ಮನ ಗೆಲ್ಲುವ ಮಾವಿನ ಹಣ್ಣುಗಳು

June 3, 2025
9:45 PM

ಮಾವಿನ ಹಣ್ಣಿನ ಕಾಲದಲ್ಲಿ ನಿತ್ಯ ಏನಾದರೊಂದು ಬಗೆ ಮಾಡಿ ಉಣಬಡಿಸದಿದ್ದರೆ ಮನೆಯಾಕೆಗೆ ಖಂಡಿತಾ ಹಿತವೆನಿಸದು. ತೋಟದ ಮೂಲೆಯ ಮರದಲ್ಲಿ ಬಿದ್ದ ಕಾಡು ಮಾವಿನ ಹಣ್ಣುಗಳನ್ನು ನಸುಕಿನಲ್ಲೇ ಹೆಕ್ಕಿ ಸ್ವಚ್ಛ ಮಾಡಿ ಹಾಳೆಯಲ್ಲಿ ಹರಡಿ ಇಟ್ಟಲ್ಲಿಗೆ ಸಮಾಧಾನ. ಅಂದಿನದ್ದೇನೋ ಮಹಾ ಕೆಲಸವನ್ನು ಸಾಧಿಸಿದಂತೆ.

Advertisement

ಕಾಡು ಮಾವಿನ ಹಣ್ಣು ಇಂದು ಬಹಳ ಅಪರೂಪ. ಎಲ್ಲೆಂದರಲ್ಲಿ ಸಿಗದು. ಬೇಕೆಂದಾಗ ಸಿಗದು . ಎಲ್ಲೊ ಕೆಲವು ಕಡೆಗಳಲ್ಲಿ ಮಾತ್ರ ಇವೆ. ಅದು ಬೆರಳೆಣಿಕೆಯ ತಳಿಗಳು. ಹೆಚ್ಚಾಗಿ ಹುಳಿಯೇ. ಅದರಲ್ಲೂ ವೆರೈಟಿ ಹುಳಿ ಎಂದರೆ ನೀವು ನಂಬಲೇ ಬೇಕು. ಒಂದೊಂದು ಮಾವಿನ ಹಣ್ಣಿನ ಪರಿಮಳ, ರುಚಿ , ಸೊನೆ , ಬಣ್ಣ , ಗಾತ್ರ ಎಲ್ಲವೂ ಬೇರೆ ಬೇರೆ. ಒಂದರಂತೆ ಇನ್ನೊಂದಿಲ್ಲ. ಕೆಲವು ಸಕ್ಕರೆಯಷ್ಟು ಸಿಹಿಯಾದರೆ ಇನ್ನು ಕೆಲವು ಕಡಕ್ ಹುಳಿ ಬಾಯಿಗೆ ಇಡಲು ಸಾಧ್ಯವಿಲ್ಲ. ಅದರಂತೆ ಇದು ಎನ್ನುವಂತೆಯೂ ಇಲ್ಲ. ಮಾವಿನ ಗೊರಟಿನಿಂದ ಹುಟ್ಟಿದ ಗಿಡವಾದರೂ ಬೇರೆಯೇ ರೀತಿಯ ಹಣ್ಣುಗಳು ಆಗುವುದು ಮಾವಿನ ಮರದ ವಿಶೇಷ . ಕಸಿಕಟ್ಟಿ ಮಾಡಿದ ಗಿಡಗಳಿಂದ ಮಾತ್ರ ಮಾತೃ ಗಿಡದ ರೀತಿಯ ಹಣ್ಣುಗಳು ದೊರೆಯುವುದು.

ಒಂದು ಕಾಲದಲ್ಲಿ ಊರ ತುಂಬ ಇದ್ದ ನಮೂನೆವಾರು ಮಾವಿನಹಣ್ಣುಗಳು ಇಂದಿಲ್ಲ. ಹಲವು ವೈವಿಧ್ಯ ತಳಿಗಳು ಹಿರಿಯರ ನೆನಪಿನ ಬುತ್ತಿಯೊಳಗೆ ಮಾತ್ರ ಬೆಚ್ಚಗೆ ಕುಳಿತಿವೆ. ನಮ್ಮ ದುರಾಸೆಗೋ, ಅಥವಾ ಬದುಕಿನ ಏರಿಳಿತದ ಓಗದಲ್ಲಿ , ಕಾಲನ ಹೊಡೆತಕ್ಕೆ ಬಲಿಯಾದ ಮಾವಿನ ಮರಗಳೆಷ್ಟೋ?! ಒಂದೊಮ್ಮೆ ತೋಟದ ತುಂಬಾ ಓಡಾಡಿ ಹೆಕ್ಕಿ ಕೊಂಡು ಬರುತ್ತಿದ್ದ ಮಾವಿನ ಹಣ್ಣುಗಳು ಇಂದು ಸಾವಿರ ಸಾವಿರ ದುಡ್ಡು ಕೊಟ್ಟರು ಸಿಗದು. ಇದ್ದರಲ್ಲವೇ ಸಿಗುವುದು. ತಳಿ ಸಂರಕ್ಷಣೆಯ ಮಹತ್ವ ಅರಿಯದೆ ಕಳೆದು ಕೊಂಡ ಅಪೂರ್ವ ಪ್ರಕೃತಿಯ ಕೊಡುಗೆಗಳೆಷ್ಟೋ!

ಹಾಗೆ ಅಳಿದುಳಿದ ಮರಗಳಿಂದ ಹೆಕ್ಕಿ ಕೊಂಡು ಬಂದ ಮಾವಿನ ಹಣ್ಣು ಅಮ್ಮನ ಸಾಂಪ್ರದಾಯಿಕ ಪಾಕಕ್ಕೆ ಸುಲಭ ತುತ್ತು. ಹಸಿಯಾದರೂ ಸರಿ ಬೇಯಿಸಿದರೂ ರುಚಿಯೇ,ಸ್ವಲ್ಪ ಉಪ್ಪು ,ಗಾಂಧಾರಿ ಮೆಣಸು, ಬೆಲ್ಲ( ಹಣ್ಣಿನ ಹುಳಿ, ನಿಮ್ಮ ನಾಲಗೆಯ ರುಚಿಗೆ ಅನುಸರಿಸಿ) ಬಳಸಿ ಮಾಡಿದ ಗೊಜ್ಜು ಬಾಳೆಯ ಬದಿಯಲ್ಲಿ ಇದ್ದರೆ ನಾಲ್ಕು ತುತ್ತು ಊಟ ಜಾಸ್ತಿಯೇ. ಸಾರು, ಸಾಸಮೆ, ಮೆಣಸ್ಕಾಯಿ, ಸಾಂಬಾರು, ಮಾವಿನಕಾಯಿಯ ಮೇಲಾರ ಹೀಗೆ ಏನಾದರೊಂದು ಇದ್ದರೆ ಹೊಟ್ಟೆ ತುಂಬ ಊಟ ಮಾಡಿದ್ದು ಅರಿವಿಗೇ ಬಾರದು. ಎಷ್ಟು ಹೊತ್ತಾದರೂ ಊಟವೇ ಮುಗಿಯದು. ನಿತ್ಯಕ್ಕಿಂತ ಅರ್ಧ ಗಂಟೆ ಜಾಸ್ತಿ ಸಮಯ ಖಂಡಿತಾ ಬೇಕು ಮಾವಿನ ಹಣ್ಣಿನ ಕಾಲದಲ್ಲಿ.

ಕಾಡು ಮಾವಿನ ಹಣ್ಣಿನ ಪಾಯಸ ಒಮ್ಮೆ ಮಾಡಿ ನೋಡಿ ಎಷ್ಟು ರುಚಿ ಗೊತ್ತುಂಟಾ( ಬೇಯಿಸಿದಾಗ ಹಿಟ್ಟು ಹಿಟ್ಟು ಆಗುವ ಮಾವಿನ ಹಣ್ಣು ಪಾಯಸಕ್ಕೆ ಸೂಕ್ತ) ಹದಾ ಹುಳಿ ಸಿಹಿ ಪಾಯಸ ತಣ್ಣಗೆ ತಿನ್ನಲು ರುಚಿ. ಪಾಯಸ ಮಾಡಿ ಸ್ವಲ್ಪ ತಣ್ಣಗಾದ ಮೇಲೆ ಸವಿಯಲು ತುಂಬಾ ಖುಷಿ(ಪ್ರಿಜ್ ನಲ್ಲಿಟ್ಟು ತಿಂದರೆ ಸೂಪರ್ ರುಚಿ). ಮಾವಿನ ಹಣ್ಣಿನ ರಸ ತೆಗೆದು ಸಕ್ಕರೆ ಮಿಶ್ರ ಮಾಡಿ ತೆಗೆದಿಟ್ಟರೆ ಅಕಾಲದಲ್ಲೂ ಜ್ಯೂಸ್ ಮಾಡಿ ಮಾವಿನ ಹಣ್ಣನ್ನು ಸವಿಯ ಬಹುದು. ಅಪಾರ ಪೋಷಕಾಂಶಗಳನ್ನು ಹೊಂದಿರುವ ಮಾವಿನ ಹಣ್ಣುಗಳು ಪ್ರಕೃತಿ ನಮಗೆ ಕೊಟ್ಟ ಅಪೂರ್ವ ಉಡುಗೊರೆಯಲ್ಲವೇ. ಮಾವಿನ ಹಣ್ಣುಗಳ ತಳಿಗಳನ್ನು ಉಳಿಸೋಣ, ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸೋಣ………………

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಬದುಕು ಪುರಾಣ | ಮನವನ್ನು ಚುಚ್ಚುವ ಅಳಿಲು
July 14, 2025
10:56 PM
by: ನಾ.ಕಾರಂತ ಪೆರಾಜೆ
ಮೊಬೈಲ್‌ ಕಣ್ಣು ಮಾತ್ರವಲ್ಲ – ಮನಸ್ಸನ್ನೂ ಹಾಳು ಮಾಡುತ್ತದೆ..!
July 13, 2025
11:36 AM
by: ಮಹೇಶ್ ಪುಚ್ಚಪ್ಪಾಡಿ
ಹೊಸರುಚಿ | ಹಲಸಿನ ಬೀಜದ ಪರೋಟ
July 12, 2025
7:11 AM
by: ದಿವ್ಯ ಮಹೇಶ್
ಸೆಕ್ಸ್ ಎಂದರೆ ಜತೆಯಲ್ಲಿ ಕಾಫಿ ಕುಡಿದಂತಲ್ಲ!?
July 10, 2025
7:53 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror