ಮಲೆನಾಡು ಹಾಗೂ ಕರಾವಳಿ ಭಾಗದ ಅಡಿಕೆ ತೋಟಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಪಬೆಳೆಯಾಗಿ ಕೊಕ್ಕೋ ಗಮನಾರ್ಹವಾಗಿ ಹೆಸರು ಮಾಡುತ್ತಿದೆ. ವಿಶೇಷವಾಗಿ ಕೊರೋನಾ ನಂತರ ಕೊಕ್ಕೋ ಬೆಲೆಯಲ್ಲಿ ಕಂಡ ಏರಿಕೆಯಿಂದ ಹಲವಾರು ರೈತರು ಈ ಬೆಳೆಯತ್ತ ಆಕರ್ಷಿತರಾದರು. ಆದರೆ ಇದೀಗ ಧಾರಣೆ ಕುಸಿತ ಕಂಡಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಆದರೂ ಈ ಭಾಗದಲ್ಲಿ ಕೊಕ್ಕೋ ಇನ್ನೂ ಪ್ರಮುಖ ವಾಣಿಜ್ಯ ಬೆಳೆಯಾಗಿ ದಾಖಲಾಗಿಲ್ಲ. ಮಾರುಕಟ್ಟೆ ಅಸ್ಥಿರತೆ, ಸಂಸ್ಕರಣಾ ಕೊರತೆ ಹಾಗೂ ಖರೀದಿ ವ್ಯವಸ್ಥೆಯ ಅಭಾವದಿಂದ ಈ ಬೆಳೆಯ ಸಂಪೂರ್ಣ ಸಾಮರ್ಥ್ಯ ರೈತರಿಗೆ ತಲುಪಿಲ್ಲ ಎನ್ನುವುದು ಕೃಷಿ ವಲಯದ ಅಭಿಪ್ರಾಯ. ಈ ನಡುವೆ ಇದೀಗ ಮತ್ತೆ ಮಲೆನಾಡು-ತುಳುನಾಡಿನ ಕೊಕ್ಕೋಗೆ ಅಂತರಾಷ್ಟ್ರೀಯ ಮಾನ್ಯತೆ ತರುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ನೇರವಾಗಿ ಇಡೀ ಕೊಕ್ಕೋ ರೈತರಿಂದ ಖರೀದಿ ಮಾಡಿ ಪ್ರೊಸೆಸ್ ಮಾಡುವ ಪ್ರಯತ್ನ ನಡೆಯುತ್ತಿದೆ.
ಜಾಗತಿಕ ಮಟ್ಟದ ಗುಣಮಟ್ಟ – ಆದರೆ ಮಾನ್ಯತೆ ಕೊರತೆ
ಭಾರತದಲ್ಲಿ, ವಿಶೇಷವಾಗಿ ದಕ್ಷಿಣ ಭಾರತದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಬೆಳೆಯುವ ಕೊಕ್ಕೋ ರುಚಿ ಹಾಗೂ ಗುಣಮಟ್ಟದಲ್ಲಿ ಜಾಗತಿಕ ಮಾನ್ಯತೆ ಹೊಂದಿದೆ ಎಂಬುದು ತಜ್ಞರ ಅಭಿಪ್ರಾಯ.
ಆದರೆ, ಸರಿಯಾದ ಕೊಯಿಲೋತ್ತರ ಸಂಸ್ಕರಣೆ (Post-harvest processing) ನಡೆಯದ ಕಾರಣ ರೈತರಿಗೆ ಯೋಗ್ಯ ಬೆಲೆ ಹಾಗೂ ಜಾಗತಿಕ ಬ್ರಾಂಡ್ ಗುರುತು ಸಿಗುತ್ತಿಲ್ಲ.
ಈ ನಡುವೆ ಪುತ್ತೂರು ಸಮೀಪದ KOKO Pods, ಅನುತ್ತಮ ಚಾಕೋಲೇಟ್(Anuttama) ಹಾಗೂ ಪಾರ್ಥ ವಾರಣಾಸಿ ಸೇರಿದಂತೆ ಕೆಲ ಉದ್ಯಮಿಗಳು ಭಾರತೀಯ ಕೊಕ್ಕೋದ ವಿಶಿಷ್ಟ ರುಚಿಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಭಾರತೀಯ ಕೊಕ್ಕೋದಿಂದ ತಯಾರಾಗುವ ಚಾಕೊಲೇಟ್‌ಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯುತ್ತಿರುವುದು ಈ ಬೆಳೆಯ ಭವಿಷ್ಯದ ಸಾಧ್ಯತೆಯನ್ನು ಸ್ಪಷ್ಟಪಡಿಸುತ್ತದೆ.
ಕೊಕ್ಕೋ ಬೆಲೆಯಲ್ಲಿ ಭಾರೀ ಕುಸಿತ – ರೈತರ ಆತಂಕ
ಕೊಕ್ಕೋ ಬೆಳೆಗಾರರಿಗೆ ಸದ್ಯದ ಮಾರುಕಟ್ಟೆ ಪರಿಸ್ಥಿತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲವೇ ತಿಂಗಳ ಹಿಂದೆ ಒಣ ಕೊಕ್ಕೋ ದರ ₹1000ರವರೆಗೆ ಇತ್ತು, ನಂತರ ಅದು ₹400ಕ್ಕೆ ಇಳಿಯಿತು, ಇದೀಗ ದರ ₹320–₹340 ಮಟ್ಟಕ್ಕೆ ಕುಸಿದಿದೆ. ಈ ಹಿನ್ನಲೆಯಲ್ಲಿ ಹಸಿ ಕೊಕ್ಕೋ ದರವೂ ಶೀಘ್ರದಲ್ಲೇ ₹100 ಕ್ಕಿಂತ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪ್ರಸ್ತುತ ಕೊಕ್ಕೋ ದರ ನಿರ್ಧಾರವಾಗುವುದು ಮುಖ್ಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆ ಮತ್ತು ಬಹುರಾಷ್ಟ್ರೀಯ ಚಾಕೊಲೇಟ್ ಕಂಪೆನಿಗಳ ನೀತಿಗಳ ಮೇಲೆ ಅವಲಂಬಿತವಾಗಿದೆ. ಈ ಸ್ಥಿತಿಗೆ ತಕ್ಷಣದ ಪರಿಹಾರ ಸರ್ಕಾರ, ಕಂಪೆನಿಗಳು ಅಥವಾ ಸಹಕಾರಿ ಸಂಸ್ಥೆಗಳ ಮೂಲಕ ದೊರಕುವ ಸಾಧ್ಯತೆ ಕಡಿಮೆ ಎನ್ನುವುದು ರೈತರ ಅಭಿಪ್ರಾಯ.
ರೈತರಿಗೆ ಹೊಸ ದಾರಿ – ಮೌಲ್ಯವರ್ಧನೆ
ಈ ಪರಿಸ್ಥಿತಿಯಲ್ಲಿ ರೈತರು ತಮ್ಮ ಬೆಳೆಗೆ ಉತ್ತಮ ಬೆಲೆ ಪಡೆಯಲು ಮೌಲ್ಯವರ್ಧನೆ (Value Addition) ಎಂಬ ಮಾರ್ಗದತ್ತ ಗಮನ ಹರಿಸುತ್ತಿದ್ದಾರೆ. ಕೊಕ್ಕೋ ಕಾಯಿ ಕೊಯ್ದ ನಂತರ ಸರಿಯಾದ ರೀತಿಯಲ್ಲಿ ಫರ್ಮೆಂಟೇಶನ್, ಒಣಗಿಸುವಿಕೆ, ಗುಣಮಟ್ಟದ ಬೀಜ ತಯಾರಿ ಮಾಡಿದರೆ ತೋಟ, ಊರು ಅಥವಾ ಪ್ರಾಂತ್ಯದ ವಿಶಿಷ್ಟ ರುಚಿ ಹೊಂದಿರುವ ಪ್ರಿಮಿಯಂ ಕೊಕ್ಕೋ ಬೀಜಗಳನ್ನು ತಯಾರಿಸಬಹುದು. ಅಂತಹ ಗುಣಮಟ್ಟದ ಕೊಕ್ಕೋಗೆ ಮಾರುಕಟ್ಟೆಯಲ್ಲಿ ರೈತರು ತಾವೇ ಬೆಲೆ ನಿರ್ಧಾರ ಮಾಡುವ ಮಟ್ಟಿಗೆ ಅವಕಾಶ ಸಿಗಬಹುದು ಎಂಬುದು ಅನುಭವಿಗಳ ಅಭಿಪ್ರಾಯ.
CAMPCO ಜೊತೆ ಚರ್ಚೆ : ಈ ವಿಷಯಕ್ಕೆ ಸಂಬಂಧಿಸಿ ಕೊಕ್ಕೋ ಬೆಳೆಗಾರರಾದ ನವೀನಕೃಷ್ಣ ಶಾಸ್ತ್ರಿ ಅವರು ತಮ್ಮ ಮಾಹಿತಿಗಳನ್ನು CAMPCO ಸಂಸ್ಥೆಗೆ ಹಂಚಿಕೊಂಡಿದ್ದಾರೆ. ಸಂಸ್ಥೆಯ ಅಧ್ಯಕ್ಷರು ರೈತರ ಮಾತುಗಳನ್ನು ಗಮನದಿಂದ ಆಲಿಸಿ, ಮುಂದಿನ ದಿನಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಗಮನ ಹರಿಸಲು ಸೂಚನೆ ನೀಡಿದ್ದಾರೆ.
ನೇರ ಖರೀದಿ ಪ್ರಯತ್ನಕ್ಕೆ ನಾಂದಿ : ಈ ನಡುವೆ ರೈತರಿಗೆ ಉತ್ತಮ ಬೆಲೆ ದೊರಕಿಸಲು ಹಣ್ಣಾದ ಕೊಕ್ಕೋವನ್ನು ನೇರವಾಗಿ ರೈತರಿಂದ ಖರೀದಿ ಮಾಡಿ, ಮುಂದಿನ ಹಂತದವರೆಗೆ ಸಂಸ್ಕರಿಸಿ ಮಾರಾಟ ಮಾಡುವ ಪ್ರಯತ್ನ ಆರಂಭವಾಗುತ್ತಿದೆ. ಈ ವರ್ಷದಿಂದಲೇ ಈ ಮಾದರಿಯ ಖರೀದಿ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಇದರ ಉದ್ದೇಶ ರೈತರಿಗೆ ತಕ್ಷಣದ ಮಾರುಕಟ್ಟೆ ಭರವಸೆ, ಗುಣಮಟ್ಟದ ಸಂಸ್ಕರಣೆ ಮೂಲಕ ಮೌಲ್ಯವರ್ಧನೆ, ಭಾರತೀಯ ಕೊಕ್ಕೋಗೆ ಜಾಗತಿಕ ಮಾನ್ಯತೆ ಎನ್ನುವುದು ಸ್ಪಷ್ಟವಾದ ಹೆಜ್ಜೆ.
ರೈತರು ಸೇರಿ ಆರಂಭಿಸಿದ ಒಕ್ಕೂಟದ ಪ್ರಯತ್ನ : ಕೆಲವು ಸಮಾನ ಮನಸ್ಕ ರೈತರು ಸೇರಿ ಉತ್ತಮ ಗುಣಮಟ್ಟದ ಕೊಕ್ಕೋ ಉತ್ಪಾದನೆ ಹಾಗೂ ಸಂಸ್ಕರಣೆಯ ಪ್ರಯತ್ನವನ್ನು ಆರಂಭಿಸಿದ್ದು, ಪ್ರಾಥಮಿಕ ಹಂತದಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ತುಳುನಾಡು ಕೊಕ್ಕೋಗೆ ವಿಶಿಷ್ಟ ಗುರುತು ತರುವ ಉದ್ದೇಶದಿಂದ ಈ ಚಳವಳಿ ರೂಪುಗೊಳ್ಳುತ್ತಿದೆ. ಈ ಕಾರ್ಯದಲ್ಲಿ ಭಾಗಿಯಾಗಲು ಆಸಕ್ತಿ ಇರುವ ರೈತರು ದಕ್ಷಿಣ ಕನ್ನಡ ಜಿಲ್ಲೆಯ ಪುಣಚದ ನವೀನ ಕೃಷ್ಣ ಶಾಸ್ತ್ರಿ – 9448624427, ಮಯೂರ್ ಶೆಟ್ಟಿ – 99022 58950 ಇವರಿಗೆ WhatsApp ಮೂಲಕ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಮುಂದಿನ ದಾರಿ ಏನು? : ಸದ್ಯ ಸರ್ಕಾರದಿಂದ ಕೊಕ್ಕೋ ಬೆಳೆಗೆ ಪ್ರೋತ್ಸಾಹವಿದ್ದರೂ, ಬೆಲೆ ನಿರ್ಧಾರ ಅಂತರರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿದೆ. ತಜ್ಞರ ಪ್ರಕಾರ ಗುಣಮಟ್ಟದ ಸಂಸ್ಕರಣೆ, ಬ್ರಾಂಡಿಂಗ್, ನೇರ ಮಾರುಕಟ್ಟೆ ಸಂಪರ್ಕ ಈ ಮೂರು ಅಂಶಗಳ ಮೂಲಕ ಮಾತ್ರ ಕೊಕ್ಕೋ ಬೆಳೆಗಾರರಿಗೆ ಸ್ಥಿರ ಆದಾಯ ಹಾಗೂ ನ್ಯಾಯಯುತ ಬೆಲೆ ಸಾಧ್ಯವಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
Cocoa is emerging as an important intercrop in arecanut plantations of coastal and Malnad regions. Despite global-quality flavour, farmers face price crashes due to poor post-harvest processing and dependence on international markets. Experts and farmer groups are now focusing on value addition, branding, and direct procurement models to ensure better income and global recognition for Indian cocoa.

