ನೀರಿನ ಕೊರತೆ ಕೃಷಿಯನ್ನೇ ತಲ್ಲಣಗೊಳಿಸುತ್ತಿರುವ ಈ ಸಂದರ್ಭ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಲ್ನಾಡಿನ ಕೃಷಿಕ, ಉದ್ಯಮಿ ಸಂತೋಷ್ ಬೋನಂತಾಯ ಅವರು ತಮ್ಮ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿ ಯಶಸ್ಸಿನ ಮಾದರಿಯಾಗಿದ್ದಾರೆ. ಏಳು ವರ್ಷಗಳ ಹಿಂದೆ ಆರಂಭಿಸಿದ ಈ ಪ್ರಯೋಗ ಇಂದು ಉತ್ತಮ ಆದಾಯ ತಂದುಕೊಡುತ್ತಿದೆ. “ಬೆಳೆ ಬದಲಾವಣೆ” ಯನ್ನು ಯೋಚಿಸುತ್ತಿರುವ ರೈತರಿಗೆ ಇದು ಹೊಸ ಭರವಸೆ ಮೂಡಿಸಿದೆ.
ನೀರಿನ ಲಭ್ಯತೆ ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಯ ಭವಿಷ್ಯದ ಬಗ್ಗೆ ಆತಂಕಗೊಂಡ ಸಂತೋಷ್ ಬೋನಂತಾಯ ಅವರು ಬಲ್ನಾಡಿನಲ್ಲಿರುವ ತಮ್ಮ ಸುಮಾರು 4 ಎಕರೆ ಪ್ರದೇಶದ ಕೃಷಿ ಭೂಮಿಯಲ್ಲಿ 200ಕ್ಕೂ ಹೆಚ್ಚು ಕಸಿ ಹಲಸಿನ ಗಿಡಗಳನ್ನು ನೆಟ್ಟರು. ಆರಂಭದಲ್ಲಿ ಈ ನಿರ್ಧಾರದ ಬಗ್ಗೆ ಸಾಕಷ್ಟು ಅನುಮಾನಗಳಿದ್ದರೂ, ಇಂದು ಅದೇ ನಿರ್ಧಾರ ಅವರಿಗೆ ಉತ್ತಮ ಫಲ ನೀಡುತ್ತಿದೆ.

ಆರಂಭದಲ್ಲಿ ಭಯ… ಇಂದು ಆತ್ಮವಿಶ್ವಾಸ : ಹಲಸು ಬೆಳೆಗೆ ಮಾರುಕಟ್ಟೆ ಸಿಗುತ್ತದೆಯೇ? ಜನ ಖರೀದಿಸುತ್ತಾರೆಯೇ? ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದು ಸಾಧ್ಯವೇ? ಎಂಬ ಪ್ರಶ್ನೆಗಳು ಆರಂಭದಲ್ಲಿ ಕಾಡಿದ್ದವು ಎಂದು ಅವರು ಹೇಳುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದ ಉತ್ತಮ ಇಳುವರಿ ಆರಂಭವಾದ ಬಳಿಕ ಈ ಎಲ್ಲಾ ಆತಂಕಗಳು ದೂರವಾಗಿವೆ. ಈ ವರ್ಷ ಮಾತ್ರವೇ ಸುಮಾರು ₹4 ಲಕ್ಷದಷ್ಟು ಆದಾಯ ಹಲಸು ಬೆಳೆಯಿಂದ ಬಂದಿದೆ ಎನ್ನುತ್ತಾರೆ ಸಂತೋಷ್. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ಪ್ಯಾಕ್ ಮಾಡಿದ ಹಲಸಿನ ಹಣ್ಣು, ನೇರ ಹಣ್ಣು, ಹಲಸಿನ ಕಾಯಿ ಹಾಗೂ ಹಲಸಿನ ಗುಜ್ಜೆ ಹೀಗೆ ವಿವಿಧ ರೂಪಗಳಲ್ಲಿ ಮಾರಾಟ ಮಾಡಲಾಗಿದ್ದು, ಮಂಗಳೂರು, ಪುತ್ತೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ.

ಇಳುವರಿ ವರ್ಷದಿಂದ ವರ್ಷಕ್ಕೆ ಹೆಚ್ಚಳ : ಹಲಸಿನ ಗಿಡ ನೆಟ್ಟ ನಾಲ್ಕನೇ ವರ್ಷದಲ್ಲಿ ಮೊದಲ ಇಳುವರಿ ಆರಂಭವಾದರೂ ಅದು ಮನೆ ಬಳಕೆಗೆ ಮಾತ್ರ ಸಾಕಾಗಿತ್ತು. ಕಳೆದ ಎರಡು ವರ್ಷಗಳಿಂದ ಮಾರಾಟದ ಪ್ರಮಾಣದಲ್ಲಿ ಉತ್ಪಾದನೆ ಆರಂಭವಾಗಿದೆ. ಗಿಡಗಳು ಬೆಳೆಯುತ್ತಿದ್ದಂತೆ ಇಳುವರಿಯೂ ಹೆಚ್ಚುತ್ತಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಆದಾಯ ನಿರೀಕ್ಷಿಸಲಾಗಿದೆ.

ಹಲಸಿಗೆ ಮಳೆಗಾಲದವರೆಗೆ ಉತ್ತಮ ಬೇಡಿಕೆ : ಹಲಸಿನ ಹಣ್ಣಿಗೆ ಮಳೆ ಬರುವವರೆಗೆ ಉತ್ತಮ ಮಾರುಕಟ್ಟೆ ಇರುತ್ತದೆ. ನಂತರವೂ ಬೇಡಿಕೆ ಸಂಪೂರ್ಣ ಕಡಿಮೆಯಾಗುವುದಿಲ್ಲ. ಬೆಲೆಯಲ್ಲಿ ಮಾತ್ರ ಸ್ವಲ್ಪ ಇಳಿಕೆ ಕಂಡುಬರುತ್ತದೆ. ಹಲಸಿನ ಕಾಯಿಗೂ ಉತ್ತಮ ಬೇಡಿಕೆ ಇದೆ. ಹೋಟೆಲ್‌ಗಳು, ಗೃಹಿಣಿಯರು ಹಾಗೂ ನಗರ ಪ್ರದೇಶದ ಗ್ರಾಹಕರು ಮಾತ್ರವಲ್ಲದೆ ಗ್ರಾಮೀಣ ಪ್ರದೇಶದವರೂ ಖರೀದಿಸುತ್ತಿದ್ದಾರೆ. ರೆಡಿ ಟು ಕುಕ್ ಅಥವಾ ರೆಡಿ ಟು ಈಟ್ ಮಾದರಿಯಲ್ಲಿದ್ದರೆ ಯಾರಾದರೂ ಗ್ರಾಹಕರು ಇದ್ದೇ ಇರುತ್ತಾರೆ ಎನ್ನುವುದು ಅವರ ಅನುಭವ.
ಕೃಷಿ ಎಂದರೆ ಸಮಸ್ಯೆಗಳೂ ಇವೆ : ಸಮಸ್ಯೆ ಇಲ್ಲದ, ಸವಾಲುಗಳು ಇಲ್ಲದ ಕೃಷಿ ಯಾವುದಿದೆ..? ಹಲಸು ಬೆಳೆಯಲ್ಲೂ ಸವಾಲುಗಳಿವೆ ಎಂದು ಸಂತೋಷ್ ಬೋನಂತಾಯ ಒಪ್ಪಿಕೊಳ್ಳುತ್ತಾರೆ. ಇಲ್ಲಿಯ ಸಮಸ್ಯೆ ಬೇರೆಯದೇ, ಹಣ್ಣು ಯಾವಾಗ ಸಂಪೂರ್ಣ ಹಣ್ಣಾಗಿದೆ ಎಂಬುದನ್ನು ಹೊರಗಿನಿಂದಲೇ ಗುರುತಿಸಲು ಸಾಧ್ಯವಾಗುವುದಿಲ್ಲ. ನಿರಂತರವಾಗಿ ಪರಿಶೀಲಿಸಬೇಕು. ಕೊಯ್ಲಿನ ಸಮಯ ನಿರ್ಧರಿಸುವುದೇ ದೊಡ್ಡ ಕೌಶಲ್ಯ. ಕೆಲವು ಮರಗಳಲ್ಲಿ ರೋಗ ಸಮಸ್ಯೆಗಳೂ ಕಂಡುಬರುತ್ತವೆ. ಆದರೆ ಇವುಗಳಿಗೆ ಪರಿಹಾರಗಳಿವೆ ಎಂದು ಅವರು ಹೇಳುತ್ತಾರೆ.

