ಉತ್ತರ ಪ್ರದೇಶದಲ್ಲಿ ಗೋ ಸಂರಕ್ಷಣೆಯನ್ನು ಕೇವಲ ಗೋಶಾಲೆ ನಿರ್ವಹಣೆಗೆ ಸೀಮಿತಗೊಳಿಸದೆ, ಗ್ರಾಮೀಣ ಆರ್ಥಿಕತೆ, ನೈಸರ್ಗಿಕ ಕೃಷಿ ಹಾಗೂ ಯುವಕರ ಉದ್ಯೋಗದೊಂದಿಗೆ ಜೋಡಿಸುವ ಪ್ರಯತ್ನ ಆರಂಭವಾಗಿದೆ. ರಾಜ್ಯದಾದ್ಯಂತ ಸುಮಾರು 10 ಸಾವಿರ ‘ಗೋ ಮಿತ್ರ’ರನ್ನು ತರಬೇತುಗೊಳಿಸುವ ಯೋಜನೆ ರೂಪಿಸಲಾಗಿದ್ದು, ಯುವಜನರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಒತ್ತು ನೀಡಲಾಗುತ್ತಿದೆ.
ಮಾಹಿತಿಯ ಪ್ರಕಾರ, ಗ್ರಾಮಮಟ್ಟದಲ್ಲಿ ಗೋ ಸಂರಕ್ಷಣೆ, ಸ್ಥಳೀಯ ತಳಿಗಳ ರಕ್ಷಣೆ, ನೈಸರ್ಗಿಕ ಕೃಷಿ ಹಾಗೂ ಜಾನುವಾರು ನಿರ್ವಹಣೆಯ ಕುರಿತು ತರಬೇತಿ ನೀಡಲು ‘ಗೋ ಮಿತ್ರ’ರನ್ನು ಸಿದ್ಧಪಡಿಸಲಾಗುತ್ತಿದೆ. ಮೊದಲ ಹಂತದಲ್ಲಿ ಮಾಸ್ಟರ್ ತರಬೇತುದಾರರನ್ನು ರೂಪಿಸಿ, ಅವರ ಮೂಲಕ ಗ್ರಾಮಮಟ್ಟದಲ್ಲಿ ಇತರರಿಗೆ ತರಬೇತಿ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿರುವ 7,500ಕ್ಕೂ ಹೆಚ್ಚು ಗೋಶಾಲೆಗಳಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ. ಬಿಡಾಡಿ ಜಾನುವಾರುಗಳಿಂದ ಕೃಷಿ ಬೆಳೆಗಳಿಗೆ ಆಗುತ್ತಿರುವ ಹಾನಿಯನ್ನು ಕಡಿಮೆ ಮಾಡುವುದರ ಜೊತೆಗೆ, ಗೋಶಾಲೆಗಳನ್ನು ಗ್ರಾಮೀಣ ಆರ್ಥಿಕ ಚಟುವಟಿಕೆಗಳ ಕೇಂದ್ರಗಳನ್ನಾಗಿ ಮಾಡುವ ಉದ್ದೇಶವೂ ಇದರ ಹಿಂದೆ ಇದೆ.
ಗೋಮಯವನ್ನು ಸಾವಯವ ಗೊಬ್ಬರ, ಜೈವಿಕ ಅನಿಲ ಹಾಗೂ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬಳಸುವ ಸಾಧ್ಯತೆಗಳಿಗೂ ಯೋಜನೆಯಲ್ಲಿ ಒತ್ತು ನೀಡಲಾಗಿದೆ. ಗೋಮೂತ್ರ ಆಧಾರಿತ ಉತ್ಪನ್ನಗಳ ಅಭಿವೃದ್ಧಿ ಸೇರಿದಂತೆ ಜಾನುವಾರುಗಳಿಂದ ದೊರೆಯುವ ಸಂಪನ್ಮೂಲಗಳನ್ನು ಆರ್ಥಿಕ ಚಟುವಟಿಕೆಯಾಗಿ ಪರಿವರ್ತಿಸುವ ಪ್ರಯತ್ನವೂ ನಡೆಯುತ್ತಿದೆ.
ಇದರ ಮೂಲಕ ಗೋಶಾಲೆಗಳು ಕೇವಲ ಜಾನುವಾರುಗಳನ್ನು ಸಂರಕ್ಷಿಸುವ ಸ್ಥಳಗಳಾಗದೆ, ಗೊಬ್ಬರ ಉತ್ಪಾದನೆ, ಜೈವಿಕ ಅನಿಲ, ನೈಸರ್ಗಿಕ ಕೃಷಿಗೆ ಅಗತ್ಯವಾದ ಒಳಸುರಿ ಹಾಗೂ ಗ್ರಾಮೀಣ ಉದ್ಯೋಗ ಸೃಷ್ಟಿಸುವ ಕೇಂದ್ರಗಳಾಗಬೇಕು ಎಂಬ ಕಲ್ಪನೆಯನ್ನು ಮುಂದಿಡಲಾಗಿದೆ.
ಮಹಿಳಾ ಸ್ವಸಹಾಯ ಸಂಘಗಳನ್ನೂ ಇಂತಹ ಚಟುವಟಿಕೆಗಳಲ್ಲಿ ತೊಡಗಿಸುವ ಸಾಧ್ಯತೆಯನ್ನು ಪರಿಗಣಿಸಲಾಗುತ್ತಿದೆ. ಜಿಲ್ಲಾವಾರು ಸ್ಥಳೀಯ ಸಂಪನ್ಮೂಲ ಹಾಗೂ ಅಗತ್ಯಗಳನ್ನು ಗುರುತಿಸಿ, ಯಾವ ರೀತಿಯ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸುವ ಉದ್ದೇಶವೂ ಇದೆ.
ಯುವಕರನ್ನು ಗ್ರಾಮೀಣ ಆರ್ಥಿಕತೆಗೆ ಮರಳಿ ತರುವ ಪ್ರಯತ್ನ : ಈ ಯೋಜನೆಯ ಮತ್ತೊಂದು ಗಮನಾರ್ಹ ಅಂಶ ಯುವಜನರ ಭಾಗವಹಿಸುವಿಕೆ. ಕೃಷಿ ಮತ್ತು ಗ್ರಾಮೀಣ ಬದುಕಿನಿಂದ ಯುವಜನರು ದೂರವಾಗುತ್ತಿರುವ ಸಂದರ್ಭದಲ್ಲಿ, ಜಾನುವಾರು ಆಧಾರಿತ ಉದ್ಯೋಗ ಮತ್ತು ಉದ್ಯಮಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವ ಪ್ರಯತ್ನ ಗ್ರಾಮೀಣ ಆರ್ಥಿಕತೆಯಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು. ಗೋ ಸಂರಕ್ಷಣೆ ಎಂಬ ವಿಚಾರವನ್ನು ಕೇವಲ ಭಾವನಾತ್ಮಕ ವಿಚಾರವನ್ನಾಗಿ ನೋಡುವ ಬದಲು, ಜಾನುವಾರು, ಕೃಷಿ, ಮಣ್ಣು, ಗೊಬ್ಬರ, ಇಂಧನ ಮತ್ತು ಉದ್ಯೋಗವನ್ನು ಒಂದೇ ಚಕ್ರದಲ್ಲಿ ಜೋಡಿಸುವ ಮಾದರಿ ರೂಪಿಸಿದರೆ ಅದರ ಪರಿಣಾಮ ಹೆಚ್ಚು ವ್ಯಾಪಕವಾಗಬಹುದು.
