ಇಂದು ಆಗಬೇಕಾದ್ದು ಆಹಾರದ ಬಗ್ಗೆ ಚರ್ಚೆಯಲ್ಲ…. | ಆಗಬೇಕಾದ್ದು ಭಾರತೀಯರ ಜೀವನ ಮಟ್ಟದ ಸುಧಾರಣೆಯ ಚರ್ಚೆ… | ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ… |

August 23, 2022
9:43 AM
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ ನಡೆಸುತ್ತಿರುವ ವಿವೇಕಾನಂದ ಎಚ್‌ ಕೆ ಅವರು ಆಹಾರದ ಬಗ್ಗೆಯ ಚರ್ಚೆಗೆ ಸಂಬಂಧಿಸಿ ಬರೆದಿದ್ದಾರೆ. ಅದರ ಯಥಾವತ್ತಾದ ಬರಹ ಇಲ್ಲಿದೆ….

” ಮಾನವ ಮೂಳೆ ಮಾಂಸದ ತಡಿಕೆ, ದೇಹವು ಅದರ ಮೇಲಿನ ಹೊದಿಕೆ “……. ಮನುಷ್ಯನ ದೇಹವೇ ಜೀವಕೋಶಗಳ ರಾಶಿ. ಮಾಂಸದ ಮುದ್ದೆ. ಅದನ್ನು ತರಕಾರಿ ಹೆಣ್ಣು ಕಾಳುಗಳಿಂದ ಮಾಡಲಾಗಿಲ್ಲ. ಹೀಗಿರುವಾಗ….

ಏಕೆ ಮತ್ತೆ ಮತ್ತೆ ವಿಭಜಕ – ವಿಧ್ವಂಸಕ ವಿಷಯಗಳನ್ನೇ ಕೆಣಕಿ ಕೆಣಕಿ ಸಮಾಜವನ್ನು – ದೇಶವನ್ನು ಮತ್ತೆ ಮತ್ತೆ ಒಡೆಯುವ ಪರಿಸ್ಥಿತಿ ನಿರ್ಮಾಣ ಮಾಡುತ್ತೀರಿ……

ಜಾತಿಯ ಆಧಾರದ ಮೇಲೆ, ಧರ್ಮದ ಆಧಾರದ ಮೇಲೆ, ಭಾಷೆಯ ಆಧಾರದ ಮೇಲೆ, ಪಕ್ಷದ ಆಧಾರದ ಮೇಲೆ, ಸಿದ್ದಾಂತದ ಆಧಾರದ ಮೇಲೆ ಒಡೆದ ಮೇಲೆ ಈಗ ಆಹಾರ ಸಂಸ್ಕೃತಿಯ ಆಧಾರದ ಮೇಲೆ ಮತ್ತೊಂದು ವಿಭಜನೆಯ ಸನಿಹದಲ್ಲಿ ನಾವಿದ್ದೇವೆ…..

ಯಾವುದು ಸಸ್ಯಹಾರ, ಯಾವುದು ಮಾಂಸಾಹಾರ, ಅದನ್ನು ನಿರ್ಧರಿಸುವುದು ಯಾರು, ಅದರ ಮಾನದಂಡಗಳು‌ ಯಾವುದು, ಅದರಿಂದಾಗುವ ಪ್ರಯೋಜನಗಳು ಏನು, ಅದಕ್ಕಾಗಿ ನಾವು ತೆರಬೇಕಾದ ಬೆಲೆ ಏನು…..

ಮಾಧ್ಯಮಗಳು – ಸಂಘ ಸಂಸ್ಥೆಗಳು, ಹೋರಾಟಗಾರರು ಏಕೆ ಅನಾವಶ್ಯಕವಾದ ಈ ವಿವಾದವನ್ನು ಹುಟ್ಟು ಹಾಕುತ್ತಾರೆ. ಎಷ್ಟೋ ಶತಮಾನಗಳಿಂದ ಸಹಜವಾಗಿ ನಡೆದುಕೊಂಡು ಬಂದ ಒಂದು ಪ್ರಕ್ರಿಯೆ ಈಗ ಏಕೆ ಮನಸ್ಸುಗಳನ್ನು ಒಡೆಯುತ್ತಿದೆ. ಚುನಾವಣೆ ಹತ್ತಿರ ಬರುತ್ತಿದೆ ಎಂದೇ, ಮತದಾರರು ಮೂರ್ಖರು ಎಂದೇ……

ಸಮಗ್ರವಾಗಿ ವಿಷಯವನ್ನು ಅವಲೋಕಿಸಿ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ…. ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದು ನೋವಿನ ವಿಷಯವೇ……. ಅದು ಹಾವು, ಸೊಳ್ಳೆ, ತಿಗಣೆ, ನಾಯಿ, ಹಸು, ಹುಲಿ, ಜಿಂಕೆ, ಕೋಳಿ, ಮೀನು, ಹಂದಿ, ಮನುಷ್ಯ ಏನೇ ಆಗಿರಲಿ ಅದಕ್ಕೆ ನಾವು ಜೀವ ಕೊಡಲಿಕ್ಕೆ ಸಾಧ್ಯವಿಲ್ಲದಿರುವುದರಿಂದ ಅದನ್ನು ಹತ್ಯೆ ಮಾಡುವ ಯಾವ ಅಧಿಕಾರವೂ ಇಲ್ಲ.

ಅದೇ ರೀತಿ ಸಸ್ಯಗಳಿಗೂ ಜೀವ ಇರುವುದರಿಂದ ಅವು ತಮ್ಮ ವಂಶಾಭಿವೃದ್ಧಿಗಾಗಿ ನೀಡುವ ಹೂ ಹಣ್ಣು ಫಸಲುಗಳನ್ನು ಸಹ ನಾವು ಕಿತ್ತು ಕಡಿದು ಉಪಯೋಗಿಸುವುದು ನ್ಯಾಯವಲ್ಲ. ಇದು ಒಂದು ರೀತಿಯ ವಾದ ಮತ್ತು ಮೇಲ್ನೋಟಕ್ಕೆ ಸರಿ ಎನಿಸುತ್ತದೆ.

ಜೀವಿಗಳಿಗೆ ಗಾಳಿ ನೀರು ಆಹಾರ ಜೀವನಾವಶ್ಯಕ ಅಂಶಗಳು. ಅದು ಇಲ್ಲದೇ ಒಂದು ಕ್ಷಣವೂ ಮುಂದುವರಿಯಲು ಸಾಧ್ಯವಿಲ್ಲ. ಹಾಗಾದರೆ ಪ್ರಾಣಿ ಪಕ್ಷಿ ಮನುಷ್ಯ ಏನನ್ನು ತಿನ್ನಬೇಕು.

ವಾದದ ದೃಷ್ಟಿಯಿಂದ ಸಸ್ಯಗಳನ್ನು ಇದರಿಂದ ಹೊರಗಿಡೋಣ. ಅವುಗಳನ್ನು ನಿರ್ಜೀವ ವಸ್ತುಗಳೆಂದು ಪರಿಗಣಿಸೋಣ. ಅಂದ ಮೇಲೆ ಈ ಭೂಮಿಯಲ್ಲಿನ ಎಲ್ಲಾ ಜೀವಿಗಳು ಕೇವಲ ಸಸ್ಯಗಳು ಮತ್ತು ಆ ಜಾತಿಗೆ ಸೇರಿದ ಹಣ್ಣು, ತರಕಾರಿ ಮುಂತಾದುವುಗಳನ್ನು ಮಾತ್ರ ಸೇವಿಸಿ ಬದುಕುವುದು ಸಹಜ ಮತ್ತು ಸ್ವಾಭಾವಿಕ ನ್ಯಾಯ ಮತ್ತು ಜೀವನ ಕ್ರಮ ಎಂಬ ತೀರ್ಮಾನಕ್ಕೆ ಬರೋಣವೇ ?

ಇಲ್ಲಿ ಇನ್ನೂ ಒಂದು ರಿಯಾಯಿತಿ ಕೊಡಬಹುದು. ಅನೇಕ ಪ್ರಾಣಿಗಳಿಗೆ ಮನುಷ್ಯರಿಗಿರುವ ಬುದ್ದಿಶಕ್ತಿ, ಯೋಚನಾ ಕ್ರಮ, ನಾಗರಿಕತೆ, ರೂಪಿತ ನೀತಿ ನಿಯಮಗಳು ಇಲ್ಲದಿರುವುದರಿಂದ ಅದಕ್ಕೆ ಸಿಕ್ಕ ಸಸ್ಯವೋ ಪ್ರಾಣಿಯೋ ಯಾವುದೋ ಆ ಕ್ಷಣದ ಆಹಾರದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದರಿಂದ ಅದಕ್ಕೆ ತಿಳಿವಳಿಕೆ ಹೇಳಲು ಸಾಧ್ಯವಿಲ್ಲ. ಅದು ಅವುಗಳ ಸಹಜ ಆಹಾರ ಎಂದು ನಿರ್ಲಕ್ಷಿಸಬಹುದು. ಕೆಲವು ಕಾಡು ಪ್ರಾಣಿಗಳು ಮನುಷ್ಯರನ್ನು ತಿನ್ನುತ್ತವೆ. ಅದಕ್ಕೆ ಬುದ್ದಿ ಹೇಳಲು ಆಗುವುದಿಲ್ಲ. ಹೇಳಿದರೂ ಅದಕ್ಕೆ ಅರ್ಥವಾಗುವುದಿಲ್ಲ. ನಮ್ಮ ರಕ್ಷಣೆ ಮಾಡಿಕೊಂಡು ಅವುಗಳನ್ನು ಅದರ ಪಾಡಿಗೆ ಬಿಟ್ಟು ಬಿಡೋಣ.ಈಗ ಮನುಷ್ಯ ಪ್ರಾಣಿಯ ಆಹಾರದ ಬಗ್ಗೆ ಯೋಚಿಸೋಣ.

ಸಹಜವೋ, ಅಸಹಜವೋ, ಸ್ವಾಭಾವಿಕವೋ, ಕೃತಕವೋ, ಪ್ರಾರಂಭದಿಂದಲೇ ಇದು ಇತ್ತೋ ಅಥವಾ ಅನಂತರ ಬೆಳವಣಿಗೆ ಹೊಂದಿತೋ ಏನೋ ಒಟ್ಟಿನಲ್ಲಿ ವಿಶ್ವದ ಆಹಾರ ಕ್ರಮದಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಎಂದು ಎರಡು ವಿಭಾಗಗಳು ಸೃಷ್ಟಿಯಾಗಿದೆ. ನನಗಿರುವ ಮಾಹಿತಿಯಂತೆ ವಿಶ್ವ ಜನಸಂಖ್ಯೆಯ ಸುಮಾರು ಶೇಕಡಾ 75/80% ಜನರು ಸಸ್ಯಗಳನ್ನು ಒಳಗೊಂಡ ಮಾಂಸಹಾರವನ್ನು ಮತ್ತು ಉಳಿದವರು ಸಸ್ಯಹಾರವನ್ನು ಸೇವಿಸುತ್ತಾರೆ. ( ಸಂಪೂರ್ಣ ಸಸ್ಯಹಾರ ಸಾಧ್ಯವೇ ಇಲ್ಲ ಎಂಬ ವಾದವೂ ಇದೆ. ಅದನ್ನು ಆಹಾರ ತಜ್ಞರಿಗೆ ಬಿಟ್ಟುಬಿಡೋಣ )