ಹಲಸು ಮೇಳವೇ ಪ್ರೇರಣೆ : ಇಂದಿನ ಲಾಭದಾಯಕ ಬೆಳೆ ಅಡಿಕೆ ಕೃಷಿಯ ನಡುವೆ ಹಲಸು ಬೆಳೆಯತ್ತ ತಿರುಗುವುದು ಸುಲಭದ ಮಾತಲ್ಲ. ಆದರೆ ಹೀಗೆ ಬೆಳೆ ಬದಲಾವಣೆಗೆ ಪ್ರಮುಖ ಪ್ರೇರಣೆ ಹಲಸು ಮೇಳಗಳೇ ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಹಲಸಿನ ಮೇಲಿನ ಆಸಕ್ತಿ, ಭವಿಷ್ಯದಲ್ಲಿ ಉತ್ತಮ ಮೌಲ್ಯ ಸಿಗುತ್ತದೆ ಎಂಬ ವಿಶ್ವಾಸ ಹಾಗೂ ಹೊಸದನ್ನು ಪ್ರಯೋಗಿಸಬೇಕು ಎಂಬ ಮನೋಭಾವವೇ ಈ ಕೃಷಿಯ ಹಿಂದೆ ಇದೆ.
ನೀರಿನ ಅಗತ್ಯ ಕಡಿಮೆ : ಹಲಸು ಗಿಡ ನೆಟ್ಟ ನಂತರ ಮೊದಲ ಮೂರು-ನಾಲ್ಕು ವರ್ಷಗಳವರೆಗೆ ವಾರಕ್ಕೊಮ್ಮೆ ನೀರು ಕೊಟ್ಟರೆ ಸಾಕು. ನಂತರ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಯಾವುದೇ ಸಾವಯವ ಅಥವಾ ರಾಸಾಯನಿಕ ಗೊಬ್ಬರವನ್ನು ಸಮತೋಲನದಲ್ಲಿ ಬಳಸಬಹುದು. ಹೂ ಬಿಡುವ ಮೊದಲು ಗೊಬ್ಬರ ನೀಡುವುದು ಉತ್ತಮ ಎಂದು ಅವರು ಸಲಹೆ ನೀಡುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ

ಅಂತರವೇ ಯಶಸ್ಸಿನ ಗುಟ್ಟು : ಹಲಸಿನ ಗಿಡ ನೆಡುವಾಗ ಸುಮಾರು 30 ಅಡಿ ಅಂತರದಲ್ಲಿ ಸಂತೋಷ್ ಅವರು ಗಿಡಗಳನ್ನು ನೆಟ್ಟಿದ್ದಾರೆ. ಕೆಲವು ಕಡೆ 18 ಅಡಿ ಅಂತರದಲ್ಲಿ ನೆಟ್ಟ ಅನುಭವವೂ ಇದೆ. ಈಗ ಅನುಭವದಿಂದ ನೋಡಿದರೆ ಕನಿಷ್ಠ 22 ಅಡಿ ಅಂತರ ಅಗತ್ಯ ಎಂದು ಅವರು ಅಭಿಪ್ರಾಯಪಡುತ್ತಾರೆ. ಪ್ರೂನಿಂಗ್ (ಕೊಂಬೆ ಕತ್ತರಿಸುವಿಕೆ) ಕೂಡ ಅತ್ಯಂತ ಮುಖ್ಯವಾಗಿದೆ. ತೋಟದಲ್ಲಿರುವ ಸುಮಾರು 200 ಗಿಡಗಳಲ್ಲಿ ಸಿಂಗಾಪುರ, ಗಮ್‌ಲೆಸ್ ಸೇರಿದಂತೆ ಹಲವು ಕಸಿ ತಳಿಗಳಿವೆ.

ಮೌಲ್ಯವರ್ಧನೆಯೇ ಮುಂದಿನ ದಾರಿ : ಹಣ್ಣು ಮಾರಾಟ ಮಾತ್ರವಲ್ಲದೆ ಈ ಬಾರಿ ಹಲಸಿನ ಗುಜ್ಜೆಯನ್ನು ತುಂಡು ಮಾಡಿ “ರೆಡಿ ಟು ಕುಕ್” ರೂಪದಲ್ಲಿ ಮಾರಾಟ ಮಾಡಲಾಗಿದೆ. ಇದರ ಜೊತೆಗೆ ಮುಂದೆ ಹಲಸಿನ ಬೀಜದ ಹಿಟ್ಟು, ಹಲಸಿನ ಕಾಯಿಯ ಪುಡಿ, ಒಣಗಿಸಿದ ಹಲಸು ಉತ್ಪನ್ನಗಳು… ಹೀಗೆ ಅನೇಕ ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ತಮ ಅವಕಾಶವಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಆದರೆ, ಉತ್ಪಾದನೆಯಷ್ಟೇ ಮುಖ್ಯವಾದದ್ದು ಮಾರುಕಟ್ಟೆ ನಿರ್ಮಾಣ. ಮೌಲ್ಯವರ್ಧನೆಗೆ ಸಮಾನಾಂತರವಾಗಿ ಮಾರುಕಟ್ಟೆ ವ್ಯವಸ್ಥೆ ಬೆಳೆಸಿಕೊಳ್ಳುವುದು ಅಗತ್ಯ ಎನ್ನುತ್ತಾರೆ ಸಂತೋಷ್.
— ಶಂ. ನಾ. ಖಂಡಿಗೆ, ಉಪಾಧ್ಯಕ್ಷರು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ

ಚಾಣಾಕ್ಷ ಕೃಷಿಯೇ ಲಾಭದ ಗುಟ್ಟು : ಹಲಸಿನ ಕೃಷಿಯಲ್ಲಿ ಕೇವಲ ಹಣ್ಣು ಮಾರಾಟಕ್ಕೆ ಮಾತ್ರ ಸೀಮಿತವಾಗಬಾರದು. ಕಾಯಿ, ಹಣ್ಣು, ಗುಜ್ಜೆ, ಬೀಜ, ಮೌಲ್ಯವರ್ಧಿತ ಉತ್ಪನ್ನಗಳು, ಗ್ರಾಹಕರ ಜಾಲ… ಇವೆಲ್ಲವನ್ನೂ ಒಟ್ಟಿಗೆ ಯೋಚಿಸಿದಾಗ ಮಾತ್ರ ಲಾಭ ಹೆಚ್ಚುತ್ತದೆ ಎಂಬುದು ಸಂತೋಷ್ ಬೋನಂತಾಯ ಅವರ ಅನುಭವ. ( ಸಂತೋಷ್ ಬೋನಂತಾಯ ಅವರ ಸಂಪರ್ಕ – 9448461636 )
ರೂರಲ್ ಮಿರರ್ | ಒಳನೋಟ
ಕರಾವಳಿ ಹಾಗೂ ಮಲೆನಾಡಿನಲ್ಲಿ ನೀರಿನ ಕೊರತೆ ಅಡಿಕೆ ಬೆಳೆಗೆ ಹೊಸ ಸವಾಲು ತಂದಿದೆ. ಇಂತಹ ಸಂದರ್ಭದಲ್ಲಿ ಕಡಿಮೆ ನೀರಿನಲ್ಲಿ ಬೆಳೆಯುವ, ದೀರ್ಘಾವಧಿಯಲ್ಲಿ ಸ್ಥಿರ ಆದಾಯ ನೀಡುವ ಹಲಸು ಕೃಷಿ ಪರ್ಯಾಯ ಬೆಳೆಯಾಗಿ ಹೊರಹೊಮ್ಮುತ್ತಿದೆ. ಆದರೆ ಕೇವಲ ಗಿಡ ನೆಡುವುದರಿಂದ ಯಶಸ್ಸು ಸಿಗುವುದಿಲ್ಲ. ಸರಿಯಾದ ಅಂತರ, ಗುಣಮಟ್ಟದ ಕಸಿ ಗಿಡ, ಪ್ರೂನಿಂಗ್, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ವ್ಯವಸ್ಥೆ… ಈ ಅಂಶಗಳನ್ನು ಸಮಾನವಾಗಿ ಗಮನಿಸಿದಾಗ ಮಾತ್ರ ಹಲಸು ಕೃಷಿ ಲಾಭದಾಯಕವಾಗುತ್ತದೆ ಎಂಬುದನ್ನು ಸಂತೋಷ್ ಬೋನಂತಾಯ ಅವರ ಅನುಭವ ಸ್ಪಷ್ಟಪಡಿಸುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Puttur farmer Santosh Bonanthaya has successfully transformed part of his arecanut plantation into a 4-acre jackfruit orchard due to water scarcity. Planted seven years ago with around 200 grafted trees, the orchard now generates nearly ₹4 lakh annually through fresh fruits, raw jackfruit, ready-to-cook jackfruit pulp, and other value-added products. His experience highlights jackfruit as a sustainable alternative crop for water-stressed regions, provided farmers focus on proper spacing, pruning, value addition, and market development.
ಅಡಿಕೆಯಿಂದ ಹಲಸಿನತ್ತ ಯಶಸ್ವಿ ಪಯಣ..!
ಪುತ್ತೂರಿನ ರೈತ ಸಂತೋಷ್ ಬೋನಂತಾಯ ಅವರ 4 ಎಕರೆ ಹಲಸು ತೋಟ ಇಂದು ವರ್ಷಕ್ಕೆ ₹4 ಲಕ್ಷ ಆದಾಯ ನೀಡುತ್ತಿದೆ. ಮೌಲ್ಯವರ್ಧನೆಯೇ ಯಶಸ್ಸಿನ ಗುಟ್ಟು. … https://t.co/dRvpXezF87 #Jackfruit #FarmInnovation #TheRuralMirror #Karnataka pic.twitter.com/UAuWrOUcqp— theruralmirror (@ruralmirror) July 5, 2026
Advertisement

