ಅನಂತಂ ವಾಸುಕಿಂ ಶೇಷಂ
ಪದ್ಮನಾಭಂ ಚ ಕಂಬಲಂ
ಶಂಖಪಾಲಂ ಧಾರ್ತರಾಷ್ಟ್ರಂ
ತಕ್ಷಕಂ ಕಾಲಿಯಂ ತಥಾ ॥
ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನಾಮ್
ಸಾಯಂ ಪಠೇನಿತ್ಯಂ ಪ್ರಾತಃಕಾಲೇ ವಿಶೇಷತಃ
ತಸ್ಮೈ ವಿಷಭಯಂ ನಾಸ್ತಿ ಸರ್ವತ್ರ
ವಿಜಯೀ ಭವೇತ್ ॥
ದೇವರ ಮೇಲಿನ ವಿಶ್ವಾಸವು ನಮ್ಮಲ್ಲಿರುವ ಚೈತನ್ಯ ವನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ಹಬ್ಬಗಳು ಬಂದಾಗ ಬದುಕಿಗೊಂದು ಟಾನಿಕ್ ಸಿಕ್ಕಂತಾಗುತ್ತದೆ. ಒಂದು ಪ್ರಾರ್ಥನೆ ಅಂತಹ ಶಕ್ತಿಯನ್ನು ನಮಗೆ ನೀಡುತ್ತದೆ ಎಂದಾದರೆ ಅದು ಭಗವಂತನ ಆಶೀರ್ವಾದವಲ್ಲದೆ ಮತ್ತೇನು ಅಲ್ಲವೇ.?
ಒಂದು ದೀರ್ಘ ವಿರಾಮದ ನಂತರ, ಹಬ್ಬಗಳ ಸಂಭ್ರಮಕ್ಕೆ ನಾಂದಿ ಹಾಡುವುದು ನಾಗರಪಂಚಮಿ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ನಾಗರ ಪಂಚಮಿಯಂದು ದೇವಾಲಯಗಳಲ್ಲಿ, ನಾಗನ ಕಟ್ಟೆಗಳಲ್ಲಿ ನಾಗ ದೇವರನ್ನು ಆರಾಧಿಸಲಾಗುತ್ತದೆ. ನಾಗನ ಕಲ್ಲಿಗೆ ಹಾಲೆರೆದು , ಎಳನೀರಿನ ಅಭಿಷೇಕ ಮಾಡಿ ನೈವೇದ್ಯ ಸಲ್ಲಿಸುವುದು ನಡೆಸಿಕೊಂಡು ಬಂದ ಪದ್ಧತಿ. ನಾಗನ ತಂಬಿಲವೂ ವಿಶೇಷವಾದ ಸೇವೆ.
ದೇಶದೆಲ್ಲೆಡೆ ನಾಗರಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಯಾ ಪ್ರದೇಶಗಳ ಪದ್ಧತಿಗಳಿಗನುಣವಾಗಿ ಆಚರಿಸಿಕೊಂಡು ಬರಲಾಗುತ್ತದೆ. ನಮ್ಮ ಕರಾವಳಿಯಲ್ಲಿ ನಾಗನೆಂದರೆ ವಿಶೇಷ ಭಕ್ತಿ. ನಮ್ಮ ದಿನನಿತ್ಯದ ಪ್ರತಿಯೊಂದು ಆಗುಹೋಗುಗಳ ಶುಭ, ಅಶುಭಗಳ ಮುನ್ಸೂಚನೆ ಈ ನಾಗಗಳು ಕೊಡುತ್ತವೆ. ಮಾತ್ರವಲ್ಲ ಮರೆತ ಹರಕೆಗಳನ್ನು ನೆನಪು ಕೂಡ ತಮ್ಮ ದರ್ಶನ ಮಾತ್ರದಿಂದಲೇ ಮಾಡುತ್ತವೆ ಎಂಬ ದೃಢವಾದ ನಂಬಿಕೆ ನಮ್ಮಲ್ಲಿದೆ. ನಾಗ ಬಂದು ಹೆಡೆ ಎತ್ತಿ ನಿಂತರೆ ಸಾಕು ನಾವು ಭಾವಪರವಶರಾಗಿ ಬಿಡುತ್ತೇವೆ. ಕೈ ಮುಗಿದು ಪ್ರಾರ್ಥಿಸಿದರೆ ಯಾವುದೇ ತೊಂದರೆ ಕೊಡದೆ ತೆರಳುವ, ಮಾತು ಮರೆತರೆ ಮತ್ತೆ ಮತ್ತೆ ದರ್ಶನ ನೀಡುವ ಸರ್ಪದ ನಡೆ ನಿಜಕ್ಕೂ ನಮ್ಮನ್ನು ಅಚ್ಚರಿಯಲ್ಲಿ ಕೆಡವುದು ಖಂಡಿತ. ಅವರವರ ಭಾವಕ್ಕೆ ಭಕ್ತಿಗೆ ಸಂಬಂಧ ಪಟ್ಟ ನಂಬಿಕೆಯೆಂದರೇ ಸರಿ ಎಂಬುದು ನನ್ನ ಅನಿಸಿಕೆ.
