Advertisement
ಅನುಕ್ರಮ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

Share

ಒಂದು ಘಟನೆ ನಡೆಯುತ್ತದೆ. ಯಾರೋ ಅದನ್ನು ವಿವರಿಸುತ್ತಾರೆ. “ಇದು ಅನ್ಯಾಯ. ಇದಕ್ಕೆ ಧ್ವನಿ ಎತ್ತಬೇಕು. ಸುಮ್ಮನೆ ಇದ್ದರೆ ಆಗದು. ಇಡೀ ಸಮಾಜ ನಮ್ಮ ಜೊತೆಗಿದೆ…” ಎನ್ನುತ್ತಾರೆ.

ಆ ಮಾತು ಕೇಳಿದಾಗ ಸಹಜವಾಗಿಯೇ ಮನಸ್ಸು ಕದಲುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಇರುವವರು ಧ್ವನಿ ಎತ್ತುತ್ತಾರೆ. ಬರೆಯುವವರು ಬರೆಯುತ್ತಾರೆ. ಮಾತನಾಡುವವರು ಮಾತನಾಡುತ್ತಾರೆ. ಅನ್ಯಾಯದ ವಿರುದ್ಧ ನಿಲ್ಲಬೇಕು ಎಂಬ ಭಾವನೆಯಿಂದ ಮುಂದೆ ಬರುತ್ತಾರೆ.

ಆದರೆ…, ಅನೇಕರಿಗೆ ಮುಂದೆ ಹೋದ ಮೇಲೆ ಅದೇ ದಾರಿಯಲ್ಲಿ ಹಿಂದೆ ಬರಲು ಸಾಧ್ಯವಾಗದ ಸಂದರ್ಭ ಬಂದಾಗ, ಅಲ್ಲಿ ನಿಜವಾದ ತಿರುವು ಆರಂಭವಾಗುತ್ತದೆ. “ಇದು ಬೇಕಿತ್ತಾ” ಎಂದು ಅನಿಸಲು ಆರಂಭವಾಗುತ್ತದೆ. ಅವಕಾಶವಾದಿಗಳಿಗೆ ಇದು ಅನ್ವಯವಾಗದು. ಅಂತಹವರಿಗೂ ಇದೇ ಒಂದು ತಿರುವು ಕೂಡಾ..!

ಏಕೆಂದರೆ, ಸಮಸ್ಯೆಯನ್ನು ವಿವರಿಸಿದವನು ಬಹಳ ಸಲ ಅದೇ ಸಮಸ್ಯೆಯನ್ನೇ ಏಣಿಯನ್ನಾಗಿ ಮಾಡಿಕೊಂಡು ಮುಂದೆ ಹೋಗಿರುತ್ತಾನೆ. ಆ ಕ್ಷಣಕ್ಕೆ ವಿವಾದ ಬೇಕಾಗಿತ್ತು. ಚರ್ಚೆ ಬೇಕಾಗಿತ್ತು. ಯಾರಾದರೂ ವಿರೋಧಿಸಬೇಕಾಗಿತ್ತು. ಆಗಲೇ ಅವನಿಗೆ ಮುಂದಿನ ಮೆಟ್ಟಿಲು ಸಿಗುತ್ತಿತ್ತು. ಆ ಮೆಟ್ಟಿಲು ಏರಿ ಅವನು ಮುಂದೆ ಹೋಗಿಬಿಟ್ಟಿರುತ್ತಾನೆ. ಹಿಂದೆ ಉಳಿದವರು ಮಾತ್ರ, “ನಮ್ಮ ಜೊತೆ ಇರುತ್ತೇನೆ ಎಂದವನು ಎಲ್ಲಿದ್ದಾನೆ?” ಎಂದು ಹುಡುಕುತ್ತಿರುತ್ತಾರೆ. ಇಂತಹ ಸಂದರ್ಭ ಅರಿವಾಗುವುದು, ಜಗತ್ತು ಯಾವತ್ತೂ ನಮ್ಮ ಜೊತೆ ಇರುವುದಿಲ್ಲ. ಜಗತ್ತು ತನ್ನ ಅನುಕೂಲದ ಜೊತೆ ಇರುತ್ತದೆ.

ನಿನ್ನೆ ಸಮಸ್ಯೆಯ ಬಗ್ಗೆ ಮಾತನಾಡಲು ಕರೆ ಮಾಡಿದವನೇ ಇಂದು ಬರಹದ ಮೊದಲ ಸ್ಕ್ರೀನ್‌ಶಾಟ್ ಕಳುಹಿಸಬಹುದು. ನಿನ್ನೆ ಧ್ವನಿ ಎತ್ತಲು ಪ್ರೇರೇಪಿಸಿದವನೇ ಇಂದು ಮೊದಲ ವಾಯ್ಸ್‌ ರೆಕಾರ್ಡ್ ಕಳುಹಿಸಬಹುದು. ನಿನ್ನೆ “ನ್ಯಾಯಕ್ಕಾಗಿ ನಿಲ್ಲಬೇಕು” ಎಂದವನೇ ಇಂದು, “ಇವನೇ ನಮ್ಮ ವಿರೋಧಿ” ಎಂದು ತನ್ನ ಹಿತೈಷಿಯನ್ನೇ ಸಮಾಧಾನಪಡಿಸಬಹುದು. ಇದು ವಿಚಿತ್ರವಲ್ಲ, ಹೊಸತೂ ಅಲ್ಲ. ಸ್ವಾರ್ಥ ಹೆಚ್ಚಾದಂತೆ ಸಂಬಂಧಗಳ ಅರ್ಥವೂ ಬದಲಾಗುತ್ತದೆ. ಇದು ಸಮಾಜದಲ್ಲಷ್ಟೇ ಅಲ್ಲ. ನಮ್ಮ ಸುತ್ತಲೂ, ನಮ್ಮ ಕೆಲಸದಲ್ಲಿ, ನಮ್ಮ ಕುಟುಂಬದಲ್ಲೂ ಇಂತಹ ಸಣ್ಣ ಸಣ್ಣ ಘಟನೆಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ.

ಅನುಭವಗಳು ಸಾಕಷ್ಟು. ಕೆಲವು ಮಂದಿ ಒಂದು ಕೆಲಸವಾಗುವವರೆಗೆ ಪ್ರತಿದಿನ ಹಲವು ಬಾರಿ ಕರೆ ಮಾಡುತ್ತಾರೆ. ಹೊಗಳುತ್ತಾರೆ. ಇನ್ನೊಬ್ಬನನ್ನು ನಮ್ಮ ಮುಂದೆ ತುಚ್ಛವಾಗಿ ದೂರುವುದು ಕೂಡಾ ಇದೆ. ನಮ್ಮ ಅಗತ್ಯವನ್ನು ಅವರ ಅಗತ್ಯವನ್ನಾಗಿ ಮಾಡಿಕೊಳ್ಳುತ್ತಾರೆ. ಕೆಲಸ ಮುಗಿದ ಕೂಡಲೇ ಅವರ ಜಗತ್ತಿನಲ್ಲಿ ನಮ್ಮ ಅಗತ್ಯ ಮುಗಿದುಹೋಗುತ್ತದೆ. ಆಗ ಬೇಸರವಾಗುತ್ತದೆ. ನಿಜವಾಗಿ ನೋಡಿದರೆ, ತಪ್ಪು ಅವರದ್ದಷ್ಟೇ ಅಲ್ಲ. ಅವರಿಂದ  ಸ್ನೇಹವನ್ನು, ಸಂಬಂಧವನ್ನು ನಿರೀಕ್ಷಿಸಿದ್ದೇ ನಮ್ಮ ತಪ್ಪು. ಇದು ಎಷ್ಟು ಬೇಗ ಅರಿವಾಗುತ್ತದೋ, ಅಷ್ಟು ಕ್ಷೇಮ ಹಾಗೂ ನೆಮ್ಮದಿ.

ಸಾಮಾಜಿಕ ಕೆಲಸಕ್ಕೆ ಕಾಲಿಡುವ ಬಹುತೇಕ ಪ್ರತಿಯೊಬ್ಬರೂ ಆರಂಭದಲ್ಲಿ ಒಂದು ಕನಸು ಇಟ್ಟುಕೊಂಡಿರುತ್ತಾರೆ “ಈ ಸಮಾಜವನ್ನು ಬದಲಾಯಿಸಬೇಕು.” ಆ ಕನಸು ತಪ್ಪಲ್ಲ. ಆದರೆ ಸಮಾಜವನ್ನು ಬದಲಾಯಿಸುವ ಮುನ್ನ ಸಮಾಜದ ಸ್ವಭಾವವನ್ನು ಅರ್ಥಮಾಡಿಕೊಳ್ಳಬೇಕು. ಯಾವತ್ತೂ ಪ್ರಾಮಾಣಿಕತೆಗೆ  ಚಪ್ಪಾಳೆ ಸಿಗುವುದಿಲ್ಲ. ನ್ಯಾಯದ ಪರ ನಿಂತರೆ ಯಾವಾಗಲೂ ಜನ ಬೆಂಬಲಿಸುವುದಿಲ್ಲ. ಒಳ್ಳೆಯ ಕೆಲಸ ಮಾಡಿದರೆ ಎಲ್ಲರೂ ನೆನಪಿಟ್ಟುಕೊಳ್ಳುವುದಿಲ್ಲ. ನಮ್ಮ ಜೊತೆ ನಿಂತವರು ಎಲ್ಲರೂ ಕೊನೆಯವರೆಗೂ ಜೊತೆಯಾಗಿರುವುದಿಲ್ಲ. ಇದನ್ನು ಬೇಗ ಅರ್ಥಮಾಡಿಕೊಂಡರೆ ಬದುಕು ಸುಲಭವಾಗುತ್ತದೆ. ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ ಅನೇಕ ಸಲ ನಮ್ಮನ್ನು ತಪ್ಪು ದಾರಿಗೆ ಕರೆದೊಯ್ಯುತ್ತದೆ.

