ಪಂಜಾಬ್ ರೈತರನ್ನು ಈ ಪರಿ ಕ್ರುದ್ಧವಾಗಿಸಿರುವುದರ ಹಿಂದಿನ ಕಾರಣ ಹಸಿರು ಕ್ರಾಂತಿಯಾ…?

February 24, 2024
2:04 PM
ಪಂಜಾಬಿನ ರೈತರನ್ನು ಸಮಾಧಾನಿಸುವುದಕ್ಕೆ ಆಗದೇ ಇರುವುದಕ್ಕೆ ಮುಖ್ಯ ಕಾರಣ ಹಸಿರು ಕ್ರಾಂತಿಯೇ..? ಹೀಗೊಂದು ಪ್ರಶ್ನೆಯೊಂದಿಗೆ ವಿವರಣಾತ್ಕಕ ಬರಹವನ್ನು ಬರೆದಿದ್ದಾರೆ ಚೈತನ್ಯ ಹೆಗಡೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ...

ನೀವು ಸುದ್ದಿಸಂತೆಯನ್ನು ತಲೆಯೆತ್ತಿ ನೋಡಿದರೆ ಪಂಜಾಬ್-ಹರ್ಯಾಣ(Punjab-Hariyana) ಗಡಿಯಲ್ಲಿ ರೈತರ ಗದ್ದಲವೇ ದೊಡ್ಡ ಸದ್ದು. ನಿರ್ದಿಷ್ಟ ಬೆಳೆಗಳಿಗೆ ಐದು ವರ್ಷಗಳವರೆಗೆ ಎಂ ಎಸ್ ಪಿ(MSP) ಖಾತ್ರಿ ಮಾಡುತ್ತೇವೆ ಅಂತ ಸರ್ಕಾರ(Govt) ಹೇಳಿದರೂ, ಅವೆಷ್ಟೇ ಮಾತುಕತೆಗಳ ಪ್ರಯತ್ನ ನಡೆದರೂ ಪ್ರತಿಭಟನಾಕಾರರ(Protest) ತೀವ್ರತೆ ತಗ್ಗಿಲ್ಲ. ಲೋಕಸಭೆ ಚುನಾವಣೆ(Lokasabha Election) ಎದುರಿಗೆ ಇದೊಂದು ರಾಜಕೀಯದ ಭಾಗವೆಂದು ವಾದಿಸುವುದಕ್ಕೆ ಜಾಗವಿದೆ. ಪಂಜಾಬ್ ರೈತವಲಯವನ್ನು ತಮ್ಮ ಉಡದ ಪಟ್ಟಿನಲ್ಲಿ ಹಿಡಿದಿರುವ ಮಧ್ಯವರ್ತಿಗಳು ಹಾಗೂ ಸಾಲದ ಬಡ್ಡಿ ವ್ಯವಹಾರದವರ ಹಿತಾಸಕ್ತಿ ಇದರಲ್ಲಿ ಎಷ್ಟಿದೆ ಎಂದು ಈ ಹಿಂದಿನ ಪೋಸ್ಟ್ ಒಂದರಲ್ಲಿ ವಿವರಿಸಲಾಗಿತ್ತು.

Advertisement

ಅವೆಲ್ಲವೂ ಹೌದು. ಆದರೆ, ಅದರ ಜತೆ-ಜತೆಯಲ್ಲಿಯೇ ಪಂಜಾಬ್- ಹರ್ಯಾಣಗಳ ರೈತರೇಕೆ ಸರ್ಕಾರವನ್ನು ಮೆತ್ತಗಾಗಿಸುವಲ್ಲಿ ಇಷ್ಟು ಧಾಡಸಿ? ಇದನ್ನೇ ಇನ್ನೊಂದು ಆಯಾಮದಲ್ಲಿ ಕೇಳುವುದಾದರೆ, ದೇಶದ ಉಳಿದೆಲ್ಲ ಭಾಗದ ರೈತರಿಗಿಂತ ಪಂಜಾಬಿನ ರೈತರ ಹತಾಶೆ ಮತ್ತು ಆಕ್ರೋಶಗಳು ಬಹಳವೇ ಅಧಿಕ ಏಕೆ? ಇಲ್ಲಿರುವ ಎಲ್ಲ ರಾಜಕೀಯದ ಆಟಗಳ ಹೊರತಾಗಿಯೂ ಅಲ್ಲಿನ ಒಬ್ಬ ಸಾಮಾನ್ಯ ರೈತನಿಗೆ ಕೃಷಿ ಏಕೆ ಆ ಪರಿ ಹತಾಶೆ ತಂದಿಟ್ಟಿದೆ?

