ಅಂಕಣ

ಬದುಕು ಪುರಾಣ | ಎಲ್ಲರೊಳಗೂ ‘ಕುಂಭಕರ್ಣ’ನಿದ್ದಾನೆ!

Share
ರಜೆಯಲ್ಲಿ ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೆ ಬೆಳಿಗ್ಗೆ ಒಂಭತ್ತು ಗಂಟೆಯಾದರೂ ಸೂರ್ಯೋದಯ ಆಗುವುದಿಲ್ಲ. ಆಗ ಮನೆಯ ಹಿರಿಯರು ‘ಎಂತಾ ಕುಂಭಕರ್ಣ ನಿದ್ರೆ,’ ಗೊಣಗಾಡುತ್ತಿದ್ದರು. ಹಿರಿಯರ ಒತ್ತಾಯಕ್ಕೆ ಆಕಳಿಸುತ್ತಾ ಎದ್ದು, ಮುಖಮಾರ್ಜನ ಮುಗಿಸಿ, ಉಪಾಹಾರ ಸ್ವೀಕರಿಸಿ, ಮೊಬೈಲ್ ಮೇಲೆ ಕೈಯಾಡಿಸಿ, ಅಕ್ಷರ ಪ್ರೀತಿಯಿದ್ದರೆ ಪತ್ರಿಕೆಯ ಮೇಲೆ ಕಣ್ಣಾಡಿಸಿ, ಮತ್ತೆ ಹಾಸಿಗೆಯತ್ತ ಮುಖ ಮಾಡುವವರು ನಿಜಕ್ಕೂ ‘ಕುಂಭಕರ್ಣ’ರೇ..!
ರಾತ್ರಿಯಿಡೀ ಯಕ್ಷಗಾನ, ನಾಟಕ, ಜಾತ್ರೆಗೆ ಹೋದ ಮರುದಿವಸವಂತೂ ನಿದ್ರಾದೇವಿ ಆಲಂಗಿಸಿರುತ್ತಾಳೆ. ಇದನ್ನು ಆಡುಮಾತಿನಲ್ಲಿ ‘ಭಯಂಕರ ನಿದ್ರೆ’ ಎನ್ನೋಣ! ಕೆಲವರಿಗೆ ಬಸ್ಸಿನಲ್ಲಿ ಕುಳಿತರೆ ಸಾಕು, ಹತ್ತು ನಿಮಿಷದಲ್ಲಿ ನಿದ್ರೆ ಬಂದುಬಿಡುತ್ತದೆ. ಸಭಾಭವನದಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವಾಗ ತೂಕಡಿಸುವವರು; ಬೇಡ, ಕಲಾಪ ನಡೆಯುತ್ತಿರುವಾಗ ವೇದಿಕೆಯಲ್ಲಿ ನಿದ್ರಾವಶರಾಗಿ ನಗೆಪಾಟಲಾಗುವವರು. ಇನ್ನು ಕನ್ನಾಡಿನ ಕೆಲವು ರಾಜಕಾರಣಿಗಳ ಮನದಲ್ಲಂತೂ ‘ನಿದ್ರಾದೇವಿ’ ಶಾಶ್ವತವಾಗಿ ನೆಲೆಯಾಗಿರುತ್ತಾಳೆ! ಇವರನ್ನೆಲ್ಲಾ ಒಂದೇ ಪದದಲ್ಲಿ ಅಂದರೆ ‘ಕುಂಭಕರ್ಣ ವಂಶ’ದವರೆಂದರೆ ತೆಗಳಿಕೆಯೂ ಹೌದು, ಹೊಗಳಿಕೆಯೂ ಹೌದು!
ಕೆಲಸದಲ್ಲಿ ಅಶ್ರದ್ಧೆಯಿದ್ದರೆ, ಮನಸ್ಸಿಲ್ಲದಿದ್ದರೆ, ಆಕಳಿಕೆಗಳು ರಾಚಿ ಬರುತ್ತವೆ. ದಿನವೂ ಮಾಡಿದ ಕೆಲಸವನ್ನೇ ಪುನರಾವರ್ತಿಸುತ್ತಾ ಇದ್ದರೂ ಹೀಗಾಗುತ್ತದೆ. ಫಕ್ಕನೆ ನೋಡಿದಾಗ ಕೆಲವು ಕಚೇರಿಗಳಲ್ಲಿ ಮೇಲ್ನೋಟಕ್ಕೆ ‘ಬ್ಯುಸಿ’ ಇದ್ದಂತೆ ಭಾಸವಾಗುತ್ತದೆ. ಆದರಲ್ಲಿ ಮನಸ್ಸು ನಿದ್ರಿಸಿರುತ್ತದೆ. ಮನಸ್ಸು ನಿದ್ರಿಸುವ, ನಿದ್ರಿಸಿರುವ ಉದಾಹರಣೆಗಳು ಮುಖ್ಯವಾಗಿ ಸರಕಾರಿ ಕಚೇರಿಗಳಲ್ಲಿ ಉದಾಹರಣೆಯಾಗಿ ಅನುಭವಕ್ಕೆ ಬರುತ್ತದೆ. ಅವರು ಹಾಸಿಗೆಯಲ್ಲಿ ಕಾಲು ಚಾಚಿ ನಿದ್ರೆ ಮಾಡಬೇಕೆಂದಿಲ್ಲ. ಕೆಲಸದಲ್ಲಿ ಬದ್ಧತೆಯಿಲ್ಲದಿರುವುದು ಕೂಡಾ ಮನ ನಿದ್ರೆಯ ಲಕ್ಷಣ.
ಒಂದು ಕಚೇರಿಗೆ ಭೇಟಿ ನೀಡಿದ್ದೆ. ಪರಿಚಯದ ಸಿಬ್ಬಂದಿ ತಲೆದಿಂಬಿನಾಕಾರದ ಪುಸ್ತಕದೊಳಗೆ ಹುದುಗಿದ್ದರು. ಕೈಯಲ್ಲಿ ಲೇಖನಿಯಿತ್ತು. ಏನೋ ಒತ್ತಡ ಇರಬೇಕು, ಸ್ವಲ್ಪ ಬಿಟ್ಟು ಮಾತನಾಡಿಸಿದರಾಯ್ತು. ಒಂದರ್ಧ ಗಂಟೆ ದಾಟಿದರೂ ಅವರು ‘ಧ್ಯಾನಸ್ಥಿತಿ’ಯಿಂದ ಹೊರಬಂದಿರಲಿಲ್ಲ. ಹೋಗಿ ನೋಡಿದರೆ ಅವರು ಪುಸ್ತಕದೊಳಗೆ ಹುದುಗಿಲ್ಲ; ಮೊಬೈಲನ್ನು ಉಜ್ಜುತ್ತಾ ಫೇಸ್‍ಬುಕ್, ವಾಟ್ಸಾಪಿನೊಳಗೆ ಮುಳುಗಿದ್ದರು. ಅವರ ದೇಹ ಕಚೇರಿಯಲ್ಲಿತ್ತು, ಮನಸ್ಸು ಮೊಬೈಲಿನ ಸಿನಿಮಾದಲ್ಲಿತ್ತು. ಇವರು ಕುಂಭಕರ್ಣನಂತೆ ನಿದ್ದೆ ಮಾಡದಿರಬಹುದು. ಆದರೆ ಕರ್ತವ್ಯದ ಮನಸ್ಸನ್ನು ನಿದ್ರೆಗೆ ಜಾರಿಸಿರುವುದು ಕರ್ತವ್ಯ ಲೋಪ. ತನ್ನ ವೃತ್ತಿಗೆ ಮಾಡುವ ದ್ರೋಹ.