ಕರ್ನಾಟಕದಲ್ಲೂ ಈ ಮಾದರಿ ಏಕೆ ಸಾಧ್ಯವಿಲ್ಲ…? : ಉತ್ತರ ಪ್ರದೇಶದ ಈ ಪ್ರಯತ್ನ ಕರ್ನಾಟಕದಂತಹ ಕೃಷಿ ಪ್ರಧಾನ ರಾಜ್ಯಗಳಿಗೂ ಚರ್ಚೆಗೆ ಅರ್ಹವಾದ ಪ್ರಶ್ನೆಗಳನ್ನು ಮುಂದಿಡುತ್ತದೆ. ಗ್ರಾಮಗಳಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು, ಕೃಷಿಯಲ್ಲಿ ಸಾವಯವ ಪದಾರ್ಥಗಳ ಕೊರತೆ, ರಾಸಾಯನಿಕ ಗೊಬ್ಬರದ ಮೇಲಿನ ಅವಲಂಬನೆ, ಕೃಷಿ ವೆಚ್ಚದ ಏರಿಕೆ ಹಾಗೂ ಯುವಜನರ ನಗರ ವಲಸೆ, ಇವೆಲ್ಲವೂ ಪರಸ್ಪರ ಸಂಬಂಧ ಹೊಂದಿರುವ ಸಮಸ್ಯೆಗಳು.
ಇಂತಹ ಸಂದರ್ಭದಲ್ಲಿ ಸ್ಥಳೀಯ ಜಾನುವಾರು ಸಾಕಾಣಿಕೆಯನ್ನು ಕೃಷಿಯೊಂದಿಗೆ ಮತ್ತೆ ಜೋಡಿಸುವುದು ಗ್ರಾಮೀಣ ಆರ್ಥಿಕತೆಗೆ ಪರ್ಯಾಯ ಮಾರ್ಗವಾಗಬಹುದೇ ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ. ಗೋಮಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಗುಣಮಟ್ಟದ ಸಾವಯವ ಗೊಬ್ಬರವಾಗಿ ಬಳಸುವುದು, ಜೈವಿಕ ಅನಿಲ ಉತ್ಪಾದನೆ, ಕೃಷಿ ತ್ಯಾಜ್ಯ ನಿರ್ವಹಣೆ, ಸ್ಥಳೀಯ ಜಾನುವಾರು ತಳಿಗಳ ಸಂರಕ್ಷಣೆ ಹಾಗೂ ರೈತರಿಗೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಸೃಷ್ಟಿಸುವ ಮಾದರಿಗಳನ್ನು ರಾಜ್ಯದಲ್ಲೂ ಅಭಿವೃದ್ಧಿಪಡಿಸಬಹುದು.
ಆದರೆ ಇಲ್ಲಿ ಒಂದು ಅಂಶ ಅತ್ಯಂತ ಮುಖ್ಯ. ಗೋ ಸಂರಕ್ಷಣೆ ಹೆಸರಿನಲ್ಲಿ ಕೇವಲ ಜಾನುವಾರುಗಳನ್ನು ಉಳಿಸುವುದು ಸಾಕಾಗುವುದಿಲ್ಲ. ಅವುಗಳ ನಿರ್ವಹಣೆಗೆ ಶಾಶ್ವತ ಆರ್ಥಿಕ ಮಾದರಿ ಇರಬೇಕು. ಇಲ್ಲದಿದ್ದರೆ ಗೋಶಾಲೆಗಳ ನಿರ್ವಹಣೆಯೂ ಮತ್ತೊಂದು ಸರ್ಕಾರದ ಅನುದಾನ ಅವಲಂಬಿತ ವ್ಯವಸ್ಥೆಯಾಗಿ ಉಳಿಯುವ ಅಪಾಯವಿದೆ.
ಭಾವನೆಗಿಂತ ಆರ್ಥಿಕ ಮಾದರಿ ಮುಖ್ಯ. ಗೋವು ಕೃಷಿ ವ್ಯವಸ್ಥೆಯ ಭಾಗವಾಗಬೇಕಾದರೆ ಅದರ ಸುತ್ತಲೂ ಆರ್ಥಿಕ ಚಟುವಟಿಕೆ ರೂಪುಗೊಳ್ಳಬೇಕು. ಕೃಷಿಕನಿಗೆ ಗೊಬ್ಬರ ಸಿಗಬೇಕು. ಜಾನುವಾರು ಸಾಕಾಣಿಕೆಯಿಂದ ಆದಾಯ ಬರಬೇಕು. ಗೋಶಾಲೆಗೆ ಸ್ವಾವಲಂಬನೆಯ ದಾರಿ ಸಿಗಬೇಕು.
ಯುವಕರಿಗೆ ಉದ್ಯೋಗ ಸಿಗಬೇಕು. ಮಹಿಳಾ ಸಂಘಗಳಿಗೆ ಉದ್ಯಮ ಸಿಗಬೇಕು. ಮಣ್ಣಿಗೆ ಸಾವಯವ ಪದಾರ್ಥ ಮರಳಬೇಕು. ಆಗ ಮಾತ್ರ ಗೋ ಸಂರಕ್ಷಣೆ ಗ್ರಾಮೀಣ ಅಭಿವೃದ್ಧಿಯ ಮಾದರಿಯಾಗಲು ಸಾಧ್ಯ.
ಇದಕ್ಕಾಗಿ ವೈಜ್ಞಾನಿಕ ಪ್ರಮಾಣೀಕರಣ, ಗುಣಮಟ್ಟ ನಿಯಂತ್ರಣ, ಮಾರುಕಟ್ಟೆ ವ್ಯವಸ್ಥೆ ಮತ್ತು ತರಬೇತಿ ಅತ್ಯಗತ್ಯ. ಯಾವುದೇ ಉತ್ಪನ್ನಕ್ಕೆ ವೈಜ್ಞಾನಿಕ ಆಧಾರವಿಲ್ಲದೆ ಆರೋಗ್ಯ ಅಥವಾ ಕೃಷಿ ಪ್ರಯೋಜನಗಳ ಅತಿರಂಜಿತ ಹೇಳಿಕೆಗಳನ್ನು ಮಾಡುವುದು ತಪ್ಪಿಸಬೇಕಿದೆ.
ಕೃಷಿ ಉಳಿಯಬೇಕಾದರೆ ಕೃಷಿಯೊಳಗಿನ ಸಂಪನ್ಮೂಲಗಳ ಮೌಲ್ಯ ತಿಳಿಯಬೇಕು. ಇಂದು ಕೃಷಿಕನು ಹೊರಗಿನಿಂದ ಗೊಬ್ಬರ ಖರೀದಿಸುತ್ತಾನೆ. ಇಂಧನ ಖರೀದಿಸುತ್ತಾನೆ. ಹಲವು ಕೃಷಿ ಒಳಸುರಿಗಳನ್ನು ಖರೀದಿಸುತ್ತಾನೆ. ಆದರೆ ಗ್ರಾಮದಲ್ಲೇ ಇರುವ ಜಾನುವಾರು, ಕೃಷಿ ತ್ಯಾಜ್ಯ ಮತ್ತು ಸಾವಯವ ಸಂಪನ್ಮೂಲಗಳನ್ನು ಸರಿಯಾಗಿ ನಿರ್ವಹಿಸಿದರೆ ಅವುಗಳ ಒಂದು ಭಾಗವನ್ನು ಮತ್ತೆ ಕೃಷಿಯಲ್ಲೇ ಬಳಸಿಕೊಳ್ಳಬಹುದು. ಇದು ಸಂಪೂರ್ಣವಾಗಿ ಹೊರಗಿನ ಒಳಸುರಿಗಳನ್ನು ತ್ಯಜಿಸುವ ಮಾದರಿಯಲ್ಲ. ಬದಲಾಗಿ ಗ್ರಾಮದಲ್ಲಿರುವ ಸಂಪನ್ಮೂಲಗಳ ಗರಿಷ್ಠ ಮೌಲ್ಯವರ್ಧನೆ ಮಾಡುವ ಮಾದರಿ.
ಉತ್ತರ ಪ್ರದೇಶದ ಪ್ರಯತ್ನದ ನಿಜವಾದ ಪಾಠವೂ ಇದೇ. ಗೋ ಸಂರಕ್ಷಣೆ ಮಾತ್ರವಲ್ಲ, ಗ್ರಾಮ ಸಂರಕ್ಷಣೆ. ಗೋವು ಉಳಿಸುವ ಪ್ರಶ್ನೆಯನ್ನು ಕೃಷಿಕರ ಬದುಕು, ಮಣ್ಣು, ಉದ್ಯೋಗ ಮತ್ತು ಗ್ರಾಮೀಣ ಆರ್ಥಿಕತೆಯೊಂದಿಗೆ ಜೋಡಿಸಿದಾಗ ಮಾತ್ರ ಅದರ ಸಾಮಾಜಿಕ ಪರಿಣಾಮ ದೊಡ್ಡದಾಗುತ್ತದೆ. 10 ಸಾವಿರ ʼಗೋ ಮಿತ್ರ ’ರ ತರಬೇತಿ ಎಂಬುದು ಸಂಖ್ಯೆಯ ದೃಷ್ಟಿಯಿಂದ ದೊಡ್ಡ ಯೋಜನೆಯಾಗಿರಬಹುದು. ಆದರೆ ಅದರ ಯಶಸ್ಸನ್ನು ತರಬೇತಿ ಪಡೆದವರ ಸಂಖ್ಯೆಯಿಂದ ಮಾತ್ರ ಅಳೆಯಬಾರದು. ಎಷ್ಟು ಗ್ರಾಮಗಳಲ್ಲಿ ಜಾನುವಾರು ನಿರ್ವಹಣೆ ಸುಧಾರಿಸಿತು? ಎಷ್ಟು ಕೃಷಿಕರಿಗೆ ಸಾವಯವ ಗೊಬ್ಬರ ದೊರೆಯಿತು? ಎಷ್ಟು ಯುವಕರಿಗೆ ಆದಾಯದ ಅವಕಾಶ ಸಿಕ್ಕಿತು? ಎಷ್ಟು ಗೋಶಾಲೆಗಳು ಸ್ವಾವಲಂಬಿಯಾದವು? ಎಷ್ಟು ಕೃಷಿ ತ್ಯಾಜ್ಯ ಮೌಲ್ಯವರ್ಧಿತ ಉತ್ಪನ್ನವಾಯಿತು? ಇಂತಹ ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗ ಮಾತ್ರ ಯೋಜನೆಯ ನಿಜವಾದ ಯಶಸ್ಸು ಗೊತ್ತಾಗುತ್ತದೆ.
ಗೋವು ಉಳಿಯಬೇಕು. ಕೃಷಿಕ ಉಳಿಯಬೇಕು. ಮಣ್ಣು ಉಳಿಯಬೇಕು. ಗ್ರಾಮೀಣ ಯುವಕ ಗ್ರಾಮದಲ್ಲೇ ಬದುಕು ಕಟ್ಟಿಕೊಳ್ಳಬೇಕು. ಈ ನಾಲ್ಕನ್ನೂ ಒಂದೇ ವ್ಯವಸ್ಥೆಯಲ್ಲಿ ಜೋಡಿಸಲು ಸಾಧ್ಯವಾದರೆ, ಗೋ ಸಂರಕ್ಷಣೆ ಕೇವಲ ಒಂದು ಅಭಿಯಾನವಾಗದೆ ಗ್ರಾಮೀಣ ಆರ್ಥಿಕತೆಯ ಹೊಸ ಅಧ್ಯಾಯವಾಗಬಹುದು.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Uttar Pradesh is training around 10,000 “Gau Mitras” as part of an effort to connect cow protection with rural livelihoods, natural farming, cattle management and employment for young people. The initiative also aims to make gaushalas more economically productive through manure-based fertilisers, biogas and other value-added activities, with possible participation from women’s self-help groups. For agriculture-dependent states like Karnataka, the larger lesson is that cattle protection can become meaningful when it is linked to soil health, farm inputs, rural employment and a sustainable economic model rather than being limited to cattle shelter management.