ಈ ಎಲ್ಲ ಪ್ರಶ್ನೆಗಳ ಹಿನ್ನೆಲೆಯಲ್ಲಿ ಪಂಜಾಬ್ ರೈತನ ಸೈಕಿ ಅಥವಾ ಮನೋ ಹಂದರ ಅರ್ಥಮಾಡಿಕೊಳ್ಳುವುದಾದರೆ, ಒಂದು ಪದಪುಂಜದ ಬೆನ್ನು ಹತ್ತಬೇಕು. ಅದುವೇ- ಗ್ರೀನ್ ರೆವಲ್ಯೂಷನ್. ಹಸಿರು ಕ್ರಾಂತಿ. 1960-70ರಲ್ಲಿ ಬಂದ ಹಸಿರು ಕ್ರಾಂತಿ ಮುಂಚೂಣಿಯಲ್ಲಿ ಅನುಷ್ಠಾನವಾಗಿದ್ದು ಪಂಜಾಬಿನಲ್ಲಿಯೇ. ಹಸಿರು ಕ್ರಾಂತಿಯ ಬಗ್ಗೆ ಇವತ್ತಿನ ಟೀಕೆಗಳು ಏನೇ ಇದ್ದಿರಲಿ, ಅಮೆರಿಕದಿಂದ ರೇಷನ್ ಬೇಡಿಕೊಂಡಿದ್ದ ಅವತ್ತಿನ ಕಾಲದಲ್ಲಿ ನಿಂತು ಯೋಚಿಸಿದಾಗ, ಗೋದಿ ಮತ್ತು ಅಕ್ಕಿಗಳಲ್ಲಿ ಪ್ರಮುಖವಾಗಿ ಆದ ಉತ್ಪಾದನೆಯ ಹೆಚ್ಚಳದ ಕ್ರಾಂತಿಯು ಭಾರತಕ್ಕೆ ಆಹಾರ ಭದ್ರತೆಯನ್ನು ಒದಗಿಸಿಕೊಟ್ಟಿತೆಂಬುದನ್ನು ಅಲ್ಲಗಳೆಯಲಾಗುವುದಿಲ್ಲ.

ಅದೇಕೆ ಪಂಜಾಬ್ ರೈತರು ತಾವು ಮಾತ್ರವೇ ದೇಶದ ಅನ್ನದಾತರೆಂಬಂತೆ ಆಡುತ್ತಾರೆ ಎಂದೇನಾದರೂ ನಿಮ್ಮಲ್ಲಿ ಪ್ರಶ್ನೆ ಹುಟ್ಟಿದ್ದರೆ ಅದರ ಹಿಂದಿರುವುದು ಈ ಸೈಕಿ. ಹೌದು, ಹಸಿರು ಕ್ರಾಂತಿಯಲ್ಲಿ ದೇಶದ ಹೊಟ್ಟೆ ತುಂಬಿಸಿದ್ದು ನಾವೇ ಎಂಬ ಇಗೋ ಅವರಲ್ಲಿದೆ. ತುಸುಮಟ್ಟಿಗೆ ಆ ಶ್ರೇಯಸ್ಸು ಅವರಿಗೆ ಸಲ್ಲಬೇಕಾದದ್ದೇ.

ಅವತ್ತಿಗೆ ಹಸಿರು ಕ್ರಾಂತಿ ಸರಿ ಇತ್ತು ಎಂಬ ಮಾತನ್ನು ಮೊದಲೇ ಹೇಳಲಾಯಿತಷ್ಟೆ. ಆದರೆ, ಅದೇ ಸೂತ್ರ ಹಿಡಿದುಕೊಂಡಿರುವುದು ಇವತ್ತಿಗೆ ಅಪ್ರಸ್ತುತ ಮಾತ್ರವಲ್ಲ, ಪಂಜಾಬಿನ ರೈತರನ್ನು ಹತಾಶವಾಗಿಸುತ್ತಿರುವುದು ಈ ಹಸಿರು ಕ್ರಾಂತಿ ಮನಸ್ಥಿತಿಯೇ. ಅವರ ಭೂಮಿಗೆ ಒಳಸುರಿಯ ವೆಚ್ಚ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಪರಿಣಾಮವಾಗಿ, ಆದಾಯ ಕ್ಷೀಣಿಸಿ ಸಾಲದ ಸುಳಿ. ಈ ಸಾಲದ ಸುಳಿಯನ್ನು ಉಪಯೋಗಿಸಿಕೊಂಡು ಆಧುನಿಕ ಜೀತಕ್ಕೆ ಅಲ್ಲಿನ ರೈತರನ್ನು ಒಗ್ಗಿಸಿರುವ ಅರ್ತಿಯಾಗಳ ಬಗ್ಗೆ ಈ ಹಿಂದೆ ಬರೆಯಲಾಗಿದೆ, ಅದು ಭಿನ್ನ ಅಧ್ಯಾಯ.

ಹಸಿರು ಕ್ರಾಂತಿಯು ಹೆಚ್ಚುವರಿ ಇಳುವರಿ ಕೊಡುವ ಗೋದಿ ಬೀಜಗಳನ್ನು ಪಂಜಾಬಿಗೆ ಪರಿಚಯಿಸಿತು. ಆದರೆ, ಹಸಿರು ಕ್ರಾಂತಿಯ ಅಧ್ಯಾಯ ಕೇವಲ ಹೈ ಯೀಲ್ಡಿಂಗ್ ವೆರೈಟಿ ಬೀಜಗಳ ಮೇಲಷ್ಟೇ ಆಗಿರಲಿಲ್ಲ. ಜತೆಗೆ ಬಂದವು ಕೀಟನಾಶಕಗಳು, ರಾಸಾಯನಿಕ ರಸಗೊಬ್ಬರಗಳು. ಇವೆಲ್ಲ ಬೇಡವೇ ಬೇಡ ಎಂದು ವಾದಿಸುವ ಸ್ಥಿತಿ ಅವತ್ತೇಕೆ, ಇವತ್ತಿಗೂ ಇಲ್ಲ. ಆದರೆ ಅವು ಕೊರತೆ ತುಂಬಬೇಕಾದ ಔಷಧಗಳಾಗಬೇಕಿತ್ತು, ಬದಲಿಗೆ ಭೂಮಿಗೆ ಅದನ್ನೇ ಊಟವಾಗಿಸಿಬಿಟ್ಟರು ರೈತರು.

ಈ ಅತಿ ರಸಗೊಬ್ಬರ ಮತ್ತು ರಾಸಾಯನಿಕಗಳ ಬಳಕೆ ಎಂಬುದು ದೇಶದ ಎಲ್ಲ ಭಾಗಗಳಲ್ಲೂ ಸಮಸ್ಯೆಯೇ. ಆದರೆ, ಪಂಜಾಬಿನಲ್ಲಿ ಇದರ ಪ್ರಮಾಣವನ್ನು ಗಮನಿಸಿದ್ದೇ ಆದರೆ ಹೌಹಾರುವುದು ಖಚಿತ. 2015ರಲ್ಲಿ ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಸಂಸದೀಯ ಸಮಿತಿ ವರದಿಯೊಂದು ಉಲ್ಲೇಖಿಸಿರುವ ಅಂಶಗಳು ಹೀಗಿವೆ-

