ಅಯ್ಯಯ್ಯೋ .. ಹಿಂಡಿ ರೇಟು(Fodder Rate hike) ಗಗನಕ್ಕೆ ಮುಟ್ಟಿದೆ.. ಇನ್ನು ಗೋ ಸಾಕಣೆ(Animal husbandry) ಬಹಳ ಕಷ್ಟ ಕಣ್ರೀ.. ಇದು ಬಹಳ ಗೋಪಾಲಕರ ಉದ್ಘಾರ !. ನಿಜ, ಹತ್ತಿ ಕಾಳು ಹಿಂಡಿ ದರ ಮುಟ್ಟುವ ಹಾಗಿಲ್ಲ. ಶೇಂಗಾ ಹಿಂಡಿ 45 ರೂ ಕೆಜಿಗೆ, ಬೂಸಾನೂ ಸಹ ದುಬಾರಿ. ಏನು ಹಾಕೋಣ?. ಅದರಲ್ಲೂ ಸಹ ಪಶುಪಾಲನೆಯಲ್ಲಿ ನೂರು ರೂಪಾಯಿ ಉತ್ಪನ್ನವಾದರೆ 70 ರೂಪಾಯಿ ವಾಪಸ್ ಗೋವಿಗೇ ಹಿಂಡಿ ರೂಪದಲ್ಲಿ ಕೊಡಲೇ ಬೇಕು. ಇಲ್ಲದಿದ್ದರೆ ಗರ್ಭಧರಿಸುವ ಸಮಸ್ಯೆ, ರೋಗ ನಿರೋಧಕ ಶಕ್ತಿ ಕಡಿಮೆಯಾಗಿ(Problem conceiving, reduced immunity) ಕೆಚ್ಚಲುಬಾವು(Breast abscess) ಮತ್ತಿತರ ಕಾಯಿಲೆಗಳ ಆಗಮ ಸಾಮಾನ್ಯ. ನಿಜ. ಪೋಷಕಾಂಶ ಹೊಂದಿದ ಹಿಂಡಿ ಜಾನುವಾರು ಸಾಕಣೆಯಲ್ಲಿ ಅತ್ಯಂತ ಅವಶ್ಯಕ. ತೆಂಗಿನ ಗಿಡ ನೆಟ್ಟ ಮಾತ್ರಕ್ಕೆ ಕಾಯಿ ಬರುವುದೇ? ಅದಕ್ಕೆ ಕಾಲಕಾಲಕ್ಕೆ ಗೊಬ್ಬರ, ನೀರು, ಕಳೆ ತೆಗೆಯುವುದು, ಸಸ್ಯೋಪಚಾರ ಇತ್ಯಾದಿ ಮಾಡದಿದ್ದರೆ ಕಾಯಿಗಳು ಬಂದಾವೇ?
ಮೊದಲೋ 2-3 ಲೀಟರ್ ಹಾಲು ಹಿ೦ಡುವ ನಾಟಿ ಹಸುಗಳು ಬೆಟ್ಟದಲ್ಲಿ ಹೇರಳವಾಗಿ ಸಿಗುವ ಹಸಿರು ಹುಲ್ಲನ್ನು ಮೇಯ್ದು ಅವುಗಳ ಸಾಮರ್ಥ್ಯಕ್ಕೆ ತಕ್ಕಂತೆ ಹಾಲು ಕೊಡುತ್ತಿದ್ದವು. ಸದ್ಯ ಜಾನುವಾರುಗಳು ಮೇಯಲು ಗೋಮಾಳಗಳು ಇಲ್ಲದೇ ಹಸಿರು ಹುಲ್ಲಿನ ಅಭಾವದಿಂದ ನಮ್ಮ ಜಾನುವಾರುಗಳು ಕೇವಲ ಪಶುಅಹಾರದ ಮೇಲೆಯೇ ಅವಲಂಭಿತವಾಗುವ ಕಾಲ ಬಂದಿದೆ. ಪಶುಪಾಲನೆಯಲ್ಲೂ ಸಹ “ಇಂದಿನ ಕರುವೇ ನಾಳಿನ ಗೋವು” ಎಂಬ ಮಾತು ನಿಜ. ಕರು ಹುಟ್ಟಿದ ಕೂಡಲೇ ಅದಕ್ಕೆ ಸಾಕಷ್ಟು ಗಿಣ್ಣದ ಹಾಲು ನೀಡಿ ಅದರ ಬೆಳವಣಿಗೆ ಚೆನ್ನಾಗಿ ಬಂದರೆ ಬೇಗ ಫಲಕ್ಕೆ ಬಂದು ಹಾಲು ನೀದತೊಡಗುತ್ತದೆ. ಇಲ್ಲದಿದ್ದರೆ ಹೊಟ್ಟೆ ಡುಮ್ಮಣ್ಣ,ಕೈಕಾಲು ಸಣ್ಣಣ್ಣ ಆಗಿ ತಂಬೂರಿ ಗಡಿಗೆ ಹೊಟ್ಟೆಯಾಗಿ ಬಿಡುತ್ತದೆ.
ಇದಕ್ಕೆಲ್ಲ ಮೂಲ ಕಾರಣ ಸಮತೋಲಿತ ಪಶು ಆಹಾರ ನೀಡುವುದು. ಸಮತೋಲ ಪಶುಅಹಾರವೆಂದರೆ ಒಂದು ನಿಗದಿತ ಪ್ರಮಾಣದಲ್ಲಿ ಶರ್ಕರ ಪಿಷ್ಟ,ಪ್ರೊಟೀನ್,ಕೊಬ್ಬಿನ ಅಂಶ ನಾರಿನಂಶ ಇತ್ಯಾದಿಗಳನ್ನು ಒದಗಿಸುವ ಜೋಳದ ಹುಡಿ,ರಾಗಿ ಹಿಟ್ಟು, ಅಕ್ಕಿನುಚ್ಚು, ಗೋದಿಬೂಸಾ, ನೆಲಗಡಲೆ ಹಿಂಡಿ,ಹತ್ತಿಕಾಳು ಹಿಂಡಿ, ಸಾಸಿವೆ ಹಿಂಡಿ, ಸೂಯ೯ಕಾ೦ತಿ ಹಿ೦ಡಿ, ಕಾಕಂಬಿ,ಯೂರಿಯಾ,ಉಪ್ಪು, ಖನಿಜ ಮಿಶ್ರಣ, ಕಾಕಂಬಿ ಇತ್ಯಾದಿಗಳನ್ನು ಬಳಸಿ ತಯಾರಿಸುವ ಒಂದು ಮಿಶ್ರಣ. ಇವುಗಳನ್ನು ವೈಜ್ಞಾನಿಕವಾಗಿ ಮಿಶ್ರಣ ಮಾಡಿದಾಗ ಮಾತ್ರ ಸಮತೋಲ ಪಶು ಅಹಾರ ತಯಾರಿಸಲು ಸಾಧ್ಯ.
ಸಾವಯವ ಕೃಷಿಗೆ ಈಗ ಎಲ್ಲಿಲ್ಲದ ಮನ್ನಣೆ ಮತ್ತು ಅದು ಈದಿನದ ಅವಶ್ಯಕತೆ ಕೂಡಾ. ಸಗಣಿಯಿಲ್ಲದೇ ಸಾವಯವ ಕೃಷಿ ಇಲ್ಲವೇ ಇಲ್ಲ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಸಾಮಗ್ರಿ ಒದಗಿಸಲು ರಾಸಾಯನಿಕ ಗೊಬ್ಬರ ಬಳಸುವುದು ಅನಿವಾರ್ಯವಾದ ಈ ಸಂದರ್ಭದಲ್ಲಿ ಸಗಣಿ ಗೊಬ್ಬರ ಜಾಸ್ತಿ ಮಾಡುವ ಮೂಲಕ ಈ ಕೊರತೆ ನೀಗಿಸಬಹುದು. ಸಗಣಿ ಗೊಬ್ಬರ ಜಾಸ್ತಿಯಾಗಬೇಕಾದಲ್ಲಿ ಗೋಮಾತೆಯರ ಸಂಖ್ಯೆ ವೃದ್ಧಿಯಾಗಲೇ ಬೇಕು. ಸಾವಯವ ಕೃಷಿಯ ಕನಸು ನನಸಾಗಲು ಗೋಮಾತೆಯರ ಸಾಕಣೆ ಜಾಸ್ತಿಯಾಗಿ ಜಾಸ್ತಿ ಸಗಣಿ ಗೊಬ್ಬರ ಉತ್ಪಾದನೆಯಾಗಬೇಕು. ಇದಕ್ಕಾಗಿಯೇ ಬೇಕು ಗೋಮಾತೆಯ ಆಹಾರಕ್ಕೆ ಸಬ್ಸಿಡಿ!!.
ನೂರು ಕಿಲೋ ಪಶು ಆಹಾರ ತಯಾರಿಸಲು ಹುಡಿ ಮಾಡಿದ ಗೋವಿನ ಜೋಳದ ಹುಡಿ (ಶರ್ಕರ ಪಿಷ್ಟ ಒದಗಿಸಲು) ೪೫ ಕಿಲೋ, ಎಣ್ಣೆ ಇರುವ/ ಎಣ್ಣೆ ತೆಗೆದ ಅಕ್ಕಿ ತವಡು ಇದರ ೨೦ ಕಿಲೋ, ಸೂರ್ಯಕಾಂತಿ ಹಿಂಡಿ; ಹತ್ತಿಕಾಳು ಹಿಂಡಿ ಅಥವಾ ಎಳ್ಳು ಹಿಂಡಿ/ನೆಲಗಡಲೆ ಹಿಂಡಿ ಇದನ್ನು ೧೦ ಕಿಲೋ, ಬೂಸಾ ೨೦ ಕಿಲೋ, ಖನಿಜ ಮಿಶ್ರಣ ೧ ಕಿಲೋ, ಉಪ್ಪು ೧ ಕಿಲೋ ಹಾಕಿ ಮಿಶ್ರಣ ಮಾಡಿ ಇದನ್ನು ಪ್ರತಿ ಲೀಟರ್ ಹಾಲಿಗೆ ಅರ್ಧ ಕಿಲೋ ಮತ್ತು ಶರೀರ ನಿರ್ವಹಣೆಗೆ ೧.೫ ಕಿಲೋ ನೀಡಿದರೆ ಮಾತ್ರ ಉತ್ತಮ ಪೋಷಣೆ ಸಾಧ್ಯ. ಆದರೆ ಈ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೆ ಏರಿದಾಗ ಗೋಮಾತೆಯ ಪೋಷಣೆ ಬಹಳ ಕಷ್ಟ. ಕಾರಣ ಅನೇಕ ರೈತರಿಗೆ ಹಾಲಿಗೆ ತಕ್ಕ ಹಾಗೆ ದರ ದೊರಕದಿರುವುದರಿಂದ ಪಶು ಪಾಲನೆ ಕಷ್ಟವಾಗಿ ಬಿಟ್ಟಿದೆ. ಹೀಗಿದ್ದಾಗ ಪಶು ಆಹಾರಕ್ಕೆ ಸಬ್ಸಿಡಿಯೂ ಸಹ ಇಲ್ಲ.
ಒಂದು ಸಣ್ಣ ಅಂಕಿ ಅಂಶವನ್ನೇ ಗಮನಿಸೋಣ. ಭಾರತ ಸರ್ಕಾರವು ಪ್ರತಿ ವರ್ಷ ಮಳೆಗಾಲಕ್ಕಿಂತ ಮೊದಲು ರೂ: ೮೦,೦೦೦ ಕೋಟಿಗಳಷ್ಟು ರಾಸಾಯನಿಕ ಗೊಬ್ಬರಗಳಾದ ಡಿಏಪಿ, ಪೊಟ್ಯಾಶ್ ಇತ್ಯಾದಿಗಳಿಗೆ ಸಬ್ಸಿಡಿ ನೀಡುತ್ತದೆ. ಇದಾದ ಮೇಲೆ ಮತ್ತೊಂದು ಬೆಳೆಗೆ ರಾಸಾಯನಿಕ ಗೊಬ್ಬರ ಪೂರೈಸಲು ೧೫೦೦೦ ಕೋಟಿಗಳಷ್ಟು ಸಬ್ಸಿಡಿ ನೀಡುತ್ತದೆ. ಇನ್ನು ಯೂರಿಯಾ ಗೊಬ್ಬರಕ್ಕೆ ನೀಡುವ ಸಬ್ಸಿಡಿ ಪ್ರತಿ ಸ್ದೀಸನ್ನಿಗೆ ರೂ ೨೫,೦೦೦ಕೋಟಿಗಳು ಎಂದರೆ ಆಶ್ಚರ್ಯವಾಗದೇ ಇರುತ್ತದೆಯೇ? ಎರಡೂ ಸೇರಿ ಒಟ್ಟು ೧,೫೦,೦೦೦ ಕೋಟಿಗಳಷ್ಟು ಸಬ್ಸಿಡಿಗೇ ಹೋದರೆ, ಇಷ್ಟು ಬೃಹತ್ ಮೊತ್ತದ ಸಾರ್ವಜನಿಕರ ತೆರಿಗೆಯ ಹಣ ರಾಸಾಯನಿಕ ಗೊಬ್ಬರ ರೂಪದಲ್ಲಿ ರೈತನ ಹೊಲ ಸೇರಿ ಫಲವತ್ತಾದ ಮಣ್ಣನ್ನು ಹಾಳುಮಾಡುತ್ತದೆ.
