ನಾನೀಗ ಹೇಳ ಹೊರಟಿರುವುದು ಟೈಲರ್ ಮಾವನ ಬಗ್ಗೆ. ನಮ್ಮ ನಿಮ್ಮ ನೆಚ್ಚಿನ ಟೈಲರ್ ಮಾಮ. ಕಟ ಕಟ ಸದ್ದು ಮಾಡುತ್ತಾ, ಕೈ , ಕಾಲಿಗೆರಡಕ್ಕೂ ಕೆಲಸ ಕೊಡುತ್ತಾ, ಟೇಪಿನಲ್ಲಿ ಅಳತೆ ಮಾಡುತ್ತಾ ಪೆನ್ಸಿಲ್ ನಲ್ಲಿ ಗುರುತಿಸುತ್ತಾ , ಕತ್ತರಿಯಲ್ಲಿ ಬಟ್ಟೆಯನ್ನು ಕತ್ತರಿಸುತ್ತಾ ,ಒಂದಿಲ್ಲೊಂದು ಕೆಲಸದಲ್ಲಿ ನಿರತರಾಗಿರುತ್ತಿದ್ದ ಟೈಲರ್ ಮಾಮ ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದು. ಆಟದ ಮೈದಾನದ ಪಕ್ಕದಲ್ಲೇ ಆತನ ಕಟ್ಟಡವಿದ್ದ ಕಾರಣ ಆಟಕ್ಕೆಂದು ಬಂದ ಮಕ್ಕಳು ಒಂದು ಬಾರಿ ಇಣುಕದೆ ಹೋಗಲಾರರು. ಟೈಲರ್ ಮಾವನ ಕೈ ಚಳಕವನ್ನು ಬೆಕ್ಕಸ ಬೆರಗಾಗಿ ನೋಡುತ್ತಾ ಕುಳಿತ ಮಕ್ಕಳು ನೋಡಿಯೇ ಬಾಕಿ. ಬಣ್ಣ ಬಣ್ಣದ ಬಟ್ಟೆಗಳು ಆತನ ಕೈಯಲ್ಲಿ ವಿವಿಧ ಉಡುಗೆಗಳಾಗಿ ಪರಿವರ್ತನೆಗೊಳ್ಳುವುದನ್ನು ಆಸಕ್ತಿಯಿಂದ ನೋಡುವ ಮಕ್ಕಳು ಟೈಲರ್ ಮಾಮನ ನಿತ್ಯ ವೀಕ್ಷಕರು. ಸಮಯಕ್ಕೆ ಮಕ್ಕಳು ಬಾರದಿದ್ದರೆ ಏನನ್ನೋ ಕಳೆದು ಕೊಂಡಂತಾಗುತ್ತದೆ ಟೈಲರ್ ಮಾವನಿಗೆ.
ಅಲ್ಲದೆ ಮಕ್ಕಳ ಮನೆಯ ಯಾವುದೇ ಹೊಲಿಗೆ ಕೈಂಕರ್ಯಗಳು ಅದೇ ಕೈಗಳಲ್ಲೇ ಆಕಾರ ಪಡೆಯುವುದು ತಾನೇ? ! ಆತನಷ್ಟು ಚೆನ್ನಾಗಿ ಹೊಲಿಯುವವರೇ ಇಲ್ಲ ಎಂಬ ಬಿಟ್ಟಿ ಪ್ರಚಾರಕರು ಈ ಮಕ್ಕಳೇ!! ಹಾಗಾಗಿ ಮಕ್ಕಳ ಸ್ವಲ್ಪ ತರಲೆ , ಹರಟೆ, ಗಲಾಟೆಗಳನ್ನೆಲ್ಲಾ ಮನಸಿಗೆ ಹಚ್ಚಿ ಕೊಳ್ಳದೆ ನಗು ನಗುತ್ತಾ ಅವರೊಂದಿಗೆ ಬೆರೆಯುವುದು ಟೈಲರ್ ಮಾವನ ಇಷ್ಟದ ಕೆಲಸಗಳಲ್ಲೊಂದು. ಮಕ್ಕಳು ಬರದೇ ಇದ್ದರೆ ಏನೋ ಕಳೆದು ಕೊಂಡ ಅನುಭವ.