‘ಎಂಟು ಗಂಟೆಗೆ ಬಸ್ ನಿಲ್ದಾಣದಲ್ಲಿ ಸಿಗೋಣ ಎಂದು ಒಂಭತ್ತು ಗಂಟೆಯಾದರೂ ಬಾರದಿರುವುದು’, ಹತ್ತು ಗಂಟೆಗೆ ಸಮಾರಂಭ ಎಂದಿದ್ದರೂ (ಅನಿವಾರ್ಯ ಹೊರತು ಪಡಿಸಿ) ಹನ್ನೆರಡು ಗಂಟೆಗೆ ಭಾಗವಹಿಸುವುದು, ನೀವು ಕೇಳದಿದ್ರೂ ತಡವಾಗಿ ಬಂದುದನ್ನು ಸಮರ್ಥಿಸಿಕೊಳ್ಳುವುದು, ಗಹನವಾದ ವಿಚಾರಗಳು ಚರ್ಚೆಯಾಗುತ್ತಿದ್ದರೂ ಕಣ್ಣು-ಕಿವಿ-ಬಾಯಿಗಳನ್ನು ಮುಚ್ಚಿಕೊಂಡಿರುವುದು, ಸಭೆಯಲ್ಲಿ ಚರ್ಚಿಸಬೇಕಾದ ಸಂದರ್ಭ ಬಂದಾಗ ಮೊಬೈಲಿನೊಳಗೆ ತೇಲುತ್ತಿರುವುದು. ಪಕ್ಕದಲ್ಲಿರುವವರು ತಟ್ಟಿ-ಮುಟ್ಟಿದಾಗ ಗಡಬಡಿಸುವುದು.. ಇವೆಲ್ಲಾ ಅಬದ್ಧತೆ ಮನಸ್ಸಿನ ಹತ್ತು ಮುಖಗಳು.
ಯಕ್ಷಗಾನ ರಂಗದ ವೃತ್ತಿ/ಪ್ರವೃತ್ತಿ ಕಲಾವಿದರೊಬ್ಬರನ್ನು ನೆನಪಿಸಿಕೊಂಡಾಗ ಕುಂಭಕರ್ಣನೇ ನೆನಪಾಗುತ್ತಾನೆ. ಅವರು ಪ್ರದರ್ಶನದ ಸ್ಥಳಕ್ಕೆ ತೆರಳಲು ವಾಹನ ಏರಿದರೆನ್ನಿ, ಹತ್ತೇ ನಿಮಿಷದಲ್ಲಿ ತೂಕಡಿಸಲು ಶುರು. ಬಸ್ಸಿಳಿದು, ಪ್ರದರ್ಶನದ ಸ್ಥಳಕ್ಕೆ ತಲಪಿದ್ದೇ ತಡ, ಬಣ್ಣದ ಮನೆಯನ್ನು ಹುಡುಕುತ್ತಾರೆ. ಅಲ್ಲಿ ಅಪರೂಪಕ್ಕೊಮ್ಮೆ ಸಿಕ್ಕ ಕಲಾವಿದರು ಹರಟುತ್ತಿದ್ದಾಗ, ಇವರು ತನಗೆ ಮಲಗಲು ಜಾಗವನ್ನು ಹುಡುಕುತ್ತಿರುತ್ತಾರೆ! ಒಂದೈದು ನಿಮಿಷವಷ್ಟೇ, ಬಣ್ಣದ ಮನೆಯ ಮೂಲೆಯಲ್ಲಿ ಬಿಡಾರ ಖಾಯಂ ಮಾಡಿರುತ್ತಾರೆ. ಮುಖಕ್ಕೆ ಬಣ್ಣ ಹಚ್ಚಿದ ಬಳಿಕ, ರಂಗಪ್ರವೇಶಿಸಲು  ಒಂದರ್ಧ ಗಂಟೆ ಇದೆ ಎಂದಾದರೆ ಅಲ್ಲೇ ಮೈಚಾಚುತ್ತಾರೆ.. ಹೀಗೆ ಸಮಯ ಸಿಕ್ಕಾಗಲೆಲ್ಲಾ ‘ನಿದ್ದೆಗೆ ಜಾರುವುದು’ ಕೂಡ ಒಂದು ಕಲೆ!
ಇನ್ನು ಆರೋಗ್ಯದ ವಿಚಾರಕ್ಕೆ ಬಂದಾಗ, ವಯೋವೃದ್ಧರಿಗೆ ಮಧ್ಯಾಹ್ನ ಭೋಜನದ ನಂತರದ ಒಂದರ್ಧ ಗಂಟೆ ವಿಶ್ರಾಂತಿಯು ಆರೋಗ್ಯದಾಯಕ. ಮೂಲಿಕಾ ತಜ್ಞೆ ಪಾಣಾಜೆಯ ದಿ.ಜಯಲಕ್ಷ್ಮೀ ದೈತೋಟ ಹೇಳುತ್ತಿದ್ದರು, “ಊಟವಾದ ಮೇಲೆ ಅರ್ಧ ಗಂಟೆಯ ಕಾಲ ಜಠರವು ಸೇವಿಸಿದ ಎಲ್ಲಾ ತರಹದ ಆಹಾರಗಳನ್ನು ಸಮರಸವಾಗಿಸುವ ಕಾಲ. ಶರೀರವು ಇತರ ಚಟುವಟಕೆಗಳಲ್ಲಿ ಮಗ್ನವಾಗಿದ್ದರೆ ಜಠರ ಪ್ರಕ್ರಿಯೆ ಸಮರ್ಪಕವಾಗಿ ನಡೆಯದು. ಇದು ಆಹಾರ ಅಸಾತ್ಮ್ಯವಾಗುವ ದಾರಿ. ವಿಷ ಪರಿಣಾಮ ದೇಹದಲ್ಲಾಗುವುದು. ದೇಹಾಯಾಸವಿದ್ದಾಗ ಮತ್ತು ಕಡುಬೇಸಿಗೆಯ ಹೊರತು ಉಳಿದ ಸಮಯದಲ್ಲಿ ಮಧ್ಯಾಹ್ನ ನಿದ್ರಿಸಿದರೆ ಶರೀರದಲ್ಲಿ ಆಮ, ಕಫಗಳು ಸಂಚಯವಾಗುತ್ತವೆ. ಇದು ಶರೀರದ ಜಡತೆ ಹಾಗೂ ಸ್ಥೌಲ್ಯಕ್ಕೆ ಕಾರಣವಾಗುವುದು. ಇದೇ ಕೆಲವರಲ್ಲಿ ಹೃದಯಾಘಾತಕ್ಕೂ ಕಾರಣವಾಗಬಹುದು.”
ನನ್ನ ಒಂಭತ್ತರ ಕಲಿಕೆಯಲ್ಲಿ ಸತೀಶ ಸ್ನೇಹಿತನಾಗಿದ್ದ. ಅವನಿಗೆ ಹಿಂಬದಿ ಬೆಂಚಿನಲ್ಲಿ ಕುಳಿತುಕೊಳ್ಳುವುದು ತುಂಬಾ ಇಷ್ಟ. ಇಂಗ್ಲಿಷ್ ಪಾಠದ ಅವಧಿಯಲ್ಲಿ ಪಾಠಕ್ಕೆ ಕಿವಿಗೊಟ್ಟುದೇ ಕಡಿಮೆ. ತೂಕಡಿಸುತ್ತಾ ಆಚೀಚೆಗಿನವರಿಗೆ ಢಿಕ್ಕಿ ಹೊಡೆಯುತ್ತಾ, ಕೊನೆಗೆ ಬೆಂಚಿನ ಮೇಲೆ ತಲೆಯಿಟ್ಟು ನಿದ್ರಿಸುತ್ತಿದ್ದ. ಇದು ಅಧ್ಯಾಪಕರಿಗೂ ಗೊತ್ತಿತ್ತು. ಪಾಠದ ಮಧ್ಯೆ ಮಧ್ಯೆ ‘ಕುಂಭಕರ್ಣ ಏನು ಮಾಡ್ತಾನೆ,’ ಛೇಡಿಸುತ್ತಿದ್ದರು. ಹೀಗೆ ತರಗತಿಯಲ್ಲಿ ತೂಕಡಿಸುವ, ನಿದ್ರೆ ಮಾಡುವ, ಪಾಠವನ್ನು ಕೇಳಿಯೂ ಕೇಳದಂತಿರುವವರಿಗೆ ‘ಕುಂಭಕರ್ಣ’ನೆನ್ನುವ ಅಡ್ಡ ಹೆಸರಿತ್ತು.
ಕೆಲವರ ಗೊರಕೆ ಕೇಳಿದ್ದೀರಾ? ಅಬ್ಬಾ.. ಈ ಕಷ್ಟ ವಿರೋಧಿಗಳಿಗೂ ಬೇಡ. ತಲೆದಿಂಬಿಗೆ ತಲೆ ತಾಗಿಸಿದರೆ ಸಾಕು, ಗೊರ್ ಗೊರ್ ಗೊರಕೆ ಸದ್ದು. ಚಿತ್ರ-ವಿಚಿತ್ರ ಸದ್ದುಗಳು. ಹಲವಾರು ರಾಗಗಳ ಸಮ್ಮಿಲನ. ಎಲ್ಲಾ ರಾಗಗಳು ಏಕಕಾಲಕ್ಕೆ ಅನಾವರಣಗೊಂಡಂತೆ! ನಿಧಾನಕ್ಕೆ ಆಲಾಪನೆ ಶುರುವಾಗಿ ಒಂದೆರಡು ನಿಮಿಷದಲ್ಲಿ ಏನೋ ‘ಸ್ಫೋಟ’ಗೊಂಡ ಸದ್ದಿನೊಂದಿಗೆ ಗೊರಕೆಯ ಮೊದಲ ಅಲೆ ಕೊನೆಗೊಳ್ಳುತ್ತದೆ. ಮತ್ತೆ ಎರಡು, ಮೂರು, ನಾಲ್ಕನೇ ಅಲೆಗಳು ಅಟ್ಟಿಸಿಕೊಂಡು ಬರುತ್ತವೆ. ಸಮಾರಂಭದ ಮನೆಗಳಲ್ಲಿ ಬಂಧುಗಳು ಸೇರಿದಾಗ ಗೊರಕೆಗಳ ಸಮ್ಮೇಳನ ನಡೆಯುತ್ತವೆ. ಆಗ ನೋಡಬೇಕು, ಹಿರಿಯರ ಪ್ರತಿಕ್ರಿಯೆ, ‘ಕುಂಭಕರ್ಣನಿಗೂ ಇಷ್ಟು ಗೊರಕೆಯಿದ್ದಿರಲಿಕ್ಕಿಲ್ಲ’!
ಒಂದು ವಿಚಾರ ನೆನಪಿನಲ್ಲಿರಲಿ. ರಾಮಾಯಣ ಕಾಲದ ಕುಂಭಕರ್ಣನನ್ನು ಈ ಕಾಲಘಟ್ಟಕ್ಕೆ ಸಮೀಕರಿಸುವುದು ಪ್ರಸ್ತುತವಲ್ಲ. ಗೊರಕೆ, ನಿದ್ದೆಗಳ ಪ್ರತಿನಿಧಿಯಾಗಿ ಕುಂಭಕರ್ಣನನ್ನು ನೇಮಿಸಿದ್ದೇವೆ. ಎಲ್ಲರೊಳಗೂ ಆತ ‘ಇದ್ದಾನೆ’. ಹೇಗೆ, ಯಾವ ಸ್ವರೂಪದಲ್ಲಿದ್ದಾನೆ? ಅವನ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಕುಂಭಕರ್ಣ : ಪ್ರಜಾಪತಿಯ ಕುಲಸ್ಥ ವಿಶ್ರವಸು. ಸುಮಾಲಿಯ ಮಗಳು ಕೈಕಸಿ. ಇವರ ಮಕ್ಕಳು – ರಾವಣ, ಕುಂಭಕರ್ಣ, ಶೂರ್ಪಣಖಿ ಮತು ವಿಭೀಷಣ. ಶೂರ್ಪನಖಿ ಹೊರತು ಪಡಿಸಿ ಮಿಕ್ಕ ಮೂವರು ಸಹೋದರರು ಬ್ರಹ್ಮದೇವನನ್ನು ಒಲಿಸಲು ಪ್ರತ್ಯಪ್ರತ್ಯೇಕವಾಗಿ ತಪಸ್ಸು ಮಾಡಿದರು.
“ಮನುಷ್ಯರು ತೃಣಕ್ಕೆ ಸಮಾನರು. ಗರುಡ-ನಾಗ-ಯಕ್ಷರಿಂದಲೂ, ದೈತ್ಯ-ದಾನವ-ರಾಕ್ಷಸರಿಂದಲೂ, ದೇವತೆಗಳಿಂದಲೂ ವಧಿಸಲ್ಪಡದ ವರವನ್ನು ಕೊಡು.” ರಾವಣನು ವರವನ್ನು ಬೇಡಿದ. ಈ ವರಗಳನ್ನು ಅಲ್ಲದೆ ‘ಈಗಾಗಲೇ ನೀನು ಹೋಮಿಸಲ್ಪಟ್ಟ ಒಂಭತ್ತು ತಲೆಗಳೂ ಚಿಗುರಲಿ. ನೀನು ಕಾಮರೂಪಿಯಾಗು’ ಬ್ರಹ್ಮನು ಅನುಗ್ರಹಿಸಿದನು.
“ಎಂತಹ ಕಷ್ಟವಾದ ಆಪತ್ತು ಬಂದರೂ ನನ್ನ ಬುದ್ಧಿಯು ಧರ್ಮಮಾರ್ಗದಲ್ಲಿರಲಿ. ಬ್ರಹ್ಮಾಸ್ತ್ರ ಮಂತ್ರವು ಉಪದೇಶವಿಲ್ಲದೆಯೇ ಸ್ಫುರಿಸಲಿ. ಧರ್ಮಸಮ್ಮತವಾದ ಮಾರ್ಗದಲ್ಲಿ ನಡೆಯುವ ಶಕ್ತಿಯನ್ನು ಕೊಡು,” ವಿಭೀಷಣನ ಕೋರಿಕೆಗೆ, ‘ತಥಾಸ್ತು ಎಂದು ಕಮಲಜನು ‘ಅಮರತ್ವ’ವನ್ನು ದಯಪಾಲಿಸಿದನು.
ಇನ್ನು ಕುಂಭಕರ್ಣ. “ಅನೇಕಾನೇಕ ವರುಷಗಳ ವರೆಗೆ ನಿದ್ರಿಸುವ ಆಶಯವನ್ನು ಈಡೇರಿಸು” ಎನ್ನಬೇಕೇ! ಬ್ರಹ್ಮನಿಂದ ಹರಕೆಯನ್ನು ಕೈಗೊಂಡ ಬಳಿಕ ತನ್ನ ತಪ್ಪಿನ ಅರಿವಾಯಿತು. ಕಾಲವು ಮಿಂಚಿಹೋದ ಮೇಲೆ ಚಿಂತಿಸಿ ಏನು ಪ್ರಯೋಜನ? ಆತ ‘ನಿರ್ದೇವತ್ವಂ’ ಎಂದು ಕೇಳುವಲ್ಲಿ ‘ನಿದ್ರೇವತ್ವಂ’ ಎಂದದ್ದೇ ಪ್ರಮಾದವಾಯಿತು.
ವಿಶ್ವಕರ್ಮನಿಗೆ ಸಮಾನರಾದ ಶಿಲ್ಪಿಗಳಿಂದ ಕುಂಭಕರ್ಣನಿಗೆ ‘ಶಯನಾಗಾರ’ ನಿರ್ಮಾಣವಾಯಿತು. ಎರಡು ಯೋಜನ ಉದ್ದ, ಒಂದು ಯೋಜನ ಅಗಲದ ಭವ್ಯ ಭವನ. ‘ಇದರಲ್ಲಿ ಆರು ತಿಂಗಳು ನಿದ್ರೆಯಾದರೆ ಮಿಕ್ಕ ಆರು ತಿಂಗಳು ಎಚ್ಚರದಲ್ಲಿರುತ್ತಾನೆ’ ಎನ್ನುವುದು ಸಾಮಾನ್ಯ ನಂಬುಗೆ. ಆತ ಎಚ್ಚರಗೊಂಡ ಬಳಿಕ ಒಂದಷ್ಟು ಮಸಯ ಎಚ್ಚರದಲ್ಲಿದ್ದು ಮತ್ತೆ ಪುನಃ ನಿದ್ದೆ ಮಾಡುತ್ತಿದ್ದ.. ಹೀಗೆ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ.
ವಿರೋಚನ ಪುತ್ರ ಬಲಿಯ ಮಗಳ ಮಗಳಾದ ‘ವಜ್ರಜ್ವಾಲೆ’ಯು ಈತನ ಪತ್ನಿ. ಕುಂಭ, ನಿಕುಂಭರು ಪುತ್ರರು. ಯುದ್ಧದಲ್ಲಿ ಶ್ರೀರಾಮನಿಂದ ಮರಣ ಹೊಂದಿದನು.
‘ಕುಂಭಕರ್ಣ ಸಿಂಡ್ರೋಮ್..’!
‘ಕುಂಭಕರ್ಣ ಸಿಂಡ್ರೋಮ್’ ಹೆಸರೇ ವಿಚಿತ್ರ. ಇದೊಂದು ನಿದ್ರೆಯ ಕಾಯಿಲೆ. ಈ ರೋಗಕ್ಕೆ ಸ್ಪಷ್ಟ ಕಾರಣಗಳಿಲ್ಲ. ವೈರಲ್ ಸೋಂಕು ಇರಬಹುದೆಂದು ನಂಬಲಾಗಿದೆ. ಒಂದ ಉದಾ: 26ರ ಯುವಕ ಸತತ ಎಂಟು ದಿವಸ ಮಲಗಿದ್ದನಂತೆ! ಮಧ್ಯೆ ಊಟ, ತಿಂಡಿ ಯಾಂತ್ರಿಕ. ಅದೂ ನಿದ್ದೆಯ ಮಂಪರಿನಲ್ಲಿ!  ಮತ್ತೆ ನಿದ್ರೆಗೆ ಜಾರುತ್ತಿದ್ದ. ಅವನ ಅಸಹಜ ನಿದ್ದೆಯು ಮನೆಯವರ ನಿದ್ರೆಯನ್ನು ಕೆಡಿಸಿತ್ತು. ಅವರೆಲ್ಲಾ ಆತಂಕಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರು. ಪರೀಕ್ಷಿಸಿದ ವೈದ್ಯರು ‘ಕ್ಲೈನ್ ಲೆವಿನ್ ಸಿಂಡ್ರೋಮ್ (ಕೆ.ಎಲ್.ಎಸ್.) ರೋಗಕ್ಕೆ ತುತ್ತಾಗಿದ್ದಾನೆ’ ಎಂದು ನಿರ್ಣಯಿಸಿದರು.  ವೋಕಾರ್ಡ್ ಆಸ್ಪತ್ರೆಯ ನರರೋಗ ತಜ್ಞ ಡಾ.ಪ್ರಶಾಂತ್ ಮಖಿಜ  ಹೇಳುತ್ತಾರೆ. “ಕೆ.ಎಲ್.ಎಸ್. ಒಂದು ಸಂಕೀರ್ಣ ರೋಗ. ಈ ರೋಗದ ನಿಖರವಾದ ಕಾರಣವನ್ನು ವೈದ್ಯಕೀಯ ವಿಜ್ಞಾನವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ. ಇದೊಂದು ಅಪರೂಪದ ಪ್ರಕರಣ. 12 ರಿಂದ 25ರ ಒಳಗಿನ ಹದಿಹರೆಯವರು ಮತ್ತು ಯುವಜನರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ. ವೈದ್ಯರು ಈ ರೋಗವನ್ನು ‘ಕುಂಭಕರ್ಣ ಸಿಂಡ್ರೋಮ್’ ಎಂದು ಕರೆದರು!”
(ಇದು ಟಿವಿ9 ಜಾಲತಾಣ ಆವೃತ್ತಿಯಲ್ಲಿನ ವರದಿ. ಪ್ರಕಟ 13-11-2023)
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಹವಾಮಾನ ವರದಿ | ಕರಾವಳಿ, ಮಲೆನಾಡು ಭಾಗಗಳಲ್ಲಿ ಬೇಸಿಗೆ ಮಳೆಯು ಮುಂದುವರಿಯುವ ಲಕ್ಷಣ |

ರಾಜ್ಯದ ದಕ್ಷಿಣ ಕರಾವಳಿ, ಮಲೆನಾಡು ಭಾಗಗಳಲ್ಲಿ ಬೇಸಿಗೆ ಮಳೆಯು ಮುಂದುವರಿಯುವ ಲಕ್ಷಣಗಳಿವೆ. ಉತ್ತರ…

2 hours ago

ಅಂತರಂಗ | ಸ್ವಾರ್ಥರಹಿತ ಬೇಡಿಕೆಗಳಿಗೆ ರಾಜಕೀಯದಲ್ಲಿ ಮಾನ್ಯತೆಯಿಲ್ಲ…!

ರಾಜಕೀಯ ಎನ್ನುವುದು ಕೃಷಿ ಹಾಗೂ ಅಡಿಕೆ ಬೆಳೆಗಾರರ ವಿಚಾರದಲ್ಲಿ ಕೂಡಾ ಹೇಗೆ ಇರುತ್ತದೆ,…

5 hours ago

ದಾವಣಗೆರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ | ಬಾಡಿಗೆ ಆಧಾರದಲ್ಲಿ ಖಾಸಗಿ ಕೊಳವೆಬಾವಿ

ದಾವಣಗೆರೆ ಜಿಲ್ಲೆಯ 6 ತಾಲೂಕುಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ 197…

6 hours ago

ಯಾದಗಿರಿ ಜಿಲ್ಲೆಗೆ ತಾಪಮಾನ ಎಚ್ಚರಿಕೆ | ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆ

ಯಾದಗಿರಿ ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ತಾಪಮಾನ…

6 hours ago

ಏಪ್ರಿಲ್ 30 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ

ವಿಶ್ವವಿಖ್ಯಾತ ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ…

6 hours ago

ರೈತರಿಗೆ ಕೃಷಿ ಚಟುವಟಿಕೆ ಜೊತೆಗೆ ಜಾನುವಾರು ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ

ಕೃಷಿ, ತೋಟಗಾರಿಕೆ, ರೇಷ್ಮೆ ಚಟುವಟಿಕೆಗಳಲ್ಲಿ ಜಿಲ್ಲೆಯ ಸಾಕಷ್ಟು ರೈತರು ತೊಡಗಿಸಿಕೊಂಡಿದ್ದು ಅಂತಹ ರೈತರಿಗೆ…

6 hours ago