ಹಾಗಿದ್ದರೆ ಇಷ್ಟು ಬೃಹತ್ ಮೊತ್ತವನ್ನು ಗೋಮಾತೆಯ ಪಶು ಆಹಾರಕ್ಕೆ ನೀಡಿದರೆ ಅಗಾಧ ಪ್ರಮಾಣದಲ್ಲಿ ಸಾವಯವ ಗೊಬ್ಬರ ದೊರಕಿ ಭೂಮಿಯ ಆರೋಗ್ಯವೂ ವೃದ್ಧಿಯಾಗುತ್ತದೆ ಅಲ್ಲವೇ? ಅಲ್ಲದೇ ರಾಸಾಯನಿಕ ಗೊಬ್ಬರದ ಬೆಲೆ ಸಬ್ಸಿಡಿ ಇಲ್ಲದಿದ್ದರೆ ಜಾಸ್ತಿಯಾಗಿ ಅದನ್ನು ಕೊಳ್ಳುವವರ ಸಂಖ್ಯೆಯೂ ಸಹ ಗಣನೀಯವಾಗಿ ಕಡಿಮೆಯಾಗುತ್ತದೆ. ಹೀಗಿದ್ದಾಗ ಬೇಡ ಬೇಡವೆಂದರೂ ಸಾವಯವ ಕೃಷಿಯತ್ತ ಜನ ಸಾಗಿಯೇ ಸಾಗುತ್ತಾರೆ ಅಲ್ಲವೇ? ಒಂದು ಕಡೆ ಗೋಮಾತೆಯ ಆಹಾರಕ್ಕೂ ಸಬ್ಸಿಡಿ ನೀಡಿದ ಹಾಗಾಯಿತು.ಮತ್ತೊಂದೆಡೆ ಉತ್ತಮ ಗುಣಮಟ್ಟದ ಗೊಬ್ಬರವೂ ಉತ್ಪಾದನೆಯಾಗಿ ಕೃಷಿ ಸಾವಯವವಾಗಿ ಪರಿವರ್ತನೆಯಾದಂತಾಯಿತು ಅಲ್ಲವೇ?
ಮತ್ತೊಂದು ವಿಷಯವೆಂದರೆ ವಿದೇಶಗಳಿಂದ ರಾಸಾಯನಿಕ ಗೊಬ್ಬರದ ತಯಾರಿಕೆಗೆ ಅವಶ್ಯವಿರುವ ಕಚ್ಚಾವಸ್ತುಗಳನ್ನು ತರಿಸಲು ನೀಡುವ ಅಗಾಧ ಪ್ರಮಾಣದ ವಿದೇಶಿ ವಿನಿಮಯ ಹಣವೂ ನಮಗೇ ಉಳಿಯುತ್ತದೆ. ಭಾರತ ದೇಶದಲ್ಲಿ ಸುಮಾರು ೩೦ ಲಕ್ಷ ರೈತರು ಭೂರಹಿತ ಕಾರ್ಮಿಕರಾಗಿದ್ದು ಜೀವನಕ್ಕೆ ಪಶುಪಾಲನೆಯನ್ನೇ ಅವಲಂಭಿಸಿದ್ದಾರೆ. ಇವರ ಖಾತೆಗೆ ನೇರವಾಗಿ ಹಣ ಹೋಗುವುದರಿಂದ ಅವರು ಸ್ವಾವಲಂಭಿಗಳಾಗಿ ಆರೋಗ್ಯಭರಿತ ಭಾರತವಾಗುವುದರಲ್ಲಿ ಸಂದೇಹವೇ ಇಲ್ಲ.
ನಮ್ಮ ದೇಶದ ಕೆಲವೇ ಕೆಲವು ರಾಜ್ಯಗಳಾದ ಬಿಹಾರ, ಗೋವಾ, ಕೇರಳಾ ಇತ್ಯಾದಿ ಬೆರಳಿಕೆಯಷ್ಟು ರಾಜ್ಯಗಳು ಮಾತ್ರ ಅಲ್ಪ ಸಬ್ಸಿಡಿ ಪಶು ಆಹಾರಕ್ಕೆ ನೀಡುತ್ತವೆ. ಉಳಿದಂತೆ ಯಾವ ರಾಜ್ಯಗಳೂ ಸಹ ಈ ಬಗ್ಗೆ ತಲೆಕೆಡಿಸಿಕೊಂಡ ಹಾಗಿಲ್ಲ. ಎಂತೆಂತದೋ ಯೋಜನೆಗಳಿಗೆ ಕೋಟ್ಯಾಂತರ ರೂಪಾಯಿ ಸಬ್ಸಿಡಿ ನೀಡುವಾಗ ಪುಣ್ಯಕೋಟಿ ಗೋಮಾತೆಯ ಆಹಾರಕ್ಕೆ ಸಬ್ಸಿಡಿ ಯಾಕಿಲ್ಲ ಎಂದು ಬಹುಸಂಖ್ಯಾತ ಗೋಪಾಲಕರು ಧ್ವನಿ ಎತ್ತಬೇಕಲ್ಲವೇ? ಎತ್ತಲೇ ಬೇಕು..ಎತ್ತಬಹುದು ಅಂದುಕೊಳ್ಳೋಣ..
ಡಾ: ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…