ಅಳತೆ ಬಲ್ಲವ ಅಡುಗೆಯ ನಳಮಹಾರಾಜ…..

April 9, 2025
9:00 AM
ಅಡುಗೆಯ ಮಾಪಕಗಳು ಒಂದೊಂದು ಮನೆಗೆ ಒಂದೊಂದು ರೀತಿ ಇರುತ್ತವೆ. ಅವುಗಳ ಕಡೆಗೆ ನಿಗಾ ಅಗತ್ಯ. ಕಿಟಕಿಯ ಒಳಗೆ ಮನಸ್ಸು ಸದಾ ನೋಡುತ್ತಿರಬೇಕು ಅದು.

ಅಡುಗೆ ಮನೆಯಲ್ಲಿ ಕೈಗೆ ಸಿಗುವಂತಿರುವ ಸಾಮಾನುಗಳು ಹಲವಿವೆ. ಬೆಂಕಿ ಪೆಟ್ಟಿಗೆಯ ಸ್ಥಾನಕ್ಕೆ ಲೈಟರ್ ಬಂದಿದೆ, ಸ್ವಿಚ್ ಹಾಕಿದರೆ ಹೊತ್ತಿಕೊಳ್ಳುವ ಸ್ಟೌವು ಕೂಡ ಇವೆ. ಆದರೆ ಜೋಪಾನವಾಗಿ ತೆಗೆದಿಟ್ಟಿರುವ ಬೆಂಕಿ ಪೊಟ್ಟಣ ಅಗತ್ಯವಾಗಿ ಬೇಕಾಗುತ್ತದೆ. ಕರೆಂಟ್ ಇಲ್ಲವಾದರೆ ಸ್ವಿಚ್ ಹಾಕಿದರೂ ಸ್ಟೌವು ಕೆಲಸ ಮಾಡದು, ಲೈಟರ್ ಕೂಡ ಕೆಲವೊಮ್ಮೆ ಬ್ಯಾಟರಿ ಮುಗಿದು ಕೈ ಕೊಡುತ್ತದೆ. ಅದೇ ಸಮಯಕ್ಕೆ ಬೆಂಕಿ ಪೊಟ್ಟಣ ತಂಡಾಸು ಬಂದು ಉರಿಯದೇ ಇದ್ದರೆ ದೇವರೇ ಗತಿ. ಎಷ್ಟೇ ತಂತ್ರಜ್ಞಾನ ಮುಂದುವರಿದರೂ, ನಮ್ಮ ಪ್ರಾಥಮಿಕ ಅವಶ್ಯಕತೆಗಳು ಹಾಗೆಯೇ ಇರುತ್ತವೆ. ಸ್ವಲ್ಪ ಬದಲಾವಣೆಗಳು ಕಾಲಕ್ಕೆ ತಕ್ಕಂತೆ ಆಗಿರ ಬಹುದು. ಅಷ್ಟೇ ವ್ಯತ್ಯಾಸ.

Advertisement
Advertisement

ನಾವು ಅಡುಗೆ ಮಾಡುವ ಸಮಯದಲ್ಲಿ ಹಲವು ರೀತಿಯ ಅಳತೆಗಳನ್ನು ಬಳಸುತ್ತೇವೆ. ಪ್ರಾಥಮಿಕವಾಗಿ ನೀರಿನ ಅಳತೆಗೆ ಚಮಚ, ಸೌಟು,ಗ್ಲಾಸು, ಪಾಟೆ, ಚೆಂಬು ಇತ್ಯಾದಿ. ಹಾಲು, ಎಣ್ಣೆ ,ತುಪ್ಪ ಮೊದಲಾದವುಗಳನ್ನು ಕುಡ್ತೆ , ಲೀಟರ್ ಲೆಕ್ಕದಲ್ಲಿ ಹೇಳುತ್ತೇವೆ. ಅಕ್ಕಿ ,ಸಕ್ಕರೆ ಬೇಳೆ ಕಾಳುಗಳನ್ನು ಗ್ರಾಮ್, ಪಾವು, ಸೇರು ,ಕೇಜಿಗಳಲ್ಲಿ ಅಂದಾಜು ಮಾಡುತ್ತೇವೆ.

ಅಡುಗೆಯ ಮಾಪಕಗಳು ಒಂದೊಂದು ಮನೆಗೆ ಒಂದೊಂದು ರೀತಿ ಇರುತ್ತವೆ. ಕುಡ್ತೆ, ಪಾವು ,ಸೇರುಗಳು ಎಲ್ಲಿಹೋದರೂ ಒಂದೇ ರೀತಿ. ಆದರೆ ಈ ಗ್ಲಾಸು, ಚಿಟಿಕೆ, ಚಮಚ ಎಂದಾಗ ಎದುರಾಗುವ ಸಮಸ್ಯೆಗಳು ಒಂದೆರಡಲ್ಲ. ಎಷ್ಟು ದೊಡ್ಡ ಗ್ಲಾಸು? ಎಷ್ಟು ದೊಡ್ಡ ಚಮಚ …….. ಅಳತೆಯ ಚಮಚಗಳಲ್ಲಿ ಎಷ್ಟೊಂದು ವಿಧಗಳಿವೆ. ನಮ್ಮಲ್ಲಿ ಚಮಚ ಅಂದರೆ ಚಮಚ. ಅದರಲ್ಲಿ ಸ್ವಲ್ಪ ದೊಡ್ಡದು, ಉದ್ದ ಹಿಡಿಯದ್ದು …ಅಷ್ಟೇ ಆದರೆ ಹಾಗಿಲ್ಲ, ಅದರಲ್ಲಿ ಹಲವು ಇವೆ. ನೋಡಿದರೆ ದಂಗಾಗುವಿರಿ. ( ಯೂ ಟ್ಯೂಬ್ ಗಳಲ್ಲಿ ಬರುವ ಅಡುಗೆ ಚಾನಲ್ ಗಳನ್ನು ನೋಡಿದರೆ ಅಳತೆಗಿರುವ ಅಗಾಧ ಸಾಮಗ್ರಿಗಳು ದಂಗು ಬಡಿಸುವುದು ಖಂಡಿತ. ) ನಮ್ಮ ಸಾಂಪ್ರದಾಯಿಕ ಅಡುಗೆಗಳಿಗೆ ಅಷ್ಟೆಲ್ಲಾ ಅಗತ್ಯವಿಲ್ಲವೆಂದು ನನ್ನ ಅನಿಸಿಕೆ.( ಉಪ್ಪಿನಕಾಯಿ, ಮೈಸೂರ್ ಪಾಕ್ ಗಳಂತಹವುಗಳ ಹೊರತಾಗಿ).

1/4 ಟೀ ಚಮಚ, 1/2 ಟೀ ಚಮಚ, 1ಟೀ ಚಮಚ ಮತ್ತು1 ಚಮಚ ಅಳತೆಯ ಚಮಚಗಳು .(ಮಸಾಲೆಗಳು, ಉಪ್ಪು, ಸಕ್ಕರೆ, ಸೋಡ, ಬೇಕಿಂಗ್ ಪೌಡರ್, ಸಾಸ್,ಕೆಚಪ್ ಮೊದಲಾದವುಗಳನ್ನು ಬಳಸುವಾಗ ಉಪಯೋಗಕ್ಕೆ ಬರುತ್ತದೆ).

ಅಡುಗೆ ಮಾಡಲು ಅನುಕೂಲವಾಗಿರುವ ವಿವಿಧ ನಮೂನೆಯ ಚಮಚಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅದರ ಬಗ್ಗೆ ವಿಚಾರಿಸಿದರೆ ಗಂಟೆಗಟ್ಟಲೆ ಮಾತನಾಡುವವರಿದ್ದಾರೆ. ಒಂದು ಚಮಚಕ್ಕೆ ಇಷ್ಟೊಂದು ವಿವರಣೆಯ ಅಗತ್ಯವಿದೆಯಾ ಎಂದು ತಲೆಗೆಡಿಸಿ ಕೊಳ್ಳುವ ಸರದಿ ಖಂಡಿತವಾಗಿಯೂ ನಿಮ್ಮದೇ!.

Advertisement

ಸಾರು ,ಸಾಂಬಾರು , ಪಲ್ಯ ಮಾಡುವಾಗ ಉಪ್ಪು , ಹುಳಿ ಖಾರ ನಿಶ್ಚಿತ ಪ್ರಮಾಣದಲ್ಲಿ ಬಳಸಲು ಅರಿತಿರ ಬೇಕು. ಕೆಲವೊಂದು ಪದಾರ್ಥಗಳು ಹುಳಿ ಖಾರ ಜಾಸ್ತಿ ಇದ್ದರೆ ರುಚಿ . ಇನ್ನು ಕೆಲವು ಸಿಹಿ, ಖಾರ ಇದ್ದರೆ ವಾವ್ ಅನ್ನಿಸುತ್ತದೆ,(ಮಾವಿನಕಾಯಿ ಮೆಣಸ್ಕಾಯಿ ಹುಳಿ , ಸಿಹಿ, ಖಾರ ಸಮ ಪ್ರಮಾಣದಲ್ಲಿ ಇದ್ದರಷ್ಟೇ ರುಚಿಯಾಗುವುದು). ಬದನೆ ಪಲ್ಯ ಸುಲಭ ಮಾಡಲಿಕ್ಕೆ. ಆದರೆ ಹುಳಿ , ಉಪ್ಪು, ಖಾರ ಕಮ್ಮಿಯಾದರೆ ಬಾಯಿಗಿಡಲಿಕ್ಕೆ ಸಾಧ್ಯವಿಲ್ಲ. ಉಪ್ಪು ಖಾರಕ್ಕಾದರೂ ಚೂರು ರಿಯಾಯಿತಿ ಸಿಗ ಬಹುದು ಆದರೆ ಹುಳಿ ಹಾಕಲು ಮರೆತರೆ!.(ಊಟವೇ ಹಾಳು)

ಇನ್ನು ಮೈಸೂರ್ ಪಾಕ್ ಮಾಡಲು ಹೊರಟರೆ ನೀವು ಖಂಡಿತ ಲೆಕ್ಕದ ಮಾಸ್ಟರ್ ಆಗಲೇ ಬೇಕು . 1 ಅಳತೆಯ ಕಡ್ಲೆಹುಡಿಗೆ 2 ಅಳತೆಯ ಸಕ್ಕರೆ ಅದಕ್ಕೆ ಸರಿಯಾಗಿ ತುಪ್ಪ ಇರಲೇ ಬೇಕು. ಸಕ್ಕರೆ ಪಾಕಕ್ಕೆ ಪ್ರಮಾಣಬದ್ಧ ನೀರು ಹಾಕ ಬೇಕು. ಸಕ್ಕರೆಯ ಪಾಕ ಸರಿಯಾಗಿ ಬರಬೇಕು( ಪಾಕದಲ್ಲೂ ಒಂದೆಳೆ, ಎರಡೆಳೆ, ಏರುಪಾಕ, ಎಳೆಪಾಕ ಅಂತೆಲ್ಲಾ ಇದೆ) ಮೈಸೂರುಪಾಕ್ ಪ್ರವೀಣರು ಕಣ್ಣಳತೆಯಲ್ಲೇ ನೀರು , ಸಕ್ಕರೆ, ಕಡ್ಲೆಹುಡಿ ಬಳಸುತ್ತಾರೆ. ಆದರೆ ಅದು ಕೆಲವೊಮ್ಮೆ ಕೈ ಕೊಟ್ಟು ಬಿಡುತ್ತದೆ. ಅದಕ್ಕೆ ಅಳತೆಯ ಸಾಮಾನು ಮೊದಲೇ ತೆಗೆದಿಟ್ಟುಕೊಂಡು ಯಾವುದೇ ಅಡುಗೆ ಆರಂಭಿಸುವುದು ಒಳ್ಳೆಯ ಅನುಸರಿಸ ಬೇಕಾದ ಕ್ರಮ. ಒಂದೆರಡು ಬಾರಿ ಸರಿಯಾದ ರೀತಿಯಲ್ಲಿ ಮಾಡಿದ ಮಾತ್ರಕ್ಕೆ ಪರಿಣತಿ ದೊರೆಯುವುದಿಲ್ಲ. ಸಣ್ಣದಿರಬಹುದು, ಸುಲಭದ್ದಿರಬಹುದು. ಸತತ ಅಭ್ಯಾಸ ಮುಖ್ಯ. ಅದರೊಂದಿಗೆ ಯಾವುದೇ ಅಡುಗೆಯನ್ನು ಮನಸಿಟ್ಟು ಪ್ರೀತಿಯಿಂದ , ದೇವರಿಗೆ ಸಮರ್ಪಿತ ಭಾವನೆಯಿಂದ ಮಾಡಿದಾಗ ಸರ್ವವೂ ಶ್ರೇಷ್ಠವಾಗುವುದರಲ್ಲಿ ಸಂಶಯವೇ ಇಲ್ಲ……

ಬರಹ :
ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ರಾಜ್ಯದ ಜೇನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ
May 22, 2025
9:45 PM
by: ದ ರೂರಲ್ ಮಿರರ್.ಕಾಂ
ಅಕಾಲಿಕ ಮಳೆ | ಮಾವು ಇಳುವರಿ ಕುಸಿತ | ಬೆಲೆ ಕುಸಿತ | ರೈತರಿಗೆ ನಿರಾಸೆ |
May 22, 2025
7:33 AM
by: The Rural Mirror ಸುದ್ದಿಜಾಲ
ಛದ್ಮ ವೇಷದಲ್ಲಿ ನಮ್ಮ ಪ್ರಜಾಪ್ರಭುತ್ವ
May 22, 2025
6:53 AM
by: ಡಾ.ಚಂದ್ರಶೇಖರ ದಾಮ್ಲೆ
ಹಾಳೆತಟ್ಟೆಯ ಬಳಿಕ ಈಗ ಮಾವಿನಹಣ್ಣು | ಭಾರತದ 15 ಮಾವಿನ ಹಣ್ಣು ಶಿಪ್‌ಮೆಂಟ್‌ಗಳನ್ನು ತಿರಸ್ಕರಿಸಿದ ಅಮೇರಿಕಾ |
May 21, 2025
7:45 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group