ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ

September 4, 2026
3:11 PM
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ ಅರ್ಥಮಾಡಿಕೊಳ್ಳಬೇಕು ಎಂಬುದು ಲೇಖನದ ಮುಖ್ಯ ಆಶಯ. ದೇವತ್ವವನ್ನು ಗೌರವಿಸುವುದರ ಜೊತೆಗೆ, ಗುರುವಿನ ಉಪದೇಶವನ್ನು ಸ್ಥಿತಪ್ರಜ್ಞತೆಯಿಂದ ಆಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಲೇಖನ ವಿವರಿಸುತ್ತದೆ.

ಗುರುವನ್ನು ದೇವನಿಗೆ ಸಮೀಕರಿಸಿ ಆರಾಧಿಸುವ ಪರಂಪರೆ ನಮ್ಮದು. ಗುರುವು ತನ್ನ ಗುರುತ್ವದಿಂದ ದೇವತ್ವಕ್ಕೆ ಏರಿದವನೆಂಬ ನಂಬಿಕೆ ನಮ್ಮದು. ಆದರೆ, ಗೀತಾಚಾರ್ಯನು ದೇವನಾಗಿದ್ದರೂ ಆಚಾರ್ಯನಾಗಿ ಮನುಷ್ಯನು! ಶಂಕರರೂ ಶಂಕರನ ಅವತಾರವೇ ಆದರೂ ಆಚಾರ್ಯರಾಗಿ ಮನುಷ್ಯರು! ದೇವರು ಎಷ್ಟೇ ಅವತಾರ ತಾಳಿ ಬಂದರೂ ಮನುಷ್ಯಾವತಾರವೇ ಮನುಷ್ಯರಿಗೆ ಹತ್ತಿರ! ಬಲುಪ್ರಿಯ! ದೇವನು ಮನುಷ್ಯನಾಗಿ ಬಂದು ಗುರುವಾಗಿ , ಉಪದೇಶಕನಾಗಿ ಗೋಚರಿಸುವ ಸ್ಥಿತಿ ಅನ್ಯಾದೃಶ. ಖ್ಯಾತ ತತ್ತ್ವಜ್ಞಾನಿಯಾದ ಮೈಸೂರು ಹಿರಿಯಣ್ಣನವರ ಶ್ರೇಷ್ಠೋಕ್ತಿಯೊಂದು ಉಲ್ಲೇಖನೀಯವಾಗಿದೆ.

ಅದು ಹೀಗಿದೆ:

“I always prefer to think of Shri Krishna as a human teacher, say, like Shankara. Half the sublimity of the teaching disappears when we think of him as an incarnation of God.” (March 1905) ಇದು ಆಚಾರ್ಯ ಎಂ.ಹಿರಿಯಣ್ಣನವರ ನುಡಿ(Source: Chaff and Draff – The Personal Diary of Prof. M Hiriyanna, Edited by, Shashikiran B.N.).

ಇದರ ಭಾವಾರ್ಥ ಹೀಗಿದೆ..

” ನಾನು ಯಾವತ್ತೂ ಕೂಡಾ ಶ್ರೀಕೃಷ್ಣನನ್ನು , ಆಚಾರ್ಯ ಶಂಕರರಂತೆ , ಮಾನವಶಿಕ್ಷಕ(ಮಾನುಷಗುರು) ಎಂದೇ ಯೋಚಿಸುತ್ತೇನೆ/ ಭಾವಿಸುತ್ತೇನೆ. ಯಾವಾಗ ನಾವು ಆತನನ್ನು ದೇವರ ಅವತಾರವೆಂದು ಪರಿಗಣಿಸುತ್ತೇವೆಯೋ/ ಭಾವಿಸುತ್ತೇವೆಯೋ ಆಗ ಆತನ ಉಪದೇಶದ‌ ಅರ್ಧದಷ್ಟು ಭವ್ಯತೆ/ ಉತ್ಕೃಷ್ಟತೆಯು ಮರೆಯಾಗುತ್ತದೆ.” (ಉಕ್ತಿಯ ಭಾವಾನುವಾದ: ಪ್ರಕೃತ ಲೇಖಕನದು).

ಗುರುವು ದೇವರಂತೆ ನಮಗೆ ಒದಗುವುದು ನಮ್ಮ ಯೋಗ. ದೇವರು ಗುರುವಾಗಿ ಬರುವುದು ನಮ್ಮ ಭಾಗ್ಯ. ಏಕೆಂದರೆ, ಗುರೂಪದೇಶ ನಮಗರ್ಥವಾಗಬೇಕಾದರೆ ನಮಗೆ ಗುರುವಿನ ಸಾಮೀಪ್ಯ, ಸಹವಾಸ ಬೇಕು. ಹಾಗೆ ಆಗಬೇಕಾದರೆ, ಗುರುವು ಮನುಷ್ಯನಾಗಿದ್ದರೆ ಮಾತ್ರ ಸಾಧ್ಯ. ದೇವರ ಸಾಮೀಪ್ಯ , ಸಹವಾಸ ಮನುಷ್ಯಮಾತ್ರನಿಗೆ ಬಲು ಕಷ್ಟ. ಕೋಟಿಸೂರ್ಯಸಮಪ್ರಭನಾದ ದೇವನ ಬಳಿ ನಾವು ಉಳಿದೇವೇ? ಅದು ದೇವನಿಗೆ‌ ಗೊತ್ತು. ಆದ ಕಾರಣ ದೇವರು ಮರ್ತ್ಯಕ್ಕವತರಿಸುವಾಗ ಹೆಚ್ಚಾಗಿ ಮನುಷ್ಯನೇ ಆಗುವುದು. ಮನುಷ್ಯರಿಗೆ ಉಪದೇಶಿಸಬೇಕಾದರೆ ಅವರಿಗೆ ಹತ್ತಿರವಾಗಬೇಕು; ‘ಮನಸ್ಸು’ ಉಳ್ಳವ ಮನುಷ್ಯ. ಆತನಿಗೆ ಉಪದೇಶಿಸಬೇಕಾದರೆ ಆತನ ಮನಸ್ಸು ಅರ್ಥವಾಗಬೇಕು. ಒಬ್ಬ ಮನುಷ್ಯನ ಮನಸ್ಸು ಮತ್ತೊಬ್ಬ ಮನುಷ್ಯನಿಗಷ್ಟೇ ಅರ್ಥವಾದೀತು! ಅದಕ್ಕೆ ತಾನು ಮನುಷ್ಯನೇ ಆದ ದೇವ! ಮನುಷ್ಯನಂತೆ ಅವತಾರವೆತ್ತಿ ಬಂದ ದೇವರನ್ನು ನಾವು ಒಂದು ವೇಳೆ ಮನುಷ್ಯನೆಂದು ಭಾವಿಸದೆ ದೇವರೆಂದೇ ಭಾವಿಸಿದರೆ ಭಾವ-ಭಕ್ತ್ಯಾವೇಶದಿಂದ ನಮ್ಮನ್ನು ಮರೆತುಬಿಡುವೆವು. ಭಾವಪರವಶತೆಯಿಂದ ನಮ್ಮನ್ನೇ ನಾವು ಕಳೆದುಕೊಳ್ಳುವೆವು. ಆಗ ಆತನ ಉಪದೇಶವನ್ನು ಆಲಿಸಲಾರೆವು. ಉಪದೇಶವನ್ನಾಲಿಸದೆ ನಮ್ಮ ಭವ-ಬಂಧನ ಕಳಚುವುದೆಂತು? ಆದ ಕಾರಣ ಮನುಷ್ಯನಂತೆ ಅವತಾರ ತಾಳಿ ಬರುವ ದೇವರನ್ನು ನಾವು ಮನುಷ್ಯನೆಂದೇ ಭಾವಿಸಿದರೆ ಆತನ ಸಾಮೀಪ್ಯ ಪಡೆಯಬಲ್ಲೆವು. ಉಪದೇಶ ಸ್ವೀಕರಿಸಬಲ್ಲೆವು. ಅದಕ್ಕೆ ಸ್ಥಿತಪ್ರಜ್ಞ ಸ್ಥಿತಿ ಬೇಕು. ಮನುಷ್ಯನಾಗಿ,ಸ್ಥಿತಪ್ರಜ್ಞನಾದವನಿಗೆ ಮಾತ್ರ ಉಪದೇಶ ಅರ್ಥವಾದೀತು. ಸ್ಥಿತಪ್ರಜ್ಞನ ಲಕ್ಷಣವನ್ನು ಗೀತಾಚಾರ್ಯ ಗೀತೆಯಲ್ಲಿಯೇ ಹೇಳಿದ್ದಾನೆ.

ನಮ್ಮನ್ನು ಭಾವ – ಬಂಧನದಿಂದ ಬಿಡುಗಡೆಗೊಳಿಸಿ ಭವಬಂಧನದಿಂದಲೂ ಮುಕ್ತಗೊಳಿಸಲೋಸುಗ ನಮ್ಮಲ್ಲೇ ಒಬ್ಬನಾಗಿ ಬಂದವನು ಭಗವಂತ. ಹಾಗೆ ಬಂದರೂ ತನ್ನ ಲೀಲೆಗಳ ಮೂಲಕ ತಾನು ದೇವನೆಂಬುದನ್ನು ಮರ್ತ್ಯದಲ್ಲಿದ್ದುಕೊಂಡೇ ಆಗಾಗ್ಗೆ ತೋರಿಸಿಕೊಟ್ಟ. ಇಲ್ಲವಾದಲ್ಲಿ ಅಲ್ಪಮತಿಗಳಾದ ಮನುಷ್ಯರು ಆತನನ್ನು ತುಚ್ಛೀಕರಿಸಿಬಿಡುತ್ತಿದ್ದರು. ದೇವನೇನು ಮಹಾ? ಅವನೂ ನಮ್ಮಂತೆಯೇ ಎಂದು ಭಾವಿಸಿಕೊಂಡು ಪ್ರದರ್ಶನಕ್ಕಿಳಿದವರು ಆತನ ಲೀಲೆಗೆ ಬಲಿಯಾದರು. ಆದ ಕಾರಣ ದೇವನು ಮಾನವನಾಗಿ ಬಂದರೂ ಆತನನ್ನು ಕಡಿಮೆ ಅಂದಾಜಿಸಲಾಗದು ಅರ್ಥಾತ್ Underestimate ಮಾಡಲಾಗದು. ಹಾಗೆ ಮಾಡಿದವನ ಸ್ಥಿತಿ ಧೂಳೀಪಟವಾಗುವುದು ಖಚಿತ. ಆದ ಕಾರಣ ರೂಢಿಯಲ್ಲಿ ಬಂದ ಮಾತು: ನ ದೇವಚರಿತಂ ಚರೇತ್II “ದೇವತಾಪುರುಷನು ನಡೆದ ನಡವಳಿಕೆಯನ್ನು ಇತರ ಜನರು ಅನುಸರಿಸತಕ್ಕದ್ದಲ್ಲ.” (ನೋಡಿ: ಡಿ.ವಿ.ಜಿ.,’ಶ್ರಿಕೃಷ್ಣ ಪರೀಕ್ಷಣಂ’, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.)

ಮನುಷ್ಯ(Man)ನಂತೆ ಬಂದು ಮನುಷ್ಯರ ಗುರು(Human Teacher)ವಿನಂತೆ ಉಪದೇಶಿಸುವುದರ ಜೊತೆಗೆ ತಾನು ಲೋಕಕ್ಕೇ ಗುರು, ಲೋಕಾಚಾರ್ಯನೆಂಬುದನ್ನೂ ( Teacher of universe/ Universal Teacher)ತೋರಿಸಿಕೊಟ್ಟ ಭಗವಂತನ ಲೀಲೆಗೆ ಸಾಟಿಯೆಲ್ಲಿ? ವಿಶ್ವರೂಪದರ್ಶನದ ಭಾಗ್ಯ-ದಿವ್ಯಚಕ್ಷು ಎಲ್ಲರಿಗೂ ದೊರಕದು. ಅಂತೆಯೇ ಉಪದೇಶಶ್ರವಣದ ಯೋಗವೂ. ಅದಕ್ಕೆ ಭಗವಂತನ ಕೃಪೆಯೇ ಬೇಕು. ಅದು ಸಾಧನೆಯಿಂದಷ್ಟೇ ಸಿದ್ಧಿಯಾಗುವುದು. ಅದಕ್ಕೆ ನಾನಾ ದಾರಿಗಳು. ನಮ್ಮ ದಾರಿಯನ್ನು ಮಾತ್ರ ನಾವೇ ಕಂಡುಕೊಳ್ಳಬೇಕು.

II ಶ್ರೀಕೃಷ್ಣಾರ್ಪಣಮಸ್ತು II

ಬರಹ : ಜಯಪ್ರಕಾಶ್‌ ಎ ನಾಕೂರು

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ
October 13, 2026
10:15 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror