ಕಳೆದ ಶುಕ್ರವಾರ 7-6-24ರಂದು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವಾರ್ತೆಯೇ ಈ ಲೇಖನಕ್ಕೆ ಪ್ರೇರಣೆ. ಅದರ ಪ್ರಕಾರ ಗುಜರಾತ್‍ನಲ್ಲಿ ಸಮಾನ ಮಾಸಿಕ ಕಂತುಗಳಲ್ಲಿ ಲಂಚವನ್ನು ಸಲ್ಲಿಸುವ ಕ್ರಮವೊಂದು ಜಾರಿಗೆ ಬಂದಿದೆಯಂತೆ. ಅದರ ಪ್ರಕಾರ ಲಂಚ ಪಾವತಿಸುವ ಸಂತ್ರಸ್ಥರಿಗೆ ಒಂದೇ ಬಾರಿಗೆ ಹೊಣೆಯನ್ನು ತಪ್ಪಿಸಲು ಭ್ರಷ್ಟ ಅಧಿಕಾರಿಗಳು ಕಂತುಗಳಲ್ಲಿ ಹಣ ಪಡೆಯುತ್ತಿದ್ದಾರಂತೆ. ಭ್ರಷ್ಟಾಚಾರ ನಿಗ್ರಹ ದಳವು ಬಹಿರಂಗ ಪಡಿಸಿರುವ ವರದಿಯಂತೆ ಹೀಗೆ ಕಂತುಗಳಲ್ಲಿ ಲಂಚ ಪಡೆಯುವ ಪ್ರವೃತ್ತಿ ಹೆಚ್ಚುತ್ತಿದೆಯಂತೆ. ಸರ್ಕಾರಿ ಯೋಜನೆಗಳನ್ನು ಪಡೆಯಲು ಬಯಸುವ ಬಡಜನರಿಗೆ ಅನುಕಂಪದ ಆಧಾರದಲ್ಲಿ ಕಂತುಗಳ ವ್ಯವಸ್ಥೆಗೆ ಅಧಿಕಾರಿಗಳು ಒಪ್ಪುತ್ತಾರಂತೆ. ಇದು ಗುಜರಾತ್ ರಾಜ್ಯದಲ್ಲಷ್ಟೇ ಅಲ್ಲ, ಭಾರತದ ಬೇರೆಡೆಗಳಲ್ಲೂ ಇರುವ ಸಾಧ್ಯತೆ ಇದೆ. ಏನಿದ್ದರೂ ಲಂಚದ ವಿನಃ ಸರಕಾರಿ ಯೋಜನೆ ಹಾಗೂ ಸೌಲಭ್ಯಗಳು ಬಡಜನರಿಗೆ ತಲುಪದಂತೆ ಅಧಿಕಾರಿಗಳು ಅಡ್ಡಗಾಲಿಡುತ್ತಾರೆಂಬುದು ಖೇದಕರ ವಿಷಯ. ಇಂಥದ್ದು ನಡೆದಾಗಲೇ ಭಾರತವು ಲಂಚ ಮುಕ್ತವಾಗುವುದು ಯಾವಾಗ ಎಂಬ ಪ್ರಶ್ನೆ ಮೂಡುತ್ತದೆ.
2019 ರಲ್ಲಿ ನಿಚ್ಚಳ ಬಹುಮತ ಹೊಂದಿದ್ದ ಬಿ.ಜೆ.ಪಿ. ಪಕ್ಷದ ನಾಯಕನಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಮೋದಿಯವರು ಎರಡನೇ ಬಾರಿ ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಇದು ಸಾಧ್ಯವೇನೋ ಅನ್ನಿಸಿತ್ತು. ಆದರೆ ನಿರೀಕ್ಷೆ ಹುಸಿಯಾಯಿತು. “ನಾನು ತಿನ್ನುವುದಿಲ್ಲ ಮತ್ತು ಯಾರಿಗೂ ಬಿಡುವುದೂ ಇಲ್ಲ” ಎಂಬ ಮೋದಿಯವರ ಘೋಷಣೆಯನ್ನು ಕೇಳಿದ ಮೊದಲಲ್ಲಿ ಅವರ ಪ್ರತಿಜ್ಞೆ ನಿಜವಾಗುತ್ತದೇನೋ ಎಂಬ ಊಹೆ ಉಂಟಾಗಿತ್ತು. ಕೆಲವೊಂದು ಇಲಾಖೆಗಳಲ್ಲಿ ಕೆಲಸಗಳು ಲಂಚವಿಲ್ಲದೆ ಸಲೀಸಾಗಿ ಆಗುತ್ತಿರುವುದರ ಅನುಭವವೂ ಆಯಿತು. “ಇದು ಮೋದಿ ಇಫೆಕ್ಟ್” ಎಂಬ ಮಾತುಗಳೂ ಕೇಳಿಸಿದುವು. ಹಾಗೆಯೇ ನಡೆದಿದ್ದರೆ ಇಷ್ಟರಲ್ಲೇ ಸಾಕಷ್ಟು ಪ್ರಗತಿಯಾಗುತ್ತಿತ್ತು. ಜನಸಾಮಾನ್ಯರು ನಿರುಮ್ಮಳವಾಗಿ ಸರಕಾರಿ ಖಚೇರಿಗಳಿಗೆ ಬರುತ್ತಿದ್ದರು. ಆದರೆ ಕೆಲವೇ ದಿನಗಳಲ್ಲಿ ಈ ಇಫೆಕ್ಟ್ ಮರೆಯಾದದ್ದರ ದೃಶ್ಯಗಳೂ ಕಾಣಿಸತೊಡಗಿದುವು. “ಕೊಡುವುದಾದರೆ ಕೊಡಿ, ನಾವೇನೂ ಕೇಳುವುದಿಲ್ಲ, ನೀವು ಕೊಡದಿದ್ದರೆ ಪರವಾಗಿಲ್ಲ, ಕೆಲಸ ಆಗುತ್ತದೆ” ಎಂಬ ಸೂಚನೆಗಳು ಸಿಗತೊಡಗಿದುವು. ಅದೂ ಕೆಲವೇ ದಿನಗಳ ವಿದ್ಯಮಾನವಾಗಿ ಕಳೆದು ಹೋಯಿತು. ಕಚೇರಿಯ ಕೆಲಸಗಳು ಕ್ಲಪ್ತ ಕಾಲದಲ್ಲಿ ಆಗಬೇಕಿದ್ದರೆ ಕೊಡುವುದೇ ಒಳ್ಳೆಯದೆಂಬ “ಸುಜ್ಞಾನ?” ಪಸರಿಸತೊಡಗಿತು. ಕೊಡದಿದ್ದರೆ ಕೆಲಸ ತಡವಾಗಿ ಆಗುವ ನಷ್ಟಕ್ಕಿಂತ ಲಂಚ ಕೊಟ್ಟು ತಕ್ಷಣ ಕೆಲಸ ಮಾಡಿಸಿಕೊಂಡರೆ ಸಿಕ್ಕುವ ಲಾಭ ಹೆಚ್ಚು ಎಂಬ ಸತ್ಯದ ಅರಿವಾಯಿತು.
ಲಂಚ ಪಡೆಯುತ್ತಿದ್ದಾಗಲೇ ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ಸಿಕ್ಕಿ ಬೀಳುವುದು, ಬೆಳ್ಳಂಬೆಳಗ್ಗೆ ಇ.ಡಿ. ಅಥವಾ ಸಿ.ಐ.ಡಿ. ಅಧಿಕಾರಿಗಳು ದೊಡ್ಡ ಕುಳಗಳ ಮನೆಗಳನ್ನು ಜಪ್ತಿ ಮಾಡಿ ಕೋಟಿಗಟ್ಟಲೆ ನಗದು ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಿ “ತಿಮಿಂಗಿಲಗಳೇ ಬಲೆಗೆ ಬಿದ್ದ” ವರದಿಗಳು ಕೇಳಿ ಬರುವುದು, ಸದ್ಯವೇ ಮುಗಿದಿರುವ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ “ಓಟಿಗಾಗಿ ನೋಟು” ಹಂಚಿಕೆಗಾಗಿ ಹೊರಟಿದ್ದ ಹಣದ ಸಾಗಾಟವನ್ನು ತಡೆದು ಹತ್ತು ಕೋಟಿಗೂ
ಹೆಚ್ಚು ಮೊತ್ತವನ್ನು ಪೊಲೀಸರು ಸಂಗ್ರಹಿಸಿದ ಪ್ರಕರಣಗಳು ನಡೆದುವು. ಇವೆಲ್ಲ ಹೇಗಾದರೂ ಮಾಡಿ ಹಣ ಮಾಡುವುದೇ ಉದ್ದೇಶವಾಗಿ ಉಳ್ಳವರ ಅಪರಾಧಗಳು. ಕಂದಾಯ, ವಿದ್ಯುತ್, ಆರೋಗ್ಯ, ನಗರಸಭೆ, ಸಾರಿಗೆ, ಪೊಲೀಸ್, ಅರಣ್ಯ ಇತ್ಯಾದಿ ಸರಕಾರಿ ಇಲಾಖೆಗಳು ಒಮ್ಮೆ ಸ್ವಚ್ಛವಾದಂತಾಗಿ ಮತ್ತೆ ಲಂಚದ ಹಳಿಗೆ ಮರಳಿವೆ. ಅದೂ ಕೂಡಾ ಲಂಚದ ದರ ಹೆಚ್ಚಿರುವುದು ಕಂಡು ಬರುತ್ತದೆ. ಆಸ್ತಿ ರಿಜಿಸ್ಟ್ರೇಶನ್ ಇಲಾಖೆಯ ಅಧಿಕಾರಿಗಳು ಸಿಕ್ಕಿ ಬಿದ್ದ ಪ್ರಕರಣಗಳು ವರದಿಯಾದರೂ ಇನ್ನುಳಿದ ಕಡೆಗಳಲ್ಲಿ ಅವರ ಕಚೇರಿಗಳ ನೌಕರರು ತಮ್ಮ ಚಾಳಿಯನ್ನು ಮುಂದುವರಿಸುತ್ತಲೇ ಇದ್ದಾರೆ. ಅವರು
ದಾರಿಗೆ ಬಂದದ್ದು ಕಾಣುವುದಿಲ್ಲ. ಇನ್ನು ಹೊರಗುತ್ತಿಗೆದಾರರಿಗೆ ಕಮಿಷನ್ ಕೊಟ್ಟೇ ನೌಕರಿ ಪಡೆದು ಸರಕಾರಿ ಕಚೇರಿಗಳಲ್ಲಿ ದುಡಿಯುತ್ತಿರುವ ದಿನಕೂಲಿ ನೌಕರರು ಕೂಡಾ ಲಂಚದ ಜಾಲಕ್ಕೆ ಮರುಳಾಗಿರುವುದರಲ್ಲಿ ಅಚ್ಚರಿ ಇಲ್ಲ. ಜನರಿಗೆ ಉಚಿತ ಗ್ಯಾರಂಟಿಗಳು ಮತಬೇಟೆಗಾಗಿ ಹೂಡಿದ ಲಂಚದ ಬಾಣಗಳೇ ಆಗಿರುವಾಗ ಮತ್ತು ಜನರು ಅವನ್ನು ಸ್ವೀಕರಿಸಿರುವಾಗ ಸಮಾಜದಲ್ಲಿಯೂ ಲಂಚ ವಿರೋಧೀ ಮನೋಧರ್ಮ ದುರ್ಬಲವಾಗುತ್ತ ಸಾಗುತ್ತಿದ್ದು ಭಾರತವು ಲಂಚ ಮುಕ್ತ ರಾಷ್ಟ್ರವಾಗುವತ್ತ ಸಾಗುವುದು ಕನಸಿನ ಮಾತು ಎನ್ನಿಸುತ್ತದೆ. ಅದು ಸಾಧ್ಯವಿಲ್ಲದ ಸಂಗತಿ ಎಂಬ ಚಿತ್ರಣವೇ
ಗೋಚರಿಸುತ್ತದೆ.
ಪ್ರಾಯಶಃ ಈ ಪ್ರಶ್ನೆಗೆ ಗುಣಾತ್ಮಕ ಉತ್ತರ ಸಿಗಲಾರದು. ಏಕೆಂದರೆ ನಮ್ಮ ಹೊಸ ತಲೆಮಾರಿನವರಿಗೆ ಲಂಚವನ್ನು ಕೊಡುವುದಾಗಲೀ ಪಡೆಯುವುದಾಗಲೀ ನಾವು ಅಂದುಕೊಂಡಷ್ಟು ಅಸಹ್ಯವಲ್ಲ. ನನ್ನಂತಹ ಹಳೆಯ ತಲೆಮಾರಿನವರ ಮೌಲ್ಯಗಳು ಅವರಿಗೆ ಹಿಡಿಸುವುದಿಲ್ಲ. ಅವರ ಪ್ರಕಾರ ಲಂಚ ಕೊಡದೆ ಇರುವುದೆಂದರೆ ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಹಾಕಿಕೊಂಡಂತೆ. ಇಂದು ಲಂಚ ಭ್ರಷ್ಟಾಚಾರದ ವಿರುದ್ಧ ಮಾತಾಡುವ ಪ್ರಸಿದ್ಧ ಯಶಸ್ವಿ ವ್ಯಕ್ತಿಗಳು ಕೂಡಾ ಸ್ವತಃ ಲಂಚ
ಕೊಟ್ಟಿರುವುದಿಲ್ಲ ಎಂಬುದಷ್ಟೇ ಅವರ ಸಜ್ಜನಿಕೆ. ಉಳಿದಂತೆ ಅವರ ಉದ್ಯಮದ ಕಡೆಯಿಂದ ಲಂಚ ಕೊಡುವ ಸಿಬ್ಬಂದಿಯೇ ನೇಮಿಸಲ್ಪಟ್ಟಿರುತ್ತಾರೆ. ಹಾಗಾಗಿ ಅವರ ಕೆಲಸಗಳು ಆಗುತ್ತವೆ. ಅವರ ಮಾತನ್ನು ನಂಬಿ ವ್ಯವಸ್ಥೆಯ ವಿರುದ್ಧ ಹೋರಾಟಕ್ಕಿಳಿದವರು ಸೋಲುತ್ತಾರೆ. ನನ್ನ ವಿದ್ಯಾರ್ಥಿಯೊಬ್ಬ ಹೊಸತಾಗಿ ಉದ್ಯಮವನ್ನು ಸ್ಥಾಪಿಸಿ ಯಶಸ್ವಿಯಾದವನು ಮುಕ್ತವಾಗಿಯೇ ಮೇಲಿನ ಮಾತನ್ನು ಹೇಳಿದ. ಅಲ್ಲದೆ ಆತ ತನ್ನ ವ್ಯವಹಾರದ ಕ್ರಮವನ್ನು ವಿವರಿಸಿದ. “ಸರ್, ನಾನು ಐನೂರು ರೂಪಾಯಿ ನೋಟನ್ನು ಅಧಿಕಾರಿಯ ಮೇಜಿನ ಮೇಲೆ ಇಟ್ಟೇ ಮಾತುಕತೆ ನಡೆಸುವುದು. ಹೆಚ್ಚು ಮಾತಾಡಬೇಕಾಗಿ ಬರುವುದೇ ಇಲ್ಲ. ಕೆಲಸ ಬೇಗ ಆಗುತ್ತದೆ. ನಿಮ್ಮ ಐಡಿಯಾಲಜಿಯನ್ನು ಗೌರವಿಸುತ್ತೇನೆ ಸರ್. ಆದ್ರೆ ನನ್ನ ಯಶಸ್ಸಿಗೆ
ಇದು ಬಿಟ್ಟು ಬೇರೆ ದಾರಿ ಇಲ್ಲ. ನೀವು ಕಲಿಸಿದ ಪ್ರಾಮಾಣಿಕತೆಯನ್ನು ನಾನು ನನ್ನ ಗಿರಾಕಿಗಳೊಂದಿಗೆ ಕಾಪಾಡುತ್ತೇನೆ. ಆದರೆ ನನಗೆ ಸರಕಾರದ ಕಡೆಯಿಂದ ಆಗಬೇಕಾದ ಕೆಲಸಕ್ಕೆ ಪ್ರಾಮಾಣಿಕತೆ ಎಂತ ಕುಳಿತರೆ ನಾನು ಗಿರಾಕಿಗಳನ್ನು ವಂಚಿಸಬೇಕಾಗುತ್ತದೆ. ಹಾಗಾಗಿ ಇಂದಿನ ದಿನಗಳಲ್ಲಿ ಲಂಚ ಅನಿವಾರ್ಯ ಸರ್” ಎಂದು ಕಡ್ಡಿ ಮುರಿದಂತೆ ಹೇಳಿದ.
ಅಂತಾರಾಷ್ಟ್ರೀಯವಾಗಿ ಭ್ರಷ್ಟಾಚಾರದ ಅಧ್ಯಯನ ನಡೆಸುವ Transparency International ಎಂಬ ಸಂಸ್ಥೆ ಇದೆ. ಅದರ Corruption Perception Index ಪ್ರಕಾರ ಸಂಪೂರ್ಣ ಭ್ರಷ್ಟಾಚಾರ ಮುಕ್ತ ದೇಶ ಎಂಬುದಿಲ್ಲ. 2023 ರ ಅಧ್ಯಯನದಲ್ಲಿ ಕಂಡುಬಂದಂತೆ ಡೆನ್ಮಾರ್ಕ್ 90 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ ಫಿನ್ಲೇಂಡ್ ಮತ್ತು ನ್ಯೂಜಿಲೇಂಡ್ 2ನೇ
ಮತ್ತು 3ನೇ ಸ್ಥಾನಗಳಲ್ಲಿವೆ. ಇವುಗಳೊಂದಿಗೆ ನಾರ್ವೆ, ಸಿಂಗಾಪೂರ್ ಮತ್ತು ಸ್ವೀಡನ್ ದೇಶಗಳಲ್ಲೂ ಭ್ರಷ್ಟಾಚಾರ ಕನಿಷ್ಟ ಮಟ್ಟದಲ್ಲಿದೆ. ಆದರೆ ಭಾರತವು 39 ಅಂಕಗಳೊಂದಿಗೆ 93ನೇ ಸ್ಥಾನದಲ್ಲಿದೆ. ಇದು ಮೇಲೇಳುವುದು ಸುಲಭವಿಲ್ಲ. ನಮ್ಮ ದೇಶದಲ್ಲಿ ಖಾಸಗಿ ಸಂಸ್ಥೆಗಳಲ್ಲಿಯೂ, ಆಸ್ಪತ್ರೆಗಳಲ್ಲಿಯೂ, ದೇವಾಲಯಗಳಲ್ಲಿಯೂ, ಮಸೀದಿಗಳಲ್ಲಿಯೂ, ಚರ್ಚ್ ಗಳಲ್ಲಿಯೂ, ಸರ್ಕಾರೇತರ ಸಂಸ್ಥೆಗಳಲ್ಲಿಯೂ, ಪರೀಕ್ಷಾ ಪ್ರಾಧಿಕಾರಗಳಲ್ಲಿಯೂ ಸ್ವಂತಕ್ಕಾಗಿ ಹಣ ಹೊಡೆಯುವ ಪ್ರಕರಣಗಳು ನಡೆಯುತ್ತವೆಂಬುದು ಮುಕ್ತ ಸತ್ಯ. ವ್ಯಕ್ತಿತ್ವದಲ್ಲಿ ಹಣವೇ ಮುಖ್ಯವಾಗಿ ಆತ್ಮನಿರ್ಭರತೆ ಬದಿಗೆ ಸರಿದಿರುವ ಭಾರತೀಯರು ಲಂಚದ ಕೆಸರನ್ನು ತೊಳೆದು ಶುದ್ಧರಾಗುವುದು ಹೇಗೆ? ಬದುಕಿನ ತಾತ್ವಿಕ ಚಿಂತನೆಯು “ಸರ್ವೇಪಿ
ಸುಖಿನಃ ಸಂತು, ಸರ್ವೇ ಸಂತು ನಿರಾಮಯಾ, ಸರ್ವೇ ಭದ್ರಾಣಿ ಪಶ್ಯಂತು” ಎಂತಾದರೆ ಮಾತ್ರ ಸಾಧ್ಯವಾದೀತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…