ಮಳೆಗಾಲದ ದಿನಗಳೆಂದರೆ ನಮ್ಮ ಕರಾವಳಿ , ಮಲೆನಾಡು, ಹಳ್ಳಿ ಪ್ರದೇಶಗಳಲ್ಲಿ ಒಂದು ರೀತಿಯ ವನವಾಸವೇ. ಹಾಗಂತ ಕಾಡಲ್ಲೇ ಇರುತ್ತೀರಾ ಅಂತ ಕೇಳ ಬೇಡಿ.ಅಂದರೆ, ಸಿಕ್ಕಾಪಟ್ಟೆ ಸುರಿಯುವ ಮಳೆಗೆ ಮನೆಯಿಂದ ಹೊರಬರಲಾಗದ ಸ್ಥಿತಿ. ಅಷ್ಟೇ…!. ಮಳೆಗಾಲ ಒಬ್ಬೊಬ್ಬರದು ಒಂದೊಂದು ಮಾತಾದರೆ, ಅಡುಗೆ ಮನೆಯ ಒಳಗಿನಿಂದ ವಿಷಯವೇ ಬೇರೆ..!, ಇಲ್ಲೀಗ ಇಲ್ಲಗಳ ವಿಷಯ..!.
ಬೇಸಿಗೆಯಲ್ಲಿ ಮನೆಯ ಹಿತ್ತಿಲಿನಲ್ಲಿ ನಮೂನೆವಾರು ತರಕಾರಿಗಳನ್ನು ಬೆಳೆಸಿ , ನಿತ್ಯ ತಟ್ಟೆ ತುಂಬಾ ಅನ್ನಕ್ಕಿಂತ ಜಾಸ್ತಿ ತರಕಾರಿ ಹೋಳುಗಳನ್ನೇ ಊಟ ಮಾಡುವವರಿಗೆ ದಿಡೀರ್ ಕೈ ಬಾಯಿ ಕಟ್ಟಿದಂತಾಗುತ್ತದೆ. ಸೌತೆಕಾಯಿ , ಕುಂಬಳಕಾಯಿ, ಚೀನಿಕಾಯಿಗಳು ಸ್ವಲ್ಪ ದಿನ ಉಳಿವಂತಹ ತರಕಾರಿಗಳು. ಮನೆಯಲ್ಲಿ ಇವುಗಳಿದ್ದರೆ ಏನೋ ಧೈರ್ಯ. ಈ ಮಳೆಗೆ ಯಾವುದೇ ತರಕಾರಿಗಳೂ ಬೆಳೆಯದು. ಹರಿವೆ , ಬಸಳೆಯಂತೂ ಕೊಳೆತೇ ಹೋಗುವುದು. ಜೋರುಮಳೆಗೆ ಮೊದಲೇ ಗಿಡ ದೊಡ್ಡದಾಗಲಿ ಎಂದು ಸಾಲು ತಯಾರಿಸಿ ಬೀಜ ಹಾಕಿ ಗಿಡ ಮಾಡಿದರೆ ಈ ಜಡಿ ಮಳೆಗೆ ಹುಟ್ಟಿದ ಗಿಡವೂ ಕೊಳೆತೇ ಹೋಯಿತು. ಎಂದಿಗಿಂತ ಮೊದಲೇ ಸುರಿದ ಮಳೆ ಈ ಬಾರಿ ಮಳೆಗಾಲದ ತಯಾರಿಗೂ ಅವಕಾಶ ಕೊಡಲಿಲ್ಲ. ಸಾವಿರಗಟ್ಟಲೆ ಅಲ್ಲವಾದರೂ ನೂರರ ಸಂಖ್ಯೆಯ ಹಪ್ಪಳವೂ ಮಾಡಲಾಗಲಿಲ್ಲ. ಚೆನ್ನಾಗಿ ಬಲಿತ ಬಾಳೆಗೊನೆಗಳು ನೇತು ಕೊಂಡಿದ್ದರೂ ತೆಳ್ಳಗೆ ತುಂಡು ಮಾಡಿ ಬಿಸಿಲಿನಲ್ಲಿ ಒಣಗಿಸಿ ಡಬ್ಬಿಯಲ್ಲಿ ಹಾಕಿ ಇಡಲಿಲ್ಲ. ಎಲ್ಲಾ ನಮೂನೆಯ ಕಾಡು ಮಾವಿನ ಹಣ್ಣುಗಳಿದ್ದರೂ ಮಾಂಬಳದ ಚಾಪೆ ಹೊರ ತೆಗೆಯಲಾಗಲೇ ಇಲ್ಲ. ಪ್ರತಿ ವರುಷದಂತೆ ಈ ವರ್ಷ ಇಲ್ಲ. ಪ್ರಕೃತಿಯ ಮನಸಲ್ಲೇನು ಓಡುತ್ತಿದೆ ನಮಗರ್ಥವಾಗುತ್ತಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಯ ಹೃದಯದ ಬಡಿತ ಲೆಕ್ಕಕ್ಕೇ ಸಿಗುತ್ತಿಲ್ಲ. ಯಾಕೋ ಗೊತ್ತಿಲ್ಲ , ಬದಲಾಗುತ್ತಿರುವುದು ನಾವು …..ನಮ್ಮ ಬದುಕೋ ? ಪ್ರಕೃತಿಯೋ?

