ನಾಡಿನ ಪ್ರಸಿದ್ಧ ಹಾಗೂ ಶ್ರೀಮಂತ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಘ್ನನಾಶಕ ಗಣಪ ಉಪವಾಸದಲ್ಲಿ..!?. ಹೀಗೊಂದು ಪ್ರಶ್ನೆ ಎದ್ದಿದೆ. ಕಾರಣ, ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ಸಮಿತಿಯ ಮೂವರು ಸದಸ್ಯರು “ವಿಘ್ನನಾಶಕ ಗಣಪ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೂಲಗಣಪ ಉಪವಾಸದಲ್ಲಿ ಇದ್ದಾನೆ” ಎಂದು ಶುಕ್ರವಾರ ಮೌನ ಪ್ರತಿಭಟನೆಯನ್ನು ಸಾಂಕೇತಿಕವಾಗಿ ದೇವಸ್ಥಾನದ ಗೋಪುರ ಬಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೂಲಗಣಪನ ದರ್ಶನ ಬೇಕು , ಮೂಲಗಣಪತಿಗೆ ಪೂಜೆ ಬೇಕು ಎಂದು ಒತ್ತಾಯಿಸಿದ್ದಾರೆ.
ಕಡಬ ತಾಲೂಕಿನಲ್ಲಿ ಬರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಾಡಿನ ಪ್ರಸಿದ್ಧ ದೇವಸ್ಥಾನ. ಸಾಕಷ್ಟು ಮಂದಿ ಭಕ್ತರು ನಾಡಿನ ವಿವಿದೆಡೆಯಿಂದ ಆಗಮಿಸುತ್ತಾರೆ. ನಾಗ ದೇವರಿಗೆ ವಿವಿಧ ರೀತಿಯ ಹರಕೆಯನ್ನೂ ಒಪ್ಪಿಸುತ್ತಾರೆ, ನೆಮ್ಮದಿ ಕಾಣುತ್ತಾರೆ. ಆದರೆ ಕಳೆದ ಕೆಲವು ಸಮಯಗಳಿಂದ ಇಲ್ಲಿ ವಿವಾದಗಳು ಸಾಕಷ್ಟು ಕಂಡುಬರುತ್ತಿದೆ. ಈ ಹಿಂದೆ ಸರ್ಪಸಂಸ್ಕಾರದ ವಿಚಾರವಾಗಿ ವಿವಾದ ಎದ್ದು ಸುದ್ದಿಯಾಗಿತ್ತು, ಆ ಬಳಿಕ ಕೊರೋನಾ ಕಾರಣದಿಂದ ಸೇವೆಗಳೂ ಕಡಿಮೆಯಾದವು, ವಿವಾದವೂ ತಣ್ಣಗಾಯಿತು. ಆ ಬಳಿಕವೂ ಸಣ್ಣ ಸಣ್ಣ ವಿವಾದಗಳು ಕಂಡುಬರುತ್ತಿತ್ತು. ಇದೀಗ ಭಕ್ತರೂ ಗಮನಿಸಬೇಕಾದ ಹಾಗೂ ಗಂಭೀರವಾದ ವಿವಾದವೊಂದು ಎದ್ದಿದೆ. ದೇವಸ್ಥಾನದಲ್ಲಿ ಗರ್ಭಗುಡಿಯ ಒಳಗಡೆ ಇರುವ ಮೂಲ ಮಹಾಗಣಪತಿ ಉಪವಾಸದಲ್ಲಿದ್ದಾರೆ ಎನ್ನುವುದು ಈಗಿನ ವಿವಾದದ ವಿಷಯ. ಈ ವಿವಾದ ಬೆಳೆದು ದೇವಸ್ಥಾನದ ಮುಂದೆ ಸಾಂಕೇತಿಕವಾಗಿ ಮೂರು ಮಂದಿ ಧರಣಿ ಕುಳಿತುಕೊಳ್ಳುವ ಸ್ಥಿತಿಗೆ ಬಂದಿದೆ. ಅದರಲ್ಲಿ ದೇವಸ್ಥಾನದ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಭಾಗವಹಿಸಿದ್ದರು. ಹೀಗಾಗಿ ಈ ಪ್ರಕರಣ ಈಗ ಗಂಭೀರತೆ ಪಡೆದುಕೊಂಡಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗರ್ಭಗುಡಿಯ ಒಳಗಡೆ ಇರುವ ಮೂಲ ಮಹಾಗಣಪತಿ ದೇವರ ವಿಗ್ರಹವನ್ನು ಭಕ್ತರ ದರ್ಶನಕ್ಕೆ ಇಡಬೇಕು, ಒಳಾಂಗಣದಲ್ಲಿ ಸೂಕ್ತವಾದ ಗುಡಿಯನ್ನು ನಿರ್ಮಿಸಿ ಗುಡಿಯಲ್ಲಿ ಮೂಲ ಮಹಾಗಣಪತಿ ದೇವರನ್ನು ಪ್ರತಿಷ್ಟಾಪನೆ ಮಾಡಿ ಕ್ರಮಬದ್ಧವಾದ ಪೂಜೆ ಮತ್ತು ನೈವೇದ್ಯ ನಡೆಸಬೇಕು ಎಂದು ಆಗ್ರಹಿಸಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ಪ್ರಮುಖರಿಂದ ಮೌನ ಧರಣಿ ಶುಕ್ರವಾರ ನಡೆಸಲಾಯಿತು. ಈ ಸಾಂಕೇತಿಕ ಧರಣಿಯಲ್ಲಿ ಪ್ರಮುಖರಾದ ಶ್ರೀನಾಥ ಟಿಎಸ್, ಕೃಷ್ಣಮೂರ್ತಿ ಭಟ್, ಪ್ರಶಾಂತ್ ಭಟ್ ಮಾಣಿಲ ಭಾಗವಹಿಸಿದ್ದರು.
ಎರಡು ವಾರಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಆಡಳಿತಕ್ಕೆ ಮತ್ತು ಸರಕಾರಕ್ಕೆ ಮನವಿ ನೀಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಪ್ರಮುಖರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗರ್ಭಗುಡಿಯ ಒಳಗಡೆ ಇರುವ ಮೂಲ ಮಹಾಗಣಪತಿ ದೇವರಿಗೆ ಸರಿಯಾಗಿ ಪೂಜೆ ನಡೆಯಬೇಕು ಹಾಗೂ ಮೂಲ ಗಣಪತಿ ದೇವರಿಗೆ ಪ್ರತ್ಯೇಕ ಗುಡಿ ನಿರ್ಮಾಣವಾಗಬೇಕು, ನೈವೇದ್ಯ ಸರಿಯಾಗಬೇಕು ಎಂದು ಒತ್ತಾಯಿಸಿದ್ದರು. ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರಿಗೆ ಭಗವಂತನ ಸರಿಯಾದ ಅನುಗ್ರಹ ಹಾಗೂ ಫಲ ಸದ್ಯ ಸಿಗುತ್ತಿದ್ದರೂ ಪರಿಪೂರ್ಣವಾದ ಫಲ ಸಿಗಬೇಕಾದರೆ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಸರಿಯಾಗಿರಬೇಕು ಎಂಬುದು ಹಿತರಕ್ಷಣಾ ವೇದಿಕೆ ಒತ್ತಾಯವಾಗಿತ್ತು. ಆದರೆ ಗಣೇಶ ಚೌತಿಯಂದು ಕೂಡಾ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಶುಕ್ರವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ಪ್ರಮುಖರಿಂದ ಮೌನ ಧರಣಿ ನಡೆಸಿದರು. ಸದ್ಯ ಇದು ಸಾಂಕೇತಿಕ ಧರಣಿಯಾಗಿದ್ದು, ಇಲ್ಲಿ ಯಾವುದೇ ರಾಜಕೀಯ ಇಲ್ಲ, ಧಾರ್ಮಿಕ ಹಿತಾಸಕ್ತಿ ಮಾತ್ರಾ ಎಂದು ಧರಣಿಯಲ್ಲಿ ಭಾಗವಹಿಸಿದ ಪ್ರಶಾಂತ್ ಭಟ್ ಮಾಣಿಲ ಹೇಳಿದ್ದಾರೆ.
ಪ್ರಶಾಂತ್ ಭಟ್ ಮಾಣಿಲ ಧರಣಿ ಬಗ್ಗೆ ಹೀಗೆ ಹೇಳುತ್ತಾರೆ…..
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…