Advertisement
Opinion

ಜಗತ್ತಿನ ಶಿಕ್ಷಕ……. ಒಂದು ಪಾಠ……

Share

ಶಿಕ್ಷಕರ ದಿನದಂದು ಜಗತ್ತಿನ ಅತಿ ಬುದ್ಧಿವಂತ ಆಲ್ಬರ್ಟ್ ಐನ್ ಸ್ಟೈನ್ ಅವರನ್ನು ನೆನೆಯುತ್ತಾ ಒಂದು ಸಂಕಲ್ಪ.

” ಮೂರು ಮಹಾನ್ ಶಕ್ತಿಗಳು ಜಗತ್ತನ್ನು ಆಳುತ್ತವೆ. ಅವೆಂದರೆ, ಮೂರ್ಖತನ – ಭಯ – ದುರಾಸೆ…..

ಆಲ್ಬರ್ಟ್ ಐನ್ಸ್ಟೈನ್… ಜಗತ್ತಿನ ಅತ್ಯಂತ ಬುದ್ದಿವಂತ ಎಂದು ಕರೆಯಲ್ಪಡುವ ವಿಜ್ಞಾನಿ….

ಇದಕ್ಕೆ ವಿರುದ್ಧ ಪದಗಳು. ಮೂರ್ಖತನ × ಬುದ್ದಿವಂತಿಕೆ,  ಭಯ × ಧೈರ್ಯ, ದುರಾಸೆ × ಆಸೆ,…….

ಚಿಂತನೆಗೆ ಹಚ್ಚುವ ಬಹುಮುಖ್ಯ ವಿಷಯವಿದು. ಒಂದು ರೀತಿಯಲ್ಲಿ ನಮ್ಮೊಳಗೆ ಒಂದು ಆತ್ಮಾವಲೋಕನ ಪ್ರಕ್ರಿಯೆಗೆ ಚಾಲನೆ ನೀಡಬಹುದಾದ ವಿಷಯವಿದು. ವ್ಯಕ್ತಿಗತವಾಗಿ ಇದನ್ನು ಹೇಳಿರುವುದು ಜಗತ್ತಿನ ಅತ್ಯಂತ ಬುದ್ದಿವಂತ ವ್ಯಕ್ತಿ. ಆದ್ದರಿಂದ ಇದು ಪರಿಶೀಲನೆಗೆ ಅರ್ಹ ಎಂದು ಭಾವಿಸುತ್ತೇನೆ….. ಭಾರತದ ಮಟ್ಟಿಗೆ ಈ ಮೂರು ಅಂಶಗಳು ಬಹುತೇಕ ಸತ್ಯ ಮತ್ತು ವಾಸ್ತವ.

ನೇರವಾಗಿ ಹೇಳಬೇಕೆಂದರೆ ಈ ಸಮಾಜದೊಂದಿಗಿನ ನನ್ನ ಅನುಭವದಲ್ಲಿ ರೂಪಗೊಂಡಿರುವ ಅಭಿಪ್ರಾಯವೆಂದರೆ ಭಾರತದ ಮಧ್ಯಮ ವರ್ಗದ ಜನ ಬಹುತೇಕ ಮೂರ್ಖತನದ ಹತ್ತಿರದಲ್ಲಿದ್ದಾರೆ. ಆದರೆ ಆ ಮೂರ್ಖತನ ಸಂಪೂರ್ಣ ಅರಿವಿಲ್ಲದ ಸಹಜ ಅಜ್ಞಾನವಲ್ಲ. ಅದು ಸ್ವಾರ್ಥ ಮತ್ತು ಸೋಮಾರಿತನದ ಮಿಶ್ರಣವಾಗಿ ಕಂಡುಬರುತ್ತದೆ. ಬಹುತೇಕ ಶ್ರೀಮಂತರು ಅಹಂಕಾರ ಮತ್ತು ದುಷ್ಟತನದ ಹತ್ತಿರದಲ್ಲಿದ್ದಾರೆ. ಅದು ಹಣ, ಅಧಿಕಾರ, ಅಂತಸ್ತಿನ ಸಮ್ಮಿಲನದ ಒಟ್ಟು ಭಾವ. ಮೂರ್ಖತನದ ಇನ್ನೊಂದು ಮುಖ. ಬಡವರು ಬದುಕುವುದೇ ಒಂದು ಸಾಧನೆ ಎಂಬ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಅವರು ಅಜ್ಞಾನಿಗಳೇ ಆದರೂ ಅದೊಂದು ಅನಿವಾರ್ಯ ಮೂರ್ಖತನ ಮತ್ತು ವ್ಯವಸ್ಥೆಯ ಸೃಷ್ಟಿ.

