಣಿಡಲು ಸ್ವಯಂ-ನಿಯಂತ್ರಕ ಸಂಸ್ಥೆ (SRO) ರಚನೆ : ಕೇಂದ್ರ ಸರ್ಕಾರದ ಐಟಿ ಸಚಿವಾಲಯವು ಐಟಿ ನಿಯಮಗಳು 2023 ಅನ್ನು ಹೊಸದಾಗಿ ಅಂಗೀಕರಿಸಿದೆ. ಇದು ಆನ್ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ನೋಂ ದಣಿ ಮತ್ತು ಕಂಟ್ರೋಲ್‌ಗಾಗಿ “ಮಧ್ಯವರ್ತಿಗಳು” ಎಂದು ಕರೆಯುವ ಸೆಲ್ಫ್-ರೆಗ್ಯೂಲೆಟರಿ ಸಂಸ್ಥೆಯ ಸ್ಥಾಪನೆಯನ್ನು ಕಡ್ಡಾಯಗೊಳಿಸಿದೆ.
ಮುಖ್ಯವಾಗಿ ಗೇಮಿಂಗ್ ಅಪ್ಲಿಕೇಶನ್ಗಳ ಮೇಲೆ ನಿಗಾವಹಿಸಲಿರುವ SROs ಸಂಸ್ಥೆ ಅಪ್ಲಿಕೇಶನ್ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ. ಇವುಗಳ ಬೆಟ್ಟಿಂಗ್, ಬಾಜಿ ಕಟ್ಟುವುದಕ್ಕೆ ಅವಕಾಶ ನೀಡುತ್ತಿವೆಯಾ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಆನ್‌ಲೈನ್ ಗೇಮಿಂಗ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳ ಬಂದ ಹಿನ್ನೆಲೆಯಲ್ಲಿ ಕೇಂದ್ರ ಇಂತದ್ದೊಂದು ಮಹತ್ವದ ನೀತಿಗೆ ಮುಂದಾಗಿದೆ. ಅಲ್ಲದೇ ಆನ್‌ಲೈನ್ ಬೆಟ್ಟಿಂಗ್ ನಿಷೇಧ ಕುರಿತು ಸಹ ಕೇಂದ್ರ ಯೋಚಿಸಿದೆ.
ಗೇಮಿಂಗ್ ಅಪ್ಲಿಕೇಶನ್ಗಳ ಮೇಲೆ ನಿಗಾವಹಿಸಲು ಹೊಸದಾಗಿ SROs ಸಂಸ್ಥೆಯನ್ನು ಕೇಂದ್ರ ಸ್ಥಾಪಿಸಿದೆ. ಈ ಸಂಸ್ಥೆ ಗೇಮಿಂಗ್ ಅಪ್ಲಿಕೇಶನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ. ಇವುಗಳ ಬೆಟ್ಟಿಂಗ್, ಬಾಜಿ ಕಟ್ಟುವುದಕ್ಕೆ ಅವಕಾಶ ನೀಡುತ್ತಿವೆಯಾ ಎಂಬುದನ್ನು ಅವಲೋಕಿಸಿ ವರದಿ ನೀಡುತ್ತವೆ.
ಸೆಲ್ಫ್ ರೆಗ್ಯೂಲೇಟಿಂಗ್ ಆರ್ಗನೈಜೇಶನ್ (SRO) ಚೌಕಟ್ಟಿನೊಳಗೆ ಎಲ್ಲಾ ಗೇಮಿಂಗ್ ಆ್ಯಪ್ ಕಾರ್ಯನಿರ್ವಹಣೆ ವಿವರ ನೀಡಲಾಗುತ್ತದೆ. ಒಟ್ಟಾರೆ ಇದೊಂದು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಪರಿಶೀಲಿಸಲು ಗೊತ್ತುಪಡಿಸಿದ ಘಟಕವಾಗಿದ್ದು, ಆನ್‌ಲೈನ್ ಗೇಮ್, ಬೆಟ್ಟಿಂಗ್ ಬಗ್ಗೆ ಸಂಪೂರ್ಣ ನಿಗಾವಹಿಸುತ್ತದೆ.