ಭಾರತದ ಮಟ್ಟಿಗೆ ಈ ಆಹಾರ ಸಂಸ್ಕೃತಿ ದುರಾದೃಷ್ಟವಶಾತ್ ಇಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯ ಜೊತೆ ತಳುಕು ಹಾಕಿಕೊಂಡು ಒಂದಷ್ಟು ಸಂಕೀರ್ಣ ಸಮಸ್ಯೆ ಸೃಷ್ಟಿಸಿದೆ. ಮಾಂಸ ತಿನ್ನುವುದು ಹೊಲಸು. ಅದನ್ನು ತಿಂದು ದೇವಾಲಯ ಪ್ರವೇಶಿಸಬಾರದು. ಅದು ಮೈಲಿಗೆ ಎಂಬ ನಂಬಿಕೆ ಹುಟ್ಟು ಹಾಕಿ ವಿವಾದ ಮಾಡಲಾಗುತ್ತಿದೆ. ಮಾಧ್ಯಮಗಳು ಸಂಬಂಧ ಪಡದ ಯಾರಿಂದಲೋ ಮಾತನಾಡಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿದು ಮಜಾ ನೋಡುತ್ತಿವೆ.

ಈ ಹಿನ್ನೆಲೆಯಲ್ಲಿ ನಾವು ಆಹಾರ ಸ್ವಾತಂತ್ರ್ಯ ಮತ್ತು ಹಕ್ಕಿನ ಬಗ್ಗೆ ವಿಮರ್ಶಿಸಬೇಕಿದೆ……. ಸಸ್ಯಹಾರ ಒಳ್ಳೆಯದು, ಮಾಂಸಾಹಾರ ಒಳ್ಳೆಯದಲ್ಲ, ಪ್ರಾಣಿ ವಧೆ ಮಹಾಹಿಂಸೆ ಮುಂತಾದ ವಾದಗಳನ್ನು ಜಾತಿಯ ಮೇಲ್ವರ್ಗದವರು, ಜೈನರು ಮುಂತಾದವರು ಪ್ರತಿಪಾದಿಸುತ್ತಾರೆ.

ಇದಕ್ಕೆ ಪ್ರತಿಯಾಗಿ ಮಾಂಸಹಾರ ಕೂಡ ಮಾನವನ ಸಹಜ ಆಹಾರ ಪದ್ದತಿ, ಅದು ಮನುಷ್ಯನ ಈ ಕ್ಷಣದ ಆಹಾರ ಸಮತೋಲನದ ಅತ್ಯವಶ್ಯಕ ವಿಧಾನ, ಈಗಿನ ಜನಸಂಖ್ಯೆಯ ದೃಷ್ಟಿಯಿಂದ ಸಸ್ಯಾಹಾರ ಸಾಕಾಗುವುದಿಲ್ಲ ಮತ್ತು ಪೌಷ್ಟಿಕಾಂಶ ದೊರೆಯುವುದಿಲ್ಲ. ಪ್ರಾಣಿ ವಧೆ ಹಿಂಸೆಯಾದರೂ ಮನುಷ್ಯ ಪ್ರಕೃತಿಯ ಮೇಲೆ ಸಾಧಿಸಿರುವ ನಿಯಂತ್ರಣದ ಕಾರಣಕ್ಕೆ ಮತ್ತು ಬಹುಸಂಖ್ಯಾತರ ಆಯ್ಕೆ ಮಾಂಸಹಾರ ಆಗಿರುವುದರಿಂದ ಆತನ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕು ಮತ್ತು ಇದು ಅನಿವಾರ್ಯ ಎಂಬ ವಾದ ಮಂಡಿಸುತ್ತಾರೆ.

ವಾದಗಳೇನೋ ಸರಿ. ಸತ್ಯ ಸಹ ಎಲ್ಲೋ ಅಡಗಿದೆ. ಆದರೆ ವಾಸ್ತವ………. ಭಾರತದ ಈಗಿನ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಗಮನಿಸಿದಾಗ……… ಸಂಪೂರ್ಣ ಸಸ್ಯಹಾರದ ಸಂಪನ್ಮೂಲಗಳ ಕ್ರೋಡೀಕರಣ ಸಾಧ್ಯವಿಲ್ಲ ಮತ್ತು ಅದಕ್ಕಾಗಿ ಒತ್ತಾಯ ಒಳ್ಳೆಯದಲ್ಲ. ಹಾಗಾದರೆ ಮಾಂಸಹಾರ ಪ್ರೋತ್ಸಾಹಿಸಬೇಕೆ. ಅದೂ ಒಳ್ಳೆಯದಲ್ಲ.ಈ ಕ್ಷಣದಲ್ಲಿ ನಿಂತು ಯೋಚಿಸಿದರೆ…….

ಆಹಾರ ಅವರವರ ಆಯ್ಕೆ. ಕಾನೂನಿನ ಅಡಿಯಲ್ಲಿ ನಿಷೇಧವಿಲ್ಲದ ಏನನ್ನಾದರೂ ತಿನ್ನಲಿ. ಆ ಸ್ವಾತಂತ್ರ್ಯ ಅವರಿಗಿದೆ. ವೈದ್ಯಕೀಯ ವಿಜ್ಞಾನದ ಪ್ರಕಾರ ತಿನ್ನುವ ಎಲ್ಲವೂ ಬಹುತೇಕ ಗ್ಲುಕೋಸ್ ಆಗಿ ಪರಿವರ್ತನೆ ಹೊಂದಿ ದೇಹ ಸೇರುತ್ತದೆ. ಅದಕ್ಕೆ ಸಸ್ಯ ಅಥವಾ ಮಾಂಸ ಎಂಬುದೇನು ಇಲ್ಲ.

ಮತ್ತೆ ಮಾಂಸ ತಿಂದು ದೇವಾಲಯ ಪ್ರವೇಶಿಸಬಾರದು ಎಂಬುದು ಇಲ್ಲಿ ತನ್ನ ಅರ್ಥ ಕಳೆದುಕೊಳ್ಳುತ್ತದೆ. ಕೇವಲ ಮನುಷ್ಯ ನಿರ್ಮಿತ ಒಂದು ಭ್ರಮಾತ್ಮಕ ನಂಬಿಕೆ ಮಾತ್ರ ಉಳಿಯುತ್ತದೆ.

ಇದರ ಆಧಾರದ ಮೇಲೆ ಇದೊಂದು ವಿವಾದವೇ ಅಲ್ಲ. ದೇವಸ್ಥಾನಗಳ ಮುಂದೆಯೇ ಕುರಿ ಕೋಳಿಗಳನ್ನು ಬಲಿ ಕೊಟ್ಟು ದೇವರಿಗೇ ನೈವೇದ್ಯ ಅರ್ಪಿಸಿ ದೇವರ ಹೆಸರಿನಲ್ಲಿ ಅಲ್ಲಿಯೇ ಊಟ ಮಾಡಿ ಸಂಭ್ರಮಿಸಿ ತೃಪ್ತಿ ಪಟ್ಟುಕೊಳ್ಳುವ ನಮ್ಮ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಕೆಲವು ದೇವಸ್ಥಾನಗಳಿಗೆ ಅವರಿಗೆ ಮಾಂಸಹಾರ ಇಷ್ಟವಿಲ್ಲ ಎಂಬ ಕಾರಣಕ್ಕಾಗಿ ಇದನ್ನು ವಿರೋಧಿಸುವುದು ಹಾಸ್ಯಾಸ್ಪದ.