ನಮ್ಮ ಆಚರಣೆ ನೇರವಾಗಿ ಪ್ರಕೃತಿಗೆ ಸಂಬಂಧ ಪಟ್ಟಿದೆ. ನಮ್ಮ ಸುತ್ತಮುತ್ತ ಇರುವ ಅರಶಿನ, ಅಡಿಕೆ ಸಿಂಗಾರ,, ಅರಳು, ಬಾಳೆಹಣ್ಣು ಮೊದಲಾದವುಗಳೇ ನಾಗನ ಪೂಜಾ ಸಾಮಗ್ರಿಗಳಾಗಿರುತ್ತವೆ. ನಾಗರಪಂಚಮಿಯನ್ನು ಅಣ್ಣ ತಂಗಿ ಒಟ್ಟಾಗಿ ಆಚರಿಸುವ ಹಬ್ಬವೆಂಬ ಮಾತಿದೆ. ಪರಸ್ಪರ ಒಳಿತಿಗಾಗಿ ಹಾರೈಸುವದೇ ಈ ಹಬ್ಬದ ಉದ್ದೇಶ.
ನಾಗರಪಂಚಮಿಯ ಹಿನ್ನೆಲೆಗಿರುವ ಹಲವು ಕಥೆಗಳಲ್ಲಿ ಈ ಕಥೆಯೂ ಒಂದಾಗಿದೆ. ತಂದೆ ಪರೀಕ್ಷಿತನ ಸಾವಿಗೆ ಹಾವೊಂದು ಕಾರಣವೆಂದು ತಿಳಿದ ಜನಮೇಯ ರಾಜ ಸರ್ಪಯಾಗವನ್ನು ಮಾಡಿದನು. ಸರ್ಪಗಳೆಲ್ಲವೂ ಯಜ್ಞ ಕುಂಡಕ್ಕೆ ಆಹುತಿಯಾಗ ತೊಡಗಿದುವು. ಆಗ ಸರ್ಪಗಳ ಹಿತೈಷಿ ಆಸ್ತಿಕ ಮುನಿಯು ಜನಮೇಯ ರಾಜನನ್ನು ಪ್ರಸನ್ನಗೊಳಿಸಿದನು. ಆಗ ರಾಜ ವರವೊಂದನ್ನು ಕೇಳೆಂದು ಹೇಳಿದಾಗ ಸರ್ಪಯಜ್ಞವನ್ನು ನಿಲ್ಲಿಸುವಂತೆ ಬೇಡಿಕೊಂಡನು. ಹೀಗೆ ಸರ್ಪಯಾಗ ನಿಂತ ದಿನವೇ ನಾಗರಪಂಚಮಿಯಾಗಿತ್ತು ಎಂಬುದೇ ಆ ಕಥೆ .
ಜಗತ್ತಿನಲ್ಲಿನ ಎಲ್ಲ ಜೀವಜಂತುಗಳು ಹುಟ್ಟು ಲಯ ಕಾರ್ಯಕ್ಕೆ ಪೂರಕವಾಗಿವೆ. ನಾಗರಪಂಚಮಿಯ ದಿನ ನಾಗಗಳ ಪೂಜೆಯಿಂದ ಭಗವಂತನನ್ನು ನಾವು ತಲುಪ ಬಹುದು ಎಂಬುದು ನಮ್ಮ ನಂಬಿಕೆ. ಅಲ್ಲದೆ ಭಗವಂತನು ನಾಗಗಳ ಮೂಲಕ ಲೋಕದ ಕಾರ್ಯವನ್ನು ನಿರ್ವಹಿಸುತ್ತಾನೆ, ಎಂಬ ವಿಶಾಲ ದೃಷ್ಟಿ ಕೋನದೊಂದಿಗೆ ನಾಗನ ಪೂಜೆಯನ್ನು ಮಾಡಲಾಗುತ್ತದೆ. ಅಲ್ಲದೆ ನಮ್ಮ ಹಲವು ಸಮಸ್ಯೆಗಳನ್ನು ಬಗೆಹರಿಸಲು ನಾಗ ದೇವರ ಮೊರೆ ಹೋಗುವುದು ಹಿಂದಿನಿಂದಲೂ ನಡೆದು ಕೊಂಡು ಬಂದ ಅಭ್ಯಾಸ.
ನಾಗರಪಂಚಮಿಯ ವಿಶೇಷ ತಿನಿಸು ಅರಶಿನ ಎಲೆಯ ಕಡುಬು. ಈ ಎಲೆಯಲ್ಲಿ ಅದ್ಭುತ ಜೀವನಿರೋಧಕ ಶಕ್ತಿಯಿರುವುದರಿಂದ ದೇಹಾರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿರುತ್ತದೆ. ರುಚಿ ಹಾಗೂ ವಿಶೇಷ ಪರಿಮಳಗಳಿಂದ ಕೂಡಿರುವ ಈ ಕಡುಬು ನಾಗರಪಂಚಮಿಯ ಪ್ರಮುಖ ಖಾದ್ಯವೆಂದರೆ ಸುಳ್ಳಲ್ಲ.
ಎಲ್ಲಾ ಕಷ್ಟಗಳನ್ನು ಎದುರಿಸಲು ಶಕ್ತಿ ಕೊಡೆಂದು ಪ್ರಾರ್ಥಿಸುವ ಸಮಯ ಈ ನಾಗರಪಂಚಮಿ. ಈ ನಾಗರಪಂಚಮಿಯು ಸರ್ವರಿಗೂ ಒಳಿತನ್ನೇ ತರಲಿ ಎಂಬುದೇ ನಮ್ಮೆಲ್ಲರ ಮನದುಂಬಿದ ಹಾರೈಕೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…