ಅಡಿಕೆಯ ಕನಿಷ್ಠ ಆಮದು ದರವನ್ನು ಏರಿಸುವ ಪ್ರಸ್ತಾಪದ ಕಡತವು ಕೃಷಿ ಇಲಾಖೆಯಿಂದ ಅನುಮತಿಯೊಂದಿಗೆ ಡೈರೆಕ್ಟ್ ಜನರಲ್ ಅಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಗೆ ಹೋಗಿದೆ. ಮುಂದಿನ ದಿನಗಳಲ್ಲಿ ವಾಣಿಜ್ಯ ಇಲಾಖೆಯ ಅನುಮತಿಯೊಂದಿಗೆ ಆಮದು ದರ ಏರಿಕೆಯಾಗಲಿದೆ. ಈ ಮೂಲಕ ಅಡಿಕೆ ಧಾರಣೆಯೂ ಉತ್ತಮಗೊಳ್ಳಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಪುತ್ತೂರಿನಲ್ಲಿ ಕ್ಯಾಂಪ್ಕೋ , ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ನಡೆದ ಮೂರು ದಿನಗಳ ಬೃಹತ್ ಕೃಷಿ ಯಂತ್ರ ಮೇಳ ಉದ್ಘಾಟಿಸಿ ಮಾತನಾಡಿದರು. ಅಡಿಕೆಯ ಕನಿಷ್ಠ ಆಮದು ದರವನ್ನು 251 ರಿಂದ 351ಕ್ಕೆ ಏರಿಸಬೇಕೇಂಬ ಕ್ಯಾಂಪ್ಕೋದ ಪ್ರಸ್ತಾವನೆಗೆ ಕೇಂದ್ರ ಕೃಷಿ ಇಲಾಖೆಯೂ ಒಪ್ಪಿಗೆ ಸೂಚಿಸಿದ್ದು ಕಡತವನ್ನು ಮುಂದಿನ ಹಂತಕ್ಕೆ ವರ್ಗಾಯಿಸಲಾಗಿದೆ. ಅಂತಿಮವಾಗಿ ಇದಕ್ಕೆ ವಾಣಿಜ್ಯ ಇಲಾಖೆಯಿಂದ ಹಸಿರು ನಿಶಾನೆ ದೊರೆತರೆ ಅಡಿಕೆ ಧಾರಣೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಅಡಿಕೆ ಕೃಷಿಕರ ಕಡೆಗೆ ಕೇಂದ್ರ ಸರ್ಕಾರವು ದೃಷ್ಟಿ ಹರಿಸಿದ್ದು ಅಡಿಕೆ ಬೆಳೆಗಾರರ ಹಿತ ಕಾಪಾಡಲು ಸದಾ ಬದ್ಧವಾಗಿದೆ. ಎಲೆಚುಕ್ಕಿ ರೋಗ ಹಾಗೂ ಅಡಿಕೆ ಹಳದಿ ಎಲೆರೋಗದ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ. ಕೆನಡದ ಯುವ ಸಂಶೋದಕರು ಕೂಡಾ ಅಡಿಕೆ ಹಳದಿ ರೋಗ ಹಾಗೂ ಎಲೆಚುಕ್ಕಿಯ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದು, ಇದಕ್ಕಾಗಿ ಸ್ಯಾಂಪಲ್ ಗಳನ್ನು ಕಳುಹಿಸಲಾಗಿದೆ ಎಂದರು.
ಅಡಿಕೆ ಬೆಳೆಗಾರರು ಅಡಿಕೆ ಮಾತ್ರವಲ್ಲದೆ ಮಿಶ್ರ ಬೆಳೆಯತ್ತಲೂ ಮನಸು ಮಾಡಬೇಕಿದೆ, ಹೀಗಾದರೆ ಮಾತ್ರ ಕೃಷಿಕರು ಸುದೃಢವಾಗಿ ಬೆಳೆಯಲು ಸಾಧ್ಯವಿದೆ. ಅಡಿಕೆ ಜೊತೆಗೆ ಒಳ ಮೀನುಗಾರಿಕೆ, ಹೈನುಗಾರಿಗೆಯಂತಹ ಪೂರಕ ಬೆಳೆ ಹಾಗೂ ತಾಳೆ ಗಿಡದಂತಹ ಮಿಶ್ರ ಬೆಳೆಯತ್ತ ಚಿತ್ತ ಹರಿಸಬೇಕು ಎಂದರು.
ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಹೊಸ ತಂತ್ರಜ್ಞಾನವು ಕೃಷಿಕರಿಗೆ ತಲುಪುವುದು ಅತ್ಯಗತ್ಯ ಎಂಬ ಕಲ್ಪನೆಯಿಂದ ಕ್ಯಾಂಪ್ಕೋ ಸಂಸ್ಥೆಯು ಕೃಷಿ ಮೇಳಗಳಂತಹ ಯೋಜನೆಗಳನ್ನು ಹಮ್ಮಿಕೊಂಡಿದೆ. ಆತ್ಮ ನಿರ್ಭರ ಭಾರತದ ಕಲ್ಪನೆಯು ಮಾತಿಗಷ್ಟೇ ಸೀಮಿತವಾಗದೇ ಅದು ಸಂಪೂರ್ಣವಾಗಿ ಜಾರಿಗೊಳ್ಳುವಂತೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರೈತರಿಗೆ ತಾಂತ್ರಿಕತೆಯ ಬಗೆಗೆ ಅರಿವನ್ನು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ರೈತರಿಗೆ ಸುಲಭವಾಗುವಂತೆ ಹಾಗೂ ಕೃಷಿ ಉತ್ಪನ್ನಗಳು ಮೌಲ್ಯಯುತವಾಗಿರಬೇಕೆಂಬ ದೃಷ್ಟಿಯಿಂದ ಈ ಬೃಹತ್ ಕೃಷಿ ಯಂತ್ರ ಮೇಳವನ್ನು ಉಪಯುಕ್ತ ಎಂದರು.
ಕೃಷಿ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಸಿಪಿಸಿಆರ್‌ಐ ಹಾಗೂ ಐಸಿಎಆರ್ ಕಾಸರಗೋಡಿನ ನಿರ್ದೆಶಕ ಡಾ. ಕೆ.ವಿ ಹೆಬ್ಬಾರ್, ಇಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆಯಾಗುತ್ತಿದೆ. ಇಂದಿನ ಯುವ ಜನಾಂಗವು ಕೃಷಿಯ ಮೇಲಿನ ಒಲವಿನಿಂದ ಹೊಸ ಹೊಸ ಕೃಷಿ ಯಂತ್ರಗಳನ್ನು ಆವಿಷ್ಕಾರ ಮಾಡುತ್ತಿದ್ದಾರೆ. ಇದರ ಸದುಪಯೋಗ ಪ್ರತಿಯೊಬ್ಬ ರೈತನಿಗೆ ಲಭಿಸಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಕೃಷಿಕರೇ ದೇಶದ ಬೆನ್ನೆಲುಬು ಎಂಬುವುದರಲ್ಲಿ ಎರಡು ಮಾತಿಲ್ಲ. ಇಂದಿನ ಯುವಕರು ಐಟಿ ಕಂಪನಿಗಳತ್ತ ಒಲವು ಜಾಸ್ತಿ ತೋರಿಸುತ್ತಿದ್ದಾರೆ. ಆದರೆ ಹಣವನ್ನು ತಿಂದು ಬದುಕಲು ಸಾಧ್ಯವಿಲ್ಲ. ರೈತನು ಉತ್ಪಾದಿಸಿದಂತಹ ಆಹಾರ ಬೆಳೆಗಳನ್ನಷ್ಟೇ ಸೇವಿಸಿ ಬದುಕಬೇಕಾಗುತ್ತದೆ. ಹಾಗಾಗಿ ಯುವಜನತೆ ಕೃಷಿಯತ್ತಲೂ ಒಲವು ತೋರಿಸಿದರೆ ಉತ್ತಮ ಎಂದು ನುಡಿದರು.
ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಸುಬ್ರಮಣ್ಯ ಯಡಪಡಿತ್ತಾಯ, ಪುತ್ತೂರು ನಗರಸಭೆ ಅಧ್ಯಕ್ಷರ ಜೀವಂಧರ್ ಜೈನ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ‍್ಯದರ್ಶಿ ಡಾ.ಕೆ.ಎನ್ ಕೃಷ್ಣ ಭಟ್, ಟಿ.ಎಸ್ ಸುಬ್ರಹ್ಮಣ್ಯ ಭಟ್ ಹಾಗೂ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು.
ಕ್ಯಾಂಪ್ಕೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್. ಎಂ ಕೃಷ್ಣ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃಷಿ ಯಂತ್ರ ಮೇಳದ ಸಂಯೋಜಕ ರವಿಕೃಷ್ಣ ಡಿ. ಕಲ್ಲಾಜೆ ಸ್ವಾಗತಿಸಿ, ಉಪನ್ಯಾಸಕಿಯರಾದ ನೀಮಾ ಎಚ್.ಕುಂಬ್ರ ಹಾಗೂ ನಿಶಾ ಕಾರ‍್ಯಕ್ರಮ ನಿರೂಪಿಸಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…