ರಾಜ್ಯದ ಉತ್ತರ ಭಾಗದಾಚೆ ಮಳೆ #rain ಬೀಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅಲ್ಲಿನ ಸಾವಿರಾರು ಜನ ಕರಾವಳಿ, ಮಲೆನಾಡು ಕಡೆ ಬದುಕು ಕಟ್ಟಿಕೊಳ್ಳಲು ಆಗಮಿಸಿದ್ದಾರೆ. ಮಳೆಯ ನಿರೀಕ್ಷೆ ಇಟ್ಟುಕೊಂಡು ತಮ್ಮ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿದ್ದಾರೆ. ಈ ಬಗ್ಗೆ ಖ್ಯಾತ ಪರಿಸರ ಲೇಖಕರು ಶಿವಾನಂದ ಕಳವೆ ಅವರು, ಕೂಲಿ ಕೆಲಸಕ್ಕೆ ಬಂದ ಉತ್ತರ ಕರ್ನಾಟಕದ ಜನತೆಯ ಬದುಕು ಬವಣೆಯನ್ನು ವಿವರಿಸಿದ್ದಾರೆ..
ಉಡುಪಿಯ ಸಿಟಿ ಬಸ್ ನಿಲ್ದಾಣ ಕೆಳಗಡೆ ರಸ್ತೆ ಪಕ್ಕ ಮುಂಜಾನೆ ಆರು ಗಂಟೆಯಿಂದ ಜನ ನಿಲ್ಲಲು ಆರಂಭಿಸುತ್ತಾರೆ. ಟಿಪ್ಪರ್, ಲಾರಿ,ಗೂಡ್ಸ್ ರಿಕ್ಷಾ, ಜೀಪು ಹೀಗೆ ಹತ್ತು ಹಲವು ವಾಹನಗಳು ನಿಂತು ತಮಗೆ ಬೇಕಾದಷ್ಟು ಜನರನ್ನ ತುಂಬಿಕೊಂಡು ಸಾಗುತ್ತವೆ. ಕಟ್ಟಡ ನಿರ್ಮಾಣ, ರಸ್ತೆ, ಪೈಪ್ ಲೈನ್ ಕಾಮಗಾರಿ, ಕೃಷಿ, ಮಣ್ಣು ಹೊರುವುದು ಹೀಗೆ ವಿವಿಧ ಕೆಲಸಗಳಿಗೆ ಕೂಲಿಗಳ ಪಯಣ ಇಲ್ಲಿಂದ ಶುರುವಾಗುತ್ತದೆ. ಆಸ್ಪತ್ರೆ ಸ್ವಚ್ಚತೆ, ಹೋಟೆಲ್, ಮನೆ ಕೆಲಸಕ್ಕೂ ಕೆಲಸಗಾರರನ್ನು ಹುಡುಕುವವರು ಇಲ್ಲಿಗೆ ಬರ್ತಾರೆ.
ಬಯಲು ಸೀಮೆಯ ಕೊಪ್ಪಳ, ಗದಗ, ಬಾಗಲಕೋಟೆ, ವಿಜಾಪುರ, ಧಾರವಾಡ ಮುಂತಾದ ಜಿಲ್ಲೆಗಳಿಂದ ಕೂಲಿಗೆ ಬಂದವರು ಕೆಲಸ ಹುಡುಕಿ ಇಲ್ಲಿ ನಿಲ್ಲುತ್ತಾರೆ. ಇಲ್ಲಿಂದ ಆರೆಂಟು ಕಿಲೋ ಮೀಟರ್ ದೂರ ಹೋದವರು ವಾರ, ಎರಡು ಮೂರು ದಿನ ಕೆಲಸ ಮುಗಿದ ಬಳಿಕ ಪುನಃ ಕೆಲಸ ಹುಡುಕಲು ಇಲ್ಲೇ ಬಂದು ನಿಲ್ಲುವರು. ಸಹಜವಾಗಿ ದುಡಿಯುವ ಜನಗಳ ಕೊರತೆ ಇರುವಲ್ಲಿ ಕೂಲಿ ಕಾರ್ಮಿಕರ ಮಾರುಕಟ್ಟೆ ರೂಪು ಪಡೆದಿದೆ.
ಎಳೆ ಮಕ್ಕಳ ಕಟ್ಟಿಕೊಂಡು, ಪಾತ್ರೆ, ಕೆಲಸದ ಸಲಕರಣೆ ಹಿಡಿದು ಇವರು ವಸತಿಗೆ ತಾತ್ಕಾಲಿಕ ಟೆಂಟ್ ಹಾಕುವ ಪ್ಲಾಸ್ಟಿಕ್ ಹಿಡಿದು ಹೊರಡುತ್ತಾರೆ. ಬಿಳಿ ಜೋಳದ ಕಟಕ್ ರೊಟ್ಟಿ ಗಂಟು ಇದ್ದೇ ಇರ್ತದೆ. ಒಮ್ಮೆ ಜೋಳ, ಸಜ್ಜೆ ಖಾಲಿ ಆದ್ರೆ ಬಸ್ಸೇರಿ ಊರಿಗೆ ಹೋಗಿ ತರುವುದೂ ಇದೆ.
ಇವರೇನು ಭೂರಹಿತರಲ್ಲ, ಬಹುತೇಕ ಜನ ಆರೆಂಟು ಎಕರೆ ಹೊಲ ಇದ್ದವರು. ನೀರಾವರಿ ವ್ಯವಸ್ಥೆ ಇಲ್ಲ, ಬರಗಾಲ, ಊರಲ್ಲಿ ಹೊಲದ ಕೆಲಸವಿಲ್ಲದ ಬೇಸಿಗೆಯಲ್ಲಿ ಬಸ್ಸೇರಿ ಇಲ್ಲಿ ಬಂದು ನಾಲ್ಕಾರು ತಿಂಗಳು ದುಡಿಮೆ ಮಾಡಿ ಹೋಗ್ತಾರೆ. ವಲಸೆ ತಡೆಯಲು ಊರಲ್ಲಿ ಕೆಲಸ ನೀಡುವ ಉದ್ಯೋಗ ಖಾತ್ರಿ ಯೋಜನೆಯೇನೋ ಇದೆ, ಅದಕ್ಕಿಂತ ಹೆಚ್ಚು ಹಣ ಇಲ್ಲಿನ ಕೆಲಸದಲ್ಲಿ ದೊರೆಯುವ ಸಾಧ್ಯತೆ ಇರುವುದರಿಂದ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಜನ ಇಲ್ಲಿಗೆ ತಲುಪುತ್ತಾರೆ.
2015, 2016 ರಲ್ಲಿ ಆದಂತೆ ಬರದ ಭಯ ಶುರುವಾಗಿದೆ. ಜೂನ್ 22 ಕಳೆದರೂ ಮಳೆ ಇನ್ನೂ ಕರಾವಳಿಗೆ ಬಂದಿಲ್ಲ! ಗಾಳಿಯ ವೇಗ ಇಲ್ಲದೇ ಘಟ್ಟ ಏರುತ್ತಿಲ್ಲ.ವಾಡಿಕೆ ಮಳೆಯ ಶೇಕಡಾ ಹತ್ತರಷ್ಟು ಸುರಿದಿಲ್ಲ.ನೀರಿನ ಕೊರತೆಯಿಂದ ಟ್ಯಾಂಕರ್ ಓಡಾಟ ಉಡುಪಿಯಲ್ಲಿ ಜೋರು ಸಾಗಿದೆ. ‘ಇಲ್ಲೇ ಮಳೆ ಇಲ್ಲ ಅಂದ್ರೇ ನಮ್ಮೂರಿನಲ್ಲಿ ಮಳೆ ಬರೋದು ಹೇಗೆ?’ ಕಾರ್ಮಿಕರೊಬ್ಬರು ಹೇಳುತ್ತಿದ್ದ ಮಾತು ಕೇಳಿಸಿತು. ತುಸು ದೂರವಿದ್ದ ಬೀಡಾ ಅಂಗಡಿಯವರಲ್ಲಿ ಈ ಕಾರ್ಮಿಕರ ಕಥೆ ಕೇಳಿದೆ….’ ಬೆಳಗಿನಿಂದ ನಿಂತಿರ್ತಾರೆ ಸರ್, ಕೊನೆಗೆ ಹತ್ತು ಗಂಟೆಗೆ ಪೂರ್ತಿ ಖಾಲಿ ಆಗ್ತಾರೆ. ಕೆಲಸಕ್ಕೆ ಜನ ಬೇಕಾದವರು ಇಲ್ಲಿಗೆ ಬರ್ತಾರೆ ‘ ಎಂದರು. ಮಾತಾಡಿ ಹೊರಡುವಾಗ ಅಂಗಡಿಯವರು ‘ ಹ್ವಾಯ್ ‘ ಎಂದು ಮತ್ತೆ ಕರೆದರು. ‘ ಅವರ್ ಊರಲ್ಲಿ ಒಂದ್ ಮಳೆ ಬಿದ್ರೆ ಹಿಡಿದ ಕೆಲಸ ಬಿಟ್ಟು ಇಲ್ಲಿಂದ ಗಂಟು ಮೂಟೆ ಕಟ್ಟಿ ಹೊರಟು ಬಿಡ್ತಾರೆ ‘ ಎಂದರು.
ನಿಜ, ಮಳೆ ನೀರಿನ ಶಕ್ತಿಯೇ ಅದು. ಒಂದೊಳ್ಳೆ ಮಳೆ ಭೂಮಿ ನಂಬಿದವರ ಭವಿಷ್ಯ ರೂಪಿಸುತ್ತದೆ. ಎರೆ ಹೊಲಗಳ ಪ್ರದೇಶದಲ್ಲಿ ನಮ್ಮ ಮೈ ಮೇಲಿನ ಬಟ್ಟೆ ಒದ್ದೆಯಾಗುವ ಪ್ರಮಾಣದ ಹನಿ ಸುರಿದರೂ ಬಿಳಿ ಜೋಳ ಬೆಳೆದು ವರ್ಷದ ಅನ್ನದ ದಾರಿಯಾಗುತ್ತದೆ. ತಮ್ಮ ಹೊಲದ ಉಳುಮೆ, ಬಿತ್ತನೆ ಕೆಲಸಕ್ಕೆ ಈ ಕೂಲಿ ಕೆಲಸ ಬಿಟ್ಟು ಕೃಷಿಕರೆಲ್ಲ ಹೋಗ್ತಾರೆ. ಇವರ ಕೃಷಿ ಪ್ರೀತಿಯೇ ನಮಗೆ ರೊಟ್ಟಿ, ಚಪಾತಿ, ಹೆಸರು, ತೊಗರಿ, ಮೆಣಸು ಕೊಡ್ತದೆಯೇ ಹೊರತೂ ಸರಕಾರದ ಸುತ್ತೋಲೆ, ಗ್ಯಾರಂಟಿಗಳಲ್ಲ. ನಮ್ಮ ಆರೋಗ್ಯ ಆಹಾರದ ಹಿಂದೆ ಇವರಿದ್ದಾರೆ.
ಹವಾಮಾನ ಬದಲಾವಣೆ ಪರಿಣಾಮ ಬೇಸಿಗೆ ಉಷ್ಣತೆ 36 ಡಿಗ್ರಿ ದಾಟಿದಾಗ ನಾವು ಪ್ಯಾನುಗಳ ಕೆಳಗಡೆ ಬೆವರುವಾಗ ಹೆದ್ದಾರಿಯಂಚಿನ ಬಯಲಿನಲ್ಲಿ ಇವರೆಲ್ಲ ತಗಡಿನ ಶೆಡ್ ಕೆಳಗಡೆ ಕಾದ ಕಾವಲಿಯಲ್ಲಿ ಬದುಕುತ್ತಾರೆ. ಇವರೇ ನಮ್ಮ ಹೆದ್ದಾರಿ,ಬಹು ಅಂತಸ್ಸಿನ ಕಟ್ಟಡ, ನೀರು ಕಾಲುವೆ ಮುಂತಾದ ನಿರ್ಮಾಣಗಳ ಹಿಂದಿರುತ್ತಾರೆ.
ಕೊನೆ ಹನಿ :
ಬರಗಾಲ ಎಂದಾಕ್ಷಣ ಶತಮಾನಗಳ ಹಳೆಯ ದಾಖಲೆ ನೆನಪಾಯ್ತು. ಜೀತದಾಳುಗಳ ಮಾರಾಟ ಇಂದಿನ ಕಾರವಾರದ ಸದಾಶಿವಗಡ ಕೋಟೆಯಲ್ಲಿ ನಡೆಯುತ್ತಿತ್ತು. ಶಿವಾಜಿಯ ಮಗ ಸಂಬಾಜಿ ಹೊಸ ವ್ಯಾಪಾರಿ ಒಪ್ಪಂದ ಮಾಡಿಕೊಂಡು ತಮ್ಮ ಪ್ರದೇಶದ ಯಾರೊಬ್ಬರನ್ನೂ ಜೀತದಾಳುಗಳಾಗಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ನಿಯಮ ವಿಧಿಸುತ್ತಾರೆ. ಆಗ ಬ್ರಿಟಿಷ್ ಫ್ಯಾಕ್ಟರಿ ಮೆನೇಜರ್ ತನ್ನ ದೇಶಕ್ಕೆ ಪತ್ರ ಬರೆದು ಹೊಸ ವ್ಯಾಪಾರಿ ಒಪ್ಪಂದ ಕಾರಣ ಜೀತದಾಳು ಕೊರತೆಯಾಯ್ತು ಎಂದು ಉಲ್ಲೇಖಿಸುತ್ತಾರೆ. ಆ ಪತ್ರದ ಕೊನೆಯಲ್ಲಿ ‘ ನಾನು ಬರಗಾಲ ಬರುವುದನ್ನು ಕಾಯ್ತಾ ಇದ್ದೇನೆ. ಒಮ್ಮೆ ಬರಗಾಲ ಬಂದರೆ ಹುಬ್ಬಳ್ಳಿ, ಹಾವೇರಿ ಪ್ರದೇಶದ ಜನ ತಮ್ಮನ್ನು ತಾವೇ ಮಾರಿಕೊಳ್ಳುತ್ತಾರೆ. ಆಗ ನಮಗೆ ಬೇಕಷ್ಟು ಆಳು ಸಿಗ್ತಾರೆ ‘ ಎಂದು ಬರೆದಿದ್ದಾರೆ. ನೀರಿನ ಕೊರತೆ, ಬರಗಾಲ ದ ಹಿಂದೆ ಏನೆಲ್ಲ ಆಟಗಳು ಇವೆ ಅಲ್ಲವೇ!
– ಶಿವಾನಂದ ಕಳವೆ, ಅವರ ಫೇಸ್ ಬುಕ್ ಬರಹ
ವಿಶ್ವ ದೂರ ಸಂಪರ್ಕ ಮತ್ತು ಮಾಹಿತಿ ಸೊಸೈಟಿ ದಿನ ಹಿನ್ನೆಲೆಯಲ್ಲಿ ಭಾರತೀಯ ದೂರಸಂಪರ್ಕ…
ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡುವ ರೈತರಿಗೆ 15 ದಿನದೊಳಗೆ ಹಣ…
2024-25 ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸೂರ್ಯಕಾಂತಿ ಹುಟ್ಟುವಳಿ…
ಕಳೆದ ವಾರ ಅಡಿಕೆ ಹಾಳೆತಟ್ಟೆಯನ್ನು ಅಮೇರಿಕಾ ರಫ್ತು ಮಾಡಿತ್ತು, ಅದಾಗಿ ಈಗ ಮಾವಿನಹಣ್ಣು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ . 9535156490
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿನ್ನೆ ಸಂಜೆಯಿಂದ ಧಾರಾಕಾರ ಮಳೆಯಾಗುತ್ತಿದ, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.…