SRO ಕೆಲಸ ಏನು? : ಈ ಮೊದಲೇ ಹೇಳಿದಂತೆ ಇದು ಆನ್ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಪರಿಶೀಲಿಸಲು ಗೊತ್ತುಪಡಿಸಿದ ಸಂಸ್ಥೆ. ಎಲ್ಲಾ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ಗಳ ಮೇಲೆ ನಿಗಾ ವಹಿಸುತ್ತದೆ. ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್ ಕಾರ್ಯಾಚರಣೆಗಳನ್ನು ನಡೆಸಲು ಅನುಮತಿಸಲಾಗಿದೆಯೇ ಅಥವಾ ನೈಜ ಹಣವನ್ನು ಅವಲಂಬಿಸಿಲ್ಲವೇ ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಇದು ಹೊಂದಿರುತ್ತದೆ.
ಇದು ಹಣ ಕಳೆದುಕೊಳ್ಳುವ ಮತ್ತು ಬೆಟ್ಟಿಂಗ್ ಕಟ್ಟಲು ಪ್ರೇರೆಪಿಸುವ ಅಪ್ಲಿಕೇಶನ್‌ಗಳ ವಿರುದ್ಧ ಕೆಲಸ ಮಾಡುತ್ತದೆ. ಒಟ್ಟಾರೆ ಬಳಕೆದಾರರಿಗೆ ಹಾನಿಯಾಗುವುದಿಲ್ಲ ಮತ್ತು ಮಕ್ಕಳಿಗೆ ಯಾವುದೇ ವ್ಯಸನಕಾರಿ ಪರಿಣಾಮಗಳನ್ನು ಉಂಟುಮಾಡುವುದಿಲ್ಲ” ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಯಾವ ಆನ್‌ಲೈನ್ ಗೇಮಿಂಗ್ ಅನುಮತಿ ನೀಡಬೇಕು, ಯಾವುದಕ್ಕೆ ನಿರ್ಬಂಧ ವಿಧಿಸಬೇಕು ಅನ್ನೋದನ್ನು ಕಾನೂನು ಚಕೌಟ್ಟಿನಲ್ಲಿ ವ್ಯವಹಿಸುತ್ತೇವೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಯಾರೆಲ್ಲಾ ಈ ಸಂಸ್ಥೆಯಲ್ಲಿ ಇರುತ್ತಾರೆ? : ಆನ್ಲೈನ್ ಗೇಮ್‌ಗಳಿಗೆ ಅವಕಾಶ ನೀಡುವಾಗ ಎಸ್ಆರ್‌ಗಳ ಸಲಹೆಯನ್ನು ಪಡೆಯಲಾಗುತ್ತದೆ. ಇನ್ನು ಎಸ್ಆರ್‌ಗಳಲ್ಲಿ ಸರ್ಕಾರವು ಉದ್ಯಮದ ಪ್ರತಿನಿಧಿಗಳು, ಶಿಕ್ಷಣ ತಜ್ಞರು ಮತ್ತು ಮಕ್ಕಳ ತಜ್ಞರು, ಮನೋ ವಿಜ್ಞಾನ ತಜ್ಞರು ಮುಂತಾದ ಇತರ ತಜ್ಞರನ್ನು ನೇಮಿಸಲಿದೆ.
ಸರ್ಕಾರ ಎಷ್ಟು SRO ಗಳನ್ನು ರಚಿಸುತ್ತದೆ? : ಕೇಂದ್ರ ಸರ್ಕಾರವು ಮೊದಲಿಗೆ ಮೂರು SRO ಗಳಿಗೆ ಸೂಚನೆ ನೀಡುತ್ತದೆ. ನಂತರ ಆ ಗೇಮ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ನಂತರ ಅನುಮತಿ ನೀಡುವುದರ ಬಗ್ಗೆ ಯೋಚಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಸ್ವಯಂ ನಿಯಂತ್ರಣ ಸಂಸ್ಥೆಗಳನ್ನು ರಚಿಸುವ ಪ್ರಕ್ರಿಯೆಯು ಆರರಿಂದ ಎಂಟು ತಿಂಗಳುಗಳನ್ನು ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.