ಭಯ, ಇದು ಸಹ ಮಧ್ಯಮ ವರ್ಗದವರಲ್ಲಿಯೇ ಹೆಚ್ಚು. ಭಯ ಕೇವಲ ಒಂದು ರೀತಿಯಲ್ಲಿ ಇಲ್ಲ. ಅದು ಸಾವಿನ ಭಯ, ಸೋಲಿನ ಭಯ, ಅವಮಾನದ ಭಯ, ಕಳೆದುಕೊಳ್ಳುವ ಭಯ ಹೀಗೆ ನಾನಾ ರೀತಿಯಲ್ಲಿರುತ್ತದೆ. ಇಲ್ಲಿ ಶ್ರೀಮಂತರಿಗೂ ಭಯ ಇರುತ್ತದೆ. ಆದರೆ ತಮ್ಮ ಬಳಿ ಇರುವ ಹಣದಿಂದ ವ್ಯಾವಹಾರಿಕವಾಗಿ ಅದನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಅದು ಇನ್ನೊಂದು ರೀತಿಯಲ್ಲಿ ಹೆಚ್ಚು ಭಯವಾಗಿ ಮಾರ್ಪಡುತ್ತದೆ. ಬಡವರಿಗೆ ಹಣವಿಲ್ಲದ ಕಾರಣವೇ ಭಯ ಸ್ವಲ್ಪ ಕಡಿಮೆಯಾಗಲು ಕಾರಣವಾಗಿರುತ್ತದೆ. ಆದರೆ ಅವರಿಗೆ ಸದಾ ಬದುಕಿನ ಭಯವೇ ಕಾಡುತ್ತಿರುತ್ತದೆ.

ದುರಾಸೆ, ಇಲ್ಲಿ ಶ್ರೀಮಂತ ಮತ್ತು ಮಧ್ಯಮ ವರ್ಗದವರಲ್ಲಿ ಅಂತಹ ವ್ಯತ್ಯಾಸವೇನು ಇಲ್ಲ. ಆಸೆ, ಅತಿಯಾಸೆ, ಮಹದಾಸೆ, ದುರಾಸೆಯಾಗಿ ಪರಿವರ್ತನೆಯಾಗುತ್ತಾ ಸಾಗುತ್ತದೆ. ಇದು ಎಂದೂ ತೃಪ್ತಿಯಾಗದ ನಿರಂತರ ಅತೃಪ್ತಿಯಾಗಿ ಜೀವ ಇರುವವರಿಗೂ ಕಾಡುತ್ತದೆ. ಇದಕ್ಕೆ ಮಿತಿಯೇ ಇಲ್ಲ. ಬಡವರ ಆಸೆ ದುರಾಸೆ ಬಹುತೇಕ ಜೀವನದ ಮೂಲಭೂತ ಅವಶ್ಯಕತೆಗಳಿಗೇ ಸೀಮಿತವಾಗಿರುತ್ತದೆ.

ಮೂಲಭೂತವಾಗಿ ಮನುಷ್ಯನ ಈ ಮೂರ್ಖತನ, ಭಯ ಮತ್ತು ‌ದುರಾಸೆಗಳು ಆತ ನಾಗರಿಕ ಸಮಾಜದ ಪ್ರವೇಶಿಸುವಾಗಲೇ ಆತನೊಳಗೆ ಬೆಳವಣಿಗೆ ಹೊಂದಿರಬೇಕು. ಅದನ್ನು ಧಾರ್ಮಿಕ ಚಿಂತಕರು ಭಕ್ತಿ – ನಂಬಿಕೆಯಾಗಿ ಮಾರ್ಪಡಿಸಿ ಜನರನ್ನು ಆ ಮೂಲಕ ನಿಯಂತ್ರಿಸಿ ಆಳುತ್ತಾರೆ. ತದನಂತರ ರಾಜಪ್ರಭುತ್ವ ಜನರ ಈ ಭಾವನೆಗಳ ಮೇಲೆಯೇ ಅವರನ್ನು ಗುಲಾಮರನ್ನಾಗಿಸಿ ಆಡಳಿತ ನಡೆಸುತ್ತದೆ. ರಾಜ ಪ್ರತ್ಯಕ್ಷ ದೈವ ಎಂಬುದನ್ನು ಬಲವಾಗಿ ನಂಬಿಸಲಾಗುತ್ತದೆ. ಇದು ಕೆಲವು ಸಂದರ್ಭಗಳಲ್ಲಿ ಉತ್ತಮ, ಕೆಲವು ಸನ್ನಿವೇಶಗಳಲ್ಲಿ ಸಮಾಧಾನಕರ, ಮತ್ತೆ ಕೆಲವು ಕಾಲಘಟ್ಟದಲ್ಲಿ ಘನಘೋರ ಪರಿಣಾಮ ಬೀರಿರುತ್ತದೆ.

ಇದನ್ನೆಲ್ಲಾ ಮೀರಿ ಇದರ ಆಧುನಿಕ ರೂಪಾಂತರವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗುತ್ತದೆ. 19 ನೇ ಶತಮಾನದ ಐನ್ಸ್ಟೈನ್ ಈ ಮಾತುಗಳನ್ನು ಹೇಳಿರಬೇಕಾದರೆ ಅದು ಈಗಲೂ ಎಷ್ಟು ಪ್ರಸ್ತುತ ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಈಗಲೂ ನಮ್ಮ ಆಡಳಿತ ವ್ಯವಸ್ಥೆ ಜನರ ಈ‌ ಭಾವನೆಗಳ ಮೇಲೆಯೇ ಸವಾರಿ ಮಾಡುತ್ತಿದೆ.

ದರೋಡೆಕೋರ, ಅತ್ಯಾಚಾರಿ, ವಚನ ಭ್ರಷ್ಟ, ಕ್ರಿಮಿನಲ್ ಗಳು ಚುನಾವಣೆಯಲ್ಲಿ ಲಕ್ಷಾಂತರ ಮತಗಳನ್ನು ಪಡೆದು ಆಯ್ಕೆಯಾಗುತ್ತಿರುವಾಗ ಐನ್ಸ್ಟೈನ್ ಮಾತು ನಿಜ ಎನಿಸುವುದಿಲ್ಲವೇ ?

ನಮ್ಮದೇ ತೆರಿಗೆ ಹಣ ತಿಂದು, ತಮ್ಮ ಸಂಸಾರ ಸಾಗರದಲ್ಲಿ ಸುಖವಾಗಿ ತೇಲುತ್ತಿರುವ ಅಧಿಕಾರಿಗಳು, ನಮ್ಮ ಬಳಿಯೇ ಲಂಚ ತಿಂದು ನಮ್ಮನ್ನೇ ಅಸ್ಪೃಶ್ಯರಂತೆ ನೋಡುವ ವ್ಯವಸ್ಥೆ ರಾಜಾರೋಷವಾಗಿ ನಡೆಯುವಾಗ ಐನ್ಸ್ಟೈನ್ ನೆನಪಾಗುವುದಿಲ್ಲವೇ ?

ಒಂದೇ ಕಾನೂನಿನ ನಿಯಮವನ್ನು ಬಡವರಿಗೆ ಒಂದು ರೀತಿ, ಶ್ರೀಮಂತರಿಗೆ – ಬಲಿಷ್ಠರಿಗೆ – ತಮ್ಮ ಸಂಬಂಧಿಗಳಿಗೆ ಒಂದು ರೀತಿ ನಮ್ಮ ಕಣ್ಣ ಮುಂದೆಯೇ ಬಹಿರಂಗವಾಗಿ ಅನ್ವಯಿಸುತ್ತಿರುವಾಗ ನಾವು ಮೂಕ ಪ್ರೇಕ್ಷಕರಂತೆ ನೋಡುತ್ತಿರುವಾಗ ಐನ್ಸ್ಟೈನ್ ಗಹಗಹಿಸಿ ನಗುತ್ತಿರುವಂತೆ ಭಾಸವಾಗುವುದಿಲ್ಲವೇ ?

ಚುನಾವಣಾ ಸಮಯದಲ್ಲಿ ಮತ್ತೆ ಮತ್ತೆ ಸುಳ್ಳು ಪೊಳ್ಳು ಭರವಸೆಗಳನ್ನು ಕೊಡುತ್ತಾ, ಅತ್ಯಂತ ನೀಚ ಭಾಷೆಯಲ್ಲಿ ಪರಸ್ಪರ ನಿಂದಿಸುತ್ತಾ, ಜಾತಿ ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಾ, ಹಣ ಹೆಂಡ ಸೀರೆ ಪಂಚೆ ಹಂಚಿ ಗೆಲ್ಲುತ್ತಾ, ಅದನ್ನು ವಂಶಪಾರಂಪರ್ಯವಾಗಿ ಆಳುತ್ತಾ, ಬೆಲೆ ಏರಿಸಿಯೂ ಧೈರ್ಯವಾಗಿ ಓಡಾಡುತ್ತಾ, ಸಮಾಜದ ನಾಯಕರಾಗಿ ಈ ದುಷ್ಟರೇ ಆಳುತ್ತಿರುವಾಗ ಐನ್ಸ್ಟೈನ್ ಒಬ್ಬ ನಿಜವಾದ ದೂರದೃಷ್ಟಿಯ ಸತ್ಯ ಶೋಧಕ ಎಂದು ಮನಸ್ಸು ನುಡಿಯುವುದಿಲ್ಲವೇ ?

ಇದು ಸಾಂಕೇತಿಕ ಉದಾಹರಣೆಗಳು ಮಾತ್ರ. ಆಳಕ್ಕೆ ಇಳಿದರೆ ಬ್ರಹ್ಮಾಂಡದ ದರ್ಶನವಾಗುತ್ತದೆ. ಇದರ ಒಟ್ಟು ಪರಿಣಾಮ ವಿಶ್ವಸಂಸ್ಥೆ ಅಧ್ಯಯನದ ಮೂಲಕ ನಿಗದಿಪಡಿಸಿದ ಮಾನವನ ನೆಮ್ಮದಿಯ ಗುಣಮಟ್ಟದ ಆಧಾರದಲ್ಲಿ ಭಾರತ ಈಗಲೂ ಸಹ 200 ದೇಶಗಳ ಪೈಕಿ 140 ರ ಆಸುಪಾಸಿನಲ್ಲಿಯೇ ಇದೆ. ಅಂದರೆ ಸ್ವಾತಂತ್ರ್ಯ ನಂತರ ಭಾರತದ ಪ್ರಗತಿ ಭೌತಿಕವಾಗಿ ಅಭಿವೃದ್ಧಿಯ ಕಡೆಗೆ ಸಾಗುತ್ತಿದ್ದರು ಜನರ ಜೀವನಮಟ್ಟದ ಆಧಾರದಲ್ಲಿ ತೀವ್ರವಾಗಿ ಕುಸಿಯುತ್ತಿದೆ.

ಗಾಳಿ ನೀರು ಆಹಾರದ ಕಲ್ಮಶ, ಪ್ರಜಾಪ್ರಭುತ್ವ ಸಂಸ್ಥೆಗಳ ಭ್ರಷ್ಟಾಚಾರ ಒಟ್ಟು ಆತನ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಂಪೂರ್ಣ ಕುಸಿಯುವಂತೆ ಮಾಡಿದೆ. ಆತನ ಯೋಚನಾ ಶಕ್ತಿಯೇ ದುರ್ಬಲವಾಗಿದೆ. ಅದರ ಫಲವಾಗಿ ಭ್ರಷ್ಟ ವ್ಯವಸ್ಥೆ ನಮ್ಮನ್ನು ನಿರಂತರವಾಗಿ ಆಳುತ್ತಿದೆ.

ಈಗಲೂ ಕಾಲ ಮಿಂಚಿಲ್ಲ. ಯಾವುದೇ ಹೆಚ್ಚು ಶ್ರಮ ಪಡದೆ ನಮ್ಮ ನಮ್ಮ ಮನಸ್ಸುಗಳಲ್ಲಿ ಒಂದು ಮುಕ್ತ ಮತ್ತು ಸ್ವಾರ್ಥವಿಲ್ಲದ ಆತ್ಮ ವಿಮರ್ಶೆ ಮಾಡಿಕೊಂಡು ಬುದ್ಧಿವಂತಿಕೆಯಿಂದ, ಧೈರ್ಯದಿಂದ, ಒಳ್ಳೆಯವರಾಗಿ ನೆಮ್ಮದಿಯಿಂದ ಬದುಕುವ ಆಸೆಯಿಂದ ಒಂದು ತೀರ್ಮಾನ ಕೈಗೊಂಡು……

ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ, ನಮ್ಮ ಸುತ್ತಮುತ್ತಲಿನ ಜನರಲ್ಲಿ ಒಂದು ಬದಲಾವಣೆ ಉಂಟು ಮಾಡಿದರೆ ‌ಐನ್ಸ್ಟೈನ್ ಮಾತನ್ನು ಸುಳ್ಳಾಗಿಸಬಹುದು. ಜ್ಞಾನ, ಧೈರ್ಯ, ಬದುಕುವ ಆಸೆ ನಮ್ಮನ್ನು ಆಳಬಹುದು. ಇದು‌ ಹಗಲುಗನಸಲ್ಲ. ಖಂಡಿತ ಈ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ನನಸಾಗಬಹುದಾದ ಸಾಧ್ಯತೆ ಇರುವ ವಿಷಯ. ದಯವಿಟ್ಟು ಗಂಭೀರವಾಗಿ ಯೋಚಿಸಿ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಜನರನ್ನು ಮೂರ್ಖರೆಂದು ಕರೆದು ಬುದ್ದಿವಂತ ಎಂದು ಹೆಸರಾದ ಐನ್ಸ್ಟೈನ್ ಮಾತುಗಳನ್ನು ಸುಳ್ಳಾಗಿಸಿ ಜನರು ಬುದ್ದಿವಂತರು ಐನ್ಸ್ಟೈನ್ ಒಬ್ಬ ಮೂರ್ಖ ಎಂದು ಹೇಳುವ ಸುವರ್ಣಾವಕಾಶ ನಮ್ಮ ಮುಂದಿದೆ. ಈಗ ಯೋಚಿಸುವ ಸರದಿ ನಮ್ಮದು. ಅದಕ್ಕಾಗಿ,

ಪ್ರಚೋದನೆ………

ಪ್ರಚೋದಿಸುತ್ತಲೇ ಇರುತ್ತೇನೆ,
ದ್ವೇಷದ ದಳ್ಳುರಿ ನಶಿಸಿ,
ಪ್ರೀತಿಯ ಒರತೆ ಚಿಮ್ಮುವವರೆಗೂ….

ಪ್ರಚೋದಿಸುತ್ತಲೇ ಇರುತ್ತೇನೆ,
ಮನುಷ್ಯರಲ್ಲಿ ಮಾನವೀಯತೆಯ ಬೆಳಕು ಮೂಡುವವರೆಗೂ,…..

ಪ್ರಚೋದಿಸುತ್ತಲೇ ಇರುತ್ತೇನೆ,
ಮೌಢ್ಯದ ವಿರುದ್ಧ ವೈಚಾರಿಕ ಪ್ರಜ್ಞೆ ಬೆಳಗುವವರೆಗೂ,……..

ಪ್ರಚೋದಿಸುತ್ತಲೇ ಇರುತ್ತೇನೆ,
ಹಿಂಸೆಯ ವಿರುದ್ಧ ಅಹಿಂಸೆ ಜಯ ಸಾಧಿಸುವವರೆಗೂ,…..

ಪ್ರಚೋದಿಸುತ್ತಲೇ ಇರುತ್ತೇನೆ,
ಸುಳ್ಳಿನ ವಿರುದ್ಧ ಸತ್ಯ ಗೆಲ್ಲುವವರೆಗೂ,….

ಪ್ರಚೋದಿಸುತ್ತಲೇ ಇರುತ್ತೇನೆ ಮುಖವಾಡಗಳು ಬಯಲಾಗಿ ಸಹಜತೆ ಕಾಣುವವರೆಗೂ,…..

ಪ್ರಚೋದಿಸುತ್ತಲೇ ಇರುತ್ತೇನೆ,
ಜಾತಿಯ ಅಸಮಾನತೆ ತೊಲಗುವವರೆಗೂ,…..

ಪ್ರಚೋದಿಸುತ್ತಲೇ ಇರುತ್ತೇನೆ,
ಕುತಂತ್ರಿಗಳ ಮುಖವಾಡ ಬಯಲಾಗುವವರೆಗೂ,…….

ಪ್ರಚೋದಿಸುತ್ತಲೇ ಇರುತ್ತೇನೆ,
ಶೋಷಿತರ ದೌರ್ಜನ್ಯ ನಿಲ್ಲುವವರೆಗೂ……..

ಪ್ರಚೋದಿಸುತ್ತಲೇ ಇರುತ್ತೇನೆ,
ಜೀವನಮಟ್ಟ ಸುಧಾರಣೆಯ ಆಗುವವರೆಗೂ,…….

ಪ್ರಚೋದಿಸುತ್ತಲೇ ಇರುತ್ತೇನೆ,
ಯೋಚಿಸುವ ಮನಸ್ಸುಗಳು ವಿಶಾಲವಾಗುವವರೆಗೂ,….

ಪ್ರಚೋದಿಸುತ್ತಲೇ ಇರುತ್ತೇನೆ,
ಜನರ ಕಣ್ಣುಗಳಲ್ಲಿ ನೆಮ್ಮದಿಯ ಆಶಾಕಿರಣ ಕಾಣುವವರೆಗೂ,…

ಪ್ರಚೋದಿಸುತ್ತಲೇ ಇರುತ್ತೇನೆ,
ಹೃದಯಗಳು ಬೆಸೆಯುವವರೆಗೂ,…

ಪ್ರಚೋದಿಸುವುದು,
ಏನು ಯೋಚನೆ ಮಾಡಬೇಕೆಂದಲ್ಲ,
ಹೇಗೆ ಯೋಚನೆ ಮಾಡಬೇಕೆಂದು…..

ಅಂದರೆ, ಒಂದು ವಿಷಯವನ್ನು ಸಮಗ್ರ ದೃಷ್ಟಿಕೋನದಿಂದ ಹೇಗೆ ನೋಡಬೇಕೆಂದು,
ಅದರ ಒಳಿತು ಕೆಡುಕುಗಳ ಸಂಪೂರ್ಣ ಪರಿಣಾಮವನ್ನು ಅರ್ಥಮಾಡಿಕೊಳ್ಳಬೇಕೆಂದು,
ಸ್ವಲ್ಪ ಆಸಕ್ತಿ, ಸ್ವಲ್ಪ ಸಹನೆ, ಸ್ವಲ್ಪ ಸಹಾನುಭೂತಿ, ಸ್ವಲ್ಪ ತಾಳ್ಮೆ, ಸ್ವಲ್ಪ ಬುದ್ಧಿವಂತಿಕೆ, ಸ್ವಲ್ಪ ಒಳ್ಳೆಯತನ, ಸ್ವಲ್ಪ ಪ್ರೀತಿ ವಿಶ್ವಾಸ ಕರುಣೆ, ಸ್ವಲ್ಪ ಅಧ್ಯಯನ, ಸ್ವಲ್ಪ ಸ್ಥಿತಪ್ರಜ್ಞತೆ, ಸ್ವಲ್ಪ ವಾಸ್ತವಿಕತೆ…

ಹೀಗೆ ಎಲ್ಲಾ ಆಯಾಮಗಳ ಅವಲೋಕನ….. ನಮ್ಮ ಸ್ವಾತಂತ್ರ್ಯ ಉಳಿಸಿಕೊಂಡು, ಇತರರ ಸ್ವಾತಂತ್ರ್ಯ ಗೌರವಿಸುತ್ತಾ….

ಪ್ರಚೋದಿಸುತ್ತಲೇ ಇರುತ್ತೇನೆ,
ಕೊನೆಯ ಉಸಿರೆಳೆಯುವವರೆಗೂ……
ಬರೆಯುವ ಕೈಗಳು ಸ್ತಬ್ಧವಾಗುವವರೆಗೂ………

ಪ್ರಚೋದನೆ ಸ್ವಾರ್ಥಕ್ಕಾಗಿಯಲ್ಲ,
ಸಮಾಜದ ಸುಧಾರಣೆಗಾಗಿ…..

ಬರಹ :
ವಿವೇಕಾನಂದ. ಎಚ್. ಕೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ಅಡಿಕೆ ಮಾರುಕಟ್ಟೆ- ಸದ್ಯ ಮಾರುಕಟ್ಟೆ ಸ್ಥಿರ | ರಬ್ಬರ್‌ ಧಾರಣೆ ಇಳಿಕೆಯ ಹಾದಿ

ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಬೆಲೆಗಳು ಸಾಮಾನ್ಯವಾಗಿ ಸ್ಥಿರವಾಗಿದ್ದು, ಉತ್ತಮ ಗುಣಮಟ್ಟದ…

14 hours ago

ಹವಾಮಾನ ವರದಿ | 07-03-2026 | ಕರಾವಳಿಯಲ್ಲಿ ಮೋಡ–ಮಳೆಯ ಸುಳಿವು | ಜೋರು ಮಳೆಯ ಲಕ್ಷಣವಿಲ್ಲ

ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಸೆಖೆಯ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಂಜೆ ಅಥವಾ…

15 hours ago

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಬಿಗುವಿನ ಕ್ರಮ | ಪಾಕಿಸ್ತಾನದಲ್ಲಿ ವಿಷಕಾರಿ ಅಡಿಕೆ ವಿರುದ್ಧ ದಾಳಿ

ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಕಠಿಣಗೊಳಿಸಿದೆ.…

17 hours ago

ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…

21 hours ago

ಕುಕ್ಕೆ–ಕೊಲ್ಲೂರು ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರ : ಮುಜರಾಯಿ ಇಲಾಖೆಗೆ ಬಜೆಟ್ ಬಲ

ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…

21 hours ago

ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು

ರಾಜ್ಯ ಬಜೆಟ್‌ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…

1 day ago