ವೈದ್ಯಕೀಯ ಪರಿಭಾಷೆಯಲ್ಲಿ ಹೆಚ್ಚು ಬಳಕೆಯಲ್ಲಿರುವ ಪದ – ‘ಸಂಜೀನಿವಿ’. ಕೋವಿಡ್ ಸಂದರ್ಭದ ಸುದ್ದಿಗಳಲ್ಲಿ, ಅದರಲ್ಲೂ ವಾಹಿನಿಗಳಲ್ಲಿ ಕುಣಿಯುತ್ತಿದ್ದ ಪದ. ಟಿವಿಗಳ ವಿಶೇಷ ಕಾರ್ಯಕ್ರಮಗಳಲ್ಲಿ ಸದಾ ಮಿಣುಕುತ್ತಿತ್ತು ಕೂಡಾ. ಒಂದು ಕಾಯಿಲೆಗೆ ಔಷಧಿಯು ಸಂಶೋಧನೆಯಾಯಿತು ಎಂದಿಟ್ಟುಕೊಳ್ಳೋಣ. ಮರುದಿನದ ಪತ್ರಿಕೆಗಳಲ್ಲಿ ನಾಲ್ಕು ಕಾಲಂ ಪೂರ್ತಿ ‘ಸಂಜೀವಿನಿ’ ಶೀರ್ಷಿಕೆಯ ಸುದ್ದಿ.
ದೇಶಮಟ್ಟದಲ್ಲಿ ‘ಸಂಜೀವಿನಿ’ ಪದವನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಂಬಿಸಿದ ಬಗೆ ನೋಡಿ : “ಲಸಿಕೆಯು ಕೊರೊನಾ ಸೋಂಕಿನ ವಿರುದ್ಧದ ಸುರಕ್ಷಾ ಕವಚ. ಅದೊಂದು ಸಂಜೀವಿನಿಯಿದ್ದಂತೆ. ಲಸಿಕೆಗೆ ಸಂಬಂಧಿಸಿದ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ.” ಲಸಿಕೆಯ ಹೊರತಾಗಿ ಅನ್ಯ ಮಾರ್ಗವಿಲ್ಲವೆನ್ನುವ ಸಂದೇಶವು ಸಂಜೀವಿನಿ ಪದದೊಳಡಗಿದೆ.
2020ರ ಕೋವಿಡ್ ಲಾಕ್‍ಡೌನ್. ರಾಜಧಾನಿಯ ಆಯುರ್ವೇದ ವೈದ್ಯರಾದ ಡಾ.ಶಶಿಧರ ಕಜೆಯವರ ‘ಕಜೆ ಮದ್ದು’ ಭರವಸೆಯ ಸಂಚಲನವನ್ನುಂಟು ಮಾಡಿತ್ತು. ವಾಹಿನಿಗಳಲ್ಲಿ ‘ಕೊರಾನಾಗೆ ಸಿಕ್ಕೇ ಬಿಡ್ತು ಸಂಜೀವಿನಿ’ ವಿಶೇಷ ಕಾರ್ಯಕ್ರಮಗಳು, ಸಂದರ್ಶನಗಳು ಪ್ರಸಾರವಾಗಿದ್ದುವು. ಶಾಸಕರು, ಸಂಸದರು, ಮಂತ್ರಿಗಳೆಲ್ಲಾ ಕಜೆಯವರ ಅಭಿನಂದಿಸಿದರು. ಯಾಕೋ, ಈ ಸಂಜೀವಿನಿಯು ಸಾರ್ವತ್ರಿಕವಾಗಲು ವ್ಯವಸ್ಥೆಯ ಕಾಣದ ಕೈಗಳ ಹುನ್ನಾರಗಳೊಳಗೆ ಬಂಧಿಯಾದುದು ಸಾಮಾನ್ಯರಿಗೆಲ್ಲಿ ಅರ್ಥವಾಗಬೇಕು? ಬಹುಶಃ ಅದು ಆಯುರ್ವೇದ ಎನ್ನುವ ಕಾರಣವೂ ಇರಬಹುದು!
ಈ ಸಂದರ್ಭದಲ್ಲಿ – ಕೊರೊನಾ ಸಂದರ್ಭದಲ್ಲಿ – ನನ್ನ ಸಂಸ್ಥೆಯ ಮುಖ್ಯಸ್ಥರಾಗಿದ್ದ ಮಂಚಿ ಶ್ರೀನಿವಾಸ ಆಚಾರ್ ಹೇಳಿದ ಮಾತು ಮರೆಯುವಂತಹುದಲ್ಲ – “ಇಷ್ಟು ಒಳ್ಳೆಯ ಫಲಿತಾಂಶ ನೀಡಿದ ಔಷಧಿಯನ್ನು ನಮ್ಮ ಅಡಿಕೆ ಸಂಸ್ಥೆಗಳು ತಮ್ಮ ಸದಸ್ಯರಿಗೆ ಉಚಿತವಾಗಿ ನೀಡಬೇಕಿತ್ತು. ಇದಕ್ಕಿಂತ ದೊಡ್ಡ ಪುಣ್ಯದ ಕೆಲಸ ಬೇರೆ ಯಾವುದಿತ್ತು. ಉಚಿತವೋ, ಡಿವಿಡೆಂಡ್ ಮೂಲಕ ನೀಡಿದ ಕೊಡುಗೆಗಳು ಸಂಜೆಯೊಳಗೆ ಮರೆತುಹೋಗುತ್ತದೆ. ಇದು ಹಾಗಲ್ಲ. ಒಂದು ಜೀವನ ಒದ್ದಾಟವನ್ನು ಶಮನಗೊಳಿಸಿದ ಪುಣ್ಯ ಅಲ್ವಾ.” ಈ ಮಾತನ್ನು ಆಗಾಗ್ಗೆ ಹೇಳುತ್ತಾ ವಿಷಾದಿಸುತ್ತಿದ್ದರು. ನಿಜಕ್ಕೂ ಚಿಂತನಗ್ರಾಹ್ಯ.
ಪುತ್ತೂರಿನ ಎಸ್.ಡಿ.ಪಿ. ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಸಂಸ್ಥೆಯಿಂದ ಕೊರೊನಾಗೆ ಪರಿಶೋಧಿಸಲ್ಪಟ್ಟ ಔಷಧ – ‘ಆಯುಷ್ 64’. ಇದು ‘ಕೋವಿಡ್ ಸೋಂಕಿತರಿಗೆ ಸಂಜೀವಿನಿ,’ ಪತ್ರಿಕೆಗಳಲ್ಲಿ ವರದಿಯಾದುವು. ಇದು ಹಲವು ಹಂತಗಳಲ್ಲಿ ಸಂಶೋಧನೆ, ಪರೀಕ್ಷೆಗೆ ಒಳಪಟ್ಟು, ‘ಬಳಸಬಹುದು’ ಎಂದು ತಜ್ಞರು ಶಿಫಾರಸು ಮಾಡಿದ ಬಳಿಕವೇ ಅದು ‘ಸಂಜೀವಿನಿ’ಯಾಗಿದೆ. ಇದಕ್ಕೆ ಕೇಂದ್ರ ಆಯುಷ್ ಇಲಾಖೆಯಿಂದ ಪ್ರಮಾಣಿಕೃತ.
‘ಕೊರೊನಾ ಬಾಧಿತರ ಪಾಲಿಗೆ ಸಂಜೀವಿನಿಯಾದ ಶಾಸಕರು’! ಇಲ್ಲಿ ಔಷಧಿಯೊಂದಿಗೆ ಸಂಜೀವಿನಿ ಪದ ಹೊಸೆದುಕೊಂಡಿಲ್ಲ. ರಾಜ್ಯದ ಒಂದು ವಿಧಾನಸಭಾ ಕ್ಷೇತ್ರದ ಶಾಸಕರ ಹೆಸರಿನೊಂದಿಗೆ ಬೆಸೆದಿದೆ. ಕೋವಿಡ್ ಕಾಲಘಟ್ಟದಲ್ಲಿ ಕೊರೊನಾ ಸೋಂಕಿತರಿಗೆ ಅವಶ್ಯವಿರುವ ಬೆಡ್, ಆಮ್ಲಜನಕ, ಲಸಿಕೆ, ಆಸ್ಪತ್ರೆಗಳ ನಿರ್ವಹಣೆ ಮತ್ತು ಚಿಕಿತ್ಸಾ ಕೇಂದ್ರಗಳ ನಿಭಾವಣೆಗಳನ್ನು ಸಮರ್ಪಕ ರೀತಿಯಲ್ಲಿ ಸಮತೋಲನಗೊಳಿಸಿದ್ದಾರೆ. ಇದರಿಂದಾಗಿ ಕೋವಿಡ್ ಸೋಂಕಿತರು ಪರದಾಡುವಂತಾಗಲಿಲ್ಲ. ಆಮ್ಲಜನಕವಿಲ್ಲದೆ ಅಸಹಾಯಕರಾಗಲಿಲ್ಲ. ಒಟ್ಟೂ ವ್ಯವಸ್ಥೆಯ ಸಾರಥ್ಯ ವಹಿಸಿದ್ದರಿಂದ ಆ ಪ್ರದೇಶದಲ್ಲಿ ಶಾಸಕರೇ ಸಂಜೀವಿನಿಯಂತೆ ಕೆಲಸ ಮಾಡಿದ್ದರು. ಕನ್ನಾಡಿನಲ್ಲಿ ಹಲವಾರು ಮಂದಿ ‘ಸಂಜೀವಿನಿ’ಯಂತೆ ದುಡಿದಿದ್ದಾರೆ. ಸಂಘ ಸಂಸ್ಥೆಗಳು ಕೈಜೋಡಿಸಿವೆ.
‘ಅಸಹಾಯಕರ ಸಂಜೀವಿನಿ’ : ಒಬ್ಬರ ಉಳಿವಿಗಾಗಿ ರಕ್ತದಾನ ನೀಡುವ ಮೂಲಕ ಸಂಜೀವಿನಿಯಾಗಬಹುದು. ನಮ್ಮ ನಡುವೆ ಅನೇಕ ಸಂಸ್ಥೆಗಳು, ವ್ಯಕ್ತಿಗಳು ಸದ್ದಿಲ್ಲದೆ ಮಾಡುತ್ತಿದ್ದಾರೆ. ರಕ್ತದಾನ ಶಿಬಿರಗಳ ಮೂಲಕ ರಕ್ತವನ್ನು ಸಂಗ್ರಹಿಸುವ ಕಾರ್ಯಗಳಾಗುತ್ತಿವೆ. ನವಮಾಧ್ಯಮಗಳಲ್ಲಿ ರಕ್ತವನ್ನು ಅಪೇಕ್ಷಿಸಿ ಬರುವ ಸುದ್ದಿಗಳಿಗೆ ತಕ್ಷಣ ಸ್ಪಂದಿಸುವ ಯುವ-ಮನಸ್ಸುಗಳಿದ್ದಾರೆ. ಸಕ್ರಿಯ ವಾಟ್ಸಾಪ್ ಗುಂಪುಗಳಿವೆ. ಇವರೆಲ್ಲಾ ಅಸಹಾಯಕರ ಪಾಲಿನ ಸಂಜೀವಿನಿಗಳು.
‘ಇ ಸಂಜೀವಿನಿ ಆಪ್’ – ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗಲು ತೊಂದರೆಯಾದವರಿಗೆ ನೆರವಾಗುವ ಜಾಲತಾಣ. ಅ್ಯಪನ್ನು (APP) ಡೌನ್‍ಲೋಡ್ ಮಾಡಿಕೊಂಡರೆ ಆಯಿತು. ಅದರಲ್ಲಿ ತಜ್ಞ ವೈದ್ಯರಿಂದ ಸಲಹೆಯನ್ನು ಪಡೆಯಬಹುದು. ವೆಬ್ ವಿಡಿಯೋದಲ್ಲಿ ಸಮಾಲೋಚನೆ ಮಾಡಬಹುದು. ವೈದ್ಯರು ಸೂಚಿಸುವ ಔಷಧವನ್ನು ಸೇವಿಸಲು ನೆರವಾಗುವ ವರ್ತಮಾನದ ಈ ವ್ಯವಸ್ಥೆಗಳು ಜನಪ್ರಿಯವಾಗುತ್ತಿದೆಯಷ್ಟೇ. ಈ ಆಪ್ ರೋಗಿಗಳ ಪಾಲಿನ ಸಂಜೀವಿನಿ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….
‘ಸಂಜೀವಿನಿ’ ಪದವು ವಿವಿಧಾರ್ಥಗಳೊಂದಿಗೆ ಬಳಕೆಯಲ್ಲಿದೆ. ಕೆಲವೊಮ್ಮೆ ಬಳಕೆಯಲ್ಲಿ ಮೂಲಾರ್ಥವು ಅಪಾರ್ಥವಾಗಿ ಅನರ್ಥವಾಗುವುದುಂಟು! ಹಾಗಾಗಿ ಎಚ್ಚರ ಅಗತ್ಯ. ಆಧುನಿಕ ವೈದ್ಯ ಪದ್ಧತಿಗಳು ಜನಪ್ರಿಯವಾಗುವುದಕ್ಕಿಂತ ಪೂರ್ವದಲ್ಲಿ ಮತ್ತು ನಂತರವೂ ನಿಜಾರ್ಥದ ಸಂಜೀವಿನಿಯಾಗಿದ್ದ ‘ಮೂಲಿಕಾ ವೈದ್ಯರು’ (ಪಂಡಿತರು)ಗಳಿದ್ದರು. ಮೂಲಿಕಾ ತಜ್ಞ ಕೀರ್ತಿಶೇಷ ವೆಂಕಟರಾಮ ದೈತೋಟರು ಹೇಳುತ್ತಿದ್ದರು, “ಮೂಲಿಕೆಗಳ ಬಗ್ಗೆ ಹಿಂದಿನವರಲ್ಲಿ ‘ಗುಟ್ಟು’ ಇತ್ತು. ಅದನ್ನು ಇನ್ನೊಬ್ಬರಿಗೆ ಹೇಳಬಾರದೆನ್ನುವ ನಂಬುಗೆ ಇತ್ತು. ಹಾಗಾಗಿ ಆ ಜ್ಞಾನವು ಆಸಕ್ತರಿಗೆ, ಅಭ್ಯಾಸಿಗಳಿಗೆ ಮರೀಚಿಕೆಯಾಗಿರುತ್ತಿತ್ತು. ನನ್ನ ಮೂಲಿಕಾ ಔಷಧಿಯ ಕಾಯಕದಲ್ಲಿ ಔಷಧೀಯ ಗುಣಗಳು, ಆ ಔಷಧಿಗಳ ಒಳಸುರಿಗಳನ್ನು ಲಿಖಿತವಾಗಿ ಜನರಿಗೆ ಹೇಳಿದೆ. ಮಾಧ್ಯಮಗಳಲ್ಲಿ ದಾಖಲಿಸಿದೆ. ಗುಟ್ಟು ಮಾಡಲಿಲ್ಲ” ಎಂದಿದ್ದರು.
ಬಹುಕಾಲದಿಂದ ಗುಣವಾಗದೆ ಇರುವ ಕಾಯಿಲೆಗಳು ಮೂಲಿಕಾ ವೈದ್ಯ ಪದ್ಧತಿಯಿಂದ ಪೂರ್ತಿಯಾಗಿ ಗುಣವಾದ ದೃಷ್ಟಾಂತಗಳಿವೆ. ಇವರೆಲ್ಲರ ಪಾಲಿಗೆ ‘ಮೂಲಿಕಾ ಜ್ಞಾನ’ವು ಸಂಜೀವಿನಿ. ಆ ಕಾಲಘಟ್ಟದ ಮತ್ತು ಈ ಕಾಲಘಟ್ಟದಲ್ಲೂ ಪಾರಂಪರಿಕ ಜ್ಞಾನವು ರೋಗಿಗಳ ಪಾಲಿಗೆ ಸಂಜೀವಿನಿಯಾಗಿದೆ. ಅದು ಆರೋಗ್ಯವಂತ ಸಮಾಜದ ಸಂಜೀವಿನಿಯೂ ಹೌದು.
ಪಟ್ಟಣ ಕೇಂದ್ರಿತವಾಗಿ ವೈದ್ಯಕೀಯ ವ್ಯವಸ್ಥೆಗಳು ಅಭಿವೃದ್ಧಿಯಾಗುತ್ತಿವೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ಹಳ್ಳಿಯಿಂದ ಪಟ್ಟಣಕ್ಕೆ ಪ್ರಯಾಣಿಸುವುದು ಹಳ್ಳಿಗರಿಗೆ ತ್ರಾಸ. ಅವರೆಲ್ಲ ನಂಬಿರುವುದು ಹಳ್ಳಿಯ ಡಾಕ್ಟ್ರನ್ನು. ವೈದ್ಯ ಪದವಿ ಗಳಿಸಿ ಹಳ್ಳಿಯಲ್ಲಿ ಕ್ಲಿನಿಕ್ ತೆರೆದು ಬಹುತೇಕ ಕಾಯಿಲೆಗಳನ್ನು ಗುಣಪಡಿಸುವ ಇವರು ಹಳ್ಳಿಗೆ ಸಂಜೀವಿನಿ. ಬಹುಶಃ ಶಸ್ತ್ರಚಿಕಿತ್ಸೆ ಹೊರತುಪಡಿಸಿ ಮಿಕ್ಕೆಲ್ಲದಕ್ಕೂ ಔಷಧಿ ಕೊಡುತ್ತಾರೆ. ಫೋನ್ ಮಾಡಿದರೆ ಮನೆಗೂ ಭೇಟಿ ನೀಡಿ ಪರೀಕ್ಷೆ ಮಾಡುತ್ತಾರೆ. ಇವರ ಕೈಗುಣವು ಹಳ್ಳಿಯಲ್ಲಿ ಪರಿಚಿತ. ಹಳ್ಳಿಯವರು ಡಾಕ್ಟ್ರನ್ನು ನಂಬಿದ್ದಾರೆ. ಡಾಕ್ಟ್ರು ಹಳ್ಳಿಯನ್ನು ನಂಬಿದ್ದಾರೆ. ವೈದ್ಯಕೀಯ ರಂಗದಲ್ಲಿ ಇಂತಹ ‘ನಂಬುಗೆ’ಗಳೇ ಶೇ.50ರಷ್ಟು ರೋಗಗಳನ್ನು ಶಮನಿಸಿವೆ.
ಹೀಗೆನ್ನುವಾಗ ಕಾಸರಗೋಡು ಜಿಲ್ಲೆಯ ಹಿರಿಯ ಯಕ್ಷಗಾನ ಅರ್ಥದಾರಿ, ಮಂತ್ರವಾದಿ ಕೀರ್ತಿಶೇಷ ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರು ನೆನಪಾಗುತ್ತಾರೆ. ಇವರ ಅಜ್ಜ ಖ್ಯಾತ ಮಂತ್ರವಾದಿ. ಅಜ್ಜನ ಗರಡಿಯಲ್ಲಿ ಪಳಗಿದ ಮೊಮ್ಮಗ ‘ಮಂತ್ರವಾದಿ’ ಕ್ಷೇತ್ರಕ್ಕೆ ಗೌರವ ತಂದವರು. ಮುಖ್ಯವಾಗಿ ದಾಂಪತ್ಯ ಹೊಂದಾಣಿಕೆ, ಲವ್ ಪ್ರಕರಣಗಳು ಮುಂದೆ ಬಂದಾಗ ಇವರು ತಾಯತ, ಭಸ್ಮವನ್ನು ಮಂತ್ರಿಸಿ ಕೊಡುವುದಿಲ್ಲ. ಹೀಗೆ ಕೊಡುವುದು ಅವರ ಜಾಯಮಾನವೂ ಅಲ್ಲ! ಅಂತಹ ಸಂದರ್ಭಗಳಲ್ಲಿ ಅವರು ಮನಶಾಸ್ತ್ರಜ್ಞರಾಗುತ್ತಾರೆ. ಪ್ರತ್ಯಪ್ರತ್ಯೇಕವಾಗಿ ಸಮಸ್ಯೆಗಳನ್ನು ಆಲಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ ಘಟನೆಗಳು ನೂರಾರು. ಇವರಾಡುವ ಮಾತುಗಳು, ಸಮಸ್ಯೆಗಳಿಗೆ ಪರಿಹಾರಗಳು ಸಂತ್ರಸ್ತರ ಪಾಲಿಗೆ ‘ಸಂಜೀವಿನಿ’.
ಪೂಜನೀಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ತುಂಬಾ ಅರ್ಥವತ್ತಾಗಿ ‘ಸಂಜೀವಿನಿ’ಗೆ ಮಾತು ನೀಡಿದ್ದಾರೆ : “ರೈತನ ಬೆಳೆಗೆ ಯಾರೂ ಬೆಲೆ ಕಟ್ಟಲಾಗದು. ಅದು ನಮಗೆಲ್ಲಾ ನಿತ್ಯ ಚೈತನ್ಯ ನೀಡುವ ದಿವೌಷಧ. ಹಸಿವು ನೀಗಿಸುವ ನಿತ್ಯ ಸಂಜೀವಿನಿ ರೂಪದಲ್ಲಿರುವ ರೈತ ನಮ್ಮೆಲ್ಲರ ಪಾಲಿಗೆ ದೇವರು. ನನ್ನ ತಾಯಿ ಮರಣಿಸುವ ಕೊನೆ ಘಳಿಗೆಯಲ್ಲಿ ನನಗೆ ಮತ್ತು ನನ್ನ ಸೋದರಿಯರಿಗೆ ಉಪದೇಶಿಸಿದ್ದು ‘ಅನ್ನ ಇಕ್ಕಿದವರ ಕೈ, ಕೊನೆ ಉಸಿರಿರುವರೆಗೂ ಮರೆಯಬೇಡ. ಒಂದು ತೊಟ್ಟು ನೀರು ಕೊಟ್ಟರೂ ಅವರ ಋಣ ತೀರಿಸು.”
ಸಂಜೀವಿನಿ ಪದದ ಬದಲಿಗೆ ಇತರ ಯಾವುದನ್ನು ಬಳಸಿದರೂ ಅದು ಕೊಡುವಷ್ಟು ಅರ್ಥದ ಗಾಢತೆ ಇನ್ನೊಂದು ಪದ ಕೊಡಲಾರದು. ಒಂದು ಸಂಶೋಧನೆಯ ಸಮಗ್ರ ಸಾಧನೆಯನ್ನು ಒಂದು ಪದದಲ್ಲಿ ಕಟ್ಟಿಕೊಡುವುದಾದರೆ ಅದು ‘ಸಂಜೀವಿನಿ’. ಅದು ಕೊಡುವ ಜ್ಞಾನದ ಹಿನ್ನೆಲೆಯಲ್ಲಿ, ಆ ಪದದ ಪುರಾಣ ಉಲ್ಲೇಖವನ್ನೂ ತಿಳಿದುಕೊಳ್ಳುವುದು ಕೂಡ ‘ಜ್ಞಾನ’ದ ಒಂದು ಪುಟ.
ಯಾವುದು ಸಂಜೀವಿನಿ : ರಾಮಾಯಣದ ಯುದ್ಧ ಕಾಂಡ. ಯುದ್ಧದಲ್ಲಿ ದೇವಾಂತಕ, ನರಾಂತಕ, ಅತಿಕಾಯ ಮೊದಲಾದ ರಾಕ್ಷಸರ ಸಂಹಾರವಾಗಿದೆ. ರಾವಣ ದುಃಖದಲ್ಲಿದ್ದಾಗ ಆತನ ಪುತ್ರ ‘ಇಂದ್ರಜಿತು’ ಧೈರ್ಯ ತುಂಬಿ ಆಹವಕ್ಕೆ ಸಿದ್ಧನಾಗುತ್ತಾನೆ. ಇಂದ್ರಜಿತುವಿನ ಮಂತ್ರಪೂರಿತ ಆಯುಧಗಳಿಗೆ ಹನುಮಂತ, ಸುಗ್ರೀವ, ಅಂಗದ, ಗಂಧಮಾದನ, ಜಾಂಬವಂತ, ನೀಲ, ಕೇಸರಿ.. ಮೊದಲಾದ ಕಪಿವೀರರು ತಲ್ಲಣಗೊಂಡರು. ಅರುವತ್ತೇಳು ಕೋಟಿ ಕಪಿಸೇನೆ ಭ್ರಮೆಗೆ ಒಳಗಾಯಿತು.
ಇಂದ್ರಜಿತುವಿನ ಬಾಣಹತಿಗಳ ಮುಂದೆ ರಾಮ ಲಕ್ಷ್ಮಣರ ಬಲವು ಕುಂಠಿತವಾಗಿ ಮೂರ್ಛೆಗೊಂಡರು. ಮುಂದಿನ ಹಾದಿ ಶೂನ್ಯವಾಯಿತು. ಜಾಂಬವಂತನು ಹನುಮಂತನನ್ನು ಕರೆದು ‘ಹಿಮವತ್ಪರ್ವತಕ್ಕೆ ಹೋಗಿ ಸಂಜೀವಿನಿಯನ್ನು ತಂದರೆ ಮಾತ್ರ ಶ್ರೀರಾಮ ಲಕ್ಷ್ಮಣರೊಂದಿಗೆ ಕಪಿಗಳನ್ನು ರಕ್ಷಿಸಬಹುದು’ ಎನ್ನುತ್ತಾ ಪರ್ವತ ಪರಿಚಯವನ್ನು ಮಾಡಿದನು – ‘ಹಿಮವತ್ಪರ್ವತದಲ್ಲಿ ಋಷಭ ಮತ್ತು ಕೈಲಾಸ ಶಿಖರಗಳ ಮಧ್ಯೆ ಓಷಧಿ ಪರ್ವತವಿದೆ. ಅಲ್ಲಿ ‘ಮೃತಸಂಜೀವಿನಿ, ವಿಶಲ್ಯಕರಣೀ, ಸಾವಣ್ರ್ಯಕರಣೀ, ಸಂಧಾನಕರಣೀ’ ಹೀಗೆ ನಾಲ್ಕು ಮಹೌಷಧಿ ಲತೆಗಳನ್ನು ಶೀಘ್ರವಾಗಿ ತರಬೇಕು’.
ಜಾಂಬವಂತನ ಮಾತಿನಂತೆ ಹನುಮಂತನು ವಾಯುವೇಗದಿಂದ ಸಂಜೀವಿನಿಯನ್ನು ತರಲು ಧಾವಿಸುತ್ತಾನೆ. ಅಗ್ನಿಯ ರಾಶಿಯಂತೆ ಪ್ರಕಾಶಿಸುತ್ತಿದ್ದ ಸರ್ವೌಷಧಿ ವನಗಳನ್ನು ವೀಕ್ಷಿಸಿದ ಹನುಮಂತನು ಅಚ್ಚರಿಗೊಂಡನು. ಯಾರೋ ಒಬ್ಬ ತಮಗಾಗಿ ಬಂದಿದ್ದಾನೆಂದು ತಿಳಿದ ಮಹೌಷಧಿಗಳು ಅದೃಶ್ಯವಾದುವು. ಎಷ್ಟು ಹುಡುಕಿದರೂ ವನಸ್ಪತಿಗಳು ಗೋಚರವಾಗಲಿಲ್ಲ. ಹನುಮನು ಪರ್ವತವನ್ನೇ ಎತ್ತಿಕೊಂಡು ಹೊರಟನು. ಅಳಿದುಳಿದ ವಾನರರು ಹನುಮನ ಕಾರ್ಯವನ್ನು ಶ್ಲಾಘಿಸಿದರು. ರಾಮ ಲಕ್ಷ್ಮಣರು ಮಹೌಷಧಿಗಳ ಪರಿಮಳವನ್ನು ಆಘ್ರಾಣಿಸಿದೊಡನೆಯೆ ಎಚ್ಚರಗೊಂಡರು. ನಿಸ್ತೇಜರಾದ ವಾನರÀರೂ ಸಶಕ್ತರಾದರು.
ಬಳಿಕ ಹನುಮಂತನು ಆ ಓಷಧಿ ಪರ್ವತವನ್ನು ಹಿಮವತ್ಪರ್ವತಕ್ಕೆ ಕೊಂಡೊಯ್ದು ಯಥಾಸ್ಥಾನದಲ್ಲಿ ಇರಿಸಿದನು. ಜನಸಾಮಾನ್ಯರಿಗೆ ರಾಮಾಯಣ ಮಹಾಕಾವ್ಯವು ಪರಿಚಯಿಸಿದ ‘ಸಂಜೀವಿನಿ’ ಪದವು ವರ್ತಮಾನದಲ್ಲಿ ಬದುಕಿನ ಒಂದು ಭಾಗವಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