ನಮ್ಮ ಕೆಲಸವನ್ನು ಜನರ ಮೆಚ್ಚುಗೆಗಾಗಿ ಮಾಡುತ್ತಿದ್ದೇವೆಯೇ? ಅಥವಾ ನಮ್ಮ ಒಳಗಿನ ನಂಬಿಕೆಯ ಕಾರಣಕ್ಕಾಗಿ ಮಾಡುತ್ತಿದ್ದೇವೆಯೇ?  ಅಥವಾ ನಮ್ಮ ಖುಷಿ, ಮನಸ್ಸಿನ ಸಮಾಧಾನಕ್ಕಾಗಿ ಮಾಡಿದ್ದೇವೆಯೇ..?  ಈ ಪ್ರಶ್ನೆಗೆ ನಾವು ಕೊಡುವ ಉತ್ತರವೇ ನಮ್ಮ ಮುಂದಿನ ದಾರಿಯನ್ನು ನಿರ್ಧರಿಸುತ್ತದೆ. ಇದಕ್ಕಾಗಿ ನಮ್ಮ ಮಿತಿ ನಮಗೆ ಗೊತ್ತಿರಬೇಕು, ನಮ್ಮ ಸಾಮರ್ಥ್ಯ ನಮಗೆ ಗೊತ್ತಿರಬೇಕು, ನಮ್ಮ ದೌರ್ಬಲ್ಯವೂ ನಮಗೆ ಗೊತ್ತಿರಬೇಕು. ಯಾರ ಮೇಲೆ ಎಷ್ಟು ನಂಬಿಕೆ ಇಡಬೇಕು ಎಂಬ ವಿವೇಚನೆ ಇರಬೇಕು. ಯಾವ ಹಂತದಲ್ಲಿ ಮಾತನಾಡಬೇಕು, ಯಾವ ಹಂತದಲ್ಲಿ ಮೌನವಾಗಬೇಕು ಎಂಬ ಅರಿವು ಕೂಡಾ ಇರಬೇಕು. ಇದಿಷ್ಟೇ ಸೂತ್ರಗಳು.

ಎಲ್ಲಾ ಯುದ್ಧಗಳನ್ನೂ ಹೋರಾಡಬೇಕಿಲ್ಲ. ಕೆಲವು ಯುದ್ಧಗಳನ್ನು ಗೆಲ್ಲುವುದಕ್ಕಿಂತ, ಅವುಗಳಲ್ಲಿ ಸಿಲುಕಿಕೊಳ್ಳದೆ ಮುಂದೆ ಸಾಗುವುದೇ ಗೆಲುವು. ತುಂಬಾ ಸಲ ಹೇಳುವುದು ಕೇಳಿದ್ದೇವೆ. ಯಾವತ್ತೂ ಎಲ್ಲಾ ವಿಷಯಗಳಿಗೆ ಸ್ಪಂದಿಸುವ ವ್ಯಕ್ತಿ ಕೆಲವು ಸಲ ಮೌನವಾದಾಗ, ವಿವಾದಗಳ ವಿಷಯಗಳಿಗೆ ಮೌನವಾದಾಗ ,” ಅವ ಏಕೆ ಈಗ ಮಾತಾಡುವುದಿಲ್ಲ..?” ಎಂದು ಹೇಳುತ್ತಾರೆ. ಆದರೆ ಹೀಗೆ ಕೇಳುವ ವ್ಯಕ್ತಿ ಏಕೆ ಮಾತನಾಡುತ್ತಿಲ್ಲ ಎನ್ನುವುದನ್ನು ಆತ ಅವನಿಗೇ ಕೇಳಿಕೊಳ್ಳುವುದಿಲ್ಲ..!. ಇದಕ್ಕಾಗಿ ನಮ್ಮನ್ನು ಮುಂದೆ ಕರೆದೊಯ್ಯಲು ಬಳಸಿದ ಸಮಸ್ಯೆಯನ್ನು, ಮತ್ತೊಬ್ಬರು ಮುಂದೆ ಹೋಗಲು ಮತ್ತೆ ಬಳಸಬಹುದು. ಅದನ್ನು ವೈಯಕ್ತಿಕ ದ್ರೋಹವೆಂದುಕೊಂಡು ಅಲ್ಲೇ ನಿಂತುಬಿಟ್ಟರೆ ನಮ್ಮ ಹೆಜ್ಜೆಯೇ ನಿಲ್ಲುತ್ತದೆ.

ಆದ್ದರಿಂದ ಯಾರಾದರೂ ನಮ್ಮ ಜೊತೆ ಇದ್ದಾಗ ಅವರ ಜೊತೆ ನಡೆಯೋಣ. ಆದರೆ ಅವರು ಯಾವಾಗ ಬೇಕಾದರೂ ದಾರಿ ಬದಲಾಯಿಸಬಹುದು ಎಂಬ ಅರಿವನ್ನೂ ಇಟ್ಟುಕೊಳ್ಳೋಣ. ಇದಕ್ಕೇ ಮಾನಸಿಕತೆಯನ್ನು ಸಿದ್ಧ ಮಾಡಿಕೊಂಡರೆ ವಿಷಾದವಿಲ್ಲ. ಯಾರಾದರೂ ನಮ್ಮನ್ನು ಹೊಗಳಿದಾಗ ಸಂತೋಷಪಡೋಣ. ಆದರೆ ಆ ಹೊಗಳಿಕೆಯ ಮೇಲೆ ನಮ್ಮ ಆತ್ಮವಿಶ್ವಾಸವನ್ನು ಕಟ್ಟಿಕೊಳ್ಳುವುದು ಮೂರ್ಖತನ. ಯಾರಾದರೂ ನಮ್ಮ ವಿರುದ್ಧ ನಿಂತಾಗ ನೋವಾಗಬಹುದು. ಅಂತವರಿಂದಲೇ ನಮ್ಮ ಸತ್ಯದ ಮೌಲ್ಯವನ್ನು ಅಳೆಯುವುದೂ ಬೇಕಾಗಿಲ್ಲ.  ಜನರ ಬೆಂಬಲವೂ ಬದಲಾಗಬಹುದು. ಪರಿಸ್ಥಿತಿಗಳೂ ಬದಲಾಗಬಹುದು. ಸಂಬಂಧಗಳ ಅರ್ಥವೂ ಬದಲಾಗಬಹುದು. ಆದರೆ ನಮ್ಮ ವಿವೇಚನೆ ಮಾತ್ರ ನಮ್ಮ ಜೊತೆ ಉಳಿಯಬೇಕು. ಅದೇ ಮಹತ್ವದ್ದು ಕೂಡಾ.

“ಜಗತ್ತು ನನ್ನ ಜೊತೆಗಿರಬೇಕು” ಎನ್ನುವುದರಿಂದ “ಜಗತ್ತು ಹೇಗೇ ಇದ್ದರೂ, ನಾನು ನನ್ನ ದಾರಿಯಲ್ಲಿ ನಡೆಯಬಲ್ಲೆ” ಎನ್ನುವ ಮಾನಸಿಕತೆಗೆ ಬರುವುದು.  ಅದರಿಂದ ನಮ್ಮ ನಿರೀಕ್ಷೆಗಳು ಕಡಿಮೆಯಾಗುತ್ತವೆ. ಕೆಲಸಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ನೋವು ಕಡಿಮೆಯಾಗುತ್ತದೆ. ನಮ್ಮ ಹೆಜ್ಜೆಗಳಿಗೆ ಮತ್ತೊಬ್ಬರ ಅವಲಂಬನೆ ಬೇಕಾಗುವುದಿಲ್ಲ. ತಿರುವು ಎಂದರೆ ದಾರಿ ಬದಲಾಗುವುದು ಅಷ್ಟೇ ಅಲ್ಲ. ನಮ್ಮನ್ನು ನಾವು ಅರ್ಥಮಾಡಿಕೊಂಡು, ಯಾರ ಜೊತೆ ನಡೆಯಬೇಕು… ಯಾರಿಂದ ದೂರ ನಿಲ್ಲಬೇಕು… ಯಾವ ಹಂತದಲ್ಲಿ ಮಾತನಾಡಬೇಕು… ಯಾವ ಹಂತದಲ್ಲಿ ಮೌನವಾಗಬೇಕು ಎಂಬುದನ್ನು ಕಲಿಯುವ ಕ್ಷಣವೇ ಬದುಕಿನ ನಿಜವಾದ ತಿರುವು.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

6 hours ago

ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…

7 hours ago

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

17 hours ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

2 days ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

2 days ago