ಎನ್ ಪಿ ಕೆ- ನೈಟ್ರೊಜನ್, ಪ್ರಾಸ್ಫರಸ್, ಪೊಟಾಶಿಯಂ. ಇವು 4:2:1 ರ ಅನುಪಾತದಲ್ಲಿರಬೇಕೆಂಬುದು ಅಪೇಕ್ಷಣೀಯ ಲೆಕ್ಕ. ಬಿಡಿ, ಹೆಚ್ಚು ಹಾಕಿದರೆ ಹೆಚ್ಚು ಫಸಲೆಂಬ ಭ್ರಮೆಗೆ ಬಿದ್ದು ಎಲ್ಲ ರೈತರೂ ಹೆಚ್ಚಾಗಿಯೇ ಉಪಯೋಗಿಸುತ್ತಾರಾದ್ದರಿಂದ ರಾಷ್ಟ್ರೀಯ ಸರಾಸರಿ ಈ ನಿಟ್ಟಿನಲ್ಲಿ 7:3:1. ಆದರೆ, ಪಂಜಾಬ್ ಇದನ್ನು ಹೇಗೆ ಬಳಸುತ್ತಿದೆ ಗೊತ್ತೇ? 39:9:1 ರ ಅನುಪಾತದಲ್ಲಿ! ಬತ್ತ ಬೆಳೆಯೋದಕ್ಕೆ ದೇಶದ ಇತರ ಭಾಗಗಳ ರೈತ ಸರಾಸರಿ ಎಕರೆಗೆ 10 ಕೆಜಿ ರಸಗೊಬ್ಬರ ಬಳಸಿದರೆ, ಪಂಜಾಬಿನ ರೈತ 75ರಿಂದ 100 ಕೆಜಿ ಚೆಲ್ಲುತ್ತಾನೆ ಎನ್ನುತ್ತದೆ ‘ಡೌನ್ ಟು ಅರ್ಥ್’ ನಿಯತಕಾಲಿಕದ ಒಂದು ಲೇಖನ!

ಈ ಅತಿ ಬಳಕೆ ಹೇಗೆಲ್ಲ ಆರೋಗ್ಯದ ಸವಾಲುಗಳನ್ನು ಒಡ್ಡಿದೆ, ಭೂಮಿಯ ಇತರ ಜೀವಪೋಷಕಗಳನ್ನು ಕೊಲ್ಲುವ ಮೂಲಕ ಹೇಗೆ ಕೃಷಿಯನ್ನು ದುಬಾರಿಯಾಗಿಸಿದೆ ಎಂಬುದರ ಕುರಿತೆಲ್ಲ ಸಾಕಷ್ಟು ವೈಜ್ಞಾನಿಕ ವರದಿಗಳು ಲಭ್ಯ ಇವೆ. ಇನ್ನೊಂದೆಡೆ ಈ ನೈಟ್ರೊಜನ್ ಇತ್ಯಾದಿ ರಾಸಾಯನಿಕಗಳಿಗೆ ಭಾರತವು ಆಮದು ಅವಲಂಬನೆ ಹೊಂದಿದೆ. ಅಮೆರಿಕ, ರಷ್ಯ, ಉಕ್ರೇನ್, ಇರಾನ್, ಚೀನಾ ಸೇರಿದಂತೆ ಹಲವು ದೇಶಗಳ ಮೇಲೆ ಅವಲಂಬನೆ ಇದೆ. ಉಕ್ರೇನ್ ಯುದ್ಧಗ್ರಸ್ಥವಾಗಿರುವ ಸ್ಥಿತಿಯಲ್ಲಿ ರಸಗೊಬ್ಬರಗಳ ಪೂರೈಕೆ ಬಿಗಡಾಯಿಸಿ ದರ ಹೆಚ್ಚಾಗಿದೆ. ಇವ್ಯಾವುದನ್ನೂ ಯಾವುದೇ ಸರ್ಕಾರ ರೈತರ ಮೇಲೆ ಹೇರಿ ಅಧಿಕಾರ ಕಳೆದುಕೊಳ್ಳದು. ಹಾಗೆಂದೇ ಲಕ್ಷ ಕೋಟಿ ರುಪಾಯಿಗಳ ಲೆಕ್ಕದಲ್ಲಿ ತೆರಿಗೆ ಹಣವನ್ನು ಸಬ್ಸಿಡಿಗೆ ವ್ಯಯಿಸಲಾಗುತ್ತಿದೆ.

ಪಂಜಾಬಿನ ಮಾಲ್ವಾ ಪ್ರಾಂತ್ಯವು ಅತಿಯಾದ ಕ್ಯಾನ್ಸರ್ ಪಿಡುಗಿನಿಂದ ಅಪಖ್ಯಾತಿ ಪಡೆದಿರುವ ಪ್ರದೇಶ. ಇಲ್ಲಿನ ಅಂತರ್ಜಲದಲ್ಲಿ ಯುರೇನಿಯಂ ಸೇರಿದಂತೆ ಹಲವು ಹಾನಿಕಾರಕ ಅಂಶಗಳು ಪತ್ತೆಯಾಗಿವೆ. ದಶಕಗಳಿಂದ ಪಂಜಾಬಿನಲ್ಲಿ ಕೃಷಿಗಾಗಿ ಅಡೆತಡೆಯಿಲ್ಲದೇ ಮಾಡುತ್ತ ಬಂದಿರುವ ಅಂತರ್ಜಲ ಬಳಕೆ ಇದಕ್ಕೆ ಕಾರಣವಿದ್ದಿರಬಹುದೆಂದು ಪ್ರಾಥಮಿಕ ಸಂಶೋಧನೆಗಳು ಬೊಟ್ಟು ಮಾಡುತ್ತಿವೆ. ನಿಜ. ಅನ್ನದಾತ ಎಂಬುದೊಂದು ತರ್ಕಕ್ಕೆ ಸಿಗದ ಭಾವನೆ. ನಮ್ಮೆಲ್ಲರಲ್ಲಿ, ಸರ್ಕಾರದ ಮಟ್ಟದಲ್ಲಿ ಅದು ಇರಬೇಕು. ಆಹಾರ ಬೆಳೆಯುವವರ ವಿಷಯಕ್ಕೆ ಬಂದಾಗ ಒಂದಿಷ್ಟು ಗ್ರೇಸ್ ಮಾರ್ಕ್ ಕೊಟ್ಟೇ ಮಾತನಾಡಬೇಕು, ಯೋಚಿಸಬೇಕು.

ಹಾಗೊಂದು ಭಾವನೆ ಇರಿಸಿಕೊಳ್ಳುತ್ತಲೇ, ದೆಹಲಿಯ ರಸ್ತೆಗಳಿಗೆ ಟ್ರಾಕ್ಟರ್ ನುಗ್ಗಿಸಿ ಕ್ರಾಂತಿ ಮಾಡುತ್ತೇವೆಂದು ಹೊರಟಿರುವ ಪಂಜಾಬಿನ ರೈತರಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಲೇಬೇಕಾಗುತ್ತದೆ.. ತಾಟಿನ ಮೇಲೆ ಚಪಾತಿ ಇಡುತ್ತಿರುವುದಕ್ಕೆ ಧನ್ಯವಾದ. ಹಾಗೆಂದು ಸರ್ಕಾರ ಮತ್ತು ಸಮಾಜ ರೈತರಿಗೆ ಏನೂ ಮಾಡಿಯೇ ಇಲ್ಲ ಎಂದು ಭಾವನಾತ್ಮಕತೆ ಬಡಿದೆಬ್ಬಿಸಬೇಡಿ… ಸಬ್ಸಿಡಿ ಹಣದಲ್ಲಿ ನೀವು ಮೊಗೆ ಮೊಗೆದು ಹಾಕುತ್ತಿರುವ ರಾಸಾಯನಿಕ ರಸಗೊಬ್ಬರದಲ್ಲಿ ದೇಶದ ಜನ ತೆರುತ್ತಿರುವ ಹೆಚ್ಚುವರಿ ಹಣವಿದೆ…ಏಕೆಂದರೆ, ವಿದೇಶದಿಂದ ದುಬಾರಿ ಬೆಲೆ ತೆತ್ತು ಸರ್ಕಾರಗಳು ಆಮದಾಗಿಸಿಕೊಳ್ಳುವುದಕ್ಕೆ ವ್ಯಯಿಸುತ್ತಿರುವುದು ತೆರಿಗೆದಾರರದ್ದೇ ಹಣ…

ಅತಿಯಾಗಿ ಸುರಿದ ರಸಗೊಬ್ಬರ, ಕೀಟನಾಶಕಗಳು ಜಲಮೂಲಗಳನ್ನು ಸೇರಿ ಮನುಷ್ಯನ ಉದರಕ್ಕೇ ಬರುತ್ತಿವೆ. ಹಾಗೆ ನೋಡಿದರೆ ಸಾಮಾನ್ಯರು ನಿಮಗೆ ತಮ್ಮ ಪ್ರಾಣದ ತೆರಿಗೆಯನ್ನೂ ತೆರುತ್ತಿದ್ದಾರೆ… ಬತ್ತ ಬೆಳೆದು ಮುಂದಿನ ಋತುವಿಗೆ ಗೋದಿ ಹಾಕುವುದಕ್ಕೆ ಸರಾಗವಾಗಲೆಂದು ಇಡೀ ಜಮೀನಿಗೆ ಬೆಂಕಿ ಹಚ್ಚುತ್ತೀರಿ. ಪ್ರತಿವರ್ಷ ಒಂದು ತಿಂಗಳು ದೆಹಲಿ ಉಸಿರಾಡುವುದಕ್ಕೆ ಕಷ್ಟಪಡುತ್ತದೆ. ಪಕ್ಕದ ಹರ್ಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಈ ಪದ್ಧತಿಯನ್ನು ಹತೋಟಿಗೆ ತಂದಿವೆ. ಆದರೆ ಹಸಿರು ಕ್ರಾಂತಿಯ ಹರಿಕಾರ ಎಂಬ ಅಹಮಿಕೆಯಲ್ಲಿರುವ ಪಂಜಾಬಿನ ರೈತರು ಮಾತ್ರ ಪ್ರತಿವರ್ಷ ಜಮೀನಿಗೆ ಬೆಂಕಿಕೊಟ್ಟು ಪಕ್ಕದವನು ಹೇಗಾದರೂ ಸಾಯಲಿ ಎಂಬಂತೆ ವರ್ತಿಸುತ್ತಿರುವುದು ಕಹಿಸತ್ಯ. ಸಂವೇದನೆ ಎರಡೂ ಕಡೆಯಿಂದ ಇರಬೇಕಲ್ಲವೇ?

60-70ರ ಆಹಾರ ಭದ್ರತೆಯ ಪರಿಕಲ್ಪನೆಯೇ ಬೇರೆ, ಇವತ್ತಿನದೇ ಬೇರೆ. ಇವತ್ತಿಗೆ ಭಾರತವು ಕಡಿಮೆ ನೀರಿನ ಅಗತ್ಯವಿರುವ ಸಿರಿಧಾನ್ಯಗಳನ್ನು ಬೆಳೆದು ಜಗತ್ತಿಗೆ ತಿನ್ನಿಸುವ, ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ತಲುಪಿರುವ ಬೇಳೆ ಮತ್ತು ಎಣ್ಣೆಕಾಳು ಬೆಳೆಗಳನ್ನು ಬೆಳೆದು ದೇಶದ ಪೋಷಕಾಂಶ ಭದ್ರತೆ ಗಟ್ಟಿಗೊಳಿಸಿಕೊಳ್ಳುವ ಪ್ರಯಾಸದ ಹಾದಿಯಲ್ಲಿ ಹತ್ತೆಂಟು ಹೆಜ್ಜೆ ಇಡುತ್ತಿದೆ.. ನಾವು ಬೆಳೆಯೋದೇ ಗೋದಿಯನ್ನು ಮತ್ತದಕ್ಕೆ ಇಂತಿಷ್ಟೇ ಬೆಲೆಕೊಟ್ಟು ತಿನ್ನಿ ಎಂಬಂತಿರುವ ಪಂಜಾಬಿನ ಆಗ್ರಹಕ್ಕೆ ಏನರ್ಥ?

ಹಸಿರುಕ್ರಾಂತಿಯ ಹೀರೋಗಿರಿ ಮನೋಭಾವದಿಂದ ಪಂಜಾಬನ್ನು ಹೊರತರದ ಹೊರತೂ, ಈ ಬಗ್ಗೆ ದೇಶದ ಇತರ ಭಾಗಗಳಲ್ಲಿ ಜನರ ಧ್ವನಿ ಏಳದ ಹೊರತೂ ಯಾವ ಸರ್ಕಾರಗಳೂ ಪಂಜಾಬಿನ ರೈತರನ್ನು ಸಮಾಧಾನಿಸುವುದಕ್ಕೆ ಆಗದೆನಿಸುತ್ತದೆ.

ಬರಹ
ಚೈತನ್ಯ ಹೆಗಡೆ

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು
April 10, 2025
9:58 AM
by: The Rural Mirror ಸುದ್ದಿಜಾಲ
ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |
April 10, 2025
8:13 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಗುಜ್ಜೆ ಕಡಲೆ ಗಸಿ
April 10, 2025
8:00 AM
by: ದಿವ್ಯ ಮಹೇಶ್
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ
April 10, 2025
7:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group