ನಮ್ಮದೇ ಜನರು ರುಚಿಗಾಗಿ, ಪೌಷ್ಟಿಕಾಂಶಕ್ಕಾಗಿ, ಬಡತನಕ್ಕಾಗಿ, ಆಹಾರ ಸ್ವಾತಂತ್ರ್ಯದ ರಕ್ಷಣೆಗಾಗಿ, ಎಲ್ಲ ಜಾತಿ ಮತ ಧರ್ಮಗಳ ಸೌಹಾರ್ದಕ್ಕಾಗಿ ಮತ್ತು ಇಂದಿನ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಮಾಂಸಾಹಾರ ಸೇವಿಸುವುದನ್ನು ಒಪ್ಪಿಕೊಳ್ಳಲೇ ಬೇಕಿದೆ. ಇಲ್ಲದಿದ್ದರೆ ಇದು ನಮ್ಮ ಸಮಾಜದ ವಿಭಜನೆಗೆ ಕಾರಣವಾಗಬಹುದು.

ಮಾಂಸ ತಿನ್ನುವವರು ಕೆಟ್ಟವರು ಅಲ್ಲ, ಸಸ್ಯಹಾರಿಗಳು ಒಳ್ಳೆಯವರು ಅಲ್ಲ. ಅಥವಾ ಮಾಂಸಾಹಾರಿಗಳು ಒಳ್ಳೆಯವರು ಸಸ್ಯಹಾರಿಗಳು ಕೆಟ್ಟವರು ಅಲ್ಲ. ಯಾವ ದೇವರು ಇದನ್ನೇ ತಿನ್ನು ಎಂದು ಹೇಳುವುದಿಲ್ಲ. ಒಂದು ವೇಳೆ ನಮ್ಮ ಸಂಪ್ರದಾಯಗಳಲ್ಲಿ ‌ದೋಷವಿದ್ದರೆ ಅದನ್ನು ಈಗಿನ ಕಾಲಕ್ಕೆ ತಕ್ಕಂತೆ ಸರಿಪಡಿಸಿಕೊಂಡು ಮುನ್ನಡೆಯೋಣ.

ಈಗ ಎಲ್ಲಕ್ಕಿಂತ ಮುಖ್ಯವಾಗಿ ಚರ್ಚೆ ಆಗಬೇಕಿರುವುದು ಎಲ್ಲಾ ಭಾರತೀಯರ ಜೀವನ ಮಟ್ಟದ ಸುಧಾರಣೆ. ನೆಮ್ಮದಿಯ ಬದುಕಿನ ಮಾರ್ಗಗಳು. ಅದನ್ನು ಹೊರತುಪಡಿಸಿ ಎಲ್ಲವೂ ಮೂರ್ಖತನದ ಪರಮಾವಧಿ…….

ದಯವಿಟ್ಟು ಮತ್ತೊಮ್ಮೆ ಯೋಚಿಸಿ…… ಮನುಷ್ಯ ಮುಖ್ಯವೋ – ಸಮಾಜದ ಸ್ವಾಸ್ಥ್ಯ ಮುಖ್ಯವೋ – ನಿಮ್ಮ ಮೂಢನಂಬಿಕೆಯ ಗೊಡ್ಡು ಸಂಪ್ರದಾಯ ಮುಖ್ಯವೋ – ಚಾನಲ್ ಗಳ ಟಿಆರ್ಪಿ‌ ಮುಖ್ಯವೋ – ನಿರ್ಧಾರ ನಿಮ್ಮ ವಿವೇಚನೆಗೆ……

ಬರಹ :
ವಿವೇಕಾನಂದ  ಎಚ್‌ ಕೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಹೊಸರುಚಿ | ಮನೆಲ್ಲೇ ಸುಲಭವಾಗಿ ಮಾಡುವ “ಉಪ್ಪು ಸೊಳೆ ಬೋಳು ಬೆಂದಿ”
March 7, 2026
10:14 PM
by: ದಿವ್ಯ ಮಹೇಶ್
ಅಂಕಗಳಾಚೆಗೆ ಶಿಕ್ಷಣದ ಉದ್ದೇಶ
March 6, 2026
6:56 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror