ಮನುಷ್ಯನಿಗೆ ಮನುಷ್ಯ ಏನಾಗಿರಬೇಕು?

October 8, 2024
7:27 PM
ಕೃತಜ್ಞತೆಯ ಭಾವಕ್ಕೆ ಪೂರಕವಾಗಿರಬೇಕಾದ್ದು ಕ್ಷಮಾಗುಣ.  ಕ್ಷಮಾಗುಣ ಹಿರಿಯರಲ್ಲಿದ್ದಾಗ ಮಕ್ಕಳಲ್ಲಿ ಕೃತಜ್ಞತೆಯ ಭಾವ ಉದಿಸುತ್ತದೆ. ಇದು ಕೌಟುಂಬಿಕ  ಸಂಬಂಧಗಳನ್ನು ಬಲಪಡಿಸುತ್ತದೆ. ಪೋಷಕರು ಎಲ್ಲವನ್ನೂ ಕ್ಷಮಿಸುವುದು ಸರಿಯಲ್ಲ. ಅವರು ಮಕ್ಕಳನ್ನು ತಿದ್ದುವ ಕಾರ್ಯವನ್ನು ಮಾಡಬೇಕು. ರಾಜಕಾರಣಿಗಳನ್ನು ಪ್ರಜೆಗಳು ಕ್ಷಮಿಸುವುದು ನಿಲ್ಲಬೇಕು. ಪ್ರಜಾಪ್ರಭುತ್ವದಲ್ಲಿ ಅಧಿಕಾರಸ್ಥರಿಗೆ ಜನರು ಹೆದರುತ್ತಿರುವ ಪರಿಸ್ಥಿತಿ ಕಾಣುತ್ತಿದೆ. ಇದು ಬದಲಾಗಬೇಕಿದೆ.
ದು ಮಹಾಭಾರತದ ಯಕ್ಷಪ್ರಶ್ನೆಗಳ ಸರಣಿಯಲ್ಲಿ ಬಂದಿರುವ ಪ್ರಶ್ನೆಯಲ್ಲ. ಹಾಗಾಗಿ ಧರ್ಮರಾಯನಿಗೆ ಉತ್ತರಕೊಡುವ ಒತ್ತಡ ಬೀಳಲಿಲ್ಲ. ಇದು ನಾನೇ ಹಾಕ್ಕೊಂಡಿರುವ ಪ್ರಶ್ನೆ! “ಇಂದಿನ ಪ್ರಕ್ಷುಬ್ಧ ರಾಜಕೀಯ ಜಿದ್ದಾಜಿದ್ದಿಗೆ ಏನು ಕಾರಣವಿರಬಹುದು?” ಎಂಬ ಜಿಜ್ಞಾಸೆಯೇ ನನ್ನಲ್ಲಿ ಈ ಪ್ರಶ್ನೆಯನ್ನು ಮೂಡಿಸಿದೆ.
ಇಂದು ನಮ್ಮ ರಾಜಕಾರಣಿಗಳು ಯಾರೊಬ್ಬರೂ ತಮ್ಮ ತಪ್ಪು ಒಪ್ಪಿಕೊಳ್ಳುವುದಿಲ್ಲ. ಚಾಲಕರ ತಪ್ಪಿನಿಂದಾದ ರೈಲ್ವೆ ಅಪಘಾತಕ್ಕೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಮಾದರಿ ಅನುಕರಣೀಯವಾಗಿ ಉಳಿದಿಲ್ಲ. ಅಧಿಕಾರಕ್ಕೆ ಅಂಟಿಕೊಳ್ಳುವ ತೀಟೆಯಿಂದಾಗಿ “ಅವರು ತಪ್ಪು ಮಾಡಿಲ್ಲವೇ? ಅವರು ರಾಜಿನಾಮೆ ಕೊಟ್ಟಿದ್ದಾರಾ? ಮತ್ತೆ ನಾನ್ಯಾಕೆ ಕೊಡಬೇಕು?” ಎಂಬ ಮರುಪ್ರಶ್ನೆ ಕೇಳುತ್ತಾರೆ. ಈಗ ರಾಜ್ಯದಲ್ಲಿ ಜವಾಬ್ದಾರಿಯ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬೇಕಾದ ಬಿ.ಜೆ.ಪಿ. ಮತ್ತು ಜೆ.ಡಿ.ಏಸ್. ನವರು ಕಾಂಗ್ರೆಸ್ ಸರಕಾರವನ್ನು ಉರುಳಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಕೇಂದ್ರದಲ್ಲಿ ಎನ್.ಡಿ.ಎ. ಸರಕಾರವನ್ನು ಅಸ್ಥಿರಗೊಳಿಸುವುದು ಹೇಗೆಂದು ಕಾಂಗ್ರೆಸ್ ದಾಳಗಳನ್ನು ಹುಡುಕುತ್ತಿದೆ. ಅಂದರೆ ನಮ್ಮ ರಾಜಕಾರಣಿಗಳಿಗೆ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಉತ್ತಮ ಆಡಳಿತ ವ್ಯವಸ್ಥೆಯನ್ನು ಒದಗಿಸುವ ಬದ್ಧತೆ ಇಲ್ಲ. ತಾವೇ ಆಡಳಿತ ನಡೆಸಬೇಕೆಂಬ ಹಪಾಹಪಿ ತುಂಬಿದೆ. ಇಷ್ಟರವರೆಗೆ ನಿಮ್ಮ ಭ್ರಷ್ಟಾಚಾರದ ದಾಖಲೆಗಳನ್ನು ಬಿಚ್ಚಿಡುತ್ತೇವೆ ಎನ್ನುತ್ತಿದ್ದವರು ಈಗ ಪರಸ್ಪರರ ಅವ್ಯವಹಾರಗಳ ದಾಖಲೆಗಳನ್ನು ಬಿಚ್ಚಿಡುತ್ತಿದ್ದಾರೆ. ಅರ್ಥಾತ್ ಯಾರೂ ಶುದ್ಧಹಸ್ತರಿಲ್ಲ ಎಂಬುದು ಜನತೆಗೆ ಸಾಬೀತಾಗುತ್ತಿದೆ. ಮೇಲಿನ ಹಂತದವರ ಮಾರ್ಗಗಳನ್ನು ಕೆಳಹಂತದ ರಾಜಕಾರಣಿಗಳು ಅನುಸರಿಸುತ್ತಿರುವುದರಿಂದ ಒಟ್ಟು ರಾಜಕೀಯವು ಕೆಸರೆರಚಾಟದ ತಿಪ್ಪೆಯಾಗಿದೆ.  ಈಗ ಮತ್ತೊಮ್ಮೆ ಅದೇ ಪ್ರಶ್ನೆ – “ಮನುಷ್ಯ ಮನುಷ್ಯನಿಗೆ ಏನಾಗಿರಬೇಕು?”. ನನ್ನ ಉತ್ತರ “ಕೃತಜ್ಞ”ನಾಗಿರಬೇಕು. ಇಂದು ಕೃತಜ್ಞತೆಯ ಕೊರತೆ ವ್ಯಕ್ತಿತ್ವಗಳ ಲಕ್ಷಣವಾಗಿರುವುದು ಮಾನವೀಯ ಸಂಬಂಧಗಳ ದುರ್ಬಲತೆಗೆ ಕಾರಣವಾಗಿದೆ.
  ಕೃತಜ್ಞತೆಯ ಭಾವವನ್ನು ಹೊಂದಿರುವುದು, ಕೃತಜ್ಞತೆಯನ್ನು ಹೇಳಿ ವ್ಯಕ್ತಪಡಿಸುವುದು, ಕೃತಜ್ಞತೆಯನ್ನು ಕೃತಿಯಲ್ಲಿ ತೋರ್ಪಡಿಸುವುದು ಇತ್ಯಾದಿ ವರ್ತನೆಯು ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಗುಣವಾಗಿದೆ. ಈ ಗುಣದ ಮಹತ್ವವು ಅದರ ಲಾಭಗಳಿಂದಷ್ಟೇ ಗೊತ್ತಾಗುತ್ತದೆ. ಒಬ್ಬಾಕೆ ತಾಯಿಯನ್ನು ಕಳಕೊಂಡಿದ್ದ ತರುಣಿ ಮುಕ್ತವಾಗಿ ಹೇಳಿಕೊಂಡ ಮಾತುಗಳಲ್ಲೇ ಕೇಳಿ: ಆಕೆ ಸ್ವಪ್ರಯತ್ನದಿಂದ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಳು. ತಾನೇ ಅರ್ಜಿಗಳನ್ನು ಹಾಕಿ ಸಂದರ್ಶನಗಳಲ್ಲಿ ತೇರ್ಗಡೆಯಾಗಿ ಗಣನೀಯ ವೇತನವುಳ್ಳ ಹುದ್ದೆಯನ್ನು ಪಡೆದಿದ್ದಳು. ಆದರೆ ಏಕೈಕ ಪುತ್ರಿಯಾಗಿದ್ದ ಆಕೆಗೆ ಮನೆಯಲ್ಲಿದ್ದದ್ದು ಅಪ್ಪ ಮಾತ್ರ. ಆದರೆ ಆಕೆಗೆ ತನ್ನ ಅಪ್ಪನನ್ನು ಕಂಡರಾಗುತ್ತಿರಲಿಲ್ಲ. ಅವರು ತನ್ನ ಬೆಳವಣಿಗೆಗೆ ಏನೂ ಸಹಾಯ ಮಾಡಿಲ್ಲ, ತನ್ನ ಎಷ್ಟೋ ಸಹಪಾಠಿಗಳಿಗೆ ಅವರ ಅಪ್ಪಂದಿರು ಅದೆಷ್ಟು ಸಹಾಯ ಮಾಡುತ್ತಿದ್ದರು! ಅದರೆ ತನಗೆ ಅಂತಹ ಭಾಗ್ಯ ಸಿಕ್ಕಿಲ್ಲ. ತನ್ನದೇ ಸಾಧನೆಯಿಂದ ತಾನು ಬೆಳೆದಿದ್ದೇನೆ ಎಂಬ ಭಾವ ಹೊಂದಿದ್ದಳು. ಕೆಲಸ ಮುಗಿಸಿ ಅಪ್ಪ ದಣಿದು ಮನೆಗೆ ಬಂದಾಗ ಆಕೆ ನಗು ಬೀರಿ “ಬನ್ನಿ” ಎಂದು ಕುಡಿಯಲು ನೀರು ತಂದುಕೊಟ್ಟವಳಲ್ಲ. ಅಪ್ಪನ ಮುಖದಲ್ಲಿ ಮೂಡುತ್ತಿದ್ದ ಸಂಕಟದ ಭಾವ ಅವಳಿಗೆ ಗೋಚರಿಸುತ್ತಲೇ ಇರಲಿಲ್ಲ. ಏನೂ ಮಾತಾಡದೆ ತನ್ನ ಕೋಣೆಗೆ ಸೇರಿಕೊಳ್ಳುತ್ತಿದ್ದಳು. ಹಾಗೆಂದು ಕೋಣೆಯಲ್ಲಿ ಒಬ್ಬಂಟಿಯಾಗಿದ್ದ ಅವಳ ಮನಸ್ಸೂ ಶಾಂತವಾಗಿರುತ್ತಿರಲಿಲ್ಲ. ಹೀಗೆ ಮನೆಯಲ್ಲಿ ನಿತ್ಯ ವ್ಯಗ್ರಳಾಗಿರುತ್ತಿದ್ದ ಅವಳ ಮುಖದಲ್ಲೂ ಸೌಂದರ್ಯದ ಸವಕಳಿಯಾಗುತ್ತಿತ್ತು. ಈ ಒತ್ತಡದ ಬದುಕಿನಿಂದ ಬದಲಾವಣೆ ಬೇಕೆಂದು ಬಯಸುತ್ತಿದ್ದ ಆಕೆಗೆ ಒಂದು ದಿನ ತಾನಾಗಿಯೇ ಜ್ಞಾನೋದಯವಾಯಿತು. ಅಪ್ಪ ತನಗಾಗಿ ಮಾಡಿದ ತ್ಯಾಗಗಳನ್ನು ಲೆಕ್ಕ ಹಾಕಿದಳು. “ಈ ತ್ಯಾಗಕ್ಕೆ ಅವರಿಗೆ ತಾನೇನು ಕೊಟ್ಟಿದ್ದೇನೆ?” ಎಂಬ ಪ್ರಶ್ನೆ ಮೂಡಿತು. “ಯಾಕೆ ಕೊಡಲಿಲ್ಲ?” ಎಂಬ ಪ್ರಶ್ನೆಯೂ ಜೊತೆಯಲ್ಲೇ ಮೂಡಿತು. ಆಗ ಆಕೆಗೆ ಸಿಕ್ಕಿದ ಉತ್ತರವೇ ತನ್ನೊಳಗಿರುವ ಕೃತಜ್ಞತೆಯ ಕೊರತೆ. ಹಾಗಾಗಿ ಆಕೆ ತಾನೇ ಬದಲಾದಳು. ಅಪ್ಪನಲ್ಲಿ ನಗುತ್ತ ಮಾತಾಡಿದಳು. ಅಪ್ಪನ ಮುಖದಲ್ಲೂ ನಗು ಮೂಡಿತು. ಹತ್ತಿರ ಕುಳಿತು “ಹೇಗಿದ್ದೀಯಪ್ಪಾ” ಎನ್ನು ಬೆನ್ನು ಸವರಿ ಕೇಳಿದಳು. ಮಾರ್ಕೆಟಿಗೆ “ನೀವೂ ಬನ್ನಿ” ಎಂದು ಕರೆದಳು. ಇಬ್ಬರೂ  ಜೊತೆಯಲ್ಲೇ ಹೋಗಿ ದಿನಸಿಗಳನ್ನು ಮತ್ತು ತರಕಾರಿಗಳನ್ನು ಆಯ್ದು ತಂದರು. ಈ ಸಾಹಚರ್ಯ ಆಕೆಯ ದೇಹದಲ್ಲಿ ಉಲ್ಲಾಸ ಮತ್ತು ಮನಸ್ಸಿನಲ್ಲಿ ಶಾಂತಿ ಮೂಡಿಸಿತ್ತು. ಸ್ಥಬ್ಧವಾಗಿದ್ದ ಮನೆಯಲ್ಲಿ ಮಾತುಕತೆ ಧ್ವನಿಸತೊಡಗಿತು. ತಮ್ಮ ಹೊರ ಜಗತ್ತಿನ ಅನುಭವಗಳನ್ನು ಇಬ್ಬರೂ ಹಂಚಿಕೊಳ್ಳತೊಡಗಿದರು. ಆಕೆಯಲ್ಲಿದ್ದ ಬೇಗುದಿ ಮತ್ತು ತಳಮಳಗಳೆಲ್ಲಾ ಕಳೆದು ಹೋದುವು. ತನ್ನ ಈ ಹೊಸ ವ್ಯಕ್ತಿತ್ವಕ್ಕೆ ತಾನು ತನ್ನ ತಂದೆಗೆ ಕೃತಜ್ಞಳಾಗಿರಬೇಕೆಂದು ಬಯಸಿದ್ದೇ ಕಾರಣವೆಂಬುದು ಆಕೆಗೆ ಸ್ಪಷ್ಟವಾಯಿತು. ಒಂದು ಸಮಾರಂಭದಲ್ಲಿ ತಾನು ಅಹಂಕಾರದ ಚಿಪ್ಪಿನಿಂದ ಹೊರಗೆ ಬಂದದ್ದನ್ನು ಮುಕ್ತವಾಗಿ ಹೇಳಿ ತಂದೆಯ ಕಾಲಿಗೆ ಬಿದ್ದು ನಮಸ್ಕರಿಸಿ ಕ್ಷಮೆ ಯಾಚಿಸಿದಳು. ಅಗ ಭಾವುಕರಾದ ಅಪ್ಪ ಆಕೆಯನ್ನು ಎಬ್ಬಿಸಿ ಆಲಂಗಿಸಿದ ದೃಶ್ಯ ಮಾರ್ಮಿಕವಾಗಿತ್ತು.
ರಾಮಾಯಣ ಬರೆಯುವ ಮೊದಲು ತನ್ನ ಕಥಾನಾಯಕ ಹೇಗಿರಬೇಕು ಎಂಬ ಪ್ರಶ್ನೆ ಕವಿಗೆ ಮೂಡಿದ್ದು ಹೀಗೆ:
ಕೋನ್ವಸ್ಮಿನ್ ಸಾಂಪ್ರತಂ ಲೋಕೇ ಗುಣವಾನ್ ಕಶ್ಚ ವೀರ್ಯವಾನ್|
ಧರ್ಮಜ್ಞಶ್ವ ಕೃತಜ್ಞಶ್ಚ ಸತ್ಯವಾಕ್ಯೋ ದೃಢವ್ರತಃ||
ಅದಕ್ಕೆ ಉತ್ತರವಾಗಿ ಸಿಕ್ಕಿದ ರಿಷಿವಾಕ್ಯ ಇದು. ಗುಣವಂತನೂ, ವೀರನೂ, ಧರ್ಮಜ್ಞನೂ ದೃಢತೆಯುಳ್ಳವನೂ ಆಗಿರುವುದರ ಜೊತೆಗೆ ಕೃತಜ್ಞನೂ ಆಗಿದ್ದವನೇ ಶ್ರೀರಾಮ. ಹಾಗಾಗಿ ಕೃತಜ್ಞತೆಗೆ ಇಷ್ಟೊಂದು ಮಹತ್ವವಿದೆ. ಆದರೆ ರಾಮಾಯಣ ಹೇಳುವುದಕ್ಕೆ ಒಂದು ಕಥೆಯಾಗಿ ಅಷ್ಟೇ ಉಳಿದಿದೆ. ರಾಮನ ದೇವಸ್ಥಾನ ಕಟ್ಟಿದ ಬಳಿಕವೂ ರಾಮನ ಆದರ್ಶಗಳ ಬೆಳಕು ಪಸರಿಸದಿರುವುದು ಖೇದಕರ. ಹಾಗಾಗಿಯೇ ನಮ್ಮ ರಾಜಕಾರಣ ಇಂದು ಪ್ರಕ್ಷುಬ್ಧವಾಗಿದೆ.
ಕೃತಜ್ಞತೆಯ ಭಾವಕ್ಕೆ ಪೂರಕವಾಗಿರಬೇಕಾದ್ದು ಕ್ಷಮಾಗುಣ. ರಾಮನಲ್ಲಿ ಕ್ಷಮಿಸುವ ಗುಣ ಇತ್ತು.  ಕ್ಷಮಾಗುಣ ಹಿರಿಯರಲ್ಲಿದ್ದಾಗ ಮಕ್ಕಳಲ್ಲಿ ಕೃತಜ್ಞತೆಯ ಭಾವ ಉದಿಸುತ್ತದೆ. ಇದು ಕೌಟುಂಬಿಕ  ಸಂಬಂಧಗಳನ್ನು ಬಲಪಡಿಸುತ್ತದೆ. ಆದರೆ ಇಂದಿನ ದಿನಗಳಲ್ಲಿ ಕ್ಷಮಿಸುವುದು ಹೆತ್ತವರಿಗೆ ಅನಿವಾರ್ಯ ಎಂತ ಮಕ್ಕಳು ತಿಳಿಯುತ್ತಿರುವ ಸಂದರ್ಭಗಳು ಹೆಚ್ಚು ಗೋಚರಿಸುತ್ತವೆ. ಅಂತಹವರಲ್ಲಿ ಕೃತಜ್ಞತೆಯ ಭಾವಕ್ಕೆ ಸೆಲೆ ಇಲ್ಲದಾಗಬಹುದು. ಹಾಗಾಗಿ ಪೋಷಕರು ಎಲ್ಲವನ್ನೂ ಕ್ಷಮಿಸುವುದು ಸರಿಯಲ್ಲ. ಅವರು ಮಕ್ಕಳನ್ನು ತಿದ್ದುವ ಕಾರ್ಯವನ್ನು ಮಾಡಬೇಕು. ಅದರಿಂದಾಗಿ ಮುಂದೆ ದೊಡ್ಡವರಾದಾಗ ಅಪ್ಪ ಅಮ್ಮನ ಮೇಲೆ ಭಕ್ತಿ ಮೂಡುವ  ಸಾಧ್ಯತೆ ಇದೆ. ವೃದ್ಧಾಪ್ಯದಲ್ಲಿ ಮಕ್ಕಳು ತೋರುವ ಇಂತಹ ಪ್ರೇಮ ಒಂದು ದೊಡ್ಡ ಆಸ್ತಿ.
ಆದರೆ ಕೃತಘ್ನ ರಾಜಕಾರಣಿಗಳನ್ನು ಪ್ರಜೆಗಳು ಕ್ಷಮಿಸುವುದು ನಿಲ್ಲಬೇಕು. ಪ್ರಜಾಪ್ರಭುತ್ವದಲ್ಲಿ ಅಧಿಕಾರಸ್ಥರಿಗೆ ಜನರು ಹೆದರುತ್ತಿರುವ ಪರಿಸ್ಥಿತಿ ಕಾಣುತ್ತಿದೆ. ಇದು ಬದಲಾಗಬೇಕಿದ್ದರೆ ಜನರು ಆಮಿಷಗಳಿಗೆ ಒಳಗಾಗುವುದು ನಿಲ್ಲಬೇಕು. ಅಥವಾ ರಾಜಕಾರಣಿಗಳು ಆಮಿಷಗಳನ್ನು ನೀಡುವುದು ಅಪರಾಧವೆಂಬ ಶಾಸನ ಬರಬೇಕು. ಆದರೆ ಶಾಸನಾಧಿಕಾರವೇ ರಾಜಕಾರಣಿಗಳ ಕೈಯಲ್ಲಿ ಇರುವಾಗ ಇಂತಹ ನಿರೀಕ್ಷೆ ನಿಜವಾಗಲು ಸಾಧ್ಯವೇ?
ಬರಹ :
ಚಂದ್ರಶೇಖರ ದಾಮ್ಲೆ
.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಮುಂಜಾನೆ ಏಳಬೇಕು, ಬೇಗನೇ ಏಳಬೇಕು
January 16, 2025
7:29 AM
by: ಡಾ.ಚಂದ್ರಶೇಖರ ದಾಮ್ಲೆ
ಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿ
January 9, 2025
10:49 AM
by: ಡಾ.ಚಂದ್ರಶೇಖರ ದಾಮ್ಲೆ
ಮಕ್ಕಳ ಯಶಸ್ಸಿಗೆ ಕಲಿಯುವುದು ಹೇಗೆಂದು ತಿಳಿಯಬೇಕು
January 2, 2025
10:34 PM
by: ಡಾ.ಚಂದ್ರಶೇಖರ ದಾಮ್ಲೆ
ಪತ್ರಿಕೆಯ ಮೂಲೆಯ ಸುದ್ದಿ ಮುಖಪುಟಕ್ಕೆ ಬಂದೀತು
December 26, 2024
11:10 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror