ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಹಿಮನದಿ ಕುಸಿತದ ದುರಂತದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ ಅವರು ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ವಿಪತ್ತುಗಳ ಬಗ್ಗೆ ಅಂತರರಾಷ್ಟ್ರೀಯ ಸಮುದಾಯ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಆಗಸ್ಟ್ 26ರಂದು ಚೀನಾ–ನೇಪಾಳ ಗಡಿಯ ಹಿಮಾಲಯ ಪ್ರದೇಶದಲ್ಲಿ ಹಿಮ, ಬಂಡೆ, ಮಣ್ಣು ಮತ್ತು ನೀರಿನ ಭಾರಿ ಪ್ರವಾಹ ಉಂಟಾಗಿ ಹಲವು ಪ್ರದೇಶಗಳಲ್ಲಿ ಭಾರಿ ಹಾನಿಯಾಗಿತ್ತು. ರಾಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಪ್ರವಾಹ ಸಾಮಾನ್ಯ ಪ್ರವಾಹವಲ್ಲ; ಹಿಮ ಮತ್ತು ಹಿಮಪಾತದ ಕುಸಿತದಿಂದ ಉಂಟಾದ ಪ್ರಮುಖ ಪ್ರಾದೇಶಿಕ ದುರಂತ ಎಂದು ಪ್ರಧಾನಿ ಶಾ ಹೇಳಿದ್ದಾರೆ.
ಈ ದುರಂತದ ನಿಖರ ಕಾರಣ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಆದರೆ ಜಾಗತಿಕ ತಾಪಮಾನ ಏರಿಕೆಯಿಂದ ಹಿಮನದಿಗಳು ವೇಗವಾಗಿ ಕರಗುತ್ತಿರುವುದು ಇಂತಹ ಅಪಾಯಗಳನ್ನು ಹೆಚ್ಚಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹಿಮಾಲಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆ ಹಿಮನದಿ ಪ್ರದೇಶಗಳ ಸ್ಥಿರತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
‘ಇದು ಸಾಮಾನ್ಯ ಪ್ರವಾಹವಲ್ಲ’ : ಭೋಟೆ ಕೋಶಿ ನದಿಯ ಪ್ರವಾಹವು ಹಿಮಾಲಯದಲ್ಲಿ ಹಿಮ ಮತ್ತು ಹಿಮಪಾತದ ಕುಸಿತದಿಂದ ಉಂಟಾದ ಪ್ರಮುಖ ದುರಂತ ಎಂದು ಶಾ ಹೇಳಿದ್ದಾರೆ. ಹವಾಮಾನ ಬದಲಾವಣೆಯೊಂದಿಗೆ ಹಿಮಾಲಯ ಪ್ರದೇಶ ಎದುರಿಸುತ್ತಿರುವ ಅಪಾಯಗಳು ಹೆಚ್ಚುತ್ತಿವೆ; ಆದ್ದರಿಂದ ಈ ಪ್ರದೇಶದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ ಎಂದು ಅವರು ತಿಳಿಸಿದ್ದಾರೆ.
ನೇಪಾಳದಂತಹ ಕಡಿಮೆ ಪ್ರಮಾಣದ ಹಸಿರುಮನೆ ಅನಿಲ ಹೊರಸೂಸುವ ದೇಶಗಳು ಜಾಗತಿಕ ತಾಪಮಾನ ಏರಿಕೆಯ ಪರಿಣಾಮವನ್ನು ತೀವ್ರವಾಗಿ ಅನುಭವಿಸುತ್ತಿವೆ. ಹೀಗಾಗಿ ಇಂತಹ ದುರಂತಗಳ ವಿಚಾರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಲವಾಗಿ ಪ್ರಸ್ತಾಪಿಸುವ ಸಮಯ ಬಂದಿದೆ ಎಂದು ನೇಪಾಳ ಪ್ರಧಾನಿ ಹೇಳಿದ್ದಾರೆ.
ಹಿಮಾಲಯ ಕರಗಿದರೆ ಕೆಳಗಿನ ಪ್ರದೇಶಗಳಿಗೂ ಅಪಾಯ : ಹಿಮಾಲಯ ಮತ್ತು ಹಿಂದೂಕುಶ್ ಪರ್ವತಶ್ರೇಣಿಗಳ ಹಿಮನದಿಗಳು ಕೇವಲ ಪರ್ವತ ಪ್ರದೇಶಗಳ ನೀರಿನ ಮೂಲವಲ್ಲ. ಈ ಪ್ರದೇಶದ ಹಿಮನದಿಗಳು ಸುಮಾರು 24 ಕೋಟಿ ಜನರಿಗೆ ನೇರವಾಗಿ ನೀರಿನ ಮೂಲವಾಗಿದ್ದು, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ನದಿ ಕಣಿವೆಗಳಲ್ಲಿ ವಾಸಿಸುವ ಮತ್ತೊಂದು 165 ಕೋಟಿ ಜನರಿಗೂ ನೀರಿನ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಹೀಗಾಗಿ ಹಿಮನದಿಗಳ ಕರಗುವಿಕೆ ಮತ್ತು ಹಿಮಾಲಯದ ಪರಿಸರ ಬದಲಾವಣೆ ನೇಪಾಳ ಅಥವಾ ಟಿಬೆಟ್‌ಗೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ. ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಕೃಷಿ, ಕುಡಿಯುವ ನೀರು, ಜಲವಿದ್ಯುತ್ ಮತ್ತು ಗ್ರಾಮೀಣ ಬದುಕಿನ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೃಷಿಗೆ ಏಕೆ ಇದು ಪ್ರಮುಖ ಎಚ್ಚರಿಕೆ? : ಹಿಮಾಲಯದ ಹಿಮನದಿಗಳು ಮತ್ತು ನದಿಗಳ ನೀರು ದಕ್ಷಿಣ ಏಷ್ಯಾದ ಹಲವು ಕೃಷಿ ಪ್ರದೇಶಗಳ ನೀರಿನ ಭದ್ರತೆಯೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ. ಹವಾಮಾನ ಬದಲಾವಣೆಯಿಂದ ಒಂದು ಕಡೆ ಹಿಮನದಿಗಳ ಕರಗುವಿಕೆ ಮತ್ತು ಹಿಮನದಿ ಸರೋವರಗಳ ಅಪಾಯ ಹೆಚ್ಚಾದರೆ, ಮತ್ತೊಂದೆಡೆ ದೀರ್ಘಾವಧಿಯಲ್ಲಿ ನೀರಿನ ಲಭ್ಯತೆಯ ಮಾದರಿಯಲ್ಲೂ ಬದಲಾವಣೆ ಸಂಭವಿಸಬಹುದು.
ಇದರ ಪರಿಣಾಮವಾಗಿ ನೀರಾವರಿ, ಬೆಳೆ ಆಯ್ಕೆ, ಮಳೆ ಅವಲಂಬಿತ ಕೃಷಿ, ಪ್ರವಾಹ ನಿರ್ವಹಣೆ ಮತ್ತು ಗ್ರಾಮೀಣ ಮೂಲಸೌಕರ್ಯ ಯೋಜನೆಗಳನ್ನು ಹೊಸ ಹವಾಮಾನ ವಾಸ್ತವಕ್ಕೆ ಹೊಂದಿಸಬೇಕಾದ ಅಗತ್ಯ ಎದುರಾಗುತ್ತಿದೆ.
ಭಾರತಕ್ಕೂ ಸಂದೇಶ : ಹಿಮಾಲಯದ ಪರಿಸರ ವ್ಯವಸ್ಥೆಯ ಮೇಲೆ ಹೆಚ್ಚುತ್ತಿರುವ ಒತ್ತಡ ಭಾರತಕ್ಕೂ ಮಹತ್ವದ ಎಚ್ಚರಿಕೆಯಾಗಿದೆ. ಹಿಮಾಲಯದಿಂದ ಹುಟ್ಟುವ ನದಿಗಳು ಭಾರತದ ಹಲವು ರಾಜ್ಯಗಳ ಕೃಷಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಆಧಾರವಾಗಿವೆ. ಹೀಗಾಗಿ ಹಿಮಾಲಯದಲ್ಲಿ ಸಂಭವಿಸುವ ಹಿಮನದಿ ಕುಸಿತ, ಅತಿವೃಷ್ಟಿ ಅಥವಾ ಹಠಾತ್ ಪ್ರವಾಹಗಳನ್ನು ಕೇವಲ ‘ಪರ್ವತ ಪ್ರದೇಶದ ನೈಸರ್ಗಿಕ ದುರಂತ’ ಎಂದು ನೋಡುವ ಬದಲು, ದಕ್ಷಿಣ ಏಷ್ಯಾದ ನೀರು–ಆಹಾರ ಭದ್ರತೆಯ ಭಾಗವಾಗಿ ಪರಿಗಣಿಸುವ ಅಗತ್ಯವಿದೆ.
The Rural Mirror ವಿಶ್ಲೇಷಣೆ : ಹಿಮಾಲಯದಲ್ಲಿ ಕರಗುವ ಹಿಮದ ಪರಿಣಾಮ ಅದರ ಕೆಳಗಿನ ಕೃಷಿ ಭೂಮಿಯವರೆಗೂ ತಲುಪುತ್ತದೆ. ಇತ್ತೀಚಿನ ನೇಪಾಳ ದುರಂತ ಮತ್ತೊಮ್ಮೆ ತೋರಿಸಿರುವುದು, ಹವಾಮಾನ ಬದಲಾವಣೆಯ ಪರಿಣಾಮ ದೂರದ ಪರ್ವತ ಪ್ರದೇಶದಲ್ಲೇ ನಿಲ್ಲುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮುಂದಿನ ದಿನಗಳ ಕೃಷಿ ಯೋಜನೆಯಲ್ಲಿ ಹವಾಮಾನ ಅಪಾಯ ನಿರ್ವಹಣೆ ಅನಿವಾರ್ಯವಾಗಲಿದೆ. ನೀರಿನ ಸಂಗ್ರಹ, ಪ್ರವಾಹ–ಬರ ನಿರ್ವಹಣೆ, ಹವಾಮಾನ ಸಹಿಷ್ಣು ತಳಿಗಳು, ಬೆಳೆ ವೈವಿಧ್ಯೀಕರಣ ಮತ್ತು ಮುನ್ಸೂಚನೆ ಆಧಾರಿತ ಕೃಷಿ ಇನ್ನು ಆಯ್ಕೆಯಲ್ಲ; ಅವು ಭವಿಷ್ಯದ ಕೃಷಿಯ ಅವಿಭಾಜ್ಯ ಭಾಗವಾಗಬೇಕಿದೆ. ಮಲೆನಾಡು ತಪ್ಪಲಿನ ಕೃಷಿ ಹಾಗೂ ಅಲ್ಲಿನ ಜನರು ಕೂಡಾ ಎಚ್ಚರಿಕಗೆ ವಹಿಸಬೇಕಾಗುತ್ತದೆ. ಎಲ್ಲೋ ನಡೆಯುವ ಘಟನೆಗಳು ಕೂಡಾ ಮಲೆನಾಡು ತಪ್ಪಲು ಭಾಗದ ಜನರಿಗೆ, ಕೃಷಿಗೆ ಅಪಾಯವಾಗಬಹುದು.(News Source: CNA / AFP)
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Nepal Prime Minister Balendra Shah has called for stronger international climate action following a devastating Himalayan flood triggered by a glacial collapse near the China-Nepal border. While the exact cause of the collapse remains unclear, scientists say rising temperatures are accelerating glacier melt and may increase the risk of such disasters. The Himalayan glaciers are also crucial to water security for hundreds of millions of people across South and Southeast Asia.