ಶಾಲೆಗೆ ರಜೆ ಇದ್ದಾಗ ಗಲಗಲವೆನ್ನುತ್ತಿದ್ದ ಟೈಲರ್ ಮಾಮನ ಬಟ್ಟೆ ಅಂಗಡಿ, ಶಾಲೆ ಸುರುವಾಯಿತೆಂದರೆ ಹೊಲಿಗೆ ಯಂತ್ರದ ಶಬ್ದಕ್ಕೇ ಸೀಮಿತವಾಗುತ್ತಿತ್ತು. ಹೊಲಿಗೆ ಕೆಲಸವೂ ವೇಗವಾಗುತ್ತಿತ್ತು. ಸಂಜೆ ಮನೆಗೆ ಮರಳುವ ಮಕ್ಕಳಿಗಾಗಿ ಕಾಯುವುದು ಟೈಲರ್ ಮಾವನ ಮೆಚ್ಚಿನ ಕೆಲಸ .
ಒಂದು ಹಳ್ಳಿಯಲ್ಲಿ ಒಬ್ಬನೋ ಇಬ್ಬರೋ ದರ್ಜಿಗಳಿದ್ದರಾಯಿತು. ಜನಸಂಖ್ಯೆಯೂ ಸೀಮಿತವಾಗಿದ್ದ ಕಾಲದಲ್ಲಿ ವರ್ಷಕ್ಕೊಂದೋ ಎರಡೋ ಜೊತೆ ಬಟ್ಟೆಗಳನ್ನು ಹೊಲಿಸಿದರಾಯಿತು. ಊರ ಜಾತ್ರೆಗೋ, ಮನೆಯಲ್ಲಿ ನಡೆಯುವ ವಿಶೇಷ ಶುಭಸಮಾರಂಭಗಳಿಗೆ ಹೊಸ ವಸ್ತ್ರಗಳನ್ನು ಹೊಲಿಸುವುದು ನಡೆದುಕೊಂಡು ಬಂದ ಪದ್ಧತಿ. ಇನ್ನೂ ಪ್ರತಿ ವರ್ಷ ಶಾಲಾ ಸಮವಸ್ತ್ರಗಳನ್ನು ಹೊಲಿಸುವುದು ದೊಡ್ಡ ವಿಷಯ. ಅದೂ ಇಂದಿನಂತೆ ಕಡ್ಡಾಯವಲ್ಲದಿದ್ದುದರಿಂದ ದೊಡ್ಡ ಮಕ್ಕಳ ಸಣ್ಣದಾದ ಸಮವಸ್ತ್ರಗಳು ಚಿಕ್ಕವರಿಗೆ ವರ್ಗಾವಣೆಗೊಳ್ಳುತ್ತಿದ್ದುವು. ಇನ್ನೂ ಒಂದು ಇಡೀ ಟಾಕಿ ಬಟ್ಟೆಯನ್ನು ಖರೀದಿಸಿ ಮನೆಯವರೆಲ್ಲರೂ ಒಂದೇ ರೀತಿಯಲ್ಲಿ ಹೊಲಿಸಿ ಧರಿಸುತ್ತಿದ್ದರು. ಅಳತೆಯಲ್ಲಿ ಮಾತ್ರ ವ್ಯತ್ಯಾಸ. ಒಂದೇ ರೀತಿಯ ಬಟ್ಟೆಯಲ್ಲಿ ಹೊಲಿಸಿದ ವಸ್ತ್ರಗಳನ್ನು ಇಡೀ ಮನೆಯವರು ಧರಿಸುವುದು ಆ ದಿನಗಳಲ್ಲಿ ಸಾಮಾನ್ಯ ಸಂಗತಿ. ಬಟ್ಟೆಗಳನ್ನು ನೋಡಿಯೇ ಒಂದೇ ಮನೆಯವರೆನ್ನಬಹುದಿತ್ತು. ಈಗಲೂ ಅಪ್ಪ, ಅಮ್ಮ,ಮಕ್ಕಳು ಒಂದೇ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ಅಂದು ಅನಿವಾರ್ಯತೆ, ಇಂದು ಫ್ಯಾಷನ್ ಅಷ್ಟೇ ವ್ಯತ್ಯಾಸ….!
ಅಂದಿನ ದಿನಗಳಲ್ಲಿ ದರ್ಜಿ ಅನಿವಾರ್ಯ. ಈಗಲೂ ಅನಿವಾರ್ಯವೇ. ಅಂದೂ ದರ್ಜಿ ಹೊಲಿದದ್ದೇ ಸ್ಟೈಲು ಇಂದೂ ದರ್ಜಿ ಹೊಲಿದದ್ದೇ ಸ್ಟೈಲು. ಆದರೆ ಹೆಸರು ಬೇರೆ . ಹೊಲಿಸುವವರು ಬಟ್ಟೆ , ಅಳತೆ ಕೊಟ್ಟು ಬಂದರಾಯಿತು. ಟೈಲರ್ ಹೊಲಿದದ್ದೇ ಅಂತಿಮ. ಆದರೆ ಈಗ ಹಾಗಲ್ಲ. ಕಸ್ಟಮರ್ ಏನು ಹೇಳುತ್ತಾನೋ ಹಾಗೇ ಹೊಲಿಯಬೇಕು. ಇಲ್ಲವಾದರೆ ಅದೇ ಬಟ್ಟೆಯನ್ನು ಟೈಲರ್ ಮುಖಕ್ಕೆ ಬಿಸಾಡುವ ಕಸ್ಟಮರ್ ಗಳೇ ಜಾಸ್ತಿ. ಅದೇ ಕಾಯಕವಾದರೂ ಭಾವನೆಗಳು ಬೇರೆ ಬೇರೆ.
ಇಂದು ಉತ್ತಮ ಟೈಲರ್ ಗೆ ಒಳ್ಳೆಯ ಬೇಡಿಕೆಯಿದೆ. ಇದು ಬಹು ಬೇಡಿಕೆಯ ಉದ್ಯಮವಾಗಿದೆ. ಒಬ್ಬ ಟೈಲರ್ ಕೈಕೆಳಗೆ ಹತ್ತಾರು ಜನರು ಕೆಲಸ ಮಾಡುತ್ತಾರೆ. ಪ್ರತಿಯೊಂದು ಕೆಲಸಕ್ಕೂ ಪ್ರತ್ಯೇಕ ಜನರಿರುತ್ತಾರೆ. ಬಟ್ಟೆಗಳನ್ನು ಅಳತೆ ಮಾಡುತ್ತಾರೆ. ಅಳತೆ ಪ್ರಕಾರ ಕತ್ತರಿಸುವವನೊಬ್ಬ, ಹೊಲಿಯುವವನೊಬ್ಬ, ಗುಬ್ಬಿ( ಬಟನ್) ಅಥವಾ ಜಿಪ್ ಹೊಲಿಯುವವ ಮತ್ತೊಬ್ಬ, ಇನ್ನೂ ಕೈ ಹೊಲಿಗೆ ಮಾಡುವವ ಮಗದೊಬ್ಬ. ಎಂಬ್ರಾಯಿಡರಿ ಕೆಲಸಗಳಿದ್ದರೆ ಅದಕ್ಕೆ ಬೇರೆ ಮೆಶಿನ್ ಗಳಿವೆ. ಹೀಗೆ ಒಂದೇ ಬಟ್ಟೆ ವಿವಿಧ ಜನರ ಕೈಚಳಕದಿಂದ ಹೊರಹೊಮ್ಮುವುದು ಇಂದಿನ ವಸ್ತುಸ್ಥಿತಿಗೆ ಹಿಡಿದ ಕನ್ನಡಿ. ಟೈಲರ್ ಎಂದರೆ ನಮ್ಮವ, ಆತ್ಮೀಯ ಮನೆಯ ಸದಸ್ಯ ಎಂಬ ಭಾವನೆ ದೂರವಾಗಿ ಬ್ಯುಸಿನೆಸ್ ಮಾನ್ ಆಗಿ ಕಣ್ಣಮುಂದೆ ಬಂದು ನಿಲ್ಲುತ್ತಾನೆ. ಇವೆಲ್ಲ ಬದಲಾವಣೆಯ ಹೊರತಾಗಿಯೂ ಮಧ್ಯ ರಾತ್ರಿಯಾದರೂ ಸರಿ, ಕರೆಂಟ್ ಕೈ ಕೊಟ್ಟರೂ, ದೀಪದ ಬೆಳಕಿನಲ್ಲಾದರೂ ಹೊಲಿದು ಸಮಯಕ್ಕೆ ಸರಿಯಾಗಿ ತಲುಪಿಸುವ ಕೇಶವಣ್ಣನಂತಹ ಅಣ್ಣಂದಿರಿಗೆ, ಶೀಲಕ್ಕನಂತಹ ಅಕ್ಕಂದಿರಿಗೆ, ನನ್ನ ಈ ಬರಹ ಅರ್ಪಣೆ…….
–ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…