ಪುತ್ತೂರಲ್ಲಿ(Puttur) ಹಲಸು ಮೇಳದ ಉದ್ಘಾಟನಾ ಸಮಾರಂಭದಲ್ಲಿ ಹಲಸು ಮೇಳಗಳ ಹಿನ್ನೋಟದ ಪುಸ್ತಕ ಬಿಡುಗಡೆ ಇತ್ತು. ಹಲಸು ಮೇಳಗಳ ಫಲಪ್ರದದ ಹಿಂದಿನ ಶ್ರಮದ ಕಥಾನಕಗಳ ದಾಖಲೀಕರಣದ ಬಗ್ಗೆ ಮಾಹಿತಿಯೇ “ಫಲಪ್ರದ” ಪುಸ್ತಕ. ದಾಖಲಿಸಿ ಪುಸ್ತಕ ರೂಪಕ್ಕೆ ತಂದವರು ನಾ ಕಾರಂತ ಪೆರಾಜೆ.
ಅದೇ ದಿನ ಕೊಂಡು ತಂದ ಪುಸ್ತಕವನ್ನು ಮೂರು ದಿನಗಳಲ್ಲಿ ಓದಿ ಮುಗಿಸಿದೆ. ಓದಿ ಮುಗಿಯುವ ಹೊತ್ತಿಗೆ ಪುತ್ತೂರಿನ ಹಲಸು ಮೇಳವನ್ನು ಸಂಘಟಿಸಿದವರಲ್ಲಿ ಕೇಳಿದಾಗ ಹೆಚ್ಚುಕಮ್ಮಿ 10 ಟನ್ನಿನಷ್ಟು ಹಲಸು ಮೂರು ದಿನದ ಮೇಳದಲ್ಲಿ ವ್ಯಾಪಾರವಾಗಿದೆ ಎಂದರು. ( ಐದು ಟನ್ನಿನಷ್ಟು ಹಲಸಾಗಿ ಉಳಿದದ್ದು ಖಾದ್ಯಗಳ ರೂಪದಲ್ಲಿ )
ಪ್ರಕೃತಿ ಕೊಟ್ಟ ಅಮೂಲ್ಯ ಫಲವಸ್ತು ಹಲಸು ಹೊಲಸೆಂದು ಉಪೇಕ್ಷೆಗೆ ಒಳಗಾಗಿ ಅಲ್ಲಲ್ಲಿಯೇ ಮರಗಳಲ್ಲಿ ಕೊಳೆತು ಉದುರಿ ಹೋಗುತ್ತಿದ್ದ ಕಾಲ ಒಂದಿತ್ತು. ಅಂತಹ ಸಂದರ್ಭದಲ್ಲಿ ಹಲಸಿಗೊಂದು ಮಾನ ತಂದು ಕೊಡುವಲ್ಲಿ ಶ್ರಮಿಸಿದವರು ಹಲಸು ಸ್ನೇಹಿಕೂಟ ಮತ್ತು ಅಡಿಕೆ ಪತ್ರಿಕೆ. ಮಾರ್ಗದರ್ಶಿ:ಹಲಸು ರಾಯಭಾರಿ ಬಿರುದಾಂಕಿತ ಶ್ರೀ ಪಡ್ರೆಯವರು.
ಭವ್ಯ ದಿವ್ಯವಾದ ಕಟ್ಟಡವೊಂದು ಎದ್ದು ನಿಲ್ಲಬೇಕಾದರೆ ಉತ್ತಮ ಅಡಿಪಾಯದೊಂದಿಗೆ ಪಂಚಾಂಗ ಬೇಕು. ಪಂಚಾಂಗ ಕಟ್ಟಬೇಕಾದರೆ ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿ ನಿರ್ಮಾಣವಾಗಿರುತ್ತದೆ. ಪಂಚಾಂಗದ ಮೇಲೆ ಭವ್ಯ ಕಟ್ಟಡ ಬಂದಾಗ ಕಟ್ಟಡವನ್ನು ವೀಕ್ಷಿಸಿ ಭಲೇ ಶಹಭಾಷ್ ಅಂತ ಅನ್ನುವವರು ಬಹಳಷ್ಟು ಮಂದಿ ಇದ್ದಾರೆ. ಪಂಚಾಂಗ ಕಟ್ಟಿದ ಶ್ರಮದ ಬಗ್ಗೆ ಅರಿವು ಅನೇಕರಿಗೆ ಗೊತ್ತಿರುವುದಿಲ್ಲ.
ಅದೇ ರೀತಿ ಇತ್ತೀಚಿನ ವರ್ಷಗಳಲ್ಲಿ ವಾರಂತ್ಯದಲ್ಲಿ ನಡೆಯುವ ಹಲಸು ಮೇಳಗಳ ಯಶಸ್ಸಿಗೆ ಪಂಚಾಂಗ ಕಟ್ಟಿದವರು ಹಲಸು ಸ್ನೇಹಿಕೂಟ ಉಬರು ಮತ್ತು ಅಡಿಕೆ ಪತ್ರಿಕೆ ಬಳಗ. ಯಾವುದೇ ಸಾಮಾಜಿಕ ಜಾಲತಾಣಗಳಿಲ್ಲದ ಕಾಲದಲ್ಲಿ ಯಾವುದೇ ಅತಿಯಾದ ಪ್ರಚಾರಕ್ಕೂ ಒಳಗಾಗದೆ,ಕೇವಲ ಆಸಕ್ತಿ ಒಂದರಿಂದಲೇ ಪ್ರಚಾರಕ್ಕೆ ಬಂದ ಹಲಸು ಇಂದು ಮಾನವಂತ ಫಲ. ಮುಂದಿನ ದಿನಗಳಲ್ಲಿ ಕೃಷಿಕನಿಗೊಂದು ಉಪ ಆದಾಯವನ್ನು ತಂದು ಕೊಡಬಲ್ಲುದು ಎಂಬುದಕ್ಕೆ ಮೂರು ದಿನದ ಮೇಳದಲ್ಲಿ ಸುಮಾರು 10 ಟನ್ನಿನಷ್ಟು ಹಲಸು ವ್ಯಾಪಾರವೇ ಸಾಕ್ಷಿ. ಹಲಸಿನ ಮಾನದ ಹಿಂದಿನ ಶ್ರಮದ ಕಥಾಗುಚ್ಚವೇ ಫಲಪ್ರದ ಪುಸ್ತಕ. ಎಲ್ಲರೂ ಕೊಂಡು ಓದಿ.
ಹಲಸು ಮೇಳಗಳ ಫಲಪ್ರದದ ಹಿಂದಿನ ಶ್ರಮದ ಕಥಾನಕ “ಫಲಪ್ರದ” ಪುಸ್ತಕ | https://t.co/xGOwLf5WyB
— theruralmirror (@ruralmirror) May 29, 2024
Advertisement