ಸುದ್ದಿ ಮೂಲಗಳನ್ನು ವಿವೇಚಿಸುವ ಪ್ರಬುದ್ಧತೆ ನಮಗಿರಲಿ – ಅನಿಸಿಕೆ

August 20, 2024
3:46 PM

ಪತ್ರಿಕೆ(Paper) ಮತ್ತು ಟೆಲಿವಿಷನ್(Television) ಮಾಧ್ಯಮಗಳಲ್ಲಿ(Media) ಮುದ್ರಿತವಾಗುವ ಮತ್ತು ಪ್ರಸಾರವಾಗುವ ಸುದ್ದಿಗಳನ್ನು(News) ನಾವು ಹೇಗೆ ಗ್ರಹಿಸಬೇಕು ?
ಯಾವುದು ನಿಜ ?
ಯಾವುದು ಸುಳ್ಳು ?
ಯಾವುದು ಇರಬಹುದು ಎಂಬ ಅನುಮಾನ ?
ಯಾವುದು ಸರಿ ಅಥವಾ ತಪ್ಪು ಎಂಬ ಪ್ರಶ್ನೆ ?
ಯಾವುದನ್ನು ಒಪ್ಪಬೇಕು ?
ಯಾವುದನ್ನು ನಿರ್ಲಕ್ಷಿಸಬೇಕು ?
ಯಾವುದನ್ನು ತಿರಸ್ಕರಿಸಬೇಕು ?

ಇದೊಂದು ಸವಾಲಿನ ವಿಷಯವಾದರೂ ಒಂದು ಹಂತಕ್ಕೆ ಇದು ತುಂಬಾ ಸರಳವೂ ಆಗಿದೆ. ಕೆಲವು ಮೂಲ ಅಂಶಗಳು ಮತ್ತು ಅನುಭವದ ಆಧಾರದ ಮೇಲೆ ಇದನ್ನು ಅರ್ಥಮಾಡಿಕೊಳ್ಳಬಹುದು. ಸುದ್ದಿಗಳು ಅಪಘಾತ, ಅವಘಡ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಇದ್ದರೆ ಸಾಮಾನ್ಯವಾಗಿ ಸಾವು ನೋವುಗಳು ಬಗ್ಗೆ ಬರುವ ವರದಿಗಳನ್ನು – ಅಂಕಿಅಂಶಗಳನ್ನು ಸಂಪೂರ್ಣ ಸತ್ಯ ಎಂದು ಭಾವಿಸಬಹುದು. ಸರ್ಕಾರದ ವೈಧ್ಯಕೀಯ ಸಿಬ್ಬಂದಿ ಮತ್ತು ಪೋಲೀಸರು ಹೇಳಿಕೆ ಆಧರಿಸಿ ಪ್ರಸಾರ ಮಾಡಿದರೆ ಇನ್ನೂ ಹೆಚ್ಚು ನಿಖರ ಎಂದು ಅರ್ಥಮಾಡಿಕೊಳ್ಳಬಹುದು. ಆದರೆ ಇದಕ್ಕೆ ಕಾರಣಗಳನ್ನು ಪತ್ರಕರ್ತರು ಊಹಿಸಿ ಅಥವಾ ತಮಗೆ ದೊರೆತ ಸಾಕ್ಷ್ಯವನ್ನು ಪರಿಶೀಲಿಸಿ, ಅತಿರಂಜಿಸಿ ವರದಿ ಮಾಡಿದರೆ ಅದನ್ನು ನಾವು ಮತ್ತೊಮ್ಮೆ ನಮ್ಮ ಅನುಭವದ ಆಧಾರದ ಮೇಲೆ ವಿವೇಚಿಸಿ ತೀರ್ಮಾನ ಕೈಗೊಳ್ಳಬೇಕೆ ಹೊರತು ಸಂಪೂರ್ಣ ಪತ್ರಕರ್ತರ ವರದಿಯನ್ನು ನಂಬಬಾರದು.

ರಾಜಕೀಯಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಹಲವಾರು ರೀತಿಗಳು ಇವೆ. ಕೆಲವು ಅಧೀಕೃತ ಮಾಹಿತಿಗಳನ್ನು ಸಹಜವಾಗಿ ಒಪ್ಪಿಕೊಳ್ಳಬಹುದು. ಆದರೆ ರಾಜಕೀಯ ನಾಯಕರ ಹೇಳಿಕೆಗಳ ಆಧಾರದ ಮೇಲೆ ರೂಪಿತವಾಗುವ ಕಾರ್ಯಕ್ರಮ ಅಥವಾ ಬರಹಗಳನ್ನು ಒಪ್ಪಿಕೊಳ್ಳುವ ಮೊದಲು ಹಲವಾರು ಬಾರಿ ಯೋಚಿಸಬೇಕು. ಅದಕ್ಕೆ ಇರುವ ಎಲ್ಲಾ ಆಯಾಮಗಳನ್ನು ಸ್ವತಃ ನಾವು ವಿವೇಚಿಸಬೇಕು. ರಾಜಕೀಯ ಏರಿಳಿತಗಳ ಬಗ್ಗೆ ಪತ್ರಕರ್ತರಿಗೆ ಕೆಲವು ಸುದ್ದಿ ಮೂಲಗಳ ಮೂಲಕ ಒಂದಷ್ಟು ಮಾಹಿತಿ ಸಿಗುತ್ತದೆ. ಅದನ್ನು ಅತ್ಯುತ್ಸಾಹದಿಂದ ಬ್ರೇಕಿಂಗ್ ನ್ಯೂಸ್ ಎಂದು ವರದಿ ಮಾಡಲಾಗುತ್ತದೆ. ಇದರಲ್ಲಿ ಎಲ್ಲವೂ ನಿಜ ಎಂದು ನಂಬಬಾರದು. ಕೇವಲ ಸಾಧ್ಯತೆಗಳು ಮಾತ್ರ ಎಂದು ಭಾವಿಸಬೇಕು. ಏಕೆಂದರೆ ಕೆಲವೊಮ್ಮೆ ಸುದ್ದಿ ಮೂಲಗಳು ಜನರನ್ನು ದಾರಿ ತಪ್ಪಿಸಲು ಸುಳ್ಳುಗಳನ್ನು ಹರಿಯಬಿಡುತ್ತಾರೆ.

ಕೆಲವು ಅತಿಸೂಕ್ಷ್ಮ ಮನಸ್ಥಿತಿಯ ಬರಹಗಾರರು ರಾಜಕೀಯ ಮುನ್ನೋಟವನ್ನು ನಮ್ಮ ಮುಂದೆ ಇಡುತ್ತಾರೆ. ಅಂತಹ ಸಂದರ್ಭದಲ್ಲಿ ಅದನ್ನು ಒಂದಷ್ಟು ಒಪ್ಪಿಕೊಳ್ಳಬಹುದು. ಇನ್ನು ಕೆಲವು ಅರೆಬೆಂದ ಅಂಕಣಕಾರರು ತಾವು ಸಾವಿರಾರು ವರ್ಷಗಳಿಂದ ಎಲ್ಲವನ್ನೂ ಕಣ್ಣಾರೆ ನೋಡಿದವರಂತೆ ಇಡೀ ಇತಿಹಾಸವನ್ನು ತಮಗೆ ತೋಚಿದಂತೆ ಚಿತ್ರಿಸುತ್ತಾರೆ. ಯಾವ ಅನುಭವವೂ ಇಲ್ಲದೆ ಕೇವಲ ಅಕ್ಷರಗಳ ಜ್ಞಾನದಿಂದ ಅನುಭವದ ರೂಪ ನೀಡುತ್ತಾರೆ. ಇದು ಅತ್ಯಂತ ಅಪಾಯಕಾರಿ. ಇದನ್ನು ಗುರುತಿಸುವುದು ನಮ್ಮ ಜವಾಬ್ದಾರಿ.

ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಕಣ್ಣಿಗೆ ಕಾಣುವ ದೃಶ್ಯಗಳ ಜೊತೆಗೆ ಅತಿರಂಜಿತ ಅತಿರೇಕದ ಸುದ್ದಿಗಳನ್ನು ಸಿನಿಮಾ ಸಂಗೀತದೊಂದಿಗೆ ಬೆರೆಸಿ ಪ್ರಸಾರ ಮಾಡುತ್ತಾರೆ. ಇನ್ನೂ ಕೆಲವೊಮ್ಮೆ ತಾವೇ ಸಣ್ಣ ಘಟನೆಯನ್ನು ದೊಡ್ಡದಾಗಿ ಬಿಂಬಿಸಿ ತಾವು ಹೆಚ್ಚು ಕೆಲಸ ಮಾಡುತ್ತಿರುವುದಾಗಿ ಮುಖ್ಯ ಸಂಪಾದಕರಿಗೆ ತಿಳಿಸಲು ಮಾಡುವ ಕೃತಕ ಸುದ್ದಿಗಳೂ ಇರುತ್ತವೆ. ಅದರ ಬಗ್ಗೆ ಒಂದು ಅನುಮಾನದ ಎಳೆ ಇರಬೇಕಾಗುತ್ತದೆ. ಜಾಹೀರಾತುಗಳ ಹೆಸರಿನಲ್ಲಿ ಪ್ರಸಾರವಾಗುವ ವೈದ್ಯಕೀಯ, ಅರೆ ವೈದ್ಯಕೀಯ, ರಿಯಲ್ ಎಸ್ಟೇಟ್, ಚಿನ್ನದ ಅಡಮಾನ, ಸಂಕಷ್ಟ ಪರಿಹಾರದ ಜೈ ಹನುಮಾನ್ ಯಂತ್ರಗಳು ಮುಂತಾದ ಅನೇಕ ವಿಷಯಗಳನ್ನು ಮತ್ತೆ ಮತ್ತೆ ಸರ್ಕಾರದ ಅಧೀಕೃತ ಸಂಸ್ಥೆಗಳಿಂದ ದೃಢಪಡಿಸಿಕೊಂಡು ಮುಂದುವರಿಯಬೇಕು. ಮಾಧ್ಯಮಗಳ ಆ ಸುದ್ದಿಗೆ ಮರುಳಾಗಬಾರದು. ಹಣದ ಕಾರಣಕ್ಕಾಗಿ ಅವರು ವಿಶ್ವಾಸಾರ್ಹವಲ್ಲದ ವಿಷಯಗಳನ್ನು ಪ್ರಸಾರ ಮಾಡುತ್ತಾರೆ ಎಂಬುದು ಗಮನದಲ್ಲಿರಬೇಕು.

Advertisement

ಇನ್ನು ಕೌಟುಂಬಿಕ ಜಗಳಗಳನ್ನು ಯಾವುದೇ ವಿವೇಚನೆ ಸೂಕ್ಷ್ಮತೆ ಇಲ್ಲದೆ ಹಸಿಹಸಿಯಾಗಿ ಸಿನಿಮೀಯ ರೀತಿಯಲ್ಲಿ ಪ್ರಸಾರ ಮಾಡುತ್ತಾರೆ. ವೀಕ್ಷಕರ ಕುತೂಹಲವೇ ಇವರ ಟಾರ್ಗೆಟ್. ಅಂತಹ‌ ಸುದ್ದಿಗಳನ್ನು ನಿರ್ಲಕ್ಷಿಸುವುದು ಒಳಿತು. ಎಲ್ಲರ ಮನೆಯ ದೋಸೆಯೂ ತೂತು ಎಂಬ ನಾಣ್ಣುಡಿಯನ್ನು ಅರ್ಥಮಾಡಿಕೊಳ್ಳುವುದು ಒಳಿತು. ಸುದ್ದಿಗಳು ಮಾಧ್ಯಮಗಳಿಗೆ ತಲುಪುವ ಮೊದಲು ಸಾಮಾನ್ಯವಾಗಿ ಹಲವಾರು ಹಂತಗಳನ್ನು ದಾಟಿರುತ್ತದೆ. ಆದರೆ ಪತ್ರಕರ್ತರು ಅದನ್ನು ತಾವೇ ಮೊದಲು ನೋಡಿದ್ದು, ತಮಗೆ ಎಲ್ಲವೂ ತಿಳಿದಿದೆ ಎಂಬ ರೀತಿಯಲ್ಲಿ ಬ್ರೇಕಿಂಗ್ ನ್ಯೂಸ್‌ ಮಾಡುತ್ತಾರೆ. ಇದರ ಬಗ್ಗೆ ಎಚ್ಚರವಿರಲಿ. ಕೆಲವರು ಬೇಕಂತಲೇ ಪ್ರಖ್ಯಾತರಾಗಲು ಅಥವಾ ಪ್ರಚಾರ ಪಡೆಯಲು ಗಿಮಿಕ್ ಮಾಡುತ್ತಾರೆ. ಆದರೆ ಪತ್ರಕರ್ತರು ಆ ಸೂಕ್ಷ್ಮ ಗ್ರಹಿಸದೆ ಅತ್ಯುತ್ಸಾಹದಿಂದ ಅದನ್ನು ಪ್ರಸಾರ ಮಾಡುತ್ತಾರೆ. ಅದನ್ನು ನಾವು ಪರಶೀಲಿಸಿ ಅರ್ಥಮಾಡಿಕೊಳ್ಳಬೇಕು.

