ಭಾರತದಲ್ಲಿ ಉದ್ಯೋಗದ ಸಮಸ್ಯೆಯ ಜೊತೆಗೆ ಉದ್ಯೋಗಕ್ಕೆ ಸಿದ್ಧರಾಗಿರುವ ಯುವಕರ ಕೊರತೆಯೂ ಗಂಭೀರ ಸವಾಲಾಗಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಮಂಡಳಿ (EAC-PM) ಸದಸ್ಯ ಸಂಜೀವ್ ಸನ್ಯಾಲ್ ಹೇಳಿದ್ದಾರೆ. ದೇಶ ಎದುರಿಸುತ್ತಿರುವುದು ಕೇವಲ ನಿರುದ್ಯೋಗದ ಸಮಸ್ಯೆಯಲ್ಲ, ‘ಉದ್ಯೋಗಾರ್ಹತೆ’ಯ ಸಮಸ್ಯೆಯೂ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಸಂಸ್ಥೆ ಎಎನ್‌ಐ ಸಂದರ್ಶನದಲ್ಲಿ ಮಾತನಾಡಿದ ಅವರು, ಕಂಪನಿಗಳಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಅಗತ್ಯವಿದ್ದರೂ, ತಮಗೆ ಬೇಕಾದ ಸರಿಯಾದ ಕೌಶಲ್ಯಗಳ ಸಂಯೋಜನೆ ಹೊಂದಿರುವ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ಸನ್ಯಾಲ್ ಹೇಳಿದ್ದಾರೆ. ಮತ್ತೊಂದೆಡೆ, ಅನೇಕ ಪದವೀಧರರು ಉದ್ಯಮಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ಹೊಂದಿಲ್ಲ ಎಂಬುದು ಸಮಸ್ಯೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಪದವಿ ಇದೆ; ಕೆಲಸಕ್ಕೆ ಬೇಕಾದ ಕೌಶಲ್ಯ ಇದೆಯೇ? :ಭಾರತದಲ್ಲಿ ಶಿಕ್ಷಣ ಪಡೆಯುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಶಿಕ್ಷಣ ಮುಗಿದ ನಂತರ ಉದ್ಯೋಗದ ಮಾರುಕಟ್ಟೆಗೆ ಪ್ರವೇಶಿಸುವಾಗ ಪದವಿ ಮತ್ತು ಉದ್ಯೋಗಕ್ಕೆ ಬೇಕಾದ ಕೌಶಲ್ಯದ ನಡುವೆ ಅಂತರ ಕಾಣಿಸಿಕೊಳ್ಳುತ್ತಿದೆ. ಇದೇ ಅಂತರವನ್ನು ಉದ್ಯೋಗಾರ್ಹತೆ ಸಮಸ್ಯೆ ಎಂದು ಸನ್ಯಾಲ್ ಹೇಳುತ್ತಾರೆ.
ಅಂದರೆ “ಯುವಕರಿಗೆ ಉದ್ಯೋಗ ಸಿಗುತ್ತಿದೆಯೇ?” ಎಂಬ ಪ್ರಶ್ನೆಯಷ್ಟೇ ಅಲ್ಲ, ಅದರ ಜೊತೆಗೆ “ಲಭ್ಯವಿರುವ ಉದ್ಯೋಗಗಳಿಗೆ ಬೇಕಾದ ಕೌಶಲ್ಯ ಯುವಕರಲ್ಲಿದೆಯೇ?” ಎಂಬ ಪ್ರಶ್ನೆಯೂ ಮುಖ್ಯವಾಗುತ್ತಿದೆ. ಕಂಪನಿಗಳಿಗೆ ಕೆಲಸಗಾರರು ಬೇಕು, ಆದರೆ ‘ಸರಿಯಾದ ಮಾದರಿಯಲ್ಲಿ’ ಬೇಕು. ಉದ್ಯೋಗ ಮಾರುಕಟ್ಟೆಯಲ್ಲಿ ಕೆಲವು ಕ್ಷೇತ್ರಗಳಿಗೆ ನಿರ್ದಿಷ್ಟ ತಾಂತ್ರಿಕ ಜ್ಞಾನ ಬೇಕಾಗುತ್ತದೆ. ಈಗ ಅದೊಂದೇ ಸಾಕಾಗುವುದಿಲ್ಲ. ತಾಂತ್ರಿಕ ಜ್ಞಾನದ ಜೊತೆಗೆ ಸಂವಹನ ಕೌಶಲ್ಯ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ಡಿಜಿಟಲ್ ಕೌಶಲ್ಯ, ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಕೆಲಸದ ಅನುಭವ, ಹೊಸ ತಂತ್ರಜ್ಞಾನ ಕಲಿಯುವ ಸಾಮರ್ಥ್ಯ ಇಂತಹ ಹಲವು ಕೌಶಲ್ಯಗಳ ಸಂಯೋಜನೆ ಬೇಕಾಗುತ್ತದೆ. ಕಂಪನಿಗಳಿಗೆ ಇದೇ ‘right mix of skills’ ಸಿಗದಿರುವುದು ಉದ್ಯೋಗ ಮಾರುಕಟ್ಟೆಯ ಪ್ರಮುಖ ಸವಾಲಾಗಿದೆ ಎಂದು ಸನ್ಯಾಲ್ ಹೇಳಿದ್ದಾರೆ.
ಶಿಕ್ಷಣದ ಗುರಿ ಬದಲಾಗಬೇಕೇ? : ಶಿಕ್ಷಣ ವ್ಯವಸ್ಥೆಯನ್ನು ಕೇವಲ ಪದವಿ ಪಡೆಯುವ ಮಾರ್ಗವಾಗಿ ನೋಡದೆ, ಉದ್ಯೋಗ, ವೃತ್ತಿ ಮತ್ತು ಕೌಶಲ್ಯಗಳೊಂದಿಗೆ ಹೆಚ್ಚು ನೇರವಾಗಿ ಸಂಪರ್ಕಿಸುವ ಅಗತ್ಯವಿದೆ ಎಂಬುದು ಸನ್ಯಾಲ್ ಅವರ ಅಭಿಪ್ರಾಯ. ಅಂದರೆ ಶಿಕ್ಷಣ ಸಂಸ್ಥೆಗಳು ಉದ್ಯಮದಿಂದ ದೂರವಿರುವ ಪಠ್ಯಕ್ರಮದ ಬದಲು, ಉದ್ಯೋಗ ಮಾರುಕಟ್ಟೆಯಲ್ಲಿ ನಿಜವಾಗಿ ಅಗತ್ಯವಿರುವ ಕೌಶಲ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಇದು ಕೇವಲ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ. ಕೃಷಿ, ಆಹಾರ ಸಂಸ್ಕರಣೆ, ಆರೋಗ್ಯ, ಪ್ರವಾಸೋದ್ಯಮ, ಉತ್ಪಾದನೆ, ನಿರ್ಮಾಣ, ಗ್ರಾಮೀಣ ಉದ್ಯಮ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ನಿರ್ದಿಷ್ಟ ಕೌಶಲ್ಯಗಳ ಅಗತ್ಯವಿದೆ.
ಗ್ರಾಮೀಣ ಯುವಕರಿಗೂ ದೊಡ್ಡ ಅವಕಾಶ ಇದೆ. ಈ ಚರ್ಚೆ ಗ್ರಾಮೀಣ ಭಾರತದ ದೃಷ್ಟಿಯಿಂದಲೂ ಬಹಳ ಮುಖ್ಯ. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಪಡೆದ ಯುವಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಇದೆ. ಅದೇ ಸಮಯದಲ್ಲಿ ಗ್ರಾಮೀಣ ಆರ್ಥಿಕತೆಯಲ್ಲೇ ಹೊಸ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಉದಾಹರಣೆಗೆ, ಕೃಷಿ ಯಂತ್ರೋಪಕರಣ ನಿರ್ವಹಣೆ, ಆಹಾರ ಸಂಸ್ಕರಣೆ, ಕಾಫಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ, ಡಿಜಿಟಲ್ ಕೃಷಿ ಸೇವೆ, ಪಶುಸಂಗೋಪನೆ, ಕೃಷಿ ಸಲಹಾ ಸೇವೆ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಇವುಗಳಿಗೆ ಸ್ಥಳೀಯವಾಗಿ ತರಬೇತಿ ನೀಡಿದರೆ ಗ್ರಾಮದಲ್ಲೇ ಉದ್ಯೋಗ ಮತ್ತು ಉದ್ಯಮದ ಅವಕಾಶಗಳನ್ನು ಸೃಷ್ಟಿಸಬಹುದು.
AI ಬರುತ್ತಿರುವಾಗ ಕೌಶಲ್ಯದ ಪ್ರಶ್ನೆ ಇನ್ನಷ್ಟು ದೊಡ್ಡದು : ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕರಣದ ವೇಗ ಹೆಚ್ಚುತ್ತಿರುವ ಸಂದರ್ಭದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿನ ಕೌಶಲ್ಯಗಳ ಸ್ವರೂಪವೂ ವೇಗವಾಗಿ ಬದಲಾಗುತ್ತಿದೆ. ಹೀಗಾಗಿ ಇಂದು ಕಲಿತ ಕೌಶಲ್ಯವನ್ನು ಮುಂದಿನ ಹತ್ತು ವರ್ಷಗಳಿಗೂ ಹಾಗೆಯೇ ಬಳಸಬಹುದು ಎಂಬ ಖಾತರಿ ಇಲ್ಲ. ಇದರಿಂದ ಒಮ್ಮೆ ತರಬೇತಿ ಪಡೆದು ಮುಗಿಸುವುದಕ್ಕಿಂತ ನಿರಂತರವಾಗಿ ಹೊಸ ಕೌಶಲ್ಯ ಕಲಿಯುವ ವ್ಯವಸ್ಥೆ ಹೆಚ್ಚು ಮುಖ್ಯವಾಗುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಉದ್ಯೋಗದ ಸ್ವರೂಪ ಬದಲಾಗುತ್ತಿರುವುದರಿಂದ ಹೊಂದಿಕೊಳ್ಳುವಿಕೆ, ಸಮಸ್ಯೆ ಪರಿಹಾರ ಮತ್ತು ನಿರಂತರ ಕಲಿಕೆಯ ಸಾಮರ್ಥ್ಯ ಹೆಚ್ಚು ಮಹತ್ವ ಪಡೆಯುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ.
ಪದವಿಗಿಂತ ‘ಕೆಲಸ ಮಾಡಲು ಬರುವ ಸಾಮರ್ಥ್ಯ’ ಮುಖ್ಯವಾಗುತ್ತಿದೆಯೇ?: ಇದು ಭಾರತದ ಶಿಕ್ಷಣ ವ್ಯವಸ್ಥೆಯ ಮುಂದೆ ಇರುವ ದೊಡ್ಡ ಪ್ರಶ್ನೆ. ಒಬ್ಬ ಯುವಕ ಪದವಿ ಪಡೆದಿದ್ದಾನೆ ಎಂಬುದು ಆತನಿಗೆ ಉದ್ಯೋಗದಲ್ಲಿ ಯಶಸ್ವಿಯಾಗಲು ಬೇಕಾದ ಎಲ್ಲಾ ಕೌಶಲ್ಯಗಳಿವೆ ಎಂಬುದನ್ನು ಖಚಿತಪಡಿಸುವುದಿಲ್ಲ. ಅದೇ ರೀತಿ ಕೌಶಲ್ಯ ತರಬೇತಿ ಪಡೆದಿದ್ದಾನೆ ಎಂಬುದೂ ಸಾಕಾಗುವುದಿಲ್ಲ. ಶಿಕ್ಷಣ , ಕೌಶಲ್ಯ, ಅನುಭವ ,ಹೊಂದಿಕೊಳ್ಳುವ ಸಾಮರ್ಥ್ಯ ಇವೆಲ್ಲ ಸೇರಿ ಉದ್ಯೋಗಾರ್ಹತೆಯನ್ನು ರೂಪಿಸುತ್ತವೆ.
ಶಿಕ್ಷಣ ಸಂಸ್ಥೆ–ಉದ್ಯಮ ಸಂಪರ್ಕ ಬಲವಾಗಬೇಕಿದೆ : ಉದ್ಯೋಗ ಮಾರುಕಟ್ಟೆಯಲ್ಲಿ ಯಾವ ಕೌಶಲ್ಯಗಳಿಗೆ ಬೇಡಿಕೆ ಇದೆ ಎಂಬುದನ್ನು ಶಿಕ್ಷಣ ಸಂಸ್ಥೆಗಳು ನಿರಂತರವಾಗಿ ತಿಳಿದುಕೊಳ್ಳಬೇಕು. ಉದ್ಯಮ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪಠ್ಯಕ್ರಮ ರೂಪಿಸುವುದು, ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಇಂಟರ್ನ್‌ಶಿಪ್ ನೀಡುವುದು, ನೈಜ ಕೆಲಸದ ಅನುಭವ ಕಲ್ಪಿಸುವುದು ಇವು ಉದ್ಯೋಗಾರ್ಹತೆಯ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
ಭಾರತದ ಯುವಜನಸಂಖ್ಯೆ ಅವಕಾಶವೂ ಹೌದು, ಸವಾಲೂ ಹೌದು : ಭಾರತದ ದೊಡ್ಡ ಯುವಜನಸಂಖ್ಯೆ ದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಶಕ್ತಿಯಾಗಬಹುದು. ಆದರೆ ಯುವಜನರಿಗೆ ಉದ್ಯೋಗಕ್ಕೆ ತಕ್ಕ ಕೌಶಲ್ಯ ದೊರೆಯದಿದ್ದರೆ ಇದೇ ಜನಸಂಖ್ಯೆ ದೊಡ್ಡ ಸಾಮಾಜಿಕ–ಆರ್ಥಿಕ ಸವಾಲಾಗಬಹುದು. ಹೀಗಾಗಿ ಮುಂದಿನ ಹಂತದಲ್ಲಿ ಪ್ರಶ್ನೆ, “ಎಷ್ಟು ಯುವಕರು ಪದವಿ ಪಡೆದಿದ್ದಾರೆ?” ಎಂಬುದಕ್ಕಿಂತ “ಎಷ್ಟು ಯುವಕರು ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಗೆ ಸಿದ್ಧರಾಗಿದ್ದಾರೆ?” ಎಂಬುದಾಗಬೇಕು.
ಉದ್ಯೋಗದ ಚರ್ಚೆಯನ್ನು ‘ಕೌಶಲ್ಯದ ಚರ್ಚೆ’ಯಾಗಿಸುವ ಅಗತ್ಯ : ಸಂಜೀವ್ ಸನ್ಯಾಲ್ ಅವರ ಹೇಳಿಕೆ ಒಂದು ಪ್ರಮುಖ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ಉದ್ಯೋಗ ಸೃಷ್ಟಿಸುವುದು ಸರ್ಕಾರ ಮತ್ತು ಉದ್ಯಮದ ಜವಾಬ್ದಾರಿ. ಆದರೆ ಸೃಷ್ಟಿಯಾಗುತ್ತಿರುವ ಉದ್ಯೋಗಗಳಿಗೆ ತಕ್ಕ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಸಿದ್ಧಪಡಿಸುವುದು ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ವ್ಯವಸ್ಥೆಯ ಜವಾಬ್ದಾರಿ. ಇವೆರಡರ ನಡುವೆ ಸಂಪರ್ಕ ಕಡಿತವಾದರೆ ಒಂದೆಡೆ ಉದ್ಯೋಗ ಹುಡುಕುವ ಯುವಕರು, ಮತ್ತೊಂದೆಡೆ ಕೆಲಸಗಾರರನ್ನು ಹುಡುಕುವ ಕಂಪನಿಗಳು ಎಂಬ ವಿಚಿತ್ರ ಪರಿಸ್ಥಿತಿ ಮುಂದುವರಿಯಬಹುದು. ಭಾರತದ ಮುಂದಿನ ಉದ್ಯೋಗ ಕ್ರಾಂತಿ ಹೆಚ್ಚು ಉದ್ಯೋಗ ಸೃಷ್ಟಿಸುವುದರಲ್ಲಷ್ಟೇ ಅಲ್ಲ; ಹೆಚ್ಚು ಉದ್ಯೋಗಾರ್ಹ ಯುವಕರನ್ನು ರೂಪಿಸುವುದರಲ್ಲೂ ಇರಬಹುದು.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
India is facing an “employability problem” alongside unemployment, according to Sanjeev Sanyal, Member of the Economic Advisory Council to the Prime Minister. He said companies often struggle to find candidates with the right combination of skills, while many graduates do not possess the capabilities required by industry. Sanyal argued that India’s education system needs to be fundamentally oriented towards careers, jobs and skills. The issue becomes increasingly important as technology and AI rapidly change workplace requirements, making adaptability, practical skills and continuous learning more important.