ಇದು ಕೆಲವು ಉದಾಹರಣೆಗಳು ಮಾತ್ರ. ಸುದ್ದಿಗಳನ್ನು ನೈಜ, ವಾಸ್ತವ, ಕಲ್ಪಿತ, ಸೂಕ್ಷ್ಮ, ದೂರದೃಷ್ಟಿಯ, ಭ್ರಮಾತ್ಮಕತೆಯ, ಉಡಾಪೆ, ಅತಿರಂಜಿತ, ಅತಿರೇಕದ, ಅತ್ಯುತ್ತಮ ಒಳನೋಟದ, ಸ್ಪೂರ್ತಿದಾಯಕ ಮುಂತಾದ ಅನೇಕ ಆಯಾಮಗಳಿಂದ ವಿವೇಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಿಗು ಇದು ಅನ್ವಯ. ಅನೇಕ ಜನರು, ಸಂಸ್ಥೆಗಳು, ಸಮಾಜ ದ್ರೋಹಿಗಳು ಸುಳ್ಳು ಸುದ್ದಿಗಳನ್ನು ಸೃಷ್ಟಿಸುವುದನ್ನೇ ಒಂದು ದಂಧೆಯಾಗಿ ಮಾಡಿಕೊಂಡಿದ್ದಾರೆ. ಸುಲಭವಾಗಿ ಇದನ್ನು ಹರಿಯಬಿಡುತ್ತಾರೆ. ಜನರು ಅದಕ್ಕೆ ಮರುಳಾಗುವುದನ್ನು ಕಾಣುತ್ತಿದ್ದೇವೆ. ಓದುವ, ವೀಕ್ಷಿಸುವ ವರ್ಗ ಒಂದು ಪ್ರಬುದ್ಧ ಮನಸ್ಥಿತಿಯ ವಿವೇಚನಾಯುಕ್ತ ಗುಣಮಟ್ಟ ರೂಪಿಸಿಕೊಂಡರೆ ಇವರ ಆಟಗಳು ನಡೆಯುವುದಿಲ್ಲ. ದಯವಿಟ್ಟು ಈ ಬಗ್ಗೆ ಗಮನಹರಿಸಲು ಕಳಕಳಿಯ ಮನವಿ……..

ಬರಹ :
ವಿವೇಕಾನಂದ. ಎಚ್. ಕೆ.
ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ…

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ತ್ರಿಪುರಾದಲ್ಲಿ ಅಡಿಕೆ ಬೆಳೆ ವಿಸ್ತರಣೆಯ ಜೊತೆಗೇ ಉಪಬೆಳೆಗೆ ಆದ್ಯತೆ..!
November 17, 2025
10:50 PM
by: ದ ರೂರಲ್ ಮಿರರ್.ಕಾಂ
ಅಸ್ಸಾಂ ಪೊಲೀಸರಿಂದ ಅಕ್ರಮ ಅಡಿಕೆ ಸಾಗಾಟ ಪತ್ತೆ
November 17, 2025
10:21 PM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆ ನೋಂದಣಿ ಮಾಡಲು ರೈತರಿಂದ ಅರ್ಜಿ ಆಹ್ವಾನ
November 15, 2025
12:13 PM
by: ರೂರಲ್‌ ಮಿರರ್ ಸುದ್ದಿಜಾಲ
ಬ್ಲಾಕ್ ಕಾಫಿ ಕುಡಿಯುವುದರಿಂದ ಏನೆಲ್ಲಾ ಲಾಭ ಸಿಗುತ್ತೆ ಗೊತ್ತ
November 15, 2025
11